Site icon Vistara News

ತಾತಯ್ಯ ತತ್ವಾಮೃತಂ : ಗುರುವಿನ ಕೃಪೆಯಿರಲು ಮಾಯೆ ಮಾಯವಾದೀತು!

tatayya thathvamrutam a column by dr m r jayaram about saint kaivara narayanappa

guru

ಕೈವಾರ ತಾತಯ್ಯನವರು ಮಾನವನಾಗಿ ಹುಟ್ಟಿದ ಮೇಲೆ ಮೋಕ್ಷ ಸಂಪಾದನೆಯೇ ಗುರಿಯಾಗಬೇಕು, ಈ ಕಾರಣದಿಂದ ಒಬ್ಬ ಸದ್ಗುರುವನ್ನು ಆಶ್ರಯಿಸಲೇ ಬೇಕು ಎಂದಿದ್ದಾರೆ. ಸದ್ಗುರುವನ್ನು ಆಶ್ರಯಿಸಬೇಕೆಂದು ಯಾರೂ ಹೇಳುವುದಿಲ್ಲವೆಂದು ಈ ಪದ್ಯದಲ್ಲಿ ಹೀಗೆ ಹೇಳಿದ್ದಾರೆ;
ಸದ್ಗುರು ಚೇರುಮಟಂಚುನು
ಚೆಪ್ಪರು ಸತಿಸುತಲು ಮಾತಾಪಿತುರುಲ್ ಮಿತ್ರುಲ್
ಚೆಪ್ಪರು ಚದುವು ವುಪಾಧ್ಯುಲು
ಯೇ ವಿಧಮುನ ತೆಲಿಯವಚ್ಚು ನಾರೇಯಣ ಕವಿ||

ಈ ಪದ್ಯವನ್ನು ಸೂಕ್ಷ್ಮವಾಗಿ ಅವಲೋಕಿಸಬೇಕು. ಸದ್ಗುರುವನ್ನು ಆಶ್ರಯಿಸಿ ತತ್ವವಿಚಾರವನ್ನು ತಿಳಿದುಕೊಂಡು ಅಭ್ಯಾಸ ಮಾಡಿರೆಂದು ಹೆಂಡತಿಯಾಗಲೀ, ಮಕ್ಕಳಾಗಲೀ, ತಂದೆತಾಯಿಗಳಾಗಲೀ, ಮಿತ್ರರಾಗಲೀ, ಪಾಠ ಕಲಿಸುವ ಉಪಾಧ್ಯಾಯರಾಗಲೀ ಯಾರೂ ಹೇಳುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ತತ್ವವಿಚಾರಗಳನ್ನು ತಿಳಿದುಕೊಳ್ಳುವ ಬಗೆ ಹೇಗೆ? ಎಂದು ತಾತಯ್ಯನವರು ಪ್ರಶ್ನಿಸುತ್ತಿದ್ದಾರೆ. ಈ ಸಾಂಸಾರಿಕ ಸಂಬಂಧಗಳ ಹಿಂದೆ ಸ್ವಾರ್ಥವಿದೆ. ಹೆಂಡತಿಗೆ ತನ್ನ ಪತಿ ಚೆನ್ನಾಗಿ ಸಂಪಾದನೆ ಮಾಡಿ ಸಂಸಾರವನ್ನು ಸಮೃದ್ಧವಾಗಿ ನಡೆಸಲೆಂದು ಅಪೇಕ್ಷೆಯಾಗಿರುತ್ತದೆ. ತಂದೆ ಇರುವಷ್ಟು ಕಾಲ ಸಂಪಾದಿಸಿಡಲಿ ಎಂಬುದು ಮಕ್ಕಳ ಆಸೆಯಾಗಿರುತ್ತದೆ. ಮಗ ನಮ್ಮನ್ನು ರಕ್ಷಿಸುತ್ತಾ, ವಂಶವನ್ನು ವೃದ್ಧಿಮಾಡಲಿ ಎಂಬುದು ತಂದೆತಾಯಿಗಳ ಬಯಕೆಯಾಗಿರುತ್ತದೆ.

ಇನ್ನು ಉಪಾಧ್ಯಾಯರು ಹೊಟ್ಟೆ ತುಂಬಿಕೊಳ್ಳುವ ಲೌಕಿಕವಾದ ವಿದ್ಯೆಯನ್ನು ಹೇಳಿಕೊಡುತ್ತಾರೆ. ಯಾರೂ ಕೂಡ ಗುರುವನ್ನು ಆಶ್ರಯಿಸಿ ಆತ್ಮತತ್ವವನ್ನು ತಿಳಿದುಕೋ ಎನ್ನುವುದಿಲ್ಲ. ಈ ಪದ್ಯದ ಮೂಲಕ ತಾತಯ್ಯನವರು ಮಾನವರಿಗೆ ಒಂದು ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಅದೇನೆಂದರೆ ಮಾನವನು ವಿವೇಕಿಯಾಗಿ ತನ್ನ ಆತ್ಮೋದ್ಧಾರಕ್ಕಾಗಿ ತಾನೇ ಪ್ರಯತ್ನಿಸಿ ಒಬ್ಬ ಗುರುವನ್ನು ಆಶ್ರಯಿಸಬೇಕು.

ಗುರುವನ್ನು ಹುಡುಕುವುದು ಹೇಗೆ?

ಆತ್ಮತತ್ವವನ್ನು ತಿಳಿದುಕೊಳ್ಳಬೇಕೆಂದು ನಿರ್ಧರಿಸಿದ ಮೇಲೆ ಒಬ್ಬ ಗುರುವನ್ನು ಹುಡುಕಬೇಕು. ಗುರುವನ್ನು ಹುಡುಕುವುದು ಹೇಗೆ? ಈ ಪ್ರಶ್ನೆಗೆ ಉತ್ತರವನ್ನು ತಾತಯ್ಯನವರು ಹೀಗೆ ಹೇಳಿದ್ದಾರೆ;
ವಂಕಾಯ ತೋಟಲೋಪಲ
ಟೆಂಕಾಯಲು ಅಡಗಿನಟ್ಲು ತೆಲಿಯವಾರಿನ್
ಅಡಿಗಿನ ಅನುಭವ ಮೌನಾ
ವೇದಾಂತಿನಿ ವೆದಕವಲಯು ನಾರೇಯಣ ಕವಿ||

ಯಾವುದೇ ವಿಷಯವನ್ನು ತಿಳಿದುಕೊಳ್ಳಬೇಕಾದರೆ ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳ ಹತ್ತಿರ ಹೋಗಿ ಜ್ಞಾನವನ್ನು ಪಡೆದುಕೊಳ್ಳಬೇಕು ಎಂಬ ಸತ್ಯವನ್ನು ತಾತಯ್ಯನವರು ಉದಾಹರಣೆಯ ಸಹಿತವಾಗಿ ಈ ಪದ್ಯದಲ್ಲಿ ವಿವರಿಸಿದ್ದಾರೆ. ಬದನೆಕಾಯಿ ತೋಟದೊಳಗೆ ಹೋಗಿ ತೆಂಗಿನಕಾಯಿಯನ್ನು ಕೇಳಿದರೆ ಸಿಗುತ್ತದೆಯೇ? ಇಲ್ಲ. ತೆಂಗಿನಕಾಯಿ ಬೇಕಾದರೆ ತೆಂಗಿನಕಾಯಿ ತೋಟದೊಳಗೆ ಹೋಗಿ ಕೇಳಬೇಕು, ಬದನೆಕಾಯಿ ಬೇಕಾದರೆ ಬದನೆಕಾಯಿ ತೋಟದೊಳಗೆ ಹೋಗಿ ಕೇಳಬೇಕು. ಅದು ಬಿಟ್ಟು ಬದನೆಕಾಯಿ ತೋಟದೊಳಗೆ ತೆಂಗಿನಕಾಯಿ ಸಿಗದು, ತೆಂಗಿನಕಾಯಿ ತೋಟದೊಳಗೆ ಬದನೆಕಾಯಿ ಸಿಗದು.

ಹಾಗೆಯೇ ಏನೇನೂ ತಿಳಿಯದವರನ್ನು ಆಶ್ರಯಿಸಿ ತತ್ವಬೋಧನೆಯ ವಿಚಾರವನ್ನು ಕೇಳಿದರೆ ವೇದಾಂತದ ಅನುಭವವಾಗುವುದಿಲ್ಲ. ತತ್ವಬೋಧನೆಯನ್ನು ಅರಿತ ಜ್ಞಾನಿಯನ್ನು ಅಂದರೆ ವೇದಾಂತಿಯನ್ನು ಹುಡುಕಿಕೊಂಡು ಹೋಗಿ ಆಶ್ರಯಿಸಿದರೆ ಮಾತ್ರ ತತ್ವದ ವಿಚಾರ ಅನುಭವವಾಗುತ್ತದೆ ಎನ್ನುತ್ತಿದ್ದಾರೆ ತಾತಯ್ಯನವರು. ವೇದಾಂತಿಯೆಂದರೆ ವೇದಗಳ ಅಂತ್ಯಭಾಗದ ವಿಷಯವೇ ವೇದಾಂತ. ಜ್ಞಾನಕಾಂಡವೇ ಅಲ್ಲಿನ ವಿಷಯ. ಈ ಜ್ಞಾನವನ್ನು ಪಡೆದವನೇ ವೇದಾಂತಿ. ಸಂಪೂರ್ಣವಾದ ಜ್ಞಾನದಿಂದ ಶೋಭಿಸುತ್ತಿರುವ ವೇದಾಂತಿ ಮಾತ್ರ, ತತ್ವವಿಚಾರವನ್ನು ಬೋಧನೆ ಮಾಡಬಲ್ಲ. ತತ್ವಬೋಧನೆಗೆ ವೇದಾಂತಿಯೊಬ್ಬನೇ ಅಧಿಕಾರಿಯೆಂದು ತಾತಯ್ಯನವರು ಸ್ಪಷ್ಟವಾಗಿ ಹೇಳುತ್ತಿದ್ದಾರೆ.

ಶಾಸ್ತ್ರ ವಿದ್ವಾಂಸರೆಂದು, ಪಂಡಿತರೆಂದು ಹೇಳಿಕೊಂಡು ತಿರುಗಾಡುವ ವೇಷಧಾರಿಗಳೆಲ್ಲಾ ವೇದಾಂತವನ್ನು ಬೋಧಿಸಲಾಗುವುದಿಲ್ಲ. ಕಂಡ ಕಂಡವರನ್ನೆಲ್ಲಾ ನಂಬಿಕೊಂಡು ಆಶ್ರಯಿಸಿ ತತ್ವವಿಚಾರವನ್ನು ಪ್ರಶ್ನಿಸಿದರೆ, ತೆಂಗಿನಕಾಯಿಗಳನ್ನು ಪಡೆಯುವ ಆಸೆಯಿಂದ ಬದನೇಕಾಯಿ ತೋಟಕ್ಕೆ ಹೋದಂತೆ ಆಗುತ್ತದೆ. ಬದನೆಕಾಯಿ ಬೇಕಾದರೆ ಬದನೆಕಾಯಿ ತೋಟವನ್ನೇ ಹುಡುಕಿಕೊಂಡು ಹೋಗಬೇಕು. ಆದುದರಿಂದ ತತ್ವೋಪದೇಶ ಪಡೆಯಬೇಕಾದರೆ ಜ್ಞಾನಿಯಾದ ಗುರುವನ್ನು ಹುಡುಕಿ ಆಶ್ರಯಿಸಬೇಕು ಎನ್ನುತ್ತಿದ್ದಾರೆ ತಾತಯ್ಯನವರು.

ಒಬ್ಬನೇ ಗುರುವಿರಬೇಕು

ಗುರುವುಲು ಯಿದ್ದರು ವುಂಡಿನ
ಶಿಷ್ಯುಡು ಚೆಡು ಯೇಡು ಚೇಟ್ಲು ಸಿದ್ದಮು ಸುಮೀ
ವೊಕ್ಕಡೆ ಗುರುವನಿ ನಮ್ಮಿನ
ಚಕ್ಕನಿ ಶಿಷ್ಯುಂಡು ವಾಡು ನಾರೇಯಣ ಕವಿ ||

ಸಾಧಕ ಶಿಷ್ಯನಿಗೆ ತಾತಯ್ಯನವರು ಈ ಪದ್ಯದಲ್ಲಿ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಇಬ್ಬರು ಗುರುಗಳನ್ನು ಸಾಧಕ ಶಿಷ್ಯನು ಆಶ್ರಯಿಸಿದರೆ ಖಂಡಿತವಾಗಿ ಶಿಷ್ಯನ ಸಾಧನೆ ಭ್ರಷ್ಟವಾಗಿ ಏಳುದಾರಿ ಹಿಡಿಯುತ್ತದೆ. ಇದರಲ್ಲಿ ಸಂಶಯವಿಲ್ಲ. ಸಾಧಕ ಶಿಷ್ಯನು ಅನುಭವಿಯಾದ ಒಬ್ಬನೇ ಗುರುವನ್ನು ಆಶ್ರಯಿಸಬೇಕು. ಒಬ್ಬನೇ ಗುರುವನ್ನು ನಂಬಿ, ಆಶ್ರಯಿಸಿದವನು ಉತ್ತಮವಾದ ಒಳ್ಳೆಯ ಶಿಷ್ಯನು ಎನ್ನುತ್ತಿದ್ದಾರೆ ತಾತಯ್ಯನವರು. ಯಾವ ಗುರುವನ್ನು ಕಾಯಾ, ವಾಚಾ, ಮನಸಾ ಆರಾಧಿಸುತ್ತಿಯೋ ಆ ಗುರುವನ್ನು ಯಾವುದೇ ಸಂದರ್ಭದಲ್ಲಿಯೂ ಬಿಟ್ಟು ಮತ್ತೊಬ್ಬ ಗುರುವನ್ನು ಆಶ್ರಯಿಸುವುದು ತಪ್ಪು ಎನ್ನುತ್ತಿದ್ದಾರೆ.

ಶಿಷ್ಯನ ಸಾಧನೆಯ ಆರಂಭದಲ್ಲಿ ಗುರುವಿನ ಮಾರ್ಗದರ್ಶನದ ಅತ್ಯಗತ್ಯವಾಗಿರುತ್ತದೆ. ಆದುದರಿಂದ ಅನುಭವಿಯೂ, ಸಿದ್ಧಪುರುಷರೂ ಆಗಿರುವ ಒಬ್ಬ ಗುರುವನ್ನು ಆಶ್ರಯಿಸುವುದೇ ಶಿಷ್ಯನಿಗೆ ಕ್ಷೇಮಕರವಾದುದು. ಏಕೆಂದರೆ ಯೋಗಸಾಧನೆಯ ಪ್ರಾರಂಭದ ಹಂತದಲ್ಲಿ ಎಲ್ಲಾ ಸಾಧಕರಿಗೂ ಆಗುವ ಅನುಭವಗಳು, ತಲೆದೋರುವ ಸಂದೇಹಗಳು ಒಂದೇ ಬಗೆಯದಾಗಿರುವುದಿಲ್ಲ. ಈ ಸಂದರ್ಭದಲ್ಲಿ ಸಂದೇಹಗಳು ಒಬ್ಬ ಗುರುವಿನಿಂದ ಪರಿಹಾರವಾಗಲಿಲ್ಲವೆಂದು ಮತ್ತೊಬ್ಬ ಗುರುಗಳ ಬಳಿ ಹೋಗಿ ಆಶ್ರಯಿಸಿದರೆ ಶಿಷ್ಯನಿಗೆ ಸಮಸ್ಯೆಗಳು ಪರಿಹಾರವಾಗುವ ಬದಲು, ಸಮಸ್ಯೆಗಳು ಉಲ್ಬಣಿಸುವ ಅಪಾಯವೇ ಹೆಚ್ಚಾಗಿರುತ್ತದೆ.

ಬ್ರಹ್ಮಸಾಕ್ಷಾತ್ಕಾರವನ್ನು ಪಡೆದುಕೊಂಡ ಗುರುವನ್ನು ಆಶ್ರಯಿಸುವುದರಿಂದ ಮಾಯೆಯ ಪ್ರಭಾವ ಕಡಿಮೆಯಾಗುತ್ತದೆ. ಜ್ಞಾನ ಮಾರ್ಗದ ಉಪದೇಶಗಳಿಗಿಂತಲೂ ಯೋಗ, ಧ್ಯಾನ ಸಾಧನೆಗಳು ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ. ಇವುಗಳನ್ನು ಸಾಧಿಸಬೇಕಾದರೆ ಒಬ್ಬರೇ ಗುರುವನ್ನು ಆಶ್ರಯಿಸಬೇಕು. ಗುರುಗಳನ್ನು ಪದೇ ಪದೇ ಬದಲಾಯಿಸುವುದೂ ಕೂಡ ತಪುö್ಪ ಎನ್ನುತ್ತಿದ್ದಾರೆ ತಾತಯ್ಯನವರು.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ವರದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ

ಭಕ್ತಿ-ಯೋಗದ ಸಂಗಮ

ಬದುಕಿನ ಸತ್ಯಗಳನ್ನು ಕಂಡುಕೊಳ್ಳಲು ಜ್ಞಾನವಂತನಾಗಬೇಕು. ಜ್ಞಾನವಂತನಾಗಲು ಏನು ಮಾಡಬೇಕು? ಇದಕ್ಕೆ ತಾತಯ್ಯನವರೇ ಉತ್ತರಿಸಿದ್ದಾರೆ. ಜ್ಞಾನವಂತನಾಗಬೇಕಾದರೆ ಮೊದಲಿಗೆ ಕರ್ಮಗಳು ನಾಶವಾಗಬೇಕು. ಕರ್ಮಗಳ ನಾಶಕ್ಕಾಗಿ ಪಂಚಬೀಜಾಕ್ಷರ ಹಾಗೂ ಒಂಬತ್ತು ನಾಮಸ್ಮರಣೆಯಿಂದ ಕೂಡಿರುವ ಸದ್ಗುರು ತಾತಯ್ಯನವರು ರಚಿಸಿರುವ “ರಾಮ ರಾಮ ಮುಕುಂದ ಮಾಧವ, ರಾಮ ಸದ್ಗುರು ಕೇಶವಾ, ರಾಮ ದಶರಥ ತನಯದೇವಾ ರಾಮಶ್ರೀ ನಾರೇಯಣ” ಎಂಬ ನಾಮಜಪವನ್ನು ನಿರಂತರವಾಗಿ ಮಾಡಬೇಕು. ಇದರಿಂದ ನಮ್ಮ ಕರ್ಮಗಳು ನಾಶವಾಗಲು ಪ್ರಾರಂಭವಾಗುತ್ತದೆ. ಇದನ್ನು ಬಹಿರಂಗವಾಗಿ ಹೇಳುತ್ತಾ, ಹೇಳುತ್ತಾ ಗುರುಗಳ ಪಾದದಲ್ಲಿ ಮನಸ್ಸನ್ನು ನಿಲ್ಲಿಸಬೇಕು. ಕೆಲವು ದಿನಗಳ ಬಳಿಕ ಮಾನಸಿಕವಾಗಿ ಮನಸ್ಸಿನಲ್ಲಿ ಈ ನಾಮಜಪವನ್ನು ಪಠಿಸಲು ಪ್ರಾರಂಭಿಸಬೇಕು. ಒಂದು ದಿನ ತಪ್ಪಿಸದೇ ಸಾಧನೆ ಮಾಡಬೇಕು.

ಇದನ್ನು ಮೂರು ತಿಂಗಳು ಮಾಡಬೇಕು. ತಾತಯ್ಯನವರು ಇಷ್ಟಕ್ಕೆ ಬಿಡುವವರಲ್ಲ. ಅವರು ಭಕ್ತಿ ಮತ್ತು ಯೋಗವನ್ನು ಸೇರಿಸಿದ್ದಾರೆ. ಸಾಧನೆ ಎಂದರೆ ಯೋಗದಲ್ಲಿಯೇ ಹೋಗಬೇಕು. ಕೇವಲ ಜ್ಞಾನವನ್ನು ಅಧ್ಯಯನ ಮಾಡಿದರೆ ಸಾಲದು, ಯೋಗದ ಮೂಲಕ ಸಾಧನೆ ಮಾಡಲೇಬೇಕು. ಯೋಗ ತಿಳಿದಿಲ್ಲವಾದರೂ ಗುರುಗಳು ಬಿಡುವುದಿಲ್ಲ. ಇದಕ್ಕೆ ಬಹಳ ಸುಲಭವಾದ ವಿಧಾನವಿದೆ. ಅದೇ ಪ್ರಾಣಾಯಾಮ ವಿಧಾನ. ಉಸಿರನ್ನು ತೆಗೆದುಕೊಳ್ಳುತ್ತಾ “ರಾಮ ರಾಮ ಮುಕುಂದ ಮಾಧವ, ರಾಮ ಸದ್ಗುರು ಕೇಶವಾ” ಇಷ್ಟನ್ನು ಹೇಳಿಕೊಳ್ಳಿ, ಉಸಿರನ್ನು ಬಿಡುತ್ತಾ“ರಾಮ ದಶರಥ ತನಯದೇವಾ ರಾಮಶ್ರೀ ನಾರೇಯಣ” ಎಂದು ಹೇಳಿಕೊಳ್ಳಿ. ಇದು ಸರಳವಾಗಿ ಪ್ರಾಣಾಯಾಮವಾಗುತ್ತದೆ.

ಗುರುಗಳು ಯೋಗ ಮತ್ತು ಭಕ್ತಿಯನ್ನು ಬಹಳ ಸುಲಭವಾಗಿ ಇದರಲ್ಲಿ ಅಳವಡಿಸಿಕೊಟ್ಟಿದ್ದಾರೆ. ಈ ಕಾರಣದಿಂದ ಗುರುಗಳ ಬಳಿಗೆ ಹೋಗಿ ನಾವು ಶರಣಾಗಬೇಕು. ಈ ಪ್ರಾಣಾಯಾಮ ವಿಧಾನದಲ್ಲಿ ನಿರಂತರವಾಗಿ ಸಾಧನೆ ಮಾಡಿದ್ದೇ ಆದರೆ ಮನಸ್ಸು ಸ್ಥಿರವಾಗುತ್ತದೆ. ಇದೇ ಸಾಧನೆ. ಈ ಸಾಧನೆ ಯನ್ನು ಮುಂದುವರೆಸುತ್ತಾ ಹೋದಂತೆ ಮಾನಸಿಕವಾಗಿ ಗುರುಗಳ ಪಾದದಲ್ಲಿ ಮನಸ್ಸನ್ನು ಸ್ಥಿರವಾಗಿ ನಿಲ್ಲಿಸಿದಾಗ ಜ್ಞಾನವಂತನಾದೆ, ಕರ್ಮಗಳು ನಾಶವಾಯಿತು ಎಂದು ತಿಳಿದುಕೊಳ್ಳಬೇಕು. ಇದೇ ಜ್ಞಾನವಂತನಾಗಲು ತಾತಯ್ಯನವರು ಬೋಧಿಸಿರುವ ಮಾರ್ಗಗಳು. ಅಭ್ಯಾಸಿಸೋಣ, ಜ್ಞಾನವಂತರಾಗೋಣ.

ಲೇಖಕರು ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಕೈವಾರ

ಇದನ್ನೂ ಓದಿ: ತಾತಯ್ಯ ತತ್ವಾಮೃತಂ : ನೀವು ಏನೇ ಆಗಿರಿ, ನಿರ್ಮಲ ಹೃದಯವಂತರಾಗಿರಿ!

Exit mobile version