Site icon Vistara News

ತಾತಯ್ಯ ತತ್ವಾಮೃತಂ: ಯಮನಿಗೆ ಅಂಜದ ಸತ್ಯವ್ರತಿಗಳು

kaivara tatayya column

ತಾತಯ್ಯ ತತ್ವಾಮೃತಂ: ಕೈವಾರ ತಾತಯ್ಯನವರು ಈ ಬೋಧನೆಯಲ್ಲಿ ಸಾವಿಗೆ ಅಂಜದ ಸತ್ಯವ್ರತಿಗಳ ಬಗ್ಗೆ ವಿವರಿಸುತ್ತಿದ್ದಾರೆ. ಸತ್ಯವನ್ನು ಅರಿತು ಪಾಲಿಸುವವರು ಸತ್ಯವ್ರತಿಗಳು. ಇಂತಹ ಸತ್ಯವ್ರತಿಗಳನ್ನು ಮುಟ್ಟಲು ಯಮಧರ್ಮರಾಜನು ಹೆದರುತ್ತಾನೆ ಎಂದು ತಾತಯ್ಯನವರು ಹೇಳುತ್ತಿದ್ದಾರೆ. ಇಲ್ಲಿ ಹೇಳಿರುವ ನಾಲ್ಕು ಬಗೆಯ ಸಾಧಕರು ಭಗವಂತನಿಗೆ ಪ್ರಿಯವಾಗುವಂತೆ ತಮ್ಮ ಶಪಥವನ್ನು ತಮ್ಮ ಶರೀರದ ಕೊನೆಯ ಉಸಿರು ಇರುವವರೆಗೆ ಬಿಡದೆ ವ್ರತದಂತೆ ಪಾಲಿಸುತ್ತಾ ಸಾಧಕರೆನಿಸಿಕೊಳ್ಳುತ್ತಾರೆ ಎಂಬುದು ತಾತಯ್ಯನವರ ಅಭಿಪ್ರಾಯವಾಗಿದೆ. ಅಂತಹ ಸಾಧಕರನ್ನು ವಿವರವಾಗಿ ತಿಳಿಯೋಣ..

1) ಪರಮ ಪತಿವ್ರತೆ :

ಪರಮ ಪತಿವ್ರತ – ಪತಿ ನಷ್ಟಮೈನನೂ
ತನ ವ್ರತಮು ವಿಡಚುನಾ ತಪಸಿ ರೀತಿ||

ಪತಿವ್ರತೆ ಎಂದರೆ ಪತಿಸೇವೆಯೆಂಬ ವ್ರತವನ್ನು ಹಿಡಿದವಳೆಂದು ಅರ್ಥ. ಪತಿ ತೀರಿಕೊಂಡರೂ ಆಕೆಯು ಪತಿಚಿಂತನೆ ಎಂಬ ತನ್ನ ವ್ರತವನ್ನು ಬಿಡದೇ ಇರುವವಳನ್ನು ತಾತಯ್ಯನವರು ಪರಮ ಪತಿವ್ರತೆ ಎಂದು ಕರೆದಿದ್ದಾರೆ. ಇಕೆಯು ತಪಸ್ಸಿನಲ್ಲಿರುವ ತಪಸ್ವಿಗೆ ಸಮಾನಳಾದ ತಪಸ್ವಿನಿ. ಇಂತಹವರು ಸಾವಿಗೆ ಅಂಜುವುದಿಲ್ಲ. ಪತಿಸೇವೆಗಿಂತಲೂ ಮಿಗಿಲಾದುದು ಈ ಲೋಕದಲ್ಲಿ ಇಲ್ಲವೆಂದು ಭಾವಿಸಿ, ಗೃಹಕೃತ್ಯದಲ್ಲಿ ದಕ್ಷಳಾಗಿ, ಪ್ರಿಯವಾದಿನಿಯಾಗಿ, ಪತಿಯಲ್ಲೇ ಪ್ರಾಣವಿಟ್ಟುಕೊಂಡಿರುವ ಪತಿವ್ರತೆಯೇ ನಿಜವಾದ ಪತ್ನಿ. ಪತಿಯನ್ನೇ ಗುರು-ದೈವವೆಂದು ಆರಾಧಿಸುವವಳು ಪರಮ ಪತಿವ್ರತೆ. ಇಂತಹ ಪತಿವ್ರತೆಯು ಸದಾಕಾಲ ಪತಿಯ ಚಿಂತನೆಯನ್ನೇ ಮಾಡುತ್ತಾ ಕಾಲ ಕಳೆಯುತ್ತಾಳೆ. ಪತಿ ನಿಧನರಾಗಿದ್ದರೂ ಹೃದಯದಲ್ಲಿ ಅನುಕ್ಷಣವೂ ಪತಿಧ್ಯಾನದಲ್ಲಿ ಇರುವ ಪರಮ ಪತಿವ್ರತೆಯನ್ನು ಯಮಧರ್ಮರಾಯನು ಮುಟ್ಟಲು ಹೆದರುತ್ತಾನೆ ಎನ್ನುತ್ತಿದ್ದಾರೆ ತಾತಯ್ಯನವರು. ವನವಾಸಕ್ಕೆ ಬಂದಿದ್ದ ಸೀತಾಮಾತೆಗೆ ಅನುಸೂಯದೇವಿ ಪತಿವ್ರತೆಯ ಮಹತ್ವವನ್ನು ಬೋಧಿಸುತ್ತಾ “ಪತಿವ್ರತೆಯಾದ ಸಾಧ್ವಿಗೆ ಪತಿಯೇ ದೇವಾಧಿದೇವತೆಗಳಿಗಿಂತ ಹೆಚ್ಚಿನ ಶ್ರೇಷ್ಠ ದೈವ” ಎಂದು ಉಪದೇಶವನ್ನು ಮಾಡುತ್ತಾಳೆ. ಮಹಿಳೆಯರ ಬಗ್ಗೆ ತಾತಯ್ಯನವರು ಹೊಂದಿದ್ದ ಗೌರವ ಭಾವನೆ ಈ ಪದ್ಯದಲ್ಲಿ ವ್ಯಕ್ತವಾಗಿದೆ. ವಿಧವೆಯನ್ನು ತಾತಯ್ಯನವರು ಪತಿವ್ರತೆಯನ್ನಾಗಿಯೂ, ತಪಸ್ವಿನಿಯನ್ನಾಗಿಯೂ ಪ್ರಶಂಸಿದ್ದಾರೆ. ಸತಿ ಸಾವಿತ್ರಿಯ ಉದಾಹರಣೆಯನ್ನೂ ಇಲ್ಲಿ ಪ್ರಸ್ತಾಪಿಸಬಹುದಾಗಿದೆ.

2) ಅಂತರಂಗದ ಭಕ್ತ:

ವಿಷ್ಣುಭಕ್ತುಂಡೈನ ವಿಪ್ರುಡು ಯೇವೇಳ
ಮರಚುನಾ ಸದ್ಗುರುನಿ ಮನಸುಲೋನ ||

ಇನ್ನು ಎರಡನೇಯ ಸಾಧಕ. ವಿಷ್ಣುಭಕ್ತನಾದ ವಿಪ್ರನು ಸದಾಕಾಲ ಸದ್ಗುರುವನ್ನು ಮನಸ್ಸಿನಲ್ಲಿ ಮರೆಯದೇ ಸ್ಮರಿಸುತ್ತಿರುತ್ತಾನೋ ಇಂತಹವನನ್ನೂ ಯಮನು ಮುಟ್ಟಲು ಅಂಜುತ್ತಾನೆ. ಇವನು ಅಂತರಂಗದ ಸಾಧಕ. ಇಲ್ಲಿ ವಿಪ್ರನೆಂದರೆ ಬ್ರಾಹ್ಮಣನೆಂದು ಅರ್ಥವಲ್ಲ. ಯಾರಾದರೇ ಸದಾಕಾಲ ಅಂತರಂಗದಲ್ಲಿ ಭಗವಂತನನ್ನು ಸ್ಮರಿಸುತ್ತಿರುತ್ತಾರೋ ಅವರೆಲ್ಲರೂ ವಿಪ್ರರೆ. ಭಕ್ತಿಯ ಭಾವಪರವಶತೆಯನ್ನು ತಾತಯ್ಯನವರು ಎತ್ತಿಹಿಡಿದಿದ್ದಾರೆ. “ಯಾವ ಜಾತಿಯವನೇ ಆಗಿರಲಿ, ಯಾವ ನೀತಿಯವನೇ ಆಗಿರಲಿ ಹರಿಭಕ್ತಿಯನ್ನು ಹೊಂದಿರುವವನೇ ಅಗ್ರಜನು” ಎಂದಿದ್ದಾರೆ ತಾತಯ್ಯನವರು. ಅಂತರಂಗದ ಭಕ್ತನು ಯಾವುದೇ ಲೋಕವ್ಯವಹಾರದಲ್ಲಿದ್ದರೂ ಮನಸ್ಸಿನಲ್ಲಿ ಭಗವಂತನ ಧ್ಯಾನ ಬಿಡುವುದಿಲ್ಲ. ಅವನು ಮಾಡುವ ಎಲ್ಲಾ ಕರ್ತವ್ಯಗಳನ್ನು ಭಗವಂತನ ಆರಾಧನೆ ಎಂದು ಮಾಡುತ್ತಿರುತ್ತಾನೆ. ಇಲ್ಲಿ ವಿಷ್ಣುಭಕ್ತರೆಂದರೆ ಭಗವಂತನ ಆರಾಧಕರು ಎಂದು ಅರ್ಥ. ಸದ್ಗುರುವೆಂದರೆ ಭಗವಂತ. ನಿರಂತರವಾಗಿ ಮನಸ್ಸಿನಲ್ಲಿ ಭಗವಂತನನ್ನು ಸ್ಮರಿಸುವವರು ಸತ್ಯವ್ರತಿಗಳು ಎಂದಿದ್ದಾರೆ ತಾತಯ್ಯನವರು. ಇವರು ಸಾವಿಗೆ ಹೆದರುವುದಿಲ್ಲ.

3) ಸಿದ್ಧಯೋಗಿ:

ಮೇರುವಪೈ ಚೇರಿ ಮೆಲಗ ನೇರ್ಚಿನ ಯೋಗಿ
ಚಿಕ್ಕುನಾ ಸಂಸಾರ ಚಿಕ್ಕುಲಂದು ||

ಸಿದ್ಧಯೋಗಿಯನ್ನು ತಾತಯ್ಯನವರು ಇಲ್ಲಿ ಪ್ರಸ್ತಾಪಿಸಿದ್ದಾರೆ. ದೇಹದಲ್ಲಿರುವ ಮೇರುವಿನ ಮೇಲೆ ಸಮಾಧಿಯೋಗ ವಿಧಾನದಿಂದ ಸಂಚರಿಸುವುದನ್ನು ಕಲಿತ ಸಾಧಕಯೋಗಿಯು ಸಂಸಾರದ ತೊಡಕುಗಳಿಗೆ ಸಿಕ್ಕಿಹಾಕಿಕೊಳ್ಳುವನೇ? ಎನ್ನುತ್ತಿದ್ದಾರೆ. ತಾತಯ್ಯನವರು ಸಹ ಗೃಹಸ್ಥರಾಗಿದ್ದಾಗ ಸಂಸಾರದ ತೊಡಕುಗಳಿಗೆ ಸಿಕ್ಕದೆ ಬಾಳಿ, ಗೃಹತ್ಯಾಗಮಾಡಿ ನಂತರ ಯೋಗಿಗಳಾದವರು. “ಮೇರುವ” ಎಂದರೆ ಮೇರುಪರ್ವತ, ಬಂಗಾರದ ಬೆಟ್ಟ ಎಂದು ಅರ್ಥ. ಆದರೆ ಯೋಗಭಾಷೆಯಲ್ಲಿ ಮೇರುವ ಎಂದರೆ ಮೇರುದಂಡ. ಇದು ದೇಹದ ಬೆನ್ನುಮೂಳೆ. ಈ ಮೇರುದಂಡದಲ್ಲಿಯೇ ಸುಷುಮ್ನನಾಡಿಯು ಗುದಭಾಗದಿಂದ ಮಸ್ತಕದ ಬ್ರಹ್ಮರಂಧ್ರದವರೆಗೆ ಹಬ್ಬಿದೆ. ಕುಂಡಲಿನೀ ಸಾಧಕ ಯೋಗಿಯು ಈ ನಾಡಿಯ ಮೂಲಕ ಮೂಲಾಧಾರಚಕ್ರದಿಂದ ಸಹಸ್ರಾರ ಚಕ್ರದವರೆಗೆ ಸಂಚರಿಸುತ್ತಾ ಪರಮಾತ್ಮನಲ್ಲಿ ಲೀನವಾಗುವ ಸಾಧನೆಯನ್ನು ಮಾಡಿರುತ್ತಾನೆ.

ಇಂತಹ ಯೋಗಿ ಬ್ರಹ್ಮಾನಂದವನ್ನು ಪಡೆಯುತ್ತಾನೆ. ಅಂತರಂಗ-ಬಹಿರಂಗ ಎರಡರಲ್ಲೂ ಈ ಸಾಧಕಯೋಗಿ ಬ್ರಹ್ಮವನ್ನು ಕಾಣುತ್ತಿರುತ್ತಾನೆ. ರಾಗ-ದ್ವೇಷಗಳಿಗೆ, ಅಹಂಕಾರ, ಮಮಕಾರಗಳ ತೊಡಕುಗಳಲ್ಲಿ ಈ ಯೋಗಿ ಸಿಕ್ಕಿಬೀಳುವುದಿಲ್ಲ. ಈತ ಮಾಯಗೆ ವಶನಲ್ಲ. ಸಂಸಾರದ ಮೋಹ-ಮಮತೆಗಳ ಬಲೆ ಇಲ್ಲ. ಇಂತಹ ಯೋಗಿಯ ಮೇಲೆ ಯಮನಿಗೆ ಅಧಿಕಾರವಿಲ್ಲ. ಏಕೆಂದರೆ ಪಾಪ-ಪುಣ್ಯಗಳ ಆಧಾರದ ಮೇಲೆ ಯಮನಿಗೆ ದಂಡಾಧಿಕಾರವಿರುತ್ತದೆ. ಯೋಗಿಗೆ ಪಾಪಪುಣ್ಯಗಳೇ ಇರುವುದಿಲ್ಲ. “ದಂಡಧರುಡು ಮಮ್ಮು ದಂಡಿಂಪ ವೆರುಚುನು” ಯೋಗಿಗಳನ್ನು ದಂಡಿಸಲು, ಮುಟ್ಟಲು ಯಮನು ಅಂಜುತ್ತಾನೆ ಎಂದಿದ್ದಾರೆ ತಾತಯ್ಯನವರು.

4) ಗುಪ್ತಸಾಧಕರಾದ ಭಾಗವತರು:

ಅಂಗಭಾವಮು ತೆಲಿಸಿ ಲಿಂಗಜ್ಯೋತಿನಿ ಜೂಚಿ
ಬಹು ಗುಪ್ತುಡೈವುಂಡು ಭಾಗವತುಡು||

ಭಾಗವತರೆಂದರೆ ಭಗವಂತನ ಜನ. ಉಪಾಸನೆಯಿಂದ ಭಗವಂತನನ್ನು ಓಲಿಸಿಕೊಂಡು ಸಾಕ್ಷಾತ್ಕಾರ ಪಡೆದುಕೊಂಡ ಅನನ್ಯ ಭಕ್ತರೇ ಭಾಗವತರು. ಇಂತಹ ಭಾಗವತರು ದೇಹದ ಬಗ್ಗೆ ಮೋಹವಿಲ್ಲದೆ, ಪರಮಾತ್ಮ ಭಾವದಿಂದ ಸ್ವಪ್ರಕಾಶವುಳ್ಳ ಲಿಂಗಜ್ಯೋತಿ ರೂಪನಾದ ಭಗವಂತನನ್ನು ತನ್ನಲ್ಲೇ ಕಂಡುಕೊಂಡು ಆನಂದಮಯನಾಗಿರುತ್ತಾನೆ. ಈತನು ಗುಟ್ಟು ಬಿಟ್ಟುಕೊಡದೆ, ಅರಿಯದವನಂತೆ ಸುಮ್ಮನಿರುವ ಗೂಡಸಾಧಕನಾದ ಭಾಗವತ. ಇತನು ಲಿಂಗಜ್ಯೋತಿಯನ್ನು ಕಂಡುಕೊಂಡಿರುತ್ತಾನೆ ಎನ್ನುತ್ತಿದ್ದಾರೆ ತಾತಯ್ಯನವರು. ಲಿಂಗಜ್ಯೋತಿಯೆಂದರೆ ಭಗವಂತನೆಂಬ ಪ್ರಕಾಶದ ಪರಂಜ್ಯೋತಿ ಎಂದರ್ಥ. ಯೋಗಭಾಷೆಯಲ್ಲಿ ಇದನ್ನು ಆಕಾಶದೀಪ ಎಂದೂ ಕರೆಯುತ್ತಾರೆ. ಸ್ವಪ್ರಕಾಶದ ಪರಂಜ್ಯೋತಿಯಾಗಿರುವ ಲಿಂಗಜ್ಯೋತಿಯನ್ನು ಕಂಡುಕೊಂಡ ಭಾಗವತನು ಬಾಹ್ಯದಲ್ಲಿ ಬಲ್ಲವನೆಂದು ತೋರ್ಪಡಿಸಿಕೊಳ್ಳದೆ ಸಾಮಾನ್ಯನಂತೆ ವರ್ತಿಸುತ್ತಾ ಗೂಢಸಾಧಕನಾಗಿರುತ್ತಾನೆ. ಇಂತಹ ಗುಪ್ತಾಸಾಧಕನಾದ ಸತ್ಯವ್ರತನು ಸಾವಿಗೆ ಅಂಜುವುದಿಲ್ಲ.

ಪರಮ ಪತಿವ್ರತೆ, ಅಂತರಂಗದ ಭಕ್ತ, ಸಿದ್ಧಯೋಗಿ ಹಾಗೂ ಭಾಗವತರು ಇವರುಗಳು ಸಾವು-ನೋವುಗಳಿಗೆ ಅಂಜದ ಸತ್ಯವ್ರತಿಗಳು. ಇವರನ್ನು ಮುಟ್ಟಲು ಯಮಧರ್ಮರಾಯನು ಹೆದರುತ್ತಾನೆ ಎನ್ನುತ್ತಾ ತಾತಯ್ಯನವರು ಭಕ್ತಿಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ತಾತಯ್ಯ ತತ್ವಾಮೃತಂ ಅಂಕಣ: ಶ್ರೀರಾಮಭಜನೆ ಭವರೋಗಕ್ಕೆ ಔಷಧಿ

Exit mobile version