| ಮಾರುತಿ ಪಾವಗಡ
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ (Congress Government) ಗ್ಯಾರಂಟಿ ಅನುಷ್ಠಾನದ ಸಂಕಷ್ಟ ಶುರುವಾಗಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಸೇರಿದಂತೆ ಕಾಂಗ್ರೆಸ್ ಮುಖಂಡರು ʼನುಡಿದಂತೆ ನಡೆದಿದ್ದೇವೆʼ ಅನ್ನೋ ಬಹಿರಂಗ ಹೇಳಿಕೆ ಕೊಟ್ಟರೂ ಅಭಿವೃದ್ಧಿ ಯೋಜನೆಗಳಿಗೆ ಅನುದಾನದ ತೀವ್ರ ಕೊರತೆ ಉಂಟಾಗಿದೆ. ಮೂಲಭೂತ ಸೌಕರ್ಯಗಳ ಕೆಲಸಕ್ಕೂ ಹಣಕಾಸಿನ ಕೊರತೆ ಆಗುತ್ತಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಇನ್ನು, ಐದು ತಿಂಗಳ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ವಿಪಕ್ಷ ನಾಯಕರ ಕಾಟ ಇಲ್ಲದಿದ್ದರೂ ಸ್ವಪಕ್ಷ ನಾಯಕರ ಕಾಟವೇ ಹೆಚ್ಚಾಗಿದೆ. ಸಿದ್ದರಾಮಯ್ಯ ವಿರುದ್ಧ ಬಿ ಕೆ ಹರಿಪ್ರಸಾದ್ (B K Hariprasad) ಬಳಿಕ ಈಗ ಶ್ಯಾಮನೂರು ಶಿವಶಂಕರಪ್ಪ (Shamanuru Shivashankarappa) ಅವರ ಲಿಂಗಾಯತ ಕಡೆಗಣನೆ ಹೇಳಿಕೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮತ್ತೊಂದೆಡೆ, ರಾಜ್ಯ ಬಿಜೆಪಿಯಲ್ಲಿ (Opposition pary BJP)ವಿಪಕ್ಷ ನಾಯಕರನ್ನು ನೇಮಕ ಮಾಡದ ವರಿಷ್ಠರ ವಿರುದ್ಧ ಅಪಸ್ವರ ಶುರುವಾಗಿದೆ. ಐದು ತಿಂಗಳ ಬಳಿಕ ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿಡುಗಡೆಯಾದ ಬಿಲ್‌ನಲ್ಲಿ ಆರ್ ಆರ್ ನಗರವನ್ನು ಸೇರಿಸದೇ ಡಿ ಕೆ ಬ್ರದರ್ಸ್ ಮುನಿರತ್ನಗೆ ಕಿರಿಕಿರಿ ಮುಂದುವರಿಸಿದ್ದಾರೆ(Vidhana Soudha Rounds).
ಸಿದ್ದರಾಮಯ್ಯಗೆ ಸ್ವಪಕ್ಷೀಯರದೇ ಕಾಟ
2004ರಿಂದಲೂ ಲಿಂಗಾಯತ ಸಮುದಾಯ ಬಹುತೇಕ ಬಿಜೆಪಿ ಪರ ಮತ ಚಲಾಯಿಸಿದೆ. ಆದರೆ ಈ ಬಾರಿ ರಾಷ್ಟ್ರೀಯ ಬಿಜೆಪಿ ನಾಯಕರು ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರ ಪರಿಣಾಮ ಸಮುದಾಯದ ಮತಗಳು ಈ ಬಾರಿ ಕಾಂಗ್ರೆಸ್ ಕಡೆ ಹೋದವು. ಇದರ ಪರಿಣಾಮವಾಗಿ 28ಕ್ಕೂ ಅಧಿಕ ಲಿಂಗಾಯತ ಶಾಸಕರು ಈ ಬಾರಿ ಗೆದ್ದು ಬಂದು ಕಾಂಗ್ರೆಸ್ ಸರ್ಕಾರ ರಚನೆ ಮಾಡಲು ಕಾರಣವಾಯಿತು. ಆದರೆ ಸರ್ಕಾರ ರಚನೆ ಆದ ಬಳಿಕ ಲಿಂಗಾಯತ ಆಡಳಿತ ವರ್ಗವನ್ನ ಕಡೆಗಣಿಸುವ ಕೆಲಸ ಆಗ್ತಿದೆ ಅನ್ನೋ ಶಾಮನೂರು ಶಿವಶಂಕರಪ್ಪ ಹೇಳಿಕೆ ಪಕ್ಷದ ಸಂಘಟನೆಗೆ ಹಾಗೂ ಸರ್ಕಾರದ ವರ್ಚಸ್ಸಿಗೆ ಪೆಟ್ಟು ಕೊಟ್ಟಿದೆ. ಎಚ್ಚೆತ್ತುಕೊಂಡ ಸಿಎಂ ಸಿದ್ದರಾಮಯ್ಯ ಅವರು ಶಾಮನೂರು ಅವರನ್ನು ಕರೆದು ಮಾತುಕತೆಗೆ ಮುಂದಾಗಿದ್ದಾರೆ
ವಿಧಾನಸೌಧದಲ್ಲಿ ಜಾತಿಯದ್ದೇ ಸದ್ದು!
ವಿಧಾನಸೌಧಕ್ಕೆ ಬರಲು ಜಾತಿ ಸಪೋರ್ಟ್ ಈಗ ಅನಿವಾರ್ಯ. ಆದರೆ ಈ ಜಾತಿ ಆರ್ಭಟ ಜಾಸ್ತಿಯಾಗಿ ಸಾರ್ವಜನಿಕ ಹಿತಾಸಕ್ತಿ ಮಾಯವಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಆದಿಯಾಗಿ ಬಹುತೇಕ ಸಚಿವರು ಮತ್ತು ಶಾಸಕರು ತಮ್ಮ ಸಮುದಾಯದವರನ್ನು ತಮ್ಮ ಸುತ್ತ ಇಟ್ಟುಕೊಂಡಿರುವುದು ಚರ್ಚೆಗೆ ಕಾರಣವಾಗಿದೆ. ಹಾಗೆ ನೋಡಿದ್ರೆ ಸಿದ್ದರಾಮಯ್ಯ ಕಾಲದಲ್ಲಿ ಅಷ್ಟೇ ಅಲ್ಲ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಕಾಲದಲ್ಲೂ ಈ ಕೆಟ್ಟ ಪರಂಪರೆ ಮುಂದುವರಿದಿದೆ. ಸ್ವತಃ ಶಾಮನೂರು ಶಿವಶಂಕರಪ್ಪ ಅವರೇ ತಮ್ಮ ಸುತ್ತ ಬರೀ ಲಿಂಗಾಯತರನ್ನೇ ಇಟ್ಟುಕೊಂಡಿದ್ದಾರಲ್ಲ ಎಂಬ ಪ್ರಶ್ನೆ ಎದ್ದಿದೆ.
ಮುನಿರತ್ನಗೆ ಡಿಕೆಶಿ ಕಿರಿಕಿರಿ ತಪ್ಪಲಿಲ್ಲ
ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕಾದರೆ ಅನುದಾನ ಬಿಡುಗಡೆ ಆಗುತ್ತ ಇರಬೇಕು. ಆದರೆ ಈ ಸರ್ಕಾರ ಬಂದ ಬಳಿಕ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳಿಗೆ ಸುಮಾರು 720 ಕೋಟಿ ರೂ. ಬಿಡುಗಡೆ ಆಗಿದೆ. ಆದ್ರೆ ಆರ್ ಆರ್ ನಗರ ಕ್ಷೇತ್ರದ ಬಿಲ್ ಪಾವತಿಸದೇ ಪೆಂಡಿಂಗ್ ಇಟ್ಟಿರುವುದರ ಹಿಂದೆ ಮುನಿರತ್ನ ವಿರುದ್ಧ ಸೋತ ಕುಸುಮಾ ಕೈವಾಡ ಇದೆ ಎನ್ನಲಾಗುತ್ತಿದೆ. ಡಿಕೆಶಿ ಮತ್ತು ಮುನಿರತ್ನ ನಡುವಿನ ಗುದ್ದಾಟದಿಂದ ಆರ್ ಆರ್ ನಗರದ ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬೀಳುವಂತಾಗಿದೆ.
ಈ ಅಂಕಣವನ್ನೂ ಓದಿ: ವಿಧಾನಸೌಧ ರೌಂಡ್ಸ್: ಸಿದ್ದು-ಡಿಕೆಶಿಗೆ ಬಿಜೆಪಿ-ಜೆಡಿಎಸ್ ಮೈತ್ರಿ ಸಂಕಟ, ಲಿಂಗಾಯತ ಸಿಎಂ ಕಂಪನ!
ನೈಸ್ ಕೇಸ್ ರಿಓಪನ್ ಮಾಡಲು ಸರ್ಕಾರದ ಹಿಂದೇಟು
ನೈಸ್ ಸಂಸ್ಥೆಯು ರಸ್ತೆ ನಿರ್ಮಾಣ ವಿಚಾರದಲ್ಲಿ ಸರ್ಕಾರದ ಜತೆ ಮಾಡಿಕೊಂಡ ಒಡಂಬಡಿಕೆ ಮುರಿದಿದ್ದರೂ ಸರ್ಕಾರ ಚಕಾರ ಎತ್ತುತ್ತಿಲ್ಲ. 2013-18ರ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಸದನ ಸಮಿತಿ ರಚನೆ ಮಾಡಿ ಜಯಚಂದ್ರ ಕೊಟ್ಟ ರಿಪೋರ್ಟ್ ಅನುಷ್ಠಾನ ಮಾಡಲು ಸಿದ್ದರಾಮಯ್ಯ ಸರ್ಕಾರ ಸಹ ಹಿಂದೇಟು ಹಾಕಿದೆ. ಈ ಹಿಂದೆ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಬಳಿಕ ಬಿಜೆಪಿ ಸರ್ಕಾರ ಸಹ ಇದನ್ನ ಅನುಷ್ಠಾನ ಮಾಡಲು ಮುಂದೆ ಹೋಗಿರಲಿಲ್ಲ. ಹೀಗಾಗಿ ಇದರ ಲಾಭ ಪಡೆಯಲು ವಿಪಕ್ಷದಲ್ಲಿ ಇರೋ ಬಿಜೆಪಿ, ಜೆಡಿಎಸ್ ಧ್ವನಿ ಎತ್ತಲು ಮುಂದಾಗಿವೆ. ಆದರೆ ವಿಪಕ್ಷ ಸ್ಥಾನದಲ್ಲಿ ಇದ್ದಾಗ ಆರ್ಭಟ ಮಾಡಿ, ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೌನ ವಹಿಸುತ್ತಿದ್ದಾರೆ. ಈ ಮೂಲಕ ನೈಸ್ ಅಕ್ರಮದಲ್ಲಿ ಮೂರೂ ಪಕ್ಷಗಳ ನಾಯಕರ ಸಾಥ್ ಇರೋದು ಬಹಿರಂಗಗೊಂಡಿದೆ.
ಮೋದಿ, ಶಾ ವಿರುದ್ಧ ರಾಜ್ಯ ಬಿಜೆಪಿ ಕೆಂಡಾಮಂಡಲ
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿರುವುದು ಈಗ ಇತಿಹಾಸ. ಆದರೆ ಬಿಜೆಪಿ ಹೈಕಮಾಂಡ್ ಈ ಸೋಲನ್ನು ಅರಗಿಸಿಕೊಳ್ಳಲು ಇನ್ನೂ ಸಿದ್ಧವಿಲ್ಲ. ರಾಜ್ಯ ವಿಪಕ್ಷ ನಾಯಕರ ನೇಮಕ ಮಾಡುವ ವಿಚಾರದಲ್ಲಿ ಇನ್ನಷ್ಟು ತಡ ಮಾಡಿ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆ! ಕೈಕೈ ಹಿಸುಕಿಕೊಳ್ಳುವುದನ್ನು ಬಿಟ್ಟರೆ ರಾಜ್ಯ ಬಿಜೆಪಿ ನಾಯಕರಿಗೆ ಸದ್ಯ ಬೇರೆ ದಾರಿ ಇಲ್ಲ!