ಕೈವಾರದ ತ್ರಿಕಾಲಜ್ಞಾನಿ ಶ್ರೀಯೋಗಿನಾರೇಯಣ ತಾತಯ್ಯನವರು ಬ್ರಹ್ಮಸತ್ಯವನ್ನು ಕಂಡುಕೊಂಡ ಋಷಿಮುನಿಗಳು, ಸಂತರು, ಆಚಾರ್ಯರೂ ಹೌದು. ಶ್ರೀಯೋಗಿನಾರೇಯಣ ತಾತಯ್ಯನವರು ಪರಿಪೂರ್ಣತೆಯಿಂದ ಕೂಡಿರುವ ಆತ್ಮಬೋಧಾಮೃತವನ್ನು ಮಾನವಕೋಟಿಗೆ ಧಾರೆಯೆರೆದಿದ್ದಾರೆ. ಇದು ತಾತಯ್ಯನವರು ನೀಡಿರುವ ಕಟ್ಟಕಡೆಯ ಸಂದೇಶಗಳು. “ಆತ್ಮಬೋಧಾಮೃತʼʼದ ನೇರವಾದ ನುಡಿಗಳಿಂದ ಮಾನವರನ್ನು ಎಚ್ಚರಿಸಿದ್ದಾರೆ.
ದೇವತ್ವವನ್ನು ಪಡೆಯಲು ಅಮೃತವನ್ನು ಸ್ವೀಕಾರ ಮಾಡುತ್ತಾರೆ. ಅಮೃತವನ್ನು ನೀಡುವವರು ಯಾರು? ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಗುರುಗಳು ತಾವು ಕಂಡುಕೊಂಡ ಸತ್ಯವನ್ನು ಉಪದೇಶದ ಮೂಲಕ ಶಿಷ್ಯರಿಗೆ ನೀಡುವುದೇ ಅಮೃತ. ಒಂದು ಕಡೆ ಗುರುಗಳಿದ್ದಾರೆ, ಇನ್ನೊಂದು ಕಡೆ ಶಿಷ್ಯನಿದ್ದಾನೆ, ಮಧ್ಯದಲ್ಲಿ ಅಮೃತವಿದೆ. ಆತ್ಮಚಿಂತನೆಯ ಈ ಅಮೃತವೇ ಆತ್ಮಬೋಧಾಮೃತ. ಇದು ಗುರುಪರಂಪರೆಯ ಗುರು-ಶಿಷ್ಯನ ಸಂಬಂಧವನ್ನು ತಿಳಿಸುವ ಗುರುತತ್ವ. ಗುರುತತ್ವಕ್ಕಿಂತಲೂ ದೊಡ್ಡದು ಯಾವುದೂ ಇಲ್ಲ.
ಆತ್ಮಬೋಧನೆ ಕರುಣಿಸಿದ ಜ್ಞಾನಿ
ಒಂದಿಷ್ಟು ಕಲ್ಮಶವಿಲ್ಲದ ಚಿನ್ನವನ್ನು ಅಪರಂಜಿ ಎನ್ನುತ್ತಾರೆ. ತಾತಯ್ಯನವರು ಒಂದು ಕೀರ್ತನೆಯಲ್ಲಿ;
ಚೊಕ್ಕವಾಯಿತು ಈಗ-ಹಣಬಣ್ಣ ಚಿನ್ನ ಚೊಕ್ಕವಾಯಿತು ಈಗ
ಚೊಕ್ಕವಾಗಿ ಹದಿ-ನಾರು ಬಣ್ಣಾಯಿತು ನೋಟಗಾರರಷ್ಟೂ-ನೋಡಿರೋ ನಾಣ್ಯವು
ಇನ್ಯಾರೂ ಅರಿಯರು-ಈ ಬಣ್ಣ ಲಕ್ಷಣ ಗುರುಸೂತ್ರದಲ್ಲಿರುವ-ಗುಣವಂತ ಬಲ್ಲ ಎಂದಿದ್ದಾರೆ.
ಒಂದಂಶ ಕಡಿಮೆಯಾಗಿದ್ದರೆ ಚಿನ್ನವು ಅಪರಂಜಿಯಾಗುವುದಿಲ್ಲ. ೧೬ ಆಣೆ ಇಲ್ಲದಿದ್ದರೆ ೧ ರೂಪಾಯಿ ಆಗುವುದಿಲ್ಲ. ಅಂದರೆ ಇದರ ಅರ್ಥ ಪೂರ್ಣವಾಗದಿದ್ದರೆ ಪರಿಪೂರ್ಣತೆ ಇಲ್ಲ. ಈ ಬಣ್ಣದ ಲಕ್ಷಣವನ್ನು ಗುರುಸೂತ್ರದಲ್ಲಿರುವ ಗುಣವಂತನು ಮಾತ್ರ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಒಂದಂಶವೂ ಕಡಿಮೆಯಾಗದೇ ಚಿನ್ನವು, ಅಪರಂಜಿಯಾಗುವಂತೆ ಯೋಗಿಗಳು ಸೃಷ್ಟಿ, ಸ್ಥಿತಿ, ಲಯಗಳ ಅರಿವನ್ನು ಪಡೆದು ತ್ರಿಕಾಲಜ್ಞಾನ ಶುದ್ಧಿಯಿಂದ ಪರಿಪೂರ್ಣರಾಗಿರುತ್ತಾರೆ. ಈ ಪರಿಪೂರ್ಣತೆಯನ್ನು ಪಡೆದವರು ಶ್ರೀಯೋಗಿ ನಾರೇಯಣ ತಾತಯ್ಯನವರು.
ಆತ್ಮಜ್ಞಾನದ ಹಂತಗಳು
ಆತ್ಮಬೋಧಾಮೃತವು ತಾತಯ್ಯನವರ ಕಟ್ಟಕಡೆಯ ಉಪದೇಶ. ಎಷ್ಟೇ ಆಚಾರವಂತನಾಗಿದ್ದರೂ, ಯಾಗ ಯಜ್ಞಗಳನ್ನು ಮಾಡಿದರೂ, ಅರಣ್ಯದಲ್ಲಿ ವೈರಾಗ್ಯದಿಂದ ಅಲೆದಾಡಿದರೂ, ಹಲವಾರು ದೇವಾಲಯಗಳನ್ನು ದರ್ಶಿಸಿದರೂ ಈ ಆತ್ಮಜ್ಞಾನ ಸಿಗುವುದು ಕಷ್ಟ ಎಂದು ತಾತಯ್ಯನವರು ಆತ್ಮಬೋಧಾಮೃತದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ಜ್ಞಾನವನ್ನು ಪಡೆಯುವುದು ಸುಲಭವಲ್ಲ. ಇದಕ್ಕೆ ಗುರುವಿನ ಅನುಗ್ರಹ ಬೇಕೆ, ಬೇಕು. ಆತ್ಮಜ್ಞಾನವನ್ನು ಪಡೆಯಲು ಮೂರು ಹಂತಗಳಿವೆ.
೧. ಗುರುಭಕ್ತಿ : ಮಾನವನಾಗಿ ಹುಟ್ಟಿದ ಮೇಲೆ ಒಬ್ಬ ಗುರುವನ್ನು ಆಶ್ರಯಿಸಬೇಕು. ಆ ಗುರುವಿನ ಪಾದದಲ್ಲಿ ಕಾಯಾ-ವಾಚಾ-ಮನಸಾ ಶರಣಾಗಿ ಮನಸ್ಸನ್ನು ನಿಲ್ಲಿಸಬೇಕು. ಪ್ರತಿನಿತ್ಯವೂ ಗುರುವಿನ ಮಾನಸ ಪೂಜೆಯನ್ನು ಮಾಡಬೇಕು. ಗುರು ಬೇರೆಯಲ್ಲ, ಪರಮಾತ್ಮ ಬೇರೆಯಲ್ಲ ಎಂಬ ಭಾವನೆ ಮನಸ್ಸಿನಲ್ಲಿ ಮೂಡಬೇಕು. ಪರಮಾತ್ಮನ ಪೂಜೆಯೂ ಒಂದೇ, ಗುರುಪೂಜೆಯೂ ಒಂದೇ. ತಾತಯ್ಯನವರು ಆತ್ಮಪೂಜೆಯ ವಿಧಾನವನ್ನು ತಿಳಿಸಿದ್ದಾರೆ. ಈ ಆತ್ಮಪೂಜೆಯನ್ನು ಯಾರು ನಿರಂತರವಾಗಿ ಪ್ರತಿನಿತ್ಯ ಮಾಡುತ್ತಾರೋ ಅವರಿಗೆ ಗುರುಭಕ್ತಿ ಉಂಟಾಗುತ್ತದೆ. ತಾತಯ್ಯನವರೇ ಹೇಳಿರುವಂತೆ;
ನೀದು ಬಾಣಂಬುಲನ್- ನಾಧು ಶತ್ರುಲ ಬಟ್ಟಿ
ಭಗ್ನಂಬು ಸೇಯು ಬಲಭದ್ರ ನಾರೇಯಣ||
ಗುರುವೇ, ನನ್ನಲ್ಲಿರುವ ಅವಿದ್ಯೆಗಳನ್ನು , ಶತ್ರುಗಳನ್ನು ಓಡಿಸಲು ನನ್ನಿಂದ ಸಾಧ್ಯವಿಲ್ಲ. ನಿನ್ನ ಬಾಣಗಳಿಂದ ನನ್ನಲ್ಲಿರುವ ಅವಿದ್ಯೆ, ಶತ್ರುಗಳನ್ನು ಭಗ್ನಮಾಡಿ ಓಡಿಸು ಎಂದಿದ್ದಾರೆ. ಗುರುವಿನ ಪಾದದಲ್ಲಿ ಶರಣಾದಾಗ ನಮ್ಮಲ್ಲಿರುವ ಕರ್ಮಗಳು, ಅವಿದ್ಯೆಗಳು ನಾಶವಾಗುತ್ತದೆ. ಇದನ್ನು ನಾಶಪಡಿಸುವ ಶಕ್ತಿ ಕೇವಲ ಗುರುವಿಗೆ ಮಾತ್ರವಿದೆ. ಈ ಕಾರಣದಿಂದ ಆತ್ಮಜ್ಞಾನವನ್ನು ಪಡೆಯಲು ಮೊದಲ ಹೆಜ್ಜೆಯೆಂದರೆ ಗುರುಭಕ್ತಿ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
೨. ಆತ್ಮ ಚಿಂತನೆ: ಗುರುವಿನ ಅನುಗ್ರಹವಾದ ಮೇಲೆ ಆತ್ಮಚಿಂತನೆ ಪ್ರಾರಂಭವಾಗುತ್ತದೆ. ಆತ್ಮಚಿಂತನೆ ಎಂದರೆ ಅಂತರಂಗದ ಚಿಂತನೆ. ಇದು ನಮ್ಮ ನಮ್ಮ ಚಿಂತನೆ. ಗುರುಭಕ್ತಿಯಿಂದ ಮಾತ್ರ ಆತ್ಮಚಿಂತನೆ ಶುರುವಾಗುತ್ತದೆ. ಗುರು ಹೇಳಿರುವ ಭೋಧನೆಯನ್ನು ಮನನ ಮಾಡುತ್ತಾ, ಬೋಧನೆಗಳನ್ನು ಅನುಷ್ಠಾನದಲ್ಲಿ ತರಬೇಕು. ತಾತಯ್ಯನವರು ಬೋಧಿಸಿರುವ “ರಾಮ ರಾಮ ಮುಕುಂದ ಮಾಧವ ರಾಮ ಸದ್ಗುರು ಕೇಶವ, ರಾಮ ದಶರಥ ತನಯ ದೇವಾ ರಾಮ ಶ್ರೀನಾರೇಯಣ” ಎಂಬ ಬೀಜಾಕ್ಷರಗಳಿಂದ ಕೂಡಿರುವ ನಾಮಜಪವನ್ನು ಪ್ರತಿನಿತ್ಯವೂ ೧೦೮ ಸಲ ಪಠಣ ಮಾಡಬೇಕು. ಇದು ಸಹಸ್ರನಾಮಕ್ಕೆ ಸಮವಾಗುತ್ತದೆ. ಇದರಿಂದ ಅಂತರಂಗದ ಶುದ್ಧಿ ಪ್ರಾರಂಭವಾಗುತ್ತದೆ. ಸಕಲ ಜೀವಿಗಳನ್ನು ಸಮವಾಗಿ ನೋಡುವ ಭಾವನೆ ಬರುತ್ತದೆ. ಯಾವಾಗ ಸಕಲ ಜೀವಿಗಳನ್ನು ನೋಡುವಾಗ ಭೇದಭಾವ ಮನಸ್ಸಿಗೆ ಬರುವುದಿಲ್ಲವೋ ಆಗ ನೀವು ಪುಣ್ಯವಂತರು.
೩. ಆತ್ಮಜ್ಞಾನ : ಈ ಶರೀರವು ಪರಮಾತ್ಮನ ವಾಸಸ್ಥಳ. ೮೪ ಲಕ್ಷ ಜೀವರಾಶಿಗಳಲ್ಲಿ ಜನ್ಮವೆತ್ತುತ್ತಾ, ಈಗ ಮಾನವ ಜನ್ಮ ಬಂದಿದೆ. ಈ ಮಾನವ ಜನ್ಮದಲ್ಲಿ ಏನಾದರೂ ಎಚ್ಚರ ತಪ್ಪಿ ನಡೆದರೆ, ಮತ್ತೆ ಮತ್ತೆ ಹುಟ್ಟು ಸಾವಿನ ಚಕ್ರದಲ್ಲಿ ಸಿಲುಕ ಬೇಕಾಗುತ್ತದೆ. ಇದಕ್ಕೆ ಮೂಲ ಕಾರಣ ಅಜ್ಞಾನ. ಈ ಸತ್ಯದ ಅರಿವನ್ನು ಪಡೆಯುವ ಜ್ಞಾನವೇ ಆತ್ಮಜ್ಞಾನ. ಮಾಯೆಯು ಮಾನವರನ್ನು ಮೋಹ, ಆಶೆ, ಗರ್ವ, ದರ್ಪ, ಅಹಂಕಾರ, ಸಂಸಾರ ವ್ಯಾಮೋಹಗಳಿಂದ ಮುಕ್ತರಾಗಲು ಬಿಡುವುದಿಲ್ಲ. ಮನಸ್ಸು ಮಾಯೆಗೆ ಮರುಳಾಗಿ ಚಂಚಲವಾದ ಬುದ್ಧಿಯನ್ನು ಹೊಂದುತ್ತದೆ. ಮಾಯೆಯು ಪರಮಾತ್ಮನ ಪಾದಗಳನ್ನು ಸ್ಥಿರವಾಗಿ ನೆನಪಿಸಿಕೊಳ್ಳಲು ಸಾಧ್ಯವಾಗದಂತೆ ಮಾಡುತ್ತಿದೆ. ಅಂತರಂಗದಲ್ಲಿ ಅವಿದ್ಯೆಗಳನ್ನು ಸಂಪೂರ್ಣವಾಗಿ ನಾಶಮಾಡಿದಾಗ ಕಾಣುವ ಬೆಳಕೆ ಆತ್ಮಜ್ಞಾನ.
ಆತ್ಮಜ್ಞಾನವನ್ನು ಪಡೆಯಬೇಕಾದರೆ ನಂಬಿಕೆ ಬಹಳ ಮುಖ್ಯ. ನಂಬಿಕೆಯಿಂದ, ಶ್ರದ್ಧೆಯಿಂದ ಗುರುಗಳಾದ ತಾತಯ್ಯನವರ ಪಾದದಲ್ಲಿ ಶರಣಾಗಿ, ಮಾನವಜನ್ಮದಲ್ಲಿ ಪ್ರತಿಯೊಬ್ಬರೂ ಗುರುಭಕ್ತಿಯಲ್ಲಿ ತೊಡಗಬೇಕು. ಗುರುಭಕ್ತಿಯಿಂದ ಆತ್ಮಚಿಂತನೆ ಪ್ರಾರಂಭವಾಗುತ್ತದೆ. ಆತ್ಮಚಿಂತನೆಯಿಂದ ಆತ್ಮಜ್ಞಾನವು ಸಿಗುತ್ತದೆ. ಇಂದು ಧರ್ಮವು ಅವನತಿಯ ಕಡೆಗೆ ಹೋಗುತ್ತಿದೆ. ಎಲ್ಲರೂ ಎಚ್ಚೆತ್ತುಕೊಳ್ಳಬೇಕಾಗಿದೆ. ಸತ್ಯವಾದ ಧರ್ಮವನ್ನು ಅನುಷ್ಠಾನಗೊಳಿಸುವುದೇ ಶ್ರೀ ಯೋಗಿನಾರೇಯಣ ಮಠದ ಉದ್ದೇಶವಾಗಿದೆ.
ಲೇಖಕರು ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಕೈವಾರ
ಇದನ್ನೂ ಓದಿ: Prerane | ನಾವೇಕೆ ದುಃಖಿಗಳಾಗಿದ್ದೇವೆ?