Site icon Vistara News

ವಾರದ ವ್ಯಕ್ತಿಚಿತ್ರ : ಪಠಾಣ್‌ ಸಿನಿಮಾ ಮೂಲಕ ಗತವೈಭವ ಸೃಷ್ಟಿಸಲಿದ್ದಾರಾ ಬಾಲಿವುಡ್‌ ಬಾದ್‌ಶಾ ಶಾರುಖ್‌ ಖಾನ್‌?

| ಮಂದಾರ ಸಾಗರ

ಅದು 1990ರ ದಶಕ. ಆಗ ಭಾರತೀಯ ಚಿತ್ರರಂಗದಲ್ಲಿ ಬಾಲಿವುಡ್‌ ಮಿಂಚಿದಷ್ಟು ಬೇರಾವುದೇ ಭಾಷೆಯ ಸಿನಿಮಾಗಳು ಮಿಂಚುತ್ತಿರಲಿಲ್ಲ. ಆ ಕಾಲದಲ್ಲಿಯೇ ಹೀರೊ ಆಗಿ ಮಿಂಚಿ ವರ್ಷಕ್ಕೆ ನಾಲ್ಕೈದು ಹಿಟ್‌ ಸಿನಿಮಾಗಳನ್ನು ಕೊಟ್ಟಿದ್ದು ಶಾರುಖ್‌ ಖಾನ್‌(Sharukh Khan). ಬಾಲಿವುಡ್‌ ಅಂಗಳದಲ್ಲಿ ಅವರಿಟ್ಟ ಹೆಜ್ಜೆಯನ್ನು ಗುರುತಿಸಿಯೇ ಅವರ ಅಭಿಮಾನಿಗಳು ಅವರಿಗೆ ‘ಬಾಲಿವುಡ್‌ ಬಾದ್‌ಶಾ’ ಎನ್ನುವ ಬಿರುದು ಕೊಟ್ಟಿದ್ದು. ಬಾಲಿವುಡ್‌ಅನ್ನೇ ಆಳಿದ್ದ ಸರದಾರ ಕಳೆದ ಕೆಲವು ವರ್ಷಗಳಲ್ಲಿ ಎಡವಿ ಬಿದ್ದಿದ್ದಂತು ಸುಳ್ಳಲ್ಲ. 2018ರಲ್ಲಿ ಬಿಡುಗಡೆಯಾದ ʼಜೀರೊʼ ಸಿನಿಮಾ ಕೂಡ ಬಾದ್‌ಶಾಗೆ ಗೆಲುವು ತಂದುಕೊಡಲಿಲ್ಲ. ಅದಾದ ನಂತರ ನಾಲ್ಕು ವರ್ಷಗಳ ಕಾಲ ಯಾವುದೇ ಸಿನಿಮಾಗಳಲ್ಲಿ ನಟಿಸದೆ ಸುಮ್ಮನಿದ್ದ ಶಾರುಖ್‌ ಇದೀಗ ಮತ್ತೆ ಹಿರಿತೆರೆಗೆ ಧುಮುಕಿದ್ದಾರೆ. ಪಠಾಣ್‌ (pathan Movie) ಮೂಲಕ 57 ವರ್ಷದ ನಟ ಮಿಂಚಲಾರಂಭಿಸಿದ್ದಾರೆ.

ಇದು ಬಿಡುಗಡೆಗೂ ಮೊದಲೇ ಭಾರಿ ಸುದ್ದಿಯಾದಂತಹ ಸಿನಿಮಾ. ಬಿಡುಗಡೆಗೂ ಮೊದಲೇ ಟ್ರೇಲರ್‌ ಲೀಕ್‌ ಆದದ್ದು, ಬೇಷರಮ್‌ ರಂಗ್‌ ಹಾಡಿನಲ್ಲಿ ದೀಪಿಕಾ ಅವರು ಉಡುಗೆಯ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು, ಅಸ್ಸಾಂ ಮುಖ್ಯಮಂತ್ರಿಗೆ ಶಾರುಖ್‌ ಅವರು ಮಧ್ಯರಾತ್ರಿ 2 ಗಂಟೆಗೆ ಕರೆ ಮಾಡಿದ್ದು, ಸಿನಿಮಾದ ಟಿಕೆಟ್‌ಗಳು ದಾಖಲೆಯ ಪ್ರಮಾಣದಲ್ಲಿ ಮುಂಗಡ ಬುಕ್ಕಿಂಗ್‌ ಆಗಿದ್ದು ಸೇರಿ ಎಲ್ಲವೂ ದೊಡ್ಡ ಮಟ್ಟದ ಸುದ್ದಿಯೇ ಆಗಿತ್ತು.

ಇದನ್ನೂ ಓದಿ: Pathaan Movie: ವಿಶ್ವಾದ್ಯಂತ ಪಠಾಣ್‌ ಗರ್ಜನೆ: ಭಾರತದಲ್ಲಿ 300 ಪ್ರದರ್ಶನಗಳನ್ನು ಹೆಚ್ಚಿಸಿದ ಚಿತ್ರತಂಡ
ಇದೀಗ ತೆರೆ ಕಂಡಿರುವ ಸಿನಿಮಾ 100ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಿಡುಗಡೆಯಾದ ಮೊದಲ ಐದೇ ದಿನಗಳಲ್ಲಿ 200 ಕೋಟಿ ರೂ. ಬಾಚಿಕೊಳ್ಳುವ ಸಾಧ್ಯತೆಯಿದೆ ಎನ್ನುತ್ತಿದ್ದಾರೆ ಸಿನಿಮಾ ರಂಗದ ಪಂಡಿತರು. ಶಾರುಖ್‌ ಜೀವನವನ್ನು ಈ ಸಿನಿಮಾ ಬದಲಿಸಬಹುದೇ? ತಳ ಹಿಡಿದಿರುವ ಬಾಲಿವುಡ್‌ ಬದುಕು ಈ ಸಿನಿಮಾದಿಂದಾಗಿ ಮತ್ತೆ ಚಿಗುರಬಹುದೇ ಎಂಬ ಪ್ರಶ್ನೆ, ನಿರೀಕ್ಷೆ, ಕುತೂಹಲ ಮೂಡಿದೆ.

ಶಾರುಖ್‌ ಬರೋಬ್ಬರಿ ನಾಲ್ಕು ವರ್ಷಗಳ ನಂತರ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಅವರಿಗೆ ನೆಗೆಟಿವ್‌ ಆಗಬಹುದೇ ಎನ್ನುವ ಪ್ರಶ್ನೆಗೆ ಜನರು “ಇಲ್ಲವೇ ಇಲ್ಲ” ಎನ್ನುವ ಉತ್ತರ ಕೊಡುತ್ತಾರೆ. “ನಾಲ್ಕು ವರ್ಷಗಳ ಅಂತರವಿದೆ ಎನ್ನುವುದು ನಿಜ. ಆದರೆ ಈ ನಾಲ್ಕೂ ವರ್ಷಗಳಲ್ಲಿ ಶಾರುಖ್‌ ಆಗಾಗ ಸುದ್ದಿಯಾಗುತ್ತಲೇ ಇದ್ದವರು. ಅದಷ್ಟೇ ಅಲ್ಲದೆ ದಶಕಗಳ ಕಾಲ ರಂಜಿಸಿ ಅಪಾರ ಜನರ ಪ್ರೀತಿ ಗಳಿಸಿದವರು. ಈ ನಾಲ್ಕು ವರ್ಷಗಳಲ್ಲಿ ಎರಡು ವರ್ಷಗಳ ಕಾಲ ಲಾಕ್‌ಡೌನ್‌ ಇತ್ತು. ಆಗ ಬರೀ ಶಾರುಖ್‌ ಮಾತ್ರವಲ್ಲ ಪೂರ್ತಿ ಚಿತ್ರರಂಗವೇ ಸುಮ್ಮುನೆ ಕುಳಿತಿತ್ತು. ಹಾಗಾಗಿ ಈ ನಾಲ್ಕು ವರ್ಷ ಎನ್ನುವುದು ದೊಡ್ಡ ಅಂತರವೇನು ಆಗುವುದಿಲ್ಲ. ಅಂತರ ಇದೆ ಎನ್ನುವುದಕ್ಕೆ ಅವರ ಹೊಸ ಲುಕ್‌ ಬಗ್ಗೆ ಕಾತರ ಹೆಚ್ಚಾಗಿದೆ ಎನ್ನುವುದು ಸತ್ಯ” ಎನ್ನುತ್ತಾರೆ ಅಭಿಮಾನಿಗಳು.

ಎಲ್ಲ ಪಾತ್ರಕ್ಕೂ ಸೈ


“ಹೆಣ್ಣು ಮಕ್ಕಳಿಗೆ ಶಾರುಖ್‌ ಸ್ಟೈಲ್‌ ಇಷ್ಟವಾದರೆ, ಹಿರಿಯರಿಗೆ ಶಾರುಖ್‌ ಎಲ್ಲ ರೀತಿಯ ಪಾತ್ರದಲ್ಲಿ ಮಿಂಚುವುದು ಇಷ್ಟ. ರಾಜ್‌, ರಾಹುಲ್‌ ಹೀಗೆ ಎಷ್ಟೋ ಪಾತ್ರಗಳನ್ನು ಜನರು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ” ಎನ್ನುವುದು ಜನರ ಅಭಿಪ್ರಾಯ. ಶಾರುಖ್‌ ಖಾನ್‌ ತಮ್ಮ ಸಿನಿಮಾ ಜೀವನದಲ್ಲಿ ಎಲ್ಲ ರೀತಿಯ ಪಾತ್ರಗಳಲ್ಲೂ ಮಿಂಚಿದ್ದಾರೆ. ಹಾಸ್ಯಮಯ ಪಾತ್ರಗಳಿಂದ ಹಿಡಿದು, ಅತ್ಯಂತ ಗಂಭೀರ ಪಾತ್ರದವರೆಗೂ ಎಲ್ಲದರಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದರಿಂದಾಗಿ ಅವರದ್ದೇ ಆದ ಬ್ರ್ಯಾಂಡ್‌ ಒಂದು ಇದೆ ಎನ್ನುವುದು ಅಭಿಮಾನಿಗಳ ಮಾತು.

ಬದಲಾಗದ ನಟ


ಶಾರುಖ್‌ ಜನರ ಮೆಚ್ಚಿನ ನಟ. ಅವರನ್ನು ಅವರ ಮನೆಯ ಬಾಲ್ಕನಿಯಲ್ಲೇ ನೋಡಿ ಅಥವಾ ವಿಮಾನ ನಿಲ್ದಾಣದಲ್ಲಿಯೇ ನೋಡಿ, ಅವರಿರುವ ರೀತಿ ಒಂದೇ. ಎಲ್ಲಿಯೂ ಅವರ ನಡವಳಿಕೆಯಲ್ಲಿ ಬದಲಾವಣೆ ಕಾಣುವುದೇ ಇಲ್ಲ. ಈ ರೀತಿಯ ಒಳ್ಳೆ ಅಭ್ಯಾಸಗಳು ಅವರನ್ನು ಜನರಿಗೆ ಇನ್ನಷ್ಟು ಹತ್ತಿರವಾಗಿಸಿವೆ ಎನ್ನುತ್ತಾರೆ ಬಾಲಿವುಡ್‌ ಮಂದಿ. ಹಾಗಾಗಿಯೇ ಮೊದಲು ಮುಂಬೈನಲ್ಲಿ ಅಮಿತಾಭ್‌ ಮನೆಯನ್ನು ಹುಡುಕಿಕೊಂಡು ಹೋಗುತ್ತಿದ್ದ ಜನರು 1990ರ ಕಾಲದಿಂದಲೂ ಶಾರುಖ್‌ ಮನೆಯಾದ ʼಮನ್ನತ್‌ʼ ಅನ್ನೂ ಹುಡುಕೊಂಡು ಹೋಗುತ್ತಿದ್ದಾರೆ.

ಬ್ರ್ಯಾಂಡ್‌ ಅಂಬಾಸಿಡರ್‌

ಶಾರುಖ್‌ ಖಾನ್‌ ಕಳೆದ ಕೆಲವು ವರ್ಷಗಳಲ್ಲಿ ಹಲವಾರು ಬ್ರ್ಯಾಂಡ್‌ಗಳಿಗೆ ಅಂಬಾಸಿಡರ್‌ ಆಗಿದ್ದಾರೆ. ಡಿಶ್‌ ಟಿವಿ, ಹುಂಡೈ, ಲಕ್ಸ್‌, ಬೈಜುಸ್‌, ರಿಲಯನ್ಸ್‌ ಜಿಯೊ, ಎಲ್‌ಜಿ ಟಿವಿ, ಪೆಪ್ಸಿ, ಥಂಬ್ಸ್‌ ಅಪ್‌, ಡೆನ್ವರ್‌, ಐಸಿಐಸಿಐ ಬ್ಯಾಂಕ್‌, ಫೇರ್‌ ಆಂಡ್‌ ಹ್ಯಾಂಡ್‌ಸಂ ಸೇರಿ ಹಲವಾರು ಜಾಹೀರಾತುಗಳಲ್ಲಿ ಮಿಂಚಿದ್ದಾರೆ. ಆ ಮೂಲಕ ಜನರ ಕಣ್ಣೆದುರೇ ಇದ್ದಂತಿದ್ದರು. ಅದಷ್ಟೇ ಅಲ್ಲದೆ ದುಬೈ ಪ್ರವಾಸೋದ್ಯಮದ ಮುಖವಾಗಿ, ಪಶ್ಚಿಮ ಬಂಗಾಳದ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿಯೂ ಕಾಣಿಸಿಕೊಂಡಿದ್ದರು.

ವಿವಾದಗಳೂ ಪ್ಲಸ್‌ ಪಾಯಿಂಟ್‌ಗಳೇ

ಶಾರುಖ್‌ ಖಾನ್‌ ಅವರ ಪಠಾಣ್‌ ಸಿನಿಮಾದ ಸುತ್ತ ಸುಳಿದಾಡಿದ ವಿವಾದಗಳು ಸಾಕಷ್ಟಿವೆ. ಆದರೆ ಈ ಎಲ್ಲ ವಿವಾದಗಳೂ ಸಿನಿಮಾಕ್ಕೆ ಒಂದು ರೀತಿಯಲ್ಲೇ ಪ್ರಚಾರವೇ ಎನ್ನುವುದು ತಜ್ಞರ ಅಭಿಪ್ರಾಯ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಆದ ಮಾತ್ರಕ್ಕೆ ಜನರು ಆ ಸಿನಿಮಾವನ್ನು ನೋಡದೇ ಕುಳಿತುಬಿಡುವುದಿಲ್ಲ. ಯಾರೋ ಒಬ್ಬರು ಮಾಡುವ ಟ್ರೋಲ್‌ ಬೇರಿನ್ನಾರಿಗೂ ಸಿನಿಮಾ ನೋಡುವಂತೆ ಪ್ರೇರೇಪಿಸುತ್ತದೆ. ಹಾಗಾಗಿ ವಿವಾದಗಳು ಎಂದಿಗೂ ಸಿನಿಮಾಕ್ಕೆ ಹಿನ್ನಡೆ ಉಂಟು ಮಾಡುವುದಿಲ್ಲ ಎಂದಿದ್ದಾರೆ ತಜ್ಞರು.

ಬಾಲಿವುಡ್‌ ಭವಿಷ್ಯ

ಪಠಾಣ್‌ ಸಿನಿಮಾ ಗೆಲ್ಲುವುದು ಅಥವಾ ಸೋಲುವುದು ಕೇವಲ ಪಠಾಣ್‌ ಸಿನಿಮಾದ ಭವಿಷ್ಯವಾಗಿರುವುದಿಲ್ಲ. ಇದು ಪೂರ್ತಿ ಬಾಲಿವುಡ್‌ನ ಭವಿಷ್ಯವೇ ಆಗಿರುತ್ತದೆ. ದಕ್ಷಿಣ ಭಾರತದ ಸಿನಿಮಾಗಳು ದೇಶ ಮಾತ್ರವಲ್ಲದೆ ವಿಶ್ವದಲ್ಲೂ ಸುದ್ದಿಯಾಗುತ್ತಿರುವ ಈ ಸಮಯದಲ್ಲಿ ಬಾಲಿವುಡ್‌ನ ಸಿನಿಮಾಗಳು ಒದ್ದಾಡುತ್ತಿರುವುದು ಸುಳ್ಳಲ್ಲ. ನಮ್ಮ ಸಿನಿಮಾಗಳು ಸಾವಿರಾರು ಕೋಟಿ ರೂ. ಗಳಿಕೆ ಮಾಡಿಕೊಳ್ಳಲಾರಂಭಿಸಿದ್ದಾರೆ ಬಾಲಿವುಡ್‌ನ ಸಿನಿಮಾಗಳು 100 ಕೋಟಿ ಸಂಪಾದನೆ ದಾಟುವುದೂ ಕಷ್ಟವಾಗಿ ಕುಳಿತಿದೆ. ಈ ಸಂದರ್ಭದಲ್ಲಿ ಪಠಾಣ್‌ ಸಿನಿಮಾ ಬಂದಿದ್ದು, ಬಾಲಿವುಡ್‌ನಲ್ಲಿ ಮತ್ತೊಂದು ಆಶಾಭಾವ ಹುಟ್ಟಿಕೊಂಡಿದೆ. ಈ ಸಿನಿಮಾ ಹಿಟ್‌ ಆದರೆ ಮತ್ತೆ ಹಿಂದಿ ಸಿನಿಮಾಗಳಿಗೆ ಬೆಲೆ ಹೆಚ್ಚಬಹುದು, ಹಿಂದಿ ಸಿನಿಮಾಗಳು ಮತ್ತೆ ದೇಶಾದ್ಯಂತ ಮೆಚ್ಚುಗೆ ಪಡೆಯಬಹುದು ಎನ್ನುವ ನಿರೀಕ್ಷೆಯಿದೆ.

ಶಾರುಖ್‌ಗೆ 2023ನೇ ಇಸವಿ ಪ್ರಮುಖ

ಶಾರುಖ್‌ ಖಾನ್‌ ನಾಲ್ಕು ವರ್ಷಗಳ ನಂತರ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರಾದರೂ ಈ ವರ್ಷ ಒಂದೇ ಸಿನಿಮಾಕ್ಕೆ ಅವರ ಪ್ರಯಾಣ ನಿಲ್ಲುತ್ತಿಲ್ಲ. ಪಠಾಣ್‌ ನಂತರ ʼಜವಾನ್‌ʼ ಮತ್ತು ʼದುಂಕಿʼ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಈ ಮೂರು ಸಿನಿಮಾಗಳಲ್ಲಿ ಕನಿಷ್ಠ ಒಂದು ಅಥವಾ ಎರಡು ಸಿನಿಮಾವಾದರೂ ಹಿಟ್‌ ಆಗಲೇಬೇಕಿದೆ. ಹಾಗಾದರೆ ಮಾತ್ರ ಶಾರುಖ್‌ಗೆ ಸಿನಿಮಾ ರಂಗದಲ್ಲಿ ಇನ್ನಷ್ಟು ಅವಕಾಶಗಳು ಸಿಗಬಹುದು. ಅವರಿಗೆ ಒಂದು ಹಿಟ್‌ ಸಿನಿಮಾ ಕೂಡ ನೂರು ಅವಕಾಶಗಳ ದಾರಿಯನ್ನು ತೆರೆಯಬಹುದು. ಈ ಮೂರು ಸಿನಿಮಾಗಳ ಮೇಲೇ ಶಾರುಖ್‌ ಅವರ ಮುಂದಿನ ಭವಿಷ್ಯವಿದೆ ಎನ್ನುತ್ತಾರೆ ಬಾಲಿವುಡ್‌ ತಜ್ಞರು.

57ನೇ ವಯಸ್ಸಿನಲ್ಲೂ ಏಟ್‌ ಪ್ಯಾಕ್ಸ್‌!

ಸಿನಿಮಾ, ನಟನೆ, ಪಾತ್ರದ ಬೇಡಿಕೆ ವಿಚಾರದಲ್ಲಿ ಶಾರುಖ್‌ ಖಾನ್‌ ಅವರನ್ನು ಮೀರಿಸುವವರೇ ಇಲ್ಲ. ಅಷ್ಟರಮಟ್ಟಿಗೆ, ಅವರು ಬದ್ಧತೆ ಹೊಂದಿದ್ದಾರೆ. 57ನೇ ವಯಸ್ಸಿನಲ್ಲೂ ಪಠಾಣ್‌ ಸಿನಿಮಾಗಾಗಿ ಅವರು ಏಟ್‌ ಪ್ಯಾಕ್‌ ಆ್ಯಬ್ಸ್‌ ಹೊಂದಿದ್ದಾರೆ. ಸಾಮಾನ್ಯವಾಗಿ 50 ವರ್ಷ ದಾಟಿದ ಹೀರೊಗಳು ಏಟ್‌ ಪ್ಯಾಕ್‌ ಆ್ಯಬ್ಸ್‌ ಹೊಂದಲು ಬಯಸುವುದಿಲ್ಲ. ಆದರೆ, ವಯಸ್ಸಿನ ಲೆಕ್ಕಾಚಾರವನ್ನೂ ಮೀರಿ, ತಿಂಗಳುಗಟ್ಟಲೆ ಶ್ರಮವಹಿಸಿ, ಶಾರುಖ್‌ ಫಿಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿ, ಅಭಿಮಾನಿಗಳು ಅವರನ್ನು ತಲೆಮೇಲೆ ಹೊತ್ತು ಮೆರೆಸುತ್ತಾರೆ.

ವಿಶ್ವದ ಮೂರನೇ ಶ್ರೀಮಂತ ನಟ

ಶಾರುಖ್ ನಾಲ್ಕು ವರ್ಷಗಳ ಕಾಲ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ ಅವರ ದುಡಿಮೆಯೇನೂ ಕಡಿಮೆಯಾಗಿಲ್ಲ. ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಅವರು ಕೋಟ್ಯಂತರ ರೂ. ಸಂಪಾದಿಸಿದ್ದಾರೆ. ವರ್ಲ್ಡ್‌ ಆಫ್‌ ಸ್ಟಾಟಿಸ್ಟಿಕ್ಸ್‌ 2021ರಲ್ಲಿ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಶಾರುಖ್‌ ಖಾನ್‌ ಇಡೀ ವಿಶ್ವದಲ್ಲೇ ಮೂರನೇ ಅತ್ಯಂತ ಶ್ರೀಮಂತ ನಟರಾಗಿದ್ದಾರೆ. ಅವರ ಆಸ್ತಿ ಮೌಲ್ಯ 6,270 ಕೋಟಿ ರೂ.ಗಿಂತ ಹೆಚ್ಚಿದೆ!

ಒಟ್ಟಿನಲ್ಲಿ 57ನೇ ವಯಸ್ಸಿನಲ್ಲೂ ದೇಶದ ಜನ ಮೆಚ್ಚುವಂತಹ, ಈಗಲೂ ಫಿಟ್‌ನೆಸ್‌ ಕಾಪಾಡಿಕೊಂಡಿರುವ ಶಾರುಖ್‌ ಖಾನ್‌ ಅವರು ಪಠಾಣ್‌ ಸಿನಿಮಾ ಮೂಲಕ ತಮ್ಮ ವೃತ್ತಿ ಹಾಗೂ ಬಾಲಿವುಡ್‌ಅನ್ನೇ ಸರಿದಾರಿಗೆ ತಂದಿದ್ದಾರೆ ಎಂದೇ ಹೇಳಲಾಗುತ್ತಿದೆ. ಶಾರುಖ್‌ ಖಾನ್‌ ಅವರ ಗತವೈಭವ ಮರುಕಳಿಸಲು, ಬಾಲಿವುಡ್‌ ಮಂದಿಯೂ ಹಿಟ್‌ ಸಿನಿಮಾ ಕಾಣುವಂತಾಗಿದ್ದರೆ ಅದಕ್ಕೆ ಪಠಾಣ್‌ ಸಿನಿಮಾ ಕಾರಣವಾಗಿದೆ. ಹಾಗೆಯೇ, ಇದು ಮುಂದಿನ ದಿನಗಳ ನಿರೀಕ್ಷೆಯನ್ನೂ ಹೆಚ್ಚಿಸಿದೆ.

Exit mobile version