ಬೆಂಗಳೂರಿನಲ್ಲಿ ಮಾತೆ ಹಿಂಗ್ಲಾಜ್ ದೇವಸ್ಥಾನದ ವಿಧ್ಯುಕ್ತ ಉದ್ಘಾಟನೆ ಅನೇಕ ಕಾರಣಗಳಿಗಾಗಿ ಐತಿಹಾಸಿಕವಾಗಿ ಮಹತ್ವವಾದುದು. ಇದು ಸನಾತನ ಧರ್ಮ ಸಂರಕ್ಷಣೆಯ ಒಂದು ಸೂಚನೆ ಮತ್ತು ಹಿಂದೂ ಸಮುದಾಯದ ಸಾಮೂಹಿಕ ಪ್ರಯತ್ನದ ಶಾಂತ ಸುಂದರ ಅಭಿವ್ಯಕ್ತಿ. ಇದು ಸಂಪೂರ್ಣವಾಗಿ ʻಖತ್ರಿʼ ಸಮುದಾಯದ ಹಿಂದೂ ಕುಟುಂಬಗಳ ವೈಯಕ್ತಿಕ ಕೊಡುಗೆಯಿಂದಲೇ ನಿರ್ಮಿತವಾದುದು. ಖಂಡಿತವಾಗಿಯೂ ಈ ಕುಟುಂಬಗಳ ಸಂಖ್ಯೆ ಬೆಂಗಳೂರಿನಲ್ಲಿ 140ಕ್ಕಿಂತ ಹೆಚ್ಚಿರಲಿಕ್ಕಿಲ್ಲ. ದೇವಾಲಯದ ಅಭಿವೃದ್ಧಿಗೆ ಇವರ ಭಾರಿ ಬದ್ಧತೆಯು ಭಾರತದಾದ್ಯಂತ ಇರುವ ಈ ಸಮುದಾಯದಿಂದ ವ್ಯಕ್ತವಾಗಿದೆ. ಇದರ ಆರಂಭಿಕ ವೆಚ್ಚ ಸುಮಾರು ಮೂರು ಕೋಟಿ ರೂ. ನಿರ್ವಹಣೆ ವೆಚ್ಚ ಹೆಚ್ಚಿರಲಾರದು.
ಮಾತಾ ಹಿಂಗ್ಲಜ್‌ನ ಮುಖ್ಯ ಸಿದ್ಧ ಪೀಠ ಬಲೂಚಿಸ್ತಾನದಲ್ಲಿದೆ. ಈಕೆ ಕ್ಷತ್ರಿಯರ ಕುಲದೇವಿ. ಸುಧೀರ್‌ಜೀ ಮತ್ತು ನಾಗರಾಜ್‌ಜೀ ಅವರಂತಹ ಉನ್ನತ ಆರ್‌ಎಸ್‌ಎಸ್ ನಾಯಕರು ಜನವರಿ 28ರಂದು ಈ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು. ಇದು ವಿಶ್ವದ ಅತಿದೊಡ್ಡ ಹಿಂದೂ ಸಂಘಟನೆ ಇದಕ್ಕೆ ತೋರಿದ ಮನ್ನಣೆ. ಮಾತಾ ಹಿಂಗ್ಲಜ್ ಸಿದ್ಧ ಪೀಠದ ದರ್ಶನ ಪಡೆಯಲು ಬಲೂಚಿಸ್ತಾನಕ್ಕೆ ಭೇಟಿ ನೀಡಬಹುದಾದ ಯಾತ್ರಿಕನಾಗಿ ನನಗಿದು ಹೆಮ್ಮೆಯೆನಿಸುತ್ತದೆ. ಹಾಗೆಯೇ ಕರ್ನಾಟಕದ ಜನಪ್ರಿಯ ಪತ್ರಕರ್ತರಲ್ಲೊಬ್ಬರಾದ ಹರಿಪ್ರಕಾಶ್ ಕೋಣೆಮನೆ ಅವರಿಂದ ಈ ಬಗ್ಗೆ ದೊರೆತ ಸಂಪೂರ್ಣ ಬೆಂಬಲಕ್ಕಾಗಿಯೂ ನಾನು ಕೃತಜ್ಞ. ಇವರೆಲ್ಲರ ಬೆಂಬಲದಿಂದ ನಮ್ಮ ದೇವಸ್ಥಾನ ಕುರಿತ ಸುದ್ದಿ ಹೆಚ್ಚು ವ್ಯಾಪಕವಾಗಿ ಹರಡಿತು. ಲೇಖರಾಜ್ ಖಾತ್ರಿ ಮತ್ತು ಜಗದೀಶ್ ಖಾತ್ರಿ ಇದರ ನಾಯಕತ್ವ ವಹಿಸಿದ್ದರು.
ನಮ್ಮ ಅತ್ಯಂತ ಪೂಜ್ಯ ದೇವಿಯ ಈ ಅಭೂತಪೂರ್ವ ಪ್ರಯಾಣದ ಹಿನ್ನೆಲೆಯನ್ನು ನಾನು ವಿವರಿಸಬೇಕು.
ಬಲೂಚಿಸ್ತಾನದ ಜನರು ಭಾರತದ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡವರು. ನಾನು ಕೆಲವು ವರ್ಷಗಳ ಹಿಂದೆ ಕ್ಷತ್ರಿಯರ ಕುಲದೇವಿ ಮಾತಾ ಹಿಂಗ್ಲಾಜ್‌ಗೆ ಮೊದಲ ತೀರ್ಥಯಾತ್ರೆ ಮಾಡಿದ್ದೆ. ಈ ದೇವಾಲಯ ಬಲೂಚಿಸ್ತಾನದ ಕಡಿದಾದ ಪರ್ವತಗಳಲ್ಲಿ ನೆಲೆಗೊಂಡಿದೆ. ಆಗಿನ ಕೇಂದ್ರ ಸಚಿವ ಮತ್ತು ದೇವಿಯ ಕಟ್ಟಾ ಭಕ್ತರಾಗಿದ್ದ ಜಸ್ವಂತ್ ಸಿಂಗ್ ಅವರ ಪ್ರಯತ್ನದಿಂದ ಈ ಯಾತ್ರೆ ಸಾಧ್ಯವಾಯಿತು. ಅದು ಸ್ವಾತಂತ್ರ್ಯಾನಂತರದ ಈ ಥರದ ಮೊದಲ ಯಾತ್ರೆ. ನಾವು ಮುನಾಬಾವೊ ಮತ್ತು ಥಾರ್ ಪಾರ್ಕರ್ ಮೂಲಕ ಅಮರ್‌ಕೋಟ್ (ಅಕ್ಬರ್ ಜನಿಸಿದ ಬಳಿಕ ಉಮರ್‌ಕೋಟ್ ಎಂದು ಮರುನಾಮಕರಣ ಮಾಡಲಾಗಿದೆ), ಮಿರ್‌ಪುರ್ ಖಾಸ್ ಮತ್ತು ಕರಾಚಿಯನ್ನು ದಾಟಿ ರಸ್ತೆಯ ಮೂಲಕ ಹೋದೆವು. ಗುಂಪಿನಲ್ಲಿ ನನ್ನ ಸೇರ್ಪಡೆ ಒಂದು ರೀತಿಯ ಪವಾಡವಾಗಿತ್ತು. ಅದೂ ಆಗಿನ ಪಾಕಿಸ್ತಾನದ ಹೈಕಮಿಷನರ್ ಅಜೀಜ್ ಅಹ್ಮದ್ ಖಾನ್ ಅವರ ನೆರವಿನಿಂದ ಕೊನೆಯ ದಿನ ಕೊನೆಯ ಯಾತ್ರಿಕನಾಗಿ ನಾನು ಸೇರಿದ್ದೆ.
ಈ ಪ್ರಯಾಣ ಯಾತ್ರಿಗಳನ್ನು ಧೈರ್ಯಶಾಲಿಗಳನ್ನಾಗಿ ಮಾಡುವ ಎಲ್ಲಾ ಅಂಶಗಳನ್ನು ಹೊಂದಿದೆ. ಸಮುದ್ರ ತೀರ, ಅದ್ಭುತವಾದ ಪರ್ವತ ಶ್ರೇಣಿಗಳು (ಗ್ವಾದರ್ ಇದರ ಸಮೀಪದಲ್ಲಿದೆ. ಮಾತಾ ಹಿಂಗ್ಲಾಜ್ ಅನ್ನು ತಲುಪಲು, ನಾವು ಗ್ವಾದರ್ ಹೆದ್ದಾರಿಯಲ್ಲಿ ಪ್ರಯಾಣಿಸಿದೆವು), ಹಿಂಗೋಲ್ ನದಿ (ದೇವಿ ಪಾರ್ವತಿಯ ಸಿಂಧೂರ ಅಥವಾ ಹಿಂಗುಲಾ ಎಂದು ಹೆಸರಿಸಲಾಗಿದೆ), ಮಧ್ಯ ಮಕ್ರಾನ್ ಶ್ರೇಣಿ ಮತ್ತು ಮಕ್ರಾನ್ ಕರಾವಳಿ ಶ್ರೇಣಿ, ಮರಳುಗಲ್ಲಿನ ರಸ್ತೆಗಳು ಮತ್ತು ಒರಟು ಭೂಪ್ರದೇಶದಲ್ಲಿ ಈ ಕಠಿಣ ಯಾತ್ರೆ ಮುಂದುವರಿಯುತ್ತದೆ.
ಪ್ರವಾಸ ಕಥನಗಳು ವಿವರಿಸಿದಂತೆ ಬಲೂಚಿಸ್ತಾನದ ಹಿಂಗ್ಲಾಜ್‌ಗೆ ಹೋಗುವ ರಸ್ತೆಯ ಪ್ರಯಾಣ ನಮ್ಮ ಇತಿಹಾಸದ ಅತ್ಯಂತ ಕಠಿಣವಾದ ತೀರ್ಥಯಾತ್ರೆಗಳಲ್ಲಿ ಒಂದು. ಹಿಂದೆ ಅದು ಕರಾಚಿಯಿಂದ ಒಂಟೆಗಳ ಮೇಲೆ 45 ದಿನಗಳಿಗಿಂತ ಹೆಚ್ಚು ಕಾಲ ತೆಗೆದುಕೊಳ್ಳುತ್ತಿತ್ತು. ಬಿಸಿ, ಶುಷ್ಕ ಮತ್ತು ಡಕಾಯಿತರು ತುಂಬಿದ್ದ ಮರುಭೂಮಿಯಿದು. ಇಲ್ಲಿ ಸಾವು ಅಥವಾ ದರ್ಶನ ಎರಡೂ ಒಂದೇ. ಹಿಂಗ್ಲಾಜ್ ತೀರ್ಥಯಾತ್ರೆಯ ಕುರಿತಾಗಿ ಉತ್ತಮ್ ಕುಮಾರ್ ನಟನೆಯ ಪ್ರಸಿದ್ಧ ಬಂಗಾಳಿ ಚಲನಚಿತ್ರವೊಂದಿದೆ. ಅದು ಈ ಯಾತ್ರೆಯನ್ನು ʼಜೀವಮಾನದ ತೀರ್ಥಯಾತ್ರೆʼ ಎಂದು ವಿವರಿಸಿದೆ. ಆದರೆ ಚೀನಾದವರು ಈಗ ಗ್ವಾದರ್ ಬಂದರಿನವರೆಗೆ ರಾಷ್ಟ್ರೀಯ ಕರಾವಳಿ ಹೆದ್ದಾರಿಯನ್ನು ನಿರ್ಮಿಸಿದ್ದಾರೆ. ಅದು ನಮ್ಮನ್ನು ಅಘೋರ್‌ಗೆ ಕರೆದೊಯ್ಯುತ್ತದೆ. ಅಲ್ಲಿ ನಾವು ದೇವಾಲಯಕ್ಕೆ ಹೋಗಲು ಬಲಕ್ಕೆ ತಿರುಗುತ್ತೇವೆ. ಅಂದಿನ ಒಂಟೆಗಳ ಬದಲು ಹವಾನಿಯಂತ್ರಿತ ಟೊಯೊಟಾ ವ್ಯಾನ್‌ಗಳು ಬಂದಿವೆ.
ಆದರೂ, ಕರಾಚಿಯಿಂದ ಪ್ರಯಾಣ ನಮ್ಮನ್ನು ತುಂಬಾ ಆಯಾಸಗೊಳಿಸಿತು. ಹಿಂದಿನ ಯಾತ್ರಿಕರ ಕಷ್ಟಗಳನ್ನು ನಾವು ಊಹಿಸಬಹುದು. ಈಗ ನಾನಿ ಮಂದರ್‌ವರೆಗೆ 22 ಕಿಮೀ ಉದ್ದದ ಅರೆ ಪಕ್ಕಾ ರಸ್ತೆಯಿದೆ. ಬಲೂಚ್ ರಾಜ್ಯ ಸರ್ಕಾರ ಆಗಿನ ಮುಖ್ಯಮಂತ್ರಿ ಜಮ್ ಯೂಸಫ್ ಮೀರ್ ಮೊಹಮ್ಮದ್ ಅವರಿಂದ ನಿರ್ಮಿಸಲ್ಪಟ್ಟಿದೆ. ಬಿಸಿಲಿಗೆ ಬೆಂದ, ಮರಳುಗಲ್ಲಿನ ಪರ್ವತಗಳು ಹಿಂಗ್ಲಾಜ್ ರಸ್ತೆಯನ್ನು ಸುತ್ತುವರಿಯುತ್ತವೆ. ಇದೊಂದು ಮಹಾನ್ ಪೂಜ್ಯ ಕೇಂದ್ರವಾಗಿದೆ. ನಂಬಿಕೆಯ ಪ್ರಕಾರ ಪಾರ್ವತಿ ತನ್ನ ತಂದೆ ದಕ್ಷನ ಯಜ್ಞದಲ್ಲಿ ಸ್ವಯಂ ಅಗ್ನಿಸ್ಪರ್ಶದಿಂದ ದಗ್ಧಳಾದಾಗ, ಕೋಪಗೊಂಡ ಶಿವನು ತನ್ನ ಸಂಗಾತಿಯ ದೇಹವನ್ನು ಹೊತ್ತುಕೊಂಡು ಅಲೆದಾಡಿದ. ಆಗ ಆಕೆಯ ದೇಹದ ವಿವಿಧ ಭಾಗಗಳು ಬಿದ್ದ 52 ಸ್ಥಳಗಳು ಶಕ್ತಿಪೀಠಗಳಾದವು. ಅಂತಹ ಸ್ಥಳಗಳಲ್ಲಿ ವರ್ಣನಾತೀತ ಆಧ್ಯಾತ್ಮಿಕ ಶಕ್ತಿ ಹೊರಹೊಮ್ಮಿತು. ಅಂತಹ ಒಂದು ಪೀಠವೇ ಹಿಂಗ್ಲಾಜ್. ಅಲ್ಲಿ ಸಿಂಧೂರದ ಗುರುತಿರುವ ದೇವಿಯ ಹಣೆಯು ಬಿದ್ದಿದೆ. ಒಂದು ಸಹಸ್ರಮಾನದಿಂದ ಈ ಶಕ್ತಿಯ ಮಹಾಪೀಠಕ್ಕೆ ಯಾತ್ರೆ ನಡೆಯುತ್ತಿದೆ. ಆ ಪರಮಶಿವ ಹಿಮಾಲಯದಿಂದ ಈ ನೀಲಿ ಅರಬ್ಬಿ ಸಮುದ್ರದ ಮರಳಿನ ತೀರಕ್ಕೆ ತಲುಪಿ ಬೆರೆತುದು ಪ್ರದೇಶವನ್ನು ನಮ್ಮ ನಾಗರಿಕತೆಯ ಹರಿವಿನ ಅಪೂರ್ವ ಕಥೆಯಾಗಿದೆ.
ಬಲೂಚ್ ಜನರ ಆತಿಥ್ಯ ಶ್ರೇಷ್ಠವಾದುದು. ಅವರಲ್ಲಿ “ಇಜ್ಜತ್” ಅಥವಾ ಘನತೆಯ ಅಂಶವು ಮಿಳಿತವಾಗಿದೆ. ಈ ಖಾನ್‌ಗಳು ತಮ್ಮ “ಗೌರವ” ಉಳಿಸಲು ತಮ್ಮ ಪ್ರಾಣವನ್ನು ನೀಡುತ್ತಾರೆ ಅಥವಾ ತೆಗೆಯಬಹುದು. ದೇಶ ವಿಭಜನೆಯಾದ ಬಳಿಕ ಪಾಕಿಸ್ತಾನದ ಆಡಳಿತಗಾರರು ಯಾವಾಗಲೂ ಬಲೂಚ್‌ನ ಹೆಮ್ಮೆಯನ್ನು ಘಾತಿಸುತ್ತ ಬಂದಿದ್ದಾರೆ. ಬಲೂಚಿಸ್ತಾನದ ದೊರೆ ಮೀರ್ ಅಹ್ಮದ್ ಯಾರ್ ಖಾನ್ 1947ರಲ್ಲಿ ಸ್ವಾತಂತ್ರ್ಯವನ್ನು ಘೋಷಿಸಿದರು. ಆದರೆ “ರಾವಾಜ್” ಎಂದು ಕರೆಯಲ್ಪಡುವ ಹಳೆಯ ಬಲೂಚ್ ಸಾಂಪ್ರದಾಯಿಕ ಸಂವಿಧಾನದ ನಿಬಂಧನೆಗಳ ಅಡಿಯಲ್ಲಿ ಕಾರ್ಯನಿರ್ವಹಿಸಲು ಅನುಮತಿಯೊಂದಿಗೆ ಪಾಕ್ ಸೇರ್ಪಡೆಯ ದಾಖಲೆಗಳಿಗೆ ಸಹಿ ಹಾಕಲು ಜಿನ್ನಾ ಒತ್ತಾಯಿಸಿದರು. ಆದರೆ ಬಲೂಚ್ ರಾಷ್ಟ್ರೀಯತಾವಾದಿಗಳು ಪಾಕಿಸ್ತಾನದ ಆಡಳಿತವನ್ನು ಎಂದಿಗೂ ಒಪ್ಪಿಕೊಳ್ಳಲಿಲ್ಲ. ಸ್ಥಳೀಯ ದಂಗೆಗಳು ನಡೆಯುತ್ತಲೇ ಇದ್ದವು. ಗಾಂಧಿಯವರ ಕಾಂಗ್ರೆಸ್‌ನ ಕಟ್ಟಾ ಬೆಂಬಲಿಗರಾದ ಸಮದ್ ಅಚಕ್‌ಝೈ ನೇತೃತ್ವದ ಅಂಜುಮನ್-ಇ-ವತನ್ ಪಾರ್ಟಿಗೆ ಇಲ್ಲಿ ಜನಬೆಂಬಲವಿತ್ತು. ಅದನ್ನು ನಿಷೇಧಿಸಲಾಯಿತು. ಪಾಕಿಸ್ತಾನದ ಸೇನೆ ಈ ಪ್ರದೇಶದ ಸಂಪೂರ್ಣ ನಿಯಂತ್ರಣ ಪಡೆದುಕೊಂಡಿತು. ಕ್ರೂರ ದೌರ್ಜನ್ಯ, ಹತ್ಯೆಗಳು, ಬಲವಂತದ ಮತಾಂತರ ವ್ಯಾಪಕವಾದವು. ಸುಯಿ ಪ್ರದೇಶದಲ್ಲಿ ಲಾಭದಾಯಕವಾದ ಅನಿಲ ಮೂಲ ಪತ್ತೆಯಾದ ಬಳಿಕ ಇಸ್ಲಾಮಾಬಾದ್‌ನ ಪಂಜಾಬಿ ಆಡಳಿತಗಾರರು ಅವನ್ನು ಬಳಸಿ ಶತಕೋಟ್ಯಾಧಿಪತಿಗಳಾದರು. ಗ್ವಾದರ್ ಪಿಂಡಿಯ ಸೇನಾ ಅಧಿಕಾರಿಗಳಿಗೆ ಬೃಹತ್ ಭೂಮಿಯನ್ನು ಖರೀದಿಸಲು ಮತ್ತು ಲಾಭ ಗಳಿಸಲು ಇವರು ಸಹಾಯ ಮಾಡಿದರು. ಬಲೂಚ್ ಜನರು ತಮ್ಮ ಭೂಮಿ ಮತ್ತು ಸಂಪನ್ಮೂಲಗಳು ಪರಕೀಯರ ಐಷಾರಾಮಕ್ಕೆ ಮೂಲವಾದುದನ್ನು ಕ್ರೋಧದಿಂದ ನೋಡುತ್ತಾರೆ. ಆದ್ದರಿಂದ ಬಂಡಾಯ ನಿರಂತರವಾಗಿದೆ.
1958ರಲ್ಲಿ, ಬಲೂಚ್ ಜನರ ನಾಯಕ ನವಾಬ್ ನೌರೋಜ್ ಖಾನ್ ಅವರು ಸ್ವಾತಂತ್ರ್ಯಕ್ಕಾಗಿ ಸಶಸ್ತ್ರ ಹೋರಾಟ ನಡೆಸಿದರು. ಇದನ್ನು ಲೆಫ್ಟಿನೆಂಟ್ ಜನರಲ್ ಟಿಕ್ಕಾ ಖಾನ್ ನೇತೃತ್ವದ ಪಾಕಿಸ್ತಾನ ಸೇನೆ ಹತ್ತಿಕ್ಕಿತು. ಅವರು ನವಾಬರನ್ನು ಅವರ ಪುತ್ರರು ಮತ್ತು ಸೋದರಳಿಯರೊಂದಿಗೆ ಮಾತುಕತೆಗೆ ಆಹ್ವಾನಿಸಿದರು. ಯಾವುದೇ ವಿಚಾರಣೆಯಿಲ್ಲದೆ ಪುತ್ರರು ಮತ್ತು ಸೋದರಳಿಯರನ್ನು ಗಲ್ಲಿಗೇರಿಸಲಾಯಿತು. ನವಾಬ್ ನಂತರ ಜೈಲಿನಲ್ಲಿ ನಿಧನರಾದರು. 1963ರ ವಿಮೋಚನಾ ಯುದ್ಧದಿಂದ 1969ರವರೆಗೆ ಶೇರ್ ಮೊಹಮ್ಮದ್ ಬಿಜರಾನಿ ಮಾರಿ ನೇತೃತ್ವದಲ್ಲಿ ನಡೆದ ದೊಡ್ಡ ದಂಗೆಯನ್ನು 70ರ ದಶಕದಲ್ಲಿ ಬಲೂಚ್ ಸಿವಿಲ್ ವಾರ್ ಎಂದು ಕರೆಯಲಾಗುತ್ತಿತ್ತು. ಬಲೂಚ್ ಜನರು ಪಾಕಿಸ್ತಾನದ ಆಡಳಿತದೊಂದಿಗೆ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಬಾಂಗ್ಲಾ ಪ್ರತ್ಯೇಕತೆಯೊಂದಿಗೆ ಈ ಯುದ್ಧ ನೈತಿಕವಾಗಿ ಬಲಗೊಂಡಿತು. ಘೌಸ್ ಬಕ್ಸ್ ಬಿಜೆಂಜೊ, ಸರ್ದಾರ್ ಅತಾವುಲ್ಲಾ ಮೆಂಗಲ್, ಖೈರ್ ಬಕ್ಸ್ ಮರ್ರಿ ಮತ್ತು ನವಾಬ್ ಅಕ್ಬರ್ ಖಾನ್ ಬುಗ್ತಿ ಮುಂತಾದ ಧೀಮಂತರು ವಿಮೋಚನೆ ಚಳುವಳಿ ನಡೆಸಿದರು. ಪಾಕಿಸ್ತಾನ ಸೇನೆ ಅದನ್ನು ಮತ್ತೆ ಹತ್ತಿಕ್ಕಿತು. ಸಾವಿರಾರು ಜನರನ್ನು ಯಾವುದೇ ವಿಚಾರಣೆಯಿಲ್ಲದೆ ಕೊಲ್ಲಲಾಯಿತು. ಇದು ಬಲೂಚ್ ಜನರ ಹೃದಯದಲ್ಲಿ ಗಾಯವನ್ನು ಹೆಚ್ಚಿಸಿತು.
ಇದನ್ನೂ ಓದಿ: Hinglaj Devi Mandir: ಪಾಕಿಸ್ತಾನದಲ್ಲಿರುವ ಹಿಂಗ್ಲಾಜ್ ದೇವಿಗೆ ಬೆಂಗಳೂರಿನಲ್ಲೂ ದೇಗುಲ; ಶುಕ್ರವಾರ ಪ್ರತಿಷ್ಠಾಪನೆ
2005ರಲ್ಲಿ, ಬಲೂಚ್ ರಾಷ್ಟ್ರೀಯತಾವಾದಿಗಳು ತಮ್ಮ ಹಕ್ಕುಗಳ ರಕ್ಷಣೆ ಮತ್ತು ಬಲೂಚ್ ಸಾಂಸ್ಕೃತಿಕ ಅಸ್ಮಿತೆಯ ರಕ್ಷಣೆಗೆ ಒತ್ತಾಯಿಸಿದರು. ಪ್ರತಿಕ್ರಿಯೆಯಾಗಿ ಪಾಕಿಸ್ತಾನಿ ಸೇನೆ 79 ವರ್ಷದ ನಾಯಕ ನವಾಬ್ ಅಕ್ಬರ್ ಖಾನ್ ಬುಗ್ತಿಯನ್ನು ಆಗಸ್ಟ್ 2006ರಲ್ಲಿ ಕೊಂದಿತು. ಸುಮಾರು 65 ಲಕ್ಷ ಜನಸಂಖ್ಯೆಯೊಂದಿಗೆ ಪಾಕಿಸ್ತಾನದ ಒಟ್ಟು ಪ್ರದೇಶದ 43%ರಷ್ಟಿರುವ ಬಲೂಚಿಸ್ತಾನ್, ಪಾಕಿಸ್ತಾನದ ದುರ್ಬಲ ಬಿಂದುವಾಗಿ ಉಳಿದಿದೆ. ಇದು ಬಲೂಚಿಗರಿದೆ ಇಷ್ಟವಿಲ್ಲದ ನಾಯಕರಿಂದ ಆಳಲ್ಪಟ್ಟಿದೆ.
1941ರಲ್ಲಿ ಬಲೂಚ್‌ನಲ್ಲಿ ಸುಮಾರು 54,000ರಷ್ಟು ಹಿಂದೂಗಳಿದ್ದರು. ಪಾಕಿಸ್ತಾನದ ಸೇನೆಯ ಸಂಪೂರ್ಣ ನಿಯಂತ್ರಣದ ನಂತರ ಅವರ ಸಂಖ್ಯೆ ಬಹುತೇಕ ಕಡಿಮೆಯಾಗಿದೆ. ಹಿಂದೂ ಸಮುದಾಯ ಲಾಸ್ ಬೇಲಾ, ಉಥೆಲೋ, ಮಿಥಿ ಮತ್ತು ಚಮನ್‌ಗಳಿಗೆ ಸೀಮಿತವಾಗಿದೆ. ಅವರಲ್ಲಿ ಹೆಚ್ಚಿನ ಸಂಖ್ಯೆಯವರು ತಳಮಟ್ಟದ ಕೆಲಸಗಳನ್ನು ಮಾಡುತ್ತಿದ್ದಾರೆ. ಸುಧಾರಣೆಯ ಗಾಳಿ ಈ ಪ್ರದೇಶದ ಹಿಂದೂಗಳನ್ನು ತಲುಪಲಿಲ್ಲ. ಕೆಳಜಾತಿ ಹಿಂದೂಗಳು ಎಂದು ಕರೆಯಲ್ಪಡುವವರು ಅತ್ಯಂತ ಕೆಟ್ಟ ಹಿಂಸೆ ಅನುಭವಿಸುತ್ತಿದ್ದಾರೆ. ಅವರಲ್ಲಿ ಇನ್ನೂ ಎಷ್ಟು ಮಂದಿ ಬದುಕುಳಿದಿದ್ದಾರೆ ಎಂಬ ಬಗ್ಗೆ ಯಾರ ಬಳಿಯೂ ಅಧಿಕೃತ ಮಾಹಿತಿ ಇಲ್ಲ.
ಆದರೆ ಮಾತಾ ಹಿಂಗ್ಲಾಜ್ ದೇವಸ್ಥಾನದ ಗುಹೆಯಲ್ಲಿ ನಾವು ಭೇಟಿಯಾದವರು ಹಿಂದೂಗಳ ಶ್ರೀಮಂತ ವರ್ಗಕ್ಕೆ ಸೇರಿದವರು. ಜಮಾತೆ ಇಸ್ಲಾಮಿ ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯಂತಹ ಪಕ್ಷಗಳ ಬೆಂಬಲಿಗರಾದ ವೈದ್ಯರು, ವ್ಯಾಪಾರಿಗಳು ಮತ್ತು ಎಂಜಿನಿಯರ್‌ಗಳು ಇದ್ದರು. ಅವರು ತಮ್ಮದೇ ಆದ ರೀತಿಯಲ್ಲಿ ಬದುಕಲು ಕಲಿತಿದ್ದಾರೆ. ಪ್ರತಿಕೂಲ ವಾತಾವರಣದಲ್ಲಿ ಬದುಕುವ ಮಾರ್ಗಗಳನ್ನು ಕಲಿತಿದ್ದಾರೆ. ಅಂಥ ಒಂದು ಮಾರ್ಗವೆಂದರೆ ಲಭ್ಯವಿರುವ ಮುಸ್ಲಿಂ ಪಕ್ಷಗಳನ್ನು ಸೇರುವುದು. ಮತ್ತು ಇನ್ನೊಂದು, ಹಿಂದೂ ಮಹಿಳೆಯರು ಕಲಿತಂತೆ, ಅವರನ್ನು ಹಿಂದೂಗಳು ಎಂದು ಗುರುತಿಸಬಹುದಾದ ಬಿಂದಿಗಳಂತಹ ಗುರುತುಗಳನ್ನು ಧರಿಸದಿರುವುದು. ನೀವು ಹೊರಗೆ ಹೋಗುವಾಗ ಹಿಂದೂವಾಗಿ ಕಾಣಿಸದಿರುವುದು ಉತ್ತಮ ಎಂದು ಅವರಲ್ಲಿ ಒಬ್ಬರು ಹೇಳಿದರು. ಹಿಂದೂ ಹುಡುಗಿಯರಿಗೆ ಬೆದರಿಕೆಗಳಿವೆ. 12-13-14ನೇ ವಯಸ್ಸಿನಲ್ಲಿ ಅಪಹರಣ ಮಾಡುತ್ತಾರೆ ಮತ್ತು ನಿಕಾಹ್‌ಗೆ ಒತ್ತಾಯಿಸುತ್ತಾರೆ. ಇದು ಬಲೂಚಿಸ್ತಾನದ ಭಯಾನಕ ಸತ್ಯ.
ಈ ನಡುವೆ ಮಾತಾ ಹಿಂಗ್ಲಾಜ್ ದೇವಿಯನ್ನು ಸ್ತುತಿಸಿ ಸುಂದರವಾದ ಸ್ತೋತ್ರಗಳನ್ನು ಹಾಡಿದ ಒಂದೆರಡು ಗಾಯಕರನ್ನು ನಾನು ಭೇಟಿಯಾದೆ. ಬಹುತೇಕ ಎಲ್ಲರೂ ಬಲೂಚ್ ಮುಸ್ಲಿಮರ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದರು. ಮುಸ್ಲಿಮರು ಈ ಪವಿತ್ರ ಸ್ಥಳವನ್ನು ನಾನಿ ಮಂದರ್ ಅಥವಾ ಹಿರಿಯರ ದೇವಸ್ಥಾನ ಎಂದು ಕರೆಯುತ್ತಾರೆ. ಈ ದೇವಿಯು ಇತಿಹಾಸದ ಕೆಟ್ಟ ಘಟನೆಗಳಿಗೆ ಸಾಕ್ಷಿಯಾಗಿದ್ದಾಳೆ. ಭವಿಷ್ಯದಲ್ಲಿ ವಿವೇಕವು ಮೇಲುಗೈ ಸಾಧಿಸಲಿ, ಈ ಭಕ್ತಿ ಭೂಮಿಗೆ ಶಾಂತಿಯನ್ನು ತರಲಿ ಎಂದು ನಾವು ಆಶಿಸಬಹುದಷ್ಟೇ. ಈ ಮಧ್ಯೆಯೇ ಬಲೂಚಿಸ್ತಾನದ ಮಹಾನ್ ದೇವಿಗೆ ಬೆಂಗಳೂರು ಹೊಸ ಕೇಂದ್ರವಾಗಿದೆ. ಇದು ಹಿಂದೂಗಳನ್ನು ಪ್ರೇರೇಪಿಸಿ ಮತ್ತಷ್ಟು ಧರ್ಮದ ಹಾದಿಯಲ್ಲಿ ನಡೆಯಲು ಅವರಿಗೆ ಶಕ್ತಿ ನೀಡಲಿದೆ.
ಇದನ್ನೂ ಓದಿ: Bilawal Bhutto | ಸಿಂಧ್ ಪ್ರಾಂತದಲ್ಲಿ ನಿರಂತರ ಮಾನವಹಕ್ಕು ಉಲ್ಲಂಘನೆ, ಮಿಸ್ಟರ್ ಭುಟ್ಟೋ ಮೊದ್ಲು ಅದನ್ನು ನಿಲ್ಲಿಸಿ!