Site icon Vistara News

ಮೊಗಸಾಲೆ ಅಂಕಣ | ಸಂಕಟ ಬಂದಾಗಲೆಲ್ಲ ವೆಂಕಟರಮಣ, ಕಾಂಗ್ರೆಸ್‍ನ ಹಳೆ ಚಾಳಿ

siddaramaiah

ಯಾವುದೇ ರಾಜ್ಯ ತೆಗೆದುಕೊಳ್ಳಿ, ಅಲ್ಲಿಯ ವಿಧಾನ ಸಭೆಗೆ ಚುನಾವಣೆ ಹತ್ತಿರ ಬಂತು ಎನ್ನುವುದಕ್ಕೆ ಮುನ್ಸೂಚನೆ ರಾಜಕಾರಣಿಗಳ ವರ್ತನೆ. ಏಕಾಏಕಿ ಅವರ ನಡವಳಿಕೆಯಲ್ಲಿ, ಆಂಗಿಕ ಭಾಷೆಯಲ್ಲಿ, ಜನ ಸಾಮಾನ್ಯರೊಂದಿಗೆ ಅವರು ವ್ಯವಹರಿಸುವ ರೀತಿಯಲ್ಲಿ ವರ್ಷಗಳಲ್ಲಿ ಕಾಣಿಸದ ಬದಲಾವಣೆ ಗೋಚರಿಸಲಾರಂಭವಾಗುತ್ತದೆ. ಇದೀಗ ಕರ್ನಾಟಕ ವಿಧಾನ ಸಭೆಗೆ ಚುನಾವಣೆ ಹತ್ತಿರವಾಗುತ್ತಿದೆ. ಮತ್ತೆ ಮುಖ್ಯಮಂತ್ರಿ ಆಗುವ ಗುಂಗಿನಲ್ಲಿರುವ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ “ಸಾರ್ವಜನಿಕ ನಡವಳಿಕೆ” ಬೆಕ್ಕಸ ಬೆರಗಾಗಿಸುವ ರೀತಿಯಲ್ಲಿ ಬದಲಾಗಿ ಗಮನ ಸೆಳೆಯುತ್ತಿದೆ. ಅವರ ನಡವಳಿಕೆಯಲ್ಲಿ ಅತ್ಯಾಶ್ಚರ್ಯಕರವೆನಿಸಿರುವುದು ದಿನಂಪ್ರತಿ ಅವರು ಮಾಡುತ್ತಿರುವ ದೇವಾಲಯ, ಮಠಗಳ ಭೇಟಿ. ವಿವಿಧ ಮಠಗಳ ಸ್ವಾಮೀಜಿಗಳ ದರ್ಶನಾಶೀರ್ವಾದ ಪಡೆಯುತ್ತಿರುವ ರೀತಿ.

ಧರ್ಮವನ್ನು ಹೊರಗಿಟ್ಟು ನಡೆಸುತ್ತಿದ್ದ ರಾಜಕೀಯ ದೇಶದಲ್ಲಿ ಹಳಸಿ ಹೋಗಿದೆ. ಚಲಾವಣೆ ಇಲ್ಲದ ಮುಖಬೆಲೆ ಕಳೆದುಕೊಂಡ ನಾಣ್ಯ ಅದು. ಕಳೆದ ಕೆಲವು ದಶಕಗಳಿಂದ ಮಾಡಿಕೊಂಡು ಬಂದಿರುವ ಸಣ್ಣ (ಕ್ಷುಲ್ಲಕ) ರಾಜಕೀಯ ಈ ಹೊತ್ತು ಬಹುದೊಡ್ಡ ಸಮಸ್ಯೆಯಾಗಿ ಬೆಳೆದಿದೆ. ಪರಿಹಾರ ಸನಿಹದಲ್ಲೂ ಇಲ್ಲ, ಸುಲಭದ್ದೂ ಅಲ್ಲ. ಓಟು ಬ್ಯಾಂಕ್ ರಾಜಕೀಯ ಎನ್ನುವುದು ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ಕಾಂಗ್ರೆಸ್ಸು ದೇಶದಲ್ಲಿ ಮೊದಲಿಗೆ ಹುಟ್ಟು ಹಾಕಿದ ಕೊಳಕು ರಾಜಕೀಯ. ಈಗ ಅದೇ ರಾಜಕೀಯ ಆ ಪಕ್ಷಕ್ಕೇ ತಿರುಗುಬಾಣ ಆಗಿದೆ. ಅಸ್ತ್ರಕ್ಕೆ ಪ್ರತ್ಯಸ್ತ್ರ ಹೂಡುವುದು ಯುದ್ಧದಲ್ಲಿ ಸಾಮಾನ್ಯ. ಚುನಾವಣೆಯೂ ಒಂದು ಯುದ್ಧವೇ. ಎದುರಾಳಿಯನ್ನು ಮಣಿಸುವುದಕ್ಕೆ ಎಷ್ಟೆಲ್ಲ ಹಾಗೂ ಏನೆಲ್ಲ ಕಾರ್ಯತಂತ್ರ ನಡೆಯುವ ಚುನಾವಣೆಯನ್ನು ಸಮರ ಎಂದು ವ್ಯಾಖ್ಯಾನಿಸದೆ ಸಮರಸ ಎಂದು ಕರೆದರೆ ಸಮಂಜಸವಾಗದು.

ರಾಜ್ಯ ವಿಧಾನ ಸಭೆಗೆ 2023ರ ಮೊದಲ ಅರ್ಧ ಭಾಗದಲ್ಲಿ ನಡೆಯಲಿರುವ ಚುನಾವಣೆಯನ್ನು “ಗೆದ್ದೇ ಸಿದ್ಧ; ಮುಖ್ಯಮಂತ್ರಿ ಆಗೇ ಬದ್ಧ” ಎಂದು ತೋಳೇರಿಸಿ ಹೊರಟಿರುವ ಸಿದ್ದರಾಮಯ್ಯನವರಿಗೆ ತಾವಿಟ್ಟುಕೊಂಡಿರುವ ಗುರಿ ಸಾಧನೆಗೆ ಬೇಕಾಗಿರುವುದು ಓಟು ಮತ್ತು ಓಟು ಮಾತ್ರ. 2013ರ ಚುನಾವಣೆಯನ್ನು 122 ಸೀಟುಗಳೊಂದಿಗೆ ಕಾಂಗ್ರೆಸ್ ಗೆದ್ದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಮಯದ ಜಯದ ಹಿಂದೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಕೊಟ್ಟ ವರದಿಯ ಬಲ ಇತ್ತು. ಬಳ್ಳಾರಿಯಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆಯ ಕ್ರೂರ ಮುಖಗಳನ್ನೆಲ್ಲ ಹೆಗ್ಡೆ ವರದಿ ಅನಾವರಣಗೊಳಿಸಿತ್ತು. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಾಲಿಗೆ ಹೆಗ್ಡೆ ವರದಿ ಬಯಸದೇ ಬಂದ ಭಾಗ್ಯವಾಗಿ ಆಡಳಿತಾರೂಢ ಬಿಜೆಪಿ ಸ್ಥಾನ ತೆರವು ಮಾಡಬೇಕಾಯಿತು. ಏರಿದ ಏಣಿಯನ್ನು ಒದೆಯುವ ಪ್ರವೃತ್ತಿ ಹಲವರಲ್ಲಿರುವ ಚಾಳಿ. ತಾವು ಅಧಿಕಾರಕ್ಕೇರಲು ನೆರವಾದ ಲೋಕಾಯುಕ್ತದ ಎಲ್ಲ ಹಲ್ಲನ್ನೂ ಕಿತ್ತು ಹಾಕಿ ಬೊಚ್ಚುಬಾಯಿ ನಾಗಪ್ಪನನ್ನಾಗಿಸಿದ್ದು ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರದಲ್ಲಿ ಮಾಡಿದ ಘನಂದಾರಿ ಕೆಲಸ. ಮುಖ್ಯಮಂತ್ರಿ, ಗೃಹ ಸಚಿವರ ಆಣತಿ ಆದೇಶದಂತೆ ನಡೆಯುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸ್ಥಾಪಿಸಿ ಭ್ರಷ್ಟರಿಗೆ ಇನ್ನು ಮುಂದೆ ಅಪಾಯವಿಲ್ಲ ಎಂಬ ಕೆಟ್ಟ ಮತ್ತು ದೂರದೃಷ್ಟಿ ರಹಿತದ ಸಂದೇಶ ರವಾನಿಸಿದ್ದು ಸಿದ್ದರಾಮಯ್ಯ ಸರ್ಕಾರ. ಲೋಕಾಯುಕ್ತದಂಥ ಸಂಸ್ಥೆಗೆ ಮಾಡಿದ ಅವಮಾನ, ಚುನಾವಣೆಯಲ್ಲಿ ತನ್ನ ಮತಭಂಗಕ್ಕೆ ಒಂದು ನೆಪವಾಗಬಹುದು ಎಂಬುದನ್ನು ಆಡಳಿತ ಪಕ್ಷ ಮುಂಗಾಣದೆ ಹೋಯಿತು.

ಇವೆಲ್ಲ ಐದು ವರ್ಷದ ಹಿಂದಿನ ಕಥೆ. ಈಗ ಅದು ನೆನಪಾಗಲು ಕಾರಣ ಮತ್ತೆ ಚುನಾವಣೆ ಬಂದಿರುವುದು. ಎಲ್ಲ ರಾಜಕೀಯ ಪಕ್ಷಗಳ ಮುಖಂಡರಿಗೆ; ಶಾಸಕ ಸ್ಥಾನಾಕಾಂಕ್ಷಿ ಪುಢಾರಿಗಳಿಗೆ ಜನರ ನೆನಪಿನ ಮೇಘಸ್ಫೋಟವಾಗಿ ಪ್ರೀತಿ ಉಕ್ಕತೊಡಗಿದೆ. ಸಿದ್ದರಾಮಯ್ಯ ಹೇಳಿ ಕೇಳಿ ಜನನಾಯಕ. ತನ್ನೊಂದಿಗೆ ಹತ್ತು ಜನರನ್ನು ಆಯ್ಕೆ ಮಾಡಿಸಿಕೊಂಡು ಬರಬಲ್ಲ ಸಾಮರ್ಥ್ಯವುಳ್ಳ ಲೀಡರ್. ಐದು ವರ್ಷದ ಹಿಂದೆ ತಮ್ಮ ಗೆಲುವಿನ ದಾರಿಯಲ್ಲಿ ಎದುರಾದ ಅಡ್ಡಿ ಆತಂಕ ಕಲ್ಲು ಮುಳ್ಳು ಯಾವ್ಯಾವುದು ಎನ್ನುವುದೆಲ್ಲ ಅವರಿಗೆ ಈಗ ನೆನಪಿಗೆ ಬಂದಿದೆ. ತಾವು ಅಧಿಕಾರದಲ್ಲಿದ್ದಾಗ ತೆಗೆದುಕೊಂಡ ಕೆಲವು “ತಪ್ಪು” ನಿರ್ಧಾರಗಳಿಗೆ ಇಂದು “ಪ್ರಾಯಶ್ಚಿತ್ತ” ಮಾಡಿಕೊಳ್ಳುವ ತಂತ್ರಗಾರಿಕೆ ಅವರಿಗೆ ರಾಜಕೀಯವಾಗಿ ಅನಿವಾರ್ಯವಾಗಿದೆ. ಕಳೆದ ಎರಡು ಮೂರು ವಾರದಿಂದ ಅವರು ಒಂದಲ್ಲ ಒಂದು ದೇವಸ್ಥಾನಕ್ಕೋ ಗುಡಿಗೋ ಭೇಟಿ ನೀಡುತ್ತಿರುವುದನ್ನು ನೋಡಿದರೆ ಯಾರಿಗೂ ಇವೆಲ್ಲ ಅರ್ಥವಾಗುತ್ತದೆ. ಗುಡಿ ಗುಂಡಾರಗಳಲ್ಲಿ ಪೂಜೆ ಮಂಗಳಾರತಿ ನಡೆಸಿ ತೀರ್ಥ ಪ್ರಸಾದ ಸ್ವೀಕರಿಸುತ್ತಿರುವ ರೀತಿಯನ್ನು ನೋಡಿದರೆ ಇವರೇನಾ ಆ ಸಿದ್ದರಾಮಯ್ಯ ಎಂಬ ಅನುಮಾನ ಕೂಡಾ ಬರುತ್ತದೆ. ವಿವಿಧ ಧರ್ಮದ ಮಠಗಳಿಗೆ ಬಿಜಯಂಗೈದು ಸ್ವಾಮಿಗಳಿಂದ ಶಾಲು ಹಾರ ಹಾಕಿಸಿಕೊಂಡು ಆಶೀರ್ವಾದದ ಫಲ ಮಂತ್ರಾಕ್ಷತೆ ಪಡೆದು ಧನ್ಯಭಾವದಲ್ಲಿ ಅವರು ಬೀಗುತ್ತಿದ್ದಾರೆ. ಚುನಾವಣೆ ಕಾಲದಲ್ಲಿ ಎಲ್ಲರ ಕಾಲೂ ಚಂದ!

ದೇವಸ್ಥಾನಗಳಿಗೋ, ಮಸೀದಿ ದರ್ಗಾಗಳಿಗೋ, ಇಗರ್ಜಿಗೋ, ಗುರುದ್ವಾರಕ್ಕೋ ಭೇಟಿ ಕೊಡುವುದು ಅವರವರ ನಂಬಿಕೆಯ ಭಾಗ. ಆಡಂಬರ ಪ್ರದರ್ಶನದ ವಿಚಾರ ಅದಲ್ಲ. ಬದಲಿಗೆ ತನ್ನೊಳಗೆ ತನ್ನನ್ನು ಕಂಡುಕೊಳ್ಳುವ ದರ್ಶನ. ಒಳಗನ್ನು ಅರಿತುಕೊಳ್ಳುವುದು ಯಾರಿಗೂ ಬೇಕಾಗಿಲ್ಲ, ಬೇಕಾಗಿರುವುದೆಂದರೆ ಪ್ರದರ್ಶನ ಮಾತ್ರ. ರಾಜಕಾರಣದಲ್ಲಿ ಪ್ರದರ್ಶನಕ್ಕೆ ಬಹಳ ಪ್ರಮುಖ ಸ್ಥಾನ. ತಾವು ನೀಡುವ ಇಂಥ ಭೇಟಿಗಳಿಗೆ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಸಿಗುವಂತೆ ರಾಜಕಾರಣಿಗಳು ನೋಡಿಕೊಳ್ಳುತ್ತಾರೆ. ಹಾಗಾಗಿ ಸಿದ್ದರಾಮಯ್ಯ ನಡೆಸಿರುವ “ಟೆಂಪಲ್ ರನ್” ವಾರಗಳಿಂದ ಗಮನ ಸೆಳೆಯುವ ಸುದ್ದಿಯಾಗಿದೆ.

ಚುನಾವಣಾ ಉದ್ದೇಶದ “ಟೆಂಪಲ್ ರನ್” ಕರ್ನಾಟಕದಲ್ಲಿ ಶುರುವಾಗಿದ್ದು ನಾಲ್ಕು ದಶಕದ ಹಿಂದೆ. 1979ರಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಇಂದಿರಾ ಗಾಂಧಿ ಕಾಂಗ್ರೆಸ್ ಅಭ್ಯರ್ಥಿ. ಅವರ ಮುಖ್ಯ ಎದುರಾಳಿ ಜನತಾ ಪಕ್ಷದ ವೀರೇಂದ್ರ ಪಾಟೀಲ್. ಪಾಟೀಲರು ಲಿಂಗಾಯತರಾದುದರಿಂದ ಆ ಕ್ಷೇತ್ರದ ಒಳಗೆ ಹೊರಗೆ ಇರುವ ಬಹುತೇಕ ಲಿಂಗಾಯತ ವೀರಶೈವ ಮಠಗಳು ಬಹಿರಂಗವಾಗಿಯೆ ಇಂದಿರಾ ವಿರುದ್ಧ ನಿಂತಿದ್ದವು. ಈ ವಿರೋಧಕ್ಕೆ “ಪಾಟೀಲರು ನಮ್ಮವರು” ಎನ್ನುವುದೊಂದೇ ಕಾರಣ ಆಗಿರಲಿಲ್ಲ. ದೇವರಾಜ ಅರಸು ಸರ್ಕಾರ ರಚಿಸಿದ ಎಲ್.ಜಿ. ಹಾವನೂರು ಹಿಂದುಳಿದ ವರ್ಗಗಳ ಆಯೋಗದ ವರದಿ ಬಂದಿತ್ತು. ಲಿಂಗಾಯತರನ್ನು ಮೂಲೆಗುಂಪು ಮಾಡುವ ಉದ್ದೇಶದ ವರದಿ ಅದು ಎಂಬ ಗುಲ್ಲು ಎದ್ದಿತ್ತು. ಅರಸು ಸರ್ಕಾರದಿಂದ ಅನ್ಯಾಯವಾಗಿದೆ ಎಂದು ಭಾವಿಸಿದ್ದ ಲಿಂಗಾಯತ ವೀರಶೈವ ಸಮುದಾಯ ಆಳ್ವಿಕೆ ವಿರುದ್ಧ ಕೂಗೆಬ್ಬಿಸಿತ್ತು. ಆ ಸಮಯಕ್ಕೆ ಸರಿಯಾಗಿ ಚಿಕ್ಕಮಗಳೂರು ಚುನಾವಣೆ ಬಂದು ವರದಿ ವಿರುದ್ಧ ಪ್ರತಿಭಟನೆ ದಾಖಲಿಸಲು ಮತಗಟ್ಟೆ ಉತ್ತಮ ವೇದಿಕೆ ಎಂಬ ಸಮುದಾಯದ ತೀರ್ಮಾನ ಇಂದಿರಾ ಅವರನ್ನು ಅರೆ ಕ್ಷಣವಾದರೂ ವಿಚಲಿತರನ್ನಾಗಿಸಿದ್ದ ಬೆಳವಣಿಗೆ. ಅಂದು ಅರಸು ಅವರಲ್ಲಿದ್ದ ಧೈರ್ಯ ಇಂದಿರಾರಲ್ಲಿ ಇರಲಿಲ್ಲ.

ಚಿಕ್ಕಮಗಳೂರು ಲೋಕಸಭಾ ಪ್ರದೇಶ ವ್ಯಾಪ್ತಿಯಲ್ಲಿ ಲಿಂಗಾಯತ ವೀರಶೈವರದೇ ಅಲ್ಲದೆ ಬೇರೆ ಬೇರೆ ಧರ್ಮಾನುಯಾಯಿಗಳ ಮಠಗಳೂ ಇವೆ. ಆ ಮಠಗಳ ಸ್ವಾಮೀಜಿಗಳ ಆಶೀರ್ವಾದ ಪಡೆದರೆ ಒಂದಿಷ್ಟು ಅನುಕೂಲವಾಗಬಹುದು ಎಂಬ ರಾಜಕೀಯ ಲೆಕ್ಕಾಚಾರದಲ್ಲಿ ಇಂದಿರಾ ಗಾಂದಿ, ಅರಸು ಮತ್ತಿತರ ಕಾಂಗ್ರೆಸ್ ನಾಯಕರು ಮಠಗಳಿಗೆ ಎಡತಾಕುವ ಕೆಲಸ ಶುರು ಹಚ್ಚಿಕೊಂಡರು. ಆರಂಭದಿಂದಲೂ ದಲಿತ ಮತ್ತಿತರ ಶೋಷಿತ ವರ್ಗಗಳ ಮತ ಅವಲಂಬಿಸಿದ ರಾಜಕೀಯ ಮಾಡುವ ತನ್ನ ಪ್ರವೃತ್ತಿಯಂತೆ ಕಾಂಗ್ರೆಸ್ ನಾಯಕರು ದಲಿತ ಸಮುದಾಯದ ಕದ ತಟ್ಟುವ ಕೆಲಸವನ್ನೂ ಮಾಡಲಾರಂಭಿಸಿದರು. ಕೆಲವು ಬ್ರಾಹ್ಮಣ ಮಠಗಳ ಹೆಸರಿನಲ್ಲಿ ಇಂದಿರಾಗೇ ಓಟು ಹಾಕುವಂತೆ ಬ್ರಾಹ್ಮಣ ಮತದಾರರಿಗೆ ಸೂಚನೆ ಕೊಡುವ ಕರಪತ್ರಗಳೂ ಬಂದಿದ್ದವು. ಒಂದೆರಡು ಮಠಗಳು ಅದನ್ನು ನಿರಾಕರಿಸಿ ಯಾರೋ ಕಿಡಿಗೇಡಿಗಳ ಕೆಲಸ ಇದೆಂದು ವಿವರಣೆಯನ್ನೂ ಕೊಟ್ಟಿದ್ದವು. ವೀರೇಂದ್ರ ಪಾಟೀಲರ ಚುನಾವಣಾ ಮ್ಯಾನೇಜರ್ ಆಗಿದ್ದ ಜಾರ್ಜ್ ಫೆರ್ನಾಂಡಿಸ್ “ವಿಸಿಟಿಂಗ್ ಹರಿಜನ್ ಹಟ್ಸ್ ಅಂಡ್ ಬ್ರಾಹ್ಮಿಣ್ ಮಠ್ಸ್ ಪಾಲಿಟಿಕ್ಸ್” ಎಂದು ವಿರೋಧಿ ಪಾಳಯವನ್ನು ಗೇಲಿ ಮಾಡಿದ್ದು ಈ ಎಲ್ಲಾ ಹಿನ್ನೆಲೆಯಲ್ಲಿ.

ಇದನ್ನೂ ಓದಿ | MP Pratap Simha : ನಿಮ್ಮ ಶ್ರೀಮತಿಯವ್ರೂ ಮಾಂಸ ತಿಂದು ದೇಗುಲಕ್ಕೆ ಬರ್ತಾರಾ?

ಈಗ ನಡೆದಿರುವ “ಟೆಂಪಲ್ ರನ್” ಗಮನದಲ್ಲಿಟ್ಟುಕೊಂಡು ಸಿದ್ದರಾಮಯ್ಯ ಬದಲಾಗಿದ್ದಾರೆ ಎನ್ನಬಾರದು. ಕರ್ನಾಟಕ ವಿಧಾನ ಸಭೆಗೆ 2013ರ ಚುನಾವಣೆ ಇನ್ನೂ ಘೋಷಣೆ ಆಗಿರಲಿಲ್ಲ. ಬಿಜೆಪಿ ಸರ್ಕಾರ ಜಾಗ ತೆರವು ಮಾಡುವುದು ಮಾತ್ರ ಖಚಿತವಾಗಿತ್ತು. ಮೂಲ ಕಾಂಗ್ರೆಸ್, ವಲಸೆ ಕಾಂಗ್ರೆಸ್ ಎಂಬ ಅಸಮಾಧಾನದ ಕುದಿಯ ಮೇಲೆ ನಿಂತಿದ್ದ ಸಿದ್ದರಾಮಯ್ಯ ಆಗಲೂ ತೆಗೆದುಕೊಂಡಿದ್ದ ತೀರ್ಮಾನ “ಚುನಾವಣೆ ಗೆದ್ದೇ ಸಿದ್ಧ: ಮುಖ್ಯಮಂತ್ರಿ ಆಗೇ ಬದ್ಧ” ಎಂಬ ದೃಢ ನಿಲುವು. ಆಗ ಅವರ ಬಲಗೈ ಬಂಟರಲ್ಲಿ ಒಬ್ಬರಾಗಿದ್ದವರು ಈಗ ಜೆಡಿಎಸ್ ಅಧ್ಯಕ್ಷರಾಗಿರುವ ಸಿ.ಎಂ. ಇಬ್ರಾಹಿಂ. ರಾಜಸ್ತಾನದ ಅಜ್ಮೀರ್ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರೆ ಮನಸ್ಸಿನ ಕೋರಿಕೆ ಈಡೇರುತ್ತದೆ ಎಂಬ ಇಬ್ರಾಹಿಂ ಮಾತಿಗೆ ಮಣಿದ ಸಿದ್ದರಾಮಯ್ಯ ಅಲ್ಲಿಗೆ ತೆರಳಿ, ದರ್ಗಾದಲ್ಲಿ ಅನೂಚಾನವಾಗಿರುವ ನಡವಳಿಕೆ ಸಂಪ್ರದಾಯದಂತೆ ನಡೆದುಕೊಂಡರು. ದರ್ಗಾಕ್ಕೆ ಸಲ್ಲಿಸುವ ಚಾದರವನ್ನು ಶ್ರದ್ಧಾಭಕ್ತಿ ಸಹಿತ ತಲೆ ಮೇಲೆ ಹೊತ್ತೊಯ್ದ ಸಿದ್ದರಾಮಯ್ಯನವರ ಚಿತ್ರ ಆ ದಿನಗಳಲ್ಲಿ ಗಮನ ಸೆಳೆದಿತ್ತು. ಸಿದ್ದರಾಮಯ್ಯನವರಿಗೆ ಅಲ್ಲಿಗೆ ಹೋಗುವ ಮನಸ್ಸು ಇಲ್ಲವಾಗಿದ್ದರೆ ಹೋಗುತ್ತಿರಲಿಲ್ಲ.

ಒಂದು ಕಾಲದ ಕಾಂಗ್ರೆಸ್‍ನಲ್ಲಿ ಮಂದಿರ, ದೇವಸ್ಥಾನಗಳಿಗೆ ಹೋಗುವುದು, ಪೂಜೆ ಪುನಸ್ಕಾರದಲ್ಲಿ ಭಾಗವಹಿಸುವುದು; ಮಠಗಳಿಗೆ ಭೇಟಿ ಕೊಟ್ಟು ಮಠಾಧೀಶರ ಆಶೀರ್ವಾದ ಪಡೆಯುವುದೇ ಮುಂತಾದವು ಮೂಢ ನಂಬಿಕೆ ಎಂಬ ಭಾವನೆ ಪ್ರಚಲಿತದಲ್ಲಿತ್ತು. ಅದು ಬದಲಾಗಿದ್ದು ದೇಶದಲ್ಲಿ ನರೇಂದ್ರ ಮೋದಿ ಅಲೆ ಶುರುವಾದ ತರುವಾಯ. ಗುಜರಾತ್‍ಗೆ ಸೀಮಿತವಾಗಿದ್ದ ಮೋದಿ ಅಲೆ ದೇಶವನ್ನು ಅಪ್ಪಳಿಸಿದ್ದು 2014ರ ಲೋಕಸಭಾ ಚುನಾವಣೆ ಸಮಯದಲ್ಲಿ. ಕಾಂಗ್ರೆಸ್ಸು ದಯನೀಯ ಸೋಲನ್ನು ಕಂಡ ಚುನಾವಣೆ ಅದು. ಲೋಕಸಭೆಯಲ್ಲಿ ಅದರ ಸ್ಥಾನಬಲ 44ಕ್ಕೆ ಕುಸಿಯಿತು. ಅಧಿಕೃತ ವಿರೋಧ ಪಕ್ಷದ ಸ್ಥಾನಮಾನವೂ ಕೈತಪ್ಪಿಹೋಯಿತು. ಆ ನಂತರದಲ್ಲಿ ನಡೆದ ಉಪ ಚುನಾವಣೆಗಳಲ್ಲೂ ಸೋಲಿನದೇ ಮೇಲುಗೈ. ಕೈಲಿದ್ದ ರಾಜ್ಯಗಳನ್ನೂ ಸೋಲುವಂತಾಗಿದ್ದು ಒಂದೆಡೆ, 2019ರ ಲೋಕಸಭಾ ಚುನಾವಣೆಯಲ್ಲೂ ಸೋತು ಸುಣ್ಣವಾದ ಸ್ಥಿತಿ ಮತ್ತೊಂದೆಡೆ. ಆ ಸಂದರ್ಭದಲ್ಲಿ ರಾಹುಲ್ ಗಾಂಧಿ ಕಂಡುಕೊಂಡ ಸತ್ಯ, ತಾವಂದುಕೊಂಡಿರುವ ನಿರ್ದಿಷ್ಟ ಮತಬ್ಯಾಂಕ್ ರಾಜಕಾರಣ ಭವಿಷ್ಯದ ದಿನಗಳಲ್ಲಿ ಕಾಂಗ್ರೆಸ್ ಕೈಯನ್ನು ಹಿಡಿಯದೆಂಬ ವಾಸ್ತವ. ಚುನಾವಣೆ ಸಮಯದ ಪ್ರಚಾರ ರ್ಯಾಲಿಯಲ್ಲಿ ಪಾಲ್ಗೊಳ್ಳುವುದಕ್ಕೆ ಮೊದಲು ಆಯಾ ಸ್ಥಳದ ಪ್ರಸಿದ್ಧ ದೇವಸ್ಥಾನಗಳಿಗೆ, ಮಠ ಮಂದಿರಗಳಿಗೆ, ದರ್ಗಾಗಳಿಗೆ, ಚರ್ಚ್‍ಗಳಿಗೆ, ಗುರುದ್ವಾರಗಳಿಗೆ ಭೇಟಿ ಕೊಡುವುದನ್ನು ರಾಹುಲ್ ಗಾಂಧಿ ಇದೀಗ ಪಕ್ಷದ ಕಾರ್ಯಕ್ರಮದ ಭಾಗವಾಗಿಸಿರುವುದರ ಅಸಲಿ ರಹಸ್ಯ ಇದು.

ಇದನ್ನೂ ಓದಿ | ದೇವಸ್ಥಾನಕ್ಕೆ ಮಾಂಸ ಸೇವಿಸಿ ಹೋಗ್ತಾರ ಸಿದ್ದರಾಮಯ್ಯ ಹೆಂಡತಿ?: ಸಂಸದ ಪ್ರತಾಪ್‌ ಸಿಂಹ ಪ್ರಶ್ನೆ

ದಾವಣಗೆರೆಯಲ್ಲಿ ಆಗಸ್ಟ್ ಮೂರರಂದು ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ರಾಹುಲ್ ಗಾಂಧಿ, ಮುರುಘಾಮಠದ ಸ್ವಾಮೀಜಿಯವರನ್ನು ಭೇಟಿ ಮಾಡಿ ಲಿಂಗದೀಕ್ಷೆ ಪಡೆದುದುಇದೇ ರಾಜಕೀಯದ ಮತ್ತೊಂದು ಮಗ್ಗಲು. ಪಕ್ಷದ ಹೈಕಮಾಂಡ್‍ಗೆ ಒಪ್ಪುವ ರೀತಿಯಲ್ಲಿ ರಾಜಕಾರಣ ಮಾಡಬೇಕಾದ ಸಂದಿಗ್ಧ ಎರಡನೆ ಹಂತದ ನಾಯಕರ “ಸ್ವತಂತ್ರ ಯೋಚನೆಗೆ” ಬೇಲಿ ಹಾಕಿದೆ. ರಾಜ್ಯಕ್ಕೆ ರಾಹುಲ್ ಬಂದಾಗ ಅವರು ಭೇಟಿ ಕೊಡುವ ದೇವಸ್ಥಾನಕ್ಕೆ ಹೋಗೋಲ್ಲ ಎಂದು ಸಿದ್ದರಾಮಯ್ಯ ಹಟ ಹಿಡಿದು ಕೂರಲಾಗದು. ಯಾವುದೋ ಮಠದ ಸ್ವಾಮೀಜಿಯನ್ನು ರಾಹುಲ್ ಭೇಟಿ ಮಾಡಬಯಸಿದರೆ ಸಿದ್ದರಾಮಯ್ಯ ಮುನಿಸಿಕೊಂಡವರಂತೆ ಹೊರಗೆ ನಿಲ್ಲಲಾಗದು.

ಇದಕ್ಕೂ ಹೆಚ್ಚಿನದೊಂದು ಸಂಕಟ ಸಿದ್ದರಾಮಯ್ಯನವರಿಗೆ ಅಮರಿಕೊಂಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಎಲ್ಲ ದೇವರೊಂದಿಗೆ ಒಪ್ಪಂದ ಮಾಡಿಕೊಂಡವರಂತೆ ನಿತ್ಯವೂ ಒಂದಲ್ಲ ಒಂದು ದೇವಸ್ಥಾನಕ್ಕೆ ಭೇಟಿ ಕೊಡುತ್ತ ಮುಖ್ಯಮಂತ್ರಿ ಆಗುವುದಕ್ಕೆ “ದೇವರ ಆಶೀರ್ವಾದ” ಪಡೆಯುವ ಯತ್ನ ನಡೆಸಿರುವುದು ಸಿದ್ದರಾಮಯ್ಯನವರ ಯೋಚನಾ ಕ್ರಮವನ್ನೇ ಬದಲಿಸಿಬಿಟ್ಟಿದೆ. ಮುಂದೆ ಚುನಾವಣೆ ಸಮಯದಲ್ಲಿ ರಾಹುಲ್ ಜೊತೆ ಅಡ್ಡಾಡುವಾಗ ದಿಢೀರ್ ಎದುರಾಗಬಹುದಾದ ಪರಿಸ್ಥಿತಿ ಎದುರಿಸುವುದಕ್ಕೆ ಒಂದು ತಾಲೀಮಿನಂತೆ ಸಿದ್ದರಾಮಯ್ಯನವರ “ಟೆಂಪಲ್ ರನ್” ಇದೀಗ ಸಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಾಪಿತ ಗಾದೆಯನ್ನು ತುಸು ಬದಲಿಸೋಣ. “ಸಂಕಟ ಬಂದಾಗಲೆಲ್ಲ ವೆಂಕಟರಮಣ” ಎನ್ನೋಣ.

Exit mobile version