“ಶ್ರೀರಾಮ ನೀ ನಾಮಮು ಜಿಹ್ವಕು ರುಚಿಗಾ ವುನ್ನಾದಿ..” (ಶ್ರೀರಾಮ ನಿನ್ನ ನಾಮವು ನಾಲಿಗೆಗೆ ರುಚಿಯಾಗಿದೆ) ಎಂದಿರುವ ಕೈವಾರದ ಶ್ರೀಯೋಗಿ (Kaivara yogi) ನಾರೇಯಣ ತಾತಯ್ಯನವರು (Kaivara thathayya) ತಮ್ಮ ಬೋಧನೆಗಳಲ್ಲಿ ರಾಮನಾಮ ಸ್ಮರಣೆಗೆ ಹೆಚ್ಚಿನ ಮಹತ್ವವನ್ನು ನೀಡಿದ್ದಾರೆ. ತಾತಯ್ಯನವರು ರಾಮ ರಾಮ ಮುಕುಂಧ ಮಾಧವ, ರಾಮುನಿ ಭಜನಾ ಸೇಯವೇ ಮನಸಾ, ರಾಮ ನಿನ್ನೇ ನಮ್ಮಿನಾನುರಾ, ರಾಘವನಾಮಜಪಂ, ಜಯಸೀತಾರಾಮ ಹೀಗೆ ರಾಮನಾಮದ ಮಹತ್ವವನ್ನು ಸಾರುವ ಕೀರ್ತನೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಉತ್ತಮ ಭಕ್ತ ಯಾರು?
ಭಕ್ತರಲ್ಲಿ ಉತ್ತಮವಾದ ಭಕ್ತನ್ಯಾರು, ಭಕ್ತನ ಲಕ್ಷಣವೇನು? ತಾತಯ್ಯನವರು ಈ ಪದ್ಯದಲ್ಲಿ ಈ ರೀತಿಯಾಗಿ ಬೋಧಿಸಿದ್ದಾರೆ.
ರಾಮನಾಮಾಮೃತ ರಸಪಾನಲೋಲುಡೈ
ವುನ್ನ ಭಕ್ತುಡು ಮಹಾ ಉತ್ತಮುಂಡು
ಪಾವನುಲು ವೀರು ವೀರಿಪೈ ಪ್ರೇಮಗಲಿಗಿ
ರಕ್ಷಣಮು ಸೇಯು ಶ್ರೀಕೃಷ್ಣ ರಕ್ಷಕುಂಡು ||
ರಾಮನಾಮವೆಂಬ ಅಮೃತಸಾರವನ್ನು ಪಾನಮಾಡುತ್ತಾ ಆನಂದದಲ್ಲಿ ಮಗ್ನನಾಗಿರುವನೋ ಆ ಭಕ್ತನೇ ಮಹಾ ಉತ್ತಮನು. ಈ ರೀತಿಯ ಭಕ್ತರು ಪರಮ ಪಾವನರು. ಭಕ್ತರ ರಕ್ಷಕನಾದ ಶ್ರೀಕೃಷ್ಣಪರಮಾತ್ಮನು ಇವರಿಗೆ ಆಪತ್ತುಗಳು, ವಿಪತ್ತುಗಳು ಸಂಭವಿಸದ ಹಾಗೆ ಕಾದುಕೊಂಡಿದ್ದು ರಕ್ಷಿಸುತ್ತಾನೆ ಎನ್ನುತ್ತಿದ್ದಾರೆ ತಾತಯ್ಯನವರು. ಒಂದು ಕೀರ್ತನೆಯಲ್ಲಿ ತಾತಯ್ಯನವರು ತಮ್ಮ ರಾಮನಾಮದ ಅನುಭವವನ್ನು ಈ ರೀತಿಯಾಗಿ ವರ್ಣಿಸಿದ್ದಾರೆ.
“ಅತಿಘೋರ ದುರಿತಮುಲು ಅಂಟನಂದುಕು
ಗುರುತು ರಾಮನಾಮಾಮೃತ ಪಾನಮೇ ಸಾಕ್ಷೀ”
ಅತಿಘೋರವಾದ ದುರಿತಗಳು ನನ್ನನ್ನು ಮುಟ್ಟಲಿಲ್ಲ, ಇದಕ್ಕೆ ಕಾರಣವಾದ ಗುರುತೆಂದರೆ ರಾಮನಾಮಾಮೃತದ ಪಾನವೇ ಸಾಕ್ಷಿ ಎಂದಿದ್ದಾರೆ ತಾತಯ್ಯನವರು.
ಪಾರಮು ಲೇನಿ ಅಪಾರ ಪಾಪಮುಲನು
ಪರಿಹರಿಂಚು ಪರಮಾತ್ಮುಂಡಿತಡು..
ರಾಮುನಿ ಭಜನಾ ಸೇಯವೇ ಮನಸಾ..
ರಾಮುನಿ ಭಜನಾ ಸೇಯವೇ ಎಂದಿದ್ದಾರೆ.
ಮಾನವಜನ್ಮದಲ್ಲಿ ಮಾಡಿರುವ ಪಾಪಗಳು, ಹಾಗೂ ಹಿಂದಿನ ಜನ್ಮಗಳಿಂದ ಬಂದಿರುವ ಕರ್ಮಗಳ ನಾಶವಾಗಬೇಕಾದರೆ ರಾಮನ ಭಜನೆಯನ್ನು ಮಾಡು ಎನ್ನುತ್ತಿದ್ದಾರೆ ತಾತಯ್ಯನವರು.
ಮನಸು ಪಕ್ವ ಮಾಡು
ಕೈವಾರದ ಯೋಗಿ ನಾರೇಯಣ ತಾತಯ್ಯನವರ ಬೋಧನೆಗಳಲ್ಲಿ ಸರಳ ಆಧ್ಯಾತ್ಮವನ್ನು ಕಾಣಬಹುದು. ಮೋಕ್ಷವನ್ನು ಪಡೆಯುವುದೇ ಮಾನವ ಜನ್ಮದ ಸಾರ್ಥಕತೆ. ಹಾಗಾದರೆ ಮೋಕ್ಷ ಎಂದರೇನು? ಈ ಪ್ರಶ್ನೆಗೆ ತಾತಯ್ಯನವರು ಹೀಗೆ ಉತ್ತರಿಸಿದ್ದಾರೆ.
“ಸ್ಥಿರಮುಗ ಶ್ರೀ ಹರಿಪಾದಮು
ಹೃದಯಮುಲೋ ಕಟ್ಟಿವೇಶಿಯುಂಡುಟ ಮೋಕ್ಷಂ”
ಪರಮಾತ್ಮನಾದ ಶ್ರೀಹರಿಯ ಚರಣಗಳು ಸ್ಥಿರವಾಗಿ ಹೃದಯದಲ್ಲಿ ನಿಲ್ಲುವ ಹಾಗೆ ಬಂಧಿಸುವುದೇ ಮೋಕ್ಷ. ಮೊದಲು ಭಕ್ತನಾಗಿ ಪರಮಾತ್ಮನಲ್ಲಿ ಶರಣಾಗಬೇಕು. ನವವಿಧ ಭಕ್ತಿಗಳಲ್ಲಿ ಮನಸ್ಸನ್ನು ಮಾಗಿಸಬೇಕು. ಮಾಗಿದ ಮನಸ್ಸಿನಿಂದ ಸ್ಥಿರವಾಗಿ ಏಕಾಗ್ರತೆಯಿಂದ ಶ್ರೀಹರಿಪಾದವನ್ನು ಹೃದಯದಲ್ಲಿ ಕಟ್ಟಿಹಾಕಬೇಕು ಎನ್ನುತ್ತಿದ್ದಾರೆ. ಇಲ್ಲಿ ಕಟ್ಟಿಹಾಕಬೇಕು ಎನ್ನುವ ಪದವನ್ನು ಬಳಸಿದ್ದಾರೆ. ಭಕ್ತನಿಗೆ ಗುರುವಿನ ಪಾದ ಮನಸ್ಸಿನಲ್ಲಿ ನಿಲ್ಲಬೇಕು. ಪ್ರಪಂಚದ ಮಾಯೆಗಳ ಪ್ರಭಾವದಿಂದ ಹೃದಯದಲ್ಲಿ ಶ್ರೀಹರಿಪಾದ ಸ್ಥಿರವಾಗಿ ನಿಲ್ಲಲು ಆಗುವುದಿಲ್ಲ. ಈ ಕಾರಣದಿಂದ ತಾತಯ್ಯನವರು ಹೃದಯದಲ್ಲಿ ಕಟ್ಟಿಹಾಕು. ಅದು ಮತ್ತೆ ಮತ್ತೆ ಬದಲಾಗದಂತೆ ನೋಡಿಕೋ, ಹೃದಯದಲ್ಲಿ ಭದ್ರಪಡಿಸಿಕೋ ಎನ್ನುತ್ತಿದ್ದಾರೆ.
“ಮನಸು ಪಕ್ವಮು ಜೇಸಿ, ಮಾಯಲನ್ನಿಯೂ ಕೋಸಿ
ನೀ ಸೇವಪೈ ಬುದ್ಧಿ ನಿಲುಪು ರಾಮಪ್ರಭೋ”
ಮನಸ್ಸನ್ನು ಪಕ್ವ ಮಾಡು, ಮಾಯೆಯನ್ನು ತೊಲಗಿಸು, ನಿನ್ನ ಸೇವೆಯಲ್ಲಿಯೇ ಬುದ್ಧಿಯನ್ನು ನಿಲ್ಲಿಸು ರಾಮಪ್ರಭೋ ಎನ್ನುತ್ತಾ ಪರಮಾತ್ಮನಲ್ಲಿ ಮೊರೆ ಇಟ್ಟಿದ್ದಾರೆ ತಾತಯ್ಯನವರು.
ಕಣ್ಣು ರೆಪ್ಪೆಯಂತೆ ರಕ್ಷಿಸುವುದು
ಭಗವಂತನು ತನ್ನ ಭಕ್ತರನ್ನು ಯಾವ ರೀತಿಯಾಗಿ ರಕ್ಷಿಸುತ್ತಾನೆ ಎಂದು ತಾತಯ್ಯನವರು ಈ ಪದ್ಯದಲ್ಲಿ ತಿಳಿಸುತ್ತಿದ್ದಾರೆ.
ಜನುಲಾರ ದಲಚುಡೀ ಜಯರಾಮನಾಮಂಬು
ಸಕಲ ದುರ್ದೋಷಮುಲ್ ಸಂಹರಿಂಚು
ಶರಣನ್ನವಾರಲನು ಚೇಪಟ್ಟಿ ಯೇವೇಳ
ಕಂಟಿ ರೆಪ್ಪವಲೆನು ಕಾಚಿಯುಂಡು ||
ಜನರೇ, ಜಯಪ್ರದವಾದ ರಾಮನಾಮವನ್ನು ಸ್ಮರಣೆ ಮಾಡಿರಿ. ರಾಮನಾಮವು ಸಕಲವಾದ ಕೆಟ್ಟ ದೋಷಗಳೆಲ್ಲವನ್ನೂ ನಾಶಪಡಿಸುತ್ತದೆ. ಶರಣು ಎಂದು ಮೊರೆಹೊಕ್ಕವರನ್ನು ಅಭಯ ನೀಡಿ ಕೈಹಿಡಿದು ಕಣ್ಣನ್ನು ಕಾಪಾಡುವ ಕಣ್ಣುರೆಪ್ಪೆಯಂತೆ ಎಲ್ಲ ವೇಳೆಗಳಲ್ಲೂ ಕಾದುಕೊಂಡಿದ್ದು ರಕ್ಷಿಸುತ್ತದೆ ಎನ್ನುತ್ತಿದ್ದಾರೆ ತಾತಯ್ಯನವರು. ರಾಮನಾಮ ಸ್ಮರಣೆಯಿಂದ ಹೇಗೆ ಪ್ರಯೋಜನ ಎಂದು ಸಂಶಯ ಬರಬಹುದೆಂದು ತಾತಯ್ಯನವರು ಒಂದು ಸುಂದರ ಉದಾಹರಣೆಯನ್ನು ನೀಡಿದ್ದಾರೆ. ಕಣ್ಣು ಇಂದ್ರಿಯಗಳಲ್ಲಿ ಶ್ರೇಷ್ಠವಾದುದು. ಕಣ್ಣುಗುಡ್ಡೆಯನ್ನು ಕಣ್ಣಿನ ರೆಪ್ಪೆ ಹೇಗೆ ರಕ್ಷಿಸುತ್ತದೆ ಗೊತ್ತಾಗುವುದಿಲ್ಲ. ಸ್ವಲ್ಪ ಧೂಳು ಬಂದರೆ ಸಾಕು ಕಣ್ಣಿನ ರೆಪ್ಪೆ ಮುಚ್ಚಿಕೊಳ್ಳುತ್ತದೆ. ಹಾಗೆಯೇ ರಾಮನಾಮ ಸ್ಮರಣೆಯು ಭಕ್ತರನ್ನು ಕಾಪಾಡುತ್ತದೆ ಎಂದಿದ್ದಾರೆ.
ರಾಮನಾಮ ಸ್ಮರಣೆಯ ಮಾಡುವವನನ್ನು ರಾಮನು ಎಂದಿಗೂ ಕೈ ಬಿಡುವುದಿಲ್ಲ. ಇದನ್ನೇ ತಾತಯ್ಯನವರು ಶರಣೆಂದು ಹೋದವರನ್ನು ರಾಮನು ಕೈಹಿಡಿದು ರಕ್ಷಿಸುತ್ತಾನೆ ಎನ್ನುತ್ತಿದ್ದಾರೆ. ರಾಮನಾಮವನ್ನು ನಿಷ್ಕಲ್ಮಷವಾದ ಹೃದಯದಿಂದ ಜಪಿಸಿದರೆ ರಾಮನಿಗೆ ಕರೆ ಕೇಳಿಸುತ್ತದೆ. ಭಕ್ತರ ಕಷ್ಟಕ್ಕೆ ರಾಮನು ಹೊರಟುಬಂದು ನೆರವಾಗುತ್ತಾನೆ ಎನ್ನುತ್ತಾರೆ ತಾತಯ್ಯನವರು. ಅಣ್ಣನಾದ ರಾವಣನಿಂದ ತಿರಸ್ಕೃತನಾಗಿ ವಿಭೀಷಣನು ಶ್ರೀರಾಮನ ಬಳಿ ಬಂದು ಶರಣಾಗತಿ ತಿಳಿಸುತ್ತಾನೆ. ಆಗ ಶ್ರೀರಾಮನು ಒಂದು ಮಾತನ್ನು ಹೇಳುತ್ತಾನೆ “ಶರಣು ಎಂದು ಬಂದವರಿಗೆ ನಾನು ಅಭಯವನ್ನು ನೀಡುತ್ತೇನೆ. ಇದು ನಾನು ನಡೆಸಿಕೊಂಡು ಬಂದಿರುವ ವ್ರತ. ಸ್ವತ: ರಾವಣನೇ ಬಂದರೂ ನಾನು ಅಭಯವನ್ನು ಕೊಡುತ್ತೇನೆ” ಎಂದು ಸುಗ್ರೀವನಿಗೆ ಶ್ರೀರಾಮಚಂದ್ರನು ತಿಳಿಸುತ್ತಾನೆ.
ತಂದೆ ಶ್ರೀರಾಮ
“ಶ್ರೀರಾಮ ಶ್ರೀರಾಮ ಶ್ರೀ ರಾಮ ಎನುಚು
ಏ ವೇಳ ಮದಿಲೋನ ವೆದುಕುಚುನ್ನ”
ಶ್ರೀರಾಮ ಶ್ರೀರಾಮ ಎಂದು ನಾನು ಬಾಹ್ಯದಲ್ಲಿ ಹುಡುಕುತ್ತಿಲ್ಲ, ಮನಸ್ಸಿನಲ್ಲಿ ಹುಡುಕುತ್ತಿದ್ದೇನೆ ಎನ್ನುತ್ತಾರೆ ತಾತಯ್ಯನವರು. ಶ್ರೀರಾಮನ ನಾಮಸ್ಮರಣೆ ಮಾಡುತ್ತಾ ಮನಸ್ಸಿನಲ್ಲಿ ಶ್ರೀರಾಮರೂಪನಾದ ಪರಮಾತ್ಮನನ್ನು ಹುಡುಕಬೇಕು. ಇದು ಮನಸ್ಸಿನ ಶುದ್ಧಿ. ಪ್ರಪಂಚದಲ್ಲಿ ನಾಮಸ್ಮರಣೆ ಮಾಡುತ್ತಾ ಮನಸ್ಸಿನಲ್ಲಿ ಹುಡುಕುವವರು ವಿರಳ. ಸಂತ ಕಬೀರದಾಸರು ಒಮ್ಮೆ ಹೀಗೆ ಹೇಳುತ್ತಾರೆ “ನಾನು ಒಂದು ಲೋಟ ನೀರು ಕುಡಿಯಲು ಭಯ ಪಡುತ್ತೇನೆ, ಕಾರಣವೆನೆಂದರೆ ನನ್ನ ಹೃದಯದಲ್ಲೆಲ್ಲಾ ರಾಮನಾಮವನ್ನು ಬರೆದುಕೊಂಡು ಬಿಟ್ಟಿದ್ದೇನೆ, ನೀರು ಕುಡಿದರೆ ಎಲ್ಲಿ ರಾಮನಾಮ ಅಳಿಸಿಹೋಗುತ್ತದೋ ಎಂಬ ಭಯ” ಎಂದಿದ್ದಾರೆ.
ಇದನ್ನೂ ಓದಿ: Kaivara Tatayya Jayanthi : ಜೀವಪರ ಸಂತ ಕೈವಾರ ತಾತಯ್ಯ
ತಾತಯ್ಯನವರು ನನ್ನ ತಂದೆ ಶ್ರೀರಾಮ, ತಾಯಿ ಸೀತಮ್ಮ ಎಂದಿದ್ದಾರೆ.
ತಂಡ್ರಿ ಶ್ರೀರಾಮುಡು, ತಲ್ಲಿ ಸೀತಾದೇವಿ
ಅನಿ ನಮ್ಮಿನಾಡನು ಅನುದಿನಂಬು
ನೇ ಸೇಯು ಪಾಪಮುಲು ನನ್ನಂಟವಿಘಮೀದ
ಮರುವನು ಮೀ ಸ್ಮರಣ ಮನಸುಲೋನ ||
ಶ್ರೀರಾಮನೇ ತಂದೆ, ಸೀತಾದೇವಿಯೇ ತಾಯಿ ಎಂದು ನಾನು ಅನುದಿನವೂ ನಂಬಿಕೊಂಡಿದ್ದೇನೆ. ಇನ್ನುಮುಂದೆ ನಾನು ಮಾಡುವ ಕರ್ತವ್ಯ ರೂಪವಾದ ಶುಭ, ಅಶುಭ ಕರ್ಮಗಳ ಪಾಪ ಫಲ ನನಗೆ ಅಂಟಿಕೊಳ್ಳುವುದಿಲ್ಲ. ಮನಸ್ಸಿನಲ್ಲಿ ಶ್ರೀರಾಮ, ನಿಮ್ಮ ಸ್ಮರಣೆಯನ್ನು ಒಂದು ಕ್ಷಣವಾದರೂ ಮರೆಯುವುದಿಲ್ಲ ಎಂದಿದ್ದಾರೆ ತಾತಯ್ಯನವರು.
ತಾತಯ್ಯನವರು ದೃಢವಾಗಿ ಹೇಳಿರುವಂತೆ ಸೀತಾರಾಮರನ್ನು ತಾಯಿತಂದೆಯರೆಂದು ನಂಬಿಕೊಳ್ಳೋಣ. ಅವರನ್ನು ನಂಬಿಕೊಂಡ ಕ್ಷಣದಿಂದ ಕರ್ಮಫಲಗಳಿಗೂ ನಮಗೂ ಸಂಬಂಧವಿರುವುದಿಲ್ಲ. ಕರ್ಮಫಲಗಳು ನಮಗೆ ಅಂಟಿಕೊಳ್ಳುವುದಿಲ್ಲ. ಹೀಗೆ ಯಾರಾದರೆ ಮಾಡುತ್ತಾರೋ ಅವರೇ ಜಾಣರು. ಅವರೇ ಬಂಧಮುಕ್ತರು.
ಇದನ್ನೂ ಓದಿ: ತಾತಯ್ಯ ತತ್ವಾಮೃತಂ : ಪುರಂದರದಾಸರು, ಕನಕದಾಸರನ್ನು ಸ್ಮರಿಸಿರುವ ಕೈವಾರ ತಾತಯ್ಯ