| ಮಾರುತಿ ಪಾವಗಡ
ಇಸ್ರೊ (ISRO) ವಿಜ್ಞಾನಿಗಳು ಹಗಲು ರಾತ್ರಿ ಶ್ರಮಿಸಿದ ಪರಿಣಾಮವಾಗಿ ಚಂದ್ರಯಾನ 3 (Chandrayaan 3) ಯಶಸ್ವಿಯಾಗಿದೆ. ಇಡೀ ಜಗತ್ತೇ ಭಾರತದ ಬಾಹ್ಯಾಕಾಶ ಸಾಧನೆಯನ್ನು ಕೊಂಡಾಡುತ್ತಿದೆ. ಆದರೆ ಇದರ ಕ್ರೆಡಿಟ್ ಪಡೆಯಲು ರಾಜಕೀಯ ಪಕ್ಷಗಳು (Political Parties) ಕಚ್ಚಾಡುತ್ತಿರುವುದು ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ಈ ಶ್ರಮದ ಹಿಂದಿರುವುದು ವಿಜ್ಞಾನಿಗಳ ಸಾಧನೆಯೇ ಹೊರತು ಬೇರೇನಿಲ್ಲ. ಇಸ್ರೋ ಬೆಳವಣಿಗೆಯ ಹಿಂದೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರುಯಿಂದ ಹಿಡಿದು ಈಗಿನ ಪ್ರಧಾನಿ ನರೇಂದ್ರ ಮೋದಿಯವರೆಗೂ (PM Narendra Modi) ಹಲವು ಪ್ರಧಾನಿಗಳ ಕೊಡುಗೆ ಇದೆ. ಮುಂದೆ ಯಾರೇ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೂ ಇಸ್ರೊಗೆ ಪ್ರೋತ್ಸಾಹ ನೀಡುವ ಹೊಣೆ ಇದ್ದೇ ಇರುತ್ತದೆ ಎಂಬ ಮಾತು ಸಾರ್ವತ್ರಿಕವಾಗಿ ಕೇಳಿ ಬರುತ್ತಿದೆ(Vidhana Soudha Rounds).
ಈ ಫೋಟೋಗೆ ಕ್ಯಾಪ್ಸನ್ ಕೊಡಿ!
ಇಸ್ರೋ ವಿಜ್ಞಾನಿಗಳನ್ನು ಸ್ವಾಗತಿಸಲು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದಾಗ ಕಾರ್ಯಕರ್ತರು ನಿಲ್ಲುವ ಸ್ಥಳದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಸಚಿವರಾದ ಆರ್ ಅಶೋಕ್, ಮುನಿರತ್ನ, ಗೋಪಾಲಯ್ಯ, ಕೃಷ್ಣಪ್ಪ, ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ ಮತ್ತಿತರರು ನಿಂತಿದ್ದು ಮಹಾ ಅಪರಾಧ ಅನ್ನುವಂತೆ ಕಾಂಗ್ರೆಸ್ ಮುಖಂಡರು ಬಿಂಬಿಸುತ್ತಿದ್ದಾರೆ. ಈ ಕಾರ್ಯಕ್ರಮ ಕೇವಲ ವಿಜ್ಞಾನಿಗಳ ಸಾಧನೆಯನ್ನು ಅಭಿನಂದಿಸಲು ಸೀಮಿತ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಷ್ಟವಾಗಿ ಹೇಳಿದ್ದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮಾತ್ರ ತಮ್ಮನ್ನು ಸ್ವಾಗತಿಸಿದರೆ ಸಾಕು ಎಂಬ ಮಾಹಿತಿ ಪ್ರಧಾನಿ ಕಾರ್ಯಾಲಯದಿಂದ ಬಂದಿತ್ತು. ಆದರೆ ಕಾಂಗ್ರೆಸ್ ಮುಖಂಡರು, ಹಿರಿಯ ನಾಯಕ ಆರ್ ಆಶೋಕ್‌ಗೆ ಗೌರವ ಸಿಗಲಿಲ್ಲ. ನಳೀನ್ ಕುಮಾರ್ ಕಟೀಲ್ ಅವರನ್ನು ಬೀದಿಯಲ್ಲಿ ನಿಲ್ಲಿಸಿದರು ಎಂದು ರಾಜಕೀಯ ವಾರ್ ಶುರು ಮಾಡಿದರು. ಸಾಮಾನ್ಯರಂತೆ ರಸ್ತೆ ಬದಿ ನಿಂತಿದ್ದು ನಮ್ಮ ಸರಳತೆಯ ಪ್ರತೀಕ ಎಂದು ಬಿಜೆಪಿ ಮುಖಂಡರು ಪ್ರತಿ ಹೇಳಿಕೆ ನೀಡಿದರು. ಆದರೆ, ಮೋದಿ ರಸ್ತೆಯಲ್ಲಿ ಕೈ ಬೀಸುತ್ತ ಹೊರಡುವಾಗ ಬಿಜೆಪಿ ಮುಖಂಡರು ನಿಂತ ಭಂಗಿಯ ಫೋಟೊ ಮಾತ್ರ ಭಾರಿ ಸುದ್ದಿ ಮಾಡಿತು!
ಮತ್ತೆ ಶುರುವಾಯಿತು ರಾಜಕೀಯ ಯಾನ
ರಾಜ್ಯ ರಾಜಕಾರಣದಲ್ಲಿ ಬಾಂಬೆ ಟೀಮ್ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಮಾಜಿ ಸಚಿವ ಎಸ್ ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರನ್ನು ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ವಾಪಸ್ ಕಾಂಗ್ರೆಸ್‌ಗೆ ಕರೆ ತರುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಡಿ ಕೆ ಶಿವಕುಮಾರ್ ಅವರು ಎಸ್ ಟಿ ಸೋಮಶೇಖರ್ ಜತೆ ವೇದಿಕೆ ಹಂಚಿಕೊಂಡಿದ್ದಾರೆ. ಇತ್ತ ಸಿಎಂ ಸಿದ್ದರಾಮಯ್ಯ ಸಹ ಸೋಮಶೇಖರ್ ಕೇಳಿದಲ್ಲವನ್ನೂ ಮಾಡುತ್ತಿದ್ದಾರೆ. ಹೀಗಾಗಿ ಐದು ವರ್ಷಗಳ ಹಿಂದೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಬೀಳಿಸಿದ ಬಾಂಬೆ ಟೀಮ್‌ಗೆ ಕಾಂಗ್ರೆಸ್ ಘರ್ ವಾಪ್ಸಿ ಯಾನದ ಭಾಗ್ಯ ನೀಡುತ್ತಿರುವುದು ಈಗ ರಾಜ್ಯ ರಾಜಕಾರಣದ ಕೇಂದ್ರ ಬಿಂದುವಾಗಿದೆ.
ನಿಖಿಲ್ ಮತ್ತೆ ಹೀರೊ; ಲೋಕಸಭಾ ಚುನಾವಣೆಗೆ ನಿಲ್ಲದಿರಲು ತೀರ್ಮಾನ
ರಾಜ್ಯದಲ್ಲಿ ಪ್ರತಿ ಚುನಾವಣೆಯಲ್ಲೂ ಚರ್ಚೆ ಆಗುತ್ತಿರುವ ಹೆಸರು ನಿಖಿಲ್ ಕುಮಾರಸ್ವಾಮಿ. 2019ರಿಂದ ಇಲ್ಲಿಯವರೆಗೂ ನಡೆದ ಚುನಾವಣೆಗಳಲ್ಲಿ ನಿಖಿಲ್ ಹೆಸರು ಚರ್ಚೆಗೆ ಬರುತ್ತದೆ. ಹೀಗಾಗಿ ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಸೋತ ನಿಖಿಲ್ ಕುಮಾರಸ್ವಾಮಿ ಸದ್ಯ ರಾಜಕಾರಣದಿಂದ ದೂರ ಉಳಿದು ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರೆ. ತಮಿಳುನಾಡು ಮೂಲದ ಒಂದು ಬ್ಯಾನರ್ ನಲ್ಲಿ ಬ್ಯಾಕ್ ಟು ಬ್ಯಾಕ್ ಫೀಲ್ಮ್ ಚಿತ್ರೀಕರಣಕ್ಕೆ ಸಹಿ ಹಾಕಿದ್ದಾರೆ. ಮುಂದಿನ ಲೋಕಸಭಾ ಚುನಾವಣೆ ಅಂತ ಯಾರೋ ಕೇಳಿದಕ್ಕೆ ರಾಜಕಾರಣ ಸದ್ಯ ನನಗೆ ಬೇಡ ಎಂದ್ರಂತೆ!
ಈ ಸುದ್ದಿಯನ್ನೂ ಓದಿ: ವಿಧಾನಸೌಧ ರೌಂಡ್ಸ್: ನಿಖಿಲ್‌ಗೆ ʼಗೌಡರ ಕುಟುಂಬʼವೇ ಭಾರ; ಲಕ್ಷ್ಮೀಗೆ ಉಮಾಶ್ರೀ ಸವಾಲ್!
ಗ್ಯಾರಂಟಿ ಸರ್ಕಾರಕ್ಕೆ ನೂರು ದಿನ; ನೋ ಡೆವಲಪ್ಮೆಂಟ್ ಫಂಡ್ ಅಂದ್ರಂತೆ ಸಿಎಂ!
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಹೊಸ ಸರ್ಕಾರಕ್ಕೆ ನೂರು ದಿನ ಮುಗಿದಿದೆ. ಸದ್ಯ ಐದು ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹ ಜ್ಯೋತಿ, ಮೂರು ಗ್ಯಾರಂಟಿಗಳು ಅಧಿಕೃತವಾಗಿ ಜಾರಿ ಆಗಿವೆ. ಗೃಹ ಲಕ್ಷ್ಮೀಯನ್ನ ಇದೇ ತಿಂಗಳ ಮೂವತ್ತರಿಂದ ಜಾರಿ ಮಾಡಲು ಗೃಹ ಲಕ್ಷ್ಮೀ ಹೆಬ್ಬಾಳ್ಕರ್ ಒಂದು ವಾರದಿಂದ ಮೈಸೂರಿನಲ್ಲಿ ಠಿಕಾಣಿ ಹೂಡಿದ್ದಾರೆ. ಇತ್ತ ಡಿಸಿಎಂ ಮೈಸೂರಿಗೆ ರಾತ್ರೋರಾತ್ರಿ ತೆರಳಿ ಗೈಡ್ ಮಾಡಿ ಬರುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಿದ್ದರೂ, ಕ್ಷೇತ್ರದ ಅಭಿವೃದ್ಧಿಗೆ ದುಡ್ಡು ಕೊಡಿ ಅಂತ ಕೇಳಿದ್ರೆ ಸಿಎಂ ಹಣ ಕೇಳಬೇಡಿ ಅನ್ನುತ್ತಿದ್ದಾರೆ ಎನ್ನುವುದು ಶಾಸಕರ ಅಳಲು.
ಇನ್ನಷ್ಟು ಅಂಕಣಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.