“ಜೀವನದಲ್ಲಿ ದಾರಿ ತೋರದಾದಾಗ ಹೃದಯದ ಮಾತು ಕೇಳು. ಅದು ಎಂದಿಗೂ ತಪ್ಪು ದಾರಿ ತೋರುವುದಿಲ್ಲ” ಎನ್ನುವ ಸಿನೀಮಯ ಮಾತುಗಳನ್ನು ಕೇಳಿ “ಆಹಾ; ಓಹೋ” ಎಂದು ಮೆಚ್ಚಿಕೊಂಡಿರುತ್ತೇವೆ. ಅಸಲಿಗೆ ಹೃದಯಕ್ಕೆ ಮಾತುಗಳೂ ಇಲ್ಲ; ಆಲೋಚನೆಗಳೂ ಇಲ್ಲ. ಹುಟ್ಟಿನ ಮೊದಲಿನಿಂದ ಆರಂಭಿಸಿ ಜೀವನದ ಕೊನೆಯ ಕ್ಷಣದವರೆಗೆ ಬಡಿಯುತ್ತಾ, ರಕ್ತವನ್ನು ದೇಹದ ಮೂಲೆಮೂಲೆಗಳಿಗೆ ತಲುಪಿಸುವ ಕೆಲಸ ಹೃದಯದ್ದು. ಇದನ್ನು ಹೊರತುಪಡಿಸಿ ಯೋಚಿಸುವಂತಹ ಸಂಕೀರ್ಣ ಕೆಲಸವನ್ನು ಮಾಡುವ ವ್ಯವಧಾನವಾಗಲೀ, ಸಾಮರ್ಥ್ಯವಾಗಲೀ ಹೃದಯಕ್ಕೆ ಇಲ್ಲ. ಭಾವನೆಗಳು ತೀವ್ರಗೊಂಡಾಗ ಜೋರಾಗಿ ಮಿಡಿಯುವ ಹೃದಯ ನಮಗೆ ಆಯಾ ಸಂದರ್ಭದ ಅರಿವು ಮೂಡಿಸುತ್ತದೆ. ಹೀಗಾಗಿ, “ಭಾವನೆಗಳ ಉಗಮ ಹೃದಯವೇ” ಎಂದು ಪ್ರಾಚೀನರು ಭಾವಿಸಿದ್ದು ಸಹಜ. ಆದರೆ ವಿಜ್ಞಾನ ಮುಂದುವರೆದಂತೆಲ್ಲಾ ಹೃದಯಕ್ಕೂ ಭಾವನೆಗಳಿಗೂ ಸಂಬಂಧವಿಲ್ಲವೆಂದು ಋಜುವಾತಾದರೂ, ಕವಿಗಳು, ಸಿನೆಮಾದವರು ಈ ಸಂಬಂಧವನ್ನು ಜನರ ಮನದಲ್ಲಿ ಬಿತ್ತುತ್ತಲೇ ಇದ್ದಾರೆ!
ನಮ್ಮ ದೇಹ ಸುಮಾರು 78 ವಿವಿಧ ಅಂಗಗಳ ಸಮ್ಮೇಳನ. ಇವುಗಳ ಪೈಕಿ ಮಿದುಳು, ಹೃದಯ, ಮೂತ್ರಪಿಂಡಗಳು, ಯಕೃತ್, ಮತ್ತು ಶ್ವಾಸಕೋಶಗಳು ಪ್ರಮುಖವಾದುವು. ಈ ಐದು ಅಂಗಗಳ ಪೈಕಿ ಯಾವುದಾದರೂ ಒಂದು ಅಂಗ ಕೆಲಕಾಲ ಕೆಲಸ ಮಾಡುವುದನ್ನು ನಿಲ್ಲಿಸಿದರೆ ಜೀವನ ಮುಗಿದಂತೆ. ಸಾಮಾನ್ಯ ಸ್ಥಿತಿಯಲ್ಲಿ ಈ ಅಂಗಗಳು ಸ್ವತಂತ್ರವಾಗಿ ಕೆಲಸ ಮಾಡಬಲ್ಲವಾದರೂ, ಇದರ ಮುಖ್ಯ ನಿಯಂತ್ರಣ ಮಿದುಳಿನಲ್ಲಿರುತ್ತದೆ. ಹೀಗಾಗಿ, ಮೆದುಳನ್ನು ಶರೀರದ ಮುಖ್ಯ ನಿಯಂತ್ರಣಾಧಿಕಾರಿ ಎನ್ನಬಹುದು. ಶರೀರದ ಪ್ರತಿಯೊಂದು ಕ್ರಿಯೆಯ ಹಿಂದೆ ಮಿದುಳು ಮತ್ತು ನರಮಂಡಲದ ಕೈವಾಡವಿದೆ. ಕೆಲವರಂತೂ ಶರೀರ ಇರುವುದೇ ಮಿದುಳನ್ನು ಕಾಪಾಡಲು ಎಂದು ಪ್ರತಿಪಾದಿಸುತ್ತಾರೆ.
“ಎಲ್ಲವನ್ನೂ ಮಿದುಳು ನಿಯಂತ್ರಿಸಿದರೆ, ಮಿದುಳನ್ನು ನಿಯಂತ್ರಿಸುವವರು ಯಾರು?” ಎನ್ನುವ ಪ್ರಶ್ನೆ ಬಹಳ ಕಾಲದಿಂದ ಚಿಂತಕರನ್ನು, ವಿಜ್ಞಾನಿಗಳನ್ನು, ತತ್ತ್ವಶಾಸ್ತ್ರಿಗಳನ್ನು ಬೇರೆ ಬೇರೆ ಬಗೆಯಲ್ಲಿ ಕಾಡಿದೆ. ಇದಕ್ಕೆ ಕೆಲವರು ಶರೀರದ ಹೊರಗಿನ ಪ್ರಭಾವಗಳನ್ನು ಹುಡುಕಿದರೆ, ಕೆಲವರು ಶರೀರದೊಳಗೇ ಇರುವ ನಿಯಂತ್ರಕಗಳನ್ನು ಅರಸುತ್ತಾರೆ. ಮತ್ತೂ ಕೆಲವರು “ಮಿದುಳಿಗೆ ಮಿದುಳೇ ನಿಯಂತ್ರಕ” ಎಂದು ಸಂವಾದವನ್ನು ಕೊನೆಗೊಳಿಸುತ್ತಾರೆ. ಇಲ್ಲಿನ ಪ್ರಶ್ನೆ ಉತ್ತರದ್ದಲ್ಲ; ಉತ್ತರದ ಹಿಂದಿನ ಸಾಕ್ಷ್ಯಗಳದ್ದು. ಯಾವುದೇ ಉತ್ತರ ನೀಡಿದರೂ, ಅದಕ್ಕೆ ಸಮಂಜಸವಾದ ಪುರಾವೆಗಳನ್ನು ನೀಡಬೇಕು; ಹಾರಿಕೆಯ ಉತ್ತರಗಳು, ಚಮತ್ಕಾರದ ಮಾತುಗಳು, ಅರಿವಿನ ಹೊರಗಿನ ನುಡಿಗಟ್ಟುಗಳು ಕೆಲಸಕ್ಕೆ ಬಾರವು.
“ಜೀವನದ ಉದ್ದೇಶವೇನು?” ಎನ್ನುವ ಪ್ರಶ್ನೆಗೆ ನಾಗರಿಕತೆಯ ನಡುವೆ ಇರುವ ಮನುಷ್ಯರ ಉತ್ತರ ಬಹಳಷ್ಟು ಆಯಾಮಗಳನ್ನು ಹೊಂದಿರುತ್ತದೆ. ಆದರೆ ಸೃಷ್ಟಿಯೆಂದರೆ ಕೇವಲ ಮನುಷ್ಯ ಮಾತ್ರವಲ್ಲ. ಮಾನವನನ್ನು ಹೊರತುಪಡಿಸಿ ಈ ಪ್ರಶ್ನೆಯನ್ನು ಇತರ ಜೀವ ಪ್ರಭೇದಗಳ ದೃಷ್ಟಿಯಿಂದ ನೋಡಿದರೆ, ಅವುಗಳ ಅಸ್ತಿತ್ವದ ಮೂಲೋದ್ದೇಶ ಸಂತಾನ ಪ್ರಕ್ರಿಯೆ. ಆ ಉದ್ದೇಶ ಪೂರ್ಣವಾಗುವವರೆಗೆ ಬದುಕಿರಲು ನಡೆಸುವ ಹೋರಾಟ ಅವುಗಳ ಜೀವನದ ಕತೆ. ಸಂತಾನ ಕ್ರಿಯೆ ಪೂರ್ಣವಾದ ಕೂಡಲೇ ತಮ್ಮ ಬದುಕನ್ನು ಕೊನೆಗೊಳಿಸುವ ಕೆಲವು ಗೋಸುಂಬೆಗಳು, ಇಲಿಗಳು, ಕೀಟಗಳು, ಜೇಡಗಳು ಮೊದಲಾದ ಜೀವ ಪ್ರಭೇದಗಳು ಜಗತ್ತಿನಲ್ಲಿವೆ. ಹೀಗೆ ಮರಣಿಸುವಾಗ ಇವುಗಳ ಮಿದುಳು ಸುಸ್ಥಿತಿಯಲ್ಲೇ ಇರುತ್ತದೆ. ಒಂದು ವೇಳೆ ದೇಹವೆಂಬುದು ಮಿದುಳನ್ನು ಸಂರಕ್ಷಿಸಲು ಇರುವ ಸಾಧನ ಎಂಬ ಮಾತಿನಲ್ಲಿ ಹುರುಳಿದ್ದರೆ ಈ ರೀತಿಯ ಮರಣ ಸಂಭವಿಸಬಾರದು. ಹಾಗಾದರೆ, ಇಂತಹ ಸಾವುಗಳು ಏಕಾಗುತ್ತವೆ?
ಮಿದುಳನ್ನು ದೇಹ ಸಂರಕ್ಷಿಸುತ್ತದೆ ಎಂದ ಮೇಲೆ ದೇಹವನ್ನು ಮಿದುಳು ಕಾಪಾಡಬೇಕು. ಆಗಲೇ ಈ ಪರಸ್ಪರ ಅವಲಂಬನೆ ಅರ್ಥಪೂರ್ಣ. ಈ ಮಾತಿಗೆ ಪುಷ್ಠಿ ನೀಡುವಂತೆ ಮಿದುಳು ಇಡೀ ದೇಹದ ಜವಾಬ್ದಾರಿಗಳನ್ನು ನಿಭಾಯಿಸುತ್ತದೆ; ಯಾವುದೇ ಅಂಗದ ಕಷ್ಟಕಾಲಕ್ಕೆ ಸ್ಪಂದಿಸಿ, ದೇಹದ ಇತರೆ ಅಂಗಗಳನ್ನು ಸಜ್ಜುಗೊಳಿಸಿ, ಸಹಾಯಕ್ಕೆ ಧಾವಿಸುವಂತೆ ಪ್ರಚೋದಿಸುತ್ತದೆ. ಈ ಸಹಬಾಳ್ವೆ ಯಾವುದೇ ಕಾರಣಕ್ಕೂ ವಿಚಲಿತವಾಗಬಾರದು. ಒಂದು ವೇಳೆ ದೇಹದ ರಕ್ಷಣೆಯಲ್ಲಿ ಮಿದುಳು ವಿಫಲವಾದರೆ? ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮಿದುಳೇ ದೇಹದ ನಾಶಕ್ಕೆ ಕಾರಣವಾದರೆ? “ಕಾವ ದೇವ ಸಾವು ತರಲು ಎಲ್ಲಿ ರಕ್ಷಣೆ?” ಎಂದು ಪ್ರಶ್ನಿಸಿದ ಓಹಿಲೇಶ್ವರನ ಆಕ್ರಂದನವಾಯಿತಲ್ಲವೇ? ಹೀಗೆ ಆಗುವುದು ಶಕ್ಯವೇ?
ಇಲಿ ಮತ್ತು ಬೆಕ್ಕುಗಳ ಆಜನ್ಮ ವೈರ ಎಲ್ಲರಿಗೂ ವಿದಿತ. ಈ ವೈರವನ್ನು ಬಗೆಬಗೆಯಾಗಿ ತೋರುವ “ಟಾಮ್ ಅಂಡ್ ಜೆರ್ರಿ”ಯಂತಹ ಕಾರ್ಟೂನ್ ಚಿತ್ರಗಳು ಅದೆಷ್ಟು ಕೋಟಿಗಳ ವ್ಯವಹಾರ ಮಾಡಿವೆಯೋ, ಅದೆಷ್ಟು ಜನರನ್ನು ರಂಜಿಸಿದೆಯೋ ಲೆಕ್ಕವೇ ಇಲ್ಲ. ಟಾಮ್ ಬೆಕ್ಕಿನ ಆಕ್ರಮಣಕ್ಕಿಂತಲೂ ಜೆರ್ರಿ ಇಲಿಯ ಬಚಾವಾಗುವ ಉಪಾಯಗಳು ಗಮನ ಸೆಳೆಯುತ್ತವೆ. ಒಟ್ಟಿನಲ್ಲಿ, ಬೆಕ್ಕಿಗೆ ಸಿಗದಂತೆ ತನ್ನ ಜೀವ ಉಳಿಸಿಕೊಳ್ಳುವುದು ಇಲಿಗಳಿಗೆ ಮುಖ್ಯ. ಬೆಕ್ಕಿನ ವಾಸನೆಯನ್ನು ಗ್ರಹಿಸುವ ವಿಶೇಷ ಭಾಗ ಇಲಿಗಳ ಮಿದುಳಿನಲ್ಲಿದೆ. ಇದರಿಂದ ಬೆಕ್ಕಿನ ನಡಿಗೆಯ ಸಪ್ಪಳ ಕೇಳದಿದ್ದರೂ ಅದರ ಅಸ್ತಿತ್ವವನ್ನು ಗುರುತಿಸಿ ಇಲಿಗಳು ತಪ್ಪಿಸಿಕೊಳ್ಳಬಲ್ಲವು. ಇದನ್ನು “ಅನುಮಾನಕ್ಕೆ ಆಸ್ಪದವಿಲ್ಲದ ಸತ್ಯ” ಎಂದೇ ಭಾವಿಸಿದ್ದ ವಿಜ್ಞಾನಿಗಳನ್ನು ಸೋಜಿಗಕ್ಕೆ ಕೆಡವಿದ್ದು ಒಂದು ಪ್ರಸಂಗ. ನೋಡನೋಡುತ್ತಿದ್ದಂತೆ ಖುದ್ದು ಇಲಿ ತಾನೇತಾನಾಗಿ ಬೆಕ್ಕಿನ ಬಳಿ ಹೋಗಿ ಆಹಾರವಾಗುವ ಅಚ್ಚರಿ ವಿಜ್ಞಾನಿಗಳನ್ನು ಅನುಮಾನಕ್ಕೆ ದೂಡಿತು. ಈ ಅನೂಹ್ಯ ಅಚ್ಚರಿಯ ಹಿಂದೆ ಬಿದ್ದು ಕಾರಣಗಳನ್ನು ಹುಡುಕಿದ ಸಂಶೋಧಕರನ್ನು ನಿಬ್ಬೆರಗಾಗಿಸಿದ್ದು ಒಂದು ಆದಿಮ ಏಕಾಣು ಪರೋಪಜೀವಿ (Protozoan).
ಟೊಕ್ಸೊಪ್ಲಾಸ್ಮ ಗೊಂಡಿ ಎನ್ನುವ ಹೆಸರಿನ ಪರೋಪಜೀವಿ ಮೂಲತಃ ಬೆಕ್ಕಿನ ಹೊಟ್ಟೆಯಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ. ಆದರೆ ಅದರ ಜೀವನ ಚಕ್ರದ ಮತ್ತೊಂದು ಭಾಗ ಇಲಿಯಂತಹ ಜೀವಿಗಳಲ್ಲಿ ಆಗುತ್ತದೆ. ಅಂದರೆ, ಈ ಪರೋಪಜೀವಿಯ ಇಡೀ ಜೀವನಚಕ್ರ ಪೂರ್ಣವಾಗಲು ಬೆಕ್ಕು ಇಲಿಯನ್ನು ತಿನ್ನಬೇಕು. ಆಗ ಇಲಿಯ ದೇಹದಲ್ಲಿರುವ ಟೊಕ್ಸೊಪ್ಲಾಸ್ಮ ಗೊಂಡಿ ಬೆಕ್ಕಿನ ದೇಹವನ್ನು ಸೇರಿ ತನ್ನ ಸಂತಾನವನ್ನು ಬೆಳಸುತ್ತದೆ. ಇಲಿ ಮತ್ತು ಬೆಕ್ಕುಗಳು ಸಹಜ ಶತ್ರುಗಳಾದ್ದರಿಂದ ಈ ವ್ಯವಸ್ಥೆ ತರ್ಕಬದ್ಧವಾಗಿಯೇ ಇದೆ ಅನಿಸುತ್ತದೆ. ಆದರೆ, ಟೊಕ್ಸೊಪ್ಲಾಸ್ಮ ಗೊಂಡಿ ಪರೋಪಜೀವಿಗೆ ಈ ಸಹಜ ವ್ಯವಸ್ಥೆ ಸಾಲದು. ಇಲಿಯನ್ನು ಹಿಡಿಯಲು ಬೆಕ್ಕು ವಿಫಲವಾದರೆ, ಅಥವಾ ಇಲಿ ತಪ್ಪಿಸಿಕೊಂಡರೆ ಟೊಕ್ಸೊಪ್ಲಾಸ್ಮ ಗೊಂಡಿ ಸಂತಾನ ಕ್ಷೀಣಿಸುತ್ತದೆ. ಹೀಗಾಗಿ ಕೇವಲ ಒಂದು ಕೋಶದ ಈ ಪರೋಪಜೀವಿ ಸೀದಾ ಇಲಿಯ ಮಿದುಳಿಗೇ ಕೈ ಹಾಕುತ್ತದೆ! ಇದು ನುಡಿಗಟ್ಟಿನ ಮಾತಲ್ಲ; ಸತ್ಯ.
ಟೊಕ್ಸೊಪ್ಲಾಸ್ಮ ಗೊಂಡಿ ಸೀದಾ ಇಲಿಗಳ ಮಿದುಳನ್ನು ಸೇರಿ, ಬೆಕ್ಕಿನ ವಾಸನೆಯನ್ನು ಗ್ರಹಿಸುವ ಇಲಿಯ ಮಿದುಳಿನ ಭಾಗವನ್ನು ಕೆಡಿಸುತ್ತವೆ. ಇಂತಹ ರೋಗಿಷ್ಠ ಇಲಿಗಳನ್ನು ಬೆಕ್ಕು ಸುಲಭವಾಗಿ ಹಿಡಿಯಬಲ್ಲವು. ಟೊಕ್ಸೊಪ್ಲಾಸ್ಮ ಗೊಂಡಿ ಇಷ್ಟಕ್ಕೇ ತೃಪ್ತಿಗೊಳ್ಳುವುದಿಲ್ಲ. ಮುಂದಿನ ಹೆಜ್ಜೆಯಾಗಿ ಅದು ಇಲಿಗಳ ಮಿದುಳನ್ನು ಮತ್ತಷ್ಟು ಮಾರ್ಪಡಿಸಿ, ಬೆಕ್ಕಿನ ವಾಸನೆಗೆ ಇಲಿ ಖುದ್ದು ಆಕರ್ಷಿತವಾಗುವಂತೆ ಪರಿವರ್ತಿಸುತ್ತದೆ. ಅಂತೆಯೇ, ಇಲಿಗಳ ಮಿದುಳಿನಲ್ಲಿ ಬೆಕ್ಕಿನ ಭಯವನ್ನು ಇಲ್ಲದಂತಾಗಿಸುತ್ತವೆ. ಇದರಿಂದ ಇಲಿಗೆ “ಬೆಕ್ಕು ತನ್ನ ಶತ್ರು” ಎನ್ನುವ ಭಾವ ನಾಶವಾಗಿ, ಅದು ಸೀದಾ ಬೆಕ್ಕಿನೆಡೆಗೆ ಧಾವಿಸಿ, ಆಹಾರವಾಗುತ್ತದೆ. ಹೀಗೆ ಯಃಕಶ್ಚಿತ್ ಏಕಾಣು ಪರೋಪಜೀವಿಯೊಂದು ತನಗಿಂತಲೂ ಕೋಟಿ ಪಟ್ಟು ದೊಡ್ಡದಾದ ಜೀವಿಯೊಂದರ ಮಿದುಳನ್ನು ತನ್ನ ನಿಯಂತ್ರಣಕ್ಕೆ ಪಡೆದು, ಅದನ್ನು ಬಲಿಪೀಠಕ್ಕೆ ಹತ್ತಿಸಿ, ತನ್ನ ಸಂತಾನವನ್ನು ಹೆಚ್ಚಿಸಿಕೊಳ್ಳುತ್ತದೆ!
ಈ ಇಡೀ ಪ್ರಕ್ರಿಯೆಯಲ್ಲಿ ವಿಜ್ಞಾನಿಗಳನ್ನು ಸೋಜಿಗಕ್ಕೆ ಕೆಡವಿದ್ದು “ಮಿದುಳು ಉತ್ತಮಾಂಗ” ಎನ್ನುವ ಅವರ ತರ್ಕ ನಾಶವಾದದ್ದು. ಸಮಗ್ರ ದೇಹವನ್ನು ತನ್ನ ರಕ್ಷಣೆಗೆ ಬಳಸಿಕೊಳ್ಳುತ್ತದೆ ಎಂದು ನಂಬಲಾಗಿದ್ದ ಮಿದುಳು, ಕಡೆಗೆ ಯಾವುದೋ ಇತರ ಪ್ರಭಾವದಿಂದ ದೇಹದೊಡನೆ ತನ್ನನ್ನೂ ಬಲಿಯಾಗಿಸಿದ್ದು. ವಿಕಾಸದ ಹಾದಿಯಲ್ಲಿ ತನಗಿಂತ ಲಕ್ಷಾಂತರ ವರ್ಷಗಳ ನಂತರ ಬಂದ, ತನಗಿಂತ ಕೋಟಿ ಪಟ್ಟು ದೊಡ್ಡದಾದ ಇಲಿಯನ್ನು ಸ್ವಂತ ಅಸ್ತಿತ್ವವಿಲ್ಲದ, ಬೇರಾವುದೋ ಪ್ರಾಣಿಯನ್ನು ಅವಲಂಬಿಸಿ ಬದುಕುವ ಟೊಕ್ಸೊಪ್ಲಾಸ್ಮ ಗೊಂಡಿ ಎಂಬ ಏಕಾಣು ಪರೋಪಜೀವಿ ತನಗೆ ಬೇಕಾದಂತೆ ಬಳಸಿಕೊಂಡು ಅದನ್ನು ಹತ್ಯೆ ಮಾಡಿದ್ದು. ಹೀಗೆ ಇಲಿಯ ಮಿದುಳನ್ನು ಬಳಸಿಕೊಂಡದ್ದು ಟೊಕ್ಸೊಪ್ಲಾಸ್ಮ ಗೊಂಡಿಯ ಸಂತಾನಕ್ರಿಯೆ ನಡೆಯುವಂತಾಗಿ, ಅದರ ಸಂಖ್ಯೆ ಬೆಳೆಯಲು. ಹಾಗಾದರೆ, ಸಂಖ್ಯೆ ಬೆಳೆಯುವುದು ಮಿದುಳಿನ ಪ್ರಭಾವಕ್ಕಿಂತಲೂ ಮಹತ್ವದ್ದು ಎಂದಾಯಿತು. ಮಿದುಳಿಗಾಗಿಯೇ ದೇಹವಿದೆ ಎನ್ನುವ ತತ್ತ್ವ ಪ್ರಶ್ನಾರ್ಹವಾಯಿತು. ಜೀವಿಯ ಸಂಖ್ಯೆ ಬೆಳೆಸಲು ಮಿದುಳು ನೆರವಾಗುತ್ತದೆ ಎನ್ನುವ ಮಾತು ಹೆಚ್ಚು ಸಮಂಜಸ. ಆದರೆ ಜೀವಿಯ ಸಂಖ್ಯೆ ಬೆಳೆಯುವುದು ಎಂದರೇನು? ಸಂಖ್ಯೆ ಬೆಳೆಯುವುದರ ಮೂಲಕ ಮುಖ್ಯವಾಗಿ ಏನು ಬೆಳೆಯುತ್ತಿದೆ?
ಇದನ್ನೂ ಓದಿ | ವೈದ್ಯ ದರ್ಪಣ ಅಂಕಣ | ಮನುಷ್ಯನ ಆಯಸ್ಸು ಎಷ್ಟು?
ಈ ಪ್ರಶ್ನೆಯನ್ನು ಉತ್ತರಿಸುವ ಮುನ್ನ ಒಂದು ದೃಷ್ಟಿ ಜೀವವಿಕಾಸದೆಡೆಗೆ ಹರಿಸೋಣ. ಜೀವ ಸೃಷ್ಟಿಯಾದದ್ದು ಏಕಕೋಶ ಜೀವಿಗಳಿಂದ. ಇದು ಬಹುಕೋಶ ಜೀವಿಯಾಗಿ ವಿಕಾಸವಾಗಲು ಲಕ್ಷಾಂತರ ವರ್ಷಗಳು ಹಿಡಿದವು. ಮಿದುಳು ಅಂತಿರಲಿ; ನರಕೋಶಗಳು ಕೂಡ ಇಲ್ಲದಿದ್ದ ಏಕಕೋಶ ಜೀವಿಗಳು ಒಂದಾನೊಂದು ಕಾಲದಲ್ಲಿ ಭೂಮಿಯನ್ನು ವ್ಯಾಪಿಸಿದ್ದವು. ಇಂದಿಗೂ ಅವುಗಳ ಅಸ್ತಿತ್ವ ನಿರ್ಬಾಧಿತವಾಗಿ ಉಳಿದಿದೆ. ಅವುಗಳ ಒಂದು ಕೋಶ ವಿದಳನವಾಗಿ ಎರಡಾಗುತ್ತದೆ. ಅಲ್ಲಿಗೆ ಒಂದು ಹಳೆಯ ಏಕಕೋಶ ಜೀವಿಯ ಸ್ಥಾನದಲ್ಲಿ ಎರಡು ಹೊಸ ಏಕಕೋಶ ಜೀವಿಗಳ ಉಗಮವಾಯಿತು. ಸಾವಿನ ಜೊತೆಗೆ ಹೊಸ ಹುಟ್ಟನ್ನು ಕಂಡುಕೊಳ್ಳುತ್ತಾ ಸಂಖ್ಯೆಯಲ್ಲಿ ವೃದ್ಧಿಸುವ ಪ್ರಕ್ರಿಯೆ ಇದು. ಈ ಪ್ರಕ್ರಿಯೆಯ ಸೂತ್ರಧಾರಿ ʼಜೀನ್’ಗಳು. ಜೀನ್ ರಚನೆ ಆಗಿರುವುದು ಆರ್.ಎನ್.ಎ. ಮತ್ತು ಡಿ.ಎನ್.ಎ. ಎನ್ನುವ ರಾಸಾಯನಿಕಗಳಿಂದ. ಹೊಸದಾಗಿ ಹುಟ್ಟಿದ ಕೋಶ ಏನು ಮಾಡಬೇಕು, ಹೇಗೆ ಬೆಳೆಯಬೇಕು, ಯಾವ ಹಂತದಲ್ಲಿ ವಿದಳನವಾಗಬೇಕು ಎನ್ನುವ ಸಮಗ್ರ ಮಾಹಿತಿ ಇರುವುದು ಜೀನ್‌ಗಳಲ್ಲಿ. ಸಂತಾನ ಪ್ರಕ್ರಿಯೆಯ ಮೂಲಕ ವೃದ್ಧಿಸುವುದು ಈ ʼಜೀನ್’ಗಳು. ಒಟ್ಟಾರೆ, ತನ್ನ ಸಂತಾನವನ್ನು ಬೆಳೆಸಬಲ್ಲ ಯಾವುದೇ ಜೀವಕೋಶದ ಆದಿ-ಅಂತ್ಯವನ್ನು ನಿರ್ಧರಿಸುವುದು ಅದರೊಳಗೆ ಅಡಕವಾಗಿರುವ ಜೀನ್‌ಗಳು. ಜೀನ್ ಇಲ್ಲದ ಕೋಶಗಳೂ ಅಸ್ತಿತ್ವದಲ್ಲಿವೆ. ನಮ್ಮ ರಕ್ತದಲ್ಲಿನ ಕೆಂಪು ರಕ್ತಕಣಗಳಲ್ಲಿ ಯಾವುದೇ ಜೀನ್ ಇಲ್ಲ. ಹಾಗಾಗಿ, ಅವುಗಳು ವಿದಳನವಾಗುವುದಿಲ್ಲ. ಆದರೆ, ಕೆಂಪು ರಕ್ತಕಣಗಳ ಹುಟ್ಟಿಗೆ ಕಾರಣವಾಗುವ ಕೋಶಗಳಲ್ಲಿ ಜೀನ್‌ಗಳಿವೆ. ಒಮ್ಮೆ ಜೀನ್‌ಗಳನ್ನು ಕಳೆದುಕೊಂಡ ನಂತರ ಕೆಂಪು ರಕ್ತಕಣಗಳ ಚಲನೆಯನ್ನು, ಅಂತ್ಯವನ್ನು ಬೇರೆ ಅಂಗಗಳು ನಿರ್ಧರಿಸುತ್ತವೆ. ಹೀಗಾಗಿ, ಜೀನ್ ಇಲ್ಲದ ಕೋಶಗಳದ್ದು ಪರೋಕ್ಷ ಅಸ್ತಿತ್ವ ಮಾತ್ರ; ಸಾಯುವ ಸ್ವಾತಂತ್ರ್ಯವೂ ಅವಕ್ಕಿಲ್ಲ! ಅಂದರೆ ಕೋಶವೊಂದರ ಜೀವನ್ಮರಣವನ್ನು ನಿರ್ಧರಿಸುವುದು ಜೀನ್‌ಗಳು ಮತ್ತು ಅವುಗಳು ರಚನೆಯಾಗಿರುವ ಆರ್.ಎನ್.ಎ. ಮತ್ತು ಡಿ.ಎನ್.ಎ. ಎನ್ನುವ ರಾಸಾಯನಿಕಗಳು.
ಏಕಕೋಶ ಜೀವಿಗಳು ಬಹುಕೋಶ ಜೀವಿಗಳಾಗಿ ವಿಕಾಸ ಹೊಂದಿದಾಗ ಕೆಲವು ಬದಲಾವಣೆಗಳಾದವು. ಹಲವಾರು ಜೀವಕೋಶಗಳು ಒಗ್ಗೂಡಿದರೂ ಅವುಗಳು ಏಕಸೂತ್ರದಲ್ಲಿ ಕೆಲಸ ಮಾಡಬೇಕಷ್ಟೇ? ಹೀಗಾಗಿ, ಇವುಗಳ ಪೈಕಿ ಕೆಲವು ಜೀವಕೋಶಗಳ ಸಣ್ಣ ಗುಂಪು ಒಂದು ನಿಯಮಿತ ಕಾರ್ಯಕ್ಕೆ ಸೀಮಿತವಾಯಿತು. ಇಂತಹ ಹಲವಾರು ಗುಂಪುಗಳು ತಂತಮ್ಮ ಕೆಲಸಗಳನ್ನು ಮಾಡುತ್ತಾ ಬಹುಕೋಶ ಜೀವಿಯ ಸರಾಗ ಕಾರ್ಯ ನಿರ್ವಹಣೆಗೆ ನೆರವಾದವು. ಇದೊಂದು ರೀತಿ ಓರ್ವ ವ್ಯಕ್ತಿ ಆರಂಭಿಸಿ, ನಿರ್ವಹಿಸುತ್ತಿದ್ದ ಸಣ್ಣ ಅಂಗಡಿಯೊಂದು ಬೆಳೆದು ವಹಿವಾಟು ಅಧಿಕವಾದಾಗ ಕೆಲಸವನ್ನು ಹಂಚಿಕೊಳ್ಳಲು ಹೆಚ್ಚಿನ ಜನರ ಅಗತ್ಯ ಬಿದ್ದಂತೆ. ಬಹುಕೋಶ ಜೀವಿಗಳ ವಿಕಾಸ ಪ್ರಕ್ರಿಯೆ ಮುಂದುವರೆದು ಪ್ರತಿಯೊಂದು ಕೋಶಗಳ ಗುಂಪೂ ಒಂದೊಂದು ಅಂಗವಾಗಿ ಬದಲಾಯಿತು. ಒಂದು ರೀತಿಯಲ್ಲಿ ಅಂಗಡಿಯ ವಹಿವಾಟು ಹೆಚ್ಚಾಗಿ ಅದರ ನಾಲ್ಕೈದು ಶಾಖೆಗಳು ವಿವಿಧೆಡೆ ಆರಂಭವಾದಂತೆ. ಬಹುಕೋಶ ಜೀವಿಗಳಲ್ಲಿನ ಅಂಗಗಳ ಸಂಕೀರ್ಣತೆ ಹೆಚ್ಚುತ್ತಾ ಬಂದಂತೆ ಅವುಗಳ ಪರಸ್ಪರ ಸಹಕಾರವನ್ನು ಮೇಲ್ವಿಚಾರಣೆ ಮಾಡಬಲ್ಲ ನಿಯಂತ್ರಕ ಅಂಗವೊಂದರ ಅಗತ್ಯ ಕಂಡು ಬಂದಿತು. ಈ ಅಂಗವೇ ಮಿದುಳು. ಹೋಲಿಕೆಯಲ್ಲಿ ಹೇಳುವುದಾದರೆ, ಅಂಗಡಿಯ ಶಾಖೆಗಳು ಸೂಪರ್ ಮಾರ್ಕೆಟ್ಟುಗಳಾಗಿ ಬದಲಾಗಿ, ಹಲವಾರು ನಗರಗಳಲ್ಲಿ ವ್ಯಾಪಿಸಿದಾಗ ಅವುಗಳ ಸಮಗ್ರ ನಿರ್ವಹಣೆಗೆ ಒಂದೆಡೆ ಕೇಂದ್ರ ಕಛೇರಿ ತೆರೆಯುವಂತೆ. ಅಂದರೆ, ಮಿದುಳು ಎನ್ನುವುದು ವ್ಯವಸ್ಥೆಯ ಮೇಲ್ವಿಚಾರಕನೇ ಹೊರತು ಮಾಲೀಕನಲ್ಲ. ಹೊರನೋಟಕ್ಕೆ ನೋಡುವವರಿಗೆ ಈ ಮೇಲ್ವಿಚಾರಕ ಇಡೀ ವ್ಯವಸ್ಥೆಯ ಹತೋಟಿಯನ್ನು ತನ್ನ ಹಿಡಿತದಲ್ಲಿ ಇಟ್ಟಿದ್ದಾನೆ ಎನ್ನಿಸುತ್ತದೆ. ಆತ ದಿನನಿತ್ಯದ ವ್ಯವಹಾರಗಳ ಮೇಲೆ ತನ್ನ ತೀರ್ಮಾನ ನೀಡುವಾಗ ಆತನೇ ಮಾಲೀಕ ಎನಿಸಿದರೂ ಅಚ್ಚರಿಯಲ್ಲ. ಆದರೆ, ಅದು ನೋಡುಗರ ತಪ್ಪು ಗ್ರಹಿಕೆ ಮಾತ್ರ. ಕಣ್ಣಿಗೆ ಕಾಣದ ಮಾಲೀಕ ವ್ಯವಸ್ಥೆಯ ಪ್ರತಿಯೊಂದು ಅಂಶದಲ್ಲೂ ಅಂತರ್ಗತನಾಗಿರುತ್ತಾನೆ. ಹೀಗೆಯೇ, ಮೇಲ್ನೋಟಕ್ಕೆ ಮಿದುಳಿನ ಸಾರ್ವಭೌಮತ್ವ ಗಣನೀಯವೆನಿಸಿದರೂ, ಇಡೀ ಶರೀರವನ್ನು ನಿಯಂತ್ರಿಸುವುದು ಜೀನ್‌ಗಳು ಮತ್ತು ಅವುಗಳು ರಚನೆಯಾಗಿರುವ ಆರ್.ಎನ್.ಎ. ಮತ್ತು ಡಿ.ಎನ್.ಎ. ಎನ್ನುವ ರಾಸಾಯನಿಕಗಳು.
ಇದನ್ನೂ ಓದಿ | ವೈದ್ಯ ದರ್ಪಣ ಅಂಕಣ | ರೊಬೊಟ್ ಇಲಿಗಳು, ಕೃತಕ ಕಣ್ಣು, ಸಿಂಗ್ಯುಲಾರಿಟಿ ಇತ್ಯಾದಿ…
ಯಾರು ನಿಯಂತ್ರಿಸಿದರೆ ಏನು? ಒಟ್ಟಿನಲ್ಲಿ ಇಡೀ ವ್ಯವಸ್ಥೆ ನಿರಾತಂಕವಾಗಿ ಕೆಲಸ ಮಾಡಬೇಕು ತಾನೆ? ಅದು ಜೀನ್ ಆದರೇನು ಅಥವಾ ಮಿದುಳಾದರೇನು? ಈ ಗ್ರಹಿಕೆ ಕೆಲಸ ಸರಿಯಾಗಿ ನಡೆಯುತ್ತಾ ಇರುವವರೆಗೆ ಸರಿ. ಆದರೆ, ವ್ಯವಸ್ಥೆ ಕೆಟ್ಟಾಗ, ವ್ಯವಸ್ಥೆಯಲ್ಲಿ ಉನ್ನತಿ ಆಗಬೇಕಾದಾಗ, ಆಮೂಲಾಗ್ರ ಬದಲಾವಣೆಗಳ ಅಗತ್ಯ ಕಂಡುಬಂದಾಗ ಅಂತಿಮ ನಿರ್ಧಾರ ಯಾರದ್ದು ಎನ್ನುವ ಬಗ್ಗೆ ಜಿಜ್ಞಾಸೆ ಮೂಡುತ್ತದೆ. ಹೀಗಾಗಿ, ಯಾವುದೇ ವ್ಯವಸ್ಥೆಯ ಮಾಲೀಕತ್ವದ ಪರಿಕಲ್ಪನೆ ಸ್ಪಷ್ಟವಾಗಿರಬೇಕು. ಭವಿಷ್ಯದ ಔಷಧಗಳ ತಯಾರಿಕೆಯಲ್ಲಾಗಲೀ, ಸದ್ಯಕ್ಕೆ ಚಿಕಿತ್ಸೆ ತಿಳಿದಿಲ್ಲದ ಕಾಯಿಲೆಗಳನ್ನು ಗುಣಪಡಿಸುವ ನಿಟ್ಟಿನಲ್ಲಾಗಲೀ, ಅಂಗಗಳ ಕಸಿ ಮಾಡುವ ಪ್ರಕ್ರಿಯೆಯಲ್ಲಾಗಲೀ, ನಿರ್ವಹಣೆಯ ಮಟ್ಟದಲ್ಲಿ ಸೂಕ್ಷ್ಮ ಬದಲಾವಣೆಗಳನ್ನು ನಿರ್ಧರಿಸುವುದರಲ್ಲಾಗಲೀ, ಅಥವಾ ಬೇರ್ಯಾವುದೇ ಕ್ರಾಂತಿಕಾರಕ ಎನ್ನಬಹುದಾದ ಮಾರ್ಪಾಡುಗಳಲ್ಲಾಗಲೀ ವಿಜ್ಞಾನಿಗಳು ಕೇವಲ ಮಿದುಳಿನ ಮೊರೆ ಹೋಗಲಾಗದು. ಅದನ್ನು ಜೀನ್ ಮಟ್ಟದಲ್ಲಿ ನಿರ್ವಹಿಸಬೇಕು.
ಒಟ್ಟಿನಲ್ಲಿ, ನಮ್ಮ ಶರೀರವನ್ನು ನಿಯಂತ್ರಿಸುವುದು ಯಾರು ಎಂಬ ಪ್ರಶ್ನೆಗೆ ಉತ್ತರ ದೊರೆತಂತಾಯಿತು!
(ಲೇಖಕರು ವೈದ್ಯರು, ವಿಜ್ಞಾನ ಬರಹಗಾರರು)