ಪು. ರವಿವರ್ಮ, ಉಪನ್ಯಾಸಕ
ಪ್ರಜಾಪ್ರಭುತ್ವದ ಮಂದಿರ ಎನಿಸಿರುವ ನವ ಸಂಸತ್ ಭವನ ಇಂದು ಸ್ವತ್ತ್ವದ, ಸ್ವಾಭಿಮಾನದ ಬುನಾದಿಯ ಮೇಲೆ ತಲೆಯೆತ್ತಿ ನಿಂತಿರುವುದು ರಾಷ್ಟ್ರದ ಸಾರ್ವಭೌಮ ಜೀವನದಲ್ಲಿ ಒಂದು ಸುವರ್ಣಸಂಧಿ. ಅದೂ ಸ್ವಾತಂತ್ರ್ಯ ವೀರ ಸಾವರ್ಕರ್ ಅವರ ಜನ್ಮದಿನದಂದೇ ಈ ಸ್ವತ್ತ್ವಪೂರ್ಣ ಸಂಸತ್ ಭವನದ ಲೋಕಾರ್ಪಣವಾಗುತ್ತಿರುವುದು ಸವಿಶೇಷ. ರಾಷ್ಟ್ರಜೀವನವನ್ನು ಯಾವ ಆದರ್ಶದ ಬೆಳಕಿನಲ್ಲಿ, ಯಾವ ಸಿದ್ಧಾಂತದ ಅಡಿಗಲ್ಲ ಮೇಲೆ ಮತ್ತೆ ಕಟ್ಟಬೇಕು ಎಂಬ ಸಂದಿಗ್ಧದ ಸಮಯದಲ್ಲಿ ಭಾರತದ ಅಸ್ಖಲಿತ ಅಭ್ಯುದಯಕ್ಕೆ ಸಮರ್ಥವಾದ ರಾಷ್ಟ್ರೀಯತೆಯ ರೂಪರೇಖೆಗಳನ್ನು ಲಕ್ಷಣೀಕರಿಸಿದವರು ವೀರ ಸಾವರ್ಕರ್. ರಾಷ್ಟ್ರವಿಮೋಚನೆಗೆ ಅವರಂತೆ ಆತ್ಯಂತಿಕ ತ್ಯಾಗ ಮಾಡಿದ ಸಾಹಸಿಗಳು ಜಗತ್ತಿನ ಇತಿಹಾಸದಲ್ಲಿ ದುರ್ಲಭ.
ಭಾರತವನ್ನೂ ಇಂಗ್ಲೆಂಡ್, ಅಮೆರಿಕ ಅಥವಾ ರಷ್ಯಾ, ಚೀನಾಗಳಂತೆ ಎರಕಹೊಯ್ಯುವ ಧಾವಂತದಲ್ಲಿ ಅಂದಿನ ರಾಜಕೀಯ ನೇತೃತ್ತ್ವ ಯೋಚಿಸುತ್ತಿದ್ದಾಗ, ತಮ್ಮ ಸ್ವತಂತ್ರ ಚಿಂತನೆಯಿಂದ ವಿಚಾರಮಂಥನ ನಡೆಸಿ ಪ್ರಸ್ಫುಟ ರಾಷ್ಟ್ರೀಯತೆಯ ದೃಷ್ಟಿಯನ್ನು ನೀಡಿದವರು ಸಾವರ್ಕರ್. 1857ರಲ್ಲಿ ನಡೆದಿದ್ದು ಸಿಪಾಯಿದಂಗೆಯಲ್ಲ, ಅದೊಂದು ಮಹಾಸಂಗ್ರಾಮ ಎಂಬುದನ್ನು ಮೊತ್ತಮೊದಲಿಗೆ ಪರಾಮರ್ಶನೆ ಮಾಡಿದವರು ಅವರೇ. ’ಭಾರತದ್ದು ಸೋಲಿನ ಇತಿಹಾಸ’ ಎಂದು ಸುಳ್ಳಾಡುತ್ತಿದ್ದ ಚರಿತ್ರೆಯ ಪುಟಗಳಲ್ಲಿ ’ಭಾರತದ್ದು ಸಂಘರ್ಷದ ಇತಿಹಾಸ’ ಎಂಬ ವಿಶುದ್ಧ ಸತ್ಯವನ್ನು ಈ ಶೋಧಕಾರ್ಯದ ಮೂಲಕ ಪುನರ್ನಿರೂಪಿಸಿದವರು ಸಾವರ್ಕರ್. ಆ ಮೂಲಕ ಭಾರತದ ತರುಣರ ಅಂತಃಕರಣದಲ್ಲಿದ್ದ ಉದಾಸೀನತೆ, ಕ್ರಿಯಾಶೂನ್ಯತೆ, ವಿಫಲತೆಗಳನ್ನು ನಿವಾರಿಸಿಕೊಂಡು ಸ್ವಯಂಪ್ರೇರಣೆ, ಕಾರ್ಯೋತ್ಸಾಹ, ತ್ಯಾಗ ಪೌರುಷಗಳು ಬೆಳೆದು ನಿಲ್ಲುವಂತಹ ಪ್ರೇರಣೆಯನ್ನು ನೀಡಿದವರು ಸಾವರ್ಕರ್.
ಹಿಂದುಗಳೇ ರಾಷ್ಟ್ರ!
ಭಾರತಕ್ಕೆ ’ತನ್ನತನ’ ದ ಅರಿವು ಮೂಡಿಸಿದ ಮಹನೀಯರಲ್ಲಿ ಸಾವರ್ಕರ್ ಪ್ರಮುಖರು. ಹಿಂದುಗಳೆಂದರೆ ಯಾರು? ಎಂಬ ಪ್ರಶ್ನೆಗೆ ಇಲ್ಲಿನ ವಿದ್ವಾಂಸರನೇಕರು ಹಲವು ಬಗೆಯಲ್ಲಿ ಚಿಂತಿಸಿ ವ್ಯಾಖ್ಯಾನಿಸಿ ಉಪಕರಿಸಿದ್ದಾರೆ. ಕೆಲವರು ಅಪವ್ಯಾಖ್ಯಾನಗಳನ್ನು ಮಾಡಿ ಅಪಕರಿಸಿಯೂ ಇದ್ದಾರೆ. ಆದರೆ ಸಾವರ್ಕರ್ ಈ ಪ್ರಶ್ನೆಗೆ ಒಂದು ತಾರ್ಕಿಕ ಸಮಾಧಾನವನ್ನು, ಎಲ್ಲರೂ ಒಪ್ಪಬಹುದಾದ ಮತ್ತು ಆ ಪದದ ಅರ್ಥದ ದೃಷ್ಟಿಯಿಂದಲೂ ಅತ್ಯಂತ ಸಮಂಜಸವಾಗಿರುವ ರೀತಿಯಲ್ಲಿ ಚಿಂತಿಸಿದ್ದಾರೆ. ಸಾವರ್ಕರ್‌ಗಿಂತ ಮೊದಲು ಲೊಕಮಾನ್ಯ ತಿಲಕರು ಹಿಂದು ಎಂದರೆ ಯಾರು? ಹಿಂದು ಧರ್ಮದ ವ್ಯಾಖ್ಯೆ ಏನು? ಇತ್ಯಾದಿ ಪ್ರಶ್ನೆಗಳಿಗೆ ತಮ್ಮದಾದ ಉತ್ತರವನ್ನು ಹುಡುಕಲು ಪ್ರಯತ್ನಿಸಿದ್ದಾರೆ. ಯಾರು ವರ್ಣಾಶ್ರಮದಲ್ಲಿ ನಂಬಿಕೆ ಇಡುವರೋ, ಯಾರು ವೇದಗಳನ್ನು ಒಪ್ಪುತ್ತಾರೋ, ಯಾರಿಗೆ ಇಲ್ಲಿನ ಉಪಾಸನ ಕ್ರಮಗಳ ಬಗ್ಗೆ ಶ್ರದ್ಧೆ ಉಂಟೋ ಅವರೇ ಹಿಂದುಗಳು ಎಂಬ ಸಮಗ್ರವಲ್ಲದ ವ್ಯಾಖ್ಯೆಯನ್ನು ತಿಲಕರು ಪ್ರತಿಪಾದಿಸಿದ್ದಾರೆ. ಹಾಗಾದರೆ ಈ ವ್ಯಾಖ್ಯೆಯ ಮಾಪದಂಡದ ಪ್ರಕಾರ ಚಾತುರ್ವರ್ಣ ಮತ್ತು ವೇದಗಳನ್ನು ಒಪ್ಪದ ಜೈನ, ಬೌದ್ಧ, ಲಿಂಗಾಯತ-ವೀರಶೈವ, ಸಿಕ್ಖರು ಇವರ್ಯಾರು ಹಿಂದುಗಳಲ್ಲವೇ? ಇಂತಹ ಗೊಂದಲದ ಪರಿಸ್ಥಿತಿ ಏರ್ಪಟ್ಟು ಮುಂದಿನ ದಿಕ್ಕು ದಾರಿಗಳ ಬಗೆಗೆ ಅನಿಶ್ಚಿತತೆ , ಸಂದಿಗ್ಧ ಇದ್ದಾಗ ಯಾವುದೋ ಒಂದು ರಾಜಿ ಸೂತ್ರಕ್ಕೆ ಒಳಪಟ್ಟು ಇರುವುದನ್ನೇ ಉಳಿಸಿಕೊಳ್ಳುವ ಮಾರ್ಗವನ್ನು ಬಿಟ್ಟು, ಒತ್ತಡದಿಂದ ಪಕ್ಕಕ್ಕೆ ಸರಿದು ಮೂಲಸ್ಥಿತಿಯ ಸತರ್ಕ ಚಿಂತನೆಗೆ ತೊಡಗಿ ಇಲ್ಲಣಗಳನ್ನು ಉಪಶಮನಗೊಳಿಸಿಕೊಳ್ಳುವುದು ಸಾವರ್ಕರ್ ಅನುಸರಿಸಿದ ಮಾರ್ಗ.
ಗಾಢವಾದ ಆತ್ಮವಿಸ್ಮೃತಿಯ ಕಾರಣಕ್ಕೆ ಹಲವು ಆಘಾತಗಳನ್ನು ಎದುರಿಸಿದ್ದ ಸಮಾಜ ಆಂತರಿಕವಾಗಿ ಕುಗ್ಗಿಹೋಗಿದ್ದಾಗ ಆ ಸಮಾಜಕ್ಕೆ ಅದರ ಸ್ವಸ್ವರೂಪ ಯಾವುದೆಂಬ ಪರಿಜ್ಞಾನವನ್ನು ಮೂಡಿಸಬೇಕೆಂಬುದು ಸಾವರ್ಕರ್ ಗುರುತಿಸಿದ ಅನಿವಾರ್ಯತೆ. ಇದನ್ನೇ ವ್ಯಕ್ತಿಗತ ನೆಲೆಯಲ್ಲಿ ಅರ್ಜುನನಿಗೆ ಶ್ರೀ ಕೃಷ್ಣ ಮಾಡಿದ್ದು. ಸಾಮಾಜಿಕ ನೆಲೆಯಲ್ಲಿ ಸ್ವಾಮಿ ವಿವೇಕಾನಂದರು ಶ್ರಮಿಸಿ ಯಶಸ್ವಿಯಾದದ್ದು ಇದೇ ಕಾರ್ಯದಲ್ಲಿ. ಇಪ್ಪತ್ತನೇ ಶತಮಾನದಲ್ಲಿ ಹಿಂದೂ ಸಮಾಜ ಈಗ ಮತ್ತೆ ಅದೇ ಸ್ಥಿತಿಯನ್ನು ಚಾಕ್ರಿಕವಾದ ತಿರುವಿನಲ್ಲಿ ನಿಂತು ಅನುಭವಿಸುತ್ತಿತ್ತು.
ಹಿಂದೂ ಸಮಾಜದ ಪಾರಂಪರಿಕ ರೂಪ-ಆಕಾರಗಳನ್ನು ಸಾಮಾಜಿಕ-ರಾಷ್ಟ್ರೀಯ ನೆಲೆಯಲ್ಲಿ ವಿವರಿಸಿ ಆ ಜನಾಂಗವನ್ನೇ ರಾಷ್ಟ್ರವೆಂದು ವ್ಯಾಖ್ಯಾನಿಸುವುದು ಸಾವರ್ಕರ್ ಆವಿಷ್ಕರಿಸಿದ ಉತ್ತರ.
ಆಸಿಂಧು ಸಿಂಧುಪರ್ಯಂತಾ ಯಸ್ಯ ಭಾರತ ಭೂಮಿಕಾ|
ಪಿತೃಭೂಃ ಪುಣ್ಯಭೂಶೈವ ಸ ವೈ ಹಿಂದುರಿತಿ ಸ್ಮೃತಃ ||
ತಾತ್ಪರ್ಯ: ಯಾರಿಗೆಲ್ಲ ಭಾರತ ಜನ್ಮಭೂಮಿ ಮಾತ್ರವಲ್ಲದೇ ಹಿಮಾಚಲದಿಂದ ಕಡಲ ತಡಿಯವರೆಗಿನ ಈ ನೆಲೆಯು ಪಿತೃಭೂಮಿಯು, ಪುಣ್ಯ ಭೂಮಿಯೂ ಆಗಿದೆಯೋ ಅವರೆಲ್ಲರೂ ಹಿಂದುತ್ವದ ಪರಿದಿಯೊಳಗೆ ಬರುತ್ತಾರೆ ಮತ್ತು ಅವರೇ ಹಿಂದುಗಳು. ಸಾವರ್ಕರ್ ಅವರ ಈ ನಿರೂಪಣೆಯಲ್ಲಿ ಮತಪ್ರಸಕ್ತಿ ಇಲ್ಲ. ಇಲ್ಲಿ ಆಸ್ತಿಕ, ನಾಸ್ತಿಕ, ವರ್ಣಾಶ್ರಮ ಪರ-ವಿರೋಧಿಗಳೆಲ್ಲರೂ ಈ ಹಿಂದುತ್ವದ ಪರಿಧಿಯೊಳಗೇ ನಿಲ್ಲುತ್ತಾರೆ. ಇದು Inclusive ಹಿಂದುತ್ವ, Exclusive ಅಲ್ಲ!
’ಉತ್ತರಂ ಯತ್ ಸಮುದ್ರಸ್ಯ ಹಿಮಾದ್ರೇಶೈವ ದಕ್ಷಿಣಮ್ |
ವರ್ಷಂ ತದ್ ಭಾರತಂ ನಾಮ ಭಾರತೀ ಯತ್ರ ಸಂತತಿಃ ||
ವಿಷ್ಣು ಪುರಾಣದ ಈ ಪ್ರಸಿದ್ಧ ಶ್ಲೋಕ ”ಸಮುದ್ರಕ್ಕೆ ಉತ್ತರದಲ್ಲಿಯೂ ಹಿಮಾಲಯಕ್ಕೆ ದಕ್ಷಿಣದಲ್ಲಿಯೂ ಇರುವ ನಾಡು ಭಾರತವೆನಿಸಿದೆ. ಇಲ್ಲಿ ಜನಿಸಿ ವಾಸ ಮಾಡುತ್ತಿರುವ ನಾಗರೀಕರೇ ಭಾರತೀಯರು.” ಎಂದು ವ್ಯಾಖ್ಯಾನಿಸಿದೆ. ಇದರಲ್ಲಿ ಕೇವಲ ಬೌಗೋಳಿಕ ಗಡಿಗಳನ್ನು ಮಾತ್ರವೇ ಆಧಾರವಾಗಿಟ್ಟುಕೊಂಡು ಭಾರತೀಯರು ಎಂದರೆ ಯಾರು?, ಭಾರತ ಯಾವುದು? ಎಂಬುದನ್ನು ವಿವರಿಸಿದೆ. ಆದರೆ ಸಾವರ್ಕರ್ ಚಿಂತನೆ ಇದನ್ನು ಇನ್ನೊಂದು ಹಂತ ಮೇಲೇರಿಸಿ ಪ್ರಸ್ಫುಟಗೊಳಿಸಿತ್ತು.
ರಾಷ್ಟೀಯತೆ ಎನ್ನುವುದು ಕೇವಲ ಗಡಿಯ ಮಾನದಂಡದ ಅಳತೆಯಲ್ಲಿ ಅಳೆದು ಬಿಡಬಹುದಾದ ವಿಷಯವಲ್ಲ, ಅದರಲ್ಲಿ ಭಾರತೀಯ ಮೌಲ್ಯಗಳ ಸ್ಫೂರ್ತಿಸ್ಥಾನಗಳೂ ಸೇರಬೇಕಾಗಿವೆ ಎಂಬುದು ಸಾವರ್ಕರ್ ಚಿಂತನೆಯಾಗಿತ್ತು. ಆದ್ದರಿಂದಲೇ ತಮ್ಮ ಲಕ್ಷಣ ನಿರೂಪಣಾ ಕ್ರಮವನ್ನು ವೈದಿಕ ಪರಂಪರೆಗೆ ಅನುಸ್ಯೂತವಾಗಿಯೇ ಇರಬೇಕೆಂಬ ಶ್ರದ್ಧೆಯನ್ನು ಸಾವರ್ಕರ್ ತಮ್ಮ ವ್ಯಾಖ್ಯೆಯಲ್ಲಿ ವಹಿಸಿರುವುದು ಕಾಣುತ್ತದೆ. ಹೀಗಾಗಿ “ಆಸಿಂಧು ಸಿಂಧು ಪರ್ಯಂತ..” ಶ್ಲೋಕವು ಇಂದಿನ ಪೀಳಿಗೆಗೆ ಇದಾವುದೋ ಧರ್ಮಶಾಸ್ತ್ರದ, ಉಪನಿಷತ್ತಿನ ಇಲ್ಲವೇ ಯಾವುದೋ ಪುರಾಣದ ಉಲ್ಲೇಖ ಇರಬೇಕು ಎಂಬತಹ ಗೌರವಭಾವ ಇದೆ.
’ಹಿಂದೂ’ ಹೆಸರೇ ಏಕೆ?
ನಮ್ಮ ಶತ್ರುಗಳು ನಮ್ಮನ್ನು ಹಿಂದುಗಳೆಂಬ ಕಾರಣಕ್ಕೇ ವಿರೋಧಿಸುತ್ತಾರೆ. ನಮ್ಮ ಮಿತ್ರರೂ ನಾವು ಹಿಂದುಗಳೆಂಬ ಕಾರಣದಿಂದಲೇ ಸ್ನೇಹ ತೋರಿದ್ದಾರೆ. ಈ ನೆಲದಲ್ಲಿ ನಡೆದ ಎಲ್ಲ ಹೋರಾಟಗಳು ಹಿಂದೂ ಸಂಸ್ಕೃತಿಯ ರಕ್ಷಣೆಗಾಗಿ ನಡೆದ ಹೋರಾಟಗಳೇ ಆಗಿವೆ. ಇಲ್ಲಿ ನೋವನ್ನು ಅನುಭವಿಸಿದ ಸನಾತನಿಗಳು, ಸಿಕ್ಖರು, ಮರಾಠರು, ಮದ್ರಾಸಿನವರು, ಬ್ರಾಹ್ಮಣರು, ದಲಿತರು ಎಲ್ಲರೂ ಹಿಂದುಗಳೆಂಬ ಕಾರಣದಿಂದಲೇ ನೋವು ತಿಂದಿದ್ದಾರೆ. ಹೀಗೆ ನಮ್ಮನ್ನು ಅವಮಾನಿಸಿದವರು, ಸಮ್ಮಾನಿಸಿದವರು, ಸಂಕಟಕ್ಕೀಡುಮಾಡಿದವರು, ಸಂರಕ್ಷಿಸಿದವರೆಲ್ಲರೂ ಎಲ್ಲರೂ ಇಲ್ಲಿ ಗುರುತಿಸಿರುವುದು ಹಿಂದು ಮತ್ತು ಹಿಂದುತ್ವವನ್ನೇ.
ಭಾರತವನ್ನು ಆರ್ಯಾವರ್ತವೆನ್ನಿ, ದಕ್ಷಿಣಪಥವೆನ್ನಿ, ಜಂಬೂದ್ವೀಪವೆನ್ನಿ ಅಥವಾ ಭರತವರ್ಷವೇ ಅನ್ನಿ ಇವಾವುವು ಹಿಂದುಸ್ತಾನ ಎಂಬ ಪದ ನೀಡಬಹುದಾದ ರಾಜಕೀಯ ಮತ್ತು ಸಾಂಸ್ಕೃತಿಕ ವ್ಯಾಖ್ಯಾನವನ್ನು ನೀಡಲಾರವು ಎಂಬುದು ಸಾವರ್ಕರ್ ಖಚಿತವಾಗಿ ಕಂಡುಕೊಂಡ ಹಿಂದೂ ಸಮಾಜದ ಸ್ವರೂಪ. ಸಿಂಧೂ ನದಿಯ ಕಾರಣಕ್ಕೆ ಪ್ರಯೋಗವಾದ ಶಬ್ದ ಹಿಂದು, ಮತ್ತು ಅದೇ ವಾಸ್ತವವಾಗಿ ದೇಶವಾಚಿ ಶಬ್ದ ಎಂಬುದು ಸಾವರ್ಕರ್ ಅವರ ನಿಲುವು. ಯವನರ ಮತ್ತು ಅರಬ್ಬರ ಬಾಯಲ್ಲಿ ಸಿಂಧೂ ಶಬ್ದವೇ ’ಹಿಂದೂ’ ವಾಗಿ ತದ್ಭವಗೊಂಡಿತು. ಕಾರಣ ಅವರ ವರ್ಣಮಾಲೆಯಲ್ಲಿ ಸಕಾರ ಇಲ್ಲದಿರುವುದು.
”ಹಿಂದುತ್ವ ಎಂದರೆ ನೂರಾರು ಯುದ್ಧಭೂಮಿಗಳಲ್ಲಿ ಹಾಗೂ ಮುತ್ಸದ್ದಿತನ ಕಾರುಭಾರಿನ ರಂಗದಲ್ಲಿ ಹಿಂದುಧರ್ಮ ನಡೆಸಿದ ಸಂಘರ್ಷ. ಈ ಹಿಂದುತ್ವ ಎಂಬ ಒಂದು ಪದ ಇಡೀ ನಮ್ಮ ರಾಜಕೀಯ ದೇಹದಲ್ಲಿ ಬಲಿಷ್ಠ ಬೆನ್ನುಮೂಳೆಯಂತೆ ಉದ್ದಕ್ಕೂ ಹರಿದು ಬಂದಿದೆ.” ಎಂಬುದು ತಮ್ಮ ಹಿಂದುತ್ವ ಪುಸ್ತಕದಲ್ಲಿ ಸಾವರ್ಕರ್ ಅವರದ್ದೇ ಮಾತು.
“ಹಿಂದುಗಳ ಭೂತ, ವರ್ತಮಾನ ಮತ್ತು ಭವಿಷ್ಯಕಾಲಗಳೆಲ್ಲ ಹಿಂದೂಸ್ಥಾನಕ್ಕೇನೇ ನಿಕಟ ಸಂಬಂಧವಾಗಿವೆ. ಹಿಂದುಗಳಿಗೆ ಇದೇ ಪಿತೃಭೂಮಿ ಮತ್ತು ಪುಣ್ಯಭೂಮಿ. ಆದಕಾರಣ “ಹಿಂದು” ರಾಷ್ಟೀಯತ್ವದ ಅಡಿಗಲ್ಲು “ಹಿಂದುತ್ವ”ವೇ ಆಗಿದೆ.” ಎಂಬುದು ಸಾವರ್ಕರ್ ಅವರ ರಾಷ್ಟೀಯತೆ ಕುರಿತಾದ ಸುಸ್ಪಷ್ಟ ಚಿಂತನೆ. ಭಾರತದ ಈ ಸುವರ್ಣಸಂಧಿಯ ಕಾಲದಲ್ಲಿ ಸಾವರ್ಕರ್ ಅವರ ಈ ಓಜಸ್ವಿ ಚಿಂತನೆ ರಾಷ್ಟ್ರದ ಅನೇಕ ವಿಕಟ ಸಮಸ್ಯೆ-ಸವಾಲುಗಳಿಗೆ ಸಮರ್ಪಕವಾದ ಸಮಾಧಾನ ನೀಡಬಲ್ಲಂತಹ ವಿಚಾರ ಸಂಪತ್ತು ಒಳಗೊಂಡಿದೆ.
ಇದನ್ನೂ ಓದಿ: New Parliament Building: ಸಾವರ್ಕರ್ ಜಯಂತಿಯಂದೇ ನೂತನ ಸಂಸತ್ ಭವನಕ್ಕೆ ಮೋದಿ ಚಾಲನೆ