Site icon Vistara News

ವಿಧಾನಸೌಧ ರೌಂಡ್ಸ್‌: ‘ಗ್ಯಾರಂಟಿ ಪಕ್ಷʼಕ್ಕೆ ರಾಮನ ಭಯ, ರೇವಣ್ಣಗೆ ಶತ್ರು ಭಯ!

Vidhana Soudha Rounds, Congress backfoot on Ram mandir inauguration

| ಮಾರುತಿ ಪಾವಗಡ
ರಾಜ್ಯ ಮತ್ತು ರಾಷ್ಟ್ರದಲ್ಲಿ (ವಿಧಾನಸೌಧ ರೌಂಡ್ಸ್‌) ಈ ಬಾರಿ ಹೆಚ್ಚು ಚರ್ಚೆ ಆಗುತ್ತಿರುವುದು ಅಯೋಧ್ಯೆಯಲ್ಲಿ ಲೋಕಾರ್ಪಣೆ ಆಗುತ್ತಿರುವ ಶ್ರೀರಾಮ ಮಂದಿರದ ವಿಚಾರ(Ram Mandir). ಹಿಂದೂಗಳ ಪಾಲಿಗೆ ಇದು ಶತಮಾನಗಳ ಕನಸು ನನಸಾದ ಕ್ಷಣವಾಗಿದ್ದರೆ, ರಾಜಕೀಯ ಪಕ್ಷಗಳಿಗೆ ಇದು ರಾಜಕೀಯದ ವಸ್ತುವಾಗಿದೆ. ರಾಮ ಮಂದಿರ ಉದ್ಘಾಟನೆಗೆ ಹೋಗದಿರುವ ಕಾಂಗ್ರೆಸ್‌ ಹೈಕಮಾಂಡ್‌‌ (Congress Party) ನಿರ್ಧಾರ ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಭಾರೀ ರಿಸ್ಕ್‌ನ ಸಂಗತಿಯಾಗಿದೆ. ಆದರೆ ಬಿಜೆಪಿ ನಾಯಕರು ತಾವು ಅಂದುಕೊಂಡಂತೆ ಎಲ್ಲವೂ ನಡೆಯುತ್ತಿದೆ. ಮುಂದೆ ಕೇಂದ್ರದಲ್ಲಿ ತಮ್ಮ ಸರಕಾರವೇ ಅಧಿಕಾರಕ್ಕೆ ಬರುತ್ತದೆ ಎನ್ನುವ ವಿಶ್ವಾಸದಲ್ಲಿ ಬಿಜೆಪಿ ನಾಯಕರಿದ್ದಾರೆ. ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ಎಫೆಕ್ಟ್‌ ಏನು ಎಂಬ ಬಗ್ಗೆ ರಾಜ್ಯದಲ್ಲೂ ಬಿಜೆಪಿ (BJP Party) ಮತ್ತು ಕಾಂಗ್ರೆಸ್‌ ಪಾಳಯದಲ್ಲಿ ಲೆಕ್ಕಾಚಾರ ನಡೆಯುತ್ತಿದೆ.

ಗ್ಯಾರಂಟಿ ಪಕ್ಷದ ಮುಖಂಡರಿಗೆ ಅಭ್ಯರ್ಥಿ ಆಗಲೂ ಅಯೋಧ್ಯೆ ಭಯ!

ಹೊಸ ವರ್ಷದ ಮೊದಲ ತಿಂಗಳಲ್ಲೇ ಲೋಕಸಭೆ ಚುನಾವಣೆಯ ಜ್ವರ ಈ ಬಾರಿ ಮೂರು ಪಕ್ಷಗಳಲ್ಲೂ ಕಾಣಿಸಿಕೊಂಡಿದೆ. ಟಾರ್ಗೆಟ್‌ 20 ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡಿರುವ ರಾಜ್ಯ ಕಾಂಗ್ರೆಸ್‌ ನಾಯಕರು ಸರಣಿ ಸಭೆ ನಡೆಸುತ್ತಿದ್ದಾರೆ. ಹಾಗೆ ನೋಡಿದರೆ 1994ರ ಚುನಾವಣೆ ಬಳಿಕ ರಾಜ್ಯದಲ್ಲಿ ಎಂದೂ ಸಹ 15ರ ಗಡಿಯನ್ನು ಕಾಂಗ್ರೆಸ್‌ ದಾಟಿಲ್ಲ. 2019ರಲ್ಲಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. 2014ರಲ್ಲಿ ಕೇವಲ 9 ಸ್ಥಾನ ಗೆದ್ದು ದೇಶದಲ್ಲಿ ಕಾಂಗ್ರೆಸ್‌ ಅತಿ ಹೆಚ್ಚು ಗಳಿಸಿದ ರಾಜ್ಯವಾಗಿ ಕರ್ನಾಟಕ ಗುರುತಿಸಿಕೊಂಡಿತ್ತು. ಈ ಬಾರಿ ಕೂಡ ಕಾಂಗ್ರೆಸ್‌ಗೆ ಲೋಕಸಭೆ ಚುನಾವಣೆ ಅಷ್ಟು ಸುಲಭವಾಗಿ ಕಾಣುತ್ತಿಲ್ಲ. ಒಂದು ಕಡೆ ರಾಜ್ಯದಲ್ಲಿ ಪ್ರಬಲ ಅಭ್ಯರ್ಥಿಗಳ ಕೊರತೆ, ಜತೆಗೆ ಸರಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದರೂ ಅದರ ಲಾಭ ಕೈಗೆ ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಏಕೆಂದರೆ ಈ ಬಾರಿ ಅಯೋಧ್ಯೆ ರಾಮ ಮಂದಿರ ವಿಚಾರವೇ ಪ್ರಮುಖ ವಿಷಯವಾಗಿ ಹೊರ ಹೊಮ್ಮಿದೆ. ಶತಮಾನಗಳ ಹೋರಾಟದ ಬಳಿಕ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯುತ್ತಿದೆ. ಇದರ ಸಂಪೂರ್ಣ ಲಾಭ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿಗೆ ಸಿಗಲಿದೆ ಎನ್ನುವ ಆತಂಕ ಕಾಂಗ್ರೆಸ್‌ ಮುಖಂಡರದಾಗಿದೆ. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಆಗಲು ಹಿರಿಯ ಸಚಿವರೇ ಹಿಂದೇಟು ಹಾಕುತ್ತಿದ್ದಾರೆ!

ಕಾಂಗ್ರೆಸ್‌ಗೆ ರಾಮನ ಭಯವೇಕೆ?

ಕಳೆದ ಎರಡು ಲೋಕಸಭೆ ಚುನಾವಣೆಗಳನ್ನು ಯಶಸ್ವಿಯಾಗಿ ಯುಪಿಎ ವಿರುದ್ಧ ಎದುರಿಸಿ ದೆಹಲಿಯ ಗದ್ದುಗೆ ಪಡೆದಿದ್ದ ರಾಷ್ಟ್ರೀಯ ಬಿಜೆಪಿ ನಾಯಕರು 2024ರ ಚುನಾವಣೆಯಲ್ಲಿ ರಾಮ ಮಂದಿರ ಅಸ್ತ್ರವನ್ನು ಮುಂದಿಟ್ಟುಕೊಳ್ಳುವುದು ಖಚಿತ. ಬಿಜೆಪಿಯ ಈ ಬಾಣವನ್ನು ಸಮರ್ಥವಾಗಿ ಎದುರಿಸುವಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ವಿಫಲವಾಗಿದೆ. ರಾಮ ಮಂದಿರ ಹಿಂದುಗಳ ಭಾವಾನಾತ್ಮಕ ವಿಚಾರ. ಇದನ್ನು ಬಹಳ ನಾಜೂಕಾಗಿ ನಿರ್ವಹಿಸಬೇಕಿತ್ತು. ಆದರೆ ಬಿಜೆಪಿ ನಾಯಕರು ಹಾಕಿದ ಬಲೆಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಸಿಲುಕಿ ವಿಲವಿಲ ಒದ್ದಾಡುತ್ತಿದೆ. ಅವರಿಗೂ ಅತ್ತ ದರಿ, ಇತ್ತ ಪುಲಿ ಎಂಬ ಪರಿಸ್ಥಿತಿ ಆಗಿತ್ತು. ರಾಮ ಮಂದಿರ ಉದ್ಘಾಟನೆಗೆ ಹೋದರೆ ಪಕ್ಷದ ಮತ ಬ್ಯಾಂಕ್‌ ಆಗಿರುವ ಮುಸ್ಲಿಮರು ತಿರುಗಿ ಬೀಳುತ್ತಾರೆ. ಹೋಗದಿದ್ದರೆ ಹಿಂದೂಗಳ ಆಕ್ರೋಶ ಎದುರಿಸಬೇಕಾಗುತ್ತದೆ. ಅಂತಿಮವಾಗಿ ಕಾಂಗ್ರೆಸ್‌ ಹಿಂದೂಗಳಿಗಿಂತ, ತನ್ನ ಮತ ಬ್ಯಾಂಕ್‌ ಮುಸ್ಲಿಮರ ಪರ ಇರುವ ನಿರ್ಧಾರ ತೆಗೆದುಕೊಂಡಿದೆ.

90ರ ದಶಕದಿಂದಲೂ ಹಿಂದುತ್ವದ ಗಿಡ ನೆಟ್ಟು ನೀರು ಹಾಕಿ ಪೋಷಿಸಿ ಈಗ ಆ ಹೆಮ್ಮರದ ನೆರಳಿನಲ್ಲಿ ಗೆಲುವಿನ ಸುಖ ಕಾಣುತ್ತಿರುವ ಬಿಜೆಪಿಗೆ ಮಂದಿರ ಉದ್ಘಾಟನೆ ಎನ್ನುವುದು ಹಿಂದೆಂದೂ ಸಿಗದಂಥ ಮತ್ತೊಂದು ಅಪೂರ್ವ ಅವಕಾಶ ಸಿಕ್ಕಂತಾಗಿದೆ. ಬಿಜೆಪಿಯ ರಣಘೋಷದ ನಡುವೆ ಕಾಂಗ್ರೆಸ್‌ ಅಸಹಾಯಕತೆಯಿಂದ ಇಕ್ಕಟ್ಟಿನಲ್ಲಿ ಸಿಲುಕಿದಂತಾಗಿದೆ.

ನಿಂಬೆ ಹಣ್ಣಿನ ರೇವಣ್ಣಗೇ ಜೀವ ಭಯವಂತೆ!

ಮಾಜಿ ಸಚಿವ ಎಚ್‌ ಡಿ ರೇವಣ್ಣ ಅವರನ್ನು ನೋಡಿದರೆ ಶಾಸಕರೇ ಹೆದರಿಕೊಳ್ಳುತ್ತಾರೆ ಎನ್ನುವ ಮಾತಿದೆ. ಆದರೆ ಇಂತಹ ರೇವಣ್ಣ ಅವರ ಕೊಲೆಗೆ ಕೆಲವರು ಹದಿನೈದು ದಿನಗಳಿಂದ ಸ್ಕೆಚ್‌ ಹಾಕಿದ್ದಂತೆ. ಇದನ್ನ ಕೇಳಿದ ಅವರ ಮನೆಯವರು ನಂಬಲಿಲ್ಲವಂತೆ. ಕಾರಣ ಬೆಳಗ್ಗೆ ಎದ್ದರೆ ದೇವರು, ನಿಂಬೆ ಹಣ್ಣು ಅಂತೆಲ್ಲ ಓಡಾಡುವ ರೇವಣ್ಣಗೆ ಸ್ಕೆಚ್‌‌ ಹಾಕುವ ಧೈರ್ಯ ಯಾರಿಗಿದೆ? ಜತೆಗೆ ಯಾರೋ ಟೂ ವೀಲರ್‌ನಲ್ಲಿ ಬಂದವನಿಗೆ ಹಿಗ್ಗಾಮುಗ್ಗಾ ಜಾಡಿಸಿದ ರೇವಣ್ಣರ ಪತ್ನಿ ಭವಾನಿ ಅವರು ರೇವಣ್ಣಗೆ ಸ್ಕೆಚ್‌ ಹಾಕಿದ್ರೆ ಬಿಡ್ತಾರಾ? ಆ ಸ್ಕೆಚ್‌ ಹಾಕಿದವರಿಗೆ ಭವಾನಿ ಅವರು ಎಂಥೆಂಥ ಅಣಿ ಮುತ್ತುಗಳನ್ನು ಉದುರಿಸಬಹುದು ಎಂಬ ಬಗ್ಗೆ ಕಾಮನ್‌‌ ಚರ್ಚೆ ವಿಧಾನಸೌಧ ರೌಂಡ್ಸ್‌ನಲ್ಲಿ ಕೇಳಿ ಬಂತು.

ಈ ಸುದ್ದಿಯನ್ನೂ ಓದಿ: ವಿಧಾನಸೌಧ ರೌಂಡ್ಸ್: ಡಿಕೆಶಿಗೆ ಡಿಸಿಎಂ ಹುದ್ದೆ ಟೆನ್ಶನ್‌; ಸಚಿವರಿಗೆ ಲೋಕಸಭೆ ಟಿಕೆಟ್‌ ಟೆನ್ಷನ್‌!

Exit mobile version