Site icon Vistara News

ಸುವಿಚಾರ ಅಂಕಣ | ಪಾಪ ಕಳೆದುಕೊಳ್ಳಲು ಪುಣ್ಯಕ್ಷೇತ್ರಕ್ಕೆ ಹೋದರೆ, ಅಲ್ಲಿ ಮಾಡುವುದೇನು?

punyakshetra

ಸಾಮಾನ್ಯವಾಗಿ ಜನರು ಪುಣ್ಯಕ್ಷೇತ್ರಗಳಿಗೆ ಯಾಕೆ ಹೋಗುತ್ತಾರೆ? ಇನ್ಯಾಕೆ ಹೋಗ್ತಾರೆ? ಭಗವಂತನ ದರ್ಶನ ಮಾಡಿ, ಹಣ್ಣು, ಹೂವುಗಳನ್ನು ಅರ್ಪಿಸಿ, ಕೈಲಾದ ಸೇವೆಗಳನ್ನು ಮಾಡಿ ಅದರಿಂದ ದೊರೆಯಬಹುದಾದ ಪುಣ್ಯಸಂಪಾದನೆಗಾಗಿ ಮಂದಿರಗಳಿಗೆ ಹೋಗುತ್ತಾರೆ. ಇದೇ ಭಾವನೆಯಿಂದ ಭಕ್ತಿಶ್ರದ್ಧೆಗಳ ಮೂಲಕ ಭಗವಂತನ ದರ್ಶನವಾದರೆ ಅದು ಶ್ರೇಷ್ಠ. ಅದು ಹಾಗಾಗದೇ ಮೋಜುಮಸ್ತಿಗಳಿಗೋ, ಇಲ್ಲ ಪ್ರವಾಸದ ದೃಷ್ಟಿಯಿಂದಲೋ ಪುಣ್ಯಕ್ಷೇತ್ರಗಳಿಗೆ ಹೋದಾಗ ಅದು ಪರಿಪೂರ್ಣವಾಗುವುದಿಲ್ಲ. ಪುಣ್ಯಕ್ಷೇತ್ರಗಳಿಗೆ ಹೋಗಿಯೂ ಪಾಪಕರ್ಮಗಳನ್ನು ಮಾಡಿ ಅದರ ಫಲವನ್ನು ಕಟ್ಟಿಕೊಂಡು ಮನೆಗೆ ಬರುತ್ತೇವೆ. ಆದರೆ ಒಂದು ಸತ್ಯ ಅವರಿಗೆ ಅರ್ಥವಾಗಿರುವುದಿಲ್ಲ, ಅದೇನು ಗೊತ್ತಾ? ತಾವು ಮಾಡುವ ಕಾರ್ಯಗಳ ಮೂಲಕ ಇನ್ನಷ್ಟು ಪಾಪಗಳನ್ನು ನಾವು ಕಟ್ಟಿಕೊಳ್ಳುತ್ತಿದ್ದೇವೆ ಎಂಬ ಸತ್ಯದ ಅರಿವು ಅವರಿಗಿರುವುದಿಲ್ಲ.

ಅದಕ್ಕೊಬ್ಬ ಸುಭಾಷಿತಕಾರನು ಬಹಳ ಸ್ಪಷ್ಟವಾಗಿ ಹೀಗೆ ನುಡಿದಿದ್ದಾನೆ.
ಅನ್ಯಕ್ಷೇತ್ರೇ ಕೃತಂ ಪಾಪಂ ಪುಣ್ಯಕ್ಷೇತ್ರೇ ವಿನಶ್ಯತಿ|
ಪುಣ್ಯಕ್ಷೇತ್ರೇ ಕೃತಂ ಪಾಪಂ ವಜ್ರಲೇಪೋ ಭವಿಷ್ಯತಿ||

ಅನ್ಯಕ್ಷೇತ್ರಗಳಲ್ಲಿ ಮಾಡಿದ ಪಾಪಕರ್ಮದ ಫಲವು ಪುಣ್ಯಕ್ಷೇತ್ರದಲ್ಲಿ ಕಳೆಯುತ್ತದೆ, ಪುಣ್ಯಕ್ಷೇತ್ರಗಳಲ್ಲಿ ಮಾಡಿದ ಪಾಪಕರ್ಮಗಳ ಫಲವು ವಜ್ರಲೇಪದಂತೆ ಶಾಶ್ವತವಾಗಿಬಿಡುತ್ತದೆ ಎಂಬುದು ಈ ಶ್ಲೋಕದ ತಾತ್ಪರ್ಯ.

ಅನ್ಯಕ್ಷೇತ್ರಗಳಲ್ಲಿ ಅಂದರೆ ಎಲ್ಲೆಲ್ಲೋ ಮಾಡಿದ ಪಾಪಕರ್ಮಗಳ ಫಲಗಳನ್ನು ಪುಣ್ಯಕ್ಷೇತ್ರದ ಸಂದರ್ಶನ ಮಾಡಿ, ಅಲ್ಲಿ ಭಗವಂತನನ್ನು ಅರ್ಚಿಸಿ ಕಳೆದುಕೊಳ್ಳಬಹುದು ಎಂಬುದು ಎಲ್ಲರ ನಂಬಿಕೆ. ಆದ್ದರಿಂದಲೇ ಜನರು ಪುಣ್ಯಕ್ಷೇತ್ರಗಳಲ್ಲಿ ಪಾಪಕರ್ಮಗಳನ್ನು ಕಳೆದುಕೊಳ್ಳುವುದಕ್ಕೆ ಹೋಗುತ್ತಾರೆ. ಆದರೆ, ಆ ಪುಣ್ಯಕ್ಷೇತ್ರದಲ್ಲೇ ಪಾಪ ಮಾಡಿದರೆ? ಆ ಪಾಪಕರ್ಮಗಳು ವಜ್ರಲೇಪದಂತೆ ಶಾಶ್ವತವಾಗಿ ನಮ್ಮನ್ನು ಅಂಟಿಕೊಳ್ಳುತ್ತವೆ. ಅದನ್ನು ಎಂದಿಗೂ ಬಿಡಿಸಿಕೊಳ್ಳಲಾಗದು.

ಸಕಲ ಜೀವಿಗಳಲ್ಲಿ ಮನುಷ್ಯ ಅತ್ಯಂತ ಬುದ್ಧಿವಂತ. ದೇವರು ಮನುಷ್ಯನಿಗೆ ವಿಶೇಷವಾದ ವಾಕ್‌ಶಕ್ತಿಯನ್ನು, ಬುದ್ಧಿಶಕ್ತಿಯನ್ನು ಕೊಟ್ಟಿದ್ದಾನೆ. ಆ ಎರಡು ಅದ್ಭುತವಾದ ಮತ್ತು ಇತರ ಜೀವಿಗಳಿಗೆ ಅಲಭ್ಯವಾದ ಶಕ್ತಿಗಳನ್ನು ಉಪಯೋಗಿಸಿಕೊಂಡು ಇತರ ಎಲ್ಲ ಜೀವಜಂತುಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದ್ದಾನೆ. ಕೇವಲ ಇಷ್ಟಾದರೆ ಸಾಲದು, ತನ್ನ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕೆಂಬುದು ಆತನ ಜೀವನದ ಉದ್ದೇಶವಾಗಬೇಕು. ಅಷ್ಟೇ ಅಲ್ಲ, ಈ ಶಕ್ತಿಗಳನ್ನು ಬಳಸಿಕೊಂಡು ಮಾನವ ಮೋಕ್ಷಸಾಧನೆಯನ್ನು ಮಾಡಬೇಕು ಎಂದು ಹೇಳುತ್ತಾರೆ. ಆದರೆ, ಮನುಷ್ಯ ಇಂದು ಹಾಗೆ ಮಾಡುತ್ತಿಲ್ಲ. ಅನೇಕ ದುಷ್ಕಾರ್ಯಗಳ ಮೂಲಕ ಇನ್ನಷ್ಟು ಪಾಪಗಳನ್ನು ತನ್ನ ಬೆನ್ನಲ್ಲಿ ಹೊತ್ತುಕೊಳ್ಳುತ್ತಿದ್ದಾನೆ.

ತಿಳಿದೋ, ತಿಳಿಯದೆಯೋ ನಾವು ಅಕರ್ಮಗಳನ್ನು ಮಾಡಿರುತ್ತೇವೆ. ಅವುಗಳ ಫಲವನ್ನು ನಾವೇ ಅನುಭವಿಸಬೇಕು ಇದು ನಿಶ್ಚಿತ. ಇಂತಹ ಪಾಪಕರ್ಮಗಳ ತೀವ್ರತೆಯನ್ನು ಕಡಿಮೆ ಮಾಡಿಕೊಂಡು ಅವುಗಳಿಂದ ಪರಿಹಾರ ಪಡೆದುಕೊಳ್ಳುವುದಕ್ಕೆ ತೀರ್ಥಕ್ಷೇತ್ರಗಳ ಸಂದರ್ಶನ ಮಾಡಬೇಕು ಎನ್ನುವುದು ಬಹುಕಾಲದಿಂದ ನಮ್ಮ ನೆಲದಲ್ಲಿ ಅನೂಚಾನವಾಗಿ ರೂಢಿಸಿಕೊಂಡು ಬಂದಿರುವ ನಂಬಿಕೆ ಹಾಗೂ ಸಂಪ್ರದಾಯ. ಆದ್ದರಿಂದಲೇ ಭಾರತದಲ್ಲಿ ಹೆಜ್ಜೆ ಹೆಜ್ಜೆಗೂ ಪುಣ್ಯಕ್ಷೇತ್ರಗಳಿವೆ. ಅಸಂಖ್ಯ ಶಕ್ತಿಕ್ಷೇತ್ರಗಳಿವೆ. ಸುಂದರವಾದ ದೇವಾಲಯಗಳಿವೆ. ಅವುಗಳನ್ನು ಸಂದರ್ಶನ ಮಾಡುವುದರಿಂದ ನಮ್ಮ ಪಾಪ ಪರಿಹಾರವಾಗುತ್ತದೆ. ಆದರೆ, ಮನುಷ್ಯನು ಭಕ್ತಿ, ಶ್ರದ್ಧೆ-ನಂಬಿಕೆಗಳಿಂದ ನಡೆದುಕೊಳ್ಳಬೇಕು. ಅಷ್ಟೇ ಅಲ್ಲ, ಆ ಕ್ಷೇತ್ರಗಳ ರೀತಿ, ನೀತಿ, ನಿಯಮಗಳನ್ನು ಅರಿತು ನಡೆಯಬೇಕು. ಹಾಗೆ ನಡೆದುಕೊಳ್ಳದೆ ನಮ್ಮ ಮನಸ್ಸಿಗೆ ಬಂದಂತೆ ನಡೆದುಕೊಂಡರೆ ಅದು ಪಾಪಕರ್ಮದ ಫಲವನ್ನು ಕೊಡುತ್ತದೆ. ಯಾವುದೇ ಕಷ್ಟ, ನಷ್ಟ ನೋವುಗಳನ್ನು ಅನುಭವಿಸಿದಾಗ ಭಗವಂತ ನೆಲಸಿರುವಂತಹ ಶಕ್ತಿಕ್ಷೇತ್ರಗಳ ದರ್ಶನ ಮಾಡುವುದು ಸಹಜ. ತೀರ್ಥಕ್ಷೇತ್ರದ ಸಂದರ್ಶನದಿಂದ, ಭಗವಂತನ ದರ್ಶನದಿಂದ ಈ ಜನ್ಮದಲ್ಲಿ ತಿಳಿದೋ, ತಿಳಿಯದೆಯೋ ಮಾಡಿದ ದುಷ್ಕರ್ಮಗಳ ಪಾಪವು ನಿವೃತ್ತಿಯಾಗುವುದು ಇದರ ಉದ್ದೇಶ.

ಹಿಂದೆಲ್ಲ ಈ ತೀರ್ಥಯಾತ್ರೆಯನ್ನು ಕಾಲ್ನಡಿಗೆಯಲ್ಲಿ ಮಾಡುತ್ತಿದ್ದರು. ಅತ್ಯಂತ ಭಯ ಭಕ್ತಿಗಳಿಂದ ಅಲ್ಲಿಯ ರೀತಿ ನೀತಿಗಳನ್ನು ಪಾಲಿಸುತ್ತಿದ್ದರು ಮತ್ತು ಅಲ್ಲಿಯ ಪ್ರಕೃತಿ ಹಾಗೂ ನಿಯಮಗಳಿಗನುಗುಣವಾಗಿ ತಮ್ಮ ನಡತೆಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದರು.
ಆದರಿಂದು ಮನುಷ್ಯ ಸಂಪತ್ತಿನ ಸುಖದಲ್ಲಿ ತೇಲುತ್ತಿದ್ದಾನೆ. ಪುಣ್ಯಕ್ಷೇತ್ರಗಳಿಗೆ ಹೋದಾಗ ಅಲ್ಲಿಯೂ ತನ್ನ ಸುಖ ಹಾಗೂ ಸ್ವಾರ್ಥವನ್ನೇ ಬಯಸುತ್ತಾನೆ. ಅಲ್ಲಿಯ ವ್ಯವಸ್ಥೆಗಳ ಬಗ್ಗೆ ಅವನಿಗೆ ಅಸಮಾಧಾನವಾಗುತ್ತದೆ. ಕೋಪತಾಪಗಳನ್ನು ಪ್ರದರ್ಶಿಸುತ್ತಾನೆ. ಈ ವರ್ತನೆಯಿಂದ ಪಾಪಗಳನ್ನು ಕಳೆದುಕೊಳ್ಳುವುದರ ಬದಲು ಇನ್ನಷ್ಟು ಪಾಪಗಳನ್ನು ಕಟ್ಟಿಕೊಳ್ಳುತ್ತಿದ್ದಾನೆ. ಪುಣ್ಯಕ್ಷೇತ್ರಕ್ಕೆ ಹೋಗಿಯೂ ಪಾಪಕರ್ಮಗಳನ್ನು ತೊಳೆದುಕೊಳ್ಳಲಾಗದೇ ಇನ್ನಷ್ಟು ಪಾಪದ ಫಲವನ್ನು ಹೊತ್ತು ತರುತ್ತಿದ್ದಾನೆ.

ಇದನ್ನೂ ಓದಿ: ಧೀಮಹಿ ಅಂಕಣ: ಈ ನೆಲದ ಮೊದಲ ವೈದಿಕ ರಾಷ್ಟ್ರಗೀತೆ ಇದು! ಅಂದಿನ ಆಡಳಿತ ಹೀಗಿತ್ತು

ಪುಣ್ಯಕ್ಷೇತ್ರಗಳಿಗೆ ಹೋದಾಗ ಅನ್ಯಮನಸ್ಕನಾಗದೇ ತೀರ್ಥಸ್ನಾನ, ದೇವದರ್ಶನ, ಭಗವಂತನ ಸೇವೆ, ಪೂಜೆ, ಜಪ, ತಪ, ಹೋಮ, ದಾನ, ಧ್ಯಾನಾದಿಗಳ ಬಗ್ಗೆ ನಿರಂತರ ಚಿಂತನೆಯಿರಬೇಕು. ಅನ್ಯ ಲೌಕಿಕ ವಿಷಯಗಳನ್ನು ಮರೆಯುವುದಕ್ಕೆಯೇ ನಾವಲ್ಲಿಗೆ ಹೋಗುವುದಲ್ಲವೇ? ಅಲ್ಲಿ ಹೋಗಿಯೂ ಲೌಕಿಕ ವಿಷಯಚಿಂತನೆಯೇ ಪ್ರಧಾನವಾದರೆ?

ಕ್ಷೇತ್ರದರ್ಶನದ ವಿಷಯದಲ್ಲಿ ಭಕ್ತಿ, ಶ್ರದ್ಧೆ, ನಂಬಿಕೆಗಳ ಕೊರತೆಯಿದೆ. ಅದರಿಂದಲೇ ನಾವು ಇನ್ನಷ್ಟು ತಪ್ಪುಗಳನ್ನು ಮಾಡುತ್ತೇವೆ. ಆದ್ದರಿಂದ ಪುಣ್ಯಕ್ಷೇತ್ರಗಳ ದರ್ಶನ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಅಲ್ಲಿನ ನಿಯಮಾವಳಿಗಳನ್ನು ಎಂದಿಗೂ ಮೀರಬಾರದು. ನಾವೆಷ್ಟೇ ಪುಣ್ಯಕ್ಷೇತ್ರಗಳ ದರ್ಶನ ಮಾಡಿಬಂದರೂ ಸಹ ಪಾಪ ಪರಿಹಾರವಾಗಿಲ್ಲವಲ್ಲ! ಎಂದು ಕೆಲವರು ಕೆಲವೊಮ್ಮೆ ಹೇಳುವ ಮಾತನ್ನು ಕೇಳಿದ್ದೇವೆ. ಕಾರಣ ಇಷ್ಟೆ. ಮನಸ್ಸಿಗೆ ಶಾಂತಿಯಿಲ್ಲದೆ, ನೀತಿನಿಯಮಗಳ ಪರಿಪಾಲನೆ ಮಾಡದೇ, ಸತ್ಕರ್ಮಗಳ ಆಚರಣೆಯಿಲ್ಲದೆ, ಭಗವಂತನಲ್ಲಿ ಶ್ರದ್ಧೆ, ಭಕ್ತಿಗಳಿಲ್ಲದೆ ಮಾಡಿದ ಯಾವ ಪುಣ್ಯಕ್ಷೇತ್ರ ಸಂದರ್ಶವೂ ಕೂಡ ಫಲಿಸುವುದಿಲ್ಲ. ಯಾರೋ ಹೇಳಿದರು ಅಂತಲೋ, ಜ್ಯೋತಿಷಿಗಳು ಹೇಳಿದರು ಅಂತಲೋ, ಹಿರಿಯರು ಹೇಳಿದರು ಅಂತಲೋ ಯಾವುದೇ ಪುಣ್ಯಕ್ಷೇತ್ರದ ಸಂದರ್ಶನ ಮಾಡಿ ಪುಣ್ಯಕಾರ್ಯವನ್ನು ಮಾಡುವುದರಿಂದ ಫಲವು ದೊರೆಯದು.

ಇದನ್ನೂ ಓದಿ: ರಾಜ ಮಾರ್ಗ ಅಂಕಣ | ರಕ್ಷಾಬಂಧನದ ಗೌರವ ಕಾಪಾಡಿದ ಮೊಗಲ್ ದೊರೆ ಹುಮಾಯೂನ್

ಪುಣ್ಯಕ್ಷೇತ್ರಗಳಿಗೆ ಅದರದೇ ಆದ ಪಾವಿತ್ರ್ಯವಿದೆ. ಮಂದಿರಗಳಿಗೆ ಸಮಾಧಾನ ಚಿತ್ತನಾಗಿ ಹೋಗಬೇಕು. ಅದೇ ಸಮಾಧಾನ ಸ್ಥಿತಿಯಲ್ಲಿಯೇ ಭಗವಂತನನ್ನು ಅರ್ಚಿಸಬೇಕು. ಅದನ್ನು ಬಿಟ್ಟು ಕಂಡಕಂಡಲ್ಲಿ ಉಗುಳುವುದು, ಸ್ನಾನ ಮಾಡುವಾಗ ಅಶೌಚ ಮಾಡುವುದು, ಎಲ್ಲೆಂದರಲ್ಲಿ ಕಸ ಎಸೆಯುವುದು, ಅವಾಚ್ಯ ಪದಗಳಿಂದ ಮಾತನಾಡುವುದು, ಭಕ್ತಿಯೇ ಇಲ್ಲದೇ ಭಗವಂತನ ಸೇವೆ ಮಾಡುವುದು, ದೇವಸ್ಥಾನಕ್ಕೆ ಗಡಿಬಿಡಿಯಿಂದ ಹೋಗಿಬರುವುದು, ಭಗವಂತನ ನಾಮಸ್ಮರಣೆಗಿಂತ ಲೌಕಿಕ ವಿಷಯಗಳ ಬಗ್ಗೆಯೇ ಹೆಚ್ಚು ಚಿಂತನೆ ಮಾಡುವುದು, ಮಾತಾಡುವುದು. ಇವೆಲ್ಲವೂ ಕೂಡ ನಾವು ಪುಣ್ಯಕ್ಷೇತ್ರಗಳನ್ನು ಸಂದರ್ಶನ ಮಾಡಿದಾಗ ಕಟ್ಟಿಕೊಳ್ಳುವ ಪಾಪದ ಮೂಟೆಗಳು. ಇದರಿಂದ ದೂರವಾಗುವುದು ಹೇಗೆಂದು ನಾವೇ ಚಿಂತನೆ ಮಾಡಬೇಕಾಗಿದೆ.

(ಡಾ.ಗಣಪತಿ ಹೆಗಡೆ ಅವರು ಸಂಸ್ಕೃತ ಉಪನ್ಯಾಸಕರು, ಬರಹಗಾರರು. ನಾನಾ ನಿಯಕತಕಾಲಿಕೆಗಳಲ್ಲಿ ಇವರ ಅಂಕಣಗಳು ಪ್ರಕಟವಾಗುತ್ತವೆ.)

Exit mobile version