Site icon Vistara News

ತಾತಯ್ಯ ತತ್ವಾಮೃತಂ : ಮಾನವ ಜನ್ಮದ ಗುರಿ ಮೋಕ್ಷ ಸಂಪಾದನೆ

tatayya thathvamrutam a column by dr m r jayaram about saint kaivara narayanappa

kaivara tatayya

ಈ ಜಗತ್ತಿನಲ್ಲಿ ನಾವೆಲ್ಲರೂ ಹುಟ್ಟಿದ್ದೇವೆ. ಸಮಯ ಕಡಿಮೆ ಇದೆ. ಸಮಯ ಆಗುತ್ತಾ ಬರುತ್ತಿದೆ. ಎಷ್ಟು ದಿನ ಇರುತ್ತೇವೆಯೋ ಗೊತ್ತಿಲ್ಲ, ಕಾಲ ಕೂಡ ಕೆಟ್ಟಿದೆ. ಮುಂದೆ ಎಲ್ಲಿಗೆ ಹೋಗುತ್ತಿದ್ದೇವೆ ಎಂಬ ಚಿಂತನೆ ನಮಗೆಲ್ಲರಿಗೂ ಇದೆ. ಆದ್ದರಿಂದಾಗಿ ಗುರುಗಳೂ, ಋಷಿಮುನಿಗಳಾದ ತಾತಯ್ಯನವರನ್ನು ಪರಮಾತ್ಮ ಎಂದು ಎಲ್ಲರೂ ನಂಬಿದ್ದಾರೆ. ಏಕೆಂದರೆ ತಾತಯ್ಯನವರದು ವಿಶಾಲವಾದ ಹೃದಯ. ಎಲ್ಲರನ್ನೂ ಒಂದುಗೂಡಿಸಿಕೊಂಡು, ಉಪದೇಶವನ್ನು ಮಾಡುವಂತಹ ಮನಸ್ಸು.

ತಾತಯ್ಯನವರ ಬಗ್ಗೆ ಹೆಚ್ಚಾಗಿ ತಿಳಿಸಬೇಕಾಗಿಲ್ಲ. ತಾತಯ್ಯನವರು ಕೇವಲ ಮಾನವ ಜನ್ಮಕ್ಕಲ್ಲಾ, ಇಡೀ ಜೀವರಾಶಿಗಳಿಗೆ ಉಪದೇಶವನ್ನು ಮಾಡಿದ್ದಾರೆ.


ಜೀವರಾಶಿಗಳಲ್ಲಿ ಬೇಧವಿಲ್ಲ

ಕೈವಾರ ತಾತಯ್ಯನವರು ಸರ್ವವನ್ನು ಪರಮಾತ್ಮನಿಗೆ ಅರ್ಪಿಸಿ ತ್ರಿಕಾಲಜ್ಞಾನಿಗಳಾಗಿದ್ದಾರೆ. “ನಾರೇಯಣ” ಎಂಬ ಬೀಜಾಕ್ಷರ, “ಆತ್ಮಬೋಧಾಮೃತ” ವೆಂಬ ಅಮೃತ, “ಕಾಲಜ್ಞಾನ”ವೆಂಬ ಭವಿಷ್ಯವಾಣಿ ಎಲ್ಲವನ್ನೂ ಪರಮಾತ್ಮನೇ ನುಡಿಸಿದ್ದಾನೆ ಎಂದಿದ್ದಾರೆ ತಾತಯ್ಯನವರು. ತಾವು ಎಷ್ಟೇ ಜ್ಞಾನಿಗಳಾದರೂ ಇದೆಲ್ಲವೂ ನನ್ನದಲ್ಲ, ಪರಮಾತ್ಮ ನಿನ್ನದೆ ಎನ್ನುವ ವಿನಯವನ್ನು ತಾತಯ್ಯನವರು ತಮ್ಮ ಕೃತಿಗಳಲ್ಲಿ ತೋರಿದ್ದಾರೆ. ನಾನಲ್ಲ, ನಾನಲ್ಲ, ನಾನಲ್ಲ ಎನ್ನುವ ವಿನಮ್ರತೆಯನ್ನು ಹೊಂದಿರುವ ತಾತಯ್ಯನವರು ಪರಮಾತ್ಮನೇ ಆಗಿದ್ದಾರೆ. ಈ ಜ್ಞಾನವನ್ನು ಪಡೆದ ಯಾರೇ ಆಗಲಿ, ಅವರು ಯಾವ ಜೀವರಾಶಿಗಳಲ್ಲಿಯೂ ಭೇದವನ್ನು ತೋರುವುದಿಲ್ಲ, ಸಕಲ ಜೀವರಾಶಿಗಳನ್ನು ಸಮಾನವಾಗಿ ಕಾಣುತ್ತಾರೆ.

ತಾತಯ್ಯನವರು ಆತ್ಮಬೋಧಾಮೃತದಲ್ಲಿ “ಅನೇಕ ವಿಧವಾದ ಕರ್ಮಗಳ ಕಾರಣದಿಂದ ಮತ್ತೆ ಮತ್ತೆ ಅಜ್ಞಾನದ ದೇಹಗಳು ಪ್ರಾಪ್ತವಾಗುತ್ತದೆ” ಎಂದಿದ್ದಾರೆ. ಅಂದರೆ ಈ ಜನ್ಮದಲ್ಲಿ ನಾವು ಮಾಡುವ ಕರ್ಮಗಳ ಫಲವಾಗಿ ಮುಂದಿನ ಜನ್ಮಗಳು ಪ್ರಾಪ್ತವಾಗುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಮಾನವ ಜನ್ಮದ ಗುರಿ ಹುಟ್ಟು ಸಾವುಗಳಿಲ್ಲದ ಮೋಕ್ಷ ಸಂಪಾದನೆಯೇ ಆಗಿದೆ. ಈ ಜನ್ಮದಲ್ಲಿ ಅಜ್ಞಾನದಿಂದ ಏನಾದರೂ ವರ್ತಿಸಿದರೆ ಮುಂದಿನ ಜನ್ಮವು ಖಂಡಿತವಾಗಿ ಮಾನವ ಜನ್ಮ ಬರುವುದಿಲ್ಲ. ಇದು ಸತ್ಯ, ಸತ್ಯ, ಸತ್ಯ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಮಾನವನ ಶ್ರೇಷ್ಠತೆ

ಜ್ಞಾನದ ಪುಣ್ಯದಿಂದ ಮಾನವರಾಗಿ ಹುಟ್ಟುತ್ತೇವೆ. ಮಾನವರಾಗಿ ಹುಟ್ಟುವುದೇ ಶ್ರೇಷ್ಠ ಹಾಗೂ ಮಹಾಪುಣ್ಯ. ಏಕೆಂದರೆ ಬೇರೆ ಯಾವುದೇ ಪ್ರಾಣಿಗಳಿಗೆ ಚಿಂತನೆ ಮಾಡುವ ಶಕ್ತಿಯಿಲ್ಲ, ಕೇವಲ ಮಾನವರಿಗೆ ಮಾತ್ರ ವಿವೇಕದಿಂದ ಕೂಡಿದ ಚಿಂತನೆ ಮಾಡುವ ಶಕ್ತಿಯಿದೆ. ಈ ಕಾರಣದಿಂದ ತಾತಯ್ಯನವರು ಅನೇಕ ಜೀವರಾಶಿಗಳಲ್ಲಿ ಮಾನವಜನ್ಮ ಶ್ರೇಷ್ಠ ವಾದುದು ಎಂದು ಬೋಧನೆಯನ್ನು ಮಾಡಿದ್ದಾರೆ.

ಆದರೆ ಮಾನವರಾಗಿ ಹುಟ್ಟಿದ ನಂತರ ನಮ್ಮ ಕರ್ತವ್ಯ ಏನಾಗಿರಬೇಕು ಎಂಬುದನ್ನು ಋಷಿಮುನಿಗಳು ಗೋಚರವನ್ನು ಮಾಡಿಕೊಟ್ಟಿದ್ದಾರೆ. ಅಜ್ಞಾನದ ಮಾಯೆಯು ಮಾನವರನ್ನು ಆವರಿಸುತ್ತದೆ. ಅವಿದ್ಯೆಗಳನ್ನು ತೊರೆದು, ಅಜ್ಞಾನದ ಮಾಯೆಯನ್ನು ಕಳಚಿದಾಗ ಮಾತ್ರ ಮುಕ್ತಿಯ ದಾರಿ ಕಾಣುತ್ತದೆ. ಅಜ್ಞಾನದ ಮಾಯೆಯ ಪೊರೆ ಕಳಚಬೇಕಾದರೆ ಗುರುವಿನ ಅನುಗ್ರಹ ಬೇಕೆ ಬೇಕು. ಗುರುವಿನ ಶುದ್ಧವಾದ ಬೋಧನೆಯಿಂದ ಮಾತ್ರ ಮಾನವ ದೈವತ್ವವನ್ನು ಸಾಧಿಸಬಲ್ಲ. ಗುರು ಬೇರೆ ಅಲ್ಲ, ಪರಮಾತ್ಮ ಬೇರೆಯಲ್ಲ, ಇಬ್ಬರೂ ಒಂದೇ. ಗುರು ಮತ್ತು ಪರಮಾತ್ಮನಲ್ಲಿ ಭೇದವನ್ನು ಮಾಡಬಾರದು.

kaivara tatayya

ಮೋಹ ಬಿಡದಿರಲು ಕಾರಣವೇನು?

ಧನಕನಕವೇ ಮೊದಲಾದ ತನ್ನ ಭೌತಿಕ ಸಂಪತ್ತುಗಳು ತನ್ನನ್ನು ಎಲ್ಲ ವಿಪತ್ತುಗಳಿಂದ ಪಾರು ಮಾಡುವ ಸಾಧನಗಳಾಗಿ ಎಂದೆಂದಿಗೂ ತನ್ನೊಡನೆ ಇರುತ್ತವೆ ಎಂಬ ಕಲ್ಪನೆಯೇ ಮಮತೆ. ಈ ಶರೀರವನ್ನು ಬಿಟ್ಟು ಹೋಗುವಾಗ ಹಣ, ಸಂಪತ್ತು, ಆಸ್ತಿ, ಕುಟುಂಬ ಯಾರೂ ಹಿಂದೆ ಬರುವುದಿಲ್ಲ. ಆದರೂ ಮಾನವರು ಮೋಹ-ಮಮತೆಗಳನ್ನು ಬಿಡುವುದಿಲ್ಲ. ಇದಕ್ಕೆಲ್ಲಾ ಮೂಲ ಕಾರಣ ನಮ್ಮಲ್ಲಿರುವ ಅವಿದ್ಯೆ- ಅಜ್ಞಾನ. ಈ ಅವಿದ್ಯೆ ಮತ್ತು ಅಜ್ಞಾನವನ್ನು ಹೊಡೆದೊಡಿಸುವ ಶಕ್ತಿ ಇರುವುದು ಗುರುವಿಗೆ ಮಾತ್ರ. ನಮ್ಮನ್ನು ಮುಕ್ತಿಯ ಕಡೆ ತೆಗೆದುಕೊಂಡು ಹೋಗುವವನು ಗುರುವೊಬ್ಬನೇ. ಗುರುವಿನಿಂದ ನಿಶ್ಚಲವಾದ ಮನಸ್ಸು ಪ್ರಾಪ್ತವಾಗುತ್ತದೆ. ಗುರುವಿನ ಪಾದಗಳನ್ನು ಬಿಡಬಾರದು.

ಮೋಕ್ಷಕ್ಕೆ ಮುಖ್ಯವಾಗಿ ಬೇಕಾದುದು ಜ್ಞಾನ. ಜ್ಞಾನೋದಯಕ್ಕೆ ಬೇಕಾದುದು ಚಿತ್ತಶುದ್ದಿ. ಚಿತ್ತಶುದ್ದಿಗೆ ಬೇಕಾದುದು ಸತ್ಕರ್ಮಾಚರಣೆ. ಮಾನವ ಜನ್ಮ ಶ್ರೇಷ್ಠವಾದುದು. ಆದ್ದರಿಂದ ಮಾನವ ಜನ್ಮ ಸಿಕ್ಕಿರುವ ಈ ಅವಕಾಶವನ್ನು ವ್ಯರ್ಥವಾಗಿ ಕಳೆದುಕೊಳ್ಳದೆ ನಿನ್ನನ್ನು ನೀನು ಅರಿತುಕೊಳ್ಳುವ ಪ್ರಯತ್ನವನ್ನು ಗುರುಗಳ ಅನುಗ್ರಹದಿಂದ ಮಾಡಬೇಕು. ಜೀವಾತ್ಮ ಮತ್ತು ಪರಮಾತ್ಮನನ್ನು ಸೇರಿಸುವ ಸೇತುವೆಯೇ ಗುರು ಉಪದೇಶ. ಅದೇ ಆತ್ಮಬೋಧಾಮೃತ. ಇದನ್ನೇ ತಾತಯ್ಯನವರುʼ
“ಜೀವಾತ್ಮ ಪರಮಾತ್ಮ ಜಿತಮುಗ
ಒಕಚೋಟ ಜೊತೆಗೂಡೆ ಯೆಮಂದುನೇ”

ಜೀವಾತ್ಮ ಹಾಗೂ ಪರಮಾತ್ಮ ಸ್ಥಿರವಾಗಿ ಒಂದಾಗಿ ಜೊತೆಯಾದಾಗ ಆಗುವ ಪರಮಾನಂದವನ್ನು ಏನೆಂದು ವರ್ಣಿಸಲಿ ಎಂದಿದ್ದಾರೆ. ತಾತಯ್ಯನವರು ತಮ್ಮ ತಪಸ್ಸಿನ ಫಲವನ್ನೇ ಆತ್ಮಬೋಧಾಮೃತದಲ್ಲಿ ಧಾರೆಯೆರೆದಿದ್ದಾರೆ. ಗುರುಬೋಧನೆಗಿಂತಲೂ ಮಿಗಿಲಾದದು ಪ್ರಪಂಚದಲ್ಲಿ ಯಾವುದೂ ಇಲ್ಲ. ಮನಸ್ಸಿನಲ್ಲಿ ಮಾನಸಿಕವಾಗಿ ಗುರುಗಳ ಆತ್ಮಪೂಜೆಯನ್ನು ನಿರಂತರವಾಗಿ ಮಾಡುತ್ತಾ, ಸದ್ಗುರು ತಾತಯ್ಯನವರ ಬೋಧನೆಗಳನ್ನು ಮನನ ಮಾಡೋಣ.

ಲೇಖಕರು ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಕೈವಾರ

ಇದನ್ನೂ ಓದಿ: Prerane : ಪರಮಾತ್ಮ ಮತ್ತು ನಮ್ಮ ನಡುವೆ ತಡೆಯಾಗಿರುವುದೇನು?

Exit mobile version