Site icon Vistara News

ಮೊಗಸಾಲೆ ಅಂಕಣ | ಕರ್ನಾಟಕದ ಪ್ರಾದೇಶಿಕ ಪಕ್ಷಗಳು ಮಣ್ಣು ಮುಕ್ಕಿದ ಇತಿಹಾಸ

reddy 1

ಎಂ.ಕೆ. ಭಾಸ್ಕರ ರಾವ್

ಕರ್ನಾಟಕದಲ್ಲಿ ಜನ್ಮ ತಾಳಿದ ಪ್ರಾದೇಶಿಕ ಪಕ್ಷಗಳ ಪಟ್ಟಿಗೆ ಗಾಲಿ ಜನಾರ್ದನ ರೆಡ್ಡಿ ಸ್ಥಾಪಿಸಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಹೊಸ ಸೇರ್ಪಡೆ. ರಾಜ್ಯದ ಪ್ರಗತಿಯನ್ನು ಅದರಲ್ಲೂ ಮುಖ್ಯವಾಗಿ ಕಲ್ಯಾಣ ಕರ್ನಾಟಕದ ಪ್ರಗತಿಯನ್ನು ಗುರಿಯಾಗಿರಿಸಿಕೊಂಡು ಪಕ್ಷ ಜನ್ಮತಾಳಿದೆ. ಲಭ್ಯವಿರುವ ಮಾಹಿತಿ ರೀತ್ಯ ಕಲ್ಯಾಣ ಕರ್ನಾಟಕದ (ಈ ಮೊದಲಿನ ಹೈದರಾಬಾದ್ ಕರ್ನಾಟಕ ಪ್ರದೇಶ) ಎಲ್ಲ ೪೧ ವಿಧಾನ ಸಭಾ ಕ್ಷೇತ್ರಗಳಲ್ಲೂ ಅದು ೨೦೨೩ರ ಚುನಾವಣೆಯಲ್ಲಿ ಕಣಕ್ಕಿಳಿದು ತನ್ನ ಶಕ್ತಿಯನ್ನು ಪಣಕ್ಕೆ ಒಡ್ಡಲಿದೆ. ಹೊಸ ಯತ್ನ, ಹೊಸ ಆಕಾಂಕ್ಷೆ ಜೊತೆಗೆ ಹೊಸ ಛಲವೂ ಹೊಸ ಪಕ್ಷದ ಹುಟ್ಟಿನ ಜಾತಕದಲ್ಲಿ ಅಡಗಿದೆ.

ಜನಾರ್ದನ ರೆಡ್ಡಿಯವರ ರಾಜಕೀಯ ಭವಿಷ್ಯವನ್ನು ಅವರ ಹೊಸ ಪಕ್ಷ ನಿರ್ಧರಿಸಲಿದೆ ಎನ್ನುವುದು ರಾಜಕೀಯ ಪಂಡಿತರ ತರ್ಕ. ದಶಕಕ್ಕೂ ಹೆಚ್ಚು ಕಾಲದಿಂದ ಕೋರ್ಟ್ ಆದೇಶವೇ ಮುಖ್ಯವಾಗಿ ತೆರೆಮರೆ ರಾಜಕೀಯಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದ ರೆಡ್ಡಿ ಇದೀಗ ದೊಡ್ಡ ಸದ್ದು ಮಾಡಿ ಗದ್ದಲವೆಬ್ಬಿಸಿದ್ದಾರೆ. ಹೊಸ ಪಕ್ಷ ಯಾವೆಲ್ಲ ಪಕ್ಷಗಳ ಸಂಚಿತ ಮತ ಬುಟ್ಟಿಗೆ ಕೈ ಹಾಕಲಿದೆ; ಕನ್ನ ಕೊರೆಯಲಿದೆ ಎಂಬ ಲೆಕ್ಕಾಚಾರಕ್ಕೆ ಕಾರಣ ಕೊಟ್ಟಿದ್ದಾರೆ.

ಕಲ್ಯಾಣ ಕರ್ನಾಟಕದ ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಹಲವು ಕ್ಷೇತ್ರಗಳಲ್ಲಿ ಮುಸ್ಲಿಂ ಮತದಾರರ ಪ್ರಮಾಣ ಪ್ರತಿಶತ ಇಪ್ಪತ್ತೈದು ಮೂವತ್ತರಷ್ಟಿದೆ. ಇವು ಬಹುತೇಕವಾಗಿ ಮತ್ತು ಪರಂಪರಿಕವಾಗಿ ಕಾಂಗ್ರೆಸ್ ಮತಗಳೇ. ಜೆಡಿಎಸ್ ಅಲ್ಲಲ್ಲಿ ಕಾಂಗ್ರೆಸ್‌ನ ಮತ ಬುಟ್ಟಿಗೆ ಕೈಹಾಕಿ ಯಶಸ್ಸು ಕಂಡಿದೆ. ಕಲ್ಯಾಣ ಕರ್ನಾಟಕದಲ್ಲಿ ವೀರಶೈವ ಲಿಂಗಾಯತ ಮತ್ತು ಎಸ್‌ಟಿ (ವಾಲ್ಮೀಕಿ) ಸಮುದಾಯ ಗಣನೀಯ ಸಂಖ್ಯೆಯಲ್ಲಿದೆ, ಅದರಲ್ಲಿ ಮುಕ್ಕಾಲು ಮೂರು ಪಾಲು ಬಿಜೆಪಿ ಜೊತೆಗೆ ಇರುವುದಕ್ಕೆ ಕಳೆದ ಚುನಾವಣೆಯಲ್ಲಿ ಆ ಪಕ್ಷ ಹದಿನೆಂಟು ಸ್ಥಾನ ಗೆದ್ದಿರುವುದೇ ನಿದರ್ಶನ. ಒಂದಾನೊಂದು ಕಾಲದಲ್ಲಿ ಎಲ್ಲ ಸ್ಥಾನಗಳಲ್ಲೂ ತನ್ನ ಬಾವುಟ ಹಾರಿಸುತ್ತಿದ್ದ ಕಾಂಗ್ರೆಸ್ಸು ೧೭ ಸ್ಥಾನ ಪಡೆದಿದೆ. ಜೆಡಿಎಸ್‌ಗೆ ಸಮಾಧಾನಕರ ಬಹುಮಾನ ಬಂದಿದೆ. ಕಾಂಗ್ರೆಸ್‌ಗೆ ಪರಿಶಿಷ್ಟ ಜಾತಿ ಮತ್ತು ಮುಸ್ಲಿಂ ಅಲ್ಪಸಂಖ್ಯಾತರು ಬಲವಾದ ಬೆಂಬಲ ನೀಡಿಕೊಂಡು ಬಂದಿರುವ ಇತಿಹಾಸವೇನೋ ಇದೆ. ಆದರೆ ಮುನ್ಸಿಪಾಲಿಟಿ, ನಗರ-ಪುರ ಸಭೆ, ನಗರಪಾಲಿಕೆ ಚುನಾವಣೆಗಳಲ್ಲಿ ಸ್ಪರ್ಧಿಸಿ ತನ್ನ ಇರುವಿಕೆಯನ್ನು ತೋರಿಸಿಕೊಂಡಿರುವ ಎಐಎಂಐಎಂ (ಅಸಾದುದ್ದೀನ್ ಓವೈಸಿ ಪಕ್ಷ) ಬರಲಿರುವ ಚುನವಣೆಯಲ್ಲಿ ಕಲ್ಯಾಣ ಕರ್ನಾಟಕದ ಮುಸ್ಲಿಂ ಮತದಾರರು ನಿರ್ಣಾಯಕವಾಗಿರುವ ಕ್ಷೇತ್ರಗಳಲ್ಲೆಲ್ಲ ಕಣಕ್ಕೆ ಇಳಿಯಲಿದೆ. ಒಂದು ಕಡೆಯಿಂದ ಎಐಎಂಐಎಂ ಮತ್ತೊಂದು ಕಡೆಯಿಂದ ಕೆಆರ್‌ಪಿಪಿ ಮುಸ್ಲಿಂ ಮತದಾರರಿಗೆ ಗಾಳ ಹಾಕುವ ಕ್ರಮ ಸಹಜವಾಗಿಯೇ ಕಾಂಗ್ರೆಸ್‌ನ ತಲೆಬಿಸಿಯನ್ನು ಹೆಚ್ಚಿಸಲಿದೆ. ಕೆಆರ್‌ಪಿಪಿ ಹಾಗೂ ಎಐಎಂಐಎಂ ಬಿಜೆಪಿಯ “ಬಿ ಟೀಂ” ಎಂದು ಕಾಂಗ್ರೆಸ್ ಹೇಳುವಂತೆ ಮಾಡಿದೆ.

ಜನಾರ್ದನ ರೆಡ್ಡಿಯವರಿಗೆ ಪ್ರಾದೇಶಿಕ ಪಕ್ಷವೊಂದು ಅನಿವಾರ್ಯವಾಗಿದ್ದರ ಬಗ್ಗೆ ಸ್ವತಃ ಅವರ ಹೇಳಿಕೆಯೂ ಒಳಗೊಂಡಂತೆ ರೀಮುಗಟ್ಟಳೆ ಪತ್ರಿಕಾ ವರದಿಗಳು ತಾಸುಗಟ್ಟಲೆ ಟಿವಿ ವಿಶ್ಲೇಷಣೆಗಳು ಬಂದಿವೆ. ರೆಡ್ಡಿಗೆ ಆಡಿರುವ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ತಮಗೆ ರಾಜಕೀಯವಾಗಿ ಸಾಮಾಜಿಕವಾಗಿ ಆಗಿರುವ ಅನ್ಯಾಯಕ್ಕೆ (ಬಿ.ಎಸ್. ಯಡಿಯೂರಪ್ಪ, ಬಿ.ಶ್ರೀರಾಮುಲು ಕೂಡಾ ಇದೇ ಮಾತನ್ನಾಡಿದ್ದರು) ಸೇಡು ತೀರಿಸಿಕೊಳ್ಳುವ ವೇದಿಕೆಯಾಗಿ ಹೊಸ ಪಕ್ಷವನ್ನು ಅವರು ಬಳಸಿಕೊಳ್ಳಲಿದ್ದಾರೆ. ಪ್ರಾದೇಶಿಕ ಪಕ್ಷಗಳ ಹುಟ್ಟು ಮತ್ತು ವಿಳಾಸವಿಲ್ಲದಂತೆ ಅವು ಕಣ್ಮರೆಯಾಗಿರುವ ಈ ರಾಜ್ಯದಲ್ಲಿ “ರೆಡ್ಡಿ ಪಕ್ಷ” ವನ್ನು ಜನತೆ ಹೇಗೆ ಸ್ವೀಕರಿಸುತ್ತಾರೆ, ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎನ್ನುವುದು ಕುತೂಹಲಕಾರಿ. ತಮ್ಮ ಪಕ್ಷಕ್ಕೆ ಕರ್ನಾಟಕದ ಉದ್ದಗಲಕ್ಕೆ ಹರಡಿರುವ ರೆಡ್ಡಿ ಸಮುದಾಯ ತನ್ನ ಅಖಂಡ ಬೆಂಬಲ ನೀಡುತ್ತದೆನ್ನುವುದು ರೆಡ್ಡಿ ವಿಶ್ವಾಸ. ಅಂಥ ವಿಶ್ವಾಸವನ್ನು ತಮ್ಮಲ್ಲಿಟ್ಟುಕೊಂಡು ಪೋಷಿಸುವುದಕ್ಕೆ ರೆಡ್ಡಿ ಸರ್ವತಂತ್ರ ಸ್ವತಂತ್ರರು. ಆದರೆ ಕರ್ನಾಟಕದಲ್ಲಿ ಜಾತಿ ಧರ್ಮ ಕೋಮು ಬಣ್ಣ ಬಳಿದುಕೊಂಡ ಪಕ್ಷಗಳ ಗತಿ ಏನಾಗಿದೆ ಎನ್ನುವುದರತ್ತ ಗಮನ ಚೆಲ್ಲಿದರೆ ತಮ್ಮಲ್ಲಿಟ್ಟುಕೊಂಡಿರುವ ಭರವಸೆಗೆ ೩೫ ಅಂಕ ಪಡೆಯುವುದು ಕೂಡಾ ರೆಡ್ಡಿಯವರಿಗೆ ದುಸ್ತರ ಎನಿಸುತ್ತದೆ.

ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಹುಟ್ಟು ಹಾಕಿ ಮಣ್ಣು ಮುಕ್ಕಿದವರು ಸಾಮಾನ್ಯರಲ್ಲ ಎನ್ನುವುದು ಗಮನಿಸಬೇಕಾಗಿರುವ ಸಂಗತಿ. ಮಾಜಿ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ, ದೇವರಾಜ ಅರಸು, ಎಸ್. ಬಂಗಾರಪ್ಪ, ರಾಮಕೃಷ್ಣ ಹೆಗಡೆ, ಬಿ.ಎಸ್.ಯಡಿಯೂರಪ್ಪ ….. ಹೀಗೆ “ಇದ್ದ ಪಕ್ಷವನ್ನು ತೊರೆದು ಹೊರ ಬಿದ್ದವರ/ ಪಕ್ಷದಲ್ಲಿ ಕಾಟ ಸಹಿಸಲಾಗದೆ ದೂರಸರಿದವರ ಸಾಲು ಬೆಳೆಯುತ್ತದೆ. ಒಬ್ಬರ ವೈಫಲ್ಯ ಇನ್ನೊಬ್ಬರಿಗೆ ಪಾಠವಾದ ಉದಾಹರಣೆ ರಾಜಕೀಯದಲ್ಲಂತೂ ಇಲ್ಲವೇ ಇಲ್ಲ. ಅವರು ಸೋತ ಮಾತ್ರಕ್ಕೆ ತಾನು ಸೋಲುವುದುಂಟೆ ಎಂಬ ಪ್ರಶ್ನೆಯೊಂದಿಗೇ ಹೊಸ ಪಕ್ಷ ಕಟ್ಟಿದವರ ಕಥೆಗಳು ಬೆಳೆಯುತ್ತವೆ.

ಮೈಸೂರು ಇನ್ನೂ ಪ್ರಾಂತ್ಯದ ಸ್ವರೂಪದಲ್ಲಿದ್ದು ರಾಜಾಡಳಿತದಲ್ಲಿದ್ದ ಕಾಲದಲ್ಲಿ ರಾಜ್ಯದ ಮೊದಲ ಪ್ರಾದೇಶಿಕ ಪಕ್ಷದ ಉದಯವಾಯಿತು. ಇದಾಗಿದ್ದು ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕೂ ಮೂವತ್ತು ವರ್ಷ ಮೊದಲು. ೧೯೧೭ರಲ್ಲಿ ಜನಿಸಿದ ಪಕ್ಷದ ಹೆಸರು ಪ್ರಜಾ ಮಿತ್ರ ಮಂಡಲಿ (ಪಿಎಂಎಂ). ಎಸ್.ಚನ್ನಯ್ಯ ಸ್ಥಾಪಕ ಅಧ್ಯಕ್ಷರಾಗಿದ್ದ ಪಕ್ಷದ ಘೋಷಿತ ಉದ್ದೇಶ ಬ್ರಾಹ್ಮಣೇತರರನ್ನು ಮುಖ್ಯವಾಗಿ ಶೂದ್ರ ಸಮುದಾಯವನ್ನು ಅಧಿಕಾರದ, ಆಡಳಿತದ ಮುಂಚೂಣಿಗೆ ತರುವುದಾಗಿತ್ತು. ಅದು ಎಷ್ಟು ವರ್ಷ ಬದುಕಿತ್ತು ಅಥವಾ ತನ್ನ ಘೋಷಿತ ಗುರಿ ಸಾಧನೆಯಲ್ಲಿ ಅದು ಪಡೆದ ಯಶಸ್ಸು ಯಾವ ಪ್ರಮಾಣದ್ದು ಎಂಬಿತ್ಯಾದಿ ವಿವರ ಲಭ್ಯವಿಲ್ಲ. ಚನ್ನಯ್ಯನವರ ತರುವಾಯ ಗಟ್ಟಿ ನಾಯಕತ್ವವಿಲ್ಲದೆ ಪಕ್ಷ ಇತಿಹಾಸದ ಪುಟ ಸೇರಿತು.

ಸ್ವಾತಂತ್ರ್ಯಾನಂತರದಲ್ಲಿ ಎಪ್ಪತ್ತು ಎಂಭತ್ತರ ದಶಕದಲ್ಲಿ ಬಹಳ ಭರವಸೆ ಹುಟ್ಟಿಸುವ ಯತ್ನ ನಡೆದಿದ್ದು ಸುರಾಜ್ ಪಕ್ಷ ಜನ್ಮ ತಾಳಿದಾಗ. ಮೈಸೂರು ರಾಜ್ಯದ ಎರಡನೆ ಮುಖ್ಯ ಮಂತ್ರಿ, ಜನಪ್ರಿಯ ನಾಯಕ ಕೆಂಗಲ್ ಹನುಮಂತಯ್ಯನವರು ಬಲಾಢ್ಯ ಒಕ್ಕಲಿಗ ನಾಯಕ ಕೂಡಾ. ರಾಜಧಾನಿ ನಗರ ಬೆಂಗಳೂರಿನಲ್ಲಿ ವಿಧಾನ ಸೌಧದ ಕನಸು ಕಂಡು ತಮ್ಮ ಜೀವಿತಾವಧಿಯಲ್ಲಿ ನನಸು ಮಾಡಿದ ಖ್ಯಾತಿ ಕೆಂಗಲ್‌ರದು. ವಿಧಾನ ಸೌಧದ ಮೂರನೇ ಮಹಡಿಯ ಆಡಳಿತ ಪೀಠದಲ್ಲಿ ಕೂರಲು ಅವರಿಗೆ ಅವಕಾಶ ಸಿಗಲಿಲ್ಲ. ವಿಧಾನ ಸೌಧ ಅಸ್ತಿತ್ವ ಪಡೆದ ತರುವಾಯದ ವಿಧಾನ ಸಭೆಯಲ್ಲೂ ಅವರು ಕೂರಲಿಲ್ಲ. ಕೇಂದ್ರದಲ್ಲಿ ರೈಲ್ವೆ ಸಚಿವರಾಗಿ, ಪ್ರಥಮ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಅವರು ದೊಡ್ಡ ಹೆಸರು ಮಾಡಿದರು. ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ನಂತರದಲ್ಲಿ ಇಂದಿರಾ ಗಾಂಧಿ ಜೊತೆ ಅನೇಕ ವಿಚಾರಗಳಲ್ಲಿ ಭಿನ್ನಮತವಿಟ್ಟುಕೊಂಡು ರಾಜಕೀಯ ಮಾಡಿದ ಅವರು ಕಾಂಗ್ರೆಸ್‌ನಿಂದ ಹೊರ ಬಂದು ಸ್ಥಾಪಿಸಿದ್ದು “ಸುರಾಜ್ ಪಾರ್ಟಿ”. ಈಗ ಇರುವುದು ಸುರಾಜ್ಯ ಅಲ್ಲ, ಅದನ್ನು ಅಸ್ತಿತ್ವಕ್ಕೆ ತರುವುದೇ ಸುರಾಜ್ ಪಾರ್ಟಿ ಹುಟ್ಟಿನ ಕಾರಣ ಎನ್ನುವುದು ಅವರ ನಿಲುವಾಗಿತ್ತು. ಕೆಂಗಲ್‌ರನ್ನು ಬೇರೆ ಬೇರೆ ಕಾರಣಕ್ಕಾಗಿ ಮೆಚ್ಚಿ ಗೌರವಿಸುತ್ತಿದ್ದ ರಾಜ್ಯದ ಜನತೆ “ಸುರಾಜ್ ಪಾರ್ಟಿ”ಯೊಂದಿಗೆ ಮಾತ್ರ ನಿಲ್ಲಲಿಲ್ಲ. ಅದು ಕೆಂಗಲ್‌ರ ಭವಿಷ್ಯದ ರಾಜಕೀಯ ಮಸುಕಾಗುವಂತೆ ಮಾಡಿತು.

ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಅಂದಿನ ಕಾಂಗ್ರೆಸ್ ಸಂಸದ ಡಿ.ಬಿ. ಚಂದ್ರೇಗೌಡರಿಂದ ರಾಜೀನಾಮೆ ಕೊಡಿಸಿ ವಿಶ್ವ ವಿಖ್ಯಾತ ೧೯೭೯ರ ಉಪ ಚುನಾವಣೆ ನಡೆಯುವಂತೆ ಮಾಡಿದ ದೇವರಾಜ ಅರಸು, ತಮ್ಮ ಹೆಸರು ಖ್ಯಾತಿಯನ್ನು ಒತ್ತೆ ಇಟ್ಟು ಇಂದಿರಾಗಾಂಧಿಯವರನ್ನು ಗೆಲ್ಲಿಸಿ ಮೂಲೆಗುಂಪಾಗಿದ್ದ ನಾಯಕಿಗೆ ರಾಜಕೀಯ ಪುನರ್ಜನ್ಮ ನೀಡಿದರು. ಆದರೇನಂತೆ ಏರಿದ ಏಣಿಯನ್ನು ಒದ್ದವರು ಇಂದಿರಾ ಗಾಂಧಿ. “ಹೋಗು ಎನ್ನದೆ ಹೊಗೆ ಹಾಕಿದರು” ಎಂಬಂತೆ ಪಕ್ಷದಿಂದ ಅರಸು ಹೊರ ಹೋಗುವಂತೆ ಮಾಡಿದರು. ಜನರಿಗಾಗಿ ಅಷ್ಟೆಲ್ಲ ಕೆಲಸ ಮಾಡಿರುವ ತಮ್ಮೊಂದಿಗೆ ಜನರು ಇದ್ದೇ ಇರುತ್ತಾರೆಂಬ ಅರಸು ಆತ್ಮವಿಶ್ವಾಸ “ಕರ್ನಾಟಕ ಕ್ರಾಂತಿ ರಂಗ” ಪ್ರಾದೇಶಿಕ ಪಕ್ಷ ಸ್ಥಾಪನೆಗೆ ಕಾರಣವಾಯಿತು. ಅಬ್ದುಲ್ ನಜೀರ್ ಸಾಬ್, ಬಂಗಾರಪ್ಪ ಮುಂತಾದವರು ಪಕ್ಷದೊಂದಿಗೆ ಕೈ ಜೋಡಿಸಿದರಾದರೂ ಜನ ಕೈ ಹಿಡಿಯಲಿಲ್ಲ.

ಪ್ರಥಮ ಕಾಂಗ್ರೆಸ್ಸೇತರ ಜನತಾ ಪಾರ್ಟಿ ಸರ್ಕಾರ ರಾಜ್ಯದಲ್ಲಿ ಬಂದುದು ೧೯೮೩ರಲ್ಲಿ. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದರು. ಎಚ್.ಡಿ.ದೇವೇಗೌಡ, ಎಸ್.ಆರ್.ಬೊಮ್ಮಾಯಿ ಸಂಸ್ಥಾ ಕಾಂಗ್ರೆಸ್‌ನಲ್ಲಿದ್ದು ಜನತಾ ಪಾರ್ಟಿ ಭಾಗವಾದವರು. ಜೆ.ಎಚ್. ಪಟೇಲರದು ಎಸ್‌ಎಸ್‌ಪಿ ಹಿನ್ನೆಲೆ. ಒಂದೇ ಪಕ್ಷದಿಂದ ಬಂದರೂ ಗೌಡ ಮತ್ತು ಹೆಗಡೆ ನಡುವಿನದು ಸುದೀರ್ಘ ಎನ್ನಬಹುದಾದ ರಾಜಕೀಯ ವೈಮನಸ್ಯ. ಹೆಗಡೆ ಬಣದ ಪ್ರಕಾರ ಗೌಡರದು ಮಿತಿಮೀರಿದ ಕಿರಿಕಿರಿ, ಗೌಡರ ಪಾಳಯದ ಪ್ರಕಾರ ಹೆಗಡೆಯವರದು ಕಂಡಾಪಟ್ಟೆ ಕಿತಾಪತಿ. ೧೯೮೮ರಲ್ಲಿ ಜನತಾ ದಳದ ಹುಟ್ಟಿಗೆ ಕಾರಣವಾಗಿದ್ದರೂ ಹೆಗಡೆಯವರ ಪ್ರಭಾವ ಕಳೆಗುಂದತೊಡಗಿತ್ತು. ಮುಖ್ಯಮಂತ್ರಿಯಾಗಿದ್ದ ಗೌಡರು ಪ್ರಧಾನಿಯಾದರು. ಅದೇ ಮರು ಘಳಿಗೆಯಲ್ಲಿ ಹೆಗಡೆಯವರು ಪಕ್ಷದಿಂದ ಹೊರದಬ್ಬಿಸಿಕೊಂಡರು. ಆಗ ಅವರು ಸ್ಥಾಪಿಸಿದ್ದು ಲೋಕಶಕ್ತಿ ಪಾರ್ಟಿಯನ್ನು. ಅದನ್ನು ರಾಷ್ಟ್ರೀಯ ಪಕ್ಷ ಎಂದು ಅವರು ಕರೆದುಕೊಂಡರಾದರೂ ರಾಷ್ಟ್ರದ ಹಾಗಿರಲಿ ರಾಜ್ಯದ ಗಮನವನ್ನೂ ಅದು ಸೆಳೆಯಲಿಲ್ಲ. ಈ ಮಧ್ಯೆ ಹೆಗಡೆಯವರು ನವ ನಿರ್ಮಾಣ ವೇದಿಕೆ ಎಂಬ “ರಾಜಕೀಯೇತರ ಸಂಘಟನೆ”ಯನ್ನೂ ಸ್ಥಾಪಿಸಿದ್ದರು. ರಾಜಕೀಯ ಪಕ್ಷ ಅಲ್ಲ ಎಂದು ಹೆಗಡೆ ಹೇಳಿಕೊಂಡರೂ ರಾಜಕೀಯವನ್ನಲ್ಲದೆ ಇನ್ನೇನನ್ನೂ ವೇದಿಕೆ ಮಾಡಲಿಲ್ಲ. ನಿಜ, ವೇದಿಕೆ ರಾಜಕೀಯ ಪಕ್ಷವಾಗಿ ನೋಂದಣಿ ಆಗಲಿಲ್ಲ.
ಹೆಗಡೆ ನಂತರ ಈ ಸಾಲಿನ ಪ್ರಮುಖರು ಸಾರೆಕೊಪ್ಪ ಬಂಗಾರಪ್ಪ. ಮುಖ್ಯಮಂತ್ರಿಯಾಗಿದ್ದಾಗಲೇ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿದ್ದ ಬಂಗಾರಪ್ಪನವರು ೧೯೯೪ರಲ್ಲಿ ಸ್ಥಾಪಿಸಿದ್ದು “ಕರ್ನಾಟಕ ಕಾಂಗ್ರೆಸ್ ಪಾರ್ಟಿ” (ಕೆಸಿಪಿ). ಎಸ್‌ಎಸ್‌ಪಿ ಅಲ್ಲಿಂದ ಕಾಂಗ್ರೆಸ್ಸು, ಅರಸು ಕ್ರಾಂತಿರಂಗ ಸ್ಥಾಪಿಸಿದಾಗ ಅದರೊಂದಿಗೆ ಶಾಮೀಲು, ಪುನಃ ಕಾಂಗ್ರೆಸ್, ಬಿಜೆಪಿ, ಸಮಾಜವಾದಿ ಪಕ್ಷ, ಜಾತ್ಯತೀತ ಜನತಾ ದಳ ಹೀಗೆ “ಟ್ಯೂರ್” ಮಾಡಿದ ಬಂಗಾರಪ್ಪ ಕೆಸಿಪಿ ಸ್ಥಾಪಿಸಿದರೂ ಅವರ ಜನಪ್ರಿಯತೆಯ ಲಾಭ ಅವರದೇ ಪಕ್ಷಕ್ಕೆ ದೊರೆಯಲಿಲ್ಲ.

೨೦೦೮-೦೯ರಲ್ಲಿ ಬಿಜೆಪಿಯನ್ನು ಹೇಗೋ ಎಂತೋ ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ, ತಮಗೆ ಕಿರುಕುಳ ನೀಡಿದ ಪಕ್ಷದ ವರಿಷ್ಟರ ವಿರುದ್ಧ ಬಂಡಾಯವೆದ್ದು ಜೊತೆಗೂಡಿದ್ದು “ಕರ್ನಾಟಕ ಜನತಾ ಪಾರ್ಟಿ” ಜೊತೆಗೆ. ಕೆಜೆಪಿಗೆ ಆ ಮೊದಲೇ ಬೇರೊಬ್ಬರು ಸ್ಥಾಪಕರಿದ್ದರೂ ಆ ಪಕ್ಷ ಹೆಸರು ಮಾಡಿದ್ದು ಅದು ಯಡಿಯೂರಪ್ಪ ಕೈ ವಶವಾದ ತರುವಾಯ. ೨೦೧೩ರ ಚುನಾವಣಾ ಪೂರ್ವದ ಆ ಸಮಯದಲ್ಲಿ ಹುಟ್ಟಿದ ಇನ್ನೊಂದು ಪಕ್ಷ “ಬಿಎಸ್‌ಆರ್ ಕಾಂಗ್ರೆಸ್”. ಅದರ ಸಂಸ್ಥಾಪಕರು, ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಈಗ ಸಚಿವರಾಗಿರುವ ಮತ್ತು ಹೊಸ ಪಕ್ಷ ಸ್ಥಾಪಿಸಿರುವ ಜನರ್ದನ ರೆಡ್ಡಿಯವರ ಸನ್ಮಿತ್ರರಾಗಿರುವ ಬಿ.ಶ್ರೀರಾಮುಲು. ತಮ್ಮದೇ ಹೆಸರಿನ ಪಕ್ಷವಾದರೂ ಅದನ್ನು ಅವರು ಕರೆದು ಕೊಂಡಿದ್ದು ಬಡವರ, ಶ್ರಮಿಕರ, ರೈತರ ಪಕ್ಷವೆಂದು. ಕೆಜೆಪಿ ಆರು ಸೀಟು ಗೆದ್ದರೆ ಬಿಎಸ್‌ಆರ್ ಕಾಂಗ್ರೆಸ್ ನಾಲ್ಕು ಸೀಟು ಗೆದ್ದಿತ್ತು. ಆದರೆ ಅಂತಿಮವಾಗಿ ಇಬ್ಬರೂ ನಾಯಕರು ಹಳೆ ಗಂಡನ ಪಾದವೇ ಗತಿ ಎಂದು ಬಿಜೆಪಿಗೆ ಮರಳಿದರು.

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಅಲ್ಲೂ ನಿರಾಶರಾಗಿದ್ದ ಹಂತದಲ್ಲಿ ಎ.ಕೆ. ಸುಬ್ಬಯ್ಯನವರು ಪಕ್ಷ ಕಟ್ಟಿದ್ದರು. ತಮ್ಮ ಪತ್ರಿಕೆಗೆ ಇದ್ದ ಓದುಗರ ಪ್ರೀತಿಯನ್ನು ರಾಜಕೀಯಕ್ಕೆ ಬಳಸಿಕೊಳ್ಳ ಬಯಸಿದ್ದ ಪಿ.ಲಂಕೇಶ್ ಪಾರ್ಟಿ ಸ್ಥಾಪಿಸಿ ಕೈಸುಟ್ಟುಕೊಂಡಿದ್ದರು. ಎಂಭತ್ತರ ದಶಕದಲ್ಲಿ ಸಂಚಲನ ಮೂಡಿಸಿದ್ದ ಕರ್ನಾಟಕ ರೈತ ಸಂಘದ ಇಬ್ಬರು ನಾಯಕರಾದ ಎಂ. ಡಿ.ನಂಜುಂಡಸ್ವಾಮಿ ಮತ್ತು ಬಾಬಾ ಗೌಡ ಪಾಟೀಲರು ವಿಧಾನ ಸಭೆಗೆ ಆಯ್ಕೆಯಾಗಿದ್ದರು. ಸದನದಲ್ಲಿ ನಂಜುಂಡಸ್ವಾಮಿ ಮಾಡಿದ ಹೇಳಿಕೆ ಪ್ರಕಾರ ರೈತ ಶಕ್ತಿಯನ್ನು ರಾಜಕೀಯ ಶಕ್ತಿಯಾಗಿ ಪರಿವರ್ತಿಸುವುದೇ ನಮ್ಮಿಬ್ಬರ ಸದನ ಪ್ರವೇಶದ ಗುರಿ ಎಂದಿದ್ದರು. ಕಾಲಕ್ರಮೇಣ ಬಾಬಾ ಗೌಡರು ಬಿಜೆಪಿ ಸೇರಿ ಲೋಕಸಭೆಗೆ ಆಯ್ಕೆಯೂ ಆಗಿ ವಾಜಪೇಯಿ ಸಂಪುಟದಲ್ಲಿ ಸಚಿವರಾದರು. ಕೆ.ಎಸ್.ಪುಟ್ಟಣ್ಣಯ್ಯ ತರುವಾಯದಲ್ಲಿ ರೈತ ಸಂಘದ ಪ್ರಾತಿನಿಧ್ಯ ವಿಧಾನ ಸಭೆಯಲ್ಲಿ ಕಂಡಿಲ್ಲ.

ವ್ಯಾಪಾರ ವಹಿವಾಟಿನವರೂ ಪ್ರಾದೇಶಿಕ ಪಕ್ಷ ಕಟ್ಟಿದ ಇತಿಹಾಸ ನಮ್ಮಲ್ಲಿದೆ. ಮದ್ಯದ ದೊರೆ ಎನಿಸಿಕೊಂಡಿದ್ದ ಶ್ರೀಹರಿ ಖೋಡೆಯವರು “ಅರಸು ಸಂಯುಕ್ತ ಪಕ್ಷ” ಕಟ್ಟಿದ್ದರು. ಸಾರಿಗೆ ಉದ್ಯಮಿ ವಿಜಯ ಸಂಕೇಶ್ವರರು ಬಿಜೆಪಿಯಿಂದ ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಆದರೆ ಕರ್ನಾಟಕದಲ್ಲಿ ಪಕ್ಷ ನಿರೀಕ್ಷಿತ ರೀತಿಯಲ್ಲಿ ಸಾಗುತ್ತಿಲ್ಲ ಎಂಬ ಭ್ರಮನಿರಸನದಲ್ಲಿ ತಮ್ಮದೇ ಸ್ವತಂತ್ರ ಪಕ್ಷ ಸ್ಥಾಪಿಸಿದರಾದರೂ ಅದನ್ನು ದಡ ಮುಟ್ಟಿಸಲಾಗದೆ ಹೋದರು. ನೈಸ್ ರಸ್ತೆ ಎಂದಾಕ್ಷಣ ನೆನಪಿಗೆ ಬರುವುದು ಅಶೋಕ್ ಖೇಣಿ ಚಿತ್ರ. ಒಮ್ಮೆ ಶಾಸಕರೂ ಆಗಿದ್ದ ಅವರು “ಕರ್ನಾಟಕ ಮಕ್ಕಳ ಪಕ್ಷ” ವನ್ನು ಸ್ಥಾಪಿಸಿದ್ದರು. ಅವರ ದುರ್ದೈವ, ಕರ್ನಾಟಕದ ಮಕ್ಕಳ್ಯಾರೂ ಆ ಪಕ್ಷದೊಂದಿಗೆ ತಮ್ಮನ್ನು ಗುರುತಿಸಿಕೊಳ್ಳಲಿಲ್ಲ.
ಮಹಾರಾಷ್ಟ್ರ ಏಕೀಕರಣ ಸಮಿತಿ ಕರ್ನಾಟದ ಪಕ್ಕೆಯಲ್ಲಿ ನಾಟಿರುವ ಮುಳ್ಳು. ಬೆಳಗಾವಿ, ಖಾನಾಪುರ, ಕಾರವಾರ, ನಿಪ್ಪಾಣಿ ಸೇರಿದಂತೆ ಏಳೆಂಟು ನೂರು ಕರ್ನಾಟಕದ ಗಾಮಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂಬುದು ಅದರ ಏಕೈಕ ಅಜೆಂಡಾ. ದಶಕಗಳ ಹಿಂದೆ ಎಂಇಎಸ್‌ನಿಂದ ಶಾಸಕರು ಆಯ್ಕೆಯಾಗುತ್ತಿದ್ದರು. ಈಗ ಒಬ್ಬರೂ ಆಯ್ಕೆಯಾಗುತ್ತಿಲ್ಲ. ಆದರೆ ಅವರ ಅಬ್ಬರ ಮಾತ್ರ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. “ಅಹಿಂದ” ಸಂಘಟನೆಯನ್ನು ರಾಜಕೀಯ ಪಕ್ಷವಾಗಿಸುವ ಯೋಚನೆ ಕಾಂಗ್ರೆಸ್ ಸೇರಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರಲ್ಲಿತ್ತು. ಬೆಂಗಳೂರು ಸೆಂಟ್ರಲ್ ಕಾಲೇಜು ಸಭಾಂಗಣದಲ್ಲಿ ಅಹಿಂದ ಸಮಾವೇಶ ನಡೆದಿತ್ತು. ಅದನ್ನು ಉದ್ದೇಶಿಸಿ ಯು.ಆರ್.ಅನಂತಮೂರ್ತಿ ಭಾಷಣ ಮಾಡಿದ್ದರು. ತಾವು ಅಹಿಂದವನ್ನು ರಾಜಕೀಯ ಪಕ್ಷವಾಗಿ ಪರಿವರ್ತಿಸಿದರೆ ಅನಂತಮೂರ್ತಿಯವರ ಭಾಷಣವೇ ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಗಿರುತ್ತದೆಂದು ಸಿದ್ದರಾಮಯ್ಯ ಹೇಳಿದ್ದರು. ಕಾಂಗ್ರೆಸ್ ಅವರಿಗೆ ಬೇಕಾಗಿದ್ದನ್ನೆಲ್ಲ ಕೊಟ್ಟಿದ್ದರಿಂದ ಅಹಿಂದ ರಾಜಕೀಯ ಪಕ್ಷ ಆಗಲಿಲ್ಲ. ಮುಂದೆ…? ಗೊತ್ತಿಲ್ಲ.

“ಕನ್ನಡ ಚಳವಳಿ ವಾಟಾಳ್ ಪಕ್ಷ” ದಶಕಗಳಿಂದ ಕನ್ನಡ ಭಾಷೆ, ನೆಲ-ಜಲದ ವಿಚಾರದಲ್ಲಿ ತನ್ನದೇ ಆದ ಕೆಲಸ ಮಾಡಿಕೊಂಡು ಬಂದಿದೆ. ಅದರ ಅಧ್ಯಕ್ಷ ವಾಟಾಳ್ ನಾಗರಾಜ್ ಕೆಲ ಬಾರಿ ಶಾಸಕರಾಗಿದ್ದೂ ಉಂಟು. ಆದರೆ ಜನರ ಮನಸ್ಸು ಗೆಲ್ಲುವಲ್ಲಿ ಆ ಪ್ರಾದೇಶಿಕ ಪಕ್ಷವೂ ಸೋತಿದೆ. “ಕೊಡವ ನ್ಯಾಷನಲ್ ಪಾರ್ಟಿ” ಕೊಡಗಿಗೆ ಪ್ರತ್ಯೇಕ ಸ್ಥಾನಮಾನಕ್ಕಾಗಿ ಹೋರಾಡುವ ಕೆಲಸವನ್ನು ತನ್ನದೇ ಇತಿಮಿತಿಯಲ್ಲಿ ಮುಂದುವರಿಸಿದೆ. ಚಿತ್ರ ನಟ ಉಪೇಂದ್ರ “”ಉತ್ತಮ ಪ್ರಜಾಕೀಯ ಪಾರ್ಟಿ” ಸ್ಥಾಪಿಸಿ ಸಾಮಾಜಿಕ ಜಲತಾಣದ ಮೂಲಕ ಜನರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಇದುವರೆಗೆ ಹುಟ್ಟಿರುವ ಪ್ರಾದೇಶಿಕ ಪಕ್ಷಗಳ ಪೈಕಿ ಗಣನೀಯ ಪಾತ್ರ ವಹಿಸಿಕೊಂಡು ಬರಲು ಸಾಧ್ಯವಾಗಿದ್ದು ಜೆಡಿಎಸ್‌ಗೆ ಮಾತ್ರ. ಇದಕ್ಕೆ ಎರಡು ಕಾರಣ, ತುರ್ತು ಪರಿಸ್ಥಿತಿ ಕುಲುಮೆಯಲ್ಲಿ ಜೀವ ತಳೆದ ಜನತಾ ಪಕ್ಷದ ಕುಡಿ ಅದು ಎಂಬ ಜನಜನಿತ ಭಾವನೆ. ಎರಡನೆಯ ಕಾರಣ, ಪಕ್ಷವನ್ನು ಅಪ್ರಸ್ತುತಗೊಳಿಸುವ ಎಲ್ಲ ತಂತ್ರಗಳ ವಿರುದ್ಧ ನಿಂತಿರುವ ದೇವೇಗೌಡರ ಗಟ್ಟಿತನ.

ಇದೀಗ ಜನಾರ್ದನ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಬಾವುಟ ಹಾರಿಸಲಿದೆ. ಬಾವುಟದಲ್ಲಿ ಎಷ್ಟೆಲ್ಲ ಬಣ್ಣಗಳಿರುತ್ತವೆಯೋ ಗೊತ್ತಿಲ್ಲ. ಇದುವರೆಗೆ ಎಷ್ಟೆಲ್ಲ ಬಾವುಟಗಳನ್ನು ನೋಡಿರುವ ಕನ್ನಡಿಗರು ಹೊಸ ಪಕ್ಷದ ಬಾವುಟವನ್ನೂ ನೋಡಲಿದ್ದಾರೆ.

ಇದನ್ನೂ ಓದಿ | ಮೊಗಸಾಲೆ ಅಂಕಣ | ಗಡಿ ತಂಟೆ: ಕೇಂದ್ರದ ತಾರಮ್ಮಯ್ಯ ನೀತಿಯ ಫಲ

Exit mobile version