Site icon Vistara News

Brand story | 1969ರಲ್ಲಿ 4 ಲಕ್ಷಕ್ಕೆ ಬಿಸ್ಲೇರಿ ಖರೀದಿಸಿದ್ದ ಥಮ್ಸ್‌ ಅಪ್ ಥಂಡರ್‌ ಮ್ಯಾನ್ ರಮೇಶ್‌ ಚೌಹಾಣ್!

ramesh chauhan bisleri

ಬಿಸ್ಲೇರಿ..! ಮುಂಬಯಿನಲ್ಲಿ ಪಾರ್ಲೆ ಸಮೂಹದ ಉದ್ಯಮಿ ರಮೇಶ್ ಜಯಂತಿಲಾಲ್‌ ಚೌಹಾಣ್‌ ಅವರು 1969ರಲ್ಲಿ ಬಿಸ್ಲೇರಿ ಕುಡಿಯುವ ನೀರಿನ ಬಾಟಲಿ ವ್ಯಾಪಾರವನ್ನು ( Bisleri International) ಆರಂಭಿಸಿದಾಗ, ಮುಂದೊಂದು ದಿನ ಸಾವಿರಾರು ಕೋಟಿ ರೂ.ಗಳ ಉದ್ದಿಮೆಯಾಗಲಿದೆ ಎಂದು ಯಾರೊಬ್ಬರೂ ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ! ಅಂದು ಚೌಹಾಣ್‌ ಅವರು ಇಟಲಿ ಮೂಲದ ಉದ್ಯಮಿಯಿಂದ 4 ಲಕ್ಷ ರೂ.ಗೆ ಬಿಸ್ಲೇರಿ ಬ್ರಾಂಡ್‌ ಅನ್ನು ಖರೀದಿಸಿದ್ದರು. ಆಗ ಅವರಿಗೆ ಕೇವಲ 27 ವರ್ಷ ವಯಸ್ಸು! ಕುಡಿಯುವ ನೀರಿನ ಮಾರಾಟ ಮತ್ತು ಅದರಿಂದ ಸಾಕಷ್ಟು ಲಾಭ ಮಾಡಬಹುದು ಎಂಬುದು ಕಲ್ಪನೆಗೂ ನಿಲುಕದ ಸಂಗತಿಯಾಗಿತ್ತು.

ಅಂದಹಾಗೆ ಪಾರ್ಲೆ ಸಮೂಹ ಅಂದರೆ ಗೊತ್ತಲ್ಲವೇ, ಇತಿಹಾಸ ಪ್ರಸಿದ್ಧ ಪಾರ್ಲೆ-ಜಿ ಬಿಸ್ಕತ್‌ ಉತ್ಪಾದಕ. ಹೌದು, ಪಾರ್ಲೆ ಪ್ರಾಡಕ್ಸ್ಟ್‌ನ ಮಾತೃಸಂಸ್ಥೆಯೇ ಪಾರ್ಲೆ ಸಮೂಹ. ಈ ಉದ್ದಿಮೆಯ ಮನೆತನದಲ್ಲಿ ಹುಟ್ಟಿ ಬೆಳೆದವರೇ ರಮೇಶ್‌ ಚೌಹಾಣ್.

ರಮೇಶ್ ಚೌಹಾಣ್‌ ಸುಶಿಕ್ಷಿತರು. ಉದ್ಯಮಿ ಜಯಂತಿಲಾಲ್‌ ಮತ್ತು ಜಯಾ ಚೌಹಾಣ್‌ ಅವರ ನಾಲ್ಕನೇ ಪುತ್ರ. 1940ರ ಜೂನ್‌ 17ರಂದು ಜನಿಸಿದರು. ಮಸಾಚ್ಯುಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಉನ್ನತ ಶಿಕ್ಷಣ ಪೂರೈಸಿ ಭಾರತಕ್ಕೆ ಮರಳಿದಾಗ ಅವರಿಗೆ 22 ವರ್ಷ ವಯಸ್ಸು. ಆಪ್ತರ ವಲಯದಲ್ಲಿ ಆರ್‌ಜೆಸಿ ಎಂದೇ ಹೆಸರಾದವರು.

ಹೇಳಿ ಕೇಳಿ, ಕುಡಿಯುವ ನೀರು ಎಂದರೆ ಉಚಿತವಾಗಿ ಕೊಡುವ ದೇಶವಿದು. ಇಲ್ಲಿ ಯಾರಾದರೂ ಅದಕ್ಕೆ ಬೆಲೆ ಕಟ್ಟುತ್ತಾರೆಯೇ? ಉಚಿತವಾಗಿ ಸಿಗುವ ನೀರನ್ನು ಯಾರಾದರೂ ದುಡ್ಡು ಕೊಟ್ಟು ಖರೀದಿಸುತ್ತಾರಾ? ಎಂಬ ಮಾತುಗಳು ಎಪ್ಪತ್ತರ ದಶಕದ ಆದಿಯಲ್ಲಿ ಕೇಳಿ ಬಂದಿತ್ತು. ಆದರೆ ಪಾರ್ಲೆ ಸಮೂಹದ ಯುವ ಉದ್ಯಮಿ ರಮೇಶ್ ಚೌಹಾಣ್‌ ಅವರ ತಲೆಯಲ್ಲಿದ್ದುದೇ ಬೇರೆಯೇ ಮುಂದಾಲೋಚನೆ. ಮಿನರಲ್‌ ವಾಟರ್‌ ಅಂದ್ರೆ ಬಿಸ್ಲೇರಿ ಎಂಬಷ್ಟರಮಟ್ಟಿಗೆ ತಮ್ಮ ಬಿಸಿನೆಸ್‌ ಸುಧಾರಿಸಲಿದೆ ಎಂಬ ವಿಶ್ವಾಸ ಅವರಲ್ಲಿ ಇತ್ತು. ‌ಹೀಗಾಗಿ ಇಟಲಿಯ ಉದ್ಯಮಿಯೊಬ್ಬರಿಂದ ರಮೇಶ್ ಚೌಹಾಣ್‌ ಖರೀದಿಸಿದ ಬಿಸ್ಲೇರಿ, ಬಳಿಕ ದೇಶವ್ಯಾಪಿ ಮನೆ ಮಾತಾಯಿತು. ಕ್ರಮೇಣ ಬಿಸ್ಲೇರಿ ಶುದ್ಧ ಕುಡಿಯುವ ನೀರಿನ ಬಾಟಲಿ ಬಳಕೆ ಪ್ರತಿಷ್ಠೆಯ ಸಂಗತಿಯಾಯಿತು. ಕಲುಷಿತ ನೀರಿನ ಸಮಸ್ಯೆ ಹೆಚ್ಚಾದಂತೆ ಬಿಸ್ಲೇರಿ ಅನಿವಾರ್ಯ ಎಂಬಂತಾಯಿತು.

ಇದೀಗ ಟಾಟಾ ಗ್ರೂಪ್‌‌, ಬಿಸ್ಲೇರಿ ಇಂಟರ್‌ನ್ಯಾಶನಲ್‌ ಕಂಪನಿಯನ್ನು (TaTa acquire Bisleri ) ಖರೀದಿಸುವ ಸನ್ನಾಹದಲ್ಲಿದ್ದು, ಮಾತುಕತೆ ಬಹುತೇಕ ಅಂತಿಮವಾಗಿದೆ. ಒಟ್ಟು 7,000 ಕೋಟಿ ರೂ.ಗೆ ಈ ಡೀಲ್‌ ನಡೆದಿದೆ. ಒಪ್ಪಂದದ ಭಾಗವಾಗಿ ಈಗಿನ ಆಡಳಿತ ಮಂಡಳಿಯು ಮುಂದಿನ ಎರಡು ವರ್ಷಗಳ ಕಾಲ ಮುಂದುವರಿಯಲಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಚೌಹಾಣ್‌ ಮತ್ತೆ ಸುದ್ದಿಯಲ್ಲಿದ್ದಾರೆ.

ಬಿಸ್ಲೇರಿ ಇಂಟರ್‌ನ್ಯಾಶನಲ್‌ ಭಾರತದ ಅತಿ ದೊಡ್ಡ ಬಾಟಲಿ ಕುಡಿಯುವ ನೀರಿನ ಉತ್ಪಾದಕ ಕಂಪನಿಯಾಗಿದ್ದು, 150 ಉತ್ಪಾದನಾ ಘಟಕಗಳನ್ನು ಹಾಗೂ 4,000 ವಿತರಕರು, 4,000 ಟ್ರಕ್‌ಗಳ ಜಾಲವನ್ನು ಹೊಂದಿದೆ.

ಟಾಟಾ ಸಮೂಹವು ಟಾಟಾ ಕನ್‌ಸ್ಯೂಮರ್‌ ಪ್ರಾಡಕ್ಟ್ಸ್‌ (TCPL) ಕಂಪನಿಯ ಅಡಿಯಲ್ಲಿ ತನ್ನ ಪ್ಯಾಕೇಜ್ಡ್‌ ಮಿನರಲ್‌ ವಾಟರ್‌ ಮಾರಾಟವನ್ನು ನಡೆಸುತ್ತಿದೆ. ಹಿಮಾಲಯನ್‌ ಮತ್ತು ಟಾಟಾ ಕಾಪ್ಪರ್‌ ಪ್ಲಸ್‌ ವಾಟರ್‌, ಟಾಟಾ ಗ್ಲೊಕೊ+ ಎಂಬ ಬ್ರಾಂಡ್‌ಗಳಲ್ಲಿ ಪ್ಯಾಕೇಜ್ಡ್‌ ಕುಡಿಯುವ ನೀರಿನ ಬಾಟಲಿಗಳ ಮಾರಾಟ ನಡೆಸುತ್ತಿದೆ.

ಟಾಟಾ ಸಮೂಹವು ಬಿಸ್ಲೇರಿಯನ್ನು ಖರೀದಿಸುವುದರಿಂದ ಅದಕ್ಕೆ ದಿನ ಬಳಕೆಯ ವಸ್ತುಗಳ ಮಾರಾಟ ವಲಯದಲ್ಲಿ ದೊಡ್ಡ ಮುನ್ನಡೆ ಲಭಿಸಿದೆ. ಭಾರತದಲ್ಲಿ ಬಾಟಲಿಗಳಲ್ಲಿನ ಕುಡಿಯುವ ನೀರಿನ ಮಾರಾಟ ವಹಿವಾಟು ವಾರ್ಷಿಕ 19,315 ಕೋಟಿ ರೂ.ಗಳಾಗಿವೆ. ಸದ್ಯಕ್ಕೆ ಮಾರುಕಟ್ಟೆ ಪ್ರಾಬಲ್ಯವನ್ನು ಬಿಸ್ಲೇರಿ ಹೊಂದಿದೆ. ಹಾಗಾದರೆ ಬಿಸ್ಲೇರಿ ಕುಡಿಯುವ ನೀರಿನ ಬಾಟಲಿ ಬ್ರಾಂಡ್‌ ಹೇಗೆ ಅಭಿವೃದ್ಧಿಯಾಯಿತು?

ಬಿಸ್ಲೇರಿ ಎಂಬ ಹೆಸರು ಹೇಗೆ ಬಂತು?

ಇಟಲಿ ಮೂಲದ ಉದ್ಯಮಿ, ಸಂಶೋಧಕ ಮತ್ತು ಕೆಮಿಸ್ಟ್‌ ಫಿಲೀಸ್ ಬಿಸ್ಲೇರಿ ಅವರು, 1965ರಲ್ಲಿ ಬಿಸ್ಲೇರಿ ಬ್ರಾಂಡ್‌ ಅನ್ನು ಸೃಷ್ಟಿಸಿದರು. ಭಾರತದಲ್ಲಿ ಬಾಟಲಿಯಲ್ಲಿ ಕುಡಿಯುವ ನೀರನ್ನು ಮಾರಾಟ ಮಾಡಬೇಕು ಎಂದು ಅವರು ಬಯಸಿದ್ದರು. ಅದೇ ವರ್ಷ ಮುಂಬಯಿನಲ್ಲಿ ಗ್ಲಾಸ್‌ಗಳ ಬಾಟಲಿಗಳಲ್ಲಿ ಬಿಸ್ಲೇರಿ ಮಾರಾಟ ಆರಂಭವಾಯಿತು. ಆದರೆ ಕಾರಣಾಂತರಗಳಿಂದ ಅದನ್ನು ಮುಂದುವರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಆಗ ಯುವ ಉದ್ಯಮಿ ರಮೇಶ್ ಚೌಹಾಣ್‌ ಒಂದು ದಿಟ್ಟ ನಿರ್ಧಾರ ಕೈಗೊಂಡರು. ಅದು ದೂರದೃಷ್ಟಿಯ ಪ್ರಭಾವ ಬೀರುವಂಥದ್ದಾಗಿತ್ತು. ಭಾರತೀಯ ಮಾರುಕಟ್ಟೆಗೆ ಬಿಸ್ಲೇರಿಯನ್ನು ಪರಿಚಯಿಸಿಕೊಡಲು ಮುಂದಾದರು. ಫಿಲೀಸ್‌ ಬಿಸ್ಲೇರಿಯವರಿಂದ ಬಿಸ್ಲೇರಿ ಬ್ರಾಂಡ್‌ ಅನ್ನು ಖರೀದಿಸಿದರು. ಆ ಹೆಸರು ಬಂತು. ಕಳೆದ 53 ವರ್ಷಗಳಲ್ಲಿ ಬಿಸ್ಲೇರಿ ಮನೆ ಮಾತಾಗಿದೆ. ಚೌಹಾಣ್‌ ಅವರು ವೇದಿಕಾ ಎಂಬ ಪ್ರೀಮಿಯಂ ನೇಚ್ಯುರಲ್‌ ಮಿನರಲ್‌ ವಾಟರ್‌ ಬ್ರಾಂಡ್‌ ಅನ್ನೂ ಪರಿಚಯಿಸಿದ್ದರು. ವೇದಿಕ್‌ನ ಒಂದು ಬಾಟಲಿಗೆ 47-49 ರೂ. ಇದೆ. ಒಂದು ಲೀಟರ್‌ ಬಿಸ್ಲೇರಿ ದರ 20 ರೂ.ಗಳಾಗಿದೆ.

ಥಮ್ಸ್‌ ಅಪ್..ಟೇಸ್ಟ್‌ ದ ಥಂಡರ್‌ ಸೃಷ್ಟಿಕರ್ತ ಇವರೇ!

ಬಿಸ್ಲೇರಿ ಒಂದೇ ಅಲ್ಲ, ಇನ್ನೂ ಹಲವು ಪ್ರಸಿದ್ಧ ಬ್ರಾಂಡ್‌ಗಳ ಶಿಲ್ಪಿಯೂ ಅವರೇ ಆಗಿದ್ದಾರೆ. ಥಮ್ಸ್‌ ಅಪ್‌, ಗೋಲ್ಡ್‌ ಸ್ಪಾಟ್‌, ಸಿಟ್ರಾ, ಮಾಜಾ, ಲಿಮ್ಕಾ ಎಂಬ ಪ್ರಸಿದ್ಧ ಐದು ತಂಪು ಪಾನೀಯ ಬ್ರಾಂಡ್‌ಗಳ ಸೃಷ್ಟಿಕರ್ತರೂ ಇವರೇ! ನೀವು ಥಮ್ಸ್‌ ಅಪ್‌ನ ಟೇಸ್ಟ್‌ ದ ಥಂಡರ್‌ ಎಂಬ ಜನಪ್ರಿಯ ಜಾಹೀರಾತನ್ನು ನೋಡಿರುತ್ತೀರಿ. ಈ ಐದೂ ಬ್ರಾಂಡ್‌ಗಳನ್ನು 1993ರಲ್ಲಿ ಜಾಗತಿಕ ತಂಪುಪಾನೀಯ ದಿಗ್ಗಜ ಕೋಕಾ-ಕೋಲಾಗೆ ಚೌಹಾಣ್‌ ಮಾರಾಟ ಮಾಡಿದ್ದರು. ಹಾಗೂ ಕಾರ್ಬೊನೇಟೆಡ್‌ ಪಾನೀಯಗಳ ಮಾರಾಟದಿಂದ ಹಿಂದೆ ಸರಿದಿದ್ದರು. ನೆನಪಿಡಿ, ಕೋಕಾ ಕೋಲಾ ಕಂಪನಿಯು ಭಾರತವನ್ನು 1993ರಲ್ಲಿ ಪ್ರವೇಶಿಸುವುದಕ್ಕೆ ಮೊದಲು ಸ್ವದೇಶಿ ಬ್ರಾಂಡ್‌ ಥಮ್ಸ್‌ ಅಪ್‌, ತಂಪು ಪಾನೀಯ ಮಾರುಕಟ್ಟೆಯ 80 ಪರ್ಸೆಂಟ್‌ ಪಾಲನ್ನು ಹೊಂದಿತ್ತು! ತೊಂಭತ್ತರ ದಶಕದಲ್ಲಿ ಭಾರತ ಜಾಗತೀಕರಣಕ್ಕೆ ತೆರೆದುಕೊಂಡಿತು. ಆಗ ಭಾರತದ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿದ್ದ ಬಹು ರಾಷ್ಟ್ರೀಯ ಕಂಪನಿಗಳಿಗೆ ರತ್ನಗಂಬಳಿ ಹಾಸಿದಂತಾಯಿತು. ಅನಿವಾರ್ಯವಾಗಿ ರಮೇಶ್‌ ಚೌಹಾಣ್‌, ಬಿಸ್ಲೇರಿ ಹೊರತುಪಡಿಸಿ ಉಳಿದ ಪಾನೀಯಗಳ ಬ್ರಾಂಡ್‌ಗಳನ್ನು ಕೋಕಾ ಕೋಲಾಗೆ ಮಾರುವಂತಾಯಿತು. ಈ ಪೈಕಿ ಥಮ್ಸ್‌ ಅಪ್‌ ಶತಕೋಟಿ ಡಾಲರ್‌ ಬ್ರಾಂಡ್‌ ಆಗಿದೆ. ಮಾಜಾ ಕೂಡ 2024ರಲ್ಲಿ ಬಿಲಿಯನ್‌ ಡಾಲರ್‌ ಬ್ರಾಂಡ್‌ ಆಗುವ ಸಾಧ್ಯತೆ ಇದೆ.

ಈಗ 82ರ ಇಳಿ ವಯಸ್ಸಿನ ರಮೇಶ್‌ ಚೌಹಾಣ್‌ ಈ ಹಿಂದೆ ಎಂಥ ಸಾಹಸಿಯಾಗಿದ್ದರು ಎಂಬುದನ್ನು ನೋಡಿ! ಅವರ ಉದ್ಯಮಶೀಲತೆಗೆ ವಯಸ್ಸಿನ ಹಂಗೇ ಇರಲಿಲ್ಲ. ಥಮ್ಸ್‌ ಅಪ್‌ ಸೇರಿದಂತೆ ಐದು ಪಾನೀಯಗಳನ್ನು ಕೋಲಾಗೆ ಮಾರಾಟ ಮಾಡಿದ ಬಳಿಕ 2008ರಲ್ಲಿ ಅದರ ಜತೆಗಿನ ಒಪ್ಪಂದದ ಪ್ರಕಾರ ಮತ್ತೆ ಅದೇ ವಲಯದಲ್ಲಿ ಸ್ಪರ್ಧಿಸಲು ಅವಕಾಶ ಸೃಷ್ಟಿಯಾಗುತ್ತದೆ. ಹೀಗಾಗಿ ಬಿಸ್ಲೇರಿ ಪಾಪ್‌ ಎಂಬ ಕಾರ್ಬೊನೇಟೆಡ್‌ ಪಾನೀಯದ ಮಾರಾಟ ಶುರು ಮಾಡುತ್ತಾರೆ. ಬಿಸ್ಲೇರಿ ಲಿಮೊನಟಾ, ಫೊಂಜೊ, ಪಿನಾ ಕೊಲಾಡ, ಸ್ಪೈಸಿ ಎಂಬ ನಾಲ್ಕು ಸ್ವಾದಗಳಲ್ಲಿ ಬಿಡುಗಡೆಗೊಳಿಸುತ್ತಾರೆ. ಅದು ಮಾರುಕಟ್ಟೆಯಲ್ಲಿ ಯಶಸ್ವಿಯಾಗದಿದ್ದರೂ, ಅವರ ಪ್ರಯೋಗಶೀಲತೆ ಗಮನಾರ್ಹ.

ಕಾರ್ಪೊರೇಟ್‌ ವಲಯದ ಕಂಪನಿಗಳ ಒಳಸುಳಿಗಳನ್ನು ಚೌಹಾಣ್‌ ಹೀಗೆನ್ನುತ್ತಾರೆ- ನಾವು ಥಮ್ಸ್‌ ಅಪ್‌ ಅನ್ನು ಕೋಕಾ ಕೋಲಾಗೆ ಮಾರಾಟ ಮಾಡಿದಾಗ, ಅದನ್ನು ಬೆಳೆಸುವ ಉದ್ದೇಶ ಅವರಿಗೆ ಇರಲಿಲ್ಲ, ಬದಲಿಗೆ ಅದನ್ನು ಮುಗಿಸುವ ಇರಾದೆ ಇತ್ತು. ಆದರೆ ಅವರಿಗೆ ಅದು ಸಾಧ್ಯವಾಗಲಿಲ್ಲ! ನೀವು ಯಾವಾಗಲೂ ಒಳ್ಳೆಯ ಕೆಲಸವನ್ನು ಮಾಡಿ, ಬೇರೆಯವರಿಗಿಂತ ಚೆನ್ನಾಗಿ ಮಾಡಿ, ಆಗ ತನ್ನಿಂತಾನೆ ಯಶಸ್ಸು ನಿಮ್ಮದಾಗುತ್ತದೆ ಎಂಬುದು ಚೌಹಾಣ್‌ ಅವರ ಸೂತ್ರ.

ಬಿಸ್ಲೇರಿ ಕಂಪನಿಯನ್ನು ಮಾರಾಟ ಮಾಡುತ್ತಿರುವುದೇಕೆ?

ಹೀಗೆ ಭಾರತದಲ್ಲಿ ದಂತಕಥೆಯಾಗಿರುವ ಬಿಸ್ಲೇರಿಯನ್ನು ಹಾಗೂ ಕುಡಿಯುವ ನೀರಿನ ಬಾಟಲಿ ಉದ್ದಿಮೆಯನ್ನು ಬೆಳೆಸಿದವರು ರಮೇಶ್‌ ಚೌಹಾಣ್.‌ ಈ ಬ್ರಾಂಡ್‌ ಅನ್ನು ಮಾರಾಟ ಮಾಡುತ್ತಿರುವುದಾಗಿ ಅವರು ದೃಢಪಡಿಸಿದ್ದಾರೆ. ಟಾಟಾ ಕನ್‌ಸ್ಯೂಮರ್‌ ಪ್ರಾಡಕ್ಸ್ಟ್‌ ಈಗಾಗಲೇ 6,000-7,000 ಕೋಟಿ ರೂ.ಗೆ ಖರೀದಿಸಿಯಾಗಿದೆ ಎಂಬ ವರದಿಗಳನ್ನು ನಿರಾಕರಿಸಿದ್ದರೂ, ಟಾಟಾ ಸಮೂಹಕ್ಕೆ ಮಾರಾಟ ಮಾಡುವ ಉದ್ದೇಶ ಇದ್ದಂತಿದೆ. ಹೀಗಾಗಿ ಟಾಟಾ ಜತೆ ಚರ್ಚೆ ನಡೆಯುತ್ತಿದೆ ಎಂದೂ ತಿಳಿಸಿದ್ದಾರೆ. ಇಳಿ ವಯಸ್ಸಿನ ರಮೇಶ್‌ ಚೌಹಾಣ್‌ ಅವರ ಪುತ್ರಿ ಜಯಂತಿ ಅವರಿಗೆ ಈ ಬಿಸಿನೆಸ್‌ ಮುಂದುವರಿಸುವ ಆಸಕ್ತಿ ಇಲ್ಲ. ಹೀಗಾಗಿ ಬ್ರಾಂಡ್‌ ಅನ್ನು ಸೂಕ್ತ ಖರೀದಿದಾರರಿಗೆ ಮಾರಾಟ ಮಾಡಲು ರಮೇಶ್‌ ಚೌಹಾಣ್‌ ಸಿದ್ಧರಾಗಿದ್ದಾರೆ.

ಇವೆಲ್ಲದರ ನಡುವೆ ಚೌಹಾಣ್‌ ಮತ್ತೊಂದು ಮಹತ್ವದ ವಿಷಯ ತಿಳಿಸಿದ್ದಾರೆ. ಬಿಸ್ಲೇರಿ ಮಾರಾಟವಾದ ಬಳಿಕ ಅದರಲ್ಲಿ ಮೈನಾರಿಟಿ ಷೇರುಗಳನ್ನೂ ಇಟ್ಟುಕೊಳ್ಳುವುದಿಲ್ಲ ಎಂದಿರುವ ಅವರು, ಪರಿಸರ ಮತ್ತು ಜಲ ಸಂರಕ್ಷಣೆಗೆ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ.

2022-23ರಲ್ಲಿ ಬಿಸ್ಲೇರಿಗೆ 220 ಕೋಟಿ ರೂ. ಲಾಭ:

ಬಿಸ್ಲೇರಿ 2022-23ರಲ್ಲಿ 2,500 ಕೋಟಿ ರೂ. ವಹಿವಾಟು ಮತ್ತು 220 ಕೋಟಿ ರೂ. ನಿವ್ವಳ ಲಾಭದ ನಿರೀಕ್ಷೆಯಲ್ಲಿದೆ. 2021ರ ಮಾರ್ಚ್‌ಗೆ ಮುಕ್ತಾಯವಾದ ಸಾಲಿನಲ್ಲಿ ಕಂಪನಿ 1.181 ಕೋಟಿ ರೂ. ವಹಿವಾಟು ಮತ್ತು 95 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಇದಕ್ಕೂ ಹಿಂದಿನ ವರ್ಷ 1,472 ಕೋಟಿ ರೂ. ವಹಿವಾಟು ಮತ್ತು 100 ಕೋಟಿ ರೂ. ಲಾಭ ಪಡೆದಿತ್ತು.

ಸ್ವತಃ ರಮೇಶ್‌ ಚೌಹಾಣ್‌ ಅವರು ಬಿಸ್ಲೇರಿ ಯಶಸ್ಸು ಹೇಗಾಯಿತು ಎಂದು ಒಂದೆಡೆ ಹೇಳಿದ್ದಾರೆ- ಆರಂಭದಲ್ಲಿ ವಿದೇಶಿಯರು ಹಾಗೂ ಅನಿವಾಸಿ ಭಾರತೀಯರು ಹೆಚ್ಚಾಗಿ ಬಿಸ್ಲೇರಿ ನೀರನ್ನು ಕುಡಿಯುತ್ತಿದ್ದರು. ಆದರೆ 1995ರಲ್ಲಿ ನಾವು 500 ಎಂಎಲ್‌ ಪ್ರಮಾಣದ ಬಾಟಲಿಯನ್ನು ಕೇವಲ ಐದು ರೂಪಾಯಿಗೆ ಮಾರಾಟ ಮಾಡಲು ಆರಂಭಿಸಿದ ಬಳಿಕ ಜನಪ್ರಿಯವಾಯಿತು. ಕಂಪನಿಯ ಬೆಳವಣಿಗೆ 400 ಪರ್ಸೆಂಟ್‌ ವೃದ್ಧಿಸಿತು.

ಭಾರತದಲ್ಲಿ ಕುಡಿಯುವ ನೀರಿನ ಬಾಟಲಿ ಮಾರಾಟದ ಶಕೆಯನ್ನು ಆರಂಭಿಸಿದ ರಮೇಶ್‌ ಚೌಹಾಣ್‌ ಅವರ ಆತ್ಮಕಥೆಯನ್ನು ಪತ್ರಕರ್ತೆ ಪ್ಯಾಟ್ರಿಕಾ ಜೆ ಸೇಥಿ ಬರೆದಿದ್ದಾರೆ. ಅದರ ಹೆಸರು -ಥಂಡರ್‌ ಅನ್‌ಬಾಟಲ್ಡ್‌ (Thunder Unbottled- From Thums Up to Bisleri)

ರಮೇಶ್‌ ಚೌಹಾಣ್‌ ಅವರ ಸಿದ್ಧ ಸೂತ್ರಗಳು ಯುವ ಉದ್ಯಮಿಗಳಿಗೆ ಪ್ರೇರಣೆ ನೀಡಬಲ್ಲುದು. ಜಪಾನ್‌ನ ಕೈಜೆನ್‌ ಸಿದ್ಧಾಂತ ಅವರಿಗೆ ಪ್ರಿಯ. ಅದು ಸುಧಾರಣೆಗೆ ನಿರಂತರ ಕಲಿಕೆಯನ್ನು ಬೋಧಿಸುವಂಥದ್ದು. ಮಾರುಕಟ್ಟೆಯಲ್ಲಿ ಸ್ಪರ್ಧಿಗಳಿಗಿಂತ ಮುಂದೆ ಸಾಗಬೇಕಿದ್ದರೆ ಅವರನ್ನು ಅನುಕರಿಸಬಾರದು. ಬದಲಿಗೆ ನೀವು ಮಾಡುತ್ತಿರುವುದರಲ್ಲಿ ಯಾವುದು ಸರಿ-ತಪ್ಪು ಎಂದು ವಿಶ್ಲೇಷಿಸಿ. ಅದುವೇ ಬೆಳೆಯುವ ಸರಿಯಾದ ಹಾದಿ. ಕಠಿಣ ಪರಿಶ್ರಮಕ್ಕೆ ಸರಿಸಾಟಿ ಬೇರೆ ಯಾವುದೂ ಇಲ್ಲ.

ಶ್ರೇಷ್ಠವಾದ ವಿತರಣೆ ಜಾಲವೇ ಬಿಸ್ಲೇರಿಯ ಯಶಸ್ಸಿನ ಹಿಂದಿನ ಮತ್ತೊಂದು ರಹಸ್ಯ. ನವೀನ ಪ್ಯಾಕೇಜಿಂಗ್‌ ಅಲ್ಲಿದೆ. ಕಂಪನಿಗೆ ಲಾಭ ಬರಬೇಕಿದ್ದರೆ ಅದರ ಹೂಡಿಕೆಗಿಂತಲೂ, ಹೂಡಿಕೆಯ ನಿರ್ವಹಣೆ ಮುಖ್ಯ ಎನ್ನುತ್ತಾರೆ ರಮೇಶ್‌ ಚೌಹಾಣ್!

Exit mobile version