| ಮಾರುತಿ ಪಾವಗಡ
ಲೋಕಸಭೆ ಚುನಾವಣೆಗೆ ಬಿಜೆಪಿ (BJP) ಮತ್ತು ಜೆಡಿಎಸ್ (JDS) ಪಕ್ಷಗಳು ಕಾಂಗ್ರೆಸ್ (Congress Party) ವಿರುದ್ಧ ಜಂಟಿ ಹೋರಾಟಕ್ಕೆ ವೇದಿಕೆ ಸಿದ್ಧ ಮಾಡಿವೆ. ದೆಹಲಿಯಲ್ಲಿ ಆದ ಮಾತುಕತೆಯಂತೆ ಕಾವೇರಿ ವಿಚಾರದಲ್ಲಿ (Cauvery Dispute) ಸರ್ಕಾರದ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ ಅಧಿಕೃತವಾಗಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ʼರಾಜಕೀಯ ಮದುವೆʼಯ ಹಾರ ಬದಲಿಸಿಕೊಂಡಿದ್ದಾರೆ. ಇತ್ತ ಈ ನಡೆ ಕಾಂಗ್ರೆಸ್ ನಾಯಕರಿಗೆ ಇನ್ನಷ್ಟು ಚುರುಕಾಗಲು ಕಾರಣವಾಗಿದೆ. ಈ ನಡುವೆ ಶ್ಯಾಮನೂರು ಶಿವಶಂಕರಪ್ಪ ಆಡಿದ ಒಂದು ಮಾತು ಸಿದ್ದರಾಮಯ್ಯ ಅವರ ನಿದ್ದೆಗೆಡಿಸಿದೆ. ಈ ಬೆಳವಣಿಗೆ ನೋಡಿದ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಮೋದಿ ಫಾರ್ಮುಲಾ ಬೇಕು ಎಂದಿದ್ದಾರೆ.
ರಾಜ್ಯ ಕಾಂಗ್ರೆಸ್‌ಗೆ ಮೈತ್ರಿ ಭಯ
ರಾಜ್ಯದಲ್ಲಿ ಸದ್ಯ ಕಾಂಗ್ರೆಸ್ ಪಕ್ಷವು ಸಂಘಟನೆಯಲ್ಲಿ ಬಿಜೆಪಿ, ಜೆಡಿಎಸ್‌ಗಿಂತ ಮುಂದೆ ಇದೆ. ಕಳೆದ ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ವಿರುದ್ಧ ಗೆದ್ದು ಬೀಗಿದ್ದ ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಹೆಚ್ಚು ಸ್ಥಾನ ಗೆಲ್ಲಲೇಬೇಕೆಂದು ಹೈಕಮಾಂಡ್ ಟಾಸ್ಕ್ ನೀಡಿದೆ. ಆದರೆ ಈ ನಡುವೆ ಮೈತ್ರಿ ಪಾಲಿಟಿಕ್ಸ್ ಸಿದ್ದರಾಮಯ್ಯ ಮತ್ತು ಡಿಕೆಶಿಯವರ ನಿದ್ದೆಗೆಡಿಸಿದ್ದು, ಅವರು ಆಪರೇಷನ್ ಹಸ್ತದ ಮೂಲಕ ಚೆಕ್ಮೆಟ್ ಕೊಡಲು ಮುಂದಾಗಿದ್ದಾರೆ. ಕಳೆದ ವಾರ ಆರ್ ಆಶೋಕ್ ಕ್ಷೇತ್ರದ ಕಾರ್ಯಕರ್ತರನ್ನು ಆಪರೇಷನ್ ಮಾಡಿದ್ದ ಡಿಕೆಶಿಗೆ ಆಶೋಕ್ ರಿವರ್ಸ್ ಆಪರೇಷನ್ ಮಾಡಿದ್ದು ಡಿಕೆ ಬ್ರದರ್ಸ್ ಗೆ ಭಾರಿ ಹಿನ್ನಡೆ ಆಗಿದೆ.
ಲಿಂಗಾಯತ ಸಿಎಂ ಕೂಗು ಎಬ್ಬಿಸಿದ ಶ್ಯಾಮನೂರು
ಡಿಸಿಎಂ ಹುದ್ದೆ ಕೂಗಿನಿಂದ ಹೊರ ಬರುವ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಗೆ ಮತ್ತೊಂದು ತಲೆನೋವು ಶುರುವಾಗಿದೆ. ಕಾಂಗ್ರೆಸ್ ನ ಹಿರಿಯ ನಾಯಕ ಶ್ಯಾಮನೂರು ಶಿವಶಂಕರಪ್ಪ ಕೊಟ್ಟ ಒಂದು ಹೇಳಿಕೆ ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ. ಲಿಂಗಾಯತ ಸಿಎಂ ವಿಚಾರ ಮುನ್ನೆಲೆಗೆ ತಂದು ಹೈಕಮಾಂಡ್‌ಗೆ ದೊಡ್ಡ ತಲೆನೋವು ತರಿಸಿದ್ದಾರೆ. ಈ ಹೇಳಿಕೆ ಕೇಳಿಸಿಕೊಂಡ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ನಮ್ಮಲ್ಲೂ ಬಿಜೆಪಿ 70@ ರಿಟೈರ್ಮೆಂಟ್ ಫಾರ್ಮುಲಾ ಬೇಕು ಎಂದಿದ್ದಾರಂತೆ.
ಅನಾಥ ಮಗುವಾದ ಇಬ್ರಾಹಿಂ
ಸಿ ಎಂ ಇಬ್ರಾಹಿಂ ಸದಾ ಹಾಸ್ಯ ಮಾಡುವ ರಾಜಕಾರಣಿ. ಆದರೆ ಈಗ ಅವರ ರಾಜಕೀಯ ಜೀವನವೇ ಒಂದು ಹಾಸ್ಯ ತುಣುಕಾಗುತ್ತಿದೆ. ಯಾಕೆಂದರೆ ವರ್ಷದ ಹಿಂದೆಯಷ್ಟೆ ಸಿ.ಎಂ ಇಬ್ರಾಹಿಂ ಕಾಂಗ್ರೆಸ್ ಬಿಡುವ ಮನಸ್ಸು ಮಾಡಿದಾಗ ಸ್ವತಃ ಸಿದ್ದರಾಮಯ್ಯ ವಿಧಾನಸೌಧ ಮೊಗಸಾಲೆಯಲ್ಲಿ ಕೂರಿಸಿ, ಯಾವುದೇ ಕಾರಣಕ್ಕೂ ಪಕ್ಷ ಬಿಡಬೇಡ ಎಂದು ಸಲಹೆ ನೀಡಿದ್ದರು. ಮಾಧ್ಯಮಗಳ ಮುಂದೆ ಅದೇ ಸಲಹೆಯನ್ನ ಅಷ್ಟೇ ಹಾಸ್ಯಭರಿತವಾಗಿ ಇಬ್ರಾಹಿಂ ತಿರಸ್ಕರಿಸಿದ್ದರು. ಆದರೆ ಈಗ ಬಿಜೆಪಿ – ಜೆಡಿಎಸ್ ಮೈತ್ರಿಯಿಂದ ಬೇಸರಿಸಿಕೊಂಡು ಅತಂತ್ರ ಸ್ಥಿತಿಗೆ ತಲುಪಿದ್ದಾರೆ.
ಈ ಅಂಕಣವನ್ನು ಓದಿ: ವಿಧಾನಸೌಧ ರೌಂಡ್ಸ್: ಜೆಡಿಎಸ್‌ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ; ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ?
ಆರ್ ಆರ್ ನಗರದಲ್ಲಿ ಕುಸುಮಾ ಆರ್ಭಟ
ಕುಸುಮಾ ಈ ಬಾರಿ ಮಾಜಿ ಸಚಿವ ಮುನಿರತ್ನ ವಿರುದ್ಧ ಸೋತರು. ಆದರೆ ಕ್ಷೇತ್ರದಲ್ಲಿ ಖಡಕ್ ಆಗಿ ಅಧಿಕಾರ ಚಲಾಯಿಸುತ್ತಿದ್ದಾರಂತೆ. ಬಿಬಿಎಂಪಿ, ಪೊಲೀಸ್ ಠಾಣೆಯಿಂದ ವಿಧಾನಸೌಧದವರೆಗೂ ನಾವು ಕುಸುಮಾ ಕಡೆಯವರು ಅನ್ನೋ ಮಾತು ಜಾಸ್ತಿ ಕೇಳಿ ಬರ್ತಿದೆ. ಲೋಕಸಭಾ ಚುನಾವಣೆಗೆ ಗ್ರಾಮಾಂತರದಲ್ಲಿ ಅಭ್ಯರ್ಥಿ ಮಾಡಬೇಕು ಅನ್ನೋ ಚರ್ಚೆ ಡಿಕೆಶಿ ಪಟಾಲಂಲ್ಲಿ ಭಾರಿ ಕೇಳಿ ಬರುತ್ತಿದೆ. ಒಂದು ವೇಳೆ ಗ್ರಾಮಾಂತರದಲ್ಲಿ ಅಭ್ಯರ್ಥಿ ಆಗಿ ಗೆದ್ದು ಬಿಟ್ಟರೆ ಮುನಿರತ್ನಗೆ ಇನ್ನಷ್ಟು ಕಷ್ಟ ತಪ್ಪಿದ್ದಲ್ಲ!