Site icon Vistara News

ಸೈಬರ್‌ ಸೇಫ್ಟಿ ಅಂಕಣ: ಸೈಬರ್ ಸುರಕ್ಷತೆಗೆ ಆದ್ಯತೆ, ನಮ್ಮೆಲ್ಲರ ಬದ್ಧತೆ

Cyber Safety

ಸೈಬರ್ ಸೇಫ್ಟಿ ಅಂಕಣ (Cyber Safety Column) ಈ ಕ್ಯಾಲೆಂಡರ್ ವರ್ಷದ ಮೊದಲಾರ್ಧದಲ್ಲಿ ಶುರುವಾಗಿದ್ದು. ಎಷ್ಟು ಬೇಗ ಕ್ಯಾಲೆಂಡರ್ ಬದಲಿಸುವ ಸಮಯ ಬಂದಿದೆ ಅಲ್ವಾ? ಸೈಬರ್ ಜಗತ್ತಿನ ಬಗ್ಗೆ ಕನ್ನಡದಲ್ಲಿ ಬರೆಯಲು ಪ್ರೇರೇಪಿಸಿ ಉತ್ತೇಜಿಸಿದ ಶ್ರೀ ಕೇಶವ ಪ್ರಸಾದ್‌ ಮತ್ತು ಶ್ರೀ ಹರೀಶ್ ಖೇರರಿಗೆ ನನ್ನ ಹೃತ್ಪೂರ್ವಕ ವಂದನೆಗಳು. ವಿಸ್ತಾರ ಡಿಜಿಟಲ್‌ನ (Vistara Digital) ಅಂತರ್ಜಾಲ ಪುಟದಲ್ಲಿ ಮೂಡಿಬರುತ್ತಿರುವ ಇ-ಪತ್ರಿಕೆಯಲ್ಲಿ ನಾನೂ ಬರಿಯುತ್ತಿದ್ದೇನೆ ಎನ್ನುವುದೇ ಒಂದು ಸೋಜಿಗ. ತಂತ್ರಜ್ಞಾನದ ಕ್ಲಿಷ್ಟವಾದ ಪದಗಳನ್ನು ಆದಷ್ಟೂ ಕನ್ನಡೀಕರಿಸಿ ಅಂತರ್ಜಾಲದ ಅಂತರಂಗವನ್ನು ನಿಮ್ಮೆದುರು ತೆರೆದಿಡುವ ಪ್ರಯತ್ನದ ಬಗ್ಗೆ ನಿಮ್ಮ ಅನಿಸಿಕೆ, ಅಭಿಪ್ರಾಯಗಳಿಗೆ ಕಾತರದಿಂದ ಕಾಯುತ್ತಿದ್ದೇನೆ. ಈ ವರ್ಷದ ಕಡೆಯ ಲೇಖನದಲ್ಲಿ ವರ್ಷದಾದ್ಯಂತ ಈ ಅಂಕಣದಲ್ಲಿ ಪ್ರಸ್ತಾಪಿಸಿದ ವಿಷಯಗಳ ಬಗ್ಗೆ ಒಂದು ಹಿನ್ನೋಟ.

ತಂತ್ರಜ್ಞಾನ ಕ್ಷೇತ್ರವು ಬದಲಾವಣೆಯನ್ನೇ ತನ್ನಲ್ಲಿ ಒಳಗೂಡಿಸಿಕೊಂಡು ಮುನ್ನುಗ್ಗುತ್ತಿದೆ. ಅದಕ್ಕೆ ಸರಿಯಾಗಿ ನಮ್ಮ ದೈನಂದಿನ ವ್ಯವಹಾರಗಳೂ ತಂತ್ರಜ್ಞಾನ ಅವಲಂಬಿತವಾಗಿ ಟೆಕ್ನಾಲಜಿ ಇಲ್ಲದಿದ್ದರೆ ಏನೂ ಇಲ್ಲ ಎನ್ನುವ ಸ್ಥಿತಿಗೆ ತಲುಪಿದ್ದೇವೆ. ಉಸಿರಾಡಲು ಗಾಳಿ ಹೇಗೆ ಮುಖ್ಯವೋ ಹಾಗೆ ಕೆಲಸ ಮಾಡಲು ಅಂತರ್ಜಾಲದ ಸಂಪರ್ಕದ ಅವಶ್ಯಕತೆಯೂ ಅತ್ಯಂತ ಪ್ರಮುಖವಾಗಿದೆ. ಇದರ ಜೊತೆಯಲ್ಲಿ, ಸೈಬರ್ ಖದೀಮರೂ ಹೊಸ ರೀತಿಯ ವಂಚನಾ ಜಾಲಗಳನ್ನು ಸಿದ್ಧಗೊಳಿಸಿಕೊಂಡು ಕಾಯುತ್ತಿರುತ್ತಾರೆ. ನಮ್ಮೆಲ್ಲಾ ವ್ಯವಹಾರಗಳ ನಡುವೆ ಸ್ವಲ್ಪ ಸಮಯವನ್ನು ತಂತ್ರಜ್ಞಾನದ ಜಗತ್ತಿನಲ್ಲಾಗುತ್ತಿರುವ ವಿವಿಧ ಬೆಳವಣಿಗೆಗಳ ಬಗ್ಗೆ ತಿಳಿಯಲು ವಿನಿಯೋಗಿಸುವುದು ಸುರಕ್ಷತಾ ದೃಷ್ಟಿಯಿಂದ ಪ್ರಯೋಜನಕಾರಿಯಾಗಿದೆ.

cyber awareness

ಈ ವರ್ಷ ನಾವು ಅಂತರ್ಜಾಲದ ಅಲೆದಾಟದಲ್ಲಾಗುವ ಅಪಾಯಗಳು, ಅಪಘಾತಗಳು, ವಹಿಸಬೇಕಾದ ಮುನ್ನೆಚ್ಚರಿಕೆ, ತೊಂದರೆಗೊಳಗಾದರೆ ತೆಗೆದುಕೊಳ್ಳಬೇಕಾದ ಕ್ರಮಗಳು ಇತ್ಯಾದಿಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ತಿಳಿದೆವು. ಬಹಳಷ್ಟು ಓದುಗರು ಮಾಹಿತಿಯ ಪ್ರಯೋಜನವನ್ನು ಪಡೆದರು ಎನ್ನುವುದು ನನಗೆ ತೃಪ್ತಿ ನೀಡಿದೆ.

ನಿಮ್ಮ ಬ್ಯಾಂಕ್‌ ಖಾತೆಗೆ ಕನ್ನ ಹಾಕಿ ದೋಚುವವರ ಬಗ್ಗೆ, ಅಂತರ್ಜಾಲದಲ್ಲಿ ನಿಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳುವ ಬಗ್ಗೆ ಮೂರು ಭಾಗಗಳಲ್ಲಿ ವಿವರಿಸಿದ್ದೆ. ಸೈಬರ್ ಕ್ರಿಮಿನಲ್‌ಗಳು ಅಂತರಾಷ್ಟ್ರೀಯ ಬ್ಯಾಂಕ್‌ಗಳಿಂದ ಹೇಗೆ 100 ಕೋಟಿ ಡಾಲರ್ಸ್ ಕದ್ದರು ಎಂದು ವಿವರವಾಗಿ ಮೂರು ಲೇಖನಗಳ ಸರಣಿಯಲ್ಲಿ ತಿಳಿಸಿದ್ದೆ. ಭಾರತದಲ್ಲಿ ಹೆಚ್ಚಿದ ಮೊಬೈಲ್ ಬಳಕೆ ಮತ್ತು ಕಡಿಮೆಯಾದ ಇಂಟರ್ನೆಟ್‌ ಪ್ಯಾಕ್‌ಗಳ ದರ ಹೇಗೆ ಸಾಮಾಜಿಕ ಜಾಲತಾಣಗಳ ವ್ಯಸನವನ್ನು ಹಬ್ಬುತ್ತಿದೆ ಎಂದು ಒಂದು ವಾರ ಪ್ರಸ್ತಾಪಿಸಿದ್ದೆ. ಇದರೊಂದಿಗೆ ಫೇಸ್‌ಬುಕ್‌ನಲ್ಲಿ ಅಪರಿಚಿತರಿಂದ ಬರುವ ಫ್ರೆಂಡ್ ರಿಕ್ವೆಸ್ಟ್ ಎನ್ನುವ ಮೋಸದ ಜಾಲದ ಕುರಿತೂ ಬರೆದಿದ್ದೆ. ಸೈಬರ್ ಸ್ಟಾಕಿಂಗ್ ಮತ್ತು ಸೈಬರ್ ಬುಲ್ಲಿಯಿಂಗ್ ಬಗ್ಗೆ ಬರೆದ ಲೇಖನದಲ್ಲಿ ಸೈಬರ್ ಕ್ರಿಮಿನಲ್‌ಗಳು ಹೇಗೆ ವಿವಿಧ ತಂತ್ರಗಳನ್ನು ಬಳಸಿ ನಿಮ್ಮ ನಂಬಿಕೆ ಮತ್ತು ವಿಶ್ವಾಸವನ್ನು ಗೆಲ್ಲುತ್ತಾರೆ. ನಿಮ್ಮ ಸೆಲ್ಫಿ ಕಳುಹಿಸಲು ಕೇಳುತ್ತಾರೆ. ಅಥವಾ ನೀವು ಅಪ್‌ಲೋಡ್‌ ಮಾಡಿದ ಫೊಟೋ ಬಳಸಿ ನಿಮ್ಮ ಸ್ಥಳ ಇತ್ಯಾದಿಗಳನ್ನು ಕಂಡುಹಿಡಿಯುತ್ತಾರೆ ಎಂದು ತಿಳಿಸಿದ್ದೆ. ಅದರಿಂದಾಗುವ ಅಪಾಯಗಳ ಸಾಧ್ಯತೆಯನ್ನೂ ತಿಳಿಸಿದ್ದೆ. www.pic2map.com ಮತ್ತು www.deepfakesweb.com ಬಳಸಿ ಮಾಡಬಹುದಾದ ತೊಂದರೆಗಳನ್ನು ಹೇಳಿದ್ದೆ.

ಸೈಬರ್ ಲೋಕದಲ್ಲೊಂದು ಸುತ್ತು ಮತ್ತು ಅಂತರ್ಜಾಲದ ಅಂತರಂಗ: ಡೀಪ್ ವೆಬ್ ಮತ್ತು ಡಾರ್ಕ್ ವೆಬ್ ಲೇಖನಗಳಲ್ಲಿ ಈ ಮಾಯಾಲೋಕದ ಸಾಧಕ ಬಾಧಕಗಳನ್ನು ನಿಮ್ಮೆದುರು ತೆರೆದಿಟ್ಟಿದ್ದೆ. ಕ್ಯೂ ಆರ್ ಕೋಡ್ ಹಗರಣ ಮತ್ತು ವಿವಿಧ ಮೆಸೇಜು, ಕರೆಗಳನ್ನು ಬಳಸಿ ಮೋಸಗೊಳಿಸುವವರ ಬಗ್ಗೆ ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡು, ಅನುಕೂಲಗಳು ಹೆಚ್ಚಾದಂತೆ ಆತಂಕಕ್ಕೆ ನೂರು ದಾರಿಗಳು ಮುಂತಾದ ಲೇಖನಗಳಲ್ಲಿ ವಿವರಿಸುವ ಪ್ರಯತ್ನ ಮಾಡಿದ್ದೆ.

ಸೋಷಿಯಲ್‌ ಇಂಜಿನಿಯರಿಂಗ್, ವಾಟ್ಸಪ್ ಹಗರಣ, ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರೂ ಇರುತ್ತಾರೆ, ಕಾಯುವವರೇ ಕಳೆದುಕೊಂಡರೆ ಹುಡುಕುವವರಾರು ಮುಂತಾದ ಲೇಖನಗಳಲ್ಲಿ ನಮ್ಮ ನಡುವೆಯೇ ಸಂಭವಿಸಿದ ಬಹಳಷ್ಟು ಸೈಬರ್ ವಂಚನೆಯ ಪ್ರಕರಣಗಳನ್ನು ಪ್ರಸ್ತಾಪಿಸಿದ್ದೆ. ಜಾಗರೂಕರಾಗಿರಲು ಏನು ಮಾಡಬೇಕು ಎನ್ನುವುದನ್ನೂ ವಿವರಿಸಿದ್ದೆ. ಜೊತೆಗೆ ಎಇಪಿಎಸ್ – ಆಧಾರ್ ಮೂಲಕ ದೃಢೀಕರಿಸಲ್ಪಡುವ ಪಾವತಿ ವ್ಯವಸ್ಥೆ ಬಳಸಿ ಬಯೋಮೆಟ್ರಿಕ್ ಮೂಲಕ ಒಟಿಪಿ ಇಲ್ಲದೆ ನಿಮ್ಮ ಬ್ಯಾಂಕ್‌ ಖಾತೆಗಳಿಂದ ನಗದು ಹಣ ದೋಚುವ ವಂಚಕರ ಬಗ್ಗೆಯೂ ತಿಳಿಸಿದ್ದೆ. ಹೇಗೆ ನಿಮ್ಮ ಆಧಾರ್‌ ಅನ್ನು ಲಾಕ್ ಮಾಡಬೇಕು ಎಂಬ ಮಾಹಿತಿಯನ್ನೂ ವಿವರಿಸಿದ್ದೆ.

ಇಂಟರ್‌ನೆಟ್ ಬ್ಯಾಂಕಿಂಗ್ ವಂಚನೆಗಳು, ಹಬ್ಬದ ಸಮಯದಲ್ಲಿ ಆನ್ಲೈನ್‌ ಶಾಪಿಂಗ್‌ನಿಂದಾಗುವ ಅವಾಂತರಗಳು, ಸಾಮಾಜಿಕ ಜಾಲತಾಣಗಳ ಮುಖಾಂತರ ಮಾಡುವ ಬ್ಲಾಕ್‌ಮೇಲ್‌ಗಳು, ಡೀಪ್‌ಫೇಕ್‌ ತಂತ್ರಜ್ಞಾನದಿಂದ ಮಾಡುವ ಸೆಕ್ಸ್‌ಟಾರ್ಷನ್, ಇತ್ಯಾದಿಗಳ ಬಗ್ಗೆ ಆದಷ್ಟೂ ಕನ್ನಡ ಪದಗಳನ್ನು ಬಳಸಿ ಮಾಹಿತಿ ನೀಡಿದ ಖುಷಿ ವರ್ಷಾಂತ್ಯದಲ್ಲಿ ನನಗೆ ಆಗುತ್ತಿದೆ.

ನಮ್ಮ ದೈನಂದಿನ ಕಾರ್ಯಚಟುವಟಿಕೆಗೆ ಬೇಕಾದ ಮುಖ್ಯ ಸಾಧನ ಮೊಬೈಲ್. ಇದು ಕಳೆದು ಹೋದರೆ ಅಥವಾ ಕದ್ದು ಹೋದರೆ ಎನು ಮಾಡಬೇಕು ಎಂದು ‘ಮೊಬೈಲ್ ಕಳೆದು ಹೋದರೆ ಏನು ಮಾಡಬೇಕು’ ಎನ್ನುವ ಲೇಖನದಲ್ಲಿ ವಿವರಿಸಿದ್ದೇನೆ. ಇತ್ತೀಚೆಗೆ ನನ್ನ ಸಂಬಂಧೀಕರ ಮೊಬೈಲ್ ಕಳ್ಳತನವಾಗಿತ್ತು. ಅವರ ಪತ್ನಿ ನನಗೆ ಕರೆ ಮಾಡಿ ತಕ್ಷಣ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕೇಳಿದರು. ಅವರು ನಾನು ಲೇಖನದಲ್ಲಿ ವಿವರಿಸಿದ ಪ್ರಥಮ ಚಿಕಿತ್ಸೆ ಮಾಡಿದ್ದರು ಎಂದು ಕೇಳಿ ಸಂತಸವಾಯಿತು.

ಇದರ ಜೊತೆಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳ ಸದ್ದು ಮಾಡುತ್ತಿರುವ ಬ್ಲಾಕ್‌ಚೈನ್‌ ತಂತ್ರಜ್ಞಾನ, ಅದರಿಂದ ಹುಟ್ಟಿದ ಕ್ರಿಪ್ಟೋ ಕರೆನ್ಸಿ, ಅದರ ಗಣಿಗಾರಿಕೆಯಾದ ಕ್ರಿಪ್ಟೋ ಜಾಕಿಂಗ್ ಮುಂತಾದ ವಿಷಯಗಳನ್ನೂ ಈ ಅಂಕಣದಲ್ಲಿ ಬರೆದಿದ್ದೆ. ಮತ್ತು ಕೃತಕ ಬುದ್ಧಿಮತ್ತೆ (Artificial Intelligence)ಯ ಬಳಕೆಯಿಂದ ಆಗುತ್ತಿರುವ ‘ಡೀಪ್ ಫೇಕ್’ ಸಮಸ್ಯೆಯನ್ನೂ ವಿವರಿಸಿದ್ದೆ.

ಕಳೆದ ವಾರ, ಸೈಬರ್ ಜಗತ್ತಿನ ಪ್ರಥಮ ಚಿಕಿತ್ಸಕ ಸಿಸಿಐಒ ಬಗ್ಗೆ ವಿವರಿಸಿದ್ದೆ. ಜೊತೆಗೆ ನೀವು ಸೈಬರ್ ವಂಚನೆಗೊಳಗಾದರೆ ಮೊತ್ತಮೊದಲು 1930ಕ್ಕೆ ಕರೆ ಮಾಡಿ ಅಥವಾ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ https://cybercrime.gov.in/ ಗೆ ಹೋಗಿ ಅಲ್ಲಿನ ಸೂಚನೆಗಳನ್ನು ಅನುಸರಿಸಿ ನಿಮ್ಮ ದೂರು ದಾಖಲಿಸಿರಿ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಸೈಬರ್ ಲೋಕದ ಪ್ರಥಮ ಚಿಕಿತ್ಸಕ ಸಿಸಿಐಒ

ಹೊಸ ವರ್ಷದಲ್ಲಿ ನಾವೆಲ್ಲರೂ ಈ ತಂತ್ರಜ್ಞಾನದ ಸದ್ಬಳಕೆ ಮಾಡಲು ಮತ್ತು ಆದಷ್ಟೂ ಜಾಣರಾಗಿ, ಜಾಗರೂಕರಾಗಿರಲು ಬದ್ಧರಾಗಬೇಕು. ಯಾವುದೇ ಹೊಸ ತಂತ್ರಜ್ಞಾನ ಬಂದರೂ ಅದರ ಸಾಧಕ ಬಾಧಕಗಳನ್ನು ಅರಿತು ಎಚ್ಚರಿಕೆಯಿಂದ ಬಳಸಿದರೆ ಸೌಖ್ಯ. ಹೊಸ ಕ್ಯಾಲೆಂಡರ್ ವರ್ಷದಂದು ಎಲ್ಲರೂ ಸೈಬರ್ ಸುರಕ್ಷತೆಗೆ ಆದ್ಯತೆ ಕೊಟ್ಟು ಇದರ ಬಗ್ಗೆ ಅರಿವನ್ನು ಹೆಚ್ಚಿಸೋಣ. ಎಲ್ಲರಿಗೂ 2024ರ ಹೊಸ ವರ್ಷ ಆಯುರಾರೋಗ್ಯ, ಐಶ್ವರ್ಯ, ಅಭಿವೃದ್ಧಿಯನ್ನು ತರಲಿ. ಸರ್ವೇ ಜನಾ ಸುಖಿನೋಭವಂತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version