Site icon Vistara News

ತಾತಯ್ಯ ತತ್ವಾಮೃತಂ ಅಂಕಣ: ಮೂಢಭಕ್ತಿಯಿಂದ ಶೀಘ್ರಮುಕ್ತಿ

kaivara tatayya column

ಭಕ್ತಿತತ್ವವನ್ನು ಯೋಗದೊಂದಿಗೆ ಅಳವಡಿಸಿ ಸಾಮಾನ್ಯರಿಗೂ ತಲುಪುವಂತೆ ಮಾಡಿದ ಕೀರ್ತಿ ಕೈವಾರದ ತಾತಯ್ಯನವರಿಗೆ ಸಲ್ಲುತ್ತದೆ. ಭಕ್ತಿ ಮತ್ತು ಯೋಗವನ್ನು ಸಮ ಸಮವಾಗಿ ತಾತಯ್ಯನವರು ಬೋಧಿಸಿದ್ದಾರೆ. ಭಕ್ತಿಯಲ್ಲಿಯೂ ಮೂಢಭಕ್ತಿಯಿಂದ ಶೀಘ್ರವಾಗಿ ಮುಕ್ತಿ ಸಿಗುವುದೆಂಬ ತತ್ವವನ್ನು ತಾತಯ್ಯನವರು (kaivara tatayya) ಬೋಧಿಸಿದ್ದಾರೆ.

ತಾತಯ್ಯನವರು ಶ್ರೀಕೃಷ್ಣಚರಿತಾಮೃತ ತತ್ವಮೃತ ಯೋಗಸಾರಮು ಎಂಬ ಗ್ರಂಥದಲ್ಲಿ “ಅತಿಮೂಢಭಕ್ತಿಯಿದಿ ಅನ್ನಿಟಿಕಿ ಮೇಲು” ಎಂದಿದ್ದಾರೆ. ಭಗವಂತನನ್ನು ಒಲಿಸಿಕೊಳ್ಳಲು ಇರುವ ಅತ್ಯುತ್ತಮ ಮಾರ್ಗವೆಂದರೆ ಮೂಢಭಕ್ತಿ. ಮೂಢಭಕ್ತಿ ಎಂದರೇನು? ಒಬ್ಬ ಭಕ್ತನು ತನ್ನ ಇಷ್ಟ ಗುರುವಿನಲ್ಲಿ ಅಥವಾ ದೈವದಲ್ಲಿ ಒಂದೇ ಮನಸ್ಸಿನಿಂದ ಏಕಾಗ್ರಚಿತ್ತವಾಗಿ ಶಾಸ್ತ್ರ ವಿಚಾರಗಳ ಗೊಂದಲವಿಲ್ಲದೆ, ತನ್ಮಯನಾಗಿ ತನ್ನನ್ನು ತಾನು ಸಂಪೂರ್ಣವಾಗಿ ಅರ್ಪಿಸಿಕೊಳ್ಳುವುದೇ ಮೂಢಭಕ್ತಿಯಾಗಿದೆ. ಮೂಢಭಕ್ತಿಯ ಮಾರ್ಗದಲ್ಲಿ ಯಾವುದೇ ಭೇದಭಾವ ಇರುವುದಿಲ್ಲವೆಂದು ತಾತಯ್ಯನವರು ಬೋಧಿಸಿದ್ದಾರೆ.

ತೆಲಿಯಕುಂಡಿನ ಮೇಲು ತೆಲಿಸಿತೇ ಮರಿ ಮೇಲು
ತೆಲಿಸಿ ತೆಲಿಯನಿವಾಡು ಪಶುವು ಬೋಲು

ತಾತಯ್ಯನವರ ಈ ಬೋಧವಾಣಿಯಲ್ಲಿ ಆತ್ಮಕಲ್ಯಾಣದ ಭಾವವಿದೆ. ತಿಳಿಯದಿದ್ದರೆ ಒಳ್ಳೆಯದು, ತಿಳಿದಿದ್ದರೆ ಇನ್ನೂ ಒಳ್ಳೆಯದು, ಆದರೆ ತಿಳಿದೂ ತಿಳಿಯದವನು ಪಶುವನ್ನು ಹೋಲುತ್ತಾನೆ ಎನ್ನುತ್ತಿದ್ದಾರೆ. ಭಕ್ತಿತತ್ವದಲ್ಲಿ ಆತ್ಮಸಮರ್ಪಣೆ ಅತಿಮುಖ್ಯವಾದುದು. ಅರ್ಚನೆ, ಧ್ಯಾನ, ಕೀರ್ತನೆ, ಪೂಜೆ ಇವುಗಳ ಬಗ್ಗೆ ತಿಳಿದು ಆಚರಿಸಿದರೆ ಒಳ್ಳೆಯದೇ, ತಿಳಿಯದಿದ್ದರೂ ನಡೆಯುತ್ತದೆ. ನಿರ್ಬಂಧವಿಲ್ಲ. ಭಕ್ತಿಮಾರ್ಗದ ಗುರಿ, ಅದರ ಆಚರಣೆ, ಆಚಾರ ವಿಚಾರಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಿರಬೇಕು. ತಿಳಿದುಕೊಳ್ಳದಿದ್ದರೂ ಪರವಾಗಿಲ್ಲ. ಆದರೆ ತಿಳಿದುಕೊಂಡು, ತಿಳಿಯದವನಂತೆ ನಟಿಸುತ್ತಾ ಭೇದವಾದವನ್ನು ಬಿಡಬೇಕು ಎಂಬುದನ್ನು ತಿಳಿಯದ ಕಡು ಮೂರ್ಖನು ಪಶುವಿಗೆ ಸಮಾನ ಎನ್ನುತ್ತಿದ್ದಾರೆ ತಾತಯ್ಯನವರು. ಪಶುವಿಗೆ ಸರಿಯಾದ ದಾರಿ ಗೊತ್ತಿದ್ದರೂ, ದಾರಿಯಲ್ಲಿ ನಡೆಯುವುದಿಲ್ಲ. ಅದು ದಾರಿ ತಪ್ಪುತ್ತಲೇ ಇರುತ್ತದೆ. ತಪ್ಪಿದಾಗಲೆಲ್ಲಾ ಏಟು ಹಾಕುತ್ತಾ ಸರಿಪಡಿಸಬೇಕಾಗುತ್ತದೆ. ಪಶುವನ್ನು ಹೋಲುವ ಮನುಷ್ಯನ ಪಾಡು ಇದೆ ಆಗಿರುತ್ತದೆ ಎನ್ನುತ್ತಿದ್ದಾರೆ.

ಭಕ್ತಿಮಾರ್ಗದಲ್ಲಿ ಮೇಲು-ಕೀಳುಗಳನ್ನು ಕಲ್ಪಿಸುವಂತಿದ್ದರೆ ಅಂತಹ ವಿಚಾರಗಳನ್ನು ತಿಳಿದುಕೊಳ್ಳದಿರುವುದೇ ಒಳಿತು. ಯಾವ ಹೆಸರಿನಿಂದ ಪೂಜಿಸಿದರೂ ಭಗವಂತನು ಒಬ್ಬನೇ ಎಂಬ ಭಕ್ತಿವಿಧಾನವನ್ನು ತಿಳಿದಿದ್ದರೆ ಒಳ್ಳೆಯದು. ಎಲ್ಲಾ ತಿಳಿದಿದ್ದರೂ ಭೇದವಾದವನ್ನು ಮಾಡುತ್ತಾ, ದೇವರ ಹೆಸರಿನಲ್ಲಿ ಜಗಳವಾಡುವವನು ಪಶುವೇ ಹೊರತು ಭಕ್ತನಲ್ಲ ಎಂಬ ಸ್ಪಷ್ಟವಾದ ಬೋಧನೆಯನ್ನು ತಾತಯ್ಯನವರು ಈ ಪದ್ಯದಲ್ಲಿ ಮಾಡುತ್ತಿದ್ದಾರೆ.

ಹೊಲದ ಪ್ರತಿಮೆ:

ಗುರುಸೇವೆ ಮಾಡದ ಶಿಷ್ಯನು ಕೇವಲ ವೇಷದ ಬೊಂಬೆಯಂತೆ ಎಂದು ತಾತಯ್ಯನವರು ಬೋಧಿಸುತ್ತಿದ್ದಾರೆ.

ಶ್ರೀಗುರು ಶುಶ್ರೂಷ ಶಾಯನೇರನಿವಾಡು
ಪಂಟಚೇನಿಲೋನಿ ಪ್ರತಿಮಸಮಮು

ಶ್ರೀಗುರುವಿನ ಸೇವೆ ಮಾಡಲಾರದವನು ಹೊಲದಲ್ಲಿ ಇರುವ ಪ್ರತಿಮೆಯಂತೆ ಎನ್ನುತ್ತಿದ್ದಾರೆ. ಹೊಲಗಳಲ್ಲಿ ಬೆಳೆ ಫಸಲನ್ನು ಪಕ್ಷಿ-ಪ್ರಾಣಿಗಳು ತಿನ್ನಬಾರದು ಎಂದು ಭಯಪಡಿಸಲು ಒಂದು ಬೆದರು ಬೊಂಬೆಯನ್ನು ಇಟ್ಟಿರುತ್ತಾರೆ. ಶ್ರೀಗುರು ಸೇವೆಯನ್ನು ಮಾಡದ ಶಿಷ್ಯನೂ ಕೂಡ ಈ ಬೆದರು ಬೊಂಬೆಯ ಪ್ರತಿಮೆಗೆ ಸಮ ಎನ್ನುತ್ತಿದ್ದಾರೆ ತಾತಯ್ಯನವರು. ಈ ವಾಕ್ಯದಲ್ಲಿ ಗುರುಶಿಷ್ಯರ ತತ್ವವನ್ನು ಹೇಳಲಾಗಿದೆ. ಸಾಮಾನ್ಯವಾಗಿ ಹೊಲಗಳಲ್ಲಿ ಬೆಳೆಯ ತೆನೆಕಾಳುಗಳನ್ನು ತಿನ್ನಲು ಬರುವ ಪಕ್ಷಿಗಳನ್ನು ಓಡಿಸಲು ಹುಲ್ಲು-ಕೋಲುಗಳಿಂದ ಮಾಡಿದ ಅಕೃತಿಯನ್ನು ರಚಿಸಿ ಬೆದರುಬೊಂಬೆಗಳನ್ನು ನಿಲ್ಲಿಸುತ್ತಿದ್ದರು. ಈ ಬೊಂಬೆ ವಾಸ್ತವವಾಗಿ ಹೊಡೆಯುವುದೂ ಇಲ್ಲ, ಬಡಿಯುವುದೂ ಇಲ್ಲ. ಗುರುಸೇವೆ ಮಾಡದಿರುವ ಶಿಷ್ಯನ ಸಾಧನೆ ಕೂಡ ಹೀಗೆ ನಿರ್ಜೀವದ ಬೊಂಬೆಯಂತೆ. ಇಂತಹ ಶಿಷ್ಯನು ವೇಷದ ಗೊಂಬೆಯಂತೆ ಆಡಂಬರದಿಂದ ಕೂಡಿರುತ್ತಾನೆ ಎನ್ನುತ್ತಿದ್ದಾರೆ ತಾತಯ್ಯನವರು.

ಭಾಗವತರು ಮತ್ತು ತಾಯಿ:

ಗುರುಸೇವೆ ಮಾಡದ ಶಿಷ್ಯನ ಸಾಧನೆ ಶೂನ್ಯ. ಇಷ್ಟೇ ಅಲ್ಲ, ಸತ್ಸಂಗದಲ್ಲಿರುವ ಭಾಗವತರು ಹಾಗೂ ತನ್ನನ್ನು ಪೋಷಿಸಿದ ತಾಯಿಯನ್ನು ಕೂಡ ಅರಿತುಕೊಳ್ಳಬೇಕು ಎಂಬ ಬೋಧೆಯನ್ನು ಮಾಡಿದ್ದಾರೆ ತಾತಯ್ಯನವರು.

ಭಾಗವತುಲ ಚೂಚಿ ಭಕ್ತಿ ಶಾಯನಿವಾಡು
ಆತ್ಮಯೋಗಂಬೆಟ್ಲು ಅಭ್ಯಸಿಂಚು
ತನ್ನು ಪೆÇೀಷಿಂಚಿನ ತಲ್ಲಿನೆರುಗನಿವಾಡು
ಗುರುಬಾಂಧವುಲನೆಟ್ಲು ಗುರುತೆರುಂಗು

ಭಕ್ತಿ, ಜ್ಞಾನ, ವೈರಾಗ್ಯ, ತತ್ವದ ಪ್ರತಿರೂಪವಾಗಿರುವ ಭಾಗವತರನ್ನು ನೋಡಿ ನಮಸ್ಕರಿಸಿ, ಭಕ್ತಿಯನ್ನು ಆಚರಿಸದವನು ಆತ್ಮಯೋಗವನ್ನು ಹೇಗೆ ತಾನೇ ಅಭ್ಯಸಿಸಬಲ್ಲ. ತನ್ನನ್ನು ಶಿಶುವಿನಿಂದಲೂ ಪೆÇೀಷಿಸಿ, ಬೆಳೆಸಿದ ತಾಯಿಯನ್ನು ತಿಳಿಯದವನು ಗುರುಬಾಂಧವರನ್ನು ಹೇಗೆ ಗುರುತಿಸಬಲ್ಲ? ಎನ್ನುತ್ತಿದ್ದಾರೆ. ಆತ್ಮಯೋಗವೆಂಬುದು ತನ್ನನ್ನು ತಾನು ಅರಿಯುವ ಯೋಗ. ಆತ್ಮಯೋಗದ ಅಭ್ಯಾಸ ಮಾಡುವವನು ಆತ್ಮಯೋಗಿ. ಇದನ್ನು ಗುರುಬೋಧೆಯಿಂದ ತಿಳಿಯಬಹುದು, ಅಲ್ಲಿ ಸಿದ್ಧಿಯಾಗದಿದ್ದರೆ ಭಾಗವತರ ಸತ್ಸಂಗದಿಂದ ತಿಳಿಯಬಹುದು. ಈ ರೀತಿ

ಇರುವಾಗ ಭಾಗವತರನ್ನು ಕಂಡು ಭಕ್ತಿಯನ್ನು ತೋರಿಸದವನು ಆತ್ಮಯೋಗವನ್ನು ಅಭ್ಯಾಸ ಮಾಡಲು ಆಗುವುದಿಲ್ಲ ಎನ್ನುತ್ತಿದ್ದಾರೆ.

ಪ್ರತಿಯೊಬ್ಬರ ಜೀವನದಲ್ಲಿ ತಾಯಿಯ ಪಾತ್ರ ಮಹತ್ತರವಾದುದು. ತಾಯಿಯನ್ನು ಗೌರವಿಸದಿರುವ ದುಷ್ಟನಿಗೆ ತಾಯಿಯ ಕರುಳಿನ ಅನುಭವ ಹೇಗೆ ತಾನೇ ತಿಳಿಯುತ್ತದೆ. ಶಿಶುವಿನಿಂದಲೂ ತನ್ನನ್ನು ಪೆÇೀಷಿಸಿಕೊಂಡು ಬೆಳೆಸಿದ ತಾಯಿಯನ್ನು ತನ್ನ ಭೋಗಜೀವನಕ್ಕೆ ಅಡ್ಡಿ ಎಂದುಕೊಂಡು ದೂಷಿಸುವವನು ಗುರುವನ್ನು ಮತ್ತು ಬಂಧುಗಳನ್ನು ಗುರುತಿಸುತ್ತಾನೆಯೇ, ಇಲ್ಲ. ತಾಯಿಯನ್ನು ಆರ್ಥಮಾಡಿಕೊಳ್ಳದಿದ್ದರೆ ಗುರುವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬ ಮರ್ಮವನ್ನು ತಾತಯ್ಯನವರು ಬೋಧಿಸುತ್ತಿದ್ದಾರೆ.

ಇದನ್ನೂ ಓದಿ: ತಾತಯ್ಯ ತತ್ವಾಮೃತಂ: ಪರಮಪದವಿ ಸಾಧನೆಯ ಹಂತಗಳು

ಮೂಢಭಕ್ತಿಯಿಂದ ಮುಕ್ತಿ:

ಈ ಬೋಧನಾ ಪದ್ಯದ ಕೊನೆಯಲ್ಲಿ ತಾತಯ್ಯನವರು ಮೂಢಭಕ್ತಿಯ ಬಗ್ಗೆ ಉಲ್ಲೇಖವನ್ನು ಮಾಡುತ್ತಾ ಹೀಗೆ ಹೇಳಿದ್ದಾರೆ.

ದುರ್ಜನುಲು ವೀರು ವೀರಿನಿ ಚಾರರಾದು
ಮೂಢಭಕ್ತಿನಿ ಶೀಘ್ರಂಬೆ ಮುಕ್ತಿ ಗನುನು||

ತಿಳಿದೂ ತಿಳಿಯದಂತೆ ವರ್ತಿಸುವವನು, ಗುರುಸೇವೆ ಮಾಡದವನು, ಭಾಗವತರನ್ನು ಕಂಡು ಭಕ್ತಿ ಆಚರಿಸದವನು, ತಾಯಿಯನ್ನು ಅರಿಯದವನು ದುರ್ಜನರು. ಇವರನ್ನು ಸೇರಬಾರದು. ಇಂತಹವರನ್ನು ಸೇರುವುದಕ್ಕಿಂತಲೂ ಮೂಢಭಕ್ತಿಯಿಂದ ಗುರುವನ್ನು ನಂಬಿ ಶೀಘ್ರವಾಗಿ ಮುಕ್ತಿಯನ್ನು ಪಡೆಯಬಹುದು ಎನ್ನುತ್ತಿದ್ದಾರೆ ತಾತಯ್ಯನವರು. ಪದ್ಯದ ಈ ಕೊನೆಯ ಬೋಧೆ ಬಹಳ ಮುಖ್ಯವಾದುದು. ಜಪ-ತಪ-ಪೂಜೆ-ಧ್ಯಾನ ಏನೂ ಗೊತ್ತಿಲ್ಲದಿದ್ದರೂ ಚಿಂತೆಯಿಲ್ಲ. ಭಕ್ತನು ನಿರಾಶನಾಗಬೇಕಾಗಿಲ್ಲ. ಸರ್ವೇಶ್ವರನಾದ ಗುರುವನ್ನು ನಂಬಿ, ನಿಷ್ಕಲ್ಮಷವಾದ ಹೃದಯದಿಂದ ಕರೆಯಬೇಕು. ಆಗ ನಿನ್ನ ಪ್ರಾರ್ಥನೆ ಫಲಿಸುತ್ತದೆ ಎನ್ನುತ್ತಿದ್ದಾರೆ.

ಶಾಸ್ತ್ರವಿಧಾನವನ್ನು ಅನುಸರಿಸಿ ಮುಕ್ತಿಯನ್ನು ಪಡೆಯುವುದು ನಿಧಾನವಾಗಬಹುದು ಆದರೆ ಮುಗ್ಧಭಕ್ತರ ಮೂಢಭಕ್ತಿಯು ದೃಢವಾಗಿರುವುದರಿಂದ ಇದು ನಿಧಾನವಾಗುವುದಿಲ್ಲ, ಶೀಘ್ರವೇ ಮುಕ್ತಿ ಸಿಗುತ್ತದೆ ಎಂಬ ದಿವ್ಯಸಂದೇಶವನ್ನು ತಾತಯ್ಯನವರು ಬೋಧಿಸಿದ್ದಾರೆ.

ಇದನ್ನೂ ಓದಿ: ತಾತಯ್ಯ ತತ್ವಾಮೃತಂ: ಭಕ್ತ ಜನರಿಗೆ ಯಾತರ ಭಯವೂ ಇಲ್ಲ

Exit mobile version