ಅವರು ಕನ್ನಡಿಗರು ಅನ್ನುವುದೇ ನಮಗೆಲ್ಲಾ ಹೆಮ್ಮೆ! ಭಾರತದ ಮೊಟ್ಟಮೊದಲ ಎಂಜಿನಿಯರ್ ಅವರು ಅನ್ನುವುದೇ ನಮಗೆ ಅಭಿಮಾನದ ಸಂಗತಿ! ನೂರಾ ಎರಡು ವರ್ಷ ಬದುಕಿದ ಅವರು ಭಾರತದ ಮೂಲೆ ಮೂಲೆಗಳಲ್ಲಿ ನೂರಾರು ಸಂಸ್ಥೆಗಳನ್ನು ಕಟ್ಟಿದ್ದಾರೆ ಅನ್ನುವುದೇ ನನಗೆ ವಿಸ್ಮಯದ ವಿಷಯ! ಭಾರತ ರತ್ನ ಪ್ರಶಸ್ತಿಯು ಅವರನ್ನು ಅರ್ಹವಾಗಿ ಹುಡುಕಿಕೊಂಡು ಬಂತು ಅನ್ನುವುದು ಕೂಡ ನಮ್ಮ ಅಗ್ಗಳಿಕೆಗೆ ಕಾರಣ.
ಎಂಜಿನಿಯರಿಂಗ್ ಪದವಿಯನ್ನು ಪಡೆದು ಮಹಾರಾಷ್ಟ್ರ ಮತ್ತು ಹೈದರಾಬಾದ್ ಗಳಲ್ಲಿ ಸರಕಾರಿ ಸೇವೆ ಸಲ್ಲಿಸುತ್ತಾ ಇದ್ದ ಅವರನ್ನು ಮೈಸೂರಿಗೆ ಆಮಂತ್ರಿಸಿದ ಮೈಸೂರು ಒಡೆಯರ ದೂರದೃಷ್ಟಿಗೆ ಒಂದು ಸಲಾಂ ಹೇಳೋಣ! ಈ ಆಮಂತ್ರಣವನ್ನು ಸರ್ ಎಂ.ವಿ ಒಪ್ಪಿದ್ದು ಕೇವಲ ಕನ್ನಡ ನಾಡಿನ ಮೇಲಿನ ಪ್ರೀತಿಯಿಂದ! ಮುಂದೆ ಮೈಸೂರು ಸಂಸ್ಥಾನದ 19ನೇ ದಿವಾನರಾಗಿ ಅವರು 1912-1918ರ ಆರು ವರ್ಷಗಳ ಅವಧಿಯಲ್ಲಿ ಅವರು ಮಾಡಿದ್ದೆಲ್ಲವೂ ಚಿನ್ನದ ಕೆಲಸಗಳೇ!
ಸರ್ ಎಂ ವಿ ಕನ್ನಡದ ನಾಡಿನಲ್ಲಿ ಸ್ಥಾಪನೆ ಮಾಡಿದ್ದು ನೂರಾರು ಸಂಸ್ಥೆಗಳನ್ನು! ಇಷ್ಟೊಂದು ಸಾಧನೆ ಮಾಡಲು ಅವರಿಗೆ ಹೇಗೆ ಸಾಧ್ಯವಾಯಿತು ಅನ್ನುವುದೇ ನನಗೆ ಒಂದು ದೊಡ್ಡ ವಿಸ್ಮಯ!
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ಲ್ಯಾಂಪ್ಸ್, ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಜಯ ಚಾಮರಾಜೇಂದ್ರ ಡಿಪ್ಲೊಮಾ ಕಾಲೇಜು, ಬೆಂಗಳೂರಿನ ಕೃಷಿ ವಿವಿ, ಮೈಸೂರು ವಿವಿ, ಮೈಸೂರು ಚೇಂಬರ್ ಆಫ್ ಕಾಮರ್ಸ್, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರಿನ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು. ಈ ರೀತಿ ದೊಡ್ಡ ದೊಡ್ಡ ಸಂಸ್ಥೆಗಳನ್ನು ಕಟ್ಟಿದವರು ಅವರೇ!
ಇಂದು ಮೈಸೂರು, ಮಂಡ್ಯ ಮತ್ತು ಬೆಂಗಳೂರಿಗೆ ವರ್ಷವಿಡೀ ನೀರು ಉಣಿಸುತ್ತಿರುವ 130 ಆಡಿ ಎತ್ತರದ ಕೃಷ್ಣರಾಜ ಸಾಗರ ಅಣೆಕಟ್ಟು ಸರ್ ಎಂ ವಿ ಅವರ ಕರ್ತೃತ್ವ ಶಕ್ತಿಗೆ ಸಾಕ್ಷಿಯಾಗಿ ತಲೆ ಎತ್ತಿ ನಿಂತಿದೆ! ಆ ಅಣೆಕಟ್ಟು ಕಟ್ಟುವಾಗ ಬಂದಿದ್ದ ಸವಾಲುಗಳು ಮತ್ತು ಪ್ರತಿಭಟನೆಗಳು ಅನೇಕ! ಅವುಗಳನ್ನು ಸರ್ ಎಂ ವಿ ಹೇಗೆ ಗೆದ್ದರು ಅನ್ನುವುದೇ ಒಂದು ರೋಚಕವಾದ ಕತೆ! ಆಗಿನ ಕಾಲದಲ್ಲಿ ಎರಡೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಈ ಅಣೆಕಟ್ಟು ನಿರ್ಮಾಣ ಆಗಿತ್ತು! ಅದೇ ರೀತಿ ಮಹಾರಾಷ್ಟ್ರ ಹಾಗೂ ಹೈದರಾಬಾದ್ ನಗರಗಳ ಅನೇಕ ನೀರಾವರಿ ಯೋಜನೆಗಳ ಪ್ಲಾನಿಂಗ್ ಮತ್ತು ಅನುಷ್ಠಾನಗಳಿಗೆ ಸರ್ ಎಂ ವಿ ಅವರ ಮಾರ್ಗದರ್ಶನ ಇತ್ತು!
ವಿಶೇಷವಾಗಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಅವರು ಅತೀ ಹೆಚ್ಚು ಪ್ರೋತ್ಸಾಹ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತನ್ನು ಆರಂಭ ಮಾಡಿದ ಅವರು ತಮ್ಮ ಇಳಿವಯಸ್ಸಿನವರೆಗೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಪ್ಪದೇ ಹಾಜರಾಗುತ್ತಿದ್ದರು!
ಸರ್ ಎಂ ವಿ ಅವರ ದಿಟ್ಟತನಕ್ಕೆ, ಸಮಯ ಪ್ರಜ್ಞೆಗೆ, ಕಠಿಣ ದುಡಿಮೆಗೆ ನೂರಾರು ಸಾಕ್ಷಿಗಳು ನಮಗೆ ದೊರೆಯುತ್ತವೆ. ಹಾಗೆಯೇ ಅವರ ಮಾನವೀಯ ಮುಖಗಳಿಗೆ ಕೂಡ ನೂರಾರು ನಿದರ್ಶನಗಳು ದೊರೆಯುತ್ತವೆ. ಅವುಗಳಲ್ಲಿ ಒಂದನ್ನು ಮಾತ್ರ ಇಲ್ಲಿ ಉಲ್ಲೇಖ ಮಾಡುತ್ತಿದ್ದೇನೆ.
ಅವರು ಮೈಸೂರು ದಿವಾನರಾಗಿ ಇದ್ದ ಸಂದರ್ಭ ಅದು. ಅವರ ಒಬ್ಬ ಸಂಬಂಧಿಕರು ತಮ್ಮ ಮಗನಿಗೆ ಉದ್ಯೋಗ ಕೊಡಿಸುವಂತೆ ವಿನಂತಿ ಮಾಡಿಕೊಂಡು ಬಂದರು. ಅವರ ಅರ್ಜಿಯನ್ನು ತೆರೆದು ನೋಡಿದಾಗ ಆ ಹುಡುಗನು ಸೂಚನೆ ಮಾಡಿದ ಹುದ್ದೆಗೆ ಆ ಹುಡುಗನಲ್ಲಿ ಸರಿಯಾದ ಶೈಕ್ಷಣಿಕ ಅರ್ಹತೆಯು ಇರಲಿಲ್ಲ. ಮಾರ್ಕ್ಸ್ ಕಡಿಮೆ ಇತ್ತು. ಅದನ್ನು ಸರ್ ಎಂ ವಿ ಅವರು ಆ ಹುಡುಗನ ಅಪ್ಪನ ಬಳಿ ಹೇಳಿ ಸಾರಿ ಅಂದರು. ಆಗ ನಿರಾಶರಾದ ಆ ಸಂಬಂಧಿಕರು ಸಿಟ್ಟು ಮಾಡಿಕೊಂಡು ಸರ್ ಎಂ ವಿ ಅವರನ್ನು ಬೈದು ಹಿಂದೆ ಹೋದರು. ಸರ್ ಒಂದು ವಾಕ್ಯ ಕೂಡ ಮಾತಾಡಲಿಲ್ಲ!
ಅವರು ಹೋದ ನಂತರ ಸರ್ ಎಂ. ವಿ. ಅವರು ಆ ಸಂಬಂಧಿಕರ ಕುಟುಂಬದ ಆರ್ಥಿಕ ಹಿನ್ನೆಲೆಯ ಬಗ್ಗೆ ಬೇರೆಯವರ ಮೂಲಕ ಕೇಳಿ ತಿಳಿದುಕೊಂಡರು. ಅವರಿಗೆ ನಿಜವಾಗಿ ಬಡತನ ಮತ್ತು ಕಷ್ಟ ಇತ್ತು. ಇದರಿಂದ ಸರ್ ತುಂಬ ಬೇಜಾರು ಮಾಡಿಕೊಂಡರು.
ಮುಂದೆ ನಿವೃತ್ತಿ ಆಗುವವರೆಗೆ ಆ ಕುಟುಂಬಕ್ಕೆ ತಮ್ಮ ವೇತನದಿಂದ ಪ್ರತೀ ತಿಂಗಳು ನೂರು ರೂಪಾಯಿ ಮನಿ ಆರ್ಡರ್ ಸರ್ ಎಂ ವಿ. ಕಳುಹಿಸಿಕೊಡುತ್ತಿದ್ದರು! ಮತ್ತು ಅದನ್ನು ಯಾರಿಗೂ ಹೇಳಲಿಲ್ಲ!
ಸರ್ ಎಂ ವಿಶ್ವೇಶ್ವರಯ್ಯ ಅವರು ಆಧುನಿಕ ಕನ್ನಡ ನಾಡಿನ ನಿರ್ಮಾಪಕ ಅನ್ನುವುದರಲ್ಲಿ ಯಾವ ಸಂದೇಹ ಕೂಡ ಇಲ್ಲ!
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಅಜೀಂ ಪ್ರೇಮ್ ಜಿ ಹೇಳಿದ ಮೊಲದ ಕಥೆ! ಶಾಲೆಗೂ ಮೊಲಕ್ಕೂ ಏನು ಸಂಬಂಧ?