Site icon Vistara News

ವಿಸ್ತಾರ ಭಾಗ- 2 | ಹರಿವ ನದಿಗೆ ಸಾವಿರ ಕಾಲು | ಕಾಣದ್ದನ್ನೂ ಹೊಳೆಯಿಸುವ ಬರಹಗಳು | ಹರಿಪ್ರಕಾಶ್‌ ಕೋಣೆಮನೆ ಅಂಕಣಗಳ ಸಂಗ್ರಹ

vistara book 2

| ಜೋಗಿ

ಸದ್ಯದ ಜತೆ ಮುಖಾಮುಖಿಯಾಗುವ ಪ್ರತಿಯೊಬ್ಬರೂ ಶಾಶ್ವತದ ಹಂಗನ್ನು ತೊರೆಯುವ ಅಪಾಯವನ್ನು ಎದುರಿಸುತ್ತಾ ಇರುತ್ತಾರೆ. ಅಂಕಣ ಬರಹಗಳ ಕಷ್ಟವೂ ಅದೇ. ಅವು ಕ್ಷಣಿಕತೆಯನ್ನು ಮೀರಿದರೆ ಸದ್ಯದ ತೊಟ್ಟು ಕಳಚಿಕೊಳ್ಳುತ್ತವೆ. ಸಾರ್ವಕಾಲಿಕ ಆಗದೇ ಹೋದರೆ ಶಾಶ್ವತದ ಹಂಬಲದಿಂದ ಪಾರಾಗುತ್ತವೆ. ಈ ಎರಡೂ ತುದಿಗಳನ್ನು ಹಿಡಿದಿಡಲು ಅಪೂರ್ವ ದಾರ್ಶನಿಕತೆ ಅಥವಾ ತಾತ್ವಿಕತೆ ಮಾತ್ರ ನೆರವಾಗಬಲ್ಲವು. ಅಂಥದ್ದನ್ನು ರಾಜಕಾರಣವನ್ನು ಕುರಿತ ಬರಹದಲ್ಲಿ ಸಾಧಿಸುವುದು ಕಷ್ಟ.

ಈ ಸಂಕಲನದ ಬರಹಗಳಲ್ಲಿ ಸ್ಥಿತಿ ಮತ್ತು ಗತಿ ಒಂದು ರೀತಿಯ ವಿಶಿಷ್ಟ ಲಯದಲ್ಲಿ ತಳಕು ಹಾಕಿಕೊಂಡಿದೆ. ಆಯಾ ವಾರದ ಘಟನೆಗಳನ್ನು ಇಟ್ಟುಕೊಂಡು ಹರಿಪ್ರಕಾಶ್ ಕೋಣೆಮನೆ ಅದರ ವಿಸ್ತಾರ, ಆಳ ಮತ್ತು ಅಗಲವನ್ನು ಬಗೆಯುತ್ತಾರೆ.

ಸಾಮಾನ್ಯವಾಗಿ ಅಂಕಣಕಾರ ಕೊಂಚ ಹಿಂಜರಿಕೆ ಮತ್ತು ವಿನಯವಂತನಂತೆ ಬರೆಯಲು ಹೋಗುತ್ತಾನೆ. ಅದು ಮೂಲತಃ ಲೇಖಕನಿಗೆ ಇರಲೇಬೇಕಾದ modesty. ಆದರೆ ರಾಜಕೀಯ ಅಂಕಣಕಾರನಿಗೆ ಅದರ ಅವಶ್ಯಕತೆ ಇಲ್ಲ. ಅದನ್ನು ಅರ್ಥಮಾಡಿ ಕೊಂಡವರಂತೆ ಕೋಣೆಮನೆ ತಮಗೆ ಕಂಡಿದ್ದನ್ನು ದಾಖಲಿಸಿದ್ದಾರೆ. ಅವರು ಕಂಡದ್ದು ಮಾತ್ರವಲ್ಲ ಕಾಣದ್ದನ್ನು ಕೂಡ ಓದುಗನಿಗೆ ಹೊಳೆಯುವಂತೆ ಮಾಡಬಲ್ಲ ಬರಹಗಳು ಇವು.

ಈಚೀಚೆಗೆ ಬರೆಸುವುದರಲ್ಲೇ ಸಂಪಾದಕರ ಸಮಯ ಮುಗಿಯುತ್ತದೆ. ಖಾದ್ರಿ ಶಾಮಣ್ಣ, ಸತ್ಯ, ವೈಎನ್‌ಕೆ, ಟಿಎಸ್‌ಆರ್‌ , ವಿಶ್ವೇಶ್ವರ ಭಟ್ ಮುಂತಾದ writing editorಗಳ ಸಾಲಿನಲ್ಲಿ ಕೋಣೆಮನೆ ಇದ್ದಾರೆ. ಬರೆಯುವ ಸಂಪಾದಕನ ಜವಾಬ್ದಾರಿ ದೊಡ್ಡದು. ಆತ ಒಮ್ಮೊಮ್ಮೆ ಪತ್ರಿಕೆಯ ನಿಲುವನ್ನು ಕೂಡ ಧಿಕ್ಕರಿಸುವ ಸಾಹಸವಂತ ಆಗಿರಬೇಕಾಗುತ್ತದೆ. ಈ ಸಂಕಲನದಲ್ಲಿ ಅಂಥ ಹೊಳಹುಗಳೂ ನಮಗೆ ಕಾಣಸಿಗುತ್ತವೆ.

ಕೃತಿ: ವಿಸ್ತಾರ, ಭಾಗ 2, ಹರಿವ ನದಿಗೆ ಸಾವಿರ ಕಾಲು
ಲೇಖಕರು: ಹರಿಪ್ರಕಾಶ್‌ ಕೋಣೆಮನೆ
ಪ್ರಕಾಶನ: ವಿಸ್ತಾರ ಪ್ರಕಾಶನ, ಬೆಂಗಳೂರು
ಪುಟ: 220, ಬೆಲೆ: 225 ರೂ.
ವಿತರಣೆ ಹಾಗೂ ಮಾರಾಟ: ಸ್ನೇಹ ಬುಕ್‌ ಹೌಸ್‌(ಸಂಪರ್ಕ ಸಂಖ್ಯೆ: 9845031335)

Exit mobile version