Site icon Vistara News

ಶಬ್ದಸ್ವಪ್ನ | ದೇವರನ್ನು ಕಾಣಿಸಿದ ಕಲಾವಿದ ರಾಜಾ ರವಿವರ್ಮ

ravivarma

ಬಾಲ್ಯದಲ್ಲಿ ನನಗೆ ಅಬ್ಬೆ ಮಾಡಿಸುತ್ತಿದ್ದ ಅಕ್ಕಂದಿರ ಬಾಣಂತನವನ್ನು ನೋಡುವ ಅವಕಾಶ ದೊರಕುತ್ತಿತ್ತು. ಒಳಜಗಲಿಯ, ಅಟ್ಟದ ಏಣಿಯ ಸನಿಹ, ಸಣ್ಣ ಕಿಟಕಿಯ ಕೆಳಗೆ ಸೀರೆ ಅಡ್ಡ ಕಟ್ಟಿ ಮಾಡಿದ ಹೆರಿಗೆ ಕೋಣೆಯಲ್ಲಿ ತೊಟ್ಟಿಲು ಕಟ್ಟುತ್ತಿದ್ದರು. ಬಿಳಿಯ ವಸ್ತ್ರ ಸುತ್ತಿದ್ದ ಬೆಚ್ಚಗಿನ ಮುದ್ದಾದ ಹೂವಿನಂತಹ ಶಿಶು ನೋಡಿದಾಗಲೆಲ್ಲ ಅಕ್ಕ, “ಮಕ್ಕಳೆಂದರೆ ದೇವರು” ಎನ್ನುತ್ತಿದ್ದಳು. ಉಬ್ಬು ಗಲ್ಲದ, ಕೆಂದುಟಿಯ ಶಿಶು ಒಮ್ಮೊಮ್ಮೆ ನಿದ್ದೆಯಲ್ಲೆ ಮಂದಹಾಸ ಬೀರುತ್ತಿತ್ತು. ಅದನ್ನು ನೋಡುತ್ತಿದ್ದ ಅಬ್ಬೆ, “ಶಿಶುಗಳು ದೇವರ ಕಂಡು ನಗುತ್ತವೆಯಂತೆ” ಎಂದು ಹೇಳುತ್ತಿದ್ದಳು. ಮುಗ್ಧತೆಯೇ ದೈವಿಕತೆ ಎಂದರಿಯದೆ ದೇವರು ಮಕ್ಕಳಂತೆ ಸುಂದರವಾಗಿರುತ್ತವೆ ಎಂದು ಮೊದಲ ಸಲ ನಾನು ಕಲ್ಪಿಸಿದ್ದೆ. ಶ್ಲೋಕಗಳಲ್ಲಿ ವರ್ಣಿತವಾದ ದೇವರ ರೂಪವನ್ನು ಚಿತ್ರಿಸಿಕೊಳ್ಳಲಾಗುತ್ತಿರಲಿಲ್ಲ. ದೇವಸ್ಥಾನಗಳಲ್ಲಿ ನೋಡುತ್ತಿದ್ದ ಕಲ್ಲಿನ ಮೂರ್ತಿಗಳು, ಮನೆಯ ದೇವರ ಪೀಠದೊಳಗಿನ ಲೋಹದ ವಿಗ್ರಹಗಳು ಸ್ಪಷ್ಟವಾಗುತ್ತಿರಲಿಲ್ಲ. ನಮ್ಮ ಮನೆಯ ಹೊಸ್ತಿಲ ಮೇಲೆ ಮರದ ಚೌಕಟ್ಟಿನ ಗಾಜಿನ ಎರಡು ದೇವತೆಯರ ಫೋಟೊಗಳಿದ್ದವು. ಅವುಗಳಿಗೆ ನಾಲ್ಕು ಹಸ್ತಗಳಿದ್ದವು. ಕಿರೀಟ ಧರಿಸಿ, ಜರಿ ಅಂಚಿನ ಬಿಳಿ ಸೀರೆ ಉಟ್ಟು ಕಾಡಿನ ತೊರೆಯೊಂದರ ಪಕ್ಕದ ಚಪ್ಪಟೆ ಕಲ್ಲಿನ ಮೇಲೆ ಕುಳಿತು ವೀಣೆ ನುಡಿಸುತ್ತಿದ್ದ ಸರಸ್ವತಿ ಒಬ್ಬಳು. ಅವಳ ಹಿಂಗೈ ಮತ್ತು ಕೊರಳಲ್ಲಿ ಮುತ್ತಿನ ಹಾರವಿತ್ತು. ಮುಂಗೈಯಲ್ಲಿ ಪುಸ್ತಕ ಮತ್ತು ಜಪದ ಮಣಿಯಂತೆ ಹಿಡಿದ ಮುತ್ತಿನ ಸರವಿತ್ತು. ಅವಳ ಪಾದದ ಬಳಿ ನವಿಲೊಂದು ಕುಳಿತಿದೆ. ಇನ್ನೊಬ್ಬಳು ಲಕ್ಷ್ಮಿ. ಜರಿಯಂಚಿನ ಕೆಂಪು ಸೀರೆ ಉಟ್ಟು, ಕಿರೀಟ ಧಾರಿಯಾಗಿ ಕಮಲದ ಮೇಲೆ ನಿಂತಿದ್ದಾಳೆ. ಒಂದು ಹಸ್ತದಲ್ಲಿ ತಾವರೆ, ಇನ್ನೊಂದರಿಂದ ನಾಣ್ಯ ಸುರಿಯುತ್ತಿದೆ. ತೊರೆಯಲ್ಲಿ ಹಾರವನ್ನು ಸೊಂಡಿಲಲ್ಲಿ ಹಿಡಿದು ನಿಂತ ಆನೆ; ಪಕ್ಕದಲ್ಲಿ ಈಜುತ್ತಿರುವ ಹಂಸಗಳು. ನಿತ್ಯ ಮುಸ್ಸಂಜೆ ಹೊಸ್ತಿಲ ಮೇಲುರಿಯುತ್ತಿದ್ದ ನಂದಾದೀಪದ ಬೆಳಕಲ್ಲಿ ಕುಳಿತು ಈ ಸುಂದರ ದೇವತೆಗಳನ್ನು ನೋಡುತ್ತ ಪ್ರಾರ್ಥಿಸುತ್ತಿದ್ದೆ. ದೇವತೆಗಳು ಚೆಲುವೆಯರು ಎಂದು ನಂಬಿದ ಕಾಲ ಅದು. ಎಂದೂ ನಾನು ಕುರೂಪಿಯಾದ, ವೃದ್ಧ ದೇವತೆಗಳನ್ನು ನೋಡಿಯೇ ಇಲ್ಲ.

ಲಕ್ಷ್ಮೀದೇವಿ

ನಮ್ಮ ಮನೆಯ ಗೋಡೆಗೆ ತೂಗು ಬಿಡುತ್ತಿದ್ದ ಕ್ಯಾಲೆಂಡರ್‌ಗಳಲ್ಲಿ, ಚಿತ್ರಕಥಾ ಪುಸ್ತಕಗಳಲ್ಲಿ, ನಾಟಕದ ಪರದೆಗಳಲ್ಲಿ ನಳ-ದಮಯಂತಿ, ರಾಧಾ-ಮಾಧವ, ಶ್ರೀಕೃಷ್ಣ-ದೇವಕಿ, ಹರಿಶ್ಚಂದ್ರ-ತಾರಾಮತಿ, ವಿಶ್ವಾಮಿತ್ರ-ಮೇನಕಿ, ಕೀಚಕ-ಸೈರೇಂದ್ರಿ, ಶಕುಂತಲೆ, ಸೀತಾ ಸ್ವಯಂವರ, ಗಂಗಾವತರಣ, ಶಂಕರಾಚಾರ್ಯ, ಜಟಾಯು ವಧೆ ಮುಂತಾದ ವರ್ಣಮಯ ಚಿತ್ರಗಳನ್ನು ನೋಡುತ್ತಿದ್ದೆ. ಪುರಾಣ, ರಾಮಾಯಣ ಮತ್ತು ಮಹಾಭಾರತ, ಚರಿತ್ರೆಯ ಮಹಾಪುರುಷರ, ಸ್ತ್ರೀಯರ ಚಿತ್ರಗಳನ್ನು ನೋಡಿ ಅವರೆಲ್ಲ ಇದ್ದದ್ದು ಹಾಗೆಯೇ ಎಂದು ನಂಬಿದ್ದೆ. ಚಿತ್ರದಲ್ಲಿದ್ದ ಪಾತ್ರಗಳ ರೂಪ, ವೇಷ-ಭೂಷಣಗಳನ್ನು ನೋಡಿದ ಮೇಲಂತು ಅವರೆಲ್ಲ ಒಂದು ಕಾಲದಲ್ಲಿ ಜೀವಂತವಾಗಿದ್ದವರು ಎಂದನಿಸಿತ್ತು. ಅವರನ್ನು ನೋಡಿದವರು ಯಾರು? ನೋಡಿ ಚಿತ್ರಿಸಿದ ಕಲಾವಿದ ಯಾರು? ಯಾವ ನಿರೂಪಣೆಯಿಂದ ಅಂಥ ಕಲ್ಪನೆ ಮೂರ್ತವಾಯಿತು? ಎಂಬಿತ್ಯಾದಿ ಪ್ರಶ್ನೆಗಳು ಹೊಳೆದದ್ದು ನನ್ನ ಕಾಲೇಜಿನ ಓದಿನ ದಿನಗಳಲ್ಲಿ. ನಮ್ಮೂರ ಶಾಲೆಗೆ ವರ್ಗವಾಗಿ ಬಂದಿದ್ದ ಮಾಸ್ತರೊಬ್ಬರು ಚಿತ್ರ ಬಿಡಿಸುತ್ತಿದ್ದರು. ಒಮ್ಮೆ ಅವರು ನಮ್ಮ ಮನೆಗೆ ಬಂದಾಗ ಗೋಡೆಯ ಮೇಲಿನ ಪಟಗಳನ್ನು ನೋಡಿ ಬೆರಗಿನಿಂದ, “ರಾಜಾ ರವಿವರ್ಮರ ಪೇಯಿಂಟಿಂಗ್!” ಎಂದು ತದೇಕ ಚಿತ್ತದಿಂದ ನೋಡುತ್ತ ನಿಂತಿದ್ದರು. ಈ ಎಲ್ಲ ವರ್ಣಚಿತ್ರಗಳು ಪ್ರಸಿದ್ಧ ಕಲಾವಿದ ರಾಜಾ ರವಿವರ್ಮರಿಂದ ರಚನೆಯಾದವುಗಳು ಎಂದು ಅವರು ಹೇಳಿದರು. ರವಿವರ್ಮರ ಹೆಸರು ಮಾತ್ರ ಚಂದಮಾಮ ಕತೆಯ ಹಿಂದಿನ ಯಾವುದೊ ಕಾಲದ ಯಾವುದೊ ದೇಶದ ರಾಜನದ್ದು ಎಂದು ಭಾಸವಾಗುತ್ತಿತ್ತು.

ಸರಸ್ವತಿ

ದೇವಸ್ಥಾನಗಳ ಗರ್ಭಗುಡಿಗಳಲ್ಲಿ ವಾಸವಾಗಿದ್ದ ದೇವಾನುದೇವತೆಯರನ್ನು ಸಂಸಾರಿಗಳ ಮನೆಗಳಿಗೆ, ಕ್ಯಾಲೆಂಡರ್ ಮಾರುತ್ತಿದ್ದ ಅಂಗಡಿಗಳಿಗೆ ಕರೆ ತಂದವರು ರಾಜಾ ರವಿವರ್ಮರಾಗಿದ್ದರು. ಪ್ರತಿಷ್ಠಿತರಿಗೆ ಸೀಮಿತವಾಗಿದ್ದ ದೇವರನ್ನು ತನ್ನ ಕುಂಚದಿಂದ ಚಿತ್ರಿಸಿ ಉತ್ಸವ ಮೂರ್ತಿಯಂತೆ ಜನಸಾಮಾನ್ಯರ ದರ್ಶನಕ್ಕೆ ತಂದದ್ದು ಒಂದು ಬಗೆಯ ಜಾತ್ಯತೀತ ಕ್ರಾಂತಿಯೇ. ಪುರಾಣ, ಮಹಾಕಾವ್ಯಗಳ ಮಹಾಪುರುಷರ ಚಿತ್ರಕಥೆಯನ್ನು ಓದು ಬರಹ ಬಾರದವರು ತಿಳಿಯುವಂತಾಯಿತು. ಎಲ್ಲ ವರ್ಗ, ಜಾತಿಯವರು ಈ ಚಿತ್ರಗಳನ್ನು ಪಡೆಯುವುದರ ಮೂಲಕ ಸಮಾಜದ ಶ್ರೇಣೀಕೃತ ವ್ಯವಸ್ಥೆಯ ಸಡಿಲಿಕೆಗೆ ಒಂದು ದಿಟವಾದ ಹೆಜ್ಜೆ ಇಟ್ಟಾಂತಾಯಿತು. ರವಿವರ್ಮ ವರ್ಣಚಿತ್ರ ಬರೆದು ಪುರಾಣ ಮತ್ತು ಚರಿತ್ರೆಯ ಪಾತ್ರಗಳಿಗೆ ಖಚಿತವಾದ ಸ್ಥಳೀಯ ಚಹರೆಗಳನ್ನು ನೀಡಿದರಲ್ಲದೆ ಭಾರತೀಯರು ಅನಾಗರಿಕರು ಎಂದು ವಸಾಹತುಶಾಹಿ ಸಂದರ್ಭದಲ್ಲಿ ಮಾಡುತ್ತಿದ್ದ ಅಪವ್ಯಾಖ್ಯಾನಗಳಿಗೆ ಪ್ರತಿರೋಧವನ್ನೂ ಒಡ್ಡಿದರು. ಭಾರತೀಯರು ಅನಾಗರಿಕ ಬಡವರು ಎಂದು ಪಾಶ್ಚಾತ್ಯರು ಬಿಂಬಿಸಿದ ಪೂರ್ವಾಗ್ರಹಕ್ಕೆ ಉತ್ತರವಾಗಿ ರವಿವರ್ಮ ತಮ್ಮ ಚಿತ್ರಗಳ ಪಾತ್ರಗಳ ಉಡುಗೆ ತೊಡುಗೆಯಲ್ಲಿ ವೈಭವವನ್ನು, ಸಮೃದ್ಧತೆಯನ್ನು ಪ್ರಕಟಿಸಿದರು. ಭಾರತದ ಸಾಂಸ್ಕೃತಿಕ ಪರಂಪರೆಯ ಘನತೆಯನ್ನು ಎತ್ತಿ ಹಿಡಿದ ಚಿತ್ರಕಲೆ ಸ್ವಾತಂತ್ರ್ಯ ಹೋರಾಟದ ಅವಿಭಾಜ್ಯ ಅಂಗವೂ ಆಯಿತು. ಭಾರತದ ಅಪೂರ್ವ ನಾರಿಯರ ಚಿತ್ರ ಬರೆದ ರವಿವರ್ಮರ ಕಲೆಯಲ್ಲಿ ಸ್ತ್ರೀ ಸಂವೇದನೆಯ ಹಲವು ಆಯಾಮಗಳು ಅತ್ಯಂತ ಸೂಕ್ಷ್ಮವಾಗಿ ಪ್ರಕಟವಾಗಿರುವುದನ್ನು ಗಮನಿಸಬಹುದಾಗಿದೆ.

ರಾಜಾ ರವಿವರ್ಮ

ಐರೋಪ್ಯರ ವಾಸ್ತವ ಪರಂಪರೆಯ ಕಲಾ ತಾಂತ್ರಿಕತೆ ಮತ್ತು ಭಾರತೀಯ ಸಾಂಸ್ಕೃತಿಕ ಸಂವೇದನೆ ಹಾಸುಹೊಕ್ಕಾದ ಕಲಾ ಸಂಪ್ರದಾಯವನ್ನು ರವಿವರ್ಮ ಆರಂಭಿಸಿದರು. ಅವರ ಪ್ರಯೋಗಶೀಲ ಕಲಾಕೃತಿಗಳನ್ನು ಆಧರಿಸಿ ದಾದಾ ಸಾಹೇಬ ಪಾಲ್ಕೆಯಂತಹ ಚಲನಚಿತ್ರ ನಿರ್ದೇಶಕರು ಪೌರಾಣಿಕ ದೃಶ್ಯ ಮತ್ತು ಪಾತ್ರಗಳನ್ನು ಪ್ರತ್ಯಕ್ಷಗೊಳಿಸಿಕೊಂಡರು. ‘ಸತ್ಯ ಹರಿಶ್ಚಂದ್ರ’ ಸಿನೆಮಾ ಇದಕ್ಕೊಂದು ಉದಾಹರಣೆ. ಪಾರ್ಸಿ ನಾಟಕ ಕಂಪನಿಯವರು ರವಿವರ್ಮರವರ ಪೇಯಿಂಟಿಂಗ್‌ನ್ನು ರಂಗ ಸಜ್ಜಿಕೆಗೆ, ಪಾತ್ರಗಳ ವೇಷಭೂಷಣಕ್ಕೆ ಮಾದರಿಯಾಗಿರಿಸಿಕೊಂಡರು.

ಶಾಕುಂತಲ

ರವಿವರ್ಮರ ಕಲಾ ನೈಪುಣ್ಯತೆ ಅಸಾಧಾರಣವಾಗಿದೆ. ಇದಕ್ಕೆ ಸಾಕ್ಷಿಯಾಗಿ ಅವರ ಲೋಕ ಪ್ರಸಿದ್ಧ ಕೃತಿಗಳಲ್ಲೊಂದಾದ ‘ಶಕುಂತಲೆಯ ಪ್ರೇಮ ನೋಟ’ ನೋಡಬಹುದಾಗಿದೆ. ಈ ತೈಲ ಚಿತ್ರದಲ್ಲಿ ವಿರಹದಲ್ಲಿ ಪರಿತಪಿಸುತ್ತಿದ್ದ ಶಕುಂತಲೆ, ಅವಳಿಗೆ ಸಾಂತ್ವನ ನುಡಿಯುತ್ತ ಆಶ್ರಮಕ್ಕೆ ಕರೆದೊಯ್ಯುತ್ತಿದ್ದ ಇಬ್ಬರು ಸಖಿಯರು, ತುಸು ದೂರದಲ್ಲಿ ಬೆನ್ನು ಹಾಕಿ ಕೋಲೂರತ್ತ ನಡೆಯುತ್ತಿದ್ದ ವೃದ್ಧ ಕಣ್ವ ಋಷಿ ಕಾಣಬಹುದು. ಅವರಿರುವ ಸ್ಥಳ ಕಾಡು. ಕಣ್ವ ನಿಂತ ಜಾಗದಲ್ಲಿ ಬಿಸಿಲ ಬೆಳಕಿದೆ. ಮೂವರು ಸ್ತ್ರೀಯರು ನಿಂತಲ್ಲಿ ನೆರಳಿದೆ. ಬೆಳಕು-ನೆರಳಿನ ಪರಿಸರ ಆಯಾ ಪಾತ್ರಗಳ ವಿರಹ-ವೈರಾಗ್ಯದ ಮನಸ್ಥಿತಿಯನ್ನು ಬಿಂಬಿಸುತ್ತಿದೆ. ಶಕುಂತಲೆ ಪ್ರಿಯತಮ ದುಶ್ಯಂತನತ್ತ ಪ್ರೇಮ ನೋಟ ಹರಿಸಿದ್ದಾಳೆ. ಸಖಿಯರು ನೋಡಿದರೆ ಅವಳಿಗೆ ನಾಚಿಕೆ. ಅದಕ್ಕಾಗಿ ಎಡಗಾಲನ್ನೆತ್ತಿ ಅಂಗಾಲಿಗೆ ಚುಚ್ಚಿದ ಮುಳ್ಳನ್ನು ಕೀಳುವ ಭಂಗಿಯಲ್ಲಿ ಹೊರಳಿ ನೋಡುತ್ತಿದ್ದಾಳೆ. ಕಲಾವಿದನ ಅಪೂರ್ವ ಕಲ್ಪನೆ ಚಿತ್ರದ ಒಲವಿನ ಚೆಲುವನ್ನು ಹೆಚ್ಚಿಸಿದೆ. ಶಕುಂತಲೆಯ ವಿರಹವನ್ನು ಅವಳ ಕೊರಳಿನ ಹೂಹಾರ ಸೂಚಿಸುತ್ತಿದೆ. ನವಿರಾದ ಕೆಂಪು ಸೀರೆ, ಬಿಳಿಯ ಮೈ ಬಣ್ಣ ಮತ್ತು ಅವಳ ಸಖಿಯರ ಸಾದಾ ಸೀರೆ, ಕಪ್ಪು ವರ್ಣ ಅವರವರ ಸಾಮಾಜಿಕ ಸ್ಥಾನಮಾನಗಳನ್ನು ಪ್ರಕಟಿಸುತ್ತಿದೆ. ಪಾತ್ರಗಳ ನಿಲುವು, ಮುಖಭಾವದಲ್ಲಿ ಕಥಾಪ್ರಸಂಗದ ರಸಾಭಿವ್ಯಕ್ತಿಯಾಗಿದೆ. ಪಾತ್ರಗಳ ವೇಷಭೂಷಣ, ಅಲಂಕಾರ, ವರ್ಣ, ಒಡವೆ, ಕೇಶ ಶೈಲಿ ಆಯಾ ಕಾಲದ ಸಾಮಾಜಿಕ ಜೀವನ ವಿಧಾನವನ್ನು ಪರಿಚಯಿಸುತ್ತದೆ. ರಾಜಾ ರವಿವರ್ಮ ದೇವರಂತೆ ಚಿತ್ರಕಲೆಯ ಮೂಲಕ ಅಮರ.

ಅಂಕಣಕಾರ, ಕಥೆಗಾರ ಶ್ರೀಧರ ಬಳಗಾರರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಬಳಗಾರಿನಲ್ಲಿ ಜನಿಸಿ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಟೀಚರ್ ಎಜ್ಯುಕೇಟರ್ ಆಗಿ ಪಾಠ ಮಾಡುತ್ತ ಸದ್ಯ ಕುಮಟಾದಲ್ಲಿ ನೆಲೆಸಿದ್ದಾರೆ. ಅಧೋಮುಖ, ಮುಖಾಂತರ, ಇಳೆ ಎಂಬ ಕನಸು, ಒಂದು ಫೋಟೋದ ನೆಗೆಟೀವ್, ಈಸಾಡತಾವ ಜೀವ ಕಥಾ ಸಂಕಲನಗಳು. ಕೇತಕಿಯ ಬನ, ಆಡುಕಳ, ಮೃಗಶಿರ ಕಾದಂಬರಿಗಳು. ರಥಬೀದಿ, ಕಾಲಪಲ್ಲಟ- ಅಂಕಣ ಬರೆಹಗಳು. ಮೊಳದಷ್ಟು ಹೂವು ಲೇಖನ ಸಂಗ್ರಹ. ಕೆಲವು ಕಥೆಗಳು ಇಂಗ್ಲಿಶ್, ತಮಿಳು, ಉರ್ದುಗೆ ಭಾಷಾಂತರಗೊಂಡಿವೆ ಹಾಗೂ ಕರ್ನಾಟಕ ವಿವಿ, ಧಾರವಾಡ, ಬೆಂಗಳೂರು ವಿವಿ ಮತ್ತು ಬೆಳಗಾವಿಯ ರಾಣಿ ಚೆನ್ನಮ್ಮ ವಿವಿ ಪದವಿ ಪಠ್ಯಕ್ಕೆ ಸೇರ್ಪಡೆಯಾಗಿವೆ. ಮೂರು ಸಲ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ, ಮಾಸ್ತಿ ಪುರಸ್ಕಾರ, ನಿರಂಜನ ಸಾಹಿತ್ಯ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಪುರಸ್ಕೃತರು.

Exit mobile version