Site icon Vistara News

ಸುವಿಚಾರ ಅಂಕಣ | ಚಿಂತೆಯಿಂದ ಚಿಂತನೆಯೆಡೆಗೆ ಪಯಣ

worry

ಚಿಂತಾಯಾಶ್ಚ ಚಿತಾಯಾಶ್ಚ ಬಿಂದುಮಾತ್ರಂ ವಿಶಿಷ್ಯತೇ|
ಚಿತಾ ದಹತಿ ನಿರ್ಜೀವಂ ಚಿಂತಾ ದಹತಿ ಜೀವಿನಮ್||

ಎಂಬುದಾಗಿ ಸುಭಾಷಿತಕಾರನೊಬ್ಬ ಹೇಳಿದ್ದಾನೆ. ಚಿತೆಗೂ ಚಿಂತೆಗೂ ಏನಿದೆ ಸಾಮ್ಯ? ಸಾಮ್ಯವಿದೆಯೋ ಇಲ್ಲವೋ, ವ್ಯತ್ಯಾಸವಂತೂ ಇಲ್ಲ ಎಂಬುದು ಅವನ ಆಂತರ್ಯ. ಯಾಕೆಂದರೆ ಎರಡೂ ಸುಡುವವುಗಳೇ. ಒಂದು ಮರಣಕ್ಕೂ ಮೊದಲು ಸುಟ್ಟರೆ, ಇನ್ನೊಂದು ಮರಣದ ಅನಂತರ ಸುಡುತ್ತದೆ. ಅಷ್ಟೇ ವ್ಯತ್ಯಾಸ.

ಪ್ರಾಸಂಗಿಕವಾಗಿ ಹೇಳುವುದಾದರೆ ‘ಚಿಂತೆ’ಗೂ ‘ಚಿತೆ’ಗೂ ಇರುವ ವ್ಯತ್ಯಾಸ ‘ಶೂನ್ಯ’ ಅಷ್ಟೇ. ಒಂದರ್ಥ ಶಬ್ದಾರ್ಥವನ್ನು ಹೇಳಿದರೆ ಇನ್ನೊಂದು ಭಾವಾರ್ಥವನ್ನು ಹೇಳುತ್ತದೆ.

‘ಚಿಂತಾ ಜರಾ ಮನುಷ್ಯಾಣಾಮ್’ ಚಿಂತೆಯೊಂದು ಮನುಷ್ಯನಿಗೆ ಆರಂಭವಾದರೆ ಎಂತಹ ಯುವಕನೂ ಕೆಲವೇ ದಿನಗಳಲ್ಲಿ ವೃದ್ಧನಾಗುತ್ತಾನೆ ಎನ್ನುತ್ತದೆ ಈ ಸುಭಾಷಿತ. ವೃದ್ಧಾವಸ್ಥೆ ಪ್ರತಿಯೊಬ್ಬನಿಗೂ ಅನಿವಾರ್ಯವಾಗಿ ಬರುವ ಒಂದು ದುರವಸ್ಥೆ. ಇದನ್ನು ಮನುಷ್ಯ ಇಷ್ಟಪಡುವುದಿಲ್ಲ. ಆದರೆ ವೃದ್ಧತ್ವವು ಅವನಿಗೆ ಅನಿವಾರ್ಯ. ಇಂತಹ ವೃದ್ಧತ್ವ ಅಕಾಲದಲ್ಲೇನಾದರೂ ಬಂದರೆ ಹೇಗಿರಬಹುದು? ಹೌದು ಅತಿಯಾದ ಚಿಂತೆಯಿಂದ ಬಹಳ ಬೇಗನೆ ವೃದ್ಧಾಪ್ಯವು ಬರುತ್ತದೆ. ಆದ್ದರಿಂದಲೇ ನಾವು ಈ ಚಿಂತೆಗಳಿಂದ ಆದಷ್ಟೂ ದೂರವಿರಬೇಕು.

ಮಾನವ ಜೀವಿತದ ವಿವಿಧ ಅವಸ್ಥೆಗಳಲ್ಲಿ ವೃದ್ಧಾಪ್ಯವು ಚಿಂತಿಸುವುದಕ್ಕೋಸ್ಕರವೇ ಬರುವುದೋ ಎಂಬಂತೆ ಭಾಸವಾಗುತ್ತದೆ. ವೃದ್ಧಸ್ತಾವತ್ ಚಿಂತಾಮಗ್ನಃ ಎಂಬುದಾಗಿ ಆಚಾರ್ಯ ಶಂಕರರು ಹೇಳಿದ್ದಾರೆ.

ಮನುಷ್ಯನಿಗೆ ಚಿಂತೆ ಒಂದೆರಡಲ್ಲ. ಹೋದಲ್ಲೆಲ್ಲ ಚಿಂತೆಯನ್ನು ಹೊತ್ತು ತರುವುದು ಅವನ ಸ್ವಭಾವ. ಕೆಲವು ಚಿಂತೆಗಳು ಸಹಜವಾಗಿ ಅವನನ್ನು ಆವರಿಸಿದರೆ ಇನ್ನು ಕೆಲವನ್ನು ಅವನೇ ಆಹ್ವಾನಿಸುತ್ತಾನೆ.

ಚಿಂತಾಸಹಸ್ರೇಷು ಚ ತೇಷು ಮಧ್ಯೇ ಚಿಂತಾಚತಸ್ರೋಪ್ಯಸಿಧಾರತುಲ್ಯಾಃ|
ನೀಚಾಪಮಾನಂ ಕ್ಷುಧಿತಂ ಕಲತ್ರಂ ಭಾರ್ಯಾ ವಿರಕ್ತಾ ಸಹಜೋ ವಿರೋಧಃ||

ಸಾವಿರಾರು ಚಿಂತೆಗಳು ಬಂದರೂ ಕೆಲವೊಮ್ಮೆ ಸಹ್ಯವಾಗಬಹುದು ಆದರೆ ನೀಚಜನರು ನಮಗೆ ಅಪಮಾನ ಮಾಡಿದರೆ, ಮನೆಯಲ್ಲಿ ಹೆಂಡತಿ ಮಕ್ಕಳು ಉಪವಾಸ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾದರೆ, ಪತ್ನಿಯು ವಿರಕ್ತಭಾವದವಳಾದರೆ, ಒಡಹುಟ್ಟಿದವರೇ ವಿರೋಧ ಮಾಡಿದರೆ ಈ ನಾಲ್ಕು ಚಿಂತೆಗಳು ಕತ್ತಿಯ ಮೊನಚಾದ ಅಲಗಿನಂತೆ ನಮ್ಮನ್ನು ಯಾವುದೇ ಸಮಯದಲ್ಲಿ ಕತ್ತರಿಸಬಹುದು. ಈ ನಾಲ್ಕು ಚಿಂತೆಗಳು ನಮ್ಮ ಶತ್ರುಗಳಿಗೂ ಬರುವುದು ಬೇಡ ಎನ್ನುತ್ತದೆ ಈ ಸುಭಾಷಿತ.

ನಿತ್ಯವೂ ಸಾವಿರಾರು ಚಿಂತೆಗಳು ನಮ್ಮ ಹೆಗಲೇರಿ ಕುಳಿತುಕೊಳ್ಳುತ್ತವೆ. ಒಂದಾದ ಮೇಲೊಂದರಂತೆ ಚಿಂತಾ ಸಂತತಿ ನಮ್ಮನ್ನು ಬೆನ್ನುಬಿಡದು. ಬದುಕಿನಲ್ಲಿ ಹೆಜ್ಜೆಹೆಜ್ಜೆಗೂ ಚಿಂತೆಗಳು ನಮ್ಮನ್ನು ಕಾಡುತ್ತವೆ. ನಮ್ಮ ಹಗಲಿನ ಸುಖವನ್ನೂ ರಾತ್ರಿಯ ನಿದ್ರೆಯನ್ನು ಕಸಿಯುವ ನಮ್ಮ ಶತ್ರು ಈ ಚಿಂತೆ. ಅದಕ್ಕೇ ಹೇಳಿರುವುದು ‘ಚಿಂತಾತುರಾಣಾಂ ನ ಸುಖಂ ನ ನಿದ್ರಾ’ ಎಂದು. ಅಂದರೆ ಚಿಂತಾತುರರಿಗೆ ಸುಖವೂ ಇಲ್ಲ, ನಿದ್ರೆಯೂ ಇಲ್ಲ.

ಅನುಭವಿಗಳೊಬ್ಬರು ಹೇಳುತ್ತಾರೆ, ಚಿಂತೆ ಹಿಡಿದ ಮನುಷ್ಯ ಗೆದ್ದಲು ಹಿಡಿದ ಮರದಂತೆ. ಗೆದ್ದಲು ಎಂಬ ಕ್ರಿಮಿ ಸರ್ವಭಕ್ಷಕ. ಎಂತಹ ಗಟ್ಟಿಯಾದ ಬೃಹತ್ ಗಾತ್ರದ ಮರವನ್ನಾದರೂ ಕೆಲವೇ ದಿನಗಳಲ್ಲಿ ಸಾಯಿಸಬಲ್ಲುದು. ಅಂತೆಯೇ ಮನುಷ್ಯನ ಮನಸ್ಸಿಗೆ ಅಂಟಿಕೊಂಡ ಈ ಚಿಂತೆಯೆಂಬ ಗೆದ್ದಲು ಅವನನ್ನು ಸರ್ವನಾಶ ಮಾಡುವವರೆಗೂ ಬಿಡುವುದಿಲ್ಲ.

ದಿನಕ್ಕೆ ಸಾವಿರ ಚಿಂತೆಗಳು ಮನುಷ್ಯನನ್ನು ಬಾಧಿಸುತ್ತವೆ. ಹಾಗೆ ಹುಡುಕಹೊರಟರೆ ಚಿಂತೆಯಿಲ್ಲದ ಮನುಷ್ಯ ಭೂಮಿಯಲ್ಲಿಯೇ ಇಲ್ಲವೇನೋ ಎಂಬಷ್ಟರ ಮಟ್ಟಿಗೆ ಎಲ್ಲರೂ ಚಿಂತಾತುರರೇ. ಎಲ್ಲರೂ ಒಂದಿಲ್ಲೊಂದು ಚಿಂತೆಗೆ ಸಿಲುಕಿ ಒದ್ದಾಡುತ್ತಿರುತ್ತಾರೆ.

ಆದರೆ ಚಿಂತೆಯನ್ನು ಚಿಂತನೆಯೆಡೆಗೆ ಕರೆದೊಯ್ಯುವ ಸಾಮರ್ಥ್ಯಶಾಲಿ ಗೆಲ್ಲುತ್ತಾನೆ. ನೇತ್ಯಾತ್ಮಕ ಮನೋಭಾವದಿಂದ ಸಕಾರಾತ್ಮಕ ಮನೋಭಾವದವನು ಜಯಶಾಲಿಯಾಗುವನು.

ಇದನ್ನೂ ಓದಿ | ಶಬ್ದಸ್ವಪ್ನ ಅಂಕಣ | ಕನಸು ಎಚ್ಚರಗಳ ನಡುವೆ ಮಾರ್ಕ್ವೇಜ್‌ನ ಮಾಯಾದರ್ಪಣ

ಚಿಂತೆಯಿಲ್ಲದಿರುವವನಿಗೆ ಸಂತೆಯಲ್ಲೂ ನಿದ್ರೆ ಎಂಬ ಗಾದೆಯ ಮಾತು ಬಹಳ ಜನಜನಿತ. ಇಲ್ಲಿ ಸಂತೆ ನಮ್ಮ ದೈನಂದಿನ ಸಮಸ್ಯೆಗಳ, ಮಾನಸಿಕ ಗೊಂದಲಗಳ ಸಂಕೇತ. ಇವುಗಳನ್ನು ಕುರಿತು ಆಳವಾಗಿ ಯೋಚಿಸುವುದೇ ಚಿಂತೆ, ಯೋಚಿಸದಿದ್ದರೆ ನಿಶ್ಚಿಂತೆ. ಇಂತಹ ಸಮಸ್ಯೆಗಳು ನಮ್ಮಿಂದ ದೂರಾದರೆ ನಿಶ್ಚಿಂತನಾಗಿದ್ದುಬಿಡಬಹುದು. ಮನಸ್ಸಿಗೆ ಕೊಡುವ ನೆಮ್ಮದಿ, ಸಮಾಧಾನ, ಧ್ಯಾನಾದಿಗಳ ಮೂಲಕ ಮನಸ್ಸಿಗೆ ಹೇಳುವ ಸಾಂತ್ವನ ಮೊದಲಾದವುಗಳು ಚಿಂತೆಯಿಂದ ಚಿಂತನೆಯೆಡೆಗೆ ಕರೆದೊಯ್ಯುವ ಸಾಧನಗಳು. ಇನ್ನು ಸ್ವತಃ ಭಗವಂತನೇ ಹೇಳಿದ ಹಾಗೆ ನಿಯತಕರ್ಮಗಳನ್ನು ನೀನು ಯಾವುದೇ ಫಲಾಪೇಕ್ಷೆಯಿಲ್ಲದೇ ಮಾಡು, ಫಲಾಫಲಗಳನ್ನು ನನಗೆ ಬಿಡು ಎಂದಂತೆ ನಡೆದರೆ ಬಹುಶಃ ಚಿಂತೆ ನಮ್ಮನ್ನು ಬಿಟ್ಟು ಹೋಗಬಹುದು. ಈ ಎಲ್ಲ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ನೆಮ್ಮದಿ ನಮ್ಮನ್ನು ಹುಡುಕಿಕೊಂಡು ಬಂದೀತು.

ಚಿಂತೆಗೆ ಜನ್ಮ ನೀಡುವ ಮುಖ್ಯಸ್ಥಾನವೇ ಮನಸ್ಸು. ಅಂತಹ ಮನಸ್ಸೇ ತಾನೇ ನಮ್ಮೆಲ್ಲರ ಬದುಕಿನ ನಿಯಂತ್ರಕ? ‘ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ’| ಭಗವದ್ಗೀತೆಯ ಧ್ಯೇಯವಾಕ್ಯದಂತಿರುವ ಇದು ಭಗವಾನ್ ಶ್ರೀಕೃಷ್ಣನ ಅಮೃತವಾಣಿ. ನಮ್ಮ ಬದುಕಿನಲ್ಲಿ ನಡೆಯುತ್ತಿರುವ ಎಲ್ಲ ಆಗು ಹೊಗುಗಳಿಗೂ ನೋವು ನಲಿವುಗಳಿಗೂ ಸುಖದುಃಖಗಳಿಗೂ ನಮ್ಮ ಮನಸ್ಸೇ ಕಾರಣ ಎಂಬುದು ಇದರ ತಾತ್ಪರ್ಯ. ಹಾಗಾಗಿ ಈ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳುವುದರ ಮೂಲಕ ಚಿಂತೆಗಳನ್ನು ನಿಯಂತ್ರಿಸಬಹುದು.

ಇದನ್ನೂ ಓದಿ | ಸುವಿಚಾರ ಅಂಕಣ | ಮೇಲು ಕೀಳು ಕಾಡದ ಗಾಢ ಗೆಳೆತನದ ರಹಸ್ಯ ಇಲ್ಲಿದೆ!

Exit mobile version