| ಮಾರುತಿ ಪಾವಗಡ
2022ರ ಡಿಸೆಂಬರ್ ತಿಂಗಳ ಇದೇ ದಿನ ರಾಜ್ಯದ ಮಟ್ಟಿಗೆ ಬಹಳ ಪ್ರಾಮುಖ್ಯತೆ ಪಡೆದ ದಿನವಾಗಿತ್ತು. ಅಧಿಕಾರದಲ್ಲಿದ್ದ ಬಿಜೆಪಿ ನಾಯಕರು(BJP Leaders) ಮತ್ತೆ ತಮ್ಮದೇ ಸರ್ಕಾರ ಅನ್ನೋ ರೀತಿಯಲ್ಲಿ 2023ರ ವರ್ಷವನ್ನು ಸ್ವಾಗತಿಸಿದ್ದರು. ವಿಪಕ್ಷ ಸ್ಥಾನದಲ್ಲಿದ್ದ ಕಾಂಗ್ರೆಸ್ (Congress Party) ಕೂಡ ಈ ವರ್ಷ ತಮ್ಮ ವರ್ಷ ಎಂಬಂತೆ ಸ್ವಾಗತಿಸಿದ್ದರು(New Year). ಕೊನೆಗೆ ಚುನಾವಣೆಯಲ್ಲಿ (Karnataka Assembly Election) ಕಾಂಗ್ರೆಸ್ 135+1 ಸ್ಥಾನ ಗೆದ್ದು ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿತು. ಇನ್ನು 2024ರ ವರ್ಷ ದೆಹಲಿಯಲ್ಲಿ ಗದ್ದುಗೆ ಹಿಡಿಯುವ ವರ್ಷವಾಗಿದ್ದು. ಇದು ಮೋದಿ ಅವರಿಗೆ (PM Modi) ಮೂರನೇ ಅವಧಿಗೆ ಅಧಿಕಾರ ಕೊಡುವ ವರ್ಷ ಎಂಬ ಲೆಕ್ಕಾಚಾರ ಶುರುವಾಗಿದೆ. ಆದರೆ 2014, 19ರಲ್ಲಿ ಮೋದಿಗೆ ಇದ್ದ ಅಂಡರ್ ಕರೆಂಟ್ 2024ರಲ್ಲಿ ಇಲ್ಲ ಅನ್ನೋ ಮಾತನ್ನು ಕಾಂಗ್ರೆಸ್‌ನವರು ಹೇಳ್ತಿದ್ದಾರೆ. ಫಲಿತಾಂಶ ಏನು ಬರಲಿದೆ ಮುಂದೆ ನೋಡೋಣ.
ವರ್ಷದ ಕೊನೆಯಲ್ಲಿ ಕೊರೋನ ಆತಂಕ ಸೃಷ್ಟಿ
ಎರಡು ವರ್ಷಗಳ ಹಿಂದೆ ದೇಶದ ಜನರನ್ನು ಬೆಚ್ಚಿ ಬೀಳಿಸಿದ್ದ ಕೊರೋನ ಎಂಬ ಮಹಾಮಾರಿ ಡಿಸೆಂಬರ್ ತಿಂಗಳಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿದೆ. ರಾಜ್ಯದಲ್ಲೂ ಪ್ರಕರಣಗಳ ಸಂಖ್ಯೆ ದುಪ್ಪಟ್ಟು ಮಾಡಿ ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ.
ಅಭಿವೃದ್ಧಿಗೆ ಅನಾಹುತ ತಂದ ಗ್ಯಾರಂಟಿಗಳು
ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿ ಜಾರಿ ಮಾಡಿರುವ ಗ್ಯಾರಂಟಿಗಳ ಬಗ್ಗೆ ಸ್ವತಃ ಕಾಂಗ್ರೆಸ್ ಕಾರ್ಯಕರ್ತರಿಗೆ ಖುಷಿ ಇಲ್ಲ. ಒಂದು ಕಡೆ ಗ್ಯಾರಂಟಿಗಳ ಯಶಸ್ವಿ ಜಾರಿ ಅಸಾಧ್ಯವಾಗಿದೆ. ಒಂದು ಊರಿನ ಒಂದು ಓಣಿಯಲ್ಲಿ ಇರೋರಿಗೆ ಒಬ್ಬರಿಗೆ ದುಡ್ಡು ಬಂದು ಮತ್ತೊಬ್ಬರಿಗೆ ದುಡ್ಡು ಬರದಿದ್ರೆ ಏನಾಗಬಹುದು? ಹೀಗಾಗಿ ಇದರ ಬಗ್ಗೆ ಬೂತ್ ಮಟ್ಟದ ನಾಯಕರಿಗೆ ಜನ ಪ್ರಶ್ನೆ ಮಾಡ್ತಿದ್ದಾರೆ. ಇನ್ನು ಈ ಗ್ಯಾರಂಟಿಗಳಿಂದ ಅಭಿವೃದ್ಧಿ ಕೆಲಸಗಳಿಗೆ ಹಣ ಇಲ್ಲ ಅನ್ನೋ ಸಿಎಂ, ಡಿಸಿಎಂ ಉತ್ತರಗಳಿಂದ ಶಾಸಕರು ಮತ್ತು ಕಾರ್ಯಕರ್ತರು ಕುಗ್ಗಿ ಹೋಗಿದ್ದಾರೆ. ಒಟ್ಟಾರೆ ರಾಜ್ಯ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಆರೇ ತಿಂಗಳಲ್ಲಿ ನೆಗೆಟಿವ್ ರಿಪೋರ್ಟ್ ಪಡೆಯುವ ಪರಿಸ್ಥಿತಿ ಎದುರಾಗಿದೆ.
ಲೋಕಸಭೆ ಚುನಾವಣೆಗೆ ಅಡಿಪಾಯ ಹಾಕಿದ ವರ್ಷ
ಈ ವರ್ಷದಲ್ಲಿ ಬರುವ ಲೋಕಸಭೆ ಚುನಾವಣೆಗೆ ಈಗಾಗಲೇ ಮೂರೂ ಪಕ್ಷಗಳು ತಯಾರಿ ಶುರು ಮಾಡಿವೆ. ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಸೀಟ್ ಹಂಚಿಕೆ ಮಾತ್ರ ಬಾಕಿ ಇರಿಸಿಕೊಂಡಿವೆ. ಕಾಂಗ್ರೆಸ್ ಈ ಬಾರಿ ರಾಜ್ಯದಿಂದ ಅಧಿಕ ಸ್ಥಾನಗಳನ್ನ ಗೆಲ್ಲಿಸಿ ಕಳುಹಿಸಬೇಕು ಅಂತ ನಿರ್ಧಾರ ಮಾಡಿದರೂ ಅಭ್ಯರ್ಥಿಗಳ ಕೊರತೆ ಎದುರಿಸುತ್ತಿದೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಕಡಿಮೆ ಆಗದಿರುವುದು, ಕಾಂಗ್ರೆಸ್‌ನ ದೆಹಲಿ ನಾಯಕತ್ವ ಬಲಿಷ್ಠಗೊಳ್ಳದಿರುವುದು ಹಾಲಿ ಸಚಿವರೇ ಅಭ್ಯರ್ಥಿ ಆಗಲು ಹಿಂದೇಟು ಹಾಕುವಂತಾಗಿದೆ.
ವೇಣುಗೋಪಾಲ್ ಮುಂದೆ ಸಿಕ್ಸರ್ ಹೊಡೆಯಲು ಹೋಗಿ ಕ್ಲಿನ್ ಬೋಲ್ಡ್ ಆದ್ರಾ ಜಮೀರ್?
ಸಚಿವ ಜಮೀರ್ ಅಹಮದ್‌ಗೆ 2023 ಲಕ್ಕಿ ಇಯರ್. ರಾಜ್ಯದಲ್ಲಿ ಮುಸ್ಲಿಮ್ ಸಮುದಾಯದ ಪ್ರಭಾವಿ ನಾಯಕನಾಗಿ ಹೊರಹೊಮ್ಮಿದ್ದಾರೆ. ಇತ್ತ ತೆಲಂಗಾಣದಲ್ಲೂ ಸಹ ಅವರು ಪ್ರಚಾರ ಮಾಡಿದ ಕಡೆ ಮುಸ್ಲಿಮ್ ಸಮುದಾಯದ ಮತಗಳು ಸಾಲಿಡ್ ಆಗಿ ಬಿದ್ದಿವೆ. ಇದೇ ಖುಷಿಗೆ ದೆಹಲಿಗೆ ಹೋಗಿದ್ದ ಜಮೀರ್, ವೇಣುಗೋಪಾಲ್ ಮುಂದೆ ರಾಜ್ಯದಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಮುಸ್ಲಿಮ್ ಅಭ್ಯರ್ಥಿಗಳಿಗೆ ಟಿಕೆಟ್ ಕೊಟ್ಟರೆ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು ಎಂದು ಹೇಳಿದ್ರಂತೆ. ಹುಬ್ಬಳ್ಳಿ- ಧಾರವಾಡ, ಹಾವೇರಿ, ಬೀದರ್, ಬೆಂಗಳೂರು ಕೇಂದ್ರ ಕ್ಷೇತ್ರಗಳನ್ನು ಕೊಡುವಂತೆ ಒತ್ತಾಯ ಮಾಡಿದರಂತೆ. ಜಮೀರ್ ಮಾತು ಕೇಳಿಸಿಕೊಂಡ ವೇಣುಗೋಪಾಲ್ ಮೂರು ಕೋಡೋಣ. ಅದರಲ್ಲೂ ಬೆಂಗಳೂರು ಕೇಂದ್ರದಲ್ಲಿ ನೀವೇ ಅಭ್ಯರ್ಥಿ ಆಗಿ ಎಂದ್ರಂತೆ. ವೇಣುಗೋಪಾಲ್ ಮಾತು ಕೇಳಿಸಿಕೊಂಡ ಜಮೀರ್ ಮಾರನೇ ದಿನ ಬೆಳಗ್ಗೆ ಸಿದ್ದರಾಮಯ್ಯ ಮನೆಯಲ್ಲಿ ಪ್ರತ್ಯಕ್ಷವಾಗಿ ಏನ್ ಮಾಡೋದು ಬಾಸ್ ಅಂತ ತಲೆ ಮೇಲೆ ಕೈಹೊತ್ತುಕೊಂಡು ಕೂತುಬಿಟ್ರಂತೆ!
ರಾಹುಲ್ ಗಾಂಧಿ ಮೇಲೆ ರಾಜ್ಯಗಳ ನಾಯಕರಿಗೆ ನಂಬಿಕೆ ಇಲ್ಲ
ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಬಾಯಲ್ಲಿ ಬರೋದು ನಮ್ಮ ದೆಹಲಿ ಹೈಕಮಾಂಡ್ ವೀಕ್ ಅಂತ. ಅದ್ರಲ್ಲೂ ರಾಹುಲ್ ಗಾಂಧಿ ಮೇಲೆ ಯಾವ ನಾಯಕರಿಗೂ ನಂಬಿಕೆ ಬರ್ತಿಲ್ಲ. ಮೋದಿ ಮುಂದೆ ಇವರು ನಾಯಕರೇ ಅಲ್ಲ ಅಂತ ಒಪ್ಪಿಕೊಳ್ಳುತ್ತಾರೆ. ಆದರೆ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದ ರಾಜ್ಯಗಳಲ್ಲಿ ಯಾರೂ ಅಧಿಕಾರ ಬಿಟ್ಟು ಕೇಂದ್ರಕ್ಕೆ ಹೋಗುವ ಮನಸ್ಸು ಮಾಡಲ್ಲ. ಈಗ ರಾಜ್ಯದಿಂದಲೇ ನೋಡೋಣ. ಮೈಸೂರಿನಲ್ಲಿ ಕಾಂಗ್ರೆಸ್‌ಗೆ ಪ್ರತಾಪ ಸಿಂಹರನ್ನು ಸೋಲಿಸುವ ಸಮರ್ಥ ಅಭ್ಯರ್ಥಿ ಸಿಕ್ತಿಲ್ಲ. ಇದನ್ನ ಸಿದ್ದರಾಮಯ್ಯ ಚಾಲೆಂಜ್ ಆಗಿ ತಗೊಂಡು ಮೈಸೂರಿನಿಂದ ಸ್ಪರ್ಧೆ ಮಾಡಬಹುದು. ಆದರೆ ರಾಷ್ಟ್ರ ರಾಜಕಾರಣ ಇಷ್ಟವಿಲ್ಲ. ಡಿಸಿಎಂ ಡಿ ಕೆ ಶಿವಕುಮಾರ್ ಚಿಕ್ಕಬಳ್ಳಾಪುರ ಇಲ್ಲವೆ ಮಂಡ್ಯದಿಂದ ಸ್ಪರ್ಧೆ ಮಾಡಿದ್ರೆ ಕಾಂಗ್ರೆಸ್‌ಗೆ ಲಾಭ ಆಗುತ್ತೆ. ಆದರೆ ಡಿಕೆಶಿಗೆ ಇದು ಬೇಕಿಲ್ಲ. ಇನ್ನು ಜಮೀರ್, ರಾಮಲಿಂಗರೆಡ್ಡಿ, ಜಾರ್ಜ್, ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ ಯಾರಿಗೂ ಸಹ ಲೋಕಸಭೆ ಅಭ್ಯರ್ಥಿ ಆಗಲು ಇಷ್ಟವಿಲ್ಲ. ಹೀಗಾದರೆ ರಾಹುಲ್ ಗಾಂಧಿ ಅಥವಾ ಖರ್ಗೆ ಪ್ರಧಾನಿಯಾಗಲು ಹೇಗೆ ಸಾಧ್ಯ ಎನ್ನುವುದು ಕಾಂಗ್ರೆಸ್ ಚಿಂತಕರ ಕೊರಗು. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅಂಥವರು ರಾಹುಲ್ ಗಾಂಧಿಗೆ ಹೆಗಲಿಗೆ ಹೆಗಲು ಕೊಡದೇ ಹೋದರೆ ರಾಹುಲ್ ಹೇಗೆ ರಾಷ್ಟ್ರ ಮಟ್ಟದ ಬಲಿಷ್ಠ ನಾಯಕನಾಗಿ ಬೆಳೆಯಲು ಸಾಧ್ಯ ಎಂಬ ಮಾತು ಕೇಳಿ ಬರುತ್ತಿದೆ.
ಈ ಸುದ್ದಿಯನ್ನೂ ಓದಿ: ವಿಧಾನಸೌಧ ರೌಂಡ್ಸ್: ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೊ; ಮೆಚ್ಚುಗೆ ಗಳಿಸಿದ ಖಾದರ್ ನಡೆ