Site icon Vistara News

ಶಬ್ದಸ್ವಪ್ನ ಅಂಕಣ | ಕನಸು ಎಚ್ಚರಗಳ ನಡುವೆ ಮಾರ್ಕ್ವೇಜ್‌ನ ಮಾಯಾದರ್ಪಣ

gabrial garcia marquez

ಕನಸನ್ನು ಕಥನ ಭಾಷೆಯನ್ನಾಗಿಸಿದ ಗ್ಯಾಬ್ರಿಯಲ್ ಮಾರ್ಕ್ವೇಜ್ ವಿಶಿಷ್ಟ ಲೇಖಕ. ವಾಸ್ತವ ಲೋಕದ ಮಾಂತ್ರಿಕತೆ ಅವನ ಅಸಾಧಾರಣ ಕಲ್ಪನಾ ಪ್ರತಿಭೆಯಿಂದ ನಿರೂಪಿತವಾದದ್ದು. ದೇಶ-ಕಾಲದ ಹಂಗನ್ನು ತೊರೆದು ಎಚ್ಚರ, ನೆನಪು ಮತ್ತು ಕಲ್ಪನೆ ಈ ಮೂರೂ ಲೋಕವನ್ನು ಸಂಚರಿಸಬಲ್ಲ ಭಾಷೆ ಅವನ ಮಾಯಾ ಪಕ್ಷಿಯಾಗಿದೆ. ‘ಸ್ಟ್ರೇಂಜ್ ಪಿಲಗ್ರಿಮ್ಸ್’ ಹೆಸರಿನ ತನ್ನ ಕಥಾ ಸಂಕಲನದ ಪ್ರಸ್ತಾವನೆಯಲ್ಲಿ ಮಾರ್ಕ್ವೇಜ್ ತನಗೆ ಬಿದ್ದಿದ್ದ ಕನಸಿನಲ್ಲಿ ಕಂಡ ವಿಲಕ್ಷಣ ಸತ್ಯ ದರ್ಶನದ ಕುರಿತು ಬರೆದುಕೊಂಡಿದ್ದಾನೆ. ೧೯೭೬ರಲ್ಲಿ ಬಾರ್ಸಿಲೊನಾದಲ್ಲಿ ವಾಸವಾಗಿದ್ದಾಗ ಅವನಿಗೊಂದು ತೇಜೋಮಯ ಕನಸು ಬಿತ್ತು; ಸ್ವತಃ ಮಾರ್ಕ್ವೇಜ್ ತನ್ನ ಶವ ಸಂಸ್ಕಾರದ ಆಚರಣೆಯಲ್ಲಿ ಭಾಗಿಯಾಗಿದ್ದಾನೆ! ಶೋಕತಪ್ತ ಸ್ನೇಹಿತರು ಸೂತಕದ ವಸ್ತ್ರ ತೊಟ್ಟು ಹಬ್ಬದ ಲಹರಿಯಲ್ಲಿದ್ದಾರೆ. ಒಂದೆಡೆ ಸೇರುವಂತಾದದ್ದು ಎಲ್ಲರಿಗೂ ಸಂತೋಷವಾಗಿದೆ. ಅದೆಷ್ಟೋ ವರ್ಷಗಳಿಂದ ಭೇಟಿಯಾಗಿರದ ಲ್ಯಾಟೀನ್ ಅಮೇರಿಕಾದಿಂದ ಬಂದಿರುವ ಹಿರಿಯ, ಆಪ್ತ ಸ್ನೇಹಿತರನ್ನು ಮಾತಾಡಿಸುವ ಅದ್ಭುತ ಯೋಗ ಸಾವಿನಿಂದ ಪ್ರಾಪ್ತವಾದದ್ದರಿಂದ ಎಲ್ಲರಿಗಿಂತ ಮಾರ್ಕ್ವೇಜ್‌ನಿಗೆ ಹೆಚ್ಚು ಸಂತೋಷವಾಗಿದೆ. ಶವ ಸಂಸ್ಕಾರ ಮುಗಿದ ಬಳಿಕ ಅವರೆಲ್ಲರೂ ನಿರ್ಗಮಿಸುತ್ತಾರೆ. ಮಾರ್ಕ್ವೇಜ್‌ನೂ ಹೊರಡುವ ಪ್ರಯತ್ನ ಮಾಡುತ್ತಾನೆ. ಅವರಲ್ಲೊಬ್ಬ ಅಂತಿಮ ತೀರ್ಪಿನ ಧಾಟಿಯಲ್ಲಿ, “ನೀನೊಬ್ಬ ಮಾತ್ರ ಹೋಗಲು ಸಾಧ್ಯವಿಲ್ಲ” ಎನ್ನುತ್ತಾನೆ.

ಸಾವೆಂದರೆ ಮತ್ತೆಂದೂ ಸ್ನೇಹಿತರೊಂದಿಗೆ ಸ್ನೇಹಿತನಾಗಿ ಉಳಿಯಲಾರದ ಸ್ಥಿತಿ ಎನ್ನುತ್ತಾನೆ ಮಾರ್ಕ್ವೇಜ್. ಇದು ಕನಸನ್ನು ಮಾರುವ ಕಥೆಗಾರನಾಗಿ ಅವನು ರೂಪುಗೊಂಡ ಅಪೂರ್ವ ಕ್ಷಣವಾಯಿತು. ಕಳೆದ ಹತ್ತು ವರ್ಷಗಳಿಂದ ಈ ರೂಪಕ ಮಾಯೆಯಾಗಿ ನನ್ನ ಕಾಡುತ್ತಿದೆ. ಹಲವು ಸಂದರ್ಭಗಳಲ್ಲಿ ಸಣ್ಣಕತೆಯ ಸ್ವರೂಪವನ್ನು ಚರ್ಚಿಸುವಾಗ ಇದನ್ನು ಉಲ್ಲೇಖಿಸಿದ್ದೇನೆ. ಈ ರೂಪಕದ ಅರ್ಥವೇನು? ಅದು ಕನಸಿನ ಕುರಿತದ್ದೆ? ಕಲ್ಪನಾ ವಿಲಾಸವೆ? ಸಾವಿನ ನಿಗೂಢತೆಯ ಬಗ್ಗೆ ಹೇಳುತ್ತಿದೆಯೆ? ಸ್ನೇಹದ ಕುರಿತಾಗಿದೆಯೆ? ಇವೆಲ್ಲವೂ ಹಾಸುಹೊಕ್ಕಾಗಿರುವ ಬದುಕಿನ ವಿಸ್ಮಯದ ಬಗ್ಗೆ ಹೇಳುತ್ತಿದೆಯೆ? ಅದೆಷ್ಟು ಸಲ ಯೋಚಿಸಿದರೂ ತಿಳಿಯುವ ದಾಹ ತಣಿಯಲಿಲ್ಲ. ಅದರಿಂದ ಬಿಡಿಸಿಕೊಳ್ಳಲು ಯತ್ನಿಸಿದಾಗ ಅದು ತನ್ನ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸುತ್ತದೆ. ಅದು ನನ್ನೊಳಗೆ ಬೆಳೆಯಲಾರಂಭಿಸಿತು. ನನ್ನ ಕಥಾ ಭಾಷೆಯಲ್ಲಿ ಇನ್ನಷ್ಟು ವಿವರವಾಗಿ ವಿಸ್ತಾರವಾಗುತ್ತಲೇ ಇದೆ. ಅದರ ವಿಸ್ತರಣೆಯ ಒಂದು ಆವೃತ್ತಿಯನ್ನು ಮರುನಿರೂಪಿಸುತ್ತಿರುವೆ.

ಕತೆಯಾಗಬಹುದಾದ ಕನಸನ್ನು ಕಂಡವನು ಮಾರ್ಕ್ವೇಜ್. ಅದೀಗ ನಿಂತಿದ್ದದ್ದು ನನ್ನ ಮನಸಿನ ಎಚ್ಚರದ ಸ್ಥಿತಿಯಲ್ಲಿ. ವ್ಯತ್ಯಾಸವೆಂದರೆ ಅವನ ನಿರೂಪಣೆಯಲ್ಲಿ ಕನಸಿನಾವಸ್ಥೆ ಮಾತ್ರವಿತ್ತು; ನನಗೆ ಕನಸಿನ ಜತೆಗೆ ಎಚ್ಚರದ ಸವಾರಿ ಸಾಧ್ಯವಾಗಿದೆ. ಕನಸೆಂದು ಅರಿವಾಗುವವರೆಗೆ ಅದು ವಾಸ್ತವವೆಂದು ಭ್ರಮಿಸಲ್ಪಡುತ್ತದೆ; ಮನಸಿನ ಜಾಗ್ರತಾವಸ್ಥೆಯಲ್ಲಿ ಅನುಭವಿಸಿದ ಕನಸಿನ ನೆನಪು ಸುಳ್ಳಲ್ಲವಾದ್ದರಿಂದ, ಆದರೆ ನಿಜವೂ ಅಲ್ಲವಾದ್ದರಿಂದ ಅದು ಮಿಥ್ಯೆ. ಅನುಭವಕ್ಕೆ ಸುಳ್ಳು, ಸತ್ಯ, ಮಿಥ್ಯ ಎಂಬೆಲ್ಲ ಆಯಾಮಗಳು ಪ್ರಾಪ್ತವಾಗುವುದು ಕನಸಿನಿಂದ ಹೊರಬಂದ ಮೇಲೆಯೇ. ಈಗ ಇನ್ನೊಂದು ಕನಸು ನನ್ನ ಭಾಷೆಯಾಗಿ ಮುಂದೊರೆಯುತ್ತಿದೆ. ಭಾಷೆಯೂ ಕನಸು; ಏಕೆಂದರೆ, ಅರೆಪ್ರಜ್ಞಾವಸ್ಥೆಯ ಭಾಷೆಯಲ್ಲಿ ವ್ಯಕ್ತಿ ಮತ್ತು ವಿಶ್ವ ಒಂದಾದಾಗ ಲೇಖಕ ಸುತ್ತಲಿನ ಜಗತ್ತಿನ ಇರುವಿಕೆಯ ಅರಿವನ್ನು ಕಳೆದುಕೊಳ್ಳುತ್ತಾನೆ. ಇರುವುದನ್ನು ಕಳೆದು ಖಾಲಿಯಾದ ಅವಕಾಶದಲ್ಲಿ ಮಾತ್ರ ಸೃಷ್ಟಿ ಸಾಧ್ಯ. ಕನಸನ್ನು ವಾಸ್ತವದಲ್ಲಿ ಬಿತ್ತಿ ಸತ್ಯವನ್ನು ಬೆಳೆಯಲು ಭಾಷೆ ಬೇಕಲ್ಲವೆ?

ಮಾರ್ಕ್ವೇಜ್ ತನ್ನ ಕನಸಿನ ಬೀಜವನ್ನು ನನಗೆ ಮಾರಿದ್ದಾನೆ. ನನ್ನ ಭಾಷಾ ಉಳುಮೆಯಲ್ಲಿ ಅದು ಸಸಿಯಾಗಿ ಜೀವ ಧರಿಸುತ್ತಿರುವಾಗ ಇನ್ನಷ್ಟು ವಿವರಗಳು ಮೈ ಪಡೆದವು. ಒಮ್ಮೆ ಮಾರ್ಕ್ವೇಜ್ ವಿಚಿತ್ರ ಕನಸು ಕಂಡ; ಸ್ವತಃ ಅವನು ತಾನು ಶವವಾಗಿ ಮಲಗಿರುವುದನ್ನು ನೋಡುತ್ತಿದ್ದಾನೆ; ರಾತ್ರಿ ಕತ್ತಲು; ಕಣ್ಣು ಮುಚ್ಚಿದೆ; ಅದರೂ ಬೆಳಕಿದೆ; ಬದುಕಿದ್ದು ನೋಡುತ್ತಿರುವವನೇ ಸತ್ತಿದ್ದಾನೆ! ಅವನೂರಿನ ಪ್ರೀತಿಯ ಮನೆಯ ಅಂಗಳದಲ್ಲಿ ಶವವನ್ನು ಮಲಗಿಸಿದ್ದಾರೆ; ಅನೇಕ ವರ್ಷಗಳಿಂದ ಭೇಟಿಯೇ ಆಗಿರದ ಆಪ್ತ ಸ್ನೇಹಿತರು ಲ್ಯಾಟಿನ್ ಅಮೇರಿಕಾ ಮತ್ತಿತರ ದೇಶದಿಂದ ಅಂತಿಮ ವಿದಾಯ ಹೇಳಲು ಬಂದಿದ್ದಾರೆ. ಮನೆಯವರೆಲ್ಲರೂ ಅಳುತ್ತಿದ್ದಾರೆ. ನೆರೆದ ಅಪಾರ ಸಂಖ್ಯೆಯ ಸಾಹಿತ್ಯಾಭಿಮಾನಿಗಳು ಶೋಕಿಸುತ್ತಿದ್ದಾರೆ. ಅವನು ಕೆಲಸ ಮಾಡುತ್ತಿದ್ದ ಆಫೀಸಿನಿಂದ ನೂರಾರು ಮೈಲು ದೂರದಲ್ಲಿರುವ ಮನೆ ಅವನಿಗೆ ಕಾಣುತ್ತಿದೆ. ಶವ ಸಂಸ್ಕಾರದಲ್ಲಿ ಭಾಗವಹಿಸಲು ಮಾರ್ಕ್ವೇಜ್ ತನ್ನೂರಿಗೆ ಧಾವಿಸಿದ. ಶವದ ಪೆಟ್ಟಿಗೆಯಲ್ಲಿ ನಿನ್ನೆ ರಾತ್ರಿ ತೀರಿಕೊಂಡ ಮಾರ್ಕ್ವೇಜ್ ಚಿರನಿದ್ರೆಯಲ್ಲಿ ಮಲಗಿದ್ದಾನೆ.

ನೋಡುತ್ತಿದ್ದ ಮಾರ್ಕ್ವೇಜ್‌ನಿಗೆ ತಾನು ಪ್ರೇತವಾಗಿ ಬಿಟ್ಟೆನೆ ಎಂದು ಭಯವಾಯಿತು. ಸೂತಕದ ಮನೆಯಲ್ಲಿ ಸೇರಿದವರಿಗೆ ತಾನು ಕಾಣುತ್ತಿಲ್ಲವೇನೊ! ತಾನು ನಡೆದಾಡುತ್ತಿರುವ ಪವಾಡಕ್ಕೆ ಅವರು ಭಯಪಡುತ್ತಿಲ್ಲ; ದಿವಂಗತ ಮಾರ್ಕ್ವೇಜ್‌ನನ್ನು ಜಮಾಯಿಸಿದ ಜನ ವಿಧವಿಧವಾಗಿ ಕೊಂಡಾಡುತ್ತಿದ್ದಾರೆ. ತನ್ನ ಮರಣೋತ್ತರ ವಿದಾಯವನ್ನು ಈ ಹಿಂದೆ ತಾನು ಕಲ್ಪಿಸಿದ್ದೆ; ಈಗ ಅದನ್ನು ಸಶರೀರನಾಗಿ ನೋಡುತ್ತಿರುವೆ; ತನ್ನ ಸಾಹಿತ್ಯ ಕೊಡುಗೆಯನ್ನು ಸ್ಮರಿಸಿ ಕೀರ್ತಿಸುವುದನ್ನು ಕೇಳಿ ಸಂತೋಷವಾಯಿತು. ಆದರೆ, ಜೀವಂತವಾಗಿದ್ದ ಲೇಖಕನ ಹಾಜರಿಯನ್ನು ಗುರುತಿಸುವ ಕನಿಷ್ಟ ಸೌಜನ್ಯವೂ ಇರದ ದಾರುಣ ಸ್ಥಿತಿಯಿಂದ ದುಃಖವಾಯಿತು. ಜೀವವಿರುವ ಮಾರ್ಕ್ವೇಜ್‌ನಿಗಿಂತ ಇಹಲೋಕ ತ್ಯಜಿಸಿದ ಮಾರ್ಕ್ವೇಜ್ ಹೆಚ್ಚು ವಾಸ್ತವವೂ ಹತ್ತಿರವೂ ಆಗಿದ್ದಾನೆ. ಸಾವಿನ ಸಂದರ್ಭದಲ್ಲಾದರೂ ಸ್ನೇಹಿತರನ್ನು ಭೇಟಿಯಾಗಿ, ಮಾತಾಡುವ ಸಂತೋಷದ ಯೋಗ ಒದಗಿ ಬಂತು ಎಂದು ಬಂದರೆ ಅದೂ ಸಾಧ್ಯವಾಗುತ್ತಿಲ್ಲ. ತನಗೀಗ ಭೌತಿಕ ಅಸ್ತಿತ್ವವೇ ಇಲ್ಲವೆ? ಗೊಂದಲವಾಗಿ ತಳಮಳಿಸಿದ.

ಶವದ ಮೆರವಣಿಗೆ ಸ್ಮಶಾನದತ್ತ ಹೊರಟಿತು. ಅಂತಿಮ ವಿದಾಯ ಹೇಳಲು ಮಾರ್ಕ್ವೇಜ್ ಮೆರವಣಿಗೆಯನ್ನು ಸೇರಿದ. ಹಾದಿಯುದ್ದಕ್ಕೂ ಇಳಿ ಹೊತ್ತಿನ ಹಳದಿ ಬಿಸಿಲು. ನಡೆಯುತ್ತಿರುವವರ ಉದ್ದುದ್ದ ನೆರಳು ರಸ್ತೆಯ ಮೇಲೆ ಅದಲು ಬದಲಾಗಿ ತಳಕು ಹಾಕಿ ತಳ್ಳಾಡುತ್ತಿವೆ. ಮಾರ್ಕ್ವೇಜ್‌ನಿಗೆ ತನ್ನ ನೆರಳೇ ಕಾಣುತ್ತಿಲ್ಲ! ಶವದಷ್ಟೇ ತಣ್ಣಗಿನ ಮೌನ ಹಿಂಸೆಯಾಯಿತು. ಎಲ್ಲರೂ ಶೋಕದ ಮಡುವಿನಲ್ಲಿದ್ದರೆ ತಾನು ಹಬ್ಬದ ಹುರುಪಿನಲ್ಲಿದ್ದೇನೆ. ಇಲ್ಲಿ ಮೂಲ ಮಾರ್ಕ್ವೇಜ್ ಯಾರು, ಅಣುಕು ಅಭಿನಯದ ನಕಲು ಯಾರು ಎಂಬುದೇ ಅಸಂಬದ್ಧವಾಗಿದೆ. ಮೆರವಣಿಗೆ ಸ್ಮಶಾನದ ಗೇಟನ್ನು ತಲುಪಿತು.

ಇದನ್ನೂ ಓದಿ | ಶಬ್ದಸ್ವಪ್ನ ಅಂಕಣ: ಸ್ಪರ್ಶದಲ್ಲಿ ಸರ್ವಸ್ವ

ಸ್ಮಶಾನದ ಉಸ್ತುವಾರಿ ವಹಿಸಿಕೊಂಡ ಮೀಸೆಯ ದ್ವಾರಪಾಲಕ, ಕೂತಿದ್ದ ಕಲ್ಲು ಬಾಂಕಿನಿಂದ ಎದ್ದು ಬಂದು ಮೊಳೆ ಹೊಡೆದಿರದಿದ್ದ ಶವ ಪೆಟ್ಟಿಗೆಯ ಹಲಗೆಯನ್ನು ಸರಿಸಿ ಖಾತ್ರಿ ಪಡಿಸಿಕೊಂಡ. ಗೇಟನ್ನು ತೆಗೆದು, “ಒಳಗೆ ಹತ್ತು ಜನರಿಗೆ ಮಾತ್ರ ಪ್ರವೇಶ” ಎಂದು ದ್ವಾರದ ಸನಿಹ ನಿಂತ. ತೀರಿಕೊಂಡವನಿಗೆ ತೀರಾ ಆಪ್ತರಾದವರು ಪ್ರವೇಶಕ್ಕೆ ಹಾತೊರೆದರು. ಹಿಂದೆ ನಿಂತಿದ್ದ ಮಾರ್ಕ್ವೇಜ್ ಹತ್ತರೊಳಗೊಬ್ಬನಾಗಿ ಒಳ ಸೇರಲು ಧಾವಿಸಿದ. ಹತ್ತು ಜನರ ಪ್ರವೇಶದ ನಂತರ ದ್ವಾರಪಾಲಕ ಅಡ್ಡ ಬಂದು ಗೇಟನ್ನು ಮುಚ್ಚಿದ. ಕೊನೆಯವನಾಗಿ ಒಳ ಬಂದ ಮಾರ್ಕ್ವೇಜ್‌ನನ್ನು ಮೀಸೆಯವ ದುರಗುಟ್ಟಿ ನೋಡಿದ. ಇವನನ್ನು ಎಲ್ಲೊ ನೋಡಿದ ನೆನಪು ಕ್ಷಣ ಕಾಲದ ನಂತರ ಮಸುಕಾಯಿತು. ಗೊಂದಲಿಸುತ್ತ ಮಣ್ಣು ಮಾಡುವ ಜಾಗಕ್ಕೆ ನಡೆದ. ಪೆಟ್ಟಿಗೆಯನ್ನು ತೋಡಿನಲ್ಲಿಟ್ಟು ಮಣ್ಣು ಹಾಕಿ, ಗಿಡ ನೆಡುವ ತನಕ ಆಗೀಗ ದಿಟ್ಟಿಸಿ ನೋಡುತ್ತಿದ್ದ ಮೀಸೆಯವನ ಉರಿ ದೃಷ್ಟಿಯನ್ನು ತಪ್ಪಿಸಿಕೊಳ್ಳಲು ಮಾರ್ಕ್ವೇಜ್ ಹೆಣಗಾಡಿದ.

ಮರಳಿ ಹೋಗುವಾಗಲೂ ಕೊನೆಯವ ಮಾರ್ಕ್ವೇಜ್. ತಲೆ ಎಣಿಸಿ ಹೊರಗೆ ಬಿಡುತ್ತಿದ್ದ ದ್ವಾರಪಾಲಕ ಸಾಲಿನಲ್ಲಿ ಹತ್ತನೆಯವನಾಗಿದ್ದ ಅವನನ್ನು ತಡೆದು, “ನೀನೊಬ್ಬ ಮಾತ್ರ ಇಲ್ಲಿಂದ ಎಂದಿಗೂ ಹೋಗುವಂತಿಲ್ಲ” ಎಂದು ಗೇಟನ್ನು ಮುಚ್ಚಿದ. ಮಾಕ್ವೇಜ್ ಗೇಟಿನ ಕಂಬಿಯನ್ನು ಹಿಡಿದು ಜಗ್ಗುತ್ತ, “ನನ್ನೊಬ್ಬನನ್ನೇ ಬಿಟ್ಟು ಹೋಗ್ಬೇಡಿ. ನಿಮ್ಮ ಜತೆಯಲ್ಲೆ ಬಂದವನು ನಾನು.” ದಮ್ಮಯ್ಯ ಹಾಕಿದ. ತಲೆ ಕೆಳಗೆ ಹಾಕಿ ನಡೆಯುತ್ತಿದ್ದ ಸ್ನೇಹಿತರು ಹೊರಳಿ ನೋಡದೆ ದಾರಿಯ ತಿರುವಿನಲ್ಲಿ ಮರೆಯಾಗಿ ಹೋದರು. ದ್ವಾರಪಾಲಕ ಹೊರಗೆ ಹೋಗಲು ಹಟಹಿಡಿದವನ ರಟ್ಟೆ ಹಿಡಿದು ಎಳೆದ ರಭಸಕ್ಕೆ ಕೂಗಿದ… ತಟ್ಟನೆ ಮಾರ್ಕ್ವೇಜ್‌ನಿಗೆ ಎಚ್ಚರವಾಯಿತು. ಸುತ್ತಲೂ ಗಾಢಾಂಧಕಾರ.

ಕಾಲದ ದ್ವಾರಪಾಲಕ ಸ್ಮಶಾನದ ಗೇಟಿನೊಳಗೆ ಶಾಶ್ವತವಾಗಿ ಮಾರ್ಕ್ವೇಜ್‌ನನ್ನು ಹಿಡಿದು ನಿಲ್ಲಿಸಿದ್ದಾನೆ. ಅವನ ಜೊತೆ ಈಗ ಯಾರೂ ಇಲ್ಲ; ಅದೊಂದು ಭಯಂಕರ ಒಂಟಿತನ. ಅವನು ಯಾರಿಗೂ ಇಲ್ಲದ ಯಾರೂ ಅವನಿಗಿಲ್ಲದ ಅವಸ್ಥೆಯೇ ಸಾವು. ಗೇಟು ಮುಚ್ಚುವವರೆಗೆ ನಡೆದಿರುವುದು ಸಾವಿನ ಅಭಿನಯ ಮಾತ್ರ. ಸಾವು-ಬದುಕಿನ ನಾಟಕೀಯ ದೃಶ್ಯ ಭಾಷೆಯ ರಂಗಸ್ಥಳದಲ್ಲಿ ಜರುಗುವುದೇ ವಿಸ್ಮಯ.

ಎಚ್ಚರವಾದ ನಂತರವೇ ನಿದ್ರೆಯಲ್ಲಿ ಕಂಡ ದೃಶ್ಯಗಳು ಕನಸೆಂದು ಗೊತ್ತಾಗುವುದು. ನಿದ್ರಾಭಂಗವಾಗುವ ತನಕ ಅದನ್ನು ನಿಜವೆಂದೇ ಭಾವಿಸುತ್ತೇವೆ. ಜಾಗ್ರತ ಅವಸ್ಥೆಯಲ್ಲಿ ಅನುಭವಿಸಿದಂತೆ ಸುಖ, ದುಃಖಗಳೆಲ್ಲವನ್ನು ಕನಸಿನಲ್ಲಿ ಅನುಭವಿಸುತ್ತೇವೆ. ಅದು ಸತ್ಯವಲ್ಲ; ಸುಳ್ಳೂ ಅಲ್ಲ; ಕನಸು ಇತ್ತು; ಆದರೀಗ ಇಲ್ಲ; ಆದ್ದರಿಂದ ಅದು ಇದ್ದದ್ದು ಇಲ್ಲವಾದ ಮಿಥ್ಯೆ. ಕಥೆಯ ಪ್ರಪಂಚದಲ್ಲಿದ್ದಾಗ ಬದಲಾಗುತ್ತಲೇ ಇರುವ ಭೌತ ಜಗತ್ತು ಕನಸಾಗಿರಬಹುದೆ? ಮಾರ್ಕ್ವೇಜ್ ಕನಸಿನಲ್ಲಿ ತಾನು ಬದುಕಿರುವುದನ್ನೂ ಸತ್ತಿರುವುದನ್ನೂ ಏಕಕಾಲದಲ್ಲಿ ಕಂಡಿದ್ದಾನೆ. ಸ್ವಪ್ನಾವಸ್ಥೆಯಲ್ಲಿ ಬದುಕು ಮತ್ತು ಸಾವು ಎರಡೂ ಮಿಥ್ಯೆಗಳೇ ಅಲ್ಲವೆ? ಅಂತೆಯೇ ಕಥಾ ಜಗತ್ತು ಸತ್ಯ, ಭೌತ ಜಗತ್ತು ಮಿಥ್ಯೆ ಎಂದು ಅನಿಸುವುದಿಲ್ಲವೆ? ಕೊನೆಗೂ ನಮ್ಮ ಅನುಭವ ಅಂತ್ಯವಿಲ್ಲದ ಬಿಂಬ-ಪ್ರತಿಬಿಂಬಗಳ ಕನ್ನಡಿಯ ಲೀಲೆಯಲ್ಲವೆ? ಇಂಥಾದ್ದೊಂದು ಮಾಯಾದರ್ಪಣವಾದ ಭಾಷೆ ಬೆಳಕಿನ ಹಾಗೆ ಎಲ್ಲವನ್ನು ತೋರಿಸುತ್ತ ತನ್ನ ರೂಪವನ್ನು ಕಾಣಿಸುವುದಿಲ್ಲ.

ಇದನ್ನೂ ಓದಿ | ಶಬ್ದಸ್ವಪ್ನ ಅಂಕಣ | ಭಾಷಾ ಬೋಧನೆಯ ಸೃಜನಶೀಲ ನೆಲೆಗಳು

(ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಬಳಗಾರಿನಲ್ಲಿ ಜನಿಸಿದ ಶ್ರೀಧರ ಬಳಗಾರ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಟೀಚರ್ ಎಜ್ಯುಕೇಟರ್ ಆಗಿ ಪಾಠ ಮಾಡುತ್ತ ಸದ್ಯ ಕುಮಟಾದಲ್ಲಿ ನೆಲೆಸಿದ್ದಾರೆ. ಅಧೋಮುಖ (೧೯೯೫), ಮುಖಾಂತರ (೧೯೯೮), ಇಳೆ ಎಂಬ ಕನಸು (೨೦೦೩೦), ಒಂದು ಫೋಟೋದ ನೆಗೆಟೀವ್ (೨೦೦೮), ಈಸಾಡತಾವ ಜೀವ (೨೦೧೫)- ಕಥಾ ಸಂಕಲನಗಳು. ಕೇತಕಿಯ ಬನ (೨೦೦೩), ಆಡುಕಳ (೨೦೧೪), ಮೃಗಶಿರ (೨೦೧೯)ಕಾದಂಬರಿಗಳು. ರಥಬೀದಿ (೨೦೦೯), ಕಾಲಪಲ್ಲಟ (೨೦೧೧)- ಅಂಕಣ ಬರೆಹಗಳು. ಮೊಳದಷ್ಟು ಹೂವು (೨೦೧೯೦) ಲೇಖನ ಸಂಗ್ರಹ. ಕುವೆಂಪು ಭಾಷಾಭಾರತಿಗೆ ಪೀಟರ್ ವ್ಯಾಟ್ಸನ್ ಮತ್ತು ನಿರ್ಮಲ್ ವರ್ಮಾರವರ ಆಯ್ದ ಬರೆಹಗಳ ಅನುವಾದ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಗೆ ಸ್ವಾತಂತ್ರ್ಯೋತ್ತರ ಕನ್ನಡ ಚಿಂತನಾತ್ಮಕ ಲೇಖನಗಳ ಸಂಪಾದನೆ ಮಾಡಿದ್ದಾರೆ. ಕೆಲವು ಕಥೆಗಳು ಇಂಗ್ಲಿಶ್, ತಮಿಳು, ಉರ್ದುಗೆ ಭಾಷಾಂತರಗೊಂಡಿವೆ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಪದವಿ ಪಠ್ಯಕ್ಕೆ ಸೇರ್ಪಡೆಯಾಗಿವೆ. ಕೆಲವು ಕಥೆಗಳನ್ನು ರಂಗರೂಪಕ್ಕೆ ಅಳವಡಿಸಲಾಗಿದೆ. ಮೂರು ಸಲ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ, ಮಾಸ್ತಿ ಪುರಸ್ಕಾರ, ನಿರಂಜನ ಸಾಹಿತ್ಯ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಯು. ಆರ್. ಅನಂತಮೂರ್ತಿ ಕಥಾ ಪ್ರಶಸ್ತಿ, ದ. ರಾ. ಬೇಂದ್ರೆ ಸಾಹಿತ್ಯ ಪುರಸ್ಕಾರ, ವಾರಂಬಳ್ಳಿ ಪ್ರತಿಷ್ಠಾನ ಕಥಾ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ, ಡಾ. ಬೆಸಗರಹಳ್ಳಿ ರಾಮಣ್ಣ ಸಂಸ್ಮರಣಾ ಸಾಹಿತ್ಯ ಪ್ರಶಸ್ತಿ, ಅಜೂರ ಪುಸ್ತಕ ಪ್ರತಿಷ್ಠಾನ ಪ್ರಶಸ್ತಿ, ‘ಅಮ್ಮ’ ಪ್ರಶಸ್ತಿ, ಬರಗೂರು ಪುಸ್ತಕ ಪ್ರಶಸ್ತಿ ಪುರಸ್ಕೃತರು.)

Exit mobile version