Site icon Vistara News

ತಾತಯ್ಯ ತತ್ವಾಮೃತಂ: ದೇಹದಲ್ಲಿ ಜೀವ ಇರುವಾಗ ಏನು ಮಾಡಬೇಕು?

life spiritual prerane

ಒಂದು ವೃಕ್ಷವು ಬೆಳೆಯಬೇಕಾದರೆ ಮೊದಲಿಗೆ ಬೀಜ ಬಿತ್ತನೆಯಾಗಿ ಹುಟ್ಟುತ್ತದೆ, ನಂತರ ವೃದ್ಧಿಯನ್ನು ಹೊಂದುತ್ತದೆ, ಫಲವನ್ನು ಕೊಟ್ಟು ಹಣ್ಣಾಗುತ್ತದೆ, ಒಣಗುತ್ತದೆ, ಕೃಶವಾಗುತ್ತದೆ, ನಾಶವಾಗುತ್ತದೆ. ಈ ಕ್ರಮವು ತಪ್ಪುವುದಿಲ್ಲ. ಮಾನವ ಶರೀರವು ಸಹ ಹೀಗೆಯೇ ಹುಟ್ಟು, ಬಾಲ್ಯ, ಯೌವ್ವನ, ಸಂಸಾರದ ಬಂಧನಗಳು, ಮುಪ್ಪು, ಮರಣಗಳಿಂದ ಕೂಡಿದೆ. ಇದರಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ. ಜನನ ಮತ್ತು ಮರಣದ ನಡುವೆ ಇರುವ ಸಮಯದಲ್ಲಿ ನಾವೇನು ಮಾಡಬೇಕು? ಈ ಪ್ರಶ್ನೆಗೆ ಕೈವಾರದ ಶ್ರೀಯೋಗಿನಾರೇಯಣ ತಾತಯ್ಯನವರು ಹೀಗೆ ಉತ್ತರಿಸಿದ್ದಾರೆ.

ಜೀವಾ ನೀವಿದಿ ಕಾನವಾ..
ನೀವುಂಡೇ ಇಂಟಿ ಮರ್ಮಮು ಯೆರುಗವಾ..
ಇಲ್ಲು ಪಾಡುಚೇಸಿ ವೆಳ್ಳೇ ವೇಳ ವಚ್ಚೇ
ಇಪ್ಪುಡೈನನು ಕಾನಿ ಇಲ್ಲು ಶೋಧಿಂಚರಾದಾ ||

ಎಲೈ ಜೀವವೇ, ನೀನು ಇರುವ ಈ ಶರೀರವೆಂಬ ಮನೆಯ ರಹಸ್ಯ, ಮರ್ಮವನ್ನು ಇದುವರೆಗೂ ನೀನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡದೆ ಅಂಧಕಾರದಲ್ಲಿ ಬಿದ್ದು ಒದ್ದಾಡುತ್ತಾ ಕಾಲವನ್ನು ವ್ಯರ್ಥವಾಗಿ ಕಳೆದೆಯಲ್ಲಾ. ಈ ಶರೀರದ ಮನೆಯನ್ನು ಹಾಳುಮಾಡಿ, ಬಿಟ್ಟು ಹೊರಹೋಗುವ ಸಮಯ ಬಂದಿದೆ. ಇಷ್ಟುದಿನ ವ್ಯರ್ಥಮಾಡಿಬಿಟ್ಟೆ, ಕೊನೆಯ ಪ್ರಯತ್ನವಾಗಿ ಈಗಲಾದರೂ ಈ ಮನೆಯ ಶೋಧನೆಯನ್ನು ಮಾಡಿ ಜನ್ಮ ಸಾರ್ಥಕ ಮಾಡಿಕೋ ಎಂದು ತಾತಯ್ಯನವರು ಕಳಕಳಿಯಿಂದ ಬೋಧಿಸುತ್ತಿದ್ದಾರೆ.

ಬಂಗಾರದ ಗಣಿಗಳಲ್ಲಿ ಬಂಗಾರದ ಕಣಗಳು ಕಲ್ಲು, ಕಲ್ಮಶ ಮುಂತಾದವುಗಳೊಂದಿಗೆ ಬೆರೆತಿರುತ್ತವೆ. ಆ ಕಚ್ಚಾ ಸಾಮಗ್ರಿಯನ್ನು ಬೆಂಕಿಯಲ್ಲಿ ಪುಟಕ್ಕಿಟ್ಟು ಕರಗಿಸಿ ಅಕ್ಕಸಾಲಿಗರು ಬಂಗಾರವನ್ನು ನೈಪುಣ್ಯದಿಂದ ತೆಗೆಯುವಂತೆ ಮಾನವರು ಅಹಂಕಾರ, ಮಮಕಾರಗಳನ್ನು ಬಿಟ್ಟು ಆತ್ಮತತ್ವವನ್ನು ತಿಳಿಯುತ್ತಾ ಶರೀರ ಶೋಧನೆಯನ್ನು ಮಾಡಬೇಕು.

ಶರೀರದ ಮನೆಯಲ್ಲಿ ಇರುವುದೇನು?

ಈ ಶರೀರದ ಮನೆಗೆ ಒಂಬತ್ತು ಬಾಗಿಲುಗಳಿವೆ ಹಾಗೂ ಈ ಶರೀರವು ದುಃಖಗಳಿಗೆ ಮೂಲವೂ ಆಗಿದೆ ಎಂದಿದ್ದಾರೆ ತಾತಯ್ಯನವರು. ಈ ಶರೀರದ ಮನೆಯಲ್ಲಿ ಇರುವುದಾದರೂ ಏನು? ತಾತಯ್ಯನವರು ಹೀಗೆ ವಿವರಿಸಿದ್ದಾರೆ.

ಡೆಬ್ಬದಿ ರೆಂಡುವೇಲ ನಾಳ್ಳು
ಅರುವದೀ ತೊಮ್ಮಿದಿ ಕೀಳ್ಳು
ತೋಕಪುರುಗುಲು ಮೂಡು ಪಾಳ್ಳು
ನಿಂಡಿಯುನ್ನದಿ ನೀಚುನಿಳ್ಳು||

ಈ ಶರೀರದಲ್ಲಿ ಎಪ್ಪತ್ತೆರಡು ಸಾವಿರ ನಾಡಿಗಳು, ಅರವತ್ತೊಂಬತ್ತು ಕೀಲುಗಳಿವೆ. ಈ ಶರೀರದಲ್ಲಿ ಮೂರು ಭಾಗ ಕ್ರಿಮಿಗಳಿಂದ (ತೋಕಪುರುಗುಲು) ಹಾಗೂ ಕೆಟ್ಟ ನೀರಿನಿಂದ ಕೂಡಿದೆ ಎಂದಿದ್ದಾರೆ. ತಾತಯ್ಯನವರು ರಚಿಸಿರುವ “ಬಾರೈಯ್ಯಾ ಗೋವಿಂದ ಬಂಧಕವ ಬಿಡಿಸೋ” ಎಂಬ ಕೀರ್ತನೆಯಲ್ಲಿ ಇದೇ ಅರ್ಥ ಬರುವಂತೆ ಬೋಧಿಸುತ್ತಾ ಭವಬಂಧನವನ್ನು ಬಿಡಿಸು ಎಂದು ಈ ರೀತಿಯಾಗಿ ಪರಮಾತ್ಮನಲ್ಲಿ ಪ್ರಾರ್ಥಿಸಿದ್ದಾರೆ.

ಮಲಮೂತ್ರ ದುರ್ಮಾಂಸ ಕರುಳಹುಳ ದುರ್ಗಂಧ
ಎಲುಬುಗುಂಡಿಗೆ ಘೃತವು ಹೊದ್ದಿಕೆ ಚರ್ಮ
ಇದರೊಳಗೆ ಸಿಕ್ಕಿದೆನು ಇನ್ಯಾರು ಗತಿಯೆನಗೆ
ಬಿಡಿಸೈಯ್ಯ ಭವಬಂಧ ಎನ್ನೊಡೆಯ ಗೋವಿಂದ||

ಈ ಭವಬಂಧನವನ್ನು ಬಿಡಿಸುವ ಒಡೆಯ ನೀನು, ನಾನು ಈ ಶರೀರ ಜಂಜಾಟದಲ್ಲಿ ಸಿಲುಕಿದ್ದೇನೆ ಪಾರುಮಾಡು ಗೋವಿಂದ ಎಂದಿದ್ದಾರೆ. ಈ ಶರೀರ ಶಾಶ್ವತವಲ್ಲವೆಂದು ಎಷ್ಟು ತಿಳಿಸಿದರೂ, ಶರೀರವೇ ಶಾಶ್ವತವೆಂದು ನಂಬಿಕೊಂಡು ಕಾಲ ಕಳೆಯುತ್ತಿರುವೆಯಲ್ಲಾ, ನಿನ್ನ ಹುಚ್ಚುತನಕ್ಕೆ ಏನೆಂದು ಹೇಳಲಿ ಎಂದಿದ್ದಾರೆ ತಾತಯ್ಯನವರು.

ನೆನಪಿರಲಿ, ಮನೆ ಬಿಡಲೇಬೇಕು

ಭೌತಿಕವಾದ ಕಾಯವು ಜೀವಾತ್ಮನ ತಾತ್ಕಾಲಿಕವಾದ ವಾಸಸ್ಥಳವೇ ಹೊರತು ಶಾಶ್ವತವಾದ ಸ್ಥಳವಲ್ಲ ಎಂಬುದನ್ನು ತಾತಯ್ಯನವರು ಇಲ್ಲಿ ಬೋಧಿಸುತ್ತಿದ್ದಾರೆ.

ಇಲ್ಲು ಶೃಂಗಾರಿಂಚಿ ವಿಧ ವಿಧಂಬುಲುಗಾನು
ಅಟ್ಟುವ ದೊಂತುಲು ಅದುನು ಪರಚಿ
ಕಡಪಟ ಜೀವುಂಡು ಕಾಪುರಮು ವಿಡುಚುರಾ
ನಾದ ಬ್ರಹ್ಮಾನಂದ ನಾರೇಯಣ ಕವಿ ||

ಇದನ್ನೂ ಓದಿ: ತಾತಯ್ಯ ತತ್ವಾಮೃತಂ: ಮಾನವ ಜನ್ಮ ದೊಡ್ಡದು…

ದೇಹವನ್ನು ಮನೆಗೆ ಹೊಲಿಸುತ್ತಾ, ಮನೆಯನ್ನು ಸುಣ್ಣಬಣ್ಣ ಮುಂತಾದ ಅಲಂಕಾರಿಕ ವಸ್ತುಗಳಿಂದ ವಿಧ ವಿಧವಾಗಿ ಅಲಂಕರಿಸುವಂತೆ, ಶರೀರವನ್ನು ವಸ್ತ್ರಾಭರಣಗಳಿಂದ ಅಲಂಕರಿಸುತ್ತೇವೆ. ಹಿಂದಿನ ಕಾಲದಲ್ಲಿ ಮಣ್ಣು ಸುಣ್ಣಗಳಿಂದ ಮನೆಯ ಗೋಡೆಗಳನ್ನು ಕಟ್ಟಿ, ಮರದ ಅಟ್ಟಗಳನ್ನು ನಿರ್ಮಿಸಿ, ನಂತರ ಮೇಲ್ಛಾವಣಿಗೆ ಜಂತಿಕೆಗಳನ್ನು ಮುಚ್ಚಿ ಭದ್ರಪಡಿಸುತ್ತಿದ್ದರು. ಹಾಗೆಯೇ ಶರೀರವು ಮೂಳೆ, ಮಾಂಸ, ಚರ್ಮಗಳಿಂದ ಮುಚ್ಚಿಕೊಂಡು ಭದ್ರವಾಗಿದೆ. ಕೊನೆಗೊಂದು ದಿನ ಜೀವಾತ್ಮನು ಮನೆಯನ್ನು ಬಿಟ್ಟು ಹೋಗುವನಯ್ಯಾ ಎಂದು ತಾತಯ್ಯನವರು ಮಾರ್ಮಿಕವಾಗಿ ಹೇಳುತ್ತಿದ್ದಾರೆ. ಅನಿತ್ಯವಾದ ದೇಹವನ್ನು ಎಷ್ಟೇ ಸಾಕಿ, ಸಲಹಿ, ಮಮತೆಯಿಂದ ಅಲಂಕರಿಸಿ ನೋಡಿಕೊಂಡರೂ ಆಯುಷ್ಯವು ಮುಗಿದ ಮೇಲೆ ಜೀವಾತ್ಮನು ಒಂದು ಕ್ಷಣವೂ ನಿಲ್ಲದೆ ಶರೀರದಿಂದ ಓಡಿಹೋಗುತ್ತದೆ. ಇಂದಲ್ಲ ನಾಳೆ ದೇಹವು ಮಣ್ಣುಗೂಡಿಯೇ ಗೂಡುತ್ತದೆ. ಮಕ್ಕಳು ಆಟವಾಡುವಾಗ ಆರಂಭದಲ್ಲಿ ಬಹಳ ಮುತುವರ್ಜಿಯಿಂದ ಕಲ್ಲು, ಇಟ್ಟಿಗೆ ಮುಂತಾದವುಗಳನ್ನು ಬಳಸಿ ಆಟದ ಮನೆಯನ್ನು ಕಟ್ಟಿಕೊಳ್ಳುತ್ತಾರೆ. ಕೊನೆ ಕೊನೆಗೆ ಬೇಸರ ಮೂಡಿ ಆಟ ಸಾಕೆನಿಸಿದಾಗ ಸುಮ್ಮನೆ ಹೋಗುವುದಿಲ್ಲ, ಕಟ್ಟಿದ್ದ ಆಟದ ಮನೆಯನ್ನು ಕೆಡವಿ ಹೋಗುತ್ತಾರೆ. ಅಂತೆಯೇ ಕೊನೆಗೆ ಎಲ್ಲವನ್ನು ಬಿಟ್ಟು ಜೀವಾತ್ಮನು ಹೊರಹೋಗುತ್ತಾನೆ, ಈ ಕಾರಣದಿಂದ ದೇಹಾಭಿಮಾನವು ಸಲ್ಲದು ಎನ್ನುತ್ತಿದ್ದಾರೆ ತಾತಯ್ಯನವರು.

ಮಾನವರ ಕರ್ತವ್ಯವೇನು?

ಹಿಂದಿನ ಜನ್ಮಗಳ ಪುಣ್ಯದಿಂದ ಮಾನವರಾಗಿ ಹುಟ್ಟುತ್ತೇವೆ. ಮಾನವರಾಗಿ ಹುಟ್ಟುವುದೇ ಶ್ರೇಷ್ಠ ಹಾಗೂ ಮಹಾಪುಣ್ಯ. ಏಕೆಂದರೆ ಬೇರೆ ಯಾವುದೇ ಪ್ರಾಣಿಗಳಿಗೆ ಚಿಂತನೆ ಮಾಡುವ ಶಕ್ತಿಯಿಲ್ಲ, ಕೇವಲ ಮಾನವರಿಗೆ ಮಾತ್ರ ವಿವೇಕದಿಂದ ಕೂಡಿದ ಚಿಂತನೆ ಮಾಡುವ ಶಕ್ತಿಯಿದೆ. ಈ ಕಾರಣದಿಂದ ತಾತಯ್ಯನವರು ಅನೇಕ ಜೀವರಾಶಿಗಳಲ್ಲಿ ಮಾನವಜನ್ಮ ಶ್ರೇಷ್ಠವಾದುದು ಎಂದು ಬೋಧನೆಯನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೆ, ಮಾನವರಾಗಿ ಹುಟ್ಟಿದ ನಂತರ ನಮ್ಮ ಕರ್ತವ್ಯ ಏನಾಗಿರಬೇಕು ಎಂಬುದನ್ನು ತಾತಯ್ಯನವರು ಗೋಚರ ಮಾಡಿಕೊಟ್ಟಿದ್ದಾರೆ. ಅಜ್ಞಾನದ ಮಾಯೆಯು ಮಾನವರನ್ನು ಆವರಿಸುತ್ತದೆ. ಅಜ್ಞಾನದ ಮಾಯೆಯ ಪೊರೆ ಕಳಚಬೇಕಾದರೆ ಗುರುವಿನ ಪಾದಗಳಲ್ಲಿ ಶರಣಾಗಬೇಕು.

ಗೂಡು ವುನಿಕಿ ಚೇಸಿ ಪೆಂಚಿ
ಭೂತಮುಲನು ಸಂಹರಿಂಚಿ
ಹಂಸಮಾರ್ಗಮು ಸಂಚರಿಂಚಿ
ಅಮರನಾರೇಯಣುನಿ ಪೂಜಿಂಚಿ||

ಕೊನೆಯದಾಗಿ ತಾತಯ್ಯನವರು ಈ ಬೋಧನೆಯನ್ನು ಮಾಡಿದ್ದಾರೆ. ನೀವು ವಾಸಿಸುವ ಮನೆಯ ಶೋಧನೆಯನ್ನು ಮಾಡಿ, ನಿಮ್ಮಲ್ಲಿರುವ ರಕ್ಷಸತ್ವವನ್ನು ಸಂಹರಿಸಿ, ಯೋಗವಿಧಾನದ ಪರಮಹಂಸ ಮಾರ್ಗದಲ್ಲಿ ಸಂಚರಿಸಿ ತುಟ್ಟತುದಿಯ ಸಹಸ್ರಾರವನ್ನು ಸೇರಿ, ಅಲ್ಲಿ ಶ್ರೀಅಮರನಾರೇಯಣ ಸ್ವಾಮಿಯನ್ನು ಅಂದರೆ ಪರಮಾತ್ಮನನ್ನು ಪೂಜೆ ಮಾಡಬೇಕು. ಇದು ಅಂತರಂಗದ ಪೂಜೆ. ಇದೇ ಮಾನವ ಶರೀರವನ್ನು ಹೊಂದಿದ್ದಕ್ಕೆ ಸಾರ್ಥಕ.

ಇದನ್ನೂ ಓದಿ: ತಾತಯ್ಯ ತತ್ವಾಮೃತಂ : ಮನಸ್ಸನ್ನು ಜಯಿಸಿದವರೇ ಮಹಾತ್ಮ!

Exit mobile version