Site icon Vistara News

Virat Kohli: ವಿರಾಟ್ ಕೊಹ್ಲಿ… ಕ್ರಿಕೆಟ್ ಲೋಕದ ‘ದೇವರ ದೇವ’!; ಇವರ ಬದುಕಿನ ಹಾದಿ ರೋಚಕ!

Virat Kohli

ಸನತ್ ರೈ, ಕ್ರೀಡಾಪಟು ಮತ್ತು ಕ್ರೀಡಾ ಬರಹಗಾರರು

ಕಿರು ನಗೆಯಿಂದಲೇ ಸೂಜಿಗಲ್ಲಿನಂತೆ ಆಕರ್ಷಿಸುವ ನೋಟ. ಆದ್ರೆ ನೋಡುವುದಕ್ಕೆ ಮಾತ್ರ ತುಂಬಾನೇ ಒರಟ. ವಯಸ್ಸು 35, ಆದ್ರೂ ಇನ್ನೂ ಬಿಟ್ಟಿಲ್ಲ ತುಂಟಾಟ. ಕ್ರಿಕೆಟ್‌ ಮೈದಾನಕ್ಕಿಳಿದ್ರೆ ಸಾಕು ನಡೆಸ್ತಾರೆ ಸುನಾಮಿಯನ್ನು ನಾಚಿಸುವಂತಹ ಆರ್ಭಟ. ಬೌಲರ್‌ಗಳಿಗೆ ಕೊಡ್ತಾರೆ ಸುಸ್ತು ಸುಸ್ತಾಗುವಷ್ಟು ಕಾಟ. ಎಂಥ ಒತ್ತಡದಲ್ಲೂ ಹಿತವಾಗಿ, ಮಜವಾಗಿ ಆಡುವುದು ಇವ್ರಿಗೆ ಪರಿಪಾಠ. ಎದುರಾಳಿ ಆಟಗಾರರು ಮಾತಿನ ಸಮರ ನಡೆಸಿದ್ರೆ ಹಿಂದೆ ಮುಂದೆ ನೋಡದೆ ಮಾಡ್ತಾರೆ ಕಿತ್ತಾಟ. ಬ್ಯಾಟಿಂಗ್ ಲಯವಿದ್ರೂ, ಲಯ ತಪ್ಪಿದ್ರೂ ಮೈದಾನದಲ್ಲೇ ಆಗುತ್ತೆ ರಂಪಾಟ. ಸೋಲನ್ನು ಒಪ್ಪಿಕೊಳ್ಳದ ಮನದಲ್ಲಿದೆ ಗೆಲ್ಲಲೇಬೇಕು ಅನ್ನೋ ಹಠ. ಕ್ರಿಕೆಟ್‌ನ ಎಲ್ಲಾ ಗ್ರಾಮರ್‌ಗಳನ್ನು ಮಾಡಿಕೊಂಡಿದ್ದಾರೆ ಕಂಠಪಾಠ. ಕ್ರಿಕೆಟ್‌ ಜಗತ್ತನ್ನು ಒಂದು ಕ್ಷಣ ಚಕಿತಗೊಳಿಸುವಂತೆ ಮಾಡುತ್ತೆ ಇವ್ರ ಬೊಂಬಾಟ್‌ ಆಟ. ಪ್ರತಿ ಕ್ಷಣವೂ ಯೋಚನೆಯಲ್ಲಿರುತ್ತೆ ಸಾಧನೆಯ ಹುಡುಕಾಟ. ಪ್ರೀತಿ ಪ್ರೇಮ- ಪ್ರಣಯದಲ್ಲೂ ಇದೆ ಹುಡುಗಾಟ. ಆಧುನಿಕ ಕ್ರಿಕೆಟ್‌ ಜಗತ್ತಿನಲ್ಲಿ ಈಗ ಇವ್ರದ್ದೇ ಚೆಲ್ಲಾಟ. ಪ್ರಬುದ್ಧ, ಪರಿಪಕ್ವ ಆಟದಿಂದಲೇ ಆಗುತ್ತಿದ್ದಾರೆ ವಿಶ್ವ ಸಾಮ್ರಾಟ..ಇದು ವಿರಾಟನ(Virat Kohli) ಹೆಜ್ಜೆ…ಗೆಜ್ಜೆಯ ಕುಣಿದಾಟ!

ಹೌದು, ವಿರಾಟ್‌ ಕೊಹ್ಲಿ ಮಾಡಿರುವ, ಮಾಡುತ್ತಿರುವ, ಮಾಡಲಿರುವ ಸಾಧನೆಯೇ ಅಂತಹುದ್ದು. ಅದನ್ನು ಯಾರೂ ಕೂಡ ಊಹೆ ಮಾಡಲು ಸಾಧ್ಯವಿಲ್ಲ. ಯಾಕಂದ್ರೆ ಸಾಧನೆಯ ಹಿಂದಿನ ಒಂದೊಂದು ಹೆಜ್ಜೆಯಲ್ಲೂ ರಾಜ ಗಾಂಭೀರ್ಯವಿದೆ. ಅಷ್ಟೊಂದು ಅರ್ಥಗರ್ಭಿತವಾಗಿದೆ ವಿರಾಟ್‌ ಕೊಹ್ಲಿ ನಡೆದು ಬಂದಿರುವ ರಾಜಪಥದ ಹಾದಿ.
ಅದು… ನವೆಂಬರ್ 5, 1988. ರಾಜಧಾನಿ ದೆಹಲಿಯ ಮಧ್ಯಮ ವರ್ಗದಲ್ಲಿ ಹುಟ್ಟಿದ ಕೂಸು. ತಂದೆ ಪ್ರೇಮ್ ಕೊಹ್ಲಿ. ವೃತ್ತಿಯಲ್ಲಿ ವಕೀಲರು. ತಾಯಿ ಸರೋಜ ಕೊಹ್ಲಿ ಗೃಹಿಣಿ. ಅಣ್ಣ ಮತ್ತು ಅಕ್ಕನ ಪ್ರೀತಿಯ ತಮ್ಮ. ಹೆತ್ತವರಿಗೆ ಅಕ್ಕರೆಯ ಮಗ. ತುಂಟ ವಿರಾಟ್‌ನ ಕೀಟಲೆ ಅಷ್ಟಿಷ್ಟಲ್ಲ. ತಂದೆ ಪ್ರೇಮ್‌ ಕೊಹ್ಲಿಗೆ ಮಗನನ್ನು ಕ್ರಿಕೆಟಿಗನ್ನಾಗಿಸಬೇಕು ಅನ್ನೋ ಆಸೆ. ಅಂಬೆಗಾಲಿಡುತ್ತಿದ್ದಂತೆ ವಿರಾಟ್‌ ಕೊಹ್ಲಿಯ ಕೈಗೆ ಪ್ಲಾಸ್ಟಿಕ್ ಬ್ಯಾಟ್‌ ಸೇರಿಕೊಂಡಿತ್ತು. ಅದು ಎಷ್ಟರ ಮಟ್ಟಿಗೆ ಅಂದ್ರೆ ನಿದ್ದೆ ಮಾಡುವಾಗಲೂ ಕೂಡ ಎದೆಯ ಮೇಲೆ ಪ್ಲಾಸ್ಟಿಕ್‌ ಬ್ಯಾಟ್‌ ಇರಲೇಬೇಕಿತ್ತು. ಅಪ್ಪ ಪ್ರೇಮ್ ಕೊಹ್ಲಿ ಪ್ಲಾಸ್ಟಿಕ್ ಚೆಂಡಿನಲ್ಲಿ ಬೌಲಿಂಗ್ ಮಾಡುತ್ತಿದ್ರೆ ಮಗ ವಿರಾಟ್‌ ಕೊಹ್ಲಿ ತನ್ನ ಮೃದುವಾದ ಕೈಗಳಿಂದ ಪ್ಲಾಸ್ಟಿಕ್ ಬ್ಯಾಟ್‌ ಹಿಡಿದು ಬೀಸುತ್ತಿದ್ದ.

ನಂತರದ ದಿನಗಳಲ್ಲಿ ಅಕ್ಕ ಪಕ್ಕದ ಚಿಲ್ರೆ ಪಾರ್ಟಿ ಮಕ್ಕಳೊಂದಿಗೆ ವಿರಾಟ್‌ ಕೊಹ್ಲಿ ಗಲ್ಲಿ ಕ್ರಿಕೆಟ್ ಆಡುತ್ತಿದ್ರು. ಅಕ್ಕಪಕ್ಕದ ಮನೆಯ ಕಿಟಕಿಗಳು ಪುಡಿಯಾಗುತ್ತಿದ್ದವು. ಕ್ರಿಕೆಟ್‌ ಮೇಲಿನ ಪ್ರೀತಿ ಮತ್ತು ಪ್ರತಿಭೆಯನ್ನು ನೋಡುತ್ತಿದ್ದ ಪ್ರೇಮ್ ಕೊಹ್ಲಿಯ ಸ್ನೇಹಿತರು ವಿರಾಟ್‌ನನ್ನು ಕ್ರಿಕೆಟ್ ಅಕಾಡೆಮಿಗೆ ಸೇರಿಸುವಂತೆ ಸಲಹೆ ನೀಡಿದರು.1998ರಲ್ಲಿ ವಿರಾಟ್‌ ಕೊಹ್ಲಿ ತನ್ನ 10ರ ಹರೆಯದಲ್ಲಿ ವೆಸ್ಟ್‌ ದೆಹಲಿ ಕ್ರಿಕೆಟ್ ಅಕಾಡೆಮಿಗೆ ಸೇರಿಕೊಂಡರು. ಅಲ್ಲಿ ಗುರು ರಾಜ್ ಕುಮಾರ್ ಶರ್ಮಾ ಗರಡಿಯಲ್ಲಿ ಪಳಗಿದ ವಿರಾಟ್‌ ಕೊಹ್ಲಿ ನಂತ್ರ ಹಿಂದಿರುಗಿ ನೋಡಲೇ ಇಲ್ಲ. ಕ್ರಿಕೆಟ್‌ನ ಗ್ರಾಮರ್‌ಗಳನ್ನು ಕಲಿತುಕೊಂಡ ವಿರಾಟ್‌ ಕೊಹ್ಲಿ ಕೋಚ್‌ ರಾಜ್‌ ಕುಮಾರ್ ಅವ್ರ ಅಚ್ಚುಮೆಚ್ಚಿನ ಶಿಷ್ಯರಾದರು.

ಶಾಲಾ ಟೂರ್ನಿಗಳಲ್ಲಿ ಮನಬಂದಂತೆ ಬ್ಯಾಟ್‌ ಬೀಸುತ್ತಿದ್ದ ವಿರಾಟ್‌ ಕೊಹ್ಲಿ ಔಟೇ ಆಗುತ್ತಿರಲಿಲ್ಲ. ಅಷ್ಟೇ ಅಲ್ಲ ಸೋಲನ್ನು ಯಾವತ್ತೂ ಕೂಡ ಸಹಿಸುತ್ತಿರಲಿಲ್ಲ. ಒಂದು ವೇಳೆ ಸೋತರೂ ಅಥವಾ ಬೇಗ ಔಟಾದ್ರೆ ಸಾಕು ವಿರಾಟ್‌ ರಂಪಾಟವನ್ನೇ ಮಾಡುತ್ತಿದ್ದರು. ಆಗ ಕೋಚ್‌ ರಾಜ್ ಕುಮಾರ್‌ಶರ್ಮಾ ಬಂದು ಸಮಾಧಾನಪಡುತ್ತಿದ್ರು. ಇನ್ನು ಎಳವೆಯಲ್ಲಿ ತಂಡದ ನಾಯಕತ್ವವನ್ನು ವಹಿಸಿಕೊಂಡ ಕೊಹ್ಲಿ ಪಂದ್ಯವನ್ನು ಲಘುವಾಗಿ ಮುಗಿಸಬೇಕು ಅನ್ನೋ ತವಕದಲ್ಲಿರುತ್ತಿದ್ರು. ಎದುರಾಳಿ ತಂಡ ಅಲ್ಪ ಮೊತ್ತದ ಸವಾಲು ನೀಡಿದ್ರೆ ಸಾಕು ಕೊಹ್ಲಿ ಓಡೋಡಿ ಬಂದು ಕೋಚ್‌ ಬಳಿ ತಾನು ಆರಂಭಿಕನಾಗಿ ಕಣಕ್ಕಿಳಿಯುತ್ತೇನೆ ಎಂದು ಮನವಿ ಮಾಡಿಕೊಳ್ಳುತ್ತಿದ್ರು. ಹಾಗಂತ ಶಿಷ್ಯನ ಆಸೆಗೆ ಕೋಚ್‌ ರಾಜ್‌ಕುಮಾರ್ ಯಾವತ್ತೂ ತಣ್ಣೀರು ಹಾಕಲಿಲ್ಲ. ಶಿಷ್ಯ ವಿರಾಟ್‌ನ ಪ್ರತಿ ಹೆಜ್ಜೆಯಲ್ಲೂ ಗುರು ರಾಜ್‌ ಕುಮಾರ್ ಶರ್ಮಾ ಅವ್ರ ನೆರಳಿತ್ತು ಎಂಬುದು ಅಷ್ಟೇ ಸತ್ಯ.

ರನ್ ಸುರಿಮಳೆ…

ಶಾಲಾ ಟೂರ್ನಿಗಳಲ್ಲಿ ರನ್‌ ಮಳೆ ಸುರಿಸುತ್ತಿದ್ದ ವಿರಾಟ್‌ ಕೊಹ್ಲಿ ತನ್ನ ಭವಿಷ್ಯವನ್ನು ತಾನೇ ರೂಪಿಸಿಕೊಳ್ಳುವ ಹಠಕ್ಕೆ ಬಿದ್ದರು. ಕ್ರಿಕೆಟ್‌ ಮೇಲಿನ ಪ್ರೀತಿ- ಬದ್ಧತೆಯನ್ನು ಯಾರೂ ಕೂಡ ಪ್ರಶ್ನೆ ಮಾಡುವ ಹಾಗಿರಲಿಲ್ಲ. ಶಿಷ್ಯನ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಕೋಚ್‌ ರಾಜ್‌ ಕುಮಾರ್ ಶರ್ಮಾ, ಮುಂದೊಂದು ದಿನ ಈ ಹುಡುಗನಿಗೆ ಉಜ್ಜಲ ಭವಿಷ್ಯವಿದೆ ಎಂಬುದನ್ನು ಅಂತರಂಗದಲ್ಲೇ ಹೇಳಿಕೊಂಡಿದ್ರು. ಇದಕ್ಕೆ ಪುಷ್ಟಿ ನೀಡುವಂತಹ ಘಟನೆಯೊಂದು ನಡೆದಿತ್ತು. ಶಾಲಾ ಟೂರ್ನಿಯ ಪಂದ್ಯವೊಂದರಲ್ಲಿ ವಿರಾಟ್‌ ಕೊಹ್ಲಿ ಬೌಂಡರಿ ಲೈನ್‌ನಿಂದ ಚೆಂಡನ್ನು ನೇರವಾಗಿ ವಿಕೆಟ್ ಕೀಪರ್‌ನತ್ತ ಎಸೆದಿದ್ರು. ಅದನ್ನು ನೋಡಿದ ಕೋಚ್‌ ರಾಜ್‌ ಕುಮಾರ್ ಶರ್ಮಾ ಒಂದು ಕ್ಷಣ ಚಕಿತಗೊಂಡಿದ್ರು. ಅಷ್ಟೇ ಅಲ್ಲ, ವಿರಾಟ್‌ ಕೊಹ್ಲಿಯ ರಟ್ಟೆಯ ಶಕ್ತಿ ಏನು ಎಂಬುದು ಅವತ್ತೇ ಗುರುವಿಗೆ ಮನವರಿಕೆಯಾಯ್ತು.

ಶಾಲಾ ಟೂರ್ನಿಗಳ ಜತೆ ವಿವಿಧ ವಯೋಮಿತಿಯ ಟೂರ್ನಿಗಳಲ್ಲಿ ವಿರಾಟ್‌ ಕೊಹ್ಲಿ ರನ್‌ಗಳ ಸುರಿಮಳೆಗೈಯುತ್ತಿದ್ದರು. ಜತೆಗೆ ಏಕಾಂಗಿಯಾಗಿ ತಂಡವನ್ನು ಗೆಲ್ಲಿಸುವ ಪರಿಪಾಠವನ್ನು ಬೆಳೆಸಿಕೊಂಡಿದ್ದರು. ಇನ್ನೊಂದೆಡೆ ರಾಜಧಾನಿಯ ಶಾಲಾ ಮಟ್ಟದ ಟೂರ್ನಿಗಳಲ್ಲಿ ಸದ್ದು ಮಾಡಿದ ವಿರಾಟ್‌ ಕೊಹ್ಲಿ ಬಿಸಿಸಿಐ ಚಾವಡಿಯಲ್ಲೂ ಸುದ್ದಿ ಮಾಡಿದ್ರು. ಜತೆಗೆ 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲೂ ಏಕಾಂಗಿ ಹೋರಾಟ ನಡೆಸಿ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ರು. ಕೊಹ್ಲಿಯ ಬ್ಯಾಟಿಂಗ್‌ ವೈಖರಿಗೆ ಮನ ಸೋತ ದೆಹಲಿ ಕ್ರಿಕೆಟ್‌ ಸಂಸ್ಥೆಯ ಆಯ್ಕೆಗಾರರು ದೆಹಲಿ ರಣಜಿ ತಂಡಕ್ಕೂ ಆಯ್ಕೆ ಮಾಡಿದ್ರು. 18ರ ಹರೆಯದಲ್ಲಿ ತಮಿಳುನಾಡು ವಿರುದ್ಧ ಚೊಚ್ಚಲ ರಣಜಿ ಪಂದ್ಯವನ್ನಾಡಿದ ವಿರಾಟ್‌ ಕೊಹ್ಲಿ ಕೇವಲ 18 ರನ್‌ ಗಳಿಸಿ ನಿರಾಸೆ ಅನುಭವಿಸಿದರು.

ಆದರೆ ಕರ್ನಾಟಕದ ವಿರುದ್ಧದ ರಣಜಿ ಪಂದ್ಯವನ್ನು ವಿರಾಟ್‌ ಯಾವತ್ತು ಮರೆಯೋಕೆ ಸಾಧ್ಯವಿಲ್ಲ. ಯಾಕಂದ್ರೆ ಅದು ಅಂತಿಂಥ ಪಂದ್ಯವಲ್ಲ. ಸಾವಿನ ನೋವಿನಲ್ಲೂ ತಂಡದ ಹಿತಕ್ಕಾಗಿ ಆಡಿದ ಪಂದ್ಯ. ಪಂದ್ಯ ನಡೆಯುತ್ತಿರುವಾಗಲೇ ತಂದೆಯ ಸಾವಿನ ಸುದ್ದಿ ಕೇಳಿದಾಗ ಎಂಥವರ ಮನ ಕೂಡ ಕರಗುತ್ತೆ. ಅಂತಹುದ್ರಲ್ಲಿ 18ರ ಹರೆಯದ ಬಾಲಕ ವಿರಾಟ್ ಕೊಹ್ಲಿಯ ಮನಸ್ಥಿತಿ ಹೇಗಿರಬಹುದು ಎಂಬುದನ್ನು ಊಹಿಸಿಕೊಳ್ಳುವುದು ಕೂಡ ಕಷ್ಟ. ತಂದೆಯ ಸಾವಿನ ನೋವಿನಲ್ಲೂ ಕರ್ನಾಟಕದ ಬೌಲರ್‌ಗಳನ್ನು ಕಾಡಿದ ವಿರಾಟ್‌ ಕೊಹ್ಲಿ 90 ರನ್‌ ಗಳಿಸಿ ಔಟಾಗಿಬಿಟ್ರು. ಪಂದ್ಯ ಮುಗಿದ ನಂತರ ನೇರವಾಗಿ ತಂದೆಯ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾದರು. ತಂದೆಯ ಕನಸು ನನಸಾಗುವ ಸಮಯದಲ್ಲಿ ಇಹಲೋಕ ತ್ಯಜಿಸಿದರು ಎಂಬ ನೋವು ಕಾಡ್ತಾ ಇತ್ತು. ರಾತ್ರಿ ಇಡೀ ತಂದೆಯನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದರು. ಆದರೂ ಎಲ್ಲವನ್ನು ಸಹಿಸಿಕೊಂಡ ವಿರಾಟ್‌ ಕೊಹ್ಲಿ ಮರುದಿನ ಮೈದಾನದಲ್ಲಿ ಹಾಜರಾದರು. ಇದು ವಿರಾಟ್‌ ಕೊಹ್ಲಿಯವರ ಬದ್ಧತೆ ಮತ್ತು ಆಟದ ಮೇಲಿನ ಪ್ರೀತಿಯನ್ನು ತೋರಿಸುತ್ತದೆ.

ಭಾರತ ತಂಡ ಮುನ್ನಡೆಸುವ ಅವಕಾಶ

ದೇಶಿ ಪಂದ್ಯಗಳಲ್ಲಿ ರನ್‌ ಮಳೆ ಸುರಿಸುತ್ತಿದ್ದ ವಿರಾಟ್‌ ಕೊಹ್ಲಿಗೆ 19 ವಯೋಮಿತಿಯ ವಿಶ್ವ ಕಪ್‌ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸುವ ಅವಕಾಶ ತಾನಾಗಿಯೇ ಒಲಿದು ಬಂತು. ಅನುಭವಿ ಆಟಗಾರನಂತೆ ಕಾಣಿಸಿಕೊಂಡ ವಿರಾಟ್‌ ಕೊಹ್ಲಿ ಏಕಾಂಗಿ ಹೋರಾಟ ನಡೆಸಿ ತಂಡವನ್ನು ಚಾಂಪಿಯನ್‌ಪಟ್ಟಕ್ಕೇರಿಸಿದ್ರು.ಈ ಗೆಲುವು ವಿರಾಟ್‌ ಕೊಹ್ಲಿಯ ಕ್ರಿಕೆಟ್‌ ಬದುಕಿಗೆ ಹೊಸ ತಿರುವು ನೀಡಿತ್ತು. ಆದ್ರೆ ಟೀಮ್ಇಂಡಿಯಾಗೆ ಎಂಟ್ರಿಯಾಗುವುದು ಅಷ್ಟೊಂದು ಸುಲಭವಿರಲಿಲ್ಲ. ಹಿರಿಯ ಆಟಗಾರರ ಅಬ್ಬರದ ಮುಂದೆ ವಿರಾಟ್ ಕೊಹ್ಲಿಯ ಆಟ ಸ್ವಲ್ಪ ಮಂಕಾಗಿ ಕಾಣತೊಡಗಿತ್ತು. ಆದ್ರೂ ಅವಕಾಶವನ್ನೇ ಎದುರು ನೋಡ್ತಾ ಇದ್ರು ದೆಹಲಿಯ ಚೀಕೂ.

ಐಪಿಎಲ್ ಹವಾ

ಈ ನಡುವೆ ಐಪಿಎಲ್‌ ಟೂರ್ನಿಯ ಹವಾ ಭಾರತದಲ್ಲಿ ಜೋರಾಗಿತ್ತು. ಯುವ ಆಟಗಾರರ ಲಿಸ್ಟ್‌ ನಲ್ಲಿ ಕಾಣಿಸಿಕೊಂಡ ವಿರಾಟ್‌ ಕೊಹ್ಲಿಯವರನ್ನು ರಾಯಲ್ ಚಾಲೆಂಜರ್ಸ್ ತನ್ನ ಬಲೆಯೊಳಗೆ ಬೀಳಿಸಿಕೊಂಡಿತ್ತು. ಮೊದಲೇ ಮಲ್ಯ ದರ್ಬಾರು ಬೇರೆ. ಶೋಕಿವಾಲಾ ವಿಜಯ್‌ ಮಲ್ಯ ರಾಯಲ್‌ ಚಾಲೆಂಜರ್ಸ್ ಆಟಗಾರರಿಗೆ ಇನ್ನಿಲ್ಲದ ಸವಲತ್ತುಗಳನ್ನು ನೀಡಿದ್ರು. ಇದು ವಿರಾಟ್‌ ಕೊಹ್ಲಿಯ ಮೇಲೂ ಗಾಢವಾದ ಪರಿಣಾಮ ಬೀರಿತ್ತು. ಕ್ರಿಕೆಟ್‌ ಬಿಟ್ಟು ಪಾರ್ಟಿ, ಪಬ್ ಅಂತ ಕುಣಿದಾಡಿದ ವಿರಾಟ್‌ ಕೊಹ್ಲಿ ಅಡ್ಡದಾರಿ ಹಿಡಿದಿದ್ರು. ಆಗಲೇ ವಿರಾಟ್‌ ಕೊಹ್ಲಿಯವರನ್ನು ಎಚ್ಚರಿಸಿದ್ದು ರಾಯಲ್‌ ಚಾಲೆಂಜರ್ಸ್ ತಂಡದ ಟೀಮ್ ಮ್ಯಾನೇಜ್‌ಮೆಂಟ್‌.

ಮೊದಲ ಐಪಿಎಲ್ ಟೂರ್ನಿಯಲ್ಲಿ ತೀರಾ ಕಳಪೆ ಪ್ರದರ್ಶನ ನೀಡಿದ್ರೂ ರಾಯಲ್‌ ಚಾಲೆಂಜರ್ಸ್ ತಂಡ ಕೈಬಿಡಲಿಲ್ಲ. ರಾಹುಲ್ ದ್ರಾವಿಡ್‌, ವಿಜಯ್‌ ಭಾರಧ್ವಾಜ್‌, ಅವಿನಾಶ್‌ ವೈದ್ಯ, ಅನಿಲ್ ಕುಂಬ್ಳೆ, ಜತೆಗೆ ಸಚಿನ್ ತೆಂಡುಲ್ಕರ್‌ ಸೇರಿದಂತೆ ಹಿರಿಯ ಆಟಗಾರರು ಕೊಹ್ಲಿಗೆ ಬುದ್ಧಿವಾದ ಹೇಳಿದ್ರು. ತನ್ನ ತಪ್ಪನ್ನು ತಕ್ಷಣವೇ ತಿದ್ದಿಕೊಂಡ ವಿರಾಟ್‌ ಕೊಹ್ಲಿ ಆಟದ ಕಡೆ ಮತ್ತೆ ಗಮನ ಹರಿಸಿದ್ರು. ತಂದೆಯ ಕನಸನ್ನು ಸಾಕಾರಗೊಳಿಸಬೇಕು ಅಂತ ಪಣತೊಟ್ರು. ಕ್ರಿಕೆಟ್‌ಗೆ ಮೊದಲ ಆದ್ಯತೆ.. ಕ್ರಿಕೆಟ್ಟೇ ನನ್ನ ಉಸಿರು .. ಕ್ರಿಕೆಟ್ಟೇ ನನ್ನ ಬದುಕು ಎಂಬುದನ್ನು ಮೈಗೂಡಿಸಿಕೊಂಡ್ರು. ಕೊನೆಗೂ ತಂದೆಯ ಆಸೆಯಂತೆ ವಿರಾಟ್‌ ಕೊಹ್ಲಿ 2008ರಲ್ಲಿ ಟೀಮ್ ಇಂಡಿಯಾಗೆ ಎಂಟ್ರಿಯಾದ್ರು. ನಂತ್ರ ನಡೆದಿದ್ದು ಪವಾಡನೋ… ಆಕಸ್ಮಿಕನೋ… ಯಾರಿಗೂ ಏನು ಗೊತ್ತಿಲ್ಲ. ಕವಲುದಾರಿಯಲ್ಲಿ ಸಾಗುತ್ತಿದ್ದ ತನ್ನ ದಾರಿಯನ್ನು ರಹದಾರಿಯಲ್ಲಿ ಸಾಗುವಂತೆ ನೋಡಿಕೊಂಡರು.

ಇದನ್ನೂ ಓದಿ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾದ್ದೇ ಪಾರುಪತ್ಯ; ಇಲ್ಲಿದೆ 5 ಬಾರಿ ಚಾಂಪಿಯನ್ನರ ಸಾಹಸ… ​

ಟೀಮ್ ಇಂಡಿಯಾದೊಳಗೆ ಬರೋದು ಸುಲಭ ಆಗಿರಲಿಲ್ಲ

ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಅಂತಾರಲ್ಲ. ಹಾಗೇ ವಿರಾಟ್‌ ಕೊಹ್ಲಿಯ ಕ್ರಿಕೆಟ್‌ ಬದುಕು ಕೂಡ ಇದೆ. ಅಪ್ರತಿಮ ಪ್ರತಿಭೆ ಇದ್ರೂ ಟೀಮ್ ಇಂಡಿಯಾದ 11ರ ಬಳಗದಲ್ಲಿ ಕಾಣಿಸಿಕೊಳ್ಳುವುದು ಸುಲಭದ ಸಂಗತಿಯಾಗಿರಲಿಲ್ಲ. ಘಟಾನುಘಟಿ ಆಟಗಾರರ ದಂಡನ್ನೇ ಹೊಂದಿದ್ದ ಟೀಮ್ ಇಂಡಿಯಾದಲ್ಲಿ 19ರ ಹರೆಯದ ಹುಡುಗನಿಗೆ ಮಣೆ ಹಾಕಲು ಟೀಮ್ಇಂಡಿಯಾ ಆಯ್ಕೆಗಾರರು ಮನಸ್ಸು ಮಾಡಿರಲಿಲ್ಲ. ಆದ್ರೂ ತಂಡದಲ್ಲಿ ಇರಲಿ ಅಂತನೇ ಶ್ರೀಲಂಕಾ ಸರಣಿಗೆ ವಿರಾಟ್‌ ಕೊಹ್ಲಿ ಆಯ್ಕೆಯಾದ್ರು. ಆಗ ಟೀಮ್ ಇಂಡಿಯಾದ ಆರಂಭಿಕರಾದ ಸೆಹ್ವಾಗ್‌ ಮತ್ತು ಸಚಿನ್ ಗಾಯಗೊಂಡ ಕಾರಣ ಅನಿವಾರ್ಯವಾಗಿ ವಿರಾಟ್ ಕೊಹ್ಲಿ ಇನಿಂಗ್ಸ್‌ ಆರಂಭಿಸಿದ್ರೂ ಗಮನ ಸೆಳೆಯಲು ಮಾತ್ರ ವಿಫಲರಾದ್ರು. ಬಳಿಕ ವಿರಾಟ್‌ ಕೊಹ್ಲಿ ರಿಸರ್ವ್ ಆಟಗಾರನಾಗಿ ತಂಡಕ್ಕೆ ಬಂದು ಹೋಗುವ ಆತಿಥಿಯಾದರು.

ಬೆಂಚು ಕಾಯಿಸುವ ಕೆಲಸ

ಅದ್ರಲ್ಲೂ 2009ರಲ್ಲಿ ಒಂದಲ್ಲ.. ಎರಡಲ್ಲ… ಸತತ ಏಳು ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾದ 12ನೇ ಆಟಗಾರನಾಗಿ ಬೆಂಚು ಕಾಯಿಸುತ್ತಿದ್ರು. ಒಂದೇ ಒಂದು ಅವಕಾಶಕ್ಕಾಗಿ ಬಕ ಪಕ್ಷಿಯಂತೆ ಕಾಯುತ್ತಿದ್ದರೂ ತನ್ನ ಸಾಮರ್ಥ್ಯ ಏನು ಎಂಬುದನ್ನು ತೋರಿಸಲು ಹೊಂಚು ಹಾಕುತ್ತಿದ್ರು. ಆದ್ರೆ ಹಿರಿಯ ಆಟಗಾರರ ಅಬ್ಬರದಿಂದ ವಿರಾಟ್‌ ಅನುಭವಿಸಿದ್ದು ಬರಿ ನಿರಾಸೆ..ಕೊನೆಗೂ ಅವಕಾಶವೇ ಕೊಹ್ಲಿಯನ್ನು ಹುಡುಕಿಕೊಂಡು ಬಂತು. ಗೌತಮ್ ಗಂಭೀರ್‌ ಮತ್ತು ಯುವರಾಜ್‌ ಸಿಂಗ್‌ ಗಾಯಗೊಂಡ ಕಾರಣ ತಂಡದಲ್ಲಿ ಆಡುವ ಅವಕಾಶ ಸಿಕ್ಕಿಬಿಟ್ಟಿತ್ತು. ಆಗಲೇ ವಿರಾಟ್‌ ಕೊಹ್ಲಿ ಮನದಲ್ಲಿ ಅಚಲ ನಿರ್ಧಾರ ಮಾಡಿಬಿಟ್ಟಿದ್ರು.

ಕೊಹ್ಲಿ ಆಟ ಶುರು

The game has just begun”!
ಹೌದು, ವಿರಾಟ್ ಕೊಹ್ಲಿಯ ಆಟ ಶುರುವಾಗಿದ್ದೇ ಇಲ್ಲಿಂದ. ಅಪ್ರತಿಮ ಆಟಗಾರರ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಮಿಂಚು ಹರಿಸಿದ್ರು. ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡ್ರು. ಪಂದ್ಯದಿಂದ ಪಂದ್ಯಕ್ಕೆ ಪರಿಪಕ್ವತೆಯನ್ನು ಪಡೆದುಕೊಂಡ್ರು. ಆದ್ರೂ ಕೆಟ್ಟ ಫಾರ್ಮ್ ನಿಂದ ಸ್ವಲ್ಪ ವಿಚಲಿತರಾದ್ರೂ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಸಫಲರಾದ್ರು. 2010ರಲ್ಲಿ ವಿರಾಟ್‌ ಕೊಹ್ಲಿ ತಮ್ಮ ವಯಸ್ಸಿಗೂ ಮೀರಿದ ಪ್ರಬುದ್ಧತೆ ಸಾಧಿಸಿದ್ರು. ಮುಖ್ಯವಾಗಿ ಎದುರಾಳಿ ತಂಡದ ಸವಾಲನ್ನು ಬೆನ್ನಟ್ಟುವಾಗ ವಿರಾಟ್‌ ಸ್ವಲ್ಪವೂ ಅಳುಕುವುದಿಲ್ಲ. ಯಾವುದೇ ಒತ್ತಡವಿಲ್ಲದೆ ಧೈರ್ಯದಿಂದ ಮುನ್ನುಗ್ಗಿ ತಂಡದ ಗೆಲುವಿಗೂ ಕಾರಣರಾಗುತ್ತಿದ್ರು. ಎಂಥ ಕಠಿಣ ಪರಿಸ್ಥಿತಿಯಲ್ಲೂ ಎದೆಗುಂದದೇ ಆಟವಾಡುವ ವಿರಾಟ್‌ ಆಟಕ್ಕೆ ವಿಶ್ವ ಕ್ರಿಕೆಟ್‌ ಬೆರಗುಗೊಂಡಿರುವುದಂತೂ ಸುಳ್ಳಲ್ಲ.

ಇದನ್ನೂ ಓದಿ Virat And Anushka:’ನೀನು ದೇವರ ಮಗು’ ಕೊಹ್ಲಿಗೆ ಅನುಷ್ಕಾ ಭಾವುಕ ಸಂದೇಶ

2011ರ ವಿಶ್ವಕಪ್ ನಲ್ಲಿ ಮಿಂಚು

2011ರ ವಿಶ್ವಕಪ್‌ನಲ್ಲಿ ವಿರಾಟ್‌ ಕೊಹ್ಲಿಯ ಆಟದ ಖದರಿಗೆ ಸರಿಸಾಟಿಯೇ ಇರಲಿಲ್ಲ. ಸಚಿನ್, ಸೆಹ್ವಾಗ್‌ರಂತ ಆಟಗಾರರೇ ವಿರಾಟ್‌ ಎದುರು ಮಂಕಾದಂತೆ ಕಾಣುತ್ತಿದ್ರು. ಅಲ್ಲದೆ 28 ವರ್ಷಗಳ ಬಳಿಕ ಟೀಮ್ ಇಂಡಿಯಾ ವಿಶ್ವಕಪ್‌ ಗೆಲ್ಲಲು ಕೊಹ್ಲಿಯ ಕೊಡುಗೆಯೂ ಅಪಾರವಿದೆ. ವಿರಾಟ್ ಆಟಕ್ಕೆ ಶರಣಾದ ಟೀಮ್ ಇಂಡಿಯಾದ ಆಯ್ಕೆಗಾರರು 2012ರಿಂದ ಏಕದಿನ ಕ್ರಿಕೆಟ್‌ನ ಉಪನಾಯಕನಾಗಿ ಹಾಗೂ 2014ರಿಂದ ಟೆಸ್ಟ್‌ ನಾಯಕನನ್ನಾಗಿ ಆಯ್ಕೆ ಮಾಡಿತ್ತು. ಅಲ್ಲದೆ ವಿಶ್ವ ಕ್ರಿಕೆಟ್‌ನ ಮೂರು ಮಾದರಿಯ ಆಟದಲ್ಲೂ ವಿರಾಟ್‌ ಕೊಹ್ಲಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ವಿರಾಟ್ ಕೊಹ್ಲಿ ಈ ಮಟ್ಟಕ್ಕೆ ಏರುತ್ತಾರೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ. ಆದರೆ ವಿರಾಟ್‌ ಕೊಹ್ಲಿಗೆ ಮಾತ್ರ ಗೊತ್ತಿತ್ತು. ಯಾಕಂದ್ರೆ ವಿರಾಟ್ ಭವಿಷ್ಯವನ್ನು ವಿರಾಟ್‌ ಕೊಹ್ಲಿಯೇ ರೂಪಿಸಿಕೊಂಡಿರುವುದು.

ಇದನ್ನೂ ಓದಿ Virat Kohli: ಕ್ರಿಕೆಟ್​ ದೇವರ ‘ಈ’ ವಿಶೇಷ ದಿನದಂದೇ ಅವರ ದಾಖಲೆ ಮುರಿದ ವಿರಾಟ್​ ಕೊಹ್ಲಿ

ನಿಜ, ವಿರಾಟ್ ಆಟಕ್ಕೆ ಏನೆಂದು ಹೆಸರಿಡಲಿ. ಸೋಲಿನ ದವಡೆಯಿಂದ ಪಾರು ಮಾಡುವ ರೀತಿಯನ್ನು ಹೇಗಂತ ವರ್ಣಿಸುವುದು? ಒತ್ತಡದಲ್ಲೂ ಆಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ಲಯಕ್ಕೆ ಏನಂತ ಹೇಳುವುದು? ವಿರೋಧಿಗಳು ತಲೆಬಾಗುವಂತೆ ಆಡುವ ವೈಖರಿಯನ್ನು ಯಾವ ಪರಿ ಕೊಂಡಾಡುವುದು? ಅಭಿಮಾನಿಗಳ ಮೊಗದಲ್ಲಿ ನಗುವಿನ ಚಿತ್ತಾರ ಬಿಡಿಸಿರುವುದನ್ನು ಹೇಗೆ ಮರೆಯಲು ಸಾಧ್ಯ? ಕ್ರಿಕೆಟ್‌ ಜಗತ್ತನ್ನು ಆಪೋಶನ ಮಾಡುವ ದಾಟಿಯನ್ನು ಯಾವ ಶಬ್ದದಿಂದ ಕರೆಯುವುದು?ಅಷ್ಟಕ್ಕೂ ಮೈದಾನದಲ್ಲಿ ವಿರಾಟ್‌ ನಡೆಸುವ ಒಡ್ಡೋಲಗವನ್ನು ಹೇಳಲು ಪದಪುಂಜಗಳು ಬರುತ್ತಿಲ್ಲ. ಏಕಾಂಗಿಯಾಗಿ ನಡೆಸಿದ ಹೋರಾಟದ ಹೋಲಿಕೆಗೆ ನವರಸಗಳು ಸಾಕಾಗುತ್ತಿಲ್ಲ. ಎದುರಾಳಿ ಬೌಲರ್‌ಗಳ ಎದುರು ಮಾಡುವ ತಾಂಡವ ನೃತ್ಯಕ್ಕೆ ಮನಸೋಲದವರಿಲ್ಲ. ಬ್ಯಾಟ್‌ ಅನ್ನು ಗದೆಯಂತೆ ತಿರುಗಿಸುತ್ತ ರನ್ ಗಳಿಸುವ ಚಾಣಾಕ್ಷ ಇನ್ನೊಬ್ಬನಿಲ್ಲ. ಸವಾಲನ್ನು ಸ್ವೀಕರಿಸಿ ತಂಡವನ್ನು ಗೆಲುವಿನ ದಡ ಸೇರಿಸುವ ವಿರಾಟ್‌ ಕೊಹ್ಲಿಯಂತಹ ಮ್ಯಾಚ್‌ ವಿನ್ನರ್‌ ಮತ್ತೊಬ್ಬನಿಲ್ಲ.

ಏನೇ ಆದ್ರೂ ಕ್ರಿಕೆಟ್ ಅನ್ನೋ ಇಂಗ್ಲೀಷರ ಆಟದಲ್ಲೂ ನವರಸಗಳನ್ನು ಬೆರೆಸಿದ ಮಹಾ ಮಾಂತ್ರಿಕ ವಿರಾಟ್‌ ಕೊಹ್ಲಿ. ಶೃಂಗಾರ ಕಾವ್ಯದಂತೆ ರನ್‌ಗಳಿಸುವ ಕಲಾಕಾರ. ಮಹೋನ್ನತ್ತ ಇನಿಂಗ್ಸ್‌ ನಡುವೆಯೇ ಹಾಸ್ಯ ಮಾಡುವ ಹಾಸ್ಯಗಾರ. ಕೆಣಕಲು ಬಂದ್ರೆ ಶುರುವಾಗುತ್ತೆ ಮೈದಾನದಲ್ಲೇ ರೌದ್ರಾವತಾರ. ಕಠಿಣ ಸಂದರ್ಭದಲ್ಲಿ ಕರುಣೆಯಿಂದಲೇ ಆಡುವ ಆಟಗಾರ. ಸವಾಲಿನ ಪ್ರಶ್ನೆ ಬಂದಾಗ ಭೀಭತ್ಸ ತೋರುವ ಮಹಾಶೂರ . ಅಷ್ಟೇ ಅಲ್ಲ, ಏಕಾಂಗಿಯಾಗಿ ಎದುರಾಳಿಯನ್ನು ಧ್ವಂಸಗೊಳಿಸುವ ವೀರ ಹೋರಾಟಗಾರ. ಎಂತಹ ಸನ್ನಿವೇಶದಲ್ಲೂ ಅದ್ಭುತ ಆಟ ಪ್ರದರ್ಶಿಸುವ ಜಾದುಗಾರ. ಕ್ರಿಸ್‌ಗೆ ಆಗಮಿಸುವಾಗಲೇ ಎದುರಾಳಿ ತಂಡಕ್ಕೆ ಭಯಮೂಡಿಸುವ ರಣಧೀರ. ಶಾಂತ ಚಿತ್ತದಿಂದಲೇ ಎಲ್ಲವನ್ನು ಅರಿತುಕೊಂಡು ಕ್ರಿಕೆಟ್‌ ಜಗತ್ತನ್ನು ಮೋಡಿ ಮಾಡುವ ಮೋಡಿಗಾರ.

ಜಿಮ್ ನಲ್ಲಿ ಕಸರತ್ತು

ಒಂದಂತೂ ಸತ್ಯ ವಿರಾಟ್ ಕೊಹ್ಲಿಗೆ ಕ್ರಿಕೆಟ್ ಬಿಟ್ಟು ಬೇರೇನೂ ಇಲ್ಲ. ಕ್ರಿಕೆಟ್‌ಗಾಗಿಯೇ ನಾಲ್ಕು ಗಂಟೆಗಳ ಕಾಲ ಜಿಮ್‌ನಲ್ಲಿ ಕಸರತ್ತು ನಡೆಸುತ್ತಾರೆ. ಬಳಿಕ ಮನಸ್ಸಿಗೆ ತೃಪ್ತಿಯಾಗುವಷ್ಟು ಕಾಲ ನೆಟ್‌ ಅಭ್ಯಾಸ ನಡೆಸುತ್ತಾರೆ. ಈ ನಡುವೆ ಬಿಡುವಿನ ವೇಳೆಯಲ್ಲಿ ತನ್ನನ್ನು ಹುಡುಕಿಕೊಂಡು ಬರುವ ಜಾಹೀರಾತು ಕಂಪೆನಿಗಳ ಶೂಟಿಂಗ್‌ನಲ್ಲಿ ಬಿಝೆಯಾಗಿರುತ್ತಾರೆ. ಇನ್ನು ಸ್ವಲ್ಪ ಸಮಯ ತನ್ನ ಫ್ಯಾಮಿಲಿ ಹಾಗೂ ಪ್ರೇಯಸಿಗಾಗಿ ಮೀಸಲಿಡುತ್ತಿದ್ದಾರೆ. ಆದ್ರೂ ಬದುಕನ್ನು ಮಾತ್ರ ಬಿಂದಾಸ್ಆಗಿ ಎಂಜಾಯ್ ಮಾಡುತ್ತಿದ್ದಾರೆ. ಆದ್ರೂ ವಿರಾಟ್‌ ಕೊಹ್ಲಿ ತನ್ನ ಕಷ್ಟದ ದಿನಗಳನ್ನು ಮಾತ್ರ ಮರೆತಿಲ್ಲ. ಹಣ, ಹೆಸರು, ಪ್ರಖ್ಯಾತಿ ಬಂದ್ರೂ ತನ್ನ ವರ್ತನೆಯನ್ನು ಮಾತ್ರ ಬದಲಾಯಿಸಿಕೊಂಡಿಲ್ಲ. ಯಾರು ಏನು ಬೇಕಾದ್ರೂ ಅಂದುಕೊಳ್ಳಲಿ ನಾನು ಇರುವುದೇ ಹೀಗೆ ಎಂಬುದನ್ನು ಯಾವುದೇ ಸಂಕೋಚವಿಲ್ಲದೆ ಹೇಳಿಕೊಳ್ತಾರೆ ವಿರಾಟ್‌ ಕೊಹ್ಲಿ..

ರಕ್ಷಕನೂ ಹೌದು…. ರಕ್ಕಸನೂ ಹೌದು!

ನೋ ಡೌಟ್‌.. ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್‌ನ ಮಾಸ್ಟರ್ ಪೀಸ್…! ಮೈದಾನದಲ್ಲಿ ಆಡುವ ಆಟದ ಪರಿಯೇ ಅದ್ಭುತ. ಎದುರಾಳಿ ತಂಡಗಳ ಪಾಲಿಗೆ ಘನಘೋರ ಅಸುರ. ಟೀಮ್ ಇಂಡಿಯಾದ ಗರ್ಭಗುಡಿಗೆ ಚೇಸಿಂಗ್ ಗಾಡ್‌.! ಅಬ್ಬಾ..ಕೊಹ್ಲಿ ಬ್ಯಾಟಿಂಗ್ ವೈಖರಿಯನ್ನು ಯಾವ ರೀತಿ ಬಣ್ಣಿಸಬೇಕು ಅಂತನೇ ತಿಳಿಯುತ್ತಿಲ್ಲ. ಯಾಕಂದ್ರೆ ವಿರಾಟ್‌ ಮೈದಾನದಲ್ಲಿ ಆಡುತ್ತಿರೋದು ಅಥವಾ ಯುದ್ಧ ಮಾಡುತ್ತಿರೋದು ಎಂಬುದೇ ಗೊತ್ತಾಗಲ್ಲ. ಮೈದಾನದಲ್ಲಿ ಆಡುವ ಪರಿಯನ್ನು ನೋಡಿದಾಗ ರಕ್ಷಕನೋ..ರಕ್ಕಸನೋ ಅನ್ನೋ ಅನುಮಾನ ಕೂಡ ಮೂಡದೇ ಇರುವುದಿಲ್ಲ.

ಹೌದು, ಪುರಾಣ ಕಥೆಗಳಲ್ಲಿ ಏಕಾಂಗಿಯಾಗಿ ಯುದ್ಧ ಮಾಡುವ ಮಹಾ ಶೂರರ ಕಥೆಗಳನ್ನು ಕೇಳಿದ್ರೂ ಕಣ್ಣಾರೆ ನೋಡಿಲ್ಲ. ಆದ್ರೆ 22 ಯಾರ್ಡ್ ನ ಕ್ರಿಕೆಟ್ ಮೈದಾನದಲ್ಲಿ ಕೊಹ್ಲಿ ಆಟವನ್ನು ಕಣ್ಣಾರೆ ನೋಡಿದಾಗ ಮೇಲೆ ಮಹಾ ಶೂರನಂತೆ ಕಾಣುವುದರಲ್ಲಿ ಯಾವುದೇ ಸಂದೇಹವಿಲ್ಲ. ಟೀಮ್ ಇಂಡಿಯಾದ ದಳಪತಿಯಾಗಿ ತಂಡವನ್ನು ರಕ್ಷಣೆ ಮಾಡುವುದು ತನ್ನ ಜವಾಬ್ದಾರಿ ಎಂಬುದನ್ನು ಮರೆಯುವುದಿಲ್ಲ. ತಂಡದ ಗೆಲುವಿಗಾಗಿ ನಡೆಸುವ ಹೋರಾಟಕ್ಕೆ ಭೇಷ್ ಅನ್ನದಿರಲು ಮನಸ್ಸು ಒಪ್ಪುವುದಿಲ್ಲ. ಹಾಗೇ ಟೀಮ್ ಇಂಡಿಯಾದ ಕ್ರಿಕೆಟ್ ಅಭಿಮಾನಿಗಳು ಚೇಸಿಂಗ್ ಮಾಸ್ಟರ್ ಅಂತ ಉಘೇ.. ಉಘೇ ಅನ್ನುವುದರಲ್ಲೂ ತಪ್ಪೇನೂ ಇಲ್ಲ.

ಯಾಕಂದ್ರೆ ಕೊಹ್ಲಿ ಆಡುವ ರೀತಿ ಹಾಗಿದೆ

ಚೆಂಡು ಬ್ಯಾಟ್‍ನ ಸಮರದಲ್ಲಿ ಕೋಪ, ರೋಷಾಗ್ನಿ ಜ್ವಾಲೆ ಕೊಹ್ಲಿ ಮುಖದಲ್ಲಿ ಪ್ರಜ್ವಲಿಸುತ್ತದೆ. ಮಾತಿಗೆ ಮಾತು.. ಏಟಿಗೆ ಏಟು.. ಅಲ್ಲೇ ಡ್ರಾ.. ಆಲ್ಲೇ ಬಹುಮಾನ ಎಂಬಂತೆ ತನ್ನನ್ನು ಕೆಣಕಿದವರಿಗೆ ವಿರಾಟ್‌ ಕೊಡುವ ತಿರುಗೇಟನ್ನು ಜೀವಮಾನದಲ್ಲೇ ಅವರು ಮರೆಯಲಿಕ್ಕಿಲ್ಲ. ಕಿಂಗ್ ಕೊಹ್ಲಿ ಗಳಿಸಿದ್ದ ಒಂದೊಂದು ರನ್‍ಗಳಿಗೂ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಇನ್ನು ಬೌಂಡರಿ – ಸಿಕ್ಸರ್‍ಗಳ ಅಬ್ಬರಕ್ಕೆ ಅಭಿಮಾನಿಗಳ ಕೂಗು ಝೇಂಕಾರದಂತೆ ಮಾರ್ದನಿಸುತ್ತದೆ. ಕೊಹ್ಲಿ ಆಟದ ಖದರ್, ಗರ್ವ, ಅಹಂಕಾರ.. ನಾಯಕತ್ವ.. ಲೀಡರ್‌ಶಿಪ್‌, ಗೆಲ್ಲಲೇಬೇಕು ಅನ್ನೋ ಕಿಚ್ಚು, ಹೋರಾಟವನ್ನು ನೋಡಿದಾಗ ನವರಸಗಳ ನರ್ತನದಂತೆ ಭಾಸವಾಗುತ್ತದೆ

ಅಂದು ಸಚಿನ್ ಜಮಾನ.. ಇಂದು ವಿರಾಟನ ಜಮಾನಾ!

ಅದೊಂದು ಜಮಾನವಿತ್ತು. ಅದು 1989ರಿಂದ 2013ರವರೆಗೆ… ಅಸುಪಾಸು ಸುಮಾರು ಎರಡೂವರೆ ದಶಕ…ಆ ಒಬ್ಬ ಚಾಂಪಿಯನ್ ಆಟಗಾರನಿಗೊಸ್ಕರ ಪಂದ್ಯ ನೋಡುತ್ತಿದ್ದ ಕಾಲವೊಂದಿತ್ತು. ಅಷ್ಟೆ ಯಾಕೆ ಕ್ರಿಕೆಟ್ ಆಟಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆ ತಂದುಕೊಟ್ಟ ಮಹಾನ್ ಕ್ರಿಕೆಟಿಗ ಆತ.
ಮೈದಾನದಲ್ಲಿ ಆತ ಆಡುತ್ತಿದ್ರೆ ಆತನ ಹೆಸರು ಮಂಗಳ ವಾದ್ಯದಂತೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಮೊಳಗುತ್ತಿತ್ತು. ಆತನ ಶತಕಕ್ಕಾಗಿ ಊಟ, ನಿದ್ರೆ ಬಿಟ್ಟು ಕ್ರಿಕೆಟ್ ಅಭಿಮಾನಿಗಳು ನೋಡುತ್ತಿದ್ದರು. ಶತಕದಂಚಿನಲ್ಲಿ ಎಡವಿದ್ರೆ ಅಯ್ಯೋ ಅಂತ ಕಣ್ಣೀರು ಹಾಕುತ್ತಿದ್ದರು. ಆತ ಬೇಗನೆ ಔಟಾದ್ರೆ ಪಂದ್ಯ ಸೋತಂತೆ ಅಂತ ಹೇಳುತ್ತಿದ್ದರು.

ಇನ್ನು ಕೆಲವರು ಆತ ದಾಖಲೆಗಳಿಗಾಗಿ ಆಡುತ್ತಾನೆ.. ಸ್ವಾರ್ಥಿ ಅಂತೆಲ್ಲಾ ಟೀಕೆ ಕೂಡ ಮಾಡುತ್ತಿದ್ದರು. ಆದ್ರೆ ಆತ ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ತನ್ನ ದೇಹದಲ್ಲಿ ಶಕ್ತಿ ಇರುವ ತನಕ ಕ್ರಿಕೆಟ್ ಆಡುತ್ತ ವಿಶ್ವ ಕ್ರಿಕೆಟನ್ನೇ ಪರವಶಮಾಡಿಕೊಂಡುಬಿಟ್ಟ. ಕ್ರಿಕೆಟ್ ಜಗತ್ತು ಆತನಿಗೆ ಕ್ರಿಕೆಟ್ ದೇವರು ಅಂತ ಪಟ್ಟಕಟ್ಟಿತ್ತು. ಅಭಿಮಾನಿಗಳು ಭಕ್ತರಂತೆ ಆತನನ್ನು ಆರಾಧನೆ ಮಾಡಿದ್ರು. 24 ವರ್ಷಗಳ ಕ್ರಿಕೆಟ್ ಬದುಕಿನಲ್ಲಿ ಆತ ಮಾಡಿರುವ ಸಾಧನೆಗಳನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಆಡಿರುವ ಪ್ರತಿ ಪಂದ್ಯ, ಪ್ರತಿ ರನ್‍ಗಳು ಕೂಡ ಕ್ರಿಕೆಟ್ ನ ಇತಿಹಾಸ ಪುಟಗಳಲ್ಲಿ ದಾಖಲಾಗಿವೆ.
ಮುಂದೊಂದು ದಿನ ಈ ದಾಖಲೆಗಳನ್ನು ಯಾರಿಂದಲೂ ಅಳಿಸಿ ಹಾಕಲು ಸಾಧ್ಯವಿಲ್ಲ ಎಂದು ಕ್ರಿಕೆಟ್ ಪಂಡಿತರು ಭವಿಷ್ಯ ನುಡಿದಿದ್ರು. ಯಾಕಂದ್ರೆ ಸ್ಪರ್ಧಾತ್ಮಕ ದಿನಗಳಲ್ಲಿ 24 ವರ್ಷ ಯಾರಿಂದಲೂ ಆಡಲು ಸಾಧ್ಯವಿಲ್ಲ. ಅದು ಕೂಡ 200 ಟೆಸ್ಟ್‍ನಲ್ಲಿ 51 ಶತಕ, 15921 ರನ್, 463 ಏಕದಿನ ಪಂದ್ಯಗಳಲ್ಲಿ 49 ಶತಕ, 18426 ರನ್ ಗಳಿಸುವುದು ಅಸಾಧ್ಯವೇ ಆಗಿತ್ತು. ಹೌದು, ವಿಶ್ವ ಕ್ರಿಕೆಟ್ ಅನ್ನು 24 ವರ್ಷಗಳ ಕಾಲ ಆಳಿದ ಮಾಸ್ಟರ್ ಬ್ಲ್ಯಾಸ್ಟರ್ ಸಚಿನ್ ತೆಂಡುಲ್ಕರ್ ಬರೆದಿರುವ ದಾಖಲೆಗಳು ದಾಖಲೆಗಳಾಗಿಯೇ ಉಳಿಯಲಿದೆ ಅಂತ ಅಂದುಕೊಂಡಿದ್ರು.

ಆದ್ರೆ ಸಚಿನ್ ಕ್ರಿಕೆಟ್ ಬದುಕಿಗೆ ವಿದಾಯ ಹೇಳುವಾಗ ಮಾತೊಂದು ಹೇಳಿದ್ರು. ವಿಶ್ವ ಕ್ರಿಕೆಟ್ ನಲ್ಲಿ ನನ್ನ ದಾಖಲೆಗಳನ್ನು ಅಳಿಸಿ ಹಾಕುವ ಸಾಮರ್ಥ್ಯ ಇರೋದು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಮಾತ್ರ. ಆಗ ಸಚಿನ್ ಹೇಳಿದಾಗ ಇದು ಅಸಾಧ್ಯವಾದ ಮಾತು.. ಈ ದಾಖಲೆಗಳನ್ನು ಅಳಿಸಿ ಹಾಕಲು ಕೊಹ್ಲಿ ಮತ್ತು ರೋಹಿತ್‍ಗೆ ಸಾಧ್ಯವೇ ಇಲ್ಲ ಎಂದು ಭಾವಿಸಿದ್ರು. ಆದ್ರೆ ಸಚಿನ್ ಹೇಳಿದ್ದ ಮಾತು ನಿಜವಾಗಿದೆ.

ಅಂದು ಸಚಿನ್ ನುಡಿದ ಭವಿಷ್ಯ ನಿಜವಾಗಿದೆ. ನೋಡ ನೋಡುತ್ತಲೇ ಪಂದ್ಯಗಳು ಕಳೆದು ಹೋಗ್ತಾವೆ.. ವರ್ಷಗಳು ಉರುಳುತ್ತಿವೆ. ವಿರಾಟ್ ಹೆಸರಿನಲ್ಲಿ ರನ್‍ಗಳು ಹೂವಿನ ಹಾರವಾಗುತ್ತಿವೆ. ಶತಕಗಳು ವಿರಾಟನ ಕಿರೀಟಕ್ಕೆ ಗರಿಗಳಾಗಿ ಸೇರಿಕೊಳ್ಳುತ್ತಿವೆ. ಮೂರು ವರ್ಷಗಳ ಕಾಲ ಶತಕಗಳ ಬರ ಎದುರಿಸಿದ್ದ ಕೊಹ್ಲಿ ಫಿನಿಕ್ಸ್‌ನಂತೆ ಎದ್ದು ಬಂದಿದ್ದಾರೆ. ಶತಕಗಳ ಮೇಲೆ ಶತಕ ಸಿಡಿಸುತ್ತಿದ್ದಾರೆ. 2023ರ ವಿಶ್ವಕಪ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ಕೊಹ್ಲಿ ಈಗ ಏಕದಿನ ಕ್ರಿಕೆಟ್‌ನಲ್ಲಿ ಶತಕಗಳ ಅರ್ಧಶತಕವನ್ನು ಸಿಡಿಸಿದ್ದಾರೆ. ಈ ಮೂಲಕ ತನ್ನ ಆರಾಧ್ಯ ದೈವ ಸಚಿನ್ ತೆಂಡುಲ್ಕರ್ ಅವರ ಏಕದಿನ ಶತಕಗಳ ದಾಖಲೆಯನ್ನು ತನ್ನ ಹೆಸರಿಗೆ ಕೊಹ್ಲಿ ಬರೆಸಿಕೊಂಡಿದ್ದಾರೆ.

ಕ್ರಿಕೆಟ್‌ ಲೋಕದ ಎರಡನೇ ದೇವರು!

ಒಟ್ಟಿನಲ್ಲಿ ಅಂದು ವಿಶ್ವ ಕ್ರಿಕೆಟ್ ನಲ್ಲಿ ಸಚಿನ್ ಜಮಾನ.. ಇಂದಿನ ಕ್ರಿಕೆಟ್ ಜಗತ್ತಿನಲ್ಲಿ ವಿರಾಟನ ಜಮಾನ.. ಆದ್ರೆ ಒಬ್ಬರಿಗೊಬ್ಬರು ಹೋಲಿಕೆ ಮಾಡೋದು ಸರಿಯಲ್ಲ. ಅದು ಸಮಂಜಸವೂ ಅಲ್ಲ. ಇಬ್ಬರ ಆಟದಲ್ಲೂ ಸಾಕಷ್ಟು ವ್ಯತ್ಯಾಸವಿದೆ. ಕೊಹ್ಲಿ ರೌದ್ರವತಾರ ತಾಳಿಕೊಂಡು ಬ್ಯಾಸ್ ಬೀಸುತ್ತಿದ್ರೆ, ಸಚಿನ್ ಸಮುದ್ರದ ಅಲೆಗಳಂತೆ ಬ್ಯಾಟ್ ಬೀಸುತ್ತಿದ್ದರು. ಏನೇ ಇರಲಿ, 35ರ ಹರೆಯದ ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್‌ನ ನೂತನ ಸಾರ್ವಭೌಮ. ಕ್ರಿಕೆಟ್ ದೇವರ ಹಾದಿಗಿಂತಲೂ ಪ್ರಖರವಾಗಿ ಪ್ರಜ್ವಲಿಸುತ್ತಿರುವ ಕೊಹ್ಲಿ, ಕ್ರಿಕೆಟ್ ಜಗತ್ತಿನ ಮತ್ತೊಬ್ಬ ಕ್ರಿಕೆಟ್ ಬ್ರಹ್ಮ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕ್ರಿಕೆಟ್ ಲೋಕದ ಎರಡನೇ ಕ್ರಿಕೆಟ್ ದೇವರ ಅವತಾರವೂ ಭಾರತಾಂಬೆಯ ಮಡಿಲಿನಿಂದಲೇ ಹೊರಹೊಮ್ಮಿದೆ.

Exit mobile version