Site icon Vistara News

ವಿಧಾನಸೌಧ ರೌಂಡ್ಸ್‌: ಕಂಬಳದಲ್ಲಿ ಡಿಕೆಶಿ ಕೋಣ! ವಿಜಯೇಂದ್ರ ಆಯ್ಕೆಯಾಗುತ್ತಿದ್ದಂತೆ ತಣ್ಣಗಾದ ಕಾಂಗ್ರೆಸ್‌ ಕದನ!

Vidhana Soudha Rounds column, BY Vijayendra appointed as BJP state president and Congress dissent minimized

-ಮಾರುತಿ ಪಾವಗಡ
ಕಡಲ ತೀರದ ಊರುಗಳಲ್ಲಿ ನಡೆಯುತ್ತಿದ್ದ ಕಂಬಳ (Kambal Sport) ಈಗ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಭುತವಾಗಿ ನಡೆಯುತ್ತಿದೆ. ಬೆಂಗಳೂರಿನ ಜನ ಕಂಬಳ ನೋಡಲು ಮುಗಿಬಿದ್ದಿದ್ದಾರೆ. ಅಷ್ಟೇ ಚೆನ್ನಾಗಿ ಆಯೋಜಕರು ವ್ಯವಸ್ಥೆ ಮಾಡಿದ್ದಾರೆ. ಈ ನಡುವೆ ಕಂಬಳಕ್ಕೆ ನಾ ಮುಂದು ತಾ ಮುಂದು ಎಂಬಂತೆ ರಾಷ್ಟ್ರೀಯ ಪಕ್ಷಗಳ ನಾಯಕರು ಬೆಂಬಲ ನೀಡಿದ್ದಾರೆ. ಈ ನಡುವೆ ಡಿ ಕೆ ಶಿವಕುಮಾರ್ (DK Shivakumar) ಕೂಡ ಒಂದು ಜತೆ ಕೋಣ ಕಟ್ಟಿದ್ದಾರೆ ಅನ್ನೋದು ಭಾರಿ ಚರ್ಚೆ ಆಗುತ್ತಿದೆ. ಇತ್ತ ಸಿದ್ದರಾಮಯ್ಯ (CM Siddaramaiah) – ಡಿಕೆಶಿ ನಡುವೆ ರಾಜಕೀಯ ಸಂಬಂಧ ಸುಧಾರಿಸುತ್ತಿರುವುದು ಬಿಜೆಪಿಗರ (BJP Party) ನಿದ್ದೆಗೆಡಿಸಿದೆ. ಡಿಕೆಶಿ ಮೇಲಿನ ಸಿಬಿಐ ಕೇಸ್ (CBI Case) ವಾಪಸು ಪಡೆದಿದ್ದು ಬಿಜೆಪಿ, ಜೆಡಿಎಸ್‌ಗೆ ಪ್ರಮುಖ ಅಸ್ತ್ರವಾಗಿದೆ. ಇನ್ನು ಜಾತಿಗಣತಿ ವರದಿ ಕಳೆದು ಹೋಗಿದೆ ಅಂತಿರುವ ಸರ್ಕಾರ ಅದೇ ವರದಿ ಆಧರಿಸಿ ರೆಡಿ ಮಾಡಿದ ಭಕ್ತ ವತ್ಸಲ ಕಮಿಟಿ ರಿಪೋರ್ಟ್ ಅಂಗೀಕಾರ ಮಾಡಿದ್ದು ಹೇಗೆ ಅನ್ನೋ ಸಂಶಯ ಕಾಡುತ್ತಿದೆ(Vidhana Soudha Rounds).

ಬೆಂಗಳೂರಲ್ಲಿ ಅಭೂತಪೂರ್ವ ಕಂಬಳ

ಕರಾವಳಿಗೆ ಸೀಮಿತವಾಗಿದ್ದ ಕಂಬಳ ಕ್ರೀಡೆಯನ್ನು ರಾಜ್ಯ ರಾಜಧಾನಿ ಬೆಂಗಳೂರಿನವರಿಗೂ ತಂದಿದ್ದು ಅಚ್ಚರಿಯ ಬೆಳವಣಿಗೆ. ಎರಡು ದಿನ ನಡೆದ ಕಂಬಳ ಕ್ರೀಡೆಯಲ್ಲಿ 200ಕ್ಕೂ ಅಧಿಕ ಕೋಣಗಳು ಭಾಗವಹಿಸಿದ್ದು ವಿಶೇಷ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಸೇರಿದಂತೆ ಮೂರೂ ಪಕ್ಷಗಳ ನಾಯಕರು ಇದನ್ನು ಕಣ್ತುಂಬಿಕೊಂಡಿದ್ದು ಗಮನ ಸೆಳೆಯಿತು. ಹಿರಿಯ ಕಾಂಗ್ರೆಸಿಗರೊಬ್ಬರು ವ್ಯಂಗ್ಯದ ಧಾಟಿಯಲ್ಲಿ ಹೀಗೆಂದರು: ಬೆಂಗಳೂರಿಗೆ ಕರಾವಳಿಯಿಂದ ಕಂಬಳದ ಕೋಣಗಳನ್ನು ತಂದಿದ್ದು ಸರಿ. ಆದರೆ ಅಲ್ಲಿಯ ಕೋಮುವಾದವನ್ನು ಇಲ್ಲಿಗೆ ತರದಿದ್ದರೆ ಸಾಕು.

ಕಂಬಳದಲ್ಲಿ ಕೋಣ ಕಟ್ಟಿದ್ರಾ ಡಿ ಕೆ ಶಿವಕುಮಾರ್?

ಕಂಬಳ ಆಯೋಜನೆ ಟೀಮ್ ನಲ್ಲಿ ಇರೋ ಒಬ್ಬ ವ್ಯಕ್ತಿ ಡಿ ಕೆ ಶಿವಕುಮಾರ್ ಅತ್ಯಾಪ್ತರು. ಕಳೆದ ಒಂದು ತಿಂಗಳಿಂದ ತಯಾರಿ ನೋಡಿದ ಡಿ ಕೆ ಶಿವಕುಮಾರ್, ನನ್ನ ಹೆಸರಲ್ಲಿ ಒಂದು ಜೋಡಿ ಕೋಣ ಇರಲಿ ಎಂದು ಖರೀದಿ ಮಾಡಿದರಂತೆ. ಅಲ್ಲದೇ ಆ ಕೋಣ ಜೋಡಿ ಗೆಲ್ಲುವ ಜೋಡಿ ಆಗಬೇಕು ಅಂತ ಟಾಸ್ಕ್ ಕೊಟ್ಟಿದ್ದಾರಂತೆ. ವಿಧಾನಸೌಧದ ಕೆಂಗಲ್ ಗೇಟ್ ಬಳಿ ಸಿಕ್ಕಿದ್ದ ಡಿಕೆಶಿ ಆಪ್ತರೊಬ್ಬರು “”ನಮಗೆ ನಮ್ಮ ಸಾಹೇಬರು ಕೋಣ ಓಡಿಸೋ ಟಾಸ್ಕ್ ಕೊಟ್ಟಿದ್ದಾರೆ ಗುರು. ಅವರ ಕೋಣಗಳು ಹೇಗೆ ಓಡುತ್ತೆ ನೋಡಬೇಕುʼʼ ಎಂದು ಟೆನ್ಞನ್‌ನಲ್ಲೇ ಹೇಳಿದರು.

ಸಿದ್ದರಾಮಯ್ಯ ರಾಜಿಯಾದ್ರಾ?:

ಡಿ ಕೆ ಶಿವಕುಮಾರ್ ಮೇಲೆ ಇದ್ದ ಸಿಬಿಐ ಪ್ರಕರಣವನ್ನು ರಾಜ್ಯ ತನಿಖಾ ಸಂಸ್ಥೆಗೆ ವಾಪಸ್‌ ಪಡೆಯುವ ಕ್ಯಾಬಿನೆಟ್ ನಿರ್ಧಾರದ ಬಳಿಕ ಇಂತಹ ಅನುಮಾನ ಸಿದ್ದರಾಮಯ್ಯ ಮೇಲೆ ರಾಜ್ಯಾದ್ಯಂತ ವ್ಯಕ್ತವಾಗಿದೆ. ಸಿದ್ದರಾಮಯ್ಯ ಕೆಲ ವಿಚಾರಗಳಲ್ಲಿ ಭಾರಿ ಕಡಕ್. ಯಾರು ಹೇಳಿದರೂ ಕೇಳಲ್ಲ. ಅದ್ರಲ್ಲೂ ಕಾನೂನು ವಿಚಾರದಲ್ಲಿ ಅಳೆದುತೂಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ ಡಿ ಕೆ ಶಿವಕುಮಾರ್ ಮೇಲಿನ ಕೇಸ್ ಸಿಬಿಐ ಸಂಸ್ಥೆಯ ತನಿಖೆಯಿಂದ ಹಿಂಪಡೆಯುವ ನಿರ್ಧಾರ ಮಾಡಿದ ಮೇಲೆ ಕೆಲ ವಿಚಾರಗಳಲ್ಲಿ ಕಾಂಪ್ರೋಮೈಸ್ ಆದಂತೆ ಕಾಣಿಸುತ್ತಿದೆ. ಅಂದರೆ 2013ರಷ್ಟು ಸ್ವತಂತ್ರವಾಗಿ ಸಿದ್ದರಾಮಯ್ಯ ಈಗ ಇಲ್ಲ. ಅತ್ತ ಹೈಕಮಾಂಡ್, ಇತ್ತ ಡಿಕೆಶಿ ನಡುವೆ ನಡೆಯುತ್ತಿರುವ ಮಾತುಕತೆ ಬಳಿಕ ಬರುವ ಅಂತಿಮ ತೀರ್ಮಾನಗಳಂತೆ ನಡೆದುಕೊಂಡು ನನಗೆ ನೀನು, ನಿನಗೆ ನಾನು ಅನ್ನೋ ರೀತಿ ಇಬ್ಬರೂ ಸದ್ಯ ಒಂದಾಗಿದ್ದಾರೆ ಅನ್ನೋ ಚರ್ಚೆ ನಡೆಯುತ್ತಿದೆ. ಇನ್ನು ಸಿದ್ದರಾಮಯ್ಯ ಪುತ್ರ ಯತೀಂದ್ರ ವಿರುದ್ಧ ವರ್ಗಾವಣೆ ದಂಧೆ ಆರೋಪವನ್ನು ಎಚ್ಡಿಕೆ, ಬಿಜೆಪಿ ಮಾಡಿದಾಗ ಅದಕ್ಕೆ ಸಮರ್ಥವಾಗಿ ತಿರುಗೇಟು ಕೊಟ್ಟಿದ್ದು ಡಿ ಕೆ ಶಿವಕುಮಾರ್. ಸಿದ್ದರಾಮಯ್ಯ ಅವರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಅವರು ಯತೀಂದ್ರ ಅವರ ಸಮರ್ಥನೆಗೆ ನಿಂತರು.

ಸಚಿವ ನಾಗೇಂದ್ರ ಮೇಲಿನ ಸಿಬಿಐ ಕೇಸ್ ವಾಪಸ್‌ ಪಡೆಯಲು ಒತ್ತಾಯ

ಡಿ ಕೆ ಶಿವಕುಮಾರ್ ಮೇಲಿನ ಕೇಸ್ ವಾಪಸ್‌ ಪಡೆದ ಬೆನ್ನಲ್ಲೇ ಇಂತಹದೊಂದು ಚರ್ಚೆ ಆಡಳಿತ ಪಕ್ಷದಲ್ಲಿ ಶುರುವಾಗಿದೆ. ಕೇಸ್ ಒಮ್ಮೆ ಸಿಬಿಐ ಇಂದ ವಾಪಸ್‌ ಬಂದರೆ ರಾಜ್ಯ ತನಿಖಾ ಸಂಸ್ಥೆಗಳಿಂದ ಕ್ಲೀನ್ ಚಿಟ್ ಪಡೆಯಬಹುದು ಅನ್ನೋ ಲೆಕ್ಕಾಚಾರ ಕಾಂಗ್ರೆಸ್ ನಾಯಕರಲ್ಲಿ ಶುರುವಾಗಿದೆ. ಆದರೆ ಈ ನಡೆಯನ್ನ ಬಿಜೆಪಿ, ಜೆಡಿಎಸ್ ಕಟುವಾಗಿ ವಿರೋಧ ವ್ಯಕ್ತಪಡಿಸಿವೆ. ಮುಂದೆ ಬರುವ ಬೆಳಗಾವಿ ಅಧಿವೇಶನದಲ್ಲಿ ಇದೇ ವಿಚಾರವನ್ನು ಸದನದ ಹೊರಗೆ ಮತ್ತು ಒಳಗೆ ಹೋರಾಟದ ಅಸ್ತ್ರವಾಗಿ ಬಳಸಿಕೊಳ್ಳಲು ನಿರ್ಧಾರ ಮಾಡಿವೆ.

ಜಾತಿ ಗಣತಿ ವರದಿ ಕಳೆದು ಹೋಗಿದೆ ಅನ್ನೋದೇ ಒಂದು ದೊಡ್ಡ ಸುಳ್ಳು!

ಜಾತಿಗಣತಿ ವರದಿ ವಿಚಾರದಲ್ಲಿ ಆಡಳಿತ ಪಕ್ಷದಲ್ಲಿ ಬಿನ್ನ ನಿಲವು ಇರೋದು ಜಗಜ್ಜಾಹೀರಾಗಿದೆ. ಈ ನಡುವೆ ವರದಿಯ ಮೂಲ ಪ್ರತಿ ಸಿಕ್ಕಿಲ್ಲ ಅನ್ನೋ ಸರ್ಕಾರದ ಹೇಳಿಕೆ ನೋಡಿದರೆ ಬೇಲಿಯೇ ಎದ್ದು ಹೊಲ ಮೇಯ್ದ ಕತೆ ನೆನಪಾಗುತ್ತದೆ. ಆದರೆ ಎಚ್‌ ಆಂಜನೇಯ ಸಚಿವರಾಗಿದ್ದಾಗಲೇ ಈ ವರದಿಯ ಪ್ರತಿ ಪ್ರಿಂಟ್ ಆಗಿದೆ. ಆ ಪ್ರತಿಗಳು ಅಲ್ಲೊಂದು ಇಲ್ಲೊಂದು ಓಡಾಡುತ್ತಿವೆ. ಆದರೆ ಈಗ ಸರ್ಕಾರ ಮೂಲ ಪ್ರತಿ ಇಲ್ಲ ಅಂತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಅವಧಿಯನ್ನ ಎರಡು ತಿಂಗಳ ಕಾಲ ಮುಂದೂಡಿಕೆ ಮಾಡಿರುವುದರ ಹಿಂದೆ ಅನುಮಾನಗಳು ಶುರುವಾಗಿವೆ. ಅಲ್ಲದೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಜಾತಿ ಮೀಸಲಾತಿ ಸಂಬಂಧ ನೇಮಕ ಮಾಡಿದ್ದ ನಿವೃತ್ತ ನ್ಯಾಯಮೂರ್ತಿ ಭಕ್ತವತ್ಸಲ ರಿಪೋರ್ಟ್ ಸಹ ಇದೇ ವರದಿ ಮೇಲೆ ಮಾಡಲಾಗಿದೆ. ಹಾಗಾದರೆ ಕಳೆದು ಹೋಗಿರುವುದು ಸರ್ಕಾರದ ಬಳಿ ಇದ್ದ ಪ್ರತಿಯೋ ಅಥಚಾ ಇಚ್ಛಾ ಶಕ್ತಿಯೋ ಅನ್ನೋ ಪ್ರಶ್ನೆ ಈಗ ಕಾಡುತ್ತಿದೆ.

ಈ ಸುದ್ದಿಯನ್ನೂ ಓದಿ: ವಿಧಾನಸೌಧ ರೌಂಡ್ಸ್: ಅಶೋಕ್‌ ವಿಪಕ್ಷ ನಾಯಕರಾಗಿದ್ದರಿಂದ ಸಿದ್ದರಾಮಯ್ಯಗೆ ಖುಷಿ! ಸರ್ಕಾರಕ್ಕೆ ಕಾದಿದೆ ಅಧಿವೇಶನದ ಬಿಸಿ

Exit mobile version