| ಮಾರುತಿ ಪಾವಗಡ
ಐದು ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ 40% ಕಮಿಷನ್, ಪೇ ಸಿಎಂ ಅಭಿಯಾನ ಮಾಡಿ ಯಶಸ್ಸು ಕಂಡಿದ್ದ ಕಾಂಗ್ರೆಸ್ ನಾಯಕರ ಮುಖಕ್ಕೆ, ಸರ್ಕಾರ ಬಂದ ಐದೇ ತಿಂಗಳಲ್ಲಿ ಕಮಿಷನ್ ಆರೋಪ ಮೆತ್ತಿಕೊಂಡಿದೆ. ಗುತ್ತಿಗೆದಾರರನ ಮನೆ ಮೇಲೆ ಐಟಿ ದಾಳಿ ಮಾಡಿದಾಗ ಸಿಕ್ಕ 42 ಕೋಟಿ ರೂ.ಗೆ ವಾರಸುದಾರರು ಕಾಂಗ್ರೆಸ್ ನಾಯಕರು ಅನ್ನೋ ಆರೋಪವನ್ನ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಾಡ್ತಿದ್ದಾರೆ. ಅದ್ರಲ್ಲೂ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅಂತೂ ಇದು ಬೆಂಗಳೂರು ಮತ್ತು ನಗರಾಭಿವೃದ್ಧಿಯ ಪಾಲು ಅನ್ನೋ ಆರೋಪ ಮಾಡಿ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಇತ್ತ ಸರ್ಕಾರದ ನಾಯಕರು ಏನೇ ಸಮರ್ಥನೆ ಕೊಟ್ಟರೂ ವಿಪಕ್ಷಗಳು, ಇದು ಪಂಚರಾಜ್ಯಗಳ ಚುನಾವಣೆಗೆ ರಾಜ್ಯದಿಂದ ಕಳುಹಿಸುತ್ತಿದ್ದ ಕಪ್ಪ ಅನ್ನೋದನ್ನ ಸಾರಿ ಸಾರಿ ಹೇಳ್ತೀವೆ(Vidhan Soudha Rounds).
ಸದ್ಯದ ಮಟ್ಟಿಗೆ ರಾಜ್ಯ ಸರ್ಕಾರ ವಿಪಕ್ಷಗಳ ಈ ಆರೋಪ ಎದುರಿಸಲಾಗದೆ ಕಕ್ಕಾಬಿಕ್ಕಿಯಾಗಿದೆ. ಸರ್ಕಾರದ ನೇತೃತ್ವ ವಹಿಸಿರುವ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಇದಕ್ಕೆ ಸೂಕ್ತ ಮದ್ದು ಹುಡುಕುತ್ತಿದ್ದಾರೆ!
ಕುಮಾರಸ್ವಾಮಿ ಮಾತಿಗೆ ಜೆಡಿಎಸ್ ನಾಯಕರದೇ ವಿರೋಧ
2023ರ ವಿಧಾನಸಭಾ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯ ಈ ಬಾರಿ ಕಾಂಗ್ರೆಸ್ ಅಪ್ಪಿಕೊಂಡಿರುವುದು ಬಹಿರಂಗ ಸತ್ಯ. ಇದಕ್ಕೆ ಈ ಬಾರಿ ಕಾಂಗ್ರೆಸ್ ಸರ್ಕಾರ ಬಂದ್ರೆ ಡಿ ಕೆ ಶಿವಕುಮಾರ್ ಸಿಎಂ ಆಗ್ತಾರೆ ಅನ್ನೋದು ಒಂದು ಪ್ರಮುಖ ಕಾರಣ. ಅದೇ ರೀತಿ ದೇವೇಗೌಡರ ಕುಟುಂಬ ರಾಜಕಾರಣವೂ ಸಹ ಅಷ್ಟೇ ಕಾರಣ ಇರುತ್ತೆ. ಸರ್ಕಾರ ಬಂದು ಐದು ತಿಂಗಳಾಗಿದೆ. ವಿಪಕ್ಷದಲ್ಲಿ ಇರೋ ಕುಮಾರಸ್ವಾಮಿ ಸರ್ಕಾರದ ಅಂಕುಡೊಂಕುಗಳನ್ನ ತಿದ್ದಿ ತೀಡಲು ಟೀಕೆ ಮಾಡುವುದು ತಪ್ಪಲ್ಲ. ಅದು ಅವರ ಕರ್ತವ್ಯ. ಆದ್ರೆ ಡಿ ಕೆ ಶಿವಕುಮಾರ್ ತಿಹಾರ್ ಜೈಲಿಗೆ ಹೋಗ್ತಾರೆ ಅನ್ನೋ ಮಾತನ್ನ ಒಕ್ಕಲಿಗ ಸಮುದಾಯ ಇರಲಿ ಜೆಡಿಎಸ್ ನ ಹಿರಿಯ ನಾಯಕರೇ ಒಪ್ಪಲು ಸಿದ್ಧರಿಲ್ಲ.
ವಿಧಾನಸಭೆಯಲ್ಲಿ ಹೊಡೆಸಿಕೊಂಡಿರುವುದನ್ನು ನಮ್ಮವರು ಮರೆತಿದ್ದಾರೆ. ಲೋಕಸಭೆಯಲ್ಲಿ ಬಿಜೆಪಿ ಅವರು ಮೂರು ಕ್ಷೇತ್ರ ಕೊಡಬಹುದು. ಅಲ್ಲೂ ಸೋಲಬೇಕು ಅನ್ನೋದಾದ್ರೆ ಈ ಜೈಲು ಬೇಲ್ ಪಾಲಿಟಿಕ್ಸ್ ಮಾತನಾಡಲಿ ಎಂದು ಪದ್ಮನಾಭನಗರದ ನಿವಾಸದಲ್ಲಿ ಕೆಲವು ಹಿರಿಯ ಜೆಡಿಎಸ್ ಮುಖಂಡರು ಹೇಳಿದ್ದಾರೆ ಎನ್ನಲಾಗಿದೆ. ಕುಮಾರಸ್ವಾಮಿಯ ಈ ಆರೋಪ ಡಿ ಕೆ ಬ್ರದರ್ಸ್ ಗೆ ಕಿವಿಗೆ ಬಿದ್ದ ಕ್ಷಣದಿಂದ, ಜೆಡಿಎಸ್‌ಗೆ ಸಿಗುವ ಆ ಮೂರು ಕ್ಷೇತ್ರಗಳಲ್ಲಿ ಭಾರಿ ತಂತ್ರಗಾರಿಕೆ ಮಾಡಬೇಕು ಅನ್ನೋ ಲೆಕ್ಕಾಚಾರ ಹಾಕಿದ್ದಾರೆ.
ಕೃಷ್ಣಾದಲ್ಲಿ ಬಿಸಿಯೂಟ ಭಾಗ್ಯ ಕೊಟ್ಟ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಪ್ರತಿದಿನ ಬೆಳಗ್ಗೆ ʼಕೃಷ್ಣಾʼದಲ್ಲಿ ಸಮಸ್ಯೆ ಹೇಳಿಕೊಳ್ಳಲು ಬರುವವರ ಬಳಿ ಮನವಿ ಸ್ವೀಕರಿಸುತ್ತಾರೆ. ಜನರಿಗೆ ಸಮಯ ಗೊತ್ತಿಲ್ಲದ ಕಾರಣ ಕೆಲವರು ಅವರು ಊರಿನಲ್ಲಿ ಇಲ್ಲದಿದ್ದರೂ ಬೆಳಗ್ಗೆಯಿಂದ ಸಂಜೆವರೆಗೂ ಕಾಯುತ್ತಾರೆ. ಹೀಗೆ ಬಂದ ಯಾರೋ ಒಬ್ಬರು ಅವರ ಗಮನಕ್ಕೆ ಸಿಕ್ಕಾಗ ಹೇಳಿದ್ದಾರೆ. ಅದೇ ಸಮಯಕ್ಕೆ ಕೃಷ್ಣಾದಲ್ಲಿ ಒಂದು ತಿಂಗಳ ಕಾಫಿ, ತಿಂಡಿ,ಊಟದ ಬಿಲ್‌ಗೆ ಸಹಿ ಹಾಕಿಸಲು ಅಧಿಕಾರಿ ತಂದಿದ್ದಾರೆ. ಬಿಲ್ ನೋಡಿ ಸಿದ್ದರಾಮಯ್ಯ ಹೌಹಾರಿದ್ದಾರೆ. ಬೇರೆ ಊರುಗಳಿಂದ ಬರುವವರಿಗೆ ಟೀ ಕಾಫಿ ಕೊಡಲ್ಲ, ಊಟ ಹಾಕಲ್ಲ. ಹೇಗಾಯಿತು ಇಷ್ಟು ಖರ್ಚು ಅಂತ ಪ್ರಶ್ನೆ ಮಾಡಿದ್ದಾರೆ. ಇನ್ನು ಮುಂದೆ ಮಧ್ಯಾಹ್ನ ಸಮಯದಲ್ಲಿ ದೂರದ ಊರುಗಳಿಂದ ಬಂದವರಿಗೆ ಊಟ ಕೊಡಿ ಎಂದು ತಾಕೀತು ಮಾಡಿದ್ದಾರೆ. ಆ ದಿನದಿಂದಲೇ ʼಕೃಷ್ಣಾʼದಲ್ಲಿ ಮಧ್ಯಾಹ್ನ ಬಿಸಿಯೂಟ ಭಾಗ್ಯ ಶುರುವಾಗಿದೆ.
ಈ ಅಂಕಣವನ್ನು ಓದಿ: ವಿಧಾನಸೌಧ ರೌಂಡ್ಸ್: ಸಿದ್ದರಾಮಯ್ಯರ ನಿದ್ದೆಗೆಡಿಸಿರುವ ಶಾಮನೂರು, ವಿಧಾನಸೌಧದೊಳಗೆ ಜಾತಿ ಸದ್ದು ಜೋರು!
ಸರ್ಕಾರದಲ್ಲಿ ಸಚಿವರ, ಶಾಸಕ ಪಿಎಗಳದ್ದೇ ದರ್ಬಾರ್
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಶಾಸಕರ ಪಿಎಗಳೂ ಸ್ಟ್ರಾಂಗ್ ಆಗಿ ಬಿಟ್ಟಿದ್ದಾರೆ. ಯದ್ವಾತದ್ವಾ ಮಿನಿಸ್ಟರ್ ಕಚೇರಿಗಳಿಗೆ ಹೋಗಿ, ನಮ್ಮ ಶಾಸಕರ ಕೆಲಸ ಮಾಡಲೇಬೇಕು ಅಂತ ಒತ್ತಾಯ ಮಾಡ್ತಾರೆ. ಈ ಪಿಎಗಳು ಸ್ವಾಮಿ ಕಾರ್ಯದಲ್ಲಿ ಸ್ವಕಾರ್ಯ ಮಾಡಿಕೊಳ್ಳುತ್ತಿದ್ದಾರೆ ಅನ್ನೋ ಆರೋಪ ಸಚಿವರ ಪಿಎಸ್‌ಗಳಿಂದ ಕೇಳಿ ಬಂದಿದೆ. ಕೆಲಸ ಮಾಡಿಕೊಡಲಿಲ್ಲ ಅಂದ್ರೆ ಹಕ್ಕುಚ್ಯುತಿವರೆಗೂ ನಮ್ಮ ಸಾಹೇಬ್ರು ಹೋಗ್ತಾರೆ ಅಂತ ಧಮ್ಕಿ ಹಾಕ್ತಿದ್ದಾರೆ. ಮೊನ್ನೆ ದಿನೇಶ್ ಗುಂಡೂರಾವ್ ಅವರ ಪಿಎಸ್ ವಿರುದ್ಧ ಕೇಳಿ ಬಂದ ಹಕ್ಕುಚ್ಯುತಿ ಆರೋಪದ ಹಿಂದೆ ಏನು ನಡೆದಿದೆ ಎನ್ನುವುದು ಸಿಎಂ ಗಮನಕ್ಕೆ ಬಂದಿದೆ. ಸಿಎಂ ಕೂಡಲೇ ಶಾಸಕರಿಗೆ ನಿಮ್ಮ ನಿಮ್ಮ ಪಿಎಗಳನ್ನ ಎಚ್ಚರಿಕೆ ಕೊಡಿ ಎಂದು ತಾಕೀತು ಮಾಡಿದ್ದಾರೆ.