ಹರಿಭಕ್ತಿ ಗಲವಾಡೇ ಅಗ್ರಜುಂಡು…
ಪೋತನ ಭಾಗವತದ ಏಳನೇಯ ಸ್ಕಂದದ ಪ್ರಹ್ಲಾದ ಚರಿತ್ರೆಯಲ್ಲಿ, ಭಕ್ತ ಪ್ರಹ್ಲಾದನು ತನ್ನ ಸ್ನೇಹಿತರನ್ನು ಕುರಿತು ಹೀಗೆನ್ನುತ್ತಾನೆ “ಗೆಳೆಯರೇ, ವಿಷ್ಣುವನ್ನು ಒಲಿಸಿಕೊಳ್ಳಲು ಭಕ್ತಿಯೊಂದೇ ಸಾಕು. ಬ್ರಾಹ್ಮಣತ್ವವು ಬೇಕಿಲ್ಲ, ದೇವತ್ವವೂ ಬೇಕಿಲ್ಲ, ಶಾಂತ ಸ್ವಭಾವವು ಬೇಕಿಲ್ಲ. ಪದ್ಮನಾಭನನ್ನು ಪ್ರಸನ್ನಗೊಳಿಸಿಕೊಳ್ಳಲು ಭಕ್ತಿಯೊಂದೇ ಸಮರ್ಥವಾದುದು. ಆ ಭಗವಂತನು ಗಾಢವಾದ ಭಕ್ತಿಗೆ ಒಲಿದಂತೆ ದಾನಗಳಿಗೆ, ಜಪತಪಗಳಿಗೆ, ಯಜ್ಞಯಾಗಗಳಿಗೆ, ನಿಯಮನಿಷ್ಠೆಗಳಿಗೆ ಒಲಿಯನು. ಭಕ್ತಿಯೊಂದೇ ಆ ಸ್ವಾಮಿಯನ್ನು ಪಡೆಯುವ ಸಾಧನ” ಎನ್ನುತ್ತಾನೆ.
ಭಕ್ತ ಹಾಗೂ ಭಗವಂತನ ನಡುವೆ ಇರುವ ಸೇತುವೆಯೇ ಭಕ್ತಿ. ಕೈವಾರ ತಾತಯ್ಯನವರು ಭಕ್ತಿಯ ದಾಸಪಂಥವನ್ನು ಪ್ರತಿಪಾದಿಸಿದವರು. ಪ್ರತಿಯೊಬ್ಬ ಮಾನವರ ಆಚಾರ, ವಿಚಾರಗಳು ಬೇರೆ ಬೇರೆಯಾಗಿರುತ್ತದೆ. ಆದರೆ ಭಗವಂತನಿಗೆ ಜಾತಿ ಯಾವುದಾದರೇನು? ಆಚಾರವಿಚಾರಗಳು ಹೇಗಿದ್ದರೇನು? ಅವೆಲ್ಲ ಈ ಲೋಕಕ್ಕೆ ಮಾತ್ರವೇ ಹೊರತು ಭಗವಂತನಿಗೆ ಅವೆಲ್ಲ ಬೇಕಿಲ್ಲ. ವ್ಯಾಧ, ವಿದುರ, ಗುಹ, ಶಬರಿ, ಬೇಡರ ಕಣ್ಣಪ್ಪ ಮೊದಲಾದವರಿಗೆ ಭಗವಂತನು ಒಲಿದಿದ್ದು ಭಕ್ತಿಯಿಂದಲೇ ಹೊರತು ಜಾತಿಯಿಂದಲ್ಲ.
ತಾತಯ್ಯನವರು ಈ ಪದ್ಯದಲ್ಲಿ ಅಗ್ರಜನೆಂದರೆ ಯಾರು? ಭಾಗವತನೆಂದರೆ ಯಾರು? ಸಹಜಯೋಗಿ ಎಂದರೆ ಯಾರು? ಎಂಬ ಮೂರು ಬಗೆಯ ಸಾಧಕಭಕ್ತರ ಬಗ್ಗೆ ತಿಳಿಸಿಕೊಡುತ್ತಿದ್ದಾರೆ.
ಯೇ ಜಾತಿವಾಡೈನ..
ಶ್ರೀ ಯೋಗಿನಾರೇಯಣ ತಾತಯ್ಯನವರ ಅಭಿಪ್ರಾಯದಲ್ಲಿ ಹರಿನಾಮಕೀರ್ತನೆಗಳನ್ನು ಭಜಿಸುವವನು ಕೂಡ ಸಾಧಕಯೋಗಿಯೇ ಆಗಿದ್ದಾನೆ. ಏಕೆಂದರೆ ಯೋಗ ಮತ್ತು ಭಕ್ತಿಯ ಗುರಿ ಭಗವಂತನನ್ನು ಸೇರುವುದೇ ಆಗಿದೆ. ಇಲ್ಲಿ ತಾತಯ್ಯನವರು ಯೋಗ ಮತ್ತು ಹರಿಭಕ್ತಿಗಳನ್ನು ಸಮನ್ವಯ ಮಾಡಿದ್ದಾರೆ. ಭಕ್ತಿಗೆ ಯಾವುದೇ ನಿರ್ಬಂಧವಿಲ್ಲ ಎಂಬುದನ್ನು ತಾತಯ್ಯನವರು ಹೀಗೆ ಬೋಧಿಸಿದ್ದಾರೆ.
ಯೇ ಜಾತಿವಾಡೈನ ಯೇ ನೀತಿವಾಡೈನ
ಹರಿಭಕ್ತಿ ಗಲವಾಡೆ ಅಗ್ರಜುಂಡು||
ಯಾವ ಜಾತಿಯವನೇ ಆಗಿದ್ದರೂ, ಯಾವ ನೀತಿಯನ್ನೇ ಅನುಸರಿಸಿದವನಾಗಿದ್ದರೂ ಹರಿಭಕ್ತಿ ಇದ್ದವನಾದರೆ ಅವನೇ ಅಗ್ರಜನು ಎಂದಿದ್ದಾರೆ. ಅಗ್ರಜ ಎಂದರೆ ಮಾನವರ ಚಾತುವಣ್ರ್ಯ ಸೃಷ್ಠಿಯಲ್ಲಿ ಮೊದಲು ಹುಟ್ಟಿದವನೆಂದು ಅರ್ಥ. ಅಗ್ರಜನೆಂದರೆ ವಿಪ್ರ, ಬ್ರಾಹ್ಮಣ ಎಂಬುದು ರೂಡಾರ್ಥ. ಇಲ್ಲಿ ತಾತಯ್ಯನವರು ಹೇಳುತ್ತಿರುವ ಸತ್ಯವೆನೆಂದರೇ, ಹರಿಭಕ್ತಿಯು ಯಾವುದೇ ಜಾತಿಗಳಿಗೆ ಅಂಟಿಕೊಂಡಿರುವುದಲ್ಲ. ಯಾವುದೇ ಜಾತಿಯಲ್ಲಿ ಹುಟ್ಟಿದ್ದರೂ ಹರಿಭಕ್ತಿಯನ್ನು ಮಾಡುವುದು ತಪ್ಪಲ್ಲ. ಯಾವುದೇ ಜಾತಿಯಲ್ಲಿ ಹುಟ್ಟಿದ್ದರೂ ಹರಿಭಕ್ತಿಯನ್ನು ಮಾಡುತ್ತಿರುವವನಾಗಿದ್ದರೇ ಅವನೇ ಅಗ್ರಜನು. ಭಕ್ತಿ ಮುಖ್ಯವೇ ಹೊರತು ಜಾತಿಯಲ್ಲ. ಇದೇ ಪದ್ಯವನ್ನು ಮುಂದುವರೆಸುತ್ತಾ ತಾತಯ್ಯನವರು ನಿರಂತರವಾಗಿ ಹರಿಭಕ್ತಿ ಮಾಡುವವರನ್ನು ಭಾಗವತರೆಂದಿದ್ದಾರೆ.
ಭಾಗವತನೆಂದರೆ ಯಾರು?
ಸಾಮಾನ್ಯವಾಗಿ ಯಾರಾದರೂ ಹರಿಕಥೆ, ನಾಮಸಂಕೀರ್ತನೆಯನ್ನು ಮಾಡುತ್ತಾರೋ ಅವರನ್ನು ಭಾಗವತರೆನ್ನುತ್ತಾರೆ. ಆದರೆ ತಾತಯ್ಯನವರು ಪ್ರತಿಕ್ಷಣದಲ್ಲಿಯೂ ಮನಸ್ಸು ಭಗವಂತನ ಮೇಲೆ ನಿಂತಿದ್ದರೇ ಮಾತ್ರ ಅವರನ್ನು ಭಾಗವತರೆಂದಿದ್ದಾರೆ.
ವುರಕುಂಡೆಡೀ ವೇಳ, ಉದ್ಯೋಗಮುಲ ವೇಳ
ನಿದ್ರಿಪೊಯ್ಯೇ ವೇಳ ಭದ್ರಮುಗನು
ಮನಸು ಚದರನೀಕ ಮಧುಮುರಾಂತಕು ಮೀದ
ಭಕ್ತಿ ನಿಲಿಪಿನವಾಡು ಭಾಗವತುಡು||
ಕೆಲಸವಿಲ್ಲದೆ ಸುಮ್ಮನಿರುವ ವೇಳೆಯಲ್ಲಿ, ಕೆಲಸ ಮಾಡುತ್ತಿರುವ ವೇಳೆಯಲ್ಲಿ ಮಾತ್ರವಲ್ಲದೆ ನಿದ್ರಿಸುತ್ತಿರುವ ವೇಳೆಯಲ್ಲಿ ಕೂಡ, ಮಧುದೈತ್ಯನನ್ನೂ ಮುರಾ ಎಂಬ ದೈತ್ಯನನ್ನೂ ಸಂಹರಿಸಿದ ಪರಮಾತ್ಮನಾದ ಶ್ರೀಮಹಾವಿಷ್ಣುವಿನಲ್ಲಿ ಚಂಚಲಗೊಳ್ಳದಂತೆ ಮನಸ್ಸನ್ನು ನಿಶ್ಚಲವಾಗಿ ನಿಲ್ಲಿಸಿದ ಭಕ್ತಿಯುಳ್ಳವನೇ ಭಾಗವತನು ಎನ್ನುತ್ತಿದ್ದಾರೆ ತಾತಯ್ಯನವರು. ಇದು ತಾತಯ್ಯನವರು ಭಾಗವತರು ಎಂಬ ಪದಕ್ಕೆ ನೀಡಿರುವ ಸ್ಪಷ್ಟತೆ. ಸರ್ವಕಾಲ, ಸರ್ವಾವಸ್ಥೆಗಳಲ್ಲೂ ಕೊನೆಗೆ ನಿದ್ರೆಯಲ್ಲೂ ಭಗವಂತನಲ್ಲಿ ಭಕ್ತಿ ಇದ್ದವನೇ ಭಾಗವತ ಎಂದು ತಾತಯ್ಯನವರು ಘೋಷಿಸಿದ್ದಾರೆ. ಪ್ರತಿಕ್ಷಣದಲ್ಲೂ ಮನಸ್ಸು ಭಗವಂತನಲ್ಲಿ ನಿಲ್ಲದಿದ್ದರೆ ಭಾಗವತರಾಗುವುದಿಲ್ಲ.
ಸಹಜಯೋಗಿ :
ಸಹಜಯೋಗಿ, ಸಹಜಯೋಗ ಎಂಬ ಪದಗಳನ್ನು ತಾತಯ್ಯನವರು ತಮ್ಮ ಬೋಧನೆಗಳಲ್ಲಿ ಹಲವಾರು ಕಡೆ ಬಳಸಿದ್ದಾರೆ. “ಸಹಜ ಯೋಗಿಕಿ ಶರಣು” ಎಂದಿದ್ದಾರೆ. ಸಹಜಯೋಗಿ ಎಂದರೆ ಯಾರು? ತಾತಯ್ಯನವರು ಹೀಗೆ ಹೇಳಿದ್ದಾರೆ.
ಆಕೊನ್ನ ಸಮಯಮುನ, ಅತಿತೃಪ್ತಿಸಮಯಮುನ
ಸಮಬುದ್ಧಿ ಕಲಿಗಿನ ಸಹಜಯೋಗಿ||
“ಆಕೊನ್ನ ಸಮಯಮುನ” ಎಂದರೆ ಹಸಿವಿನ ಬಾಧೆ ಪೀಡಿಸುತ್ತಿರುವ ವೇಳೆಯಲ್ಲೂ, “ಅತಿತೃಪ್ತಿ ಸಮಯಮುನ” ಎಂದರೆ ಸಂತೃಪ್ತಿಯಾಗಿ ಉಂಡ ವೇಳೆಯಲ್ಲೂ ಯಾವುದೇ ರೋಷ, ದ್ವೇಷಗಳಿಲ್ಲದೆ ಬುದ್ಧಿಯನ್ನು ಸಮತೂಕದಲ್ಲಿರಿಸಿದವನೇ ಸಹಜಯೋಗಿ ಎಂದಿದ್ದಾರೆ. ಇಲ್ಲಿ ತಾತಯ್ಯನವರು ಹಸಿವಿನ ಸಾಮಾನ್ಯ ಉದಾಹರಣೆಯನ್ನು ಕೊಟ್ಟು ಬ್ರಹ್ಮಾನಂದದ ಅನುಭೂತಿಯನ್ನು ಸೂಚಿಸುತ್ತಿದ್ದಾರೆ. ಈ ಸಹಜಯೋಗಿಯು ಸದಾಕಾಲವು ಅಂತರ್ಮುಖಿಯಾಗಿ ಭಗವಂತನ ಭಕ್ತಿಯಲ್ಲಿ ತನ್ಮಯನಾಗಿರುತ್ತಾನೆ. ಈ ತನ್ಮಯತೆಯಿಂದ ಅವನಲ್ಲಿ ದೇಹಪ್ರಜ್ಞೆ ಇರುವುದಿಲ್ಲ. ಯಾವಾಗಾದರೆ ದೇಹದ ಕಡೆ ಗಮನವಿರುವುದಿಲ್ಲವೋ ಆಗ ಹಸಿವು-ನೋವುಗಳ ಬಾಧೆ ಆಗುವುದಿಲ್ಲ ಎನ್ನುತ್ತಿದ್ದಾರೆ. ಈ ಬೋಧನೆಯ ಮೂಲಕ ತಾತಯ್ಯನವರು ಬದುಕಿನ ನೋವು-ನಲಿವುಗಳಲ್ಲಿ ಸಮಬುದ್ಧಿಯುಳ್ಳವರಾಗಿರಬೇಕು ಎಂಬ ಸಂದೇಶವನ್ನು ನೀಡುತ್ತಿದ್ದಾರೆ ತಾತಯ್ಯನವರು.
ಇದನ್ನೂ ಓದಿ: ತಾತಯ್ಯ ತತ್ವಾಮೃತಂ: ಪರಮಪದವಿ ಸಾಧನೆಯ ಹಂತಗಳು
ಭಕ್ತಜನರಿಗೆ ಭಯವಿಲ್ಲ :
ಹರಿಭಕ್ತಿಯುಳ್ಳವನೇ ಅಗ್ರಜ, ನಿರಂತರ ಪರಮಾತ್ಮನ ಧ್ಯಾನ ಮಾಡುವವರು ಭಾಗವತರು, ಬ್ರಹ್ಮಾನಂದದಲ್ಲಿ ಲೀನವಾಗಿ ಸಮಬುದ್ಧಿಯುಳ್ಳವರು ಸಹಜಯೋಗಿ, ಈ ಮೂರು ಬಗೆಯ ಸಾಧಕ ಭಕ್ತರಿಗೆ ಭಕ್ತಿಯೊಂದೇ ಆಧಾರವಾಗಿರುತ್ತದೆ. ಇಂತಹ ಭಕ್ತರಿಗೆ ತಾತಯ್ಯನವರು ಭಯವಿಲ್ಲ ಎಂದಿದ್ದಾರೆ. ಭಯವೆಂದರೆ ಯಾವ ಭಯ? ತಾತಯ್ಯನವರ ಬೋಧನೆ ಹೀಗಿದೆ..
ಭಕ್ತಜನಮುಲು ವೀರಿಕಿ ಭಯಮು ಲೇದು
ಚೇರಿಯುಂದುರು ಶ್ರೀಹರಿಪುರಮುನಂದು||
ಭಕ್ತ ಜನರಿಗೆ ಭಯವಿರುವುದಿಲ್ಲ, ಇವರು ಶ್ರೀಹರಿಯ ಪುರವನ್ನು ಸೇರುತ್ತಾರೆ ಎನ್ನುತ್ತಿದ್ದಾರೆ. ಈ ಭಕ್ತರಿಗೆ ಯಮದೂತರ ನರಕಭಯ ಹಾಗೂ ಹುಟ್ಟುಸಾವುಗಳೆಂಬ ಭವರೋಗದ ಭಯವಿರುವುದಿಲ್ಲ. ಏಕೆಂದರೆ ಎಲ್ಲಾ ಭಯಗಳನ್ನು ನಿವಾರಿಸಿ ಕಾಪಾಡುವ ಭಗವಂತನಾದ ಶ್ರೀಹರಿಗೆ ಅವರು ತಮ್ಮನ್ನು ಒಪ್ಪಿಸಿಕೊಂಡಿರುತ್ತಾರೆ. ಇವರು ಬದುಕಿರುವಾಗಲೇ ಭಗವಂತನಲ್ಲಿ ಮಗ್ನವಾಗಿರುವ ಕಾರಣದಿಂದ, ದೇಹತ್ಯಾಗದ ನಂತರ ನೇರವಾಗಿ ಕೈವಲ್ಯಮುಕ್ತಿಯನ್ನು ಪಡೆದು ಶ್ರೀಹರಿಯ ವೈಕುಂಠಪುರಕ್ಕೆ ಸೇರುತ್ತಾರೆ. ಭಕ್ತಿತತ್ವದ ಶಕ್ತಿ ಮಹತ್ತರವಾದುದು ಎಂದು ತಾತಯ್ಯನವರು ಬೋಧಿಸಿದ್ದಾರೆ.
ಇದನ್ನೂ ಓದಿ: ತಾತಯ್ಯ ತತ್ವಾಮೃತಂ: Ganesh Chaturthi: ಶರಣು ಶರಣು ಕುಂಡಾಲಿಭೂಷಣ…