Site icon Vistara News

ವಿಧಾನಸೌಧ ರೌಂಡ್ಸ್‌: ಬಯಲಾಯ್ತು ಎಲೆಕ್ಷನ್‌ ಟಿಕೆಟ್‌ ಒಳ ಆಟ; ಕಾಂಗ್ರೆಸ್‌ಗೆ ಶೀತಲಸಮರದ ಸಂಕಟ

Chaitra kundapura

-ಮಾರುತಿ ಪಾವಗಡ
ಪ್ರಖರ ಹಿಂದುತ್ವದ ಮೂಲಕ ಕರಾವಳಿ ಮತ್ತು ಉತ್ತರ ಕರ್ನಾಟಕದಲ್ಲಿ ಮಾತ್ರ ಪರಿಚಿತರಾಗಿದ್ದ ಚೈತ್ರ ಕುಂದಾಪುರ ಈಗ ದೇಶಾದ್ಯಂತ 24×7 ಸುದ್ದಿಯಾಗುತ್ತಿದ್ದಾರೆ. ತುಂಬಾ ಸ್ಪೀಡ್ ಆಗಿ ದುಡ್ಡು ಮಾಡಲು ಹೊರಟರೆ ಚೈತ್ರ ಕುಂದಾಪುರ ಆಗಿ ಬಿಡ್ತೀರಾ ಹುಷಾರ್ ಅನ್ನೋ ರೀತಿಯಲ್ಲಿ ಜನ ಮಾತನಾಡುತ್ತಿದ್ದಾರೆ. ಇನ್ನು ಡಿ ಕೆ ಶಿವಕುಮಾರ್ ಕಾವೇರಿ ವಿಚಾರದಲ್ಲಿ ಕೊಟ್ಟ ಎಡವಟ್ಟಿನ ಹೇಳಿಕೆಗಳಿಂದ ರೈತ ವರ್ಗ ಗರಂ ಆಗಿದ್ದರೆ, ಅತ್ತ ರಾಜಣ್ಣ ಅವರು ಸಮುದಾಯಕ್ಕೊಂದು ಡಿಸಿಎಂ ಹುದ್ದೆ ಸೃಷ್ಟಿ ಆಗಬೇಕು ಅಂತ ಹೇಳಿ ಕೆಲವರ ನಿದ್ದೆಗೆಡಿಸಿದ್ದಾರೆ.

ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾದ ಚೈತ್ರ ಕುಂದಾಪುರ

ಚೈತ್ರ ಕುಂದಾಪುರ ಹಿಂದೂ ಫೈರ್ ಬ್ರಾಂಡ್ ಅಂತಲೇ ಕರೆಸಿಕೊಳ್ಳುತ್ತಿದ್ದವರು. ಅವರ ಪಾಪ್ಯುಲಾರಿಟಿ ಹೇಗಿತ್ತು ಅಂದ್ರೆ ಅವರು ಹೇಳಿದ ಎಲ್ಲದಕ್ಕೂ ಯೆಸ್‌ ಅನ್ನೋ ಜನರೂ ಇದ್ದರು. ಆದರೆ ಜನ ಮನ್ನಣೆ ಗಳಿಸಿದ ತಕ್ಷಣ ಹಣದ ಆಸೆಗೆ ಬಿದ್ದು ಈಗ ಜೈಲು ಪಾಲಾಗಿದ್ದಾರೆ. ಚುನಾವಣೆಯಲ್ಲಿ ಟಿಕೆಟ್ ಕೊಡಿಸುತ್ತೇನೆಂದು ಕೋಟಿ ಕೋಟಿ ಪೀಕಿದ ಪ್ರಕರಣದಲ್ಲಿ ಅವರೀಗ ಸಿಲುಕಿಕೊಂಡಿದ್ದಾರೆ. ಚುನಾವಣಾ ಸಮಯದಲ್ಲಿ ಟಿಕೆಟ್ ಪಡೆಯಲು ಆಕಾಂಕ್ಷಿಗಳು ಸರಿದಾರಿ ಮತ್ತು ಅಡ್ಡದಾರಿಯಲ್ಲಿ ಪ್ರಯತ್ನ ಮಾಡುವ ವಿಚಾರ ನಿಜ ಕೋಟಿ ಕೋಟಿ ಕೊಡುವುದು ನಿಜ.ಅದ್ರಲ್ಲಿ ಈಗ ಒಂದು ಪ್ರಕರಣ ನಮ್ಮ ಕಣ್ಣು ಮುಂದೆ ಬಂದಿದೆ ಅದೆಷ್ಟೋ ಜನ ದುಡ್ಡು ಕಳೆದುಕೊಂಡವರು ಹೊರ ಬಂದು ಮಾತನಾಡುತ್ತಿಲ್ಲ ಅಷ್ಟೇ. ಕೆಪಿಎಸ್ಸಿ ಉದ್ಯೋಗ ನೇಮಕಾತಿ ಕರೆ ಮಾಡಿದ್ರೆ ಯಾವ ರೀತಿ ಆಕಾಂಕ್ಷಿ ಅಭ್ಯರ್ಥಿಗಳನ್ನ ನೇಮಕಾತಿ ಮಾಡಿಸುತ್ತೇವೆಂದು ಅಪ್ರೋಚ್ ಆಗ್ತಾರೋ ಅದೇ ರೀತಿ ಚುನಾವಣಾ ಸಮಯದಲ್ಲಿ ಹಲವು ಮಿಡಿಯೆಟರ್ಸ್ ಮೂರು ಪಕ್ಷಗಳ ನಾಯಕರು ನಮಗೆ ಗೊತ್ತು ಟಿಕೆಟ್ ಖಂಡಿತ ಕೊಡಿಸುತ್ತೇವೆಂದು ಭರವಸೆ ಕೊಡ್ತಾರೆ.ಇದು ಮೂರು ಪಕ್ಷಗಳಲ್ಲೂ ನಡೆಯುತ್ತಿರುವ ವಿಚಾರವನ್ನು ಈ ಘಟನೆ ಬಯಲು ಮಾಡಿದೆ. ವಿಧಾನಸೌಧದ ಮೊಗಸಾಲೆಯಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ನಡೆಯಲಾರಂಭಿಸಿದೆ.

ಟಿಕೆಟ್‌ಗೆ ಅಷ್ಟೇ ಅಲ್ಲ, ಸಚಿವರಾಗುವುದಕ್ಕೂ ದುಡ್ಡು ಕೊಡಬೇಕು!

ಇತ್ತೀಚೆಗೆ ರಾಜಕೀಯ ಫುಲ್ ಕಮರ್ಷಿಯಲ್ ಆಗಿದೆ. ಪಕ್ಷಗಳು ಸಿದ್ಧಾಂತ, ಸಂಘಟನೆಗಿಂತಲೂ ಚುನಾವಣೆ ಗೆಲ್ಲುವ ಹಣದ ಶಕ್ತಿ ನೋಡಿ ಮಣೆ ಹಾಕಲಾಗುತ್ತದೆ. ಹೀಗಾಗಿ ಸಂಘಟನೆ ಮಾಡಿದವನು ಪಕ್ಷದ ನಾಯಕರನ್ನ ನಂಬುತ್ತಾನೆ. ಆದ್ರೆ ದುಡ್ಡು ಇರೋನು ಅವರನ್ನ ಖರೀದಿ ಮಾಡಿ ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಯತ್ನ ಮಾಡ್ತಾನೆ. ಇದು ಕಳೆದ ವಿಧಾನಸಭಾ ಚುನಾವಣೆಯಲ್ಲೂ ಕೆಲ ಕಡೆ ಸಾಬೀತು ಆಗಿದೆ. ಚುನಾವಣೆ ಬಳಿಕ ನಡೆಯುವ ಸಂಪುಟ ರಚನೆ ಸಂದರ್ಭದಲ್ಲೂ ಹಲವರು ದೆಹಲಿಗೆ ಸೂಟ್‌ಕೇಸ್ ಹಿಡಿದುಕೊಂಡೇ ಹೋಗ್ತಾರೆ. ಹೈಕಮಾಂಡ್ ದರ್ಶನಕ್ಕೆ ಅವಕಾಶ ಸಿಕ್ಕರೂ ತಿರುಪತಿಯಲ್ಲಿ ಹುಂಡಿಗೆ ದುಡ್ಡು ಹಾಕುವಂತೆ ಹಾಕಿ ಬರ್ತಾರೆ! ಈ ಅಪವಾದದಿಂದ ಮೂರು ಪಕ್ಷಗಳೂ ಹೊರತಲ್ಲ ಎಂಬ ಮಾತು ಕೇಳಿ ಬರುತ್ತಿದೆ.

ಕಾವೇರಿ ಸೂಕ್ಷ್ಮತೆ ಅರಿಯದ ಡಿಕೆಶಿ?

ಡಿ ಕೆ ಶಿವಕುಮಾರ್ ಸ್ಪರ್ಧೆ ಮಾಡುವ ಕನಕಪುರ ಕ್ಷೇತ್ರ ತಮಿಳುನಾಡಿನ ಗಡಿ ಹೊಂದಿಕೊಂಡಿದೆ. ಆದರೆ ಇತ್ತೀಚೆಗೆ ಕಾವೇರಿ ನೀರಿನ ವಿಚಾರದಲ್ಲಿ ಎರಡು ರಾಜ್ಯಗಳ ನಡುವೆ ಕಾನೂನು ಹೋರಾಟ ಜೋರಾಗಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಆ ಖಾತೆ ನಿರ್ವಹಿಸುತ್ತಿರುವವರು ಪ್ರತಿ ಹೆಜ್ಜೆಯನ್ನ ಬಹಳ ಜೋಪಾನವಾಗಿ ಇಡಬೇಕಾಗುತ್ತದೆ. ಹೇಳಿಕೆ ಕೊಡುವಾಗ ರಾಜ್ಯದ ಹಿತಾಸಕ್ತಿಗೆ ಮಾರಕವಾಗಿ ಕೊಡಬಾರದು. ಆದರೆ ಡಿ ಕೆ ಶಿವಕುಮಾರ್ ಕೊಡುತ್ತಿರುವ ಹೇಳಿಕೆ, ಅವರು ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಇದು ರಾಜ್ಯಕಿಂತಲೂ ತಮಿಳುನಾಡಿಗೆ ಹೆಚ್ಚು ಅನುಕೂಲವಾಗುವಂತೆ ಕಾಣ್ತಿದೆ. ಅವರು ಎಷ್ಟು ಎಕರೆಯಲ್ಲಿ ಬೇಕಾದ್ರೂ ಬೆಳೆ ಬೆಳೆಯಲಿ ಅಂತ ಹೇಳಿದ್ದು ಆ ರಾಜ್ಯದ ಮೇಲಿನ ಪ್ರೀತಿ ಎದ್ದು ಕಾಣಿಸುತ್ತದೆ. ಇನ್ನು ಕಾವೇರಿ ವಿಚಾರದಲ್ಲಿ ನಮ್ಮ ರಾಜ್ಯದ ನಾಯಕರು ತೋರ್ಪಡಿಸಿಕೊಳ್ಳಲು ಮಾತ್ರ ಕೈ ಮೇಲೆತ್ತುತ್ತಾರೆ. ಆದರೆ ತಮಿಳುನಾಡಿನ ಎರಡೂ ಪ್ರಮುಖ ಪಕ್ಷಗಳ ನಾಯಕರು ಹಠಕ್ಕೆ ಬಿದ್ದು ಒಂದಾಗುತ್ತಾರೆ. ಇಲ್ಲಿ ಸರ್ವಪಕ್ಷ ಸಭೆ ಕರೆದಾಗಲೇ ವಿಪಕ್ಷಗಳ ನಾಯಕರು ಪೂರ್ವ ನಿಗದಿತ ಕಾರ್ಯಕ್ರಮ ನೆಪ ಹೇಳಿ ದೂರ ಉಳಿಯುವ ಮೂಲಕ ಕಾವೇರಿ ಕಣಿವೆಯ ಜನಕ್ಕೆ ಮೋಸ ಮಾಡ್ತಾರೆ. ಹೀಗಾಗಿ ತಮಿಳುನಾಡಿನ ಜನತೆಗೆ ಇದೊಂದು ಸೆಂಟಿಮೆಂಟ್ ವಿಚಾರವಾದರೆ, ರಾಜ್ಯದ ರಾಜಕೀಯ ನಾಯಕರಿಗೆ ಇದೊಂದು ರಾಜಕೀಯ ವಿಚಾರ ಮಾತ್ರವಾಗಿದೆ. ತಮಿಳುನಾಡು ಸಂಸದರು ಸೇರಿ ನಿಯೋಗ ಪಿಎಂ ಮೋದಿ ಭೇಟಿ ಮಾಡಿ ಮನವಿ ಮಾಡಿದರೂ, ಅತ್ಯಂತ ಮೋಸ ಆಗುತ್ತಿರುವ ಕರ್ನಾಟಕ ರಾಜ್ಯದ ರಾಜಕಾರಣಿಗಳಿಗೆ ಪಿಎಂ ಬಳಿ ಸಮಯ ಪಡೆಯಲು ಆಗಿಲ್ಲ. ಅತ್ತ ಪಿಎಂ ನರೇಂದ್ರ ಮೋದಿಗೆ ಪತ್ರ ಬರೆದರೂ ಅವರು ಕ್ಯಾರೆ ಅಂತಿಲ್ಲ. ಅಂದರೆ ರಾಜ್ಯದ ಮೂರೂ ಪಕ್ಷಗಳ ನಾಯಕರು ಕಾವೇರಿ ಕಣಿವೆಯ ಜನರಿಗೆ ನ್ಯಾಯ ಒದಗಿಸದಿರುವುದು ಸಾಬೀತಾಗಿದೆ.

ಈ ಅಂಕಣವನ್ನೂ ಓದಿ: ವಿಧಾನಸೌಧ ರೌಂಡ್ಸ್: ಬಿಜೆಪಿ ಜತೆ ಕೈಚಾಚಲು ಗೌಡರು ಒಪ್ಪಿದ್ದೇಕೆ? ಬಿಎಸ್‌ವೈ ಮತ್ತೆ ಬಿಜೆಪಿ ಹೈಕಮಾಂಡ್‌ಗೆ ಓಕೆ!

ಡಿಕೆಶಿಗೆ ರಾಜಣ್ಣ, ಸಿದ್ದರಾಮಯ್ಯಗೆ ಹರಿಪ್ರಸಾದ್‌ ತಲೆಬಿಸಿ

ರಾಜ್ಯದಲ್ಲಿ ಆರ್ಥಿಕ ಬಿಗುವಿನ ನಡುವೆಯೂ ನಾಲ್ಕು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿ ಮಾಡಿ ನುಡಿದಂತೆ ನಡೆದಿದ್ದೇವೆ ಎಂದು ಹೇಳಿ ಜನ ಮನ್ನಣೆ ಪಡೆಯಲು ಮುಂದಾದ ಸಿದ್ದರಾಮಯ್ಯ, ಡಿಕೆಶಿಗೆ ರಾಜ್ಯದ ಇಬ್ಬರು ನಾಯಕರ ಹೇಳಿಕೆಗಳು ನಿದ್ದೆಗೆಡಿಸಿವೆ. ಕಳೆದ ಭಾನುವಾರ ಸಮಾವೇಶ ಮಾಡಿ ಸಿದ್ದರಾಮಯ್ಯ ಅವರು ದೇವರಾಜು ಅರಸು ಆಗಲು ಸಾಧ್ಯವಿಲ್ಲ. ಹೋಬ್ಲೆಟ್ ವಾಚ್ ಮತ್ತು ಒಳಗೆ ಖಾಕಿ ಚಡ್ಡಿ ಹಾಕಿದ್ರೆ ಸಮಾಜವಾದಿ ಆಗಲ್ಲ ಅನ್ನೋ ಹೇಳಿಕೆ ಕೊಟ್ಟು ಸಿದ್ದರಾಮಯ್ಯಗೆ ತಲೆಬಿಸಿ ಮಾಡಿದರು. ಈ ನಡುವೆ ಸ್ವತಃ ಸಿದ್ದರಾಮಯ್ಯ ವೇಣುಗೋಪಾಲ್ ಮತ್ತು ಸುರ್ಜೇವಾಲಾಗೆ ಕರೆ ಮಾಡಿ ಡ್ಯಾಮೇಜ್ ಕಂಟ್ರೋಲ್ ಮಾಡದಿದ್ರೆ ಲೋಕಸಭಾ ಚುನಾವಣೆ ಸೋಲಿಗೆ ನಾನು ಕಾರಣವಾಗಲ್ಲ ಎಂದು ಜೋರು ಧ್ವನಿಯಲ್ಲಿ ಹೇಳಿದ ಪರಿಣಾಮ ಬಿ ಕೆ ಹರಿಪ್ರಸಾದ್‌ಗೆ ನೋಟೀಸ್ ಸಹ ನೀಡಿದರೂ ಇದರ ಬಳಿಕವೂ ಬಿ ಕೆ ಹರಿಪ್ರಸಾದ್ ಬಹಿರಂಗ ಹೇಳಿಕೆ ಕೊಡ್ತಿರುವುದು ಸಿದ್ದರಾಮಯ್ಯ ಅವರ ಕಸಿವಿಸಿಗೆ ಕಾರಣವಾಗಿದೆ. ಇತ್ತ ಲೋಕಸಭೆ ಗೆಲ್ಲಬೇಕಾದ್ರೆ ಮೂರು ಸಮುದಾಯಗಳಿಗೆ ಡಿಸಿಎಂ ಸ್ಥಾನ ಕೊಡಬೇಕು ಅನ್ನೋ ಹೇಳಿಕೆ ಡಿಕೆಶಿ ಅಸಮಾಧಾನಕ್ಕೆ ಕಾರಣವಾಗಿದೆ.‌ ಲಿಂಗಾಯತ, ದಲಿತ, ಮುಸ್ಲಿಂ ಸಮುದಾಯಕ್ಕೆ ಒಂದೊಂದು ಡಿಸಿಎಂ ಹುದ್ದೆ ಕೊಡಬೇಕು ಅನ್ನೋ ರಾಜಣ್ಣ ಹೇಳಿಕೆ ಬಗ್ಗೆ ಡಿಕೆಶಿ ಅಂಡ್ ಟೀಮ್ ಹೈಕಮಾಂಡ್ ಕದ ತಟ್ಟಿದೆ. ಈ ಎರಡು ಬೆಳವಣಿಗೆ ನೋಡಿದರೆ ಒಂದು ಟೀಮ್ ಮತ್ತೊಂದು ಟೀಮ್‌ಅನ್ನು ವೀಕ್ ಮಾಡಲು ಹೋಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟೀಮ್ ವೀಕ್ ಆಗೋದರಲ್ಲಿ ಯಾವುದೇ ಅನುಮಾನವೂ ಇಲ್ಲ.

ಇನ್ನಷ್ಟು ಅಂಕಣಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version