Site icon Vistara News

ಶ್ರೀ ವಿದ್ಯಾರಣ್ಯ ಜಯಂತಿ: ಸನಾತನ ಧರ್ಮದ ಸಾಮ್ರಾಜ್ಯದ ಕಾರಣಪುರುಷ

vidyaranya

: ಸುಪ್ರೀತಾ ಶಾಸ್ತ್ರೀ, ವಾಷಿಂಗ್ಟನ್
ಕ್ರಿ.ಶ 13-14ನೇ ಶತಮಾನದಲ್ಲಿ ಭಾರತದ ದಕ್ಷಿಣದಲ್ಲಿ ಹಿಂದೆಂದೂ ಅನುಭವಿಸದ ತೀವ್ರ ಪರಕೀಯ ದಾಳಿಗೆ ತುತ್ತಾಗಿ ಸಕಲ ಸಂಪತ್ತನ್ನೂ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಯಿತು. ದಕ್ಷಿಣದಲ್ಲಿ ಆಡಳಿತ ನಡೆಸಿದ ಅನೇಕ ರಾಜ ಮನೆತನಗಳು ಸಂಪೂರ್ಣವಾಗಿ ನಿಸ್ತೇಜವಾಗಿದ್ದವು. ಅವರ ಮುಂದಿನ ತಲೆಮಾರಿನ ರಾಜರುಗಳಲ್ಲಿ ಕ್ಷಾತ್ರಗುಣ ಸಂಪೂರ್ಣವಾಗಿ ಕುಗ್ಗಿತ್ತು. ಪದೇ ಪದೆ ಉತ್ತರದ ಕಡೆಯಿಂದ ಮುಸಲ್ಮಾನರ ಆಕ್ರಮಣ. ಬಿಜಾಪುರದ ಬಹುಮನಿ ಸುಲ್ತಾನ ಮತ್ತು ಗೊಲ್ಕೊಂಡಾದ ರಾಜರುಗಳು ದಕ್ಷಿಣ ಭಾರತದ ಮೇಲೆ ಸಾಲು ಸಾಲು ದಂಡಯಾತ್ರೆ ಮಾಡಿ ಲೂಟಿ ಮಾಡಿದ್ದಲ್ಲದೇ ಅನೇಕ ದೇವಾಲಯಗಳನ್ನು ನಾಶಪಡಿಸಿ ಹೆಣ್ಣುಮಕ್ಕಳ ಮಾನಹಾನಿ ಮಾಡಿದ್ದಲ್ಲದೇ ಬಲವಂತದಿಂದ ಮತಾಂತರ ಮಾಡಿದರು. ಮತಾಂತರಕ್ಕೆ ಒಪ್ಪದವರನ್ನು ನಿರ್ದಾಕ್ಷಿಣ್ಯವಾಗಿ ಕೊಂದು ಹಾಕುವುದಕ್ಕೂ ಹಿಂದುಮುಂದು ನೋಡಲಿಲ್ಲ. ರಾಕ್ಷಸ ಪ್ರವೃತ್ತಿಯಲ್ಲಿ ಅಟ್ಟಹಾಸ ಮೆರೆಯುತ್ತಾ, ಸಿಕ್ಕ ಸಿಕ್ಕವರ ಆಸ್ತಿಪಾಸ್ತಿಗಳನ್ನು ದೋಚುತ್ತಾ, ಸಾಮ್ರಾಜ್ಯವನ್ನು ಅಕ್ಷರಶಃ ಹಾಳು ಮಾಡುತ್ತಾ ಇದ್ದಾಗ ಅದೆಲ್ಲದಕ್ಕೂ ಇತಿಶ್ರೀ ಹಾಡಲು ಮುಂದಾದವರೇ ಶ್ರೀ ವಿದ್ಯಾರಣ್ಯರು.

ವಿದ್ಯಾರಣ್ಯರು ತಮ್ಮ ಪೂರ್ವಾಶ್ರಮದ ಸೋದರ ಸಾಯಣಾಚಾರ್ಯರ ಸಹಕಾರದೊಂದಿಗೆ ಸಂಗಮ ವಂಶೀಯರಾದ ಹರಿಹರ ಹಾಗೂ ಬುಕ್ಕರಾಯರ ಮೂಲಕ ಸ್ಥಾಪಿಸಿದ ಸಾಮ್ರಾಜ್ಯವೇ ವಿಜಯ ನಗರ. ಹಕ್ಕ-ಬುಕ್ಕರು ತುಂಗಭದ್ರಾ ನದಿಯ ತಟದಲ್ಲಿರುವ ಆನೆಗೊಂದಿಯ ಮತ್ತೊಂದು ಬದಿಯಲ್ಲಿ ವಿದ್ಯಾನಗರವೆಂಬ ನೂತನ ನಗರಕ್ಕೆ ಶಂಕುಸ್ಥಾಪನೆ ಮಾಡಿ, ವಿರೂಪಾಕ್ಷ ಮತ್ತು ಭುವನೇಶ್ವರಿಯರ ಸುಂದರವಾದ ಮತ್ತು ಬೃಹತ್ತಾದ ದೇವಾಲಯವನ್ನು ಕಟ್ಟಿಸುತ್ತಾರೆ. ಮೊಘಲರ ವಿರುದ್ಧದ ಪ್ರಪ್ರಥಮ ವಿಜಯದ ಸಂಕೇತವಾಗಿ ನಿರ್ಮಿಸಿದ ಈ ನಗರವನ್ನು ವಿದ್ಯಾನಗರದ ಬದಲಾಗಿ ವಿಜಯನಗರ ಎಂದು ಕರೆಯುವುದೇ ಸೂಕ್ತ ಎಂದು ನಿರ್ಧರಿಸಿದ ವಿದ್ಯಾರಣ್ಯರು ವಿಜಯನಗರ ಸಾಮ್ರಾಜ್ಯದ ಸಂಸ್ಥಾಪನೆಗೆ ಕಾರಣೀಭೂತರಾಗುತ್ತಾರೆ. ಅಂದು ವಿದ್ಯಾರಣ್ಯರ ಕೃಪಾಶೀರ್ವಾದದಿಂದ ಸ್ಥಾಪಿತವಾದ ವಿಜಯನಗರ ಸಾಮ್ರಾಜ್ಯ, ಪರಕೀಯರ ಆಕ್ರಮಣವನ್ನು ಮೆಟ್ಟಿ, ಮುಂದೆ ಸುಮಾರು 310 ವರ್ಷಗಳ ಕಾಲ ದಕ್ಷಿಣ ಭಾರತಾದ್ಯಂತ ವಿಸ್ತರಿಸಿಕೊಂಡು ಶ್ರೀ ಕೃಷ್ಣದೇವರಾಯನ ಕಾಲದಲ್ಲಿ ಅತ್ಯಂತ ವೈಭವೋಪೇತವಾಗಿ ಸುವರ್ಣಯುಗವಾಗಿ ವಿಜೃಂಭಿಸಿತು.

ವಿಜಯನಗರದ ವೈಭವವನ್ನು ಕೇಳದವರೇ ಇಲ್ಲ. ಮುತ್ತು ರತ್ನ ವಜ್ರ ವೈಡೂರ್ಯಗಳನ್ನು ಸಂತೆಯಲ್ಲಿ ಮಾರುವಷ್ಟು ಸುಭಿಕ್ಷತೆ ವಿಜಯನಗರದ್ದಾಗಿತ್ತು ಎನ್ನಲಾಗುತ್ತದೆ. ಕರ್ನಾಟಕ ಎಂದೊಡನೆ ನೆನಪಾಗುವುದೇ ವೈಭವೋಪೇತ ದಸರಾ ಹಬ್ಬ. ದಸರಾದ ವೈಭವಕ್ಕೆ ಮೂಲವಾಗಿದ್ದಿದ್ದೇ ವಿಜಯನಗರ ಸಾಮ್ರಾಜ್ಯ.

ಉತ್ತರದಿಂದ ಮತಾಂಧರ ದಾಳಿಯನ್ನು 300 ವರ್ಷಗಳಿಗೂ ಹೆಚ್ಚು ಕಾಲ ದಕ್ಷಿಣಕ್ಕೆ ಬಾರದಂತೆ ತಡೆದು, ಶತ್ರುಗಳಿಗೆ ಸಿಂಹಸ್ವಪ್ನವಾಗಿ, ದಕ್ಷಿಣದ ಭಾರತದ ಮತಾಂಧರನ್ನು ಹೆಡೆಮುರಿ ಕಟ್ಟಿ ಹಿಂದೂ ಧರ್ಮವನ್ನು ಉತ್ತೇಜಿಸಿದರು. ವಿಜಯನಗರದ ಆಡಳಿತದಲ್ಲಿ ಜನರು ಸುಭಿಕ್ಷವಾಗಿದ್ದರು. ಇದಕ್ಕೆಲ್ಲಾ ಮೂಲ ಕಾರಣ ಶ್ರೀ ವಿದ್ಯಾರಣ್ಯರ ದೂರದೃಷ್ಟಿ. ಇವರು ಶ್ರೀ ಶಂಕರರ, ಅದ್ವೈತದ ಅನುನಾಯಿಗಳಾಗಿದ್ದು, ಶೃಂಗೇರಿ ಶ್ರೀಮಠದ 12ನೇ ಮಠಾಧೀಶರೂ ಆಗಿದ್ದರು. ಅವರ ಜೀವಿತಾವಧಿ ಹಿಂದೂಧರ್ಮ ಸಾಮ್ರಾಜ್ಯ ಸ್ಥಾಪನೆಗಾಗಿಯೇ ಮೀಸಲಾಗಿದ್ದಿತ್ತು. ಪೀಠಾಧಿಪತಿಗಳಾಗಿದ್ದ ಅಲ್ಪಾವಧಿಯಲ್ಲಿ ಶೃಂಗೇರಿ ಮಠವನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ದರು. ಕಾಶ್ಮೀರದ ಮೂಲ ಶಾರದಾ ಪೀಠದಿಂದ ಆದಿಶಂಕರರು ತಂದ ಮೂಲ ಶ್ರೀಗಂಧದ ವಿಗ್ರಹದ ಬದಲಿಗೆ ಶ್ರೀ ಶಾರದಾ ದೇವಿಯ ಚಿನ್ನದ ವಿಗ್ರಹವನ್ನು ಸ್ಥಾಪಿಸಿದವರೂ ವಿದ್ಯಾರಣ್ಯರೇ. ಶಂಕರಾಚಾರ್ಯರ ನಂತರ ಅದ್ವೈತ ವೇದಾಂತಕ್ಕೆ ಇವರ ಕೊಡುಗೆ ಅಪಾರ.

ವಿದ್ಯಾರಣ್ಯರನ್ನು ಯುಗಪುರುಷರೆಂದು ಕರೆಯುತ್ತೇವೆ. ಕಾರಣ ಶ್ರೀ ಗುರು ವಿದ್ಯಾರಣ್ಯರು ಕೇವಲ ಪೀಠದ ಗುರುಗಳಾಗಿರಲಿಲ್ಲ. ಇಡೀ ಸಮಸ್ತ ಭಾರತಕ್ಕೆ ಒದಗಿರುವ ಕೇಡನ್ನು ಪರಿಹರಿಸುವ ಒಬ್ಬ ಸಮರ್ಥ ವ್ಯಕ್ತಿತ್ವದವರಾಗಿದ್ದರು.

ಶ್ರೀ ವಿದ್ಯಾರಣ್ಯರ ಜನನ ವೈಶಾಖ ಶುದ್ಧ ಸಪ್ತಮಿ 11-4-1296 ಬುಧವಾರ ಪಂಪಾ ಕ್ಷೇತ್ರದಲ್ಲಿ (ಈಗಿನ ಹಂಪಿ). ಇವರ ಪೂರ್ವಾಶ್ರಮದ ಹೆಸರು ಮಾಧವಾಚಾರ್ಯ. ಇವರ ತಂದೆ ತಾಯಿ- ಮಯನಾಚಾರ್ಯ ಮತ್ತು ಶ್ರೀಮತಿ ದೇವಿ. ಸಾಯಣಾಚಾರ್ಯ, ಭೋಗನಾಥ ಇವರ ತಮ್ಮಂದಿರಾಗಿದ್ದು, ಸಿಂಗಲಾ ಎಂಬ ಸಹೋದರಿಯೂ ಇದ್ದಳು. ತರ್ಕ, ವೇದ, ಯೋಗ, ವ್ಯಾಕರಣ, ಸಂಗೀತ ಮುಂತಾದ ಕ್ಷೇತ್ರಗಳಲ್ಲಿ ಅಗಾಧ ಪಾಂಡಿತ್ಯವನ್ನು ಹೊಂದಿದ್ದರು. ತುಂಗಭದ್ರಾ ನದಿಯ ತೀರದಲ್ಲಿ ಶಂಕರಾನಂದ ಎಂಬ ಗುರುಗಳು ಮೂವರೂ ಸಹೋದರರಿಗೆ ವಿದ್ಯೆಯನ್ನು ಕಲಿಸಿದರು. ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅವರ ಗುರುಗಳಾದ ಕಾಂಚಿಯಲ್ಲಿನ ವಿದ್ಯಾತೀರ್ಥರಲ್ಲಿ ವಿದ್ಯೆಯನ್ನು ಮುಂದುವರಿಸಲು ಸೂಚಿಸಿದರು. ಆ ಸಮಯದಲ್ಲಿ ಪಲ್ಲವರ ರಾಜಧಾನಿಯಾಗಿದ್ದ ಕಾಂಚಿಯು ಆಚಾರ್ಯರ ತತ್ವಗಳನ್ನು ಬೋಧಿಸುವ ಕ್ಷೇತ್ರವಾಗಿತ್ತು. ಸಹೋದರರು ವಿದ್ಯೆಯ ಪ್ರತಿನಿಧಿಯಾದರು. ಸೇವಾಮನೋಭಾವ, ದೃಢತೆ, ತಾಳ್ಮೆ, ನಿರ್ಧಾರಗಳನ್ನು ಕೈಗೊಳ್ಳುವ ಶಕ್ತಿ, ವಿಶ್ವಕ್ಕೆ ಒಳಿತಾಗಲಿ ಎಂಬೆಲ್ಲಾ ಭಾವಗಳು ಮಾಧವನಿಗೆ ಇನ್ನಷ್ಟು ಪುಷ್ಟಿ ಕೊಟ್ಟಿತು. ಇತರರಂತೆ ಕೇವಲ ವಿದ್ಯಾಭ್ಯಾಸ, ಮದುವೆ, ಮಕ್ಕಳು, ಸಂಸಾರ, ಇಷ್ಟಕ್ಕೆ ಮಾತ್ರ ನನ್ನ ಜೀವನ ಸೀಮಿತವಾಗಬಾರದೆಂದು ಅವನು ನಿರ್ಧರಿಸಿದ್ದ.

ತಾಯಿ ಭುವನೇಶ್ವರಿಯ ಕೃಪೆಯಿಂದ ಒಂದು ರಾಜ್ಯವನ್ನು ಸ್ಥಾಪಿಸಿ ದಾಳಿಕೋರರನ್ನು ಓಡಿಸಬೇಕು. ಸನಾತನ ಹಿಂದೂ ಧರ್ಮಕ್ಕೆ ಇರುವ ಅಪಾಯವನ್ನು ಹೋಗಲಾಡಿಸಬೇಕು ಎಂಬುದು ಅವರ ಸ್ಪಷ್ಟ ನಿಲುವಾಗಿತ್ತು. ವಿದ್ಯಾರಣ್ಯರು ಇಡೀ ಭಾರತವನ್ನು ಪರ್ಯಟನೆ ಮಾಡಿ, ಭರತ ಖಂಡದ ಜನರ ಹೀನಾಯ ಸ್ಥಿತಿಯನ್ನು ಕಣ್ಣಾರೆ ಕಂಡರು. ದೇಶದ ಪರ್ಯಟನೆ ಸಂದರ್ಭದಲ್ಲಿ ದಾರಿ ಉದ್ದಕ್ಕೂ ಸಿಕ್ಕ ಗ್ರಾಮಗಳ ಸಜ್ಜನರಿಗೆ ದೇಶದ ಪರಿಸ್ಥಿತಿ ಬಗ್ಗೆ ಹಾಗೂ ನಾವು ಮಾಡಬೇಕಾದ ಕರ್ತವ್ಯದ ಬಗ್ಗೆ ತಿಳಿಹೇಳುತ್ತಿದ್ದರು. ಸ್ವಾಮಿ ವಿವೇಕಾನಂದರಿಗೆ ದೇವಿಯ ಸಾಕ್ಷಾತ್ಕಾರವಾದ ಸ್ಥಳ ತಮಿಳುನಾಡಿನ ಕನ್ಯಾಕುಮಾರಿ. ಇವರಂತೆಯೇ ವಿದ್ಯಾರಣ್ಯರಿಗೂ ಜರುಗಿತು. ಕನ್ಯಾಕುಮಾರಿಯ ಅಗಸ್ತ್ಯ ಬಂಡೆಯಲ್ಲಿ ನಾಲ್ಕು ದಿನ ಧ್ಯಾನಸ್ಥರಾಗಿದ್ದರು. ಅಂತರ್ಮುಖಿಯಾಗಿದ್ದರು. ಸ್ವಲ್ಪ ಸಮಯದ ನಂತರ ಬಹಿರ್ಮುಖರಾದ ಅವರು ʼಓಂ ಶ್ರೀ ಮಾತ್ರೇ ನಮಃʼ ಎಂದು ಘೋಷಿಸಿದರು. ಅದನ್ನು ನೋಡಿ ಎಲ್ಲರೂ ಸ್ತಂಭೀಭೂತರಾದರು. ಅದಾದ ಮೇಲೆ ಸತತ 24 ದಿನಗಳ ಕಾಲ ಧ್ಯಾನಸ್ಥರಾಗಿದ್ದು, ತಾಯಿಯ ಬಳಿ ಮುಂದೆ ಏನು ಮಾಡಬೇಕು, ಎಲ್ಲಿಗೆ ಹೋಗಬೇಕು, ದೇಶದ ಈ ಪರಿಸ್ಥಿತಿಗೆ ಪರಿಹಾರವೇನು ಎಂದು ಕೇಳಿದರು.

ಇದನ್ನೂ ಓದಿ: ಸ್ಮರಣೆ: ಕನ್ನಡದ ಶ್ರೇಷ್ಠ ದಾರ್ಶನಿಕ ಡಿ.ವಿ. ಗುಂಡಪ್ಪ

ಜಗನ್ಮಾತೆ ಗಾಯಿತ್ರಿ ದೇವಿ ಪ್ರತ್ಯಕ್ಷಳಾಗಿ ಮುಂದೆ ಮಾಡುವ ಮಹತ್ಕಾರ್ಯದ ಸಲುವಾಗಿ ಶೃಂಗೇರಿ ಗುರು ವಿದ್ಯಾತೀರ್ಥರ ಬಳಿ ಹೋಗಲು ಹೇಳಿದಳು. ಹಂಪಿಯಲ್ಲಿದ್ದ ವಿದ್ಯಾತೀರ್ಥರ ದರ್ಶನಕ್ಕೆ ಬಂದ ಮಾಧವ ಮುಂದೆ ಶಿಷ್ಯನಾಗಿ ಸಂನ್ಯಾಸಿಯಾಗಿ ಶ್ರೀ ವಿದ್ಯಾರಣ್ಯ ಎಂಬ ನಾಮವನ್ನು ಪಡೆದರು. ಮುಂದೆ ಇವರು ಹರಿಹರ, ಬುಕ್ಕರಿಗೆ ಮಾರ್ಗದರ್ಶನ ಮಾಡಿ ಮಹಾನ್ ಸಾಮ್ರಾಜ್ಯ ಉದಯಿಸಲು ಕಾರಣರಾದರು. ಮೊಘಲರ ಬಂಧನದಿಂದ ಆಗ ತಾನೇ ಬಿಡಿಸಿಕೊಂಡು ಅವರ ಪ್ರತಿನಿಧಿಯಾಗಿ ಬಂದಿದ್ದ ಹರಿಹರ, ಬುಕ್ಕರೊಡನೆ ತುಂಗಭದ್ರಾ ನದಿಯ ದಡದಲ್ಲಿ 1259ನೇ ಶಕ ವರ್ಷ, 18-4-1336ರಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಶಿಲಾನ್ಯಾಸ ನೆರವೇರಿಸಿದರು.

ಪಂಚದಶೀ, ಅನುಭೂತಿ ಪ್ರಕಾಶ, ಜೀವನ್ಮುಕ್ತಿ ವಿವೇಕ- ಹೀಗೆ ಇನ್ನೂ ಅನೇಕ ಪ್ರಸಿದ್ಧ ಕೃತಿಗಳನ್ನು ರಚಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರಿಗೆ ಸಂಗೀತದಲ್ಲಿ ತೀವ್ರ ಆಸಕ್ತಿ. ʼಸಂಗೀತ ಸಾರʼವೆಂಬ ಸಂಗೀತ ಗ್ರಂಥವನ್ನು ರಚಿಸಿ ಜನಕ ರಾಗ, ಜನ್ಯ ರಾಗ, ಆರೋಹಣ, ಅವರೋಹಣ ಮೊದಲಾದ ವಿವರಣೆಗೆ, ಇವರು ನಿರೂಪಿಸಿದ ದಕ್ಷಿಣಾದಿ ಸಂಗೀತದ ರೀತಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತವೆಂದು ಹೆಸರು ಬಂದಿದೆ. 1386ರಲ್ಲಿ ಹಂಪಿಯಲ್ಲಿ ಪ್ರಾಣತ್ಯಾಗ ಮಾಡಿದರು. ದೇವಾಲಯದ ಹಿಂಭಾಗದಲ್ಲಿ ಇವರ ಸಮಾಧಿ ಇದೆ.

ಆಧ್ಯಾತ್ಮಿಕ, ನೈತಿಕ, ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿಹಿಡಿದು ಸನಾತನ ಹಿಂದೂ ಧರ್ಮವನ್ನು ಜೀವಂತವಾಗಿ ಇರಿಸಿದ ಗುರು ವಿದ್ಯಾರಣ್ಯರ ಜಯಂತಿಯಂದು ಅವರನ್ನು ನೆನೆಯುತ್ತಾ, ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳೋಣ.

ಅವಿದ್ಯಾರಣ್ಯಕಾಂತಾರೇ ಭ್ರಮತಾಮ್ ಪ್ರಾಣಿನಾಂ ಸದಾ |
ವಿದ್ಯಾಮಾರ್ಗೋಪದೇಶ್ಟಂ ವಿದ್ಯಾರಣ್ಯಗುರುಮ್ ಶ್ರಯೇ ||

ಇದನ್ನೂ ಓದಿ: ಸ್ಮರಣೆ: ವಿಶ್ವಮಾನ್ಯ ಕವಿ, ವಿದ್ವಾಂಸ ಎ.ಕೆ ರಾಮಾನುಜನ್ ನೆನಪು

Exit mobile version