Site icon Vistara News

ಸುವಿಚಾರ ಅಂಕಣ | ಮೇಲು ಕೀಳು ಕಾಡದ ಗಾಢ ಗೆಳೆತನದ ರಹಸ್ಯ ಇಲ್ಲಿದೆ!

friendship

ಗುಣ, ಶೀಲ, ವ್ಯಸನ, ವ್ಯವಹಾರಗಳಲ್ಲಿ ಪರಸ್ಪರ ಸಮಾನತೆಯಿದ್ದಾಗ ಸ್ನೇಹವು ಬೆಳೆಯುತ್ತದೆ ಎಂಬುದಾಗಿ ಸುಭಾಷಿತವೊಂದು ಹೇಳುತ್ತದೆ. ಹಾಗೆ ಗಮನಿಸಿ ನೋಡಿದರೆ ಇದು ಸತ್ಯವೂ ಕೂಡ. ಅವರವರ ಹವ್ಯಾಸ, ಅಭಿರುಚಿ, ಮಾತು, ವ್ಯವಹಾರಗಳು ಅವರವರದೇ ಗುಣಸ್ವಭಾವದವರನ್ನು ಆಕರ್ಷಿಸುತ್ತವೆ. ಕವಿಯೊಬ್ಬ ಸ್ನೇಹವನ್ನು ಬಯಸಿದರೆ ಅದು ಇನ್ನೊಬ್ಬ ಕವಿಯೊಂದಿಗೆ ಹೊರತು ವಿಭಿನ್ನ ಹವ್ಯಾಸಿಯೊಂದಿಗಲ್ಲ! ಕಲಾವಿದನ ಸ್ನೇಹ ಇನ್ನೊಬ್ಬ ಕಲಾವಿದನೊಂದಿಗೆ. ಅಷ್ಟೇ ಏಕೆ ಕಳ್ಳನೊಬ್ಬ ಸ್ನೇಹ ಬಯಸುವುದು ಮತ್ತೊಬ್ಬ ಕಳ್ಳನೊಂದಿಗೇ. ಅಂತೆಯೇ ವ್ಯಸನಿಯೊಬ್ಬ ಇನ್ನೊಬ್ಬ ವ್ಯಸನಿಯೊಂದಿಗೆ ಮಾತ್ರವೇ ಸ್ನೇಹ ಬೆಳೆಸುತ್ತಾನೆಯೇ ಹೊರತು ಬೇರೆಯವರೊಂದಿಗಲ್ಲ.

ಸಖ್ಯ ಅಥವಾ ಸ್ನೇಹ ಎಂಬುದೊಂದು ಮಧುರವಾದ ಭಾವಬಾಂಧವ್ಯ. ಅದೊಂದು ಅತ್ಯಂತ ಪವಿತ್ರವಾದ, ಸುಂದರವಾದ, ಮನೋಜ್ಞವಾದ, ಹೃದಯಂಗಮವಾದ ಭಾವನೆ. ಇದು ಪರಸ್ಪರರ ಹೃದಯಗಳನ್ನು ಬೆಸೆಯುತ್ತದೆ. ಆ ಹೃದಯಗಳು ಎಂದೆಂದಿಗೂ ಬೇರಾಗದ ಹಾಗೆ ಶಾಶ್ವತವಾಗಿ ನೆಲೆನಿಲ್ಲುವಂತೆ ಮಾಡುತ್ತದೆ.

ಸಂಸ್ಕೃತದಲ್ಲಿ ‘ಸ್ನೇಹ’ ಎಂದರೆ ಜಿಡ್ಡು, ಅಂಟು ಎಂಬ ಅರ್ಥವಿದೆ. ಎರಡು ವಸ್ತುಗಳನ್ನು ಮತ್ತೆ ಬಿಡದಂತೆ ಪರಸ್ಪರ ಜೋಡಿಸುವುದು ಅದರ ಗುಣ. ಒಮ್ಮೆ ಅಂಟಿದ ಜಿಡ್ಡು ಎಷ್ಟು ತೊಳೆದರೂ ಹೋಗದು. ಹಾಗೆಯೇ ಪರಸ್ಪರ ಪರಿಶುದ್ಧ ಸ್ನೇಹ ಒಮ್ಮೆ ಮೂಡಿತೆಂದರೆ ಅದನ್ನು ಅಳಿಸುವುದು ಬಹಳವೇ ಕಷ್ಟ. ಅಷ್ಟು ಗಾಢವಾದದ್ದು ಈ ಸ್ನೇಹ.

ಪ್ರತಿಯೊಬ್ಬನಿಗೂ ಒಬ್ಬ ಒಳ್ಳೆಯ ಸ್ನೇಹಿತನ ಅವಶ್ಯಕತೆಯಿದೆ. ಸ್ನೇಹಿತನಿಲ್ಲದ ಬದುಕು ಬರಡು, ನಿರರ್ಥಕ. ಒಳ್ಳೆಯ ಸ್ನೇಹಿತನನ್ನು ಒಬ್ಬ ಗುರುವಿಗೆ, ಒಬ್ಬ ದಾರ್ಶನಿಕನಿಗೆ ಹೋಲಿಸುತ್ತಾರೆ. ಸಂಸ್ಕೃತದ ಪ್ರಸಿದ್ಧ ಸುಭಾಷಿತಕಾರ, ಕವಿ ಭರ್ತೃಹರಿ ತನ್ನ ನೀತಿಶತಕದ ಪದ್ಯವೊಂದರಲ್ಲಿ ಮೈತ್ರಿಯ ಪರಿಶುದ್ಧ ಸ್ವರೂಪವನ್ನು, ಮಿತ್ರತ್ವದ ಲಕ್ಷಣವನ್ನು ಹೀಗೆ ಪ್ರತಿಪಾದಿಸುತ್ತಾನೆ.

ಪಾಪಾನ್ನಿವಾರಯತಿ ಯೋಜಯತೇ ಹಿತಾಯ
ಗುಹ್ಯಾನ್ನಿಗೂಹತಿ ಗುಣಾನ್ ಪ್ರಕಟೀಕರೋತಿ|
ಆಪದ್ಗತಂ ಚ ನ ಜಹಾತಿ ದದಾತಿ ಕಾಲೇ
ಸನ್ಮಿತ್ರಲಕ್ಷಣಮಿದಂ ಪ್ರವದಂತಿ ಸಂತಃ||

‘ಪಾಪಕಾರ್ಯಗಳನ್ನು ಮಾಡದಂತೆ ನಮ್ಮನ್ನು ತಡೆಯುವವನು ನಮ್ಮ ನಿಜವಾದ ಮಿತ್ರ. ಅವನು ನಮ್ಮನ್ನು ಹಿತಮಾರ್ಗದಲ್ಲಿ, ಸತ್ಕಾರ್ಯದಲ್ಲಿ ತೊಡಗಿಸುತ್ತಾನೆ. ಬಹಿರಂಗವಾಗಬಾರದ ರಹಸ್ಯಗಳನ್ನು ಗುಟ್ಟಾಗಿಯೇ ಇರಿಸುತ್ತಾನೆ. ಅಂದರೆ ಅಂತರಂಗದ ಗುಟ್ಟನ್ನು ಎಂದಿಗೂ, ಯಾರಿಗೂ ಬಿಟ್ಟುಕೊಡುವುದಿಲ್ಲ. ಅಸೂಯೆಪಡದೇ ನಮ್ಮ ಸದ್ಗುಣಗಳನ್ನು ಬೆಳಕಿಗೆ ತರುತ್ತಾನೆ. ಕಷ್ಟಕಾಲದಲ್ಲಿ ಎಂದಿಗೂ ನಮ್ಮ ಕೈ ಬಿಡುವುದಿಲ್ಲ. ಸಕಾಲದಲ್ಲಿ ಸಹಾಯ ಮಾಡುತ್ತಾನೆ. ಇದನ್ನೇ ಸಜ್ಜನರು ಸನ್ಮಿತ್ರಲಕ್ಷಣ ಎಂದು ಕರೆದಿದ್ದಾರೆ.

ಇದನ್ನೂ ಓದಿ| ಸುವಿಚಾರ ಅಂಕಣ | ಪಾಪ ಕಳೆದುಕೊಳ್ಳಲು ಪುಣ್ಯಕ್ಷೇತ್ರಕ್ಕೆ ಹೋದರೆ, ಅಲ್ಲಿ ಮಾಡುವುದೇನು?

ಶುದ್ಧವಾದ ಸ್ನೇಹಕ್ಕೆ ತೆರಬೇಕಾದ ಬೆಲೆ ಅಪಾರವಾದದ್ದು. ಅದಕ್ಕೆ ಅತ್ಯಂತ ಸಹನೆ ಬೇಕು. ಬಹು ದೊಡ್ಡ ತ್ಯಾಗಗುಣವಿರಬೇಕು. ಗರಗಸದ ಉದಾಹರಣೆಯನ್ನು ನೋಡಿ. ಹೋಗುವಾಗಲೂ ಬರುವಾಗಲೂ ಕೊಯ್ಯುವ ಗರಗಸದಂತೆ ಸ್ನೇಹವು ಸಣ್ಣಪುಟ್ಟ ಸಂದರ್ಭಗಳಲ್ಲಿಯೂ ಪರೀಕ್ಷೆಗೆ ಒಳಗಾಗುತ್ತದೆ. ಅದನ್ನೆಲ್ಲ ಮೆಟ್ಟಿ ನಿಂತು ನಿಜವಾದ ಮೈತ್ರಿಯನ್ನು ಪ್ರಸ್ತುತಪಡಿಸುವುದೇ ಉತ್ತಮವಾದ ಸ್ನೇಹ.

ಸ್ನೇಹಸಂಬಂಧವು ರಕ್ತಸಂಬಂಧಕ್ಕಿಂತಲೂ ಹಿರಿದಾದದ್ದು ಎಂಬುದು ಸರ್ವಾನುಮತ. ನಮಗೆ ಕೂಡಿ ಬರುವ ಸಂಬಂಧಗಳು ಕೆಲವೊಮ್ಮೆ ಆಕಸ್ಮಿಕ ಹಾಗೂ ಕೆಲವೊಮ್ಮೆ ಆನುವಂಶಿಕವಾದವುಗಳು. ಆದರೆ ಸ್ನೇಹ ಹಾಗಲ್ಲ, ಅದು ನಮ್ಮದೇ ಆಯ್ಕೆಯದು. ನಾವು ನಮಗೆ ಇಷ್ಟವಾಗುವ ಸಮಾನ ಗುಣಸ್ವಭಾವಗಳನ್ನು ಹೊಂದಿರುವ ಮಿತ್ರನನ್ನು ಆಯ್ಕೆ ಮಾಡಬಹುದು. ಆದರೆ ಸಂಬಂಧಗಳು ಹಾಗಲ್ಲ, ಅವು ಪೂರ್ವನಿರ್ಧಾರಿತವಾಗಿರುತ್ತವೆ. ಸ್ನೇಹವು ಸಾಮಾಜಿಕವಾದದ್ದು. ಸಮಾಜದ ಯಾವುದೇ ವರ್ಗದ ವ್ಯಕ್ತಿಯೂ ನಮ್ಮ ಸ್ನೇಹಿತನಾಗಬಲ್ಲ.

ಸಂಬಂಧಿಗಳೇ ಸ್ನೇಹಿತರಾಗಬಹುದಲ್ಲ! ಎಂದರೆ ಅದು ಸರಿಯಲ್ಲ. ಸಂಬಂಧಿಗಳೆಲ್ಲ ಸ್ನೇಹಿತರಾಗುವುದಿಲ್ಲ. ಅಲ್ಲೊಂದಿಷ್ಟು ಭಿನ್ನತೆಗಳು ಕಂಡುಬರುತ್ತವೆ. ಆದರೆ ಸ್ನೇಹಿತರು ಮಾತ್ರವೇ ಈ ಎಲ್ಲ ಭಿನ್ನತೆಗಳ ಹೊರತಾಗಿ ನಮ್ಮನ್ನು ಸಂಧಿಸಬಲ್ಲರು. ಅಷ್ಟೇ ಅಲ್ಲ, ಸ್ನೇಹಿತರು ಮಾತ್ರವೇ ಸಂಬಂಧಿಗಳಿಗಿಂತ ಹೆಚ್ಚಿನವರಾಗಿ ನಮ್ಮೊಂದಿಗಿರಬಲ್ಲರು.

ಪ್ರಾಚೀನ ಕಾಲದ ಕಥೆಗಳನ್ನು ಅವಲೋಕಿಸಿದಾಗ ಗೆಳೆತನಕ್ಕೆ ಜಾತಿಗಳ ಗೋಡೆಗಳಿಲ್ಲ, ವಿಭಿನ್ನ ಜಾತಿಯವರ ಸ್ನೇಹವನ್ನು ಗಮನಿಸಿದ್ದೇವೆ. ಸ್ನೇಹಕ್ಕೆ ಮತಭೇದಗಳ ಗೊಂದಲವಿಲ್ಲ. ಅನ್ಯಾನ್ಯ ಮತಗಳವರು ಸ್ನೇಹಿತರಾಗಬಹುದು. ವಯಸ್ಸಿನ ಅಂತರವಿಲ್ಲ. ಭಾಷಾಭೇದಗಳಿಲ್ಲ, ಬಡತನ-ಸಿರಿತನವೆಂಬ ಭೇದವಿಲ್ಲ. ಸ್ಥಾನಮಾನಗಳ ಹಂಗಿಲ್ಲ. ಮೇಲು ಕೀಳುಗಳೆಂಬ ತಾರತಮ್ಯವಿಲ್ಲ. ಈ ಎಲ್ಲ ಅಡೆತಡೆಗಳನ್ನೂ ಮೀರಿ ಮಿತ್ರತ್ವ ವಿಜೃಂಭಿಸುತ್ತದೆ.

ಇದನ್ನೂ ಓದಿ | ಧೀಮಹಿ ಅಂಕಣ | ಕಾಲದೇಶದ ಸ್ಮರಣೆಯ ಮಹಾಸಂಕಲ್ಪ

ಆದರೆ ಸಂಬಂಧಕ್ಕೆ ಈ ಭೇದಗಳು ಸರ್ವೇಸಾಮಾನ್ಯ. ಪ್ರತಿಯೊಬ್ಬರೂ, ಜಾತಿ, ಮತ, ವಯಸ್ಸು, ಭಾಷೆ, ಸಂಪತ್ತು, ಸ್ಥಾನ-ಮಾನಗಳು, ಮೇಲು-ಕೀಳುಗಳೆಂಬ ವಿಷಯಗಳ ಆಧಾರದ ಮೇಲೆಯೇ ಸಂಬಂಧವು ಬೆಳೆಯುವುದು. ಆದ್ದರಿಂದ ರಕ್ತಸಂಬಂಧಕ್ಕಿಂತ ಸ್ನೇಹವೇ ಅತ್ಯುತ್ಕೃಷ್ಟವಾದದ್ದು.

ಅಂತಹ ಪರಿಶುದ್ಧ ಅಂತಃಕರಣದ ಸ್ನೇಹಿತರನ್ನು ಅರಸೋಣ, ಅವರ ಸ್ನೇಹದ ಸಿಂಚನದಲ್ಲಿ ಮಿಂದು ಪುನೀತರಾಗೋಣ.

Exit mobile version