Site icon Vistara News

Israel Hamas War : ಯಾಹ್ಯಾ, ಮೊಹಮ್ಮದ್, ಮರ್ವಾನ್, ಇಸ್ಮಾಯಿಲ್, ಖಾಲೆದ್: ಹಮಾಸ್‌ನ ಅತ್ಯುಗ್ರ ಮೆದುಳುಗಳಿವು!

Hamas war in india

ಅಕ್ಟೋಬರ್ 7, 2023ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ (Israel Hamas War) ಉಗ್ರಗಾಮಿ ದಾಳಿಯ ಹಿಂದಿನ ಪ್ರಮುಖ ಯೋಜಕ ಯಾಹ್ಯಾ ಸಿನ್ವರ್. ಈ ದಾಳಿಯ ಸಂದರ್ಭದಲ್ಲಿ, ಅಪಾರ ಸಂಖ್ಯೆಯಲ್ಲಿ ಹಮಾಸ್ ಉಗ್ರಗಾಮಿ ಸಂಘಟನೆಯ ಭಯೋತ್ಪಾದಕರು ಗಾಜಾ ಪಟ್ಟಿಯಿಂದ ಗಡಿ ದಾಟಿ ಇಸ್ರೇಲ್ ಒಳಗೆ ಪ್ರವೇಶಿಸಿದ್ದರು. ಈ ದಾಳಿಯ ಸಂದರ್ಭದಲ್ಲಿ 1,200ಕ್ಕೂ ಹೆಚ್ಚು ಜನ ಹತ್ಯೆಗೊಂಡು, 240 ಜನರು ಒತ್ತೆಯಾಳುಗಳಾಗಿ ಒಯ್ಯಲ್ಪಟ್ಟರು.
ಹಮಾಸ್ ಉಗ್ರಗಾಮಿ ಸಂಘಟನೆಯ ಉನ್ನತ ನಾಯಕ ಯಾಹ್ಯಾ ಸಿನ್ವರ್ ಈಗ ಇಸ್ರೇಲಿ ಸೇನೆಯ ಅತಿದೊಡ್ಡ ಗುರಿಯಾಗಿದ್ದಾನೆ. ಇಸ್ರೇಲ್ ಆತನನ್ನು ಹತ್ಯೆಗೈದು, ಹಮಾಸ್‌ನಲ್ಲಿ ಇನ್ನಷ್ಟು ಹಿರಿಯ ಕಮಾಂಡರ್‌ಗಳಿದ್ದರೂ, ಸಂಪೂರ್ಣ ಹಮಾಸ್ ಸಂಘಟನೆಯನ್ನು ಇಲ್ಲವಾಗಿಸುವುದಾಗಿ ಘೋಷಿಸಿದೆ.

ಸಿನ್ವರ್‌ನನ್ನು ವರ್ಚಸ್ವಿ, ಅತ್ಯಂತ ಬುದ್ಧಿವಂತ ಎಂದು ಹೇಳಲಾಗಿದ್ದರೂ, ಅದಕ್ಕಿಂತ ಹೆಚ್ಚಾಗಿ ಆತ ತನ್ನ ಕ್ರೂರ, ನಿರ್ದಯಿ ನಾಯಕತ್ವದಿಂದ ಹೆಸರಾಗಿದ್ದಾನೆ. 1962ರಲ್ಲಿ ಜನಿಸಿದ ಸಿನ್ವರ್, ಗಾಜಾ ಪಟ್ಟಿಯ ದಕ್ಷಿಣ ಭಾಗದಲ್ಲಿರುವ ಖಾನ್ ಯೂನಿಸ್ ನಿರಾಶ್ರಿತ ಶಿಬಿರದಲ್ಲಿ ಬೆಳೆದಿದ್ದ. ಸಿನ್ವರ್ ಹಮಾಸ್ ಸಂಘಟನೆಯ ಆರಂಭಿಕ ಸದಸ್ಯರಲ್ಲಿ ಒಬ್ಬನಾಗಿದ್ದು, ಅದು 1987ರಲ್ಲಿ ಆರಂಭಗೊಂಡಾಗಲೇ ಅದರ ಸದಸ್ಯನಾಗಿದ್ದ.

ಕೆಲವು ವರ್ಷಗಳ ಬಳಿಕ, ಸಿನ್ವರ್ ಹಮಾಸ್‌ನ ಮಿಲಿಟರಿ ವಿಭಾಗವಾದ ಕಾಸ್ಸಮ್ ಬ್ರಿಗೇಡ್ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ. ಈ ಗುಂಪು ಇಸ್ರೇಲ್‌ ಒಳಗೆ ಆಕ್ರಮಣ ನಡೆಸುವ ಜವಾಬ್ದಾರಿ ಹೊಂದಿತ್ತು. ಇಸ್ರೇಲ್ ಜೊತೆ ಕೈ ಜೋಡಿಸುತ್ತಾರೆ ಎಂದು ಆತ ಅನುಮಾನಿಸಲ್ಪಟ್ಟ ಪ್ಯಾಲೆಸ್ತೀನಿಯನ್ನರನ್ನು ಸಿನ್ವರ್ ನಿರ್ದಯವಾಗಿ ಹತ್ಯೆಗೈದು, ‘ಬುಚರ್ ಆಫ್ ಖಾನ್ ಯೂನಿಸ್’ (ಖಾನ್ ಯೂನಿಸ್‌ನ ಕಟುಕ) ಎಂಬ ಹೆಸರನ್ನೂ ಸಂಪಾದಿಸಿದ್ದ.

ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ

1988ರಲ್ಲಿ ಸಿನ್ವರ್‌ ವಿರುದ್ಧ ಇಸ್ರೇಲಿ ನ್ಯಾಯಾಲಯದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸತತ ನಾಲ್ಕು ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆತನ ವಿರುದ್ಧ ಇಬ್ಬರು ಇಸ್ರೇಲಿ ಸೈನಿಕರು ಹಾಗೂ ಅಪಾರ ಸಂಖ್ಯೆಯ ಪ್ಯಾಲೆಸ್ತೀನಿಯನ್ನರನ್ನು ಹತ್ಯೆಗೈದ ಆರೋಪಗಳಿದ್ದವು. ಇಸ್ರೇಲಿನ ಕಾರಾಗೃಹದಲ್ಲಿ ಕಳೆದ ಅವದಿಯಲ್ಲಿ ಸಿನ್ವರ್ ಹೀಬ್ರೂ ಭಾಷೆ ಕಲಿತು, ಪ್ರಮುಖ ಇಸ್ರೇಲಿ ಮುಖಂಡರ ಬರಹಗಳನ್ನು ಓದಿ, ಅವರ ಆಲೋಚನೆಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ್ದ. ಅದರೊಡನೆ, ಆತನ ಮೆದುಳಿನ ಸನಿಹದಲ್ಲಿ ಉಂಟಾಗಿದ್ದ ಬಾವು ಒಂದನ್ನು ತೆಗೆದು, ಇಸ್ರೇಲಿ ವೈದ್ಯರು ಆತನ ಪ್ರಾಣ ರಕ್ಷಣೆ ಮಾಡಿದ್ದರು ಎನ್ನಲಾಗಿದೆ.

2011ರಲ್ಲಿ, 22 ವರ್ಷಗಳ ಕಾಲ ಸೆರೆಮನೆಯಲ್ಲಿ ಕಳೆದ ಬಳಿಕ ಸಿನ್ವರ್ ಬಿಡುಗಡೆಯಾಗಿದ್ದ. ಆತ ಮತ್ತು 1,000 ಇತರ ಪ್ಯಾಲೆಸ್ತೀನಿಯನ್ನರು ಇಸ್ರೇಲಿನ ಜೊತೆ ನಡೆಸಿದ ಕೈದಿಗಳ ಹಸ್ತಾಂತರ ಒಪ್ಪಂದದಡಿ ಬಿಡುಗಡೆ ಹೊಂದಿದ್ದರು. ಈ ಒಪ್ಪಂದದಲ್ಲಿ, ಹಮಾಸ್ ವಶದಲ್ಲಿದ್ದ ಇಸ್ರೇಲಿ ಸೈನಿಕ ಗಿಲಾದ್ ಶಲಿತ್ ಬಿಡುಗಡೆ ಹೊಂದಿ ಇಸ್ರೇಲ್‌ಗೆ ಮರಳಿದ್ದ. ಸಿನ್ವರ್ ಬಿಡುಗಡೆ ಹೊಂದಿದ ಬಳಿಕ ಗಾಜಾಗೆ ಮರಳಿ, ಹಮಾಸ್ ಸಂಘಟನೆಯ ಮಿಲಿಟರಿ ಮತ್ತು ರಾಜಕೀಯ ವಿಭಾಗಗಳ ನಡುವೆ ಸಂವಹನ ಏರ್ಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ. 2017ರಲ್ಲಿ ಆತ ಗಾಜಾ ಪಟ್ಟಿಯಲ್ಲಿ ಹಮಾಸ್ ನಾಯಕತ್ವ ವಹಿಸಿಕೊಂಡ.

ಇದನ್ನೂ ಓದಿ : Tejas Aircraft: ಸ್ವದೇಶಿ ʼತೇಜಸ್ʼ ವಿಮಾನದಲ್ಲಿ ಮೋದಿ ಹಾರಾಟ: ಪಾಕಿಸ್ತಾನ, ಚೀನಾಗೆ ನಡುಕ!

ಇತ್ತೀಚೆಗೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸಿನ್ವರ್ ಇಸ್ರೇಲ್ ಜೊತೆಗಿನ ಯುದ್ಧದಲ್ಲಿ ಉದ್ದೇಶಪೂರ್ವಕವಾಗಿ ಪ್ಯಾಲೆಸ್ತೀನಿಯನ್ ನಾಗರಿಕರ ಜೀವಕ್ಕೆ ಅಪಾಯ ತಂದೊಡ್ಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.

ಮೊಹಮ್ಮದ್ ದಾಯೆಫ್

ಮೊಹಮ್ಮದ್ ದಾಯೆಫ್ 2002ರಿಂದ ಹಮಾಸ್ ಸಂಘಟನೆಯ ಮಿಲಿಟರಿ ವಿಭಾಗವಾದ ಕಸ್ಸಾಮ್ ಬ್ರಿಗೇಡ್ಸ್ ಉಸ್ತುವಾರಿ ಹೊಂದಿದ್ದಾನೆ. ಇಸ್ರೇಲ್ ಆತನನ್ನು ಹಲವು ಆತ್ಮಹತ್ಯಾ ದಾಳಿಗಳು ಮತ್ತು ಅಪಾರ ಸಂಖ್ಯೆಯಲ್ಲಿ ಇಸ್ರೇಲಿ ಸೈನಿಕರು ಮತ್ತು ನಾಗರಿಕರ ಸಾವಿಗೆ ಕಾರಣನಾಗಿದ್ದಾನೆಂದು ಆರೋಪಿಸಿದೆ. ಆತನನ್ನು ‘ಕ್ಯಾಟ್ ವಿದ್ ನೈನ್ ಲೈವ್ಸ್’ (ಒಂಬತ್ತು ಜೀವಗಳಿರುವ ಬೆಕ್ಕು) ಎಂದೂ ಕರೆಯಲಾಗುತ್ತದೆ.

ದಾಯೆಫ್ ಗಾಜಾದ ನೆಲದಾಳದಲ್ಲಿರುವ ಹಮಾಸ್ ಸಂಘಟನೆಯ ಸುರಂಗ ಜಾಲದ ಹಿಂದಿರುವ ಮೆದುಳುಗಳಲ್ಲಿ ಒಬ್ಬ ಎನ್ನಲಾಗಿದೆ. ಅಕ್ಟೋಬರ್ 7ರಂದು ನಡೆದ ದಾಳಿಯ ಹಿಂದೆ ಆತನ ದೊಡ್ಡ ಪಾತ್ರವಿದೆ ಎನ್ನಲಾಗಿದೆ. ಆತನನ್ನೂ ಇಸ್ರೇಲ್ ಸೇನೆ ತನ್ನ ಪ್ರಸ್ತುತ ಕಾರ್ಯಾಚರಣೆಯಲ್ಲಿ ಹತ್ಯೆಗೈಯಬೇಕಾದವರ ಪಟ್ಟಿಯಲ್ಲಿ ಹೊಂದಿದೆ.
ದಾಯೆಫ್ 1995ರಿಂದಲೂ ಇಸ್ರೇಲ್ ಪಾಲಿಗೆ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದಾನೆ. ಆತನನ್ನು 2000ನೇ ಇಸವಿಯಲ್ಲಿ ಕೆಲ ಸಮಯ ಇಸ್ರೇಲ್‌ನಲ್ಲಿ ಬಂಧಿಸಲಾಗಿತ್ತಾದರೂ, 2000 – 2005ರ ನಡುವೆ ನಡೆದ ಪ್ಯಾಲೆಸ್ತೀನಿಯನ್ ಕ್ರಾಂತಿಯಾದ ಎರಡನೇ ಇಂತಿಫದಾ ಸಂದರ್ಭದಲ್ಲಿ ಆತ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದ. ಅದಾದ ಬಳಿಕ ಆತ ಎಲ್ಲಿದ್ದಾನೆ ಎಂಬ ಕುರಿತು ಸ್ಪಷ್ಟ ಮಾಹಿತಿಗಳು ಲಭಿಸಿಲ್ಲ.

ದಾಯೆಫ್ ಮೇಲೆ ಏಳು ಹತ್ಯಾ ಪ್ರಯತ್ನಗಳು ನಡೆದಿದ್ದು, ಅದರಲ್ಲಿ ಆತ ಗಂಭೀರವಾಗಿ ಗಾಯಗೊಂಡು, ಕುಟುಂಬಸ್ಥರನ್ನು ಕಳೆದುಕೊಂಡಿದ್ದರೂ, ಪವಾಡಸದೃಶವಾಗಿ ಬಚಾವಾಗಿದ್ದ. ಈ ದಾಳಿಯಲ್ಲಿ ಅತ ಒಂದು ಕಣ್ಣು, ಕಾಲು ಮತ್ತು ಒಂದು ಕೈಯ ಭಾಗವನ್ನು ಕಳೆದುಕೊಂಡಿದ್ದ ಎನ್ನಲಾಗಿದೆ. ಸುರಕ್ಷತೆಯ ಕಾರಣದಿಂದ ಆತ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ, ಪ್ರತಿ ರಾತ್ರಿಯೂ ಬೇರೆ ಬೇರೆ ಸ್ಥಳಗಳಲ್ಲಿ, ಬೇರೆ ಬೇರೆ ಕಟ್ಟಡಗಳಲ್ಲಿ ಉಳಿದುಕೊಳ್ಳುತ್ತಾನೆ ಎನ್ನಲಾಗಿದೆ.

ಮಾರ್ವಾನ್ ಇಸ್ಸಾ

ಕಸ್ಸಾಮ್ ಬ್ರಿಗೇಡ್ಸ್‌ನ ಡೆಪ್ಯುಟಿ ಕಮಾಂಡರ್ ಆಗಿರುವ ಮಾರ್ವಾನ್ ಇಸ್ಸಾ ಗಾಜಾ ಪಟ್ಟಿಯ ನಿರಾಶ್ರಿತ ಶಿಬಿರದಲ್ಲಿ ಜನಿಸಿದ್ದ. ಆತನ ಆರಂಭಿಕ ಜೀವನದ ಕುರಿತು ಅತ್ಯಂತ ಕಡಿಮೆ ಮಾಹಿತಿಗಳು ಲಭ್ಯವಿದ್ದು, ಆತ ಮುಸ್ಲಿಂ ಬ್ರದರ್‌ಹುಡ್ ಸಂಘಟನೆಯ ಪ್ಯಾಲೆಸ್ತೀನಿಯನ್ ವಿಭಾಗದ ಜೊತೆ ಸಂಪರ್ಕ ಹೊಂದಿದ್ದ ಎಂದು ನಂಬಲಾಗಿದೆ. ಈ ಮುಸ್ಲಿಂ ಬ್ರದರ್‌ಹುಡ್ ನಿಂದಲೇ ಹಮಾಸ್ ಸಂಘಟನೆಯೂ ಬೆಳೆದು ಬಂದಿದೆ.

ಮೊದಲನೆಯ ಇಂತಿಫದಾ ಅವಧಿಯಲ್ಲಿ (1987-1993), ಇಸ್ಸಾ ಐದು ವರ್ಷಗಳ ಕಾಲ ಇಸ್ರೇಲಿನಲ್ಲಿ ಬಂಧನಕ್ಕೊಳಗಾಗಿದ್ದ. 1997ರಲ್ಲಿ ಆತನನ್ನು ಪ್ಯಾಲೆಸ್ತೀನಿಯನ್ ಅಥಾರಿಟಿ ಬಂಧನಕ್ಕೊಳಪಡಿಸಿತ್ತು. ಆದರೆ 2000ನೇ ಇಸವಿಯಲ್ಲಿ ಎರಡನೇ ಇಂತಿಫದಾ ಆರಂಭಗೊಂಡಾಗ ಆತ ಬಿಡುಗಡೆ ಹೊಂದಿದ್ದ. ಪ್ರಸ್ತುತ ಆತ ದಾಯೆಫ್‌ನ ಬಲಗೈ ಬಂಟನಾಗಿ ಕಾರ್ಯಾಚರಿಸುತ್ತಿದ್ದಾನೆ.

ಇಸ್ರೇಲ್ ಆಯೋಜಿಸಿದ ಹಲವು ದಾಳಿಗಳಲ್ಲಿ ಇಸ್ಸಾ ಅದೃಷ್ಟವಶಾತ್ ಪಾರಾಗಿದ್ದು, ಈಗಲೂ ಇಸ್ರೇಲಿನ ವಾಂಟೆಡ್ ಉಗ್ರರ ಪಟ್ಟಿಯಲ್ಲಿ ಆತನೂ ಪ್ರಮುಖ ಗುರಿಯಾಗಿದ್ದಾನೆ.

ಇಸ್ಮಾಯಿಲ್ ಹಾನಿಯೆಹ್

ಇಬ್ಬರು ಪ್ರಮುಖ ಹಮಾಸ್ ಮುಖಂಡರಾದ ಇಸ್ಮಾಯಿಲ್ ಹಾನಿಯೆಹ್ ಮತ್ತು ಖಾಲೆದ್ ಮಶಾಲ್ ಗಾಜಾದಲ್ಲಿರುವ ಬದಲು ಕತಾರ್‌ನಲ್ಲಿ ನೆಲೆಸಿರುವುದರಿಂದ, ಸಂಘಟನೆಯನ್ನು ಸಂಪೂರ್ಣವಾಗಿ ಅಳಿಸಿಹಾಕುವುದು ಇಸ್ರೇಲ್‌ಗೆ ಸವಾಲಾಗಿದೆ. ಹಮಾಸ್‌ನ ಅಗ್ರ ನಾಯಕ ಎಂದು ಬಣ್ಣಿಸಲಾಗುವ ಇಸ್ಮಾಯಿಲ್ ಹಾನಿಯೆಹ್ ಗಾಜಾದ ನಿರಾಶ್ರಿತ ಶಿಬಿರದಲ್ಲಿ ಜನಿಸಿದ್ದ.

ಆರಂಭದಲ್ಲಿ ಆತ ವಿಶ್ವಸಂಸ್ಥೆಯ ಶಾಲೆಯಲ್ಲಿ ವ್ಯಾಸಂಗ ನಡೆಸಿ, ಬಳಿಕ ಇಸ್ಲಾಮಿಕ್ ಯುನಿವರ್ಸಿಟಿ ಆಫ್ ಗಾಜಾದಲ್ಲಿ ಉನ್ನತ ವ್ಯಾಸಂಗ ನಡೆಸಿದ. ಈ ಸಂದರ್ಭದಲ್ಲಿ ಆತ ವಿವಿಧ ಪ್ಯಾಲೆಸ್ತೀನಿಯನ್ ಸ್ವಾತಂತ್ರ್ಯ ಚಳುವಳಿಗಳಲ್ಲಿ ತೊಡಗಿಸಿಕೊಂಡಿದ್ದ. 1993ರಲ್ಲಿ ಆತ ತತ್ವಶಾಸ್ತ್ರ ವಿಭಾಗದ ಡೀನ್ ಆಗಿ ನೇಮಕಗೊಂಡ. ನಾಲ್ಕು ವರ್ಷಗಳ ಬಳಿಕ, ಆತ ಹಮಾಸ್ ಸ್ಥಾಪಕ ಅಹ್ಮದ್ ಯಾಸ್ಸಿನ್‌ನ ಆಪ್ತ ಕಾರ್ಯದರ್ಶಿ ಹುದ್ದೆ ವಹಿಸಿಕೊಂಡ.

2006ರ ಚುನಾವಣೆಗಳಲ್ಲಿ ಹಮಾಸ್ ಗೆಲುವು ಸಾಧಿಸಿದ ಬಳಿಕ, ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಹಾನಿಯೆಹ್‌ನನ್ನು ಪ್ರಧಾನ ಮಂತ್ರಿಯನ್ನಾಗಿ ಘೋಷಿಸಿದರು. ಆದರೆ, ಆತನ ಅವಧಿ ಅತ್ಯಂತ ಸಣ್ಣದಾಗಿದ್ದು, ಕೇವಲ ಒಂದು ವರ್ಷದ ಬಳಿಕ ಆತನನ್ನು ಹುದ್ದೆಯಿಂದ ಕೆಳಗಿಳಿಸಲಾಯಿತು. ಗಾಜಾ ಪಟ್ಟಿಯನ್ನು ಹಮಾಸ್ ಹಿಂಸಾತ್ಮಕವಾಗಿ ಸ್ವಾಧೀನಪಡಿಸಿಕೊಳ್ಳಲು ಆರಂಭಿಸಿದ್ದರಿಂದ ಈ ಬದಲಾವಣೆ ಉಂಟಾಯಿತು. ಹಮಾಸ್ ಅಬ್ಬಾಸ್ ಅವರ ಫತಾ ಪಕ್ಷವನ್ನು ಹೊರಹಾಕುವ ಉದ್ದೇಶ ಹೊಂದಿತ್ತು. ಉಚ್ಛಾಟನೆಯ ಹೊರತಾಗಿಯೂ, ಹಾನಿಯೆಹ್ ರಾಜೀನಾಮೆ ನೀಡಲು ನಿರಾಕರಿಸಿದ್ದರಿಂದ, ಹಮಾಸ್ ಗಾಜಾ ಪಟ್ಟಿಯ ಆಡಳಿತ ನಡೆಸಿತು, ಫತಾ ವೆಸ್ಟ್ ಬ್ಯಾಂಕ್ ಆಡಳಿತ ವಹಿಸಿಕೊಂಡಿತ್ತು.

ಖಾಲೆದ್ ಮಶಾಲ್

1956ರಲ್ಲಿ ವೆಸ್ಟ್ ಬ್ಯಾಂಕ್‌ನಲ್ಲಿ ಜನಿಸಿದ್ದ ಖಾಲೆದ್ ಮಶಾಲ್, ಕುವೈತ್ ಯುನಿವರ್ಸಿಟಿಯಲ್ಲಿ ಭೌತಶಾಸ್ತ್ರದಲ್ಲಿ ಪದವಿ ಹೊಂದಿದ್ದಾನೆ. ಬಳಿಕ ಆತ ಸಿರಿಯಾ ಮತ್ತು ಜೋರ್ಡಾನ್‌ಗಳಲ್ಲಿ ವಾಸ್ತವ್ಯ ಹೂಡಿ, ಹಮಾಸ್‌ನ ರಾಜಕೀಯ ವಿಭಾಗವನ್ನು ಸ್ಥಾಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ. ಕ್ರಮೇಣ, 1996ರಲ್ಲಿ ಆತ ಅದರ ಅಧ್ಯಕ್ಷ ಪದವಿಗೆ ಏರಿದ. ಮಶಾಲ್ ಬಹಿರಂಗವಾಗಿ ಇಸ್ರೇಲ್ ವಿರುದ್ಧ ಹಿಂಸಾಚಾರ ನಡೆಸಲು ಆಗ್ರಹಿಸಿದ್ದು, ಇಸ್ರೇಲಿ ಗುಪ್ತಚರ ಸಂಸ್ಥೆ ಮೊಸಾದ್ 1997ರಲ್ಲಿ ನಡೆಸಿದ ಹತ್ಯಾ ಯೋಜನೆಯಲ್ಲಿ ಪವಾಡಸದೃಶವಾಗಿ ಪಾರಾಗಿದ್ದ.

ಆತ 2012ರಲ್ಲಿ ಹಮಾಸ್ ಸಂಘಟನೆಯ 25ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಲು ಈಜಿಪ್ಟ್ ಮೂಲಕ ಗಾಜಾಗೆ ತೆರಳಿದ್ದು, ಅದು 45 ವರ್ಷಗಳ ಅವಧಿಯಲ್ಲಿ ಪ್ಯಾಲೆಸ್ತೀನಿಯನ್ ಪ್ರದೇಶಗಳಿಗೆ ಆತನ ಮೊದಲ ಭೇಟಿಯಾಗಿತ್ತು. 2017ರಲ್ಲಿ ಆತ ನಿವೃತ್ತಿ ಹೊಂದಿ, ಹಾನಿಯೆಹ್ ನನ್ನು ಹಮಾಸ್ ರಾಜಕೀಯ ವಿಭಾಗದ ಮುಖ್ಯಸ್ಥನನ್ನಾಗಿ ನೇಮಿಸಿದ. ಮಶಾಲ್ ಪ್ರಸ್ತುತ ಹಮಾಸ್ ಪೊಲಿಟಿಕಲ್ ಬ್ಯೂರೋ ಮುಖ್ಯಸ್ಥನಾಗಿದ್ದಾನೆ.
ಇವರೆಲ್ಲರ ಬೇಟೆಗೆ ಇಸ್ರೇಲ್‌ ಸೇನೆ ತವಕಿಸುತ್ತಿದೆ

Exit mobile version