Site icon Vistara News

ತಾತಯ್ಯ ತತ್ವಾಮೃತಂ : ನಿಮ್ಮನ್ನು ನೀವೇ ಅರಿಯಿರಿ… ನಿಮ್ಮೊಳಗೇ ದೇವರಿದ್ದಾನೆ!

The body is the temple spirituality

#image_title

ಕಸ್ತೂರಿ ಮೃಗವೆಂಬ ಪ್ರಾಣಿಯು ತನ್ನೊಳಗೆ ಕಸ್ತೂರಿಯ ಸುಗಂಧ ಭರಿತ ಪರಿಮಳವನ್ನು ಹೊಂದಿರುತ್ತದೆ. ಆದರೆ ಆ ಸುವಾಸನೆಯು ತನ್ನಿಂದಲೇ ಬರುತ್ತಿದೆ ಎಂಬುದನ್ನು ಅರಿಯದೆ, ಬೇರೆಲ್ಲಿಂದಲ್ಲೋ ಬರುತ್ತಿದೆ ಎಂದು ತಿಳಿದು ಆ ಮೃಗವು ಬಾಹ್ಯದಲ್ಲಿಯೇ ಸುವಾಸನೆಯ ಮೂಲವನ್ನು ಹುಡುಕುತ್ತಾ, ಹುಡುಕುತ್ತಾ ಕೊನೆಗೊಂದು ದಿನ ದೇಹತ್ಯಾಗ ಮಾಡುತ್ತದೆ. ಕಸೂರಿಮೃಗದ ಪ್ರಾಣಿಯ ನಿದರ್ಶನದಂತೆ ಮಾನವರೂ ಕೂಡ ಹುಡುಕಾಟ ನಡೆಸಿದ್ದಾರೆ. ಹುಡುಕಾಟ ಯಾವುದು? ಒಂದು ಚಿಂತನೆಯನ್ನು ಮಾಡೋಣ.

ಕೈವಾರದ ತಾತಯ್ಯನವರು ತಮ್ಮ ಕೀರ್ತನೆಯಲ್ಲಿ “ನಿನ್ನು ನೀವೇ ತೆಲಿಯರಾ.. ನೀಲೋ ವುನ್ನದಿ ದ್ಯಾವರಾ” (ನಿನ್ನನ್ನು ನೀನು ಅರಿತುಕೋ..ನಿನ್ನೊಳಗೆ ದೇವರಿದ್ದಾನೆ) ಎಂದಿದ್ದಾರೆ. ಬಾಹ್ಯದಲ್ಲಿ ಭಗವಂತನಿಗಾಗಿ ಹುಡುಕಾಟವನ್ನು ನಡೆಸದೆ, ನಿನ್ನೊಳಗೆ ಭಗವಂತನನ್ನು ಕಂಡುಕೊಳ್ಳುವ ಸಾಧನೆಯನ್ನು ಮಾಡು ಎಂದು ಬೋಧಿಸಿದ್ದಾರೆ. “ಇದಿಗೋ ತಿರುಪತಿ ಕಾಶಿ ಯೀ ಪುರಮುಲೋನ, ಚೆಡಿ ತಿರುಗುಟದಿ ಯೇಮೊ ಚಪಲಮೇ ಕಾನಿ” (ತಿರುಪತಿ, ಕಾಶಿ ಈ ಪುರದಲ್ಲಿ ಅಂದರೆ ಶರೀರದಲ್ಲಿಯೇ ಇದೆ, ಕೆಟ್ಟು ತಿರುಗುವುದು ಚಪಲಕ್ಕಾಗಿ ಅಷ್ಟೇ) ಎಂದಿದ್ದಾರೆ. ದೇವರನ್ನು ಹುಡುಕುವುದಾದರೆ ಶರೀರದ ಒಳಗೆ ಹುಡುಕಬೇಕು ಎನ್ನುವುದೇ ತಾತಯ್ಯನವರ ತತ್ವ.

ಹುಡುಕುವ ರಹಸ್ಯ

ಪರಮಾತ್ಮನನ್ನು ಹುಡುಕುವ ರಹಸ್ಯವನ್ನು ತಾತಯ್ಯನವರು ಬೋಧಿಸಿದ್ದಾರೆ. ಜ್ಞಾನಮಾರ್ಗ ಒಂದನ್ನೇ ಹೆಚ್ಚು ಅಧ್ಯಯನ ಮಾಡುತ್ತಾ ಕಾಲ ಕಳೆಯುವ ಬದಲು, ದೇಹ ಶೋಧನೆಗೂ ಸಮಯವನ್ನು ವಿನಿಯೋಗಿಸಬೇಕು. ಇದನ್ನೇ ತಾತಯ್ಯನವರು ಹೀಗೆ ಹೇಳಿದ್ದಾರೆ.

ಶಾಸ್ತ್ರಶೋಧಕುಲು ಯೆನ್ನಿ ನೇರ್ಚಿನಾ
ಮಾರ್ಗಮು ತೆಲಿಯದುರಾ
ದೇಹಶೋಧಕಮು ಸಾಧಕಮೆರಿಗಿನ
ಯೋಧಕು ತೆಲುಸುನುರಾ||

ಕೇವಲ ಶಾಸ್ತ್ರ ಅಧ್ಯಯನವೊಂದನ್ನೇ ಎಷ್ಟು ಕಲಿತರೂ ಮಾರ್ಗವು ತಿಳಿಯುವುದಿಲ್ಲ. ದೇಹ ಶೋಧನೆಯ ಸಾಧಕನಾದ ಯೋಧನಿಗೆ ಮಾರ್ಗವು ತಿಳಿಯುತ್ತದೆ. ಯೋಗದ ಮಹತ್ವವನ್ನರಿತು ಶರೀರದಲ್ಲೇ ಹುಡುಕಿದರೆ ಶೀಘ್ರವಾಗಿ ಪರಮಾತ್ಮನ ಇರುವಿಕೆಯ ಗೋಚರವನ್ನು ಪಡೆಯಬಹುದೆಂಬುದನ್ನು ಮನದಟ್ಟು ಮಾಡಿಕೊಡುತ್ತಿದ್ದಾರೆ ತಾತಯ್ಯನವರು.

ಬ್ರಹ್ಮಮು ಬಯಲೈವುಂಡಗ
ವೆದಕುಚು ಭೂಮಿಯೆಲ್ಲ ತಿರುಗು ವರ‍್ರುಲು ಕಲರಾ
ವೆದಕವಲೆ ಘಟಮು ಚೊರಬಡಿ
ಚಿಕ್ಕುನು ಬ್ರಹ್ಮಂಬಪುಡು ಶೀಘ್ರಂಬುನನೂ ||

ಪರಮಾತ್ಮನು ಎಲ್ಲೆಲ್ಲೂ ವ್ಯಾಪಕನಾಗಿರುವನು. ಹಾಗೆಯೇ ಹುಡುಕುವವನ ಶರೀರದಲ್ಲಿಯೂ ಇರುವನು. ಹೀಗಿದ್ದರೂ ಹೊರಗೆ ಹುಡುಕುವ ಪ್ರಯತ್ನವನ್ನು ಮಾಡಬಾರದು ಆ ರೀತಿ ಹೊರಗೆ ಹುಡುಕುತ್ತಾ ತಿರುಗುವವರು ಹುಚ್ಚರಯ್ಯ ಎನ್ನುತ್ತಿದ್ದಾರೆ ತಾತಯ್ಯನವರು.

ಈ ಬ್ರಹ್ಮಸ್ವರೂಪನು ತನ್ನಲ್ಲೇ ವ್ಯಾಪಕವಾಗಿ ಬಯಲಾಗಿರುವಾಗ, ಪರಮಾತ್ಮನನ್ನು ಹೊರಗೆ ಲೋಕವೆಲ್ಲ ಹುಡುಕಾಡುತ್ತಾ ಅಲೆಯುವ ಹುಚ್ಚುತನವನ್ನು ಬಿಟ್ಟು, ಶರೀರದೊಳಗೆ ನುಗ್ಗಿ ಯೋಗವಿಧಾನದ ಮೂಲಕ ತನ್ನೊಳಗೆ ಬಯಲಾಗಿರುವ ಪರಮಾತ್ಮನನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡಬೇಕು. ಈ ರೀತಿ ಶರೀರದೊಳಗೆ ನುಗ್ಗಿ ಹುಡುಕಿದರೆ ಬ್ರಹ್ಮನು ಶೀಘ್ರವಾಗಿ ಕಾಣಸಿಗುತ್ತಾನೆ ಎನ್ನುವ ರಹಸ್ಯವನ್ನು ತಿಳಿಸುತ್ತಿದ್ದಾರೆ ತಾತಯ್ಯನವರು.

ಎಲ್ಲರಿಗೂ ಪರಮಾತ್ಮ ಸಿಗುವನೆನಯ್ಯಾ?

ಶರೀರದಲ್ಲಿ ಚೈತನ್ಯಸ್ವರೂಪಿಯಾದ ಪರಮಾತ್ಮನು ನೆಲೆಸಿದ್ದಾನೆ. ಇದನ್ನು ಅಂತರಂಗದ ಸಾಧನೆಯ ಮೂಲಕ ಕಂಡುಕೊಳ್ಳಬೇಕೆ ಹೊರತು, ಹೊರಗಡೆ ಹುಡುಕಾಡಿ ಪ್ರಯೋಜನವಿಲ್ಲ ಎಂದು ತಾತಯ್ಯನವರು ಸ್ಪಷ್ಟವಾದ ಮಾತುಗಳಲ್ಲಿ ತಿಳಿಸುತ್ತಿದ್ದಾರೆ.

ಕನ್ನರಾಳ್ಳಕು ಮ್ರೊಕ್ಕಿ ಕಡಗಂಡ್ಲು ಪಡನೇಲ
ದೇಶ ದೇಶಂಬುಲು ತಿರುಗನೇಲ
ಶಿವಲಿಂಗ ಗುರುಮೂರ್ತಿ ಚಿಕ್ಕುನಾ ಅಂದರಿಕಿ
ನಾದಬ್ರಹ್ಮಾನAದ ನಾರೇಯಣ ಕವಿ ||

ಶಿವಲಿಂಗ ಗುರುಮೂರ್ತಿ ಎಂದರೆ ಪರಮಾತ್ಮ, ಭಗವಂತ. ಕಂಡ ಕಂಡ ಕಲ್ಲುಗಳಿಗೆ ನಮಸ್ಕರಿಸುತ್ತಾ, ಕಷ್ಟಗಳನ್ನು ಪಡುತ್ತಾ, ದೇಶ ದೇಶಗಳನ್ನು ತಿರುಗುತ್ತಿರುವೆಯಲ್ಲಾ, ಭಗವಂತನು ಎಲ್ಲರಿಗೂ ಸುಲಭವಾಗಿ ಸಿಕ್ಕಿಬಿಡುತ್ತಾನೆಯೇ? ಎಂದು ತಾತಯ್ಯನವರು ಪ್ರಶ್ನಿಸುತ್ತಿದ್ದಾರೆ. ಅಜ್ಞಾನದಿಂದ ಕಲ್ಲುಗಳಿಗೆ ನಮಸ್ಕರಿಸುತ್ತಾ ಲೌಕಿಕವಾದ ಆಸೆಗಳನ್ನು ಪೂರೈಸುವಂತೆ ಬೇಡುತ್ತಾ, ದೇಶಗಳನು ತಿರುಗುತ್ತಾ ಸಾಗುವುದು ವ್ಯರ್ಥಪ್ರಯತ್ನ. ಹೀಗೆ ಭಗವಂತನು ಸಿಗುವವನಾಗಿದ್ದರೆ ಎಲ್ಲರಿಗೂ ಸಿಗುತ್ತಿದ್ದ. ಭಕ್ತಿ, ಜ್ಞಾನ, ವೈರಾಗ್ಯದ ಮೂಲಕ ಮಾತ್ರವೇ ಭಗವಂತನ ದರ್ಶನವನ್ನು ಹೊಂದಬಹುದು. ಅಂತರಂಗದ ಸಾಧನೆಗೆ ಭಗವಂತ ಒಲಿಯುತ್ತಾನೆಯೇ ಹೊರತು, ಇದನ್ನು ತಿಳಿಯದೆ ಯಾಂತ್ರಿಕವಾಗಿ ಬಾಹ್ಯ ಹುಡುಕಾಟದಲ್ಲಿ ಭಗವಂತನು ಸಿಗುವುದಿಲ್ಲವೆಂದು ತಾತಯ್ಯನವರು ಬೋಧಿಸುತ್ತಿದ್ದಾರೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಯೋಗಿಯ ಪರಿಪೂರ್ಣತೆಯ ಬಿನ್ನಹ

ಯೋಗಿಗಳಾದ ತಾತಯ್ಯನವರು ಪರಮಾತ್ಮನಲ್ಲಿ ಒಂದು ಬಿನ್ನಹವನ್ನು ಮಾಡಿದ್ದಾರೆ. ಶರೀರದಲ್ಲಿ ಗುಪ್ತವಾಗಿ ಅಡಗಿರುವ ಪರಮಾತ್ಮನೊಂದಿಗೆ ಸಂಭಾಷಣೆಯ ರೂಪದಲ್ಲಿ ತಾತಯ್ಯನವರು ಈ ಪದ್ಯವನ್ನು ರಚಿಸಿದ್ದಾರೆ.

ಮನಮಿದ್ದರು ವೋಕ ಗೃಹಮುನ
ವುನ್ನದಿ ನೇ ನೆರುಗಲೇಕ ವುಂಟಿನಿದಿವರಕುನ್
ಯೀ ಗೃಹಮು ನೀವು ವಿಡಚಿತೆ
ನೀ ವೆಂಬಡಿ ನೇನು ವತ್ತು ನಿಜಮಿದಿ ಕೃಷ್ಣಾ||

ಪರಮಾತ್ಮನಾದ ಶ್ರೀಕೃಷ್ಣನೇ, ನೀನು ನಾನೂ ಇಬ್ಬರೂ ದೇಹವೆಂಬ ಈ ಒಂದೇ ಗೃಹದಲ್ಲಿ ವಾಸವಾಗಿದ್ದರೂ ಈ ರಹಸ್ಯವನ್ನು ಇದುವರೆವಿಗೂ ಅರಿತುಕೊಳ್ಳಲಾರದವನಾಗಿದ್ದೆನು. ಈಗ ದೇಹದಲ್ಲೇ ನೀನಿರುವುದನ್ನು ಕಂಡುಕೊಂಡಿದ್ದೇನೆ. ಇನ್ನು ಮುಂದೆ ನೀನು ಈ ದೇಹವೆಂಬ ಮನೆಯನ್ನು ಬಿಟ್ಟು ಹೊರಟರೇ ನಾನು ಸಹ ನಿನ್ನನ್ನೇ ಹಿಂಬಾಲಿಸಿಕೊಂಡು ಬಂದು ಬಿಡುತ್ತೇನೆ ಕೃಷ್ಣಾ ಎನ್ನುತ್ತಿದ್ದಾರೆ ತಾತಯ್ಯನವರು.

ಇದೊಂದು ರೀತಿಯಲ್ಲಿ ಮಕ್ಕಳ ಹಠವಿದ್ದಂತೆ. ಮನೆಯಿಂದ ಯಾರಾದರೂ ಹೊರಗೆ ಹೋದರೆ ಅವರೊಂದಿಗೆ ನಾನು ಹೋಗಬೇಕೆಂದು ಮಕ್ಕಳು ಹಠ ಹಿಡಿಯುತ್ತಾರಲ್ಲಾ ಆ ರೀತಿಯಲ್ಲಿ ತಾತಯ್ಯನವರು ಕೃಷ್ಣ ಪರಮಾತ್ಮನಿಗೆ ಹಠಹಿಡಿದು ನೀನು ಕಾಯದ ಮನೆ ಬಿಟ್ಟರೇ, ಹಿಂಬಾಲಿಸಿ ಬರುವೆ ಎಂದು ಹೇಳುತ್ತಿದ್ದಾರೆ. ಇದು ಯೋಗಿಯಾದ ತಾತಯ್ಯನವರ ಪರಿಪೂರ್ಣವಾದ ಬಿನ್ನಹ.

ಇದನ್ನೂ ಓದಿ : ತಾತಯ್ಯ ತತ್ವಾಮೃತಂ : ಕುಲ, ಕುಲವೆಂದು ಹೊಡೆದಾಡದಿರಿ ಎಂದಿರುವ ತಾತಯ್ಯ!

ಈ ಕಾಯದಲ್ಲಿ ಪರಮಾತ್ಮನಿರುವುದನ್ನು ಸಾಧನೆಯ ಮೂಲಕ ಕಂಡುಕೊಳ್ಳಬೇಕು. ಈ ರೀತಿಯಾಗಿ ಕಂಡುಕೊಂಡವನೇ ಯೋಗಿಯೆನಿಸಿಕೊಳ್ಳುತ್ತಾನೆ. ಈ ಯೋಗಿಯು ಪರಮಾತ್ಮನಲ್ಲೇ ಒಂದಾಗಿ ಹುಟ್ಟು-ಸಾವುಗಳಿಲ್ಲದ ವಿದೇಹಮುಕ್ತಿಗೆ ಸಲ್ಲುತ್ತಾನೆ, ಜೀವನ್ಮುಕ್ತನಾಗಿರುತ್ತಾನೆ. ಬಂಧನಗಳಿಂದ ಮುಕ್ತರಾಗೋಣ… ಮನಸ್ಸನ್ನು ಸ್ಥಿರವಾಗಿಸೋಣ… ಅಂತರಂಗದಲ್ಲಿ ಹರಿಯ ಕಾಣೋಣ….

ಲೇಖಕರು ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಕೈವಾರ

Exit mobile version