ಎಸ್ಪಿಬಿ ಎಂದೇ ಖ್ಯಾತರಾಗಿದ್ದ ಎಸ್ ಪಿ ಬಾಲುಸುಬ್ರಹ್ಮಣ್ಯಂ (SPB) ಅವರು ತಮ್ಮ ಕಂಠಸಿರಿಯಿಂದಲೇ ಭಾರತೀಯ ಚಿತ್ರರಂಗದ ಶ್ರೀಮಂತಿಕೆಯನ್ನು ಹೆಚ್ಚಿಸಿದರು. ಅದರಲ್ಲೂ ದಕ್ಷಿಣ ಭಾರತದ ಚಿತ್ರರಂಗವನ್ನು ಎಸ್‌ಪಿಬಿ ಅವರನ್ನು ಹೊರಗಿಟ್ಟು ನೋಡಲು ಸಾಧ್ಯವೇ ಇಲ್ಲ. ಸುಮಾರು ಐದು ದಶಕಗಳ ಕಾಲ ಅವರು ಕೇಳುಗರನ್ನು ರಂಜಿಸಿದರು. ಸಮ್ಮೋಹನಗೊಳಿಸಿದರು.
ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ, ತುಳು, ಪಂಜಾಬಿ, ಮರಾಠಿ ಹೀಗೆ ದೇಶದ ಎಲ್ಲ ಭಾಷೆಗಳಲ್ಲೂ ಎಸ್‌ಪಿಬಿ ಹಾಡಿದ್ದಾರೆ. ಐದು ದಶಕಗಳ ಅವಧಿಯಲ್ಲಿ 45 ಸಾವಿರ ಹಾಡುಗಳನ್ನು ಹಾಡುವುದೆಂದರೆ ಹುಡುಗಾಟವೇನಲ್ಲ. ಅದೇ ಕಾಲಕ್ಕೆ ಎಲ್ಲ ದಿಗ್ಗಜ ಸಂಗೀತ ನಿರ್ದೇಶಕರ ಜತೆ ಕೆಲಸ ಮಾಡಿದ್ದಾರೆ. ಅದರಲ್ಲೂ ತಮಿಳಿನಲ್ಲಿ ಇಳಯರಾಜಾ-ಎಸ್‌ಪಿಬಿ-ರಜಿನಿಕಾಂತ್ ಜೋಡಿ ಎಲ್ಲಡೆ ಮೋಡಿ ಮಾಡಿತ್ತು. ಕನ್ನಡದಲ್ಲೂ ಹಂಸಲೇಖ-ಎಸ್‌ಪಿಬಿ- ರವಿಚಂದ್ರನ್ ಜೋಡಿಗೆ ಇಂಥದ್ದೇ ಫ್ಯಾನ್ ಕ್ರೇಜ್ ಇತ್ತು. ಎಲ್ಲ ಭಾಷೆ ಚಿತ್ರರಂಗದ ಉತ್ಕೃಷ್ಟ ಸಂಗೀತ ನಿರ್ದೇಶಕರ ಜತೆ ಎಸ್‌ಪಿಬಿ ಕೆಲಸ ಮಾಡಿದ್ದಾರೆ. ಹಳೆಯ ಮ್ಯೂಸಿಕ್ ಡೈರೆಕ್ಟರ್‌ಗಳಿಂದ ಹಿಡಿದು ಹೊಸ ಕಾಲದ ಮ್ಯೂಸಿಕ್ ಡೈರೆಕ್ಟರ್‌ಗಳವರೆಗೂ ಎಸ್‌ಪಿಬಿ ಅವರ ಗೋಲ್ಡ್ ವಾಯ್ಸ್ ಸೆರೆ ಹಿಡಿದಿದೆ.
ಹುಟ್ಟಿದ್ದು ಕೋನೆಟಂಪೇಟೆಯಲ್ಲಿ…
ಎಸ್‌ಪಿಬಿ ಅವರು 1946ರ ಜೂನ್ 4ರಂದು ಇಂದಿನ ತಮಿಳುನಾಡಿನ ಕೋನೆಟಂಪೇಟೆಯಲ್ಲಿ ಜನಿಸಿದರು. ತಂದೆ ಎಸ್ ಬಿ ಸಾಂಬಮೂರ್ತಿ. ಅವರು ಉತ್ತಮ ಸಂಗೀತಗಾರರಾಗಿದ್ದರು ಮತ್ತು “ಹರಿಕಥಾ” ವಿದ್ವಾಂಸರಾಗಿದ್ದರು. ಸಹಜವಾಗಿಯೂ ಇದು ಬಾಲಕ ಎಸ್‌ಪಿಬಿ ಮೇಲೂ ಪ್ರಭಾವ ಬೀರಿತು. ಆದರೆ, ಬಾಲ್ಯದಲ್ಲಿ ಅವರೇನೂ ಶಾಸ್ತ್ರೀಯ ಸಂಗೀತವನ್ನು ಕಲಿತಿರಲಿಲ್ಲ. ಎಂಜಿನಿಯರಿಂಗ್ ಡಿಪ್ಲೋಮಾ ಮುಗಿಯುತ್ತಿದ್ದಂತೆ ಸಾರ್ವಜನಿಕವಾಗಿ ಸ್ಪರ್ಧೆಗಳಲ್ಲಿ ಅವರು ಹಾಡುತ್ತಿದ್ದರು.
ಚೆನ್ನೈನಲ್ಲಿ ನಡೆದ ಸ್ಪರ್ಧೆಯೊಂದರಲ್ಲಿ ಎಸ್‌ಪಿಬಿ ಭಾಗವಹಿಸಿಿದ್ದರು. ಸ್ಪರ್ಧೆಯಲ್ಲಿ ಗೆದ್ದ ಬಾಲು ಅವರಿಗೆ ಮ್ಯೂಸಿಕ್ ಡೈರೆಕ್ಟರ್ ಎಸ್ ಪಿ ಕೋದಂಡಪಾಣಿ ಅವರು ಬಹುಮಾನ ವಿತರಿಸಿದರು. ಆ ಬಳಿಕ 1966ರಲ್ಲಿ ತೆರೆ ಕಂಡ ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ ಚಿತ್ರದಲ್ಲಿ ಹಾಡಲು ಎಸ್‌ಪಿಬಿ ಅವರಿಗೆ ಕೋದಂಡಪಾಣಿ ಅವರು ಅವಕಾಶ ನೀಡಿದರು. ಅಲ್ಲಿಂದ ಎಸ್‌ಪಿಬಿ ಹಿಂದೆ ತಿರುಗಿ ನೋಡಲಿಲ್ಲ. 1967ರಲ್ಲಿ ಅವರು ಕನ್ನಡದಲ್ಲಿ ಮೊದಲ ಹಾಡು ಹಾಡಿದರು. ನಕ್ಕರೆ ಅದೇ ಸ್ವರ್ಗದ ಚಿತ್ರದ ಮೂಲಕ ಕನ್ನಡಕ್ಕೂ ಪರಿಚಯಗೊಂಡರು. ಆ ಬಳಿಕ ಕನ್ನಡದ ಮನೆ ಮಗನಾಗಿಯೇ ಬೆಳೆದರು. ಎಸ್‌ಪಿಬಿ ಅವರು, ಒಂದೇ ದಿನದಲ್ಲಿ ತೆಲುಗು ಮತ್ತು ತಮಿಳಿನಲ್ಲಿ 19 ಸಾಂಗ್ಸ್ ರೆಕಾರ್ಡ್ ಮಾಡಿದ್ದಾರೆ. ಆನಂದ್ ಮತ್ತು ಮಿಲಿಂದ್ ಅವರ ಸಂಗೀತ ನಿರ್ದೇಶನದಲ್ಲಿ ಹಿಂದಿಯಲ್ಲಿ ಒಂದೇ ದಿನದಲ್ಲಿ 16 ಹಾಡುಗಳನ್ನು ರೆಕಾರ್ಡ್ ಮಾಡಿರುವುದು ಈವರೆಗೂ ದಾಖಲೆಯಾಗಿಯೇ ಉಳಿದಿದೆ!
ಕನ್ನಡದ ಎಲ್ಲ ನಟರಿಗೂ ಹಾಡು
ಡಾ. ವಿಷ್ಣುವರ್ಧನ್ ಅವರಿಂದ ಹಿಡಿದು ಪುನೀತ್ ರಾಜಕುಮಾರ್ ಅವರವರೆಗೂ ಎಲ್ಲ ನಾಯಕ ನಟರಿಗಾಗಿ ಹಾಡಿದ್ದಾರೆ. ಪುನೀತ್ ರಾಜಕುಮಾರ್ ನಿರ್ಮಾಣದ ಮಾಯಾಬಜಾರ್ ಚಿತ್ರದಲ್ಲಿ ಎಸ್‌ಪಿಬಿ ಅವರು ಲೋಕ ಮಾಯಾ ಬಜಾರು ಎಂಬ ಗೀತೆಯನ್ನು ಹಾಡಿದ್ದರು ಮತ್ತು ಇದರಲ್ಲಿ ಪುನೀತ್ ಅವರು ಅಭಿನಯಿಸಿದ್ದರು. ಕನ್ನಡದ ಮಟ್ಟಿಗೆ ಇದೇ ಕೊನೆಯ ಹಾಡು ಅವರದ್ದು. ಈ ಚಿತ್ರವು 2016ರಲ್ಲಿ ತೆರೆಗೆ ಬಂದಿತ್ತು. ಆ ಬಳಿಕ ಅವರು ಕೊರೊನಾ ಜಾಗೃತಿಗಾಗಿ ಕನ್ನಡದಲ್ಲಿ ಹಾಡು ಹಾಡಿದರು.
ವಿಷ್ಣುವರ್ಧನ್ ಅವರ ಚಿತ್ರಗಳಲ್ಲಿ ಎಸ್‌ಪಿಬಿ ಹಾಡುವುದು ಪಕ್ಕಾ. ಒಂದು ರೀತಿಯಲ್ಲಿ ವಿಷ್ಣು ಶರೀರವಾದರೆ, ಎಸ್‌ಪಿಬಿ ಅವರು ಶಾರೀರವಾಗಿದ್ದರು. ರೆಬೆಲ್ ಸ್ಟಾರ್ ಅಂಬರೀಷ್, ಶಶಿಕುಮಾರ್, ರವಿಚಂದ್ರನ್, ಶಂಕರ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್, ಉಪೇಂದ್ರ, ಶ್ರೀನಾಥ ಹೀಗೆ… ಪಟ್ಟಿ ಬೆಳೆಯುತ್ತದೆ. ಅದೇ ರೀತಿ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲೂ ಎಲ್ಲ ಸ್ಟಾರ್ ನಟರು, ಘಟಾನುಘಟಿ ಕಲಾವಿದರಿಗೆ ಹಾಡಿದ್ದಾರೆ ಎಸ್‌ಪಿಬಿ.
ಸಂಗೀತ ನಿರ್ದೇಶಕ ಉಪೇಂದ್ರ ಕುಮಾರ್ ಅವರೊಂದಿಗೆ ಎಸ್‌ಪಿಬಿ ವಿಶಿಷ್ಟ ದಾಖಲೆಯೊಂದನ್ನು ಬರೆದಿದ್ದಾರೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 9 ಗಂಟೆವರೆಗೆ, ಅವರ ನಿರ್ದೇಶನದಲ್ಲಿ ಒಟ್ಟು 17 ಹಾಡುಗಳನ್ನು ರೆಕಾರ್ಡ್ ಮಾಡಿ ಕೊಟ್ಟಿದ್ದಾರೆ. ಇದೊಂದ ವಿಶಿಷ್ಟ ದಾಖಲೆಯಾಗಿ ಉಳಿದಿದೆ. ಗಾಯನದೊಂದಿಗೆ ಎಸ್‌ಪಿಬಿ ಕನ್ನಡ, ತೆಲುಗು, ಹಿಂದಿ ಮತ್ತು ತಮಿಳು ಭಾಷೆಯಲ್ಲಿ ಸುಮಾರು 45 ಸಿನಿಮಾಗಳಿಗೆ ಸಂಗೀತ ಸಂಯೋಜನೆ ಕೂಡ ಮಾಡಿದ್ದಾರೆ. ಇಷ್ಟೇ ಸಂಖ್ಯೆಯ ಚಿತ್ರಗಳಲ್ಲಿ ನಟಿಸಿದ್ದಾರೆ ಕೂಡ.
ಎಸ್‌ಪಿಗಾಗಿ ಡಾ.ರಾಜ್ ಹಾಡಿದ್ದರು
ಇದೊಂದು ಅಪರೂಪದ ಘಟನೆ. ಕನ್ನಡದಲ್ಲಿ ಮುದ್ದಿನಮಾವ ಸಿನಿಮಾದಲ್ಲಿ ಶಶಿಕುಮಾರ್ ಜತೆ ಎಸ್ ಪಿ ಬಾಲಸುಬ್ರಹ್ಮಣ್ಯ ಅವರು ನಟಿಸಿದ್ದರು. ಈ ಚಿತ್ರದಲ್ಲಿ ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ ಎಂಬ ಹಾಡು ಇದೆ. ಈ ಹಾಡಿನಲ್ಲಿ ಶಶಿಕುಮಾರ್ ಅವರಿಗೆ ಎಸ್‌ಪಿಬಿ ಹಾಡಿದ್ದಾರೆ. ಎಸ್‌ಪಿಬಿಗೆ ಯಾರು ಹಾಡಬೇಕೆಂದು ಯೋಚನೆ ಮಾಡಿದಾಗ ಹೊಳೆದಿದ್ದು ಗಾನಗಂಧರ್ವ ಡಾ. ರಾಜ್. ರಾಘವೇಂದ್ರ ರಾಜಕುಮಾರ್ ಅವರ ಮೂಲಕ ಈ ವಿಷಯವನ್ನು ಡಾ.ರಾಜ್ ಅವರ ಕಿವಿಗೆ ಹಾಕಿದರಂತೆ. ಆಗ ರಾಜಕುಮಾರ್ ಅವರು ಅಯ್ಯೋ ಅದು ನನ್ನ ಪುಣ್ಯ ಎಂದು ಬಂದು ಎಸ್‌ಪಿಗೆ ಹಾಡಿದರಂತೆ. ಈ ವಿಷಯವನ್ನು ಸ್ವತಃ ಎಸ್‌ಪಿಬಿ ಅವರು ರಿಯಾಲಿಟಿ ಶೋವೊಂದರಲ್ಲಿ ಹೇಳಿಕೊಂಡಿದ್ದಾರೆ. ಹಿನ್ನೆಲೆ ಗಾಯನದಲ್ಲಿ ಎಸ್‌ಪಿಬಿ ಮತ್ತು ಡಾ.ರಾಜ್ ಇಬ್ಬರೂ ಮಹಾ ಪರ್ವತ. ಅಂಥವರು ಇನ್ನೊಬ್ಬರಿಗೆ ಸ್ವರವಾಗುವುದೆಂದರೆ ಅದು ಮಹಾ ಸಂಗಮವೇ ಸರಿ. ಬಹುಶಃ ಇದೊಂದು ಅಪರೂಪದ ಘಟನೆಯಾಗಿ ಇತಿಹಾಸ ಸೇರಿದೆ.
ಕನ್ನಡಿಗರಿಂದ ವಿಶೇಷ ಪ್ರೀತಿ
ಬಹುಶಃ ಎಸ್ಪಿಬಿ ಈ ವಿಷಯವನ್ನು ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಅವರಿಗೆ ಕರ್ನಾಟಕ, ಕನ್ನಡ ಮತ್ತು ಕನ್ನಡಿಗರು ಎಂದರೆ ಅಚ್ಚುಮೆಚ್ಚು. ಆಂಧ್ರದವರಾದರೂ ಕನ್ನಡಿಗರು ಅವರನ್ನು ತಮ್ಮವರೆಂದೇ ಪ್ರೀತಿಸಿದರು. ಅದಕ್ಕಾಗಿ ಅವರು ಆಗಾಗ, ಕನ್ನಡಿಗರಿಂದ ನನಗೇ ವಿಶೇಷವಾದ ಪ್ರೀತಿ ಸಿಕ್ಕಿದೆ. ಈ ಪ್ರೀತಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ ಎನ್ನುತ್ತಿದ್ದರು.
ಎದೆ ತುಂಬಿ ಹಾಡಿದರು
ಎಸ್‌ಪಿಬಿ ಹಾಡಲು ನಿಂತರೆ ಸಂಗೀತದ ರಸದೌತಣ. ಅಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಅವರು ಹಾಡಿದ ಅಷ್ಟೂ ಭಾಷೆಗಳ ಅಷ್ಟೂ ಸಾಂಗುಗಳೇ ಇದಕ್ಕೆ ನಿದರ್ಶನ. ಗಾಯನದಲ್ಲಿ ಮೇರು ಪರ್ವತವೇ ಆದ ಎಸ್‌ಪಿಬಿ, ಕನ್ನಡದಲ್ಲಿ ಎದೆ ತುಂಬಿ ಹಾಡಿದೆನು ಎಂಬ ವಿಶಿಷ್ಟ ಸಂಗೀತ ರಿಯಾಲ್ಟಿ ಶೋವನ್ನು ದೂರದರ್ಶನಕ್ಕಾಗಿ ನಡೆಸಿಕೊಂಡು ಬರುತ್ತಿದ್ದರು. ಈ ಶೋ ಮೂಲಕ ಅನೇಕ ಪ್ರತಿಭಾವಂತ ಗಾಯಕ, ಗಾಯಕಿಯರನ್ನು ಸಂಗೀತ ಲೋಕಕ್ಕೆ ಪರಿಚಯಿಸಿದ್ದಾರೆ. ಬೇರೆ ಭಾಷೆಗಳಲ್ಲೂ ಇದೇ ರೀತಿಯ ಪ್ರೋಗ್ರಾಮ್ ನಡೆಸಿ ಕೊಡುತ್ತಿದ್ದರು.
ಅರಸಿ ಬಂದ ಬಿರುದು, ಸನ್ಮಾನ
ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿ ವಿವಿಧ ಭಾಷೆಗಳಲ್ಲಿ 45 ಸಾವಿರಕ್ಕೂ ಅಧಿಕ ಹಾಡುಗಳು ಎಸ್‌ಪಿಬಿ ಅವರ ಕಂಠಸಿರಿಯಲ್ಲಿ ಅರಳಿವೆ. ಶಂಕರಾಭರಣಂ, ಪಂಚಾಕ್ಷರಿ ಗವಾಯಿ(ಕನ್ನಡ), ಸಾಗರ ಸಂಗಮಂ, ಸ್ವಾತಿ ಮುತ್ಯಂ, ರುದ್ರವೀಣ, ಏಕ್ ದೂಜೇ ಕೇಲಿಯೇ ಚಿತ್ರದ ಹಾಡುಗಳಿಗೆ 6 ಬಾರಿ ಅತ್ಯುತ್ತಮ ಗಾಯಕ ಎಂಬ ನ್ಯಾಷನಲ್ ಅವಾರ್ಡ್ ಬಂದಿದೆ. ಆಂಧ್ರ ಪ್ರದೇಶ ಸರ್ಕಾರ ನೀಡುವ ನಂದಿ ಪ್ರಶಸ್ತಿಯನ್ನು 25 ಬಾರಿ ಪಡೆದುಕೊಂಡಿದ್ದಾರೆ. ಇದೊಂದು ದಾಖಲೆಯೇ ಸರಿ. ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯ ಸರ್ಕಾರಗಳು ನೀಡುವ ಪ್ರಶಸ್ತಿಯೂ ಎಸ್ಪಿಬಿ ಅವರನ್ನು ಹುಡುಕಿಕೊಂಡು ಬಂದಿವೆ.
ಎಲ್ಲಕ್ಕಿಂತ ಹೆಚ್ಚಾಗಿ ಭಾರತ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳು ಎನಿಸಿಕೊಂಡಿರುವ ಪದ್ಮಶ್ರೀ ಮತ್ತು ಪದ್ಮಭೂಷಣಗಳೂ ಅವರಿಗೆ ಸಂದಿವೆ. ಈ ಬಿರುದು ಸನ್ಮಾನಗಳಿಗಿಂತಲೂ ಇಡೀ ಭಾರತದ ಸಂಗೀತ ಪ್ರಿಯರ ಹೃದಯದಲ್ಲಿ ಅವರಿಗೆ ಬೇರೆಯದ್ದೇ ಸ್ಥಾನವಿದೆ. ನಾಲ್ಕು ಭಾಷೆಗಳಿಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ಗಾಯಕ ಇವರು. ಈ ಸಾಧನೆ ಗಾಯಕರಷ್ಟೇ ಅಲ್ಲ ಬೇರಾರೂ ಮಾಡಿಲ್ಲ ಕೂಡ. ಇಷ್ಟು ಮಾತ್ರವಲ್ಲದೇ, ತಮಿಳುನಾಡು ಸರ್ಕಾರವು ಕಲೈಂಮಣಿ ಪುರಸ್ಕಾರ ನೀಡಿದರೆ, ಪೊಟ್ಟಿ ಶ್ರೀರಾಮುಲು ತೆಲುಗು ವಿವಿ ಅವರಿಗೆ 1999ರಲ್ಲಿ ಗೌರವ ಡಾಕ್ಟರೇಟ್ ನೀಡಿತು. ಅದೇ ವರ್ಷ ಮಧ್ಯಪ್ರದೇಶ ಸರ್ಕಾರವು ಲತಾ ಮಂಗೇಶ್ಕರ್ ಪುರಸ್ಕಾರ ಪ್ರದಾನ ಮಾಡಿತು. ಸತ್ಯಂಬಾ ಮತ್ತು ಆಂಧ್ರ, ಅನಂತಪುರ ವಿವಿಗಳು ಗೌರವ ಡಾಕ್ಟರೇಟ್ ನೀಡಿವೆ.
ಇದನ್ನೂ ಓದಿ | ಕೇರಂ ಬೋರ್ಡ್ ಅಂಕಣ | ಉಸಿರು ಹಿಡಿದು ಹಾಡುವೆ, ಕೇಳಡಿ ಕಣ್ಮಣಿ!