Site icon Vistara News

ವಿಸ್ತಾರ ಅಂಕಣ: ವಿನ್‌ಸ್ಟನ್ ಚರ್ಚಿಲ್ ಹೇಳಿದ ಮಾತು ಸತ್ಯವಾಗಬೇಕೆ?

india and winston churchil

ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂದು ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ನಿರ್ಣಯ ಮಂಡಿಸಿದಾಗ ಇದಕ್ಕೆ ವಿನ್‌ಸ್ಟನ್ ಚರ್ಚಿಲ್ (Winston Churchil) ವಿರೋಧಿಸುತ್ತ, “ಭಾರತಕ್ಕೆ ಸ್ವಾತಂತ್ರ್ಯ ನೀಡುವುದರಿಂದ ಆ ದೇಶದ ಆಡಳಿತವು ನೀತಿವಿಹೀನರ ಕೈಗೆ ಹೋಗುವ ಸಾಧ್ಯತೆಯಿದೆ. ಕಳ್ಳಕಾಕರು ಹಾಗೂ ಲೂಟಿಕೋರರು ಅಧಿಕಾರಕ್ಕೆ ಬರಬಹುದು. ಮಾಫಿಯಾಗಳು ಸ್ವೇಚ್ಛೆಯಿಂದ ವರ್ತಿಸಬಹುದು ಹಾಗೂ ಗಾಳಿಯೊಂದನ್ನು ಬಿಟ್ಟು ಎಲ್ಲ ವಸ್ತುಗಳ ಮೇಲೆಯೂ ತೆರಿಗೆ ವಿಧಿಸಬಹುದು” ಎಂದಿದ್ದರು. ಆ ಸಮಯದಲ್ಲಿ ಅನೇಕ ಭಾರತೀಯರು ಈ ಮಾತನ್ನು ಸರಿಯಾಗಿಯೇ ಝಾಡಿಸಿದ್ದರು. ಈ ಮಾತುಗಳು ಪೂರ್ವಾಗ್ರಹ ಪೀಡಿತವೆಂದು ಹೇಳಿದ್ದರು.

ಬ್ರಿಟಿಷರ ಈ ಮಾತುಗಳು ʼವೈಟ್‌ಮನ್ಸ್ ಬರ್ಡನ್ʼ ರೋಗದಿಂದ ಬಂದಿದ್ದಾಗಿತ್ತು. ಜಗತ್ತಿನ ಎಲ್ಲ ಜನರೂ ಕತ್ತಲಿನಲ್ಲಿ ಮುಳುಗಿಹೋಗಿದ್ದಾರೆ. ಅವರೆಲ್ಲರನ್ನೂ ಮೇಲೆತ್ತಲು ತಾವು ಬ್ರಿಟಿಷ್ ಸಾಮ್ರಾಜ್ಯವನ್ನು ವಿಸ್ತರಣೆ ಮಾಡುತ್ತಿದ್ದೇವೆ ಎನ್ನುತ್ತ ಸಾಮ್ರಾಜ್ಯದ ಜತೆಗೆ ಕ್ರೈಸ್ತ ಮತಪ್ರಚಾರವನ್ನೂ ಎಗ್ಗಿಲ್ಲದೇ ನಡೆಸಿದವರು ಬ್ರಿಟಿಷರು. ಇಂದು ಭಾರತದಲ್ಲಿ ಕೇಂದ್ರ ಸರ್ಕಾರವನ್ನು ಹಾಗೂ ಅದರ ವಿವಿಧ ಸಂಸ್ಥೆಗಳನ್ನು ಹೊರತುಪಡಿಸಿದರೆ ಅತಿ ದೊಡ್ಡ ಪ್ರಮಾಣದಲ್ಲಿ ಕೃಷಿಯೇತರ ಭೂಮಿಯನ್ನು ಹೊಂದಿರುವುದು ಕ್ರೈಸ್ತ ಮತೀಯ ಸಂಸ್ಥೆಗಳು, ನಿರ್ದಿಷ್ಟವಾಗಿ ಕ್ಯಾಥೋಲಿಕ್ ಚರ್ಚ್ ಆಫ್ ಇಂಡಿಯಾ ಎಂಬ ಅನುಮಾನಗಳನ್ನು ಅನೇಕ ಲೇಖಕರು ವ್ಯಕ್ತಪಡಿಸಿದ್ದಾರೆ. ಎರಡನೇ ಅತಿ ದೊಡ್ಡ ಭೂ ಹಿಡುವಳಿದಾರ ಎನ್ನುವುದು ಚರ್ಚಾರ್ಹ ವಿಚಾರವಾದರೂ, ಆ ಸಮುದಾಯದ ಜನಸಂಖ್ಯೆಯ ಹೋಲಿಕೆಯಲ್ಲಿ ಹತ್ತಾರು ಪಟ್ಟು ಹೆಚ್ಚಿನ ಭೂಮಿ ಇರಬಹುದು ಎಂದು ಬೆಂಗಳೂರು ಸುತ್ತಮುತ್ತ ಸಂಚರಿಸುವ ಸಾಮಾನ್ಯ ಜನರೂ ಊಹಿಸಬಹುದು. ಈಗ ಲೇಖನದ ವಿಷಯ ಅದಲ್ಲವಾದ್ಧರಿಂದ, ಅದನ್ನು ಮುಂದೆ ಯಾವತ್ತಾದರೂ ಚರ್ಚಿಸೋಣ.

ಭಾರತಕ್ಕೆ ಐದು ಸಾವಿರ ವರ್ಷಗಳ ಇತಿಹಾಸವಿದೆ. ಹಾಗಾಗಿ ನಮಗೆ ಆಡಳಿತ ನಡೆಸಲು ಗೊತ್ತಿದೆ. ಚರ್ಚಿಲ್ ಅಥವಾ ಇನ್ಯಾರೋ ನಮಗೆ ಪ್ರಜಾಪ್ರಭುತ್ವವನ್ನು ನಡೆಸುವುದನ್ನು ಹೇಳಿಕೊಡಬೇಕಿಲ್ಲ ಎಂದು ಅನೇಕರು ಆಕ್ಷೇಪ ವ್ಯಕ್ತಪಡಿಸಿದರು. ಹಾಗೂ ಅವರೆಲ್ಲರ ಅಭಿಪ್ರಾಯಗಳು ಸರಿಯಾಗೇ ಇದ್ದವು. ಅವರೆಲ್ಲರ ಮಾತುಗಳಿಗೆ ಆಧಾರವಾಗಿದ್ದ ವಿಚಾರಗಳು ಯಾವುವು? ಭಾರತೀಯರು ಯಾವಾಗ ಪ್ರಜಾಪ್ರಭುತ್ವ ಸರ್ಕಾರ ನಡೆಸಿದ್ದರು? ಪ್ರಜಾಪ್ರಭುತ್ವ ಆಡಳಿತ ಎಂದರೆ ಹೇಗಿರುತ್ತದೆ ಎಂದು ಎಲ್ಲಿ ಕಂಡಿದ್ದರು?

ನಿಶ್ಚಿತವಾಗಿಯೂ ನಮಗೆ ಆಡಳಿತದ ಅನೇಕ ವಿಚಾರಗಳು ತಿಳಿದುಬರುವುದು ಶ್ರೀರಾಮನ ಜೀವನದಿಂದ ಅಂದರೆ ರಾಮಾಯಣದಿಂದ. ಒಬ್ಬ ರಾಜ ಹೇಗೆ ಆಡಳಿತ ನಡೆಸಬೇಕೆನ್ನುವುದಕ್ಕೆ ಸ್ವತಃ ದಶರಥನೂ ಉದಾಹರಣೆಯಾಗಿದ್ದ, ರಾಮನಂತೂ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋದ. ಸಮಗ್ರ ಅಭಿವೃದ್ಧಿಯ ಸಮಾಜ ಹೇಗಿರಬೇಕು ಎಂಬುದಕ್ಕೆ ಮಾದರಿ ಎನ್ನುವುದಿದ್ದರೆ ಅದಕ್ಕೆ ʼರಾಮರಾಜ್ಯʼ ಎಂದು ಯಾರಾದರೂ ಹೇಳಿಬಿಡುತ್ತಾರೆ. ಮಹಾತ್ಮಾ ಗಾಂಧಿಯವರೂ ಇದೇ ಮಾತನ್ನು ಉಲ್ಲೇಖಿಸುತ್ತಿದ್ದರು. ಆದರೆ ದುರದೃಷ್ಟವಶಾತ್, ಸ್ವಾತಂತ್ರ್ಯದ ಸಂಭ್ರಮದ ಹಸಿರು ಆರುವ ಮುನ್ನವೇ ಗಾಂಧಿಯವರ ಹತ್ಯೆಯಾಯಿತು. ಗಾಂಧಿಯವರು ಬದುಕಿರುತ್ತಿದ್ದರೆ ಬಹುಶಃ ಗೋಹತ್ಯೆ ನಿಷೇಧ ಮಾಡಿಸುತ್ತಿದ್ದರೆ? ಸ್ವದೇಶಿ ಉದ್ಯಮಕ್ಕೆ ಒತ್ತು ನೀಡುತ್ತಿದ್ದರೆ? ಗ್ರಾಮಸ್ವರಾಜ್ಯ ಪರಿಕಲ್ಪನೆ ಬೇಗನೆ ಜಾರಿ ಆಗುತ್ತಿತ್ತೆ? ಪಾನ ನಿಷೇಧ ದೇಶದೆಲ್ಲೆಡೆ ಜಾರಿ ಆಗುತ್ತಿತ್ತೇ? ಗಾಂಧಿಯವರು ಜೀವನ ನಡೆಸಿದ ರೀತಿಯನ್ನು ನೋಡಿದರೆ, ಇರಲೂಬಹುದು, ಸ್ವಾತಂತ್ರ್ಯಾನಂತರ ದೇಶ ನಡೆದ ರೀತಿ ನೋಡಿದರೆ ಇಲ್ಲದೆಯೂ ಇರಬಹುದು.

ರಾಮ ರಾಜ್ಯದ ಪರಿಕಲ್ಪನೆಯನ್ನು ಆಡಳಿತದಲ್ಲಿ ತಂದಿದ್ದರೆ ಭಾರತದ ಚಿತ್ರಣವೇ ಬದಲಾಗಿರುತ್ತಿತ್ತು ಎನ್ನುವುದನ್ನಂತೂ ಖಂಡಿತವಾಗಿ ಹೇಳಬಹುದು. ರಾವಣನೊಂದಿಗೆ ಯುದ್ಧ ಮುಗಿಸಿ ಅಯೋಧ್ಯೆಗೆ ವಾಪಸಾದ ರಾಮನು ರಾಜ್ಯದಲ್ಲಿ ಮನುಷ್ಯರು, ಪ್ರಾಣಿ ಪಕ್ಷಿಗಳೂ ಸುಖವಾಗಿರುವುದನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದ. ಅನೇಕ ಬಾರಿ ಮಾರುವೇಷದಲ್ಲಿ ಜನವಸತಿ ಪ್ರದೇಶಗಳಿಗೆ ತೆರಳಿ ಜನರ ನಾಡಿಮಿಡಿತವನ್ನು ಅರಿಯುವ ಕೆಲಸ ಮಾಡುತ್ತಿದ್ದ. ಇದೇ ಸಂದರ್ಭದಲ್ಲಿ ತಾನೆ ಕಾಯಕ ಬಂಧು ಅಗಸನೊಬ್ಬ ತನ್ನ ಪತ್ನಿಯೊಂದಿಗೆ ಜಗಳವಾಡುವ ಸನ್ನಿವೇಶ ಬರುವುದು? ಪತ್ನಿಯನ್ನು ಕಾಡಿಗೆ ಅಟ್ಟಿದ್ದು ಸರಿಯೋ, ತಪ್ಪೋ ಎಂಬ ಚರ್ಚೆಯನ್ನು ಯಾರುಬೇಕಾದರೂ ಮಾಡಬಹುದು. ಆದರೆ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಿದನಲ್ಲ? ಇಂತಹ ರಾಜ ಜಗತ್ತಿನಲ್ಲಿ ಬೇರೆ ಯಾರಾದರೂ ಇದ್ದಾನೆಯೇ? ಪ್ರಜಾಪ್ರಭುತ್ವಕ್ಕೆ ಇದಕ್ಕಿಂತ ಉನ್ನತ ಮಾದರಿ ಬೇರೆ ಯಾವುದಿದೆ ?

ಆದರೆ ಸ್ವಾತಂತ್ರ್ಯಾನಂತರದಲ್ಲಿ ದೇಶವನ್ನು ಮುನ್ನಡೆಸಿದವರು ಕೇವಲ ರೋಟಿ, ಕಪಡಾ ಕುರಿತು ಯೋಚಿಸಿದರೇ ಹೊರತು, ನಮ್ಮ ದೇಶವನ್ನು ನಮ್ಮದೇ ರೀತಿಯಲ್ಲಿ ನಡೆಸುವ ಮಾರ್ಗವನ್ನು ಕಂಡುಕೊಳ್ಳಲೇ ಇಲ್ಲ. ಇಡೀ ವಿಶ್ವದಲ್ಲಿ ಸವಕಲಾಗಿದ್ದ ಸಮಾಜವಾದಿ, ಜಾತ್ಯತೀತ ವಿಚಾರಗಳ ಆಧಾರದಲ್ಲಿ ಪ್ರಜಾಪ್ರಭುತ್ವವನ್ನು ಕಟ್ಟಲು, ಅದರಂತೆ ನಡೆಸಲು ನಿರ್ಧರಿಸಿದರು. ಸಮಾಜವಾದಿ, ಜಾತ್ಯತೀತ ಶಬ್ದಗಳನ್ನು ಸಂವಿಧಾನದಲ್ಲಿ ಸೇರಿಸಿದ್ದು ಇಂದಿರಾ ಕಾಲದಲ್ಲಿಯಾದರೂ ನಂತರವೇ ಆದರೂ ಅದರ ಆಚರಣೆಯನ್ನು ಮೊದಲ ದಿನದಿಂದಲೇ ಮಾಡುತ್ತಾ ಬರಲಾಯಿತು. ಆಡಳಿತ ಪಕ್ಷ ಎನ್ನುವುದು ತನ್ನ ಹೊಣೆಗಾರಿಕೆಯನ್ನು ತೋರಲೇ ಇಲ್ಲ. ಅಧಿಕಾರಕ್ಕೆ ಅಂಟಿಕೊಳ್ಳಬೇಕು ಎನ್ನುವುದನ್ನೇ ಅದು ನೋಡುತ್ತಿತ್ತು. ದೇಶಾದ್ಯಂತ ಅಪಾರ ಮನ್ನಣೆ ಹೊಂದಿದ್ದ ಏಕೈಕ ಪಕ್ಷ ಎಂದರೆ ಕಾಂಗ್ರೆಸ್. ಆದರೂ ಅಧಿಕಾರದ ಆಸೆ. ಇದಕ್ಕಾಗಿ ಸಂವಿಧಾನದಲ್ಲಿ ಅನೇಕ ತಿದ್ದುಪಡಿಗಳನ್ನು ತರಲಾಯಿತು. ವಿಶೇಷವಾಗಿ ಅಲ್ಪಸಂಖ್ಯಾತರ ಓಲೈಕೆಗೆ ಇನ್ನಿಲ್ಲದ ಕಸರತ್ತು ನಡೆಸಲಾಯಿತು. ನೇರವಾಗಿ ಮುಸ್ಲಿಂ ಸಮುದಾಯಕ್ಕೆ ಯಾವ ಲಾಭವನ್ನೂ ತರದ, ಸಂವಿಧಾನದ ಅನುಚ್ಛೇದ 370ನ್ನು ಜಾರಿ ಮಾಡುವಂತಹ ಕೆಲಸ ಮಾಡಲಾಯಿತು. ಮುಸ್ಲಿಮರನ್ನು ಮಾನಸಿಕವಾಗಿ ತಮ್ಮೊಂದಿಗೆ ಸೆಳೆದು ಮತ ಪಡೆದುಕೊಂಡಿದ್ದು ಹಾಗೂ ವಕ್ಫ್ ಸೇರಿ ಅನೇಕ ಮುಸ್ಲಿಂ ಆಸ್ತಿಪಾಸ್ತಿಗಳನ್ನು ಕೆಲವೇ ಬೆರಳೆಣಿಕೆಯ ರಾಜಕಾರಣಿಗಳು ಕಬಳಿಸಿದ್ದು ಬಿಟ್ಟರೆ ಮುಸ್ಲಿಂ ಸಮುದಾಯಕ್ಕೂ ಇದರಿಂದ ಯಾವುದೇ ಲಾಭ ಆಗಲಿಲ್ಲ.

ಇದನ್ನೂ ಓದಿ: ವಿಸ್ತಾರ ಅಂಕಣ: ಕೇವಲ ದರೋಡೆಕೋರರಾಗಿದ್ದರೆ ಅಯೋಧ್ಯೆ ಮೇಲೆ ಏಕೆ 76 ಬಾರಿ ದಾಳಿ ಮಾಡುತ್ತಿದ್ದರು?

ಒಂದು ದೇಶವು ತನ್ನನ್ನು ತಾನು ಕಟ್ಟಿಕೊಳ್ಳಬೇಕು ಎಂದರೆ ತಾನು ಏನು ಎನ್ನುವುದನ್ನು ಮೊದಲು ಕಂಡುಕೊಳ್ಳಬೇಕು. ಅದಕ್ಕಾಗಿ ಅನಿವಾರ್ಯವಾಗಿ ಬ್ರಿಟಿಷ್ ಪೂರ್ವ, ಇಸ್ಲಾಮಿಕ್ ಆಕ್ರಮಣದ ಪೂರ್ವ ಭಾರತದಲ್ಲಿ ಏನಿತ್ತು ಎನ್ನುವುದನ್ನು ನೋಡಬೇಕಿತ್ತು. ಆದರೆ ಅಲ್ಲಿಂದ ಹಿಂದೆ ಭಾರತ ಅಸ್ತಿತ್ವದಲ್ಲೇ ಇರಲಿಲ್ಲ, ಇದ್ದರೂ ಎಲ್ಲರೂ ಅನಕ್ಷರಸ್ಥರಾಗಿದ್ದರು ಎನ್ನುವ ಬ್ರಿಟಿಷ್ ಕ್ಯಾಸೆಟ್ಟನ್ನೇ ತಿರುಗಾಮುರುಗಾ ಹಾಕಿ ಕೇಳಿಸಲಾಯಿತು. ʼಭಾರತದಲ್ಲಿ ಸ್ತ್ರೀಯರನ್ನು ಜ್ಞಾನದಿಂದ ವಂಚಿಸಲಾಗಿತ್ತುʼ ಎಂಬ ಹಸಿಸುಳ್ಳನ್ನು ದೇಶದ ಬುದ್ಧಿಜೀವಿಗಳು ಈಗಲೂ ನಂಬುತ್ತಾರೆ. ಹಾಗಾದರೆ ಸ್ವತಃ ಆದಿಶಂಕರಾಚಾರ್ಯರ ಜತೆಗೆ ವಾದಿಸಬಲ್ಲಷ್ಟು ಸಬಲಳಾಗಿದ್ದ ಉಭಯಭಾರತಿಯ ಉದಾಹರಣೆ ಎಲ್ಲಿಹೋಯಿತು? ಇತ್ತೀಚಿನ ಶತಮಾನಗಳಲ್ಲಿ ನಡೆದ ಇಂತಹ ಘಟನೆಗಳನ್ನೇ ಗಣನೆಗೆ ತೆಗೆದುಕೊಳ್ಳದ ಬುದ್ಧಿಜೀವಿಗಳು, ರಾಮನ ಕಾಲದ ಆಡಳಿತವನ್ನು ಮಿಥ್ ಎಂದು ಒಂದೇ ಮಾತಿಗೆ ಬದಿಗೆ ಸರಿಸಿಬಿಟ್ಟರು.

ಇಂದು ಅಯೋಧ್ಯೆಯಲ್ಲಿ ರಾಮಮಂದಿರ (ayodhya ram mandir) ನಿರ್ಮಾಣ ಆಗುತ್ತಿರುವುದು ಸಂತಸದ ವಿಚಾರವೆ. ಇತ್ತೀಚೆಗೆ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ಶ್ರೀಪಾದರು ಹೇಳಿದಂತೆ, ರಾಮಮಂದಿರವನ್ನೇನೋ ಕಟ್ಟುತ್ತಿದ್ದೇವೆ. ಆದರೆ ರಾಮರಾಜ್ಯ (Ram rajya) ಮಾಡಬೇಕಿರುವುದು ನಮ್ಮ ಮುಂದಿನ ಕೆಲಸವಾಗಬೇಕು. ರಾಮರಾಜ್ಯದ ಆಧಾರದಲ್ಲಿ ನಾವು ದೇಶವನ್ನು ಮುನ್ನಡೆಸಬೇಕು ಎಂದಕೂಡಲೆ ಹಿಂದುತ್ವವನ್ನು ಹೇರಲಾಗುತ್ತಿದೆ ಎಂದೆಲ್ಲ ಗುಲ್ಲೆಬ್ಬಿಸುವ ಅಗತ್ಯವಿಲ್ಲ. ರಾಮರಾಜ್ಯ ಎನ್ನುವುದು ಎಲ್ಲರನ್ನೂ ಒಳಗೊಳ್ಳುವ, ಎಲ್ಲರ ಧ್ವನಿಯನ್ನೂ ಆಲಿಸುವ, ಜನಮೆಚ್ಚಿಸುವ ಕಾರ್ಯದ ಬದಲಿಗೆ ಜನಕಲ್ಯಾಣ ಕಾರ್ಯಗಳನ್ನು ಕೈಗೊಳ್ಳುವ ಜವಾಬ್ದಾರಿಯುತ ಆಡಳಿತ. ಇಂದು ಭಾರತದಲ್ಲಿ ಹಾಗೂ ಹೀಗೂ ನಡೆಯುತ್ತಿರುವ ಪ್ರಜಾಪ್ರಭುತ್ವವಿದೆ. ಚುನಾವಣೆ ಸಮಯದಲ್ಲಿ ನಡೆಯುವ ಮತದಾನ ಪ್ರಕ್ರಿಯೆಯನ್ನು ಗಮನಿಸಿದರೆ ಎಂಥವರಿಗೂ ಇದು ಕಾಣುತ್ತದೆ. ನಮ್ಮದು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಎಂದು ಸುಮ್ಮನೆ ಖಾಲಿ ಹೆಮ್ಮೆ ಪಡುವುದಕ್ಕಿಂತಲೂ, ಅದರಲ್ಲಿರುವ ಸಮಸ್ಯೆಗಳ ಕಹಿ ಸತ್ಯವನ್ನೂ ನಾವು ಅರಗಿಸಿಕೊಳ್ಳಬೇಕು. ಈ ಕಾರ್ಯಕ್ಕೆ ಶ್ರೀರಾಮನನ್ನೇ ಪ್ರೇರಣೆಯಾಗಿ ತೆಗೆದುಕೊಳ್ಳದೆ ಹೋದರೆ, ವಿನ್ಸ್ಟನ್ ಚರ್ಚಿಲ್ ಹೇಳಿದ ಮಾತನ್ನು ನಾವು ಸಾಬೀತಪಡಿಸಿದಂತಾಗುತ್ತದೆ ಅಷ್ಟೆ. ಅದಕ್ಕೆ ಅವಕಾಶ ಕೊಡುವುದು ಬೇಡ.

ಇದನ್ನೂ ಓದಿ: ವಿಸ್ತಾರ ಅಂಕಣ: ಯುವನಿಧಿ ಜಾರಿಗೆ ತೋರುವ ಕಾಳಜಿ ಎನ್ಇಪಿ ಜಾರಿಗೆ ಏಕಿಲ್ಲ?

Exit mobile version