ರಾಬರ್ಟ್ ಫ್ರಾಸ್ಟ್ ಕವಿಯ The Road Not Taken ಎನ್ನುವ ಪ್ರಸಿದ್ಧ ಕವಿತೆಯೊಂದಿದೆ. ಕಾಡಿನ ಹಾದಿಯಲ್ಲಿ ನಡೆಯುವಾಗ ಕವಿಗೆ ಎರಡು ಪಥಗಳು ಎದುರಾದವು. ಒಂದರಲ್ಲಿ ಈ ಮುನ್ನ ಸಾಕಷ್ಟು ಜನರು ನಡೆದಂತಿತ್ತು. ಮತ್ತೊಂದರಲ್ಲಿ ಹೆಚ್ಚು ಮಂದಿ ಕ್ರಮಿಸಿದಂತಿರಲಿಲ್ಲ. ಈ ಎರಡು ದಾರಿಗಳ ಪಯಣದ ನಡುವಿನ ಜಿಜ್ಞಾಸೆಯ ಈ ಕವಿತೆ, ಜೀವನದಲ್ಲಿ ಎರಡು ಆಯ್ಕೆಗಳ ನಡುವೆ ಒಂದನ್ನು ಆಯ್ದುಕೊಂಡದ್ದರ ಅನ್ಯಾರ್ಥದ ಸಂಕೇತವಾಗಿ ಬಳಕೆಯಾಗುತ್ತದೆ. ಆಯ್ಕೆಯ ನಿರ್ಧಾರದಲ್ಲಿ ಅನೇಕ ಸಂಗತಿಗಳು ಪ್ರಭಾವಿಸುತ್ತವೆ. ಭೂತಕಾಲದ ನೆನೆಗುದಿಗಳು, ಆ ಹಾದಿ ಕ್ರಮಿಸಿದ ಮತ್ತೊಬ್ಬರ ಅನುಭವಗಳು, ಭವಿಷ್ಯದ ಆಲೋಚನೆಗಳು, ಆಯಾ ಸಂದರ್ಭದ ಒತ್ತಡಗಳು ಹೀಗೆ ಹಲವಾರು ಪರಿಮಾಣಗಳನ್ನು ಅಳೆದು, ತೂಗಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಆಯ್ಕೆಯ ನಂತರದ ಪರಿಣಾಮಗಳು ನಮ್ಮದೇ ನಿರ್ಧಾರದ ಫಲಶ್ರುತಿಗಳು. ಈ ಇಡೀ ಆಯ್ಕೆ ಪ್ರಕ್ರಿಯೆ ನಡೆಯುವುದು ನಮ್ಮ ಮೆದುಳಿನಲ್ಲಿ. ಇದರಲ್ಲಿ ಪ್ರಮುಖ ಪಾತ್ರ ವಹಿಸುವುದು ಆಯ್ಕೆ ಮಾಡುವಲ್ಲಿ ನಮಗಿರುವ ಮುಕ್ತ ಸ್ವಾತಂತ್ರ್ಯ. ಯಾರೂ ನಮ್ಮ ಕತ್ತು ಹಿಡಿದು “ಹೀಗೆಯೇ ನಡೆಯಬೇಕು” ಎಂದು ಒತ್ತಾಯ ಮಾಡುವುದಿಲ್ಲ. ಆಲೋಚನೆ ನಮ್ಮದು; ನಿರ್ಧಾರ ನಮ್ಮದು; ನಿರ್ಧಾರದ ನಂತರದ ಪರಿಣಾಮಗಳೂ ನಮ್ಮವು.
ರೊಬೊಟ್ ಯಂತ್ರಗಳ ಬಗ್ಗೆ ತಿಳಿದಿರುತ್ತೇವೆ. 1980ರ ದಶಕದಲ್ಲಿ ಬೆಂಗಳೂರಿನಲ್ಲಿ ದೂರದರ್ಶನ ಪ್ರಸಾರ ಆರಂಭವಾದ ಹೊಸದರಲ್ಲಿ ಜಪಾನಿನ “ಜಾನಿ ಸೊಕ್ಕೊ ಅಂಡ್ ಹಿಸ್ ಫ್ಲೈಯಿಂಗ್ ರೊಬೊಟ್” ಎನ್ನುವ ಧಾರಾವಾಹಿ ಮಕ್ಕಳನ್ನು ಬಹಳ ರಂಜಿಸುತ್ತಿತ್ತು. ಮಾನವಾಕೃತಿಯ ಬೃಹತ್ ರೊಬೊಟ್ ಮತ್ತು ಅದನ್ನು ನಿಯಂತ್ರಿಸುವ ಬಾಲಕನೊಬ್ಬನ ಕತೆ. ರೊಬೊಟ್ ಬಗ್ಗೆ ಚಿತ್ರವಿಚಿತ್ರ ಕಲ್ಪನೆಗಳನ್ನು ಮೂಡಿಸಿದ ಕಾಲವದು. ಆನಂತರ ಮಾನವನಂತೆಯೇ ಕಾಣುವ ರೊಬೊಟ್ ಯಂತ್ರಗಳ ಕತೆಯನ್ನು ಹೊಂದಿದ್ದ ಟರ್ಮಿನೇಟರ್ ಚಲನಚಿತ್ರ ಸರಣಿ ಬಂದಿತು. ಭವಿಷ್ಯದಲ್ಲಿ ನಮ್ಮ ಜೀವನ ಮತ್ತು ಯಂತ್ರಗಳ ಸಾಂಗತ್ಯ ಯಾವ ರೀತಿಯಲ್ಲಿ ಹಾಸುಹೊಕ್ಕಾಗಬಹುದು ಎಂದು ಜನರಿಗೆ ಅಂದಾಜು ನೀಡುವ ರೀತಿಯಲ್ಲಿ ಆ ಸರಣಿ ಬಹಳ ಜನಪ್ರಿಯವಾಯಿತು. ಅದ್ಭುತ-ರಮ್ಯ ಪರಿಕಲ್ಪನೆಗಳನ್ನು ಲೇಖಕರು ಇಂದಿಗೂ ಯಂತ್ರ-ಮಾನವರ ಸುತ್ತಲೂ ಹೆಣೆಯತ್ತಲೇ ಬಂದಿದ್ದಾರೆ. ಇದು ಸಾಧ್ಯವಾಗಬಲ್ಲ ವಾಸ್ತವ ಹೇಗಿದೆ? ಸಾಧ್ಯವಾದರೂ, ಯಾವುದೇ ಎರಡು ಆಯ್ಕೆಗಳ ನಡುವೆ ಮಾಡಬೇಕಾದ ನಿರ್ಧಾರವನ್ನು ಮಿದುಳಿಲ್ಲದ ಯಂತ್ರಗಳು ಹೇಗೆ ಮಾಡಬಲ್ಲವು?
2002ನೆಯ ಇಸವಿಯಲ್ಲಿ ಒಂದು ವೈಜ್ಞಾನಿಕ ಸಂಚಲನ ನಡೆಯಿತು. ಅಮೆರಿಕೆಯ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಸಂಶೋಧಕ ಡಾ. ಸಂಜೀವ್ ತಳವಾರ್ ಅವರು ಇಲಿಗಳ ಮೆದುಳಿನ ಮೇಲೆ ಒಂದು ಕುತೂಹಲಕಾರಿ ಪ್ರಯೋಗವನ್ನು ಮಾಡಿದರು. ವಿದ್ಯುತ್ ತರಂಗಗಳ ಮೂಲಕ ವಿದ್ಯುದಾವೇಶ ನೀಡಬಲ್ಲ ಮೂರು ಪುಟ್ಟ ಎಲೆಕ್ಟ್ರೋಡ್‌ಗಳನ್ನು ಇಲಿಗಳ ಮೆದುಳಿನ ನಿರ್ದಿಷ್ಟ ಭಾಗಗಳಿಗೆ ಜೋಡಿಸಿದ್ದರು. ಅವುಗಳನ್ನು ತಂತಿಗಳ ಮೂಲಕ ಒಂದು ಬ್ಯಾಟರಿಯುಕ್ತ ನಿಯಂತ್ರಣ ಘಟಕಕ್ಕೆ ಬೆಸೆದು, ಆ ಘಟಕವನ್ನು ಇಲಿಯ ಬೆನ್ನಿಗೆ ಜೋಡಿಸಿದ್ದರು. ಘಟಕದ ಬ್ಯಾಟರಿ ನೀಡುವ ವಿದ್ಯುದಾವೇಶವನ್ನು ನಿಯಂತ್ರಿಸಬಲ್ಲ ರಿಮೋಟ್ ಸಂಪರ್ಕವಿತ್ತು. ಸುಮಾರು 500 ಮೀಟರ್ ದೂರದಿಂದಲೂ ಅವುಗಳನ್ನು ನಿಯಂತ್ರಿಸಬಹುದಿತ್ತು. ರಿಮೋಟ್ ಗುಂಡಿಗಳನ್ನು ಒತ್ತಿ ಇಲಿಗಳ ಮೆದುಳಿನ ನಿರ್ದಿಷ್ಟ ಭಾಗಗಳನ್ನು ಪ್ರಚೋದಿಸಬಲ್ಲ ವ್ಯವಸ್ಥೆಯನ್ನು ಮಾಡಿದ್ದರು. ಮೂರು ಎಲೆಕ್ಟ್ರೋಡ್‌ಗಳ ಪೈಕಿ ಒಂದು ಬಲಭಾಗದ ಮೀಸೆಯ ಸ್ಥಾನವನ್ನು ಪ್ರಚೋದಿಸುತ್ತಿತ್ತು. ಮತ್ತೊಂದು ಎಡಭಾಗದ ಮೀಸೆಯ ಸ್ಥಾನವನ್ನು ನಿರ್ದೇಶಿಸುತ್ತಿತ್ತು. ಮೂರನೆಯದು ಮೆದುಳಿನಲ್ಲಿ ಸಂತಸದ ಭಾವವನ್ನು ಪ್ರಚೋದಿಸುವ ಎಡೆಯಲ್ಲಿತ್ತು. ಬಲಭಾಗದ ಎಲೆಕ್ಟ್ರೋಡ್ ಪ್ರಚೋದಿಸಿದಾಗ ಇಲಿಗಳು ಬಲಗಡೆಗೆ ತಿರುಗಿದರೆ ಕೂಡಲೇ ಸಂತಸ ನೀಡುವ ಗುಂಡಿಯನ್ನು ಒತ್ತುತ್ತಿದ್ದರು. ಇಲಿಗಳು ಹಾಗೆ ಮಾಡದೇ ಎಡಗಡೆಗೆ ತಿರುಗಿದರೆ ಸಂತಸದ ಗುಂಡಿಯನ್ನು ಒತ್ತುತ್ತಿರಲಿಲ್ಲ. ಅದೇ ರೀತಿಯಲ್ಲಿ ಎಡಭಾಗದ ಎಲೆಕ್ಟ್ರೋಡನ್ನೂ ನಿಯಂತ್ರಿಸುತ್ತಿದ್ದರು. ಅಂದರೆ, ಸಂಶೋಧಕರು ಯಾವ ಭಾಗದ ಗುಂಡಿ ಒತ್ತಿದಾಗ ಇಲಿಗಳು ಅದೇ ದಿಕ್ಕಿಗೆ ತಿರುಗಿದರೆ ಮಾತ್ರ ಅದರ ಮೆದುಳಿನಲ್ಲಿ ಸಂತಸ ಉಂಟಾಗುತ್ತಿತ್ತು. ವಿರುದ್ಧ ದಿಕ್ಕಿನಲ್ಲಿ ತಿರುಗಿದರೆ ಏನೂ ಆಗುತ್ತಿರಲಿಲ್ಲ. ಬಹಳ ಬೇಗ ಇಲಿಗಳು ಸಂತಸ ಪಡೆಯುವ ವಿಧಾನವನ್ನು ಗ್ರಹಿಸಿದವು. ಯಾವೆಡೆಗೆ ಪ್ರಚೋದನೆ ಬರುತ್ತದೋ, ಅದರ ದಿಕ್ಕಿಗೆ ತಿರುಗುವುದನ್ನು ಚಾಚೂ ತಪ್ಪದೆ ಪಾಲಿಸಿದವು. “ಆಜ್ಞಾನುವರ್ತಿಯಾದ ಇಲಿಗಳು ತಮ್ಮ ಮಿದುಳಿನಲ್ಲಿ ಉಂಟಾಗುತ್ತಿದ್ದ ಸಂತಸದ ಭಾವವನ್ನು ಅನುಭವಿಸುತ್ತಾ ನಿರ್ವಾಣ ಸ್ಥಿತಿ ತಲುಪುತ್ತಿದ್ದವು” ಎಂದು ಡಾ. ಸಂಜೀವ್ ತಳವಾರ್ ಅವರ ಅಭಿಪ್ರಾಯ.
ಮೆದುಳಿನ ವರ್ತನೆಯನ್ನು, ನಿರ್ಧಾರ ತೆಗೆದುಕೊಳ್ಳುವ ಕ್ಷಮತೆಯನ್ನು ಬಾಹ್ಯ ಶಕ್ತಿಯೊಂದರ ಮೂಲಕ ನಿಯಂತ್ರಿಸಬಹುದು ಎಂದಾದರೆ, ನಮ್ಮ ಆಯ್ಕೆಯ ಸ್ವಾತಂತ್ರ್ಯವನ್ನು ಮತ್ತೊಬ್ಬರು ಕಸಿದುಕೊಂಡರು ಎಂದೇ ಅಲ್ಲವೇ? ಡಾ. ತಳವಾರರ ಈ ಪ್ರಯೋಗಕ್ಕೆ ಕೆಲವು ನಿಟ್ಟಿನಿಂದ ಖಂಡನೆ ಬಂದರೂ, ಇದರ ಒಟ್ಟಾರೆ ಮಹತ್ವವನ್ನು ವಿಜ್ಞಾನ ಪ್ರಪಂಚ ಗ್ರಹಿಸಿತು. ಭೂಕಂಪವೇ ಮೊದಲಾದ ಅವಘಡಗಳ ವೇಳೆ ಬೃಹತ್ ಕಟ್ಟಡಗಳು ಕುಸಿದು ನೆಲಸಮವಾದಾಗ ಅವುಗಳ ಅಡಿಯಲ್ಲಿ ಹಲವಾರು ಮಂದಿ ಸಿಲುಕಿರುತ್ತಾರೆ. ಅವರನ್ನು ಪತ್ತೆ ಮಾಡುವುದು ಹೇಗೆ? ದೊಡ್ಡ ಯಂತ್ರಗಳ ನೆರವಿನಿಂದ ಅವಶೇಷಗಳನ್ನು ತೆರವು ಮಾಡಿದ ಹೊರತು ಇದು ತಿಳಿಯುವುದಿಲ್ಲ. ಅವಶೇಷಗಳ ಯಾವ ಭಾಗದಲ್ಲಿ ಜನರು ಸಿಲುಕಿದ್ದಾರೆ ಎಂದು ತಿಳಿದರೆ ಆಗ ಆ ಸ್ಥಾನವನ್ನು ಮೊದಲ ಆದ್ಯತೆಯಾಗಿ ತೆರವು ಮಾಡಬಹುದು. ಇಂತಹ ಆಯಕಟ್ಟಿನ ಸ್ಥಳಗಳನ್ನು ರೊಬೊಟ್ ಇಲಿಗಳು ತಲುಪಬಲ್ಲವು. ಇಂತಹ ಇಲಿಗಳ ಹಣೆಗೆ ಸಣ್ಣ ಟಾರ್ಚ್ ಮತ್ತು ಕ್ಯಾಮೆರಾ ಅಳವಡಿಸಿದರೆ, ನಮಗೆ ಬೇಕಾದ ದಿಕ್ಕುಗಳಲ್ಲಿ ಅವುಗಳನ್ನು ಸಂಚರಿಸುವಂತೆ ಮಾಡುತ್ತಾ, ಯಾವುದೇ ಕ್ಷಣದಲ್ಲಿ ಅವುಗಳ ನಿರ್ದಿಷ್ಟ ಸ್ಥಾನವನ್ನು ಗ್ರಹಿಸಿ, ಅವಶೇಷಗಳ ಯಾವ ಭಾಗದಲ್ಲಿ ಏನಿದೆ ಎಂಬುದನ್ನು ಕೆಲವೇ ನಿಮಿಷಗಳಲ್ಲಿ ತಿಳಿಯಬಹುದು. ಇದರಿಂದ ಹಲವಾರು ಪ್ರಾಣಗಳನ್ನು ಉಳಿಸುವಂತಾಗುತ್ತದೆ. ಇದೊಂದು ಉದಾಹರಣೆ ಮಾತ್ರ. ಇಂತಹ ನೂರಾರು ಸಾಧ್ಯತೆಗಳಿವೆ.
ಡಾ. ತಳವಾರರ ಈ ಪ್ರಯೋಗ ಮಿದುಳು ಮತ್ತು ಯಂತ್ರಗಳನ್ನು ಒಂದೆಡೆಗೆ ಸಂಯೋಜಿಸುವ ಕುತೂಹಲಕಾರಿ ವಿನ್ಯಾಸಗಳಿಗೆ ನಾಂದಿಯಾಯಿತು. ಮಿದುಳಿನ ಇಂಪ್ಲ್ಯಾಂಟ್ (implant) ಪ್ರಯೋಗಗಳು ಮೊದಲಾದವು. ಒಂದೆಡೆ ಪ್ರಾಣಿ ಹಕ್ಕುಗಳ ಪ್ರವರ್ತಕರು ತಮ್ಮ ವಿರೋಧವನ್ನು ಕೂಗಾಡುತ್ತಿದ್ದರೆ, ಮತ್ತೊಂದೆಡೆ ವಿಜ್ಞಾನಿಗಳು ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಶೋಧನಾ ನಿಯಮಗಳ ರೀತ್ಯಾ ಪ್ರಯೋಗಗಳನ್ನು ಆರಂಭಿಸಿದರು. ಮಿದುಳಿನ ನರಮಂಡಲಕ್ಕೆ ಎಲೆಕ್ಟ್ರಾನಿಕ್ ಚಿಪ್ ಕೂರಿಸುವುದು ಸುಲಭದ ಮಾತಲ್ಲ. ತೀರಾ ಸಂಕೀರ್ಣ ಅಂಗವಾದ ಮೆದುಳಿನಲ್ಲಿ ಚಿಪ್ ಕೂರಿಸುವ ಸ್ಥಾನದಲ್ಲಿ ಒಂದು ಮಿಲಿಮೀಟರ್ ವ್ಯತ್ಯಾಸವಾದರೂ ಪರಿಣಾಮಗಳು ಬೇರೆಯೇ ಆಗುತ್ತವೆ. ಹೀಗಾಗಿ, ಇಂತಹ ಪ್ರಯೋಗಗಳಿಗೆ ಮುನ್ನ ಅತ್ಯಂತ ಸೂಕ್ಷ್ಮ ಗಾತ್ರದ ಚಿಪ್ ಅಭಿವೃದ್ಧಿಯಾಗಬೇಕು. ಅಲ್ಲದೇ, ಒಮ್ಮೆ ಮಿದುಳಿನಲ್ಲಿ ಚಿಪ್ ಕೂರಿಸಿದ ಕೂಡಲೇ ಮೆದುಳಿಗೆ “ಇದ್ಯಾವುದೋ ಬಾಹ್ಯ ವಸ್ತು” ಎಂದು ತಿಳಿದುಹೋಗುತ್ತದೆ. ಕೂಡಲೇ ಅದು ಬಾಹ್ಯ ವಸ್ತುವನ್ನು ನರಗಳಿಂದ ಪ್ರತ್ಯೇಕಿಸುವ ಗ್ಲಯಲ್ ಕೋಶಗಳನ್ನು ಒಗ್ಗೂಡಿಸಿ, ಎರಡರ ನಡುವೆ ಸಂಪರ್ಕವನ್ನು ಇಲ್ಲದಂತಾಗಿಸುತ್ತದೆ. ಈ ಸವಾಲನ್ನೂ ವಿಜ್ಞಾನಿಗಳು ಮೀರಬೇಕು. ಜರ್ಮನಿಯ ಸಂಶೋಧಕರು ಒಂದು ಹೆಜ್ಜೆ ಮುಂದೆ ಹೋಗಿ ಚಿಪ್‌ಗಳನ್ನೇ ತಟ್ಟೆಗಳಂತೆ ಬಳಸಿ, ಅವುಗಳ ಮೇಲೆ ನರಕೋಶಗಳನ್ನು ಬೆಳೆಸುವ ಸಾಹಸ ಮಾಡಿ, ಬಹುಮಟ್ಟಿಗೆ ಸಫಲರಾದರು. ಇಂತಹ ನರಕೋಶಗಳನ್ನು ಮೆದುಳಿಗೆ ಜೋಡಿಸಿದಾಗ, ಅವುಗಳ ಒಂದು ತುದಿಯಲ್ಲಿ ಚಿಪ್ ಇದ್ದರೆ, ಮತ್ತೊಂದು ತುದಿ ಮೆದುಳಿನ ಸಹಜ ನರಕೋಶಗಳ ಸಂಪರ್ಕದಲ್ಲಿರುತ್ತದೆ. ಪ್ರಕೃತಿ ಒಡ್ಡಿದ ಒಂದು ಮಿತಿಯನ್ನು ಈ ಮೂಲಕ ಮೀರಿದಂತಾಯಿತು.
ಇಡೀ ದೇಹದ ಚಲನೆಯನ್ನು ನಿಯಂತ್ರಿಸುವುದು ಮಿದುಳು. ಪಾರ್ಶ್ವವಾಯುವಿನಂತಹ ಸಂದರ್ಭಗಳಲ್ಲಿ ಮೆದುಳಿನ ಒಂದು ಭಾಗ ನಿಷ್ಕ್ರಿಯವಾಗಿ, ಆ ಭಾಗ ನಿಯಂತ್ರಿಸುವ ದೇಹದ ಚಲನೆ ಇಲ್ಲವಾಗಿ, ಮಾಂಸಖಂಡಗಳು ಸೆಟೆದುಕೊಳ್ಳುತ್ತವೆ. ಇಲ್ಲಿ ಮಾಂಸಖಂಡಗಳು ಸುಸ್ಥಿತಿಲ್ಲಿದ್ದರೂ, ಅದನ್ನು ನಿಯಂತ್ರಿಸುವ ಕೇಂದ್ರದಲ್ಲಿನ ಸಮಸ್ಯೆಯಿಂದ ಮಾಂಸಖಂಡಗಳು ತೊಂದರೆ ಅನುಭವಿಸಬೇಕಾಗುತ್ತದೆ. ಇದೊಂದು ರೀತಿ ರಿಮೋಟ್ ಕೆಟ್ಟುಹೋದಾಗ ಟಿವಿ ನೋಡಲು ಸಾಧ್ಯವಾಗದಂತಹ ಪರಿಸ್ಥಿತಿ. ಆಗ ರಿಮೋಟ್ ಅನ್ನು ರಿಪೇರಿ ಮಾಡಬೇಕು. ಅದು ಸಾಧ್ಯವಾಗದಿದ್ದರೆ ಪ್ರತಿ ಬಾರಿ ಟಿವಿ ಬಳಿ ಹೋಗಿ ವಾಹಿನಿಗಳನ್ನು, ಸದ್ದನ್ನು, ಇತರ ಅಂಶಗಳನ್ನು ನಿಯಂತ್ರಿಸಬೇಕು. ಸದ್ಯಕ್ಕೆ ಪಾರ್ಶ್ವವಾಯುವಿನಲ್ಲಿ ಮೆದುಳೆಂಬ ರಿಮೋಟ್ ಅನ್ನು ಸರಿಪಡಿಸಲು ಹೆಚ್ಚಿನ ಮಾರ್ಗಗಳಿಲ್ಲದಿರುವುದರಿಂದ, ಮಾಂಸಖಂಡಗಳಿಗೇ ಫಿಸಿಯೋಥೆರಪಿಯಂತಹ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಒಂದು ವೇಳೆ ನಿಷ್ಕ್ರಿಯವಾಗಿರುವ ಮೆದುಳಿನ ಭಾಗಕ್ಕೆ ಚಿಪ್ ಅಳವಡಿಸಿ ಅದನ್ನು ಮತ್ತೆ ಕಾರ್ಯರೂಪಕ್ಕೆ ತಂದರೆ? ಆಗ ಪಾರ್ಶ್ವವಾಯುವನ್ನು ಗುಣಪಡಿಸಿದಂತಾಯಿತು. ಅಂತೆಯೇ ಕೆಲವೊಮ್ಮೆ ಮೆದುಳಿನ ಕೇಂದ್ರ ಸರಿಯಾದ ಸ್ಥಿತಿಯಲ್ಲಿದ್ದರೂ ಮಾಂಸಖಂಡಗಳ ಆಂತರಿಕ ದೌರ್ಬಲ್ಯದಿಂದ ಚಲನೆ ಸಾಧ್ಯವಾಗದೇ ಇರಬಹುದು. ಆಗ ಆಯಾ ಮಾಂಸಖಂಡಗಳ ಗುಂಪಿಗೆ ಕೃತಕ ಚಲನೆಯ ಉಪಕರಣಗಳನ್ನು ಜೋಡಿಸಿ, ಅವುಗಳ ನಿಯಂತ್ರಣವನ್ನು ಮೆದುಳಿಗೆ ನೀಡಬಹುದು. ಇದರಿಂದ ಸಹಜ ಚಲನೆಯನ್ನು ಅನುಕರಿಸಿದಂತಾಗುತ್ತದೆ.
ಮೆದುಳಿಗಿಂತ ದೊಡ್ಡ ಸೂಪರ್ ಕಂಪ್ಯೂಟರ್ ಇಲ್ಲ ಎಂದು ಈಗಲೂ ಭಾವಿಸಲಾಗಿದೆ. 1950ನೆಯ ಇಸವಿಯಲ್ಲಿ ಪ್ರಸಿದ್ಧ ವಿಜ್ಞಾನಿ ಆಲನ್ ಟ್ಯುರಿಂಗ್ ಅವರು “ಕಂಪ್ಯೂಟರುಗಳ ಸಾಮರ್ಥ್ಯ ಹೆಚ್ಚುತ್ತಾ ಹೋದರೆ ಅವು ಸುಮಾರು 2000ನೇ ಇಸವಿಯ ವೇಳೆಗೆ ಮಾನವ ಮೆದುಳಿನ ಮಟ್ಟಕ್ಕೆ ಏರಬಲ್ಲವು” ಎಂದು ಗಣಿಸಿದ್ದರು. ಈ ಭವಿಷ್ಯವಾಣಿಯನ್ನು ನಿಜವಾಗಿಸಲು ಕಂಪ್ಯೂಟರ್ ತಜ್ಞರು ಅನವರತ ದುಡಿದಿದ್ದಾರೆಯಾದರೂ ಇಂದಿಗೂ ವಾಸ್ತವ ಆ ಮಟ್ಟಕ್ಕೆ ಏರಿಲ್ಲ. ಮೆದುಳಿನ ಒಂದು ನರಕೋಶಕ್ಕೆ ಸರಿಯಾಗಿ ಒಂದು ಕಂಪ್ಯೂಟರ್ ಚಿಪ್ ಅನ್ನು ಜೋಡಿಸಿದರೆ, ಅದರ ಸಾಮರ್ಥ್ಯ ಸರಿದೂಗಬಲ್ಲದು ಎಂದು ಗಣಿಸಿದ್ದ ಸಿದ್ಧಾಂತ ಫಲ ನೀಡಲಿಲ್ಲ. ಗಣನೆಯ ಸಾಮರ್ಥ್ಯ ಹೆಚ್ಚಿತಾದರೂ, ಅನೇಕ ಆಯಾಮಗಳನ್ನು ಲೆಕ್ಕ ಹಾಕಿ, ತರ್ಕ ಮಾಡಿ, ಸ್ವತಂತ್ರ ನಿರ್ಧಾರಗಳ ಚಿಂತನೆಯನ್ನು ರೂಡಿಸಿಕೊಳ್ಳುವಂತೆ ಕಂಪ್ಯೂಟರ್ ಅನ್ನು ಸಿದ್ಧಗೊಳಿಸಲು ಈವರೆಗೆ ಆಗಿಲ್ಲ. ಮಾನವ ಮೆದುಳೆಂದರೆ ಕೇವಲ ತಾರ್ಕಿಕ ಆಲೋಚನೆಗಳು ಮಾತ್ರವಲ್ಲ; ಅದರಲ್ಲಿ ಭಾವನಾತ್ಮಕ ಸಂಗತಿಗಳೂ ಇವೆ. ಈ ಆಯಾಮವನ್ನು ಸ್ಪರ್ಶಿಸಲು ಕಂಪ್ಯೂಟರಿಗೆ ಸಾಧ್ಯವಾಗುವುದು ಹೇಗೆ?
ಇದನ್ನೂ ಓದಿ | ವಾಕಿಂಗ್ ಚಿತ್ರಗಳು ಅಂಕಣ | ಕೋಪದಿಂದ ಮೂಗು ಕೊಯ್ದುಕೊಂಡರೆ ಅಪಾಯವಿಲ್ಲ!
ಮಾನವ ಮೆದುಳು ಕೇವಲ ನರಕೋಶಗಳ ಲೆಕ್ಕಾಚಾರವಲ್ಲ. ಬದಲಿಗೆ, ಒಂದು ನರಕೋಶ ಮತ್ತೊಂದರ ಜೊತೆಗೆ ಹೇಗೆ ಸಂಪರ್ಕ ಕೂಡಿಸಿಕೊಳ್ಳುತ್ತದೆ ಎನ್ನುವ ಪ್ರಕ್ರಿಯೆ. ಈ ಸಂಪರ್ಕಗಳು ನಿರಂತರವಾಗಿ ಆಗುತ್ತಲೇ ಇರುತ್ತವೆ. ಕೆಲವು ಸಂಪರ್ಕಗಳು ಕೆಲಕ್ಷಣಗಳ ಕಾಲ ಮಾತ್ರ ಇದ್ದರೆ, ಇನ್ನು ಕೆಲವು ವರ್ಷಾನುಗಟ್ಟಲೇ ಉಳಿಯುತ್ತವೆ. ಇಂತಹ ಕ್ರಿಯಾತ್ಮಕ ಸಂಪರ್ಕಗಳು ಮೆದುಳಿಗೆ ಅಗಾಧ ಸಾಮರ್ಥ್ಯವನ್ನು ತಂದುಕೊಡುತ್ತವೆ. ಈ ಮಟ್ಟದ ನಿರಂತರ ಸಂಪರ್ಕಗಳನ್ನು ಸಾಧಿಸುವ ಕ್ರಿಯಾತ್ಮಕ ಸಾಮರ್ಥ್ಯ ಕಂಪ್ಯೂಟರಿಗೆ ಸದ್ಯಕ್ಕೆ ಇಲ್ಲ. ಇದು ಕಾರ್ಯಗತವಾಗಲು ಇನ್ನಷ್ಟು ಕಾಲ ಹಿಡಿಯಬಹುದು. ಕ್ವಾಂಟಮ್ ಕಂಪ್ಯೂಟರ್ ಬೆಳವಣಿಗೆ ಇದನ್ನು ಸಾಧಿಸಬಹುದು ಎನ್ನಲಾಗುತ್ತಿದೆ.
ಈ ಸಮಸ್ಯೆಯನ್ನು ಮತ್ತೊಂದು ದಿಕ್ಕಿನಿಂದ ತಲುಪಲು ಸಾಧ್ಯವೇ? ಅಂದರೆ, ಕೋಟ್ಯಂತರ ಚಿಪ್‌ಗಳನ್ನು ಮೊದಲು ಒಗ್ಗೂಡಿಸಿ, ನಂತರ ಅವುಗಳಿಗೆ ಪರಸ್ಪರ ಕ್ರಿಯಾತ್ಮಕ ಸಂಪರ್ಕ ಕಲ್ಪಿಸುವ ಸದ್ಯದ ಮಾದರಿಯ ಬದಲಿಗೆ, ಮೊದಲ ಹೆಜ್ಜೆಯಲ್ಲಿ ಕೆಲವೇ ಚಿಪ್ ಗಳನ್ನು ಒಗ್ಗೂಡಿಸಿ, ಅವುಗಳು ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಸಂಪರ್ಕ ಸಾಧಿಸುವಂತೆ ನಿರ್ಮಿಸಿ, ನಂತರ ನಿಧಾನವಾಗಿ ಚಿಪ್‌ಗಳ ಸಂಖ್ಯೆಯನ್ನು ಏರಿಸುತ್ತಾ ಹೋದರೆ? ಜೀವವಿಕಾಸದ ಪ್ರಕ್ರಿಯೆಯಲ್ಲಿ ಮಿದುಳಿನ ಬೆಳವಣಿಗೆಯಾದದ್ದೂ ಹೀಗೆಯೇ ಇರಬಹುದಲ್ಲವೇ? ಅಮೆರಿಕೆಯ ಪೆನ್ಸಿಲ್ವೆನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಈ ಹಾದಿಯಲ್ಲಿ ಪಯಣಿಸುತ್ತಿದ್ದಾರೆ. ಅವರ ಮೊದಲ ಪ್ರಯತ್ನ ಕೃತಕ ಕಣ್ಣನ್ನು ತಯಾರಿಸಿ, ದೃಷ್ಟಿಯನ್ನು ಸಾಧಿಸುವುದು. ನಮ್ಮ ಕಣ್ಣು ಬೆಳಕನ್ನು, ಬಣ್ಣಗಳನ್ನು ಗ್ರಹಿಸಲು ವಿಶಿಷ್ಟ ಕೋಶಗಳನ್ನು ಕಣ್ಣಿನ ಹಿಂಬದಿಯ ರೆಟಿನಾ ಎಂಬ ಪರದೆಯ ಜೊತೆಗೆ ನಿರ್ಮಿಸಿಕೊಂಡಿದೆ. ರೆಟಿನಾದ ಹಿಂಬದಿಯಲ್ಲಿ ಸಮನ್ವಯಗೊಂಡಿರುವ ಸೂಕ್ಷ್ಮ ನರತಂತುಗಳ ಪ್ರಚೋದನೆಯಿಂದ ಮಿದುಳಿಗೆ ಸಂಕೇತಗಳು ರವಾನೆ ಆಗುತ್ತವೆ. ಮೆದುಳಿನಲ್ಲಿ ಈ ಸಂಕೇತಗಳ ವಿಶ್ಲೇಷಣೆಯಾಗಿ, ನಮ್ಮೆದುರಿನ ದೃಶ್ಯದ ಪುನರ್ನಿರ್ಮಾಣವಾಗುತ್ತದೆ. ವಿಜ್ಞಾನಿಗಳು ಕಣ್ಣಿನ ವಿಶಿಷ್ಟ ಕೋಶಗಳಿಗೆ ಬದಲಾಗಿ ಸುಮಾರು 8000 ಚಿಪ್‌ಗಳನ್ನು ಬಳಸಿ, ಅವಕ್ಕೆ ಸುಮಾರು 4000 ಆಂತರಿಕ ಸಂಪರ್ಕಗಳನ್ನು ನಿರ್ಮಿಸಿ, ಕೃತಕ ರೆಟಿನಾ ತಯಾರಿಸಿದ್ದಾರೆ. ಇದರಿಂದ ಬರುವ ಮಾಹಿತಿಯನ್ನು ವಿಶ್ಲೇಷಿಸಲು ಸಾಮಾನ್ಯ ಸಾಮರ್ಥ್ಯದ ಕಂಪ್ಯೂಟರ್ ಬಳಸಿದ್ದಾರೆ. ಈ ಪ್ರಯೋಗ ಬಹಳ ಮಹತ್ವದ ಫಲಿತಾಂಶಗಳನ್ನು ನೀಡಿದೆ. ಕಾಲಕ್ರಮೇಣ ಕೃತಕ ರೆಟಿನಾದ ಚಿಪ್ ಸಾಮರ್ಥ್ಯವನ್ನು ವೃದ್ಧಿಸುತ್ತಾ, ಅದರ ಮಾಹಿತಿಯನ್ನು ವಿಶ್ಲೇಷಿಸುವ ಕಂಪ್ಯೂಟರಿನ ಗಾತ್ರವನ್ನು ತಗ್ಗಿಸುತ್ತಾ ಹೋದಂತೆ, ಒಂದು ದಿನ ನೈಜ ಕಣ್ಣಿನ ಗಾತ್ರ ಮತ್ತು ಸಾಮರ್ಥ್ಯಗಳನ್ನು ಸರಿದೂಗಬಲ್ಲ ಕೃತಕ ಕಣ್ಣಿನ ಆವಿಷ್ಕಾರ ಮಾಡಿದಂತಾಗುತ್ತದೆ. ಇದೇ ಮಾದರಿಯನ್ನು ಮೆದುಳಿನ ಮತ್ತಷ್ಟು ಪ್ರದೇಶಗಳಿಗೆ ಅನ್ವಯಿಸಬಹುದು ಎಂಬ ಮಹತ್ವಾಕಾಂಕ್ಷೆ ವಿಜ್ಞಾನಿಗಳದ್ದು. ಇದು ಸುಲಭದ ಕೆಲಸವೇನೂ ಅಲ್ಲ. ಆದರೆ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಗಳನ್ನು ಇಡಲಾಗಿದೆ ಎಂಬುದು ಮಹತ್ವದ ಸಂಗತಿ.
ಆಲನ್ ಟ್ಯುರಿಂಗ್ ಅವರ ಜೊತೆಗಾರರಾದ ಇರ್ವಿಂಗ್ ಗುಡ್ ಎಂಬ ಗಣಿತಜ್ಞ 1965ರಲ್ಲಿ ಭವಿಷ್ಯದಲ್ಲಿ ಯಂತ್ರಗಳು ಮಾನವ ಮಿದುಳಿನ ಸಾಮರ್ಥ್ಯವನ್ನು ಮೀರುವ ಸಾಧ್ಯತೆಯನ್ನು ಗಣಿಸಿದ್ದರು. ಅದಕ್ಕೂ ಮೊದಲೇ ವಾನ್ ನ್ಯೂಮನ್ ಎಂಬ ಪ್ರಸಿದ್ಧ ಗಣಿತಜ್ಞರು ಆ ಹಂತಕ್ಕೆ ʻಸಿಂಗ್ಯುಲಾರಿಟಿʼ ಎನ್ನುವ ಹೆಸರನ್ನೂ ನೀಡಿದ್ದರು. ಇದು 2045ನೆಯ ಇಸವಿಯ ಸುಮಾರಿಗೆ ಸಾಧ್ಯವಾಗಬಹುದೆಂಬ ಅಂದಾಜಿದೆ. ಪ್ರಾಯಶಃ ನಮ್ಮ ಜೀವನಕಾಲದಲ್ಲಿ ಒಂದು ವೈಜ್ಞಾನಿಕ ಮಹಾಕ್ರಾಂತಿಗೆ ನಾವು ಸಾಕ್ಷಿಯಾಗಲಿದ್ದೇವೆ.
(ಲೇಖಕರು ವೈದ್ಯರು, ವೈಜ್ಞಾನಿಕ ಬರಹಗಾರರು)
ಇದನ್ನೂ ಓದಿ | ವಾಕಿಂಗ್ ಚಿತ್ರಗಳು ಅಂಕಣ | ಮನಸ್ಸನ್ನು ಓದಿ ಕತೆ ಬರೆಯಬಲ್ಲ ಮೆಶೀನು!