Site icon Vistara News

ಬೆಳಕಿನ ಗರಿ ಅಂಕಣ | ಕೈಲಾಸ ಮಾನಸ ಸರೋವರದ ಅನ್ವೇಷಕ ಸಾಧಕ ಸ್ವಾಮಿ ಪ್ರಣವಾನಂದ

ನಮ್ಮಲ್ಲಿ ಕೈಲಾಸ ಪರ್ವತಕ್ಕೆ ಬಹಳ ಔನ್ನತ್ಯದ ಆಧ್ಯಾತ್ಮಿಕ ಸ್ಥಾನವನ್ನು ನೀಡಲಾಗಿದೆ. ವೇದ, ಉಪನಿಷತ್ತುಗಳ ದರ್ಶನದ ಮೂಲಸ್ಥಾನವೇ ಹಿಮಾಲಯದ ತಪ್ಪಲು ಎನ್ನಲಾಗುತ್ತದೆ. ಹಿಮಾಲಯದ ಗಿರಿಗಳಲ್ಲೇ ಅತ್ಯಂತ ಶ್ರೇಷ್ಠತೆಯನ್ನು ಹೊಂದಿರುವ, ಪರಶಿವನ ಆವಾಸಸ್ಥಾನ ಎಂಬ ನಂಬಿಕೆಯನ್ನು ಹೊಂದಿರುವುದು ಕೈಲಾಸ ಪರ್ವತ. ಅದರ ತಪ್ಪಲಿನಲ್ಲಿರುವ ಮಾನಸ ಸರೋವರವಂತೂ ಕೈಲಾಸದ ದೈವಿಕತೆಗೆ ಕನ್ನಡಿ ಹಿಡಿಯುವಂಥದ್ದು.

ಮನುಷ್ಯನ ಪರಿಶುದ್ಧ ಮನಸ್ಸನ್ನು ಕವಿಗಳು ಮಾನಸ ಸರೋವರಕ್ಕೆ ಹೋಲಿಸಿದ್ದಾರೆ. ಇದಕ್ಕೆ ಬಹುಮುಖ್ಯ ಕಾರಣವೇನೆಂದರೆ, ಕೈಲಾಸ ಪರ್ವತದ ತಪ್ಪಲಿನಲ್ಲಿರುವ ಮಾನಸ ಸರೋವರವು ಸ್ಫಟಿಕದಷ್ಟು ಪಾರದರ್ಶಕವಾಗಿದ್ದು, ಶುದ್ಧವಾಗಿದೆ. ಅನೇಕರು ಆ ಜಾಗಕ್ಕೆ ಪ್ರವಾಸ ಹೋಗಿ, ಇದನ್ನು ಪುಷ್ಟೀಕರಿಸಿದ್ದಾರೆ. ಮಾನಸ ಎಂದರೇ ಮನಸ್ಸು ಎಂದರ್ಥ. ನಮ್ಮ ಮನಸ್ಸು ಹಲವು ನಿಗೂಢಗಳ, ನಂಬಿಕೆಗಳ, ರಹಸ್ಯಗಳ ತಾಣವೂ ಹೌದು. ಅದೇ ರೀತಿ ಕೈಲಾಸ-ಮಾನಸ ಸರೋವರದ ಕುರಿತು ಅನೇಕ ಸತ್ಯ-ಮಿಥ್ಯ ಕಥೆಗಳು, ನಂಬಿಕೆಗಳು, ಅರಿಯಲಾಗದ ರಹಸ್ಯಗಳು ಅನಾದಿಕಾಲದಿಂದಲೂ ಬೆಸೆದುಕೊಂಡಿವೆ. ಉದಾಹರಣೆಗೆ: ಅಲ್ಲಿ ದೇವತೆಗಳು, ಗಂಧರ್ವರು ಜಲವಿಹಾರಕ್ಕೆ ಬರುತ್ತಾರೆ, ಮಾನಸ ಸರೋವರದಲ್ಲಿ ರಾಜಹಂಸಗಳು ತೇಲುತ್ತಿರುತ್ತವೆ, ಅಲ್ಲಿಯ ಹಿಮ ಪರ್ವತಗಳಲ್ಲಿ ಹಿಮಮಾನವರು ವಾಸ ಮಾಡುತ್ತಾರೆ ಇತ್ಯಾದಿ.

ಇಂತಹ ಚಿತ್ರವಿಚಿತ್ರ ಕಥೆಗಳ ಹಿನ್ನೆಲೆ, ಸತ್ಯತೆ, ಅಲ್ಲಿಯ ವಿಶಿಷ್ಟ ಸಸ್ಯಸಂಕುಲ, ಭೌಗೋಳಿಕ ಪರಿಸರ, ಟಿಬೆಟ್ಟಿನ ಜನಜೀವನ, ನಂಬಿಕೆಗಳು, ಆಚರಣೆಗಳು, ಅಲ್ಲಿಯ ಪ್ರಮುಖ ಗೊಂಪಾಗಳು- ಇವುಗಳನ್ನೆಲ್ಲ “ಅನ್ವೇಷಕ ಸ್ವಾಮಿ ಪ್ರಣವಾನಂದರು ಮತ್ತು ಕೈಲಾಸ ಮಾನಸ ಸರೋವರ” ಎಂಬ ಪುಸ್ತಕವು ಸ್ಪಷ್ಟವಾಗಿ ವಿವರಿಸುತ್ತದೆ. ಇನ್ನೂ ಅನೇಕ ಕಾರಣಗಳಿಂದ ಬಹಳ ವಿಶಿಷ್ಟತೆಯನ್ನು ಹೊಂದಿರುವ, ಕೈಲಾಸ-ಮಾನಸ ಸರೋವರ ಯಾತ್ರಿಗಳಿಗೆ ಸಮಗ್ರ ಮಾಹಿತಿಗಳನ್ನಿತ್ತು, ತಥಾಕಥಿತ ಸಂಗತಿಗಳ ಮೇಲೆ ಬೆಳಕನ್ನು ಚೆಲ್ಲುವ ಒಂದು ಅಪರೂಪದ ಹೊತ್ತಗೆಯಿದು.

ಸ್ವಾಮೀಜಿಯವರ “ಕೈಲಾಸ ಮಾನಸ ಸರೋವರ” ಎನ್ನುವ ಇಂಗ್ಲಿಷ್‌ ಭಾಷೆಯಲ್ಲಿರುವ ಬೃಹತ್ ಗ್ರಂಥವನ್ನು ಎನ್.ಜಿ.ಚಂದ್ರಶೇಖರ ಎನ್ನುವವರು ಪಿ.ಎಲ್.ರಾವ್ ಎನ್ನುವವರೊಡಗೂಡಿ ಕನ್ನಡಕ್ಕೆ ತಂದಿದ್ದಾರೆ. ಇದರಲ್ಲಿ ಸ್ವಾಮಿಜೀಯವರ ಪೂರ್ವಾಪರ ಹಿನ್ನೆಲೆ, ಬದುಕು, ಶಿಕ್ಷಣ, ಉದ್ಯೋಗ, ಕೈಲಾಸ-ಮಾನಸ ಸರೋವರದಲ್ಲಿ ಸರಿಸುಮಾರು 25 ವರುಷಗಳ ಕಾಲ ಓಡಾಡಿ ನಡೆಸಿದ ಅಪಾರ ವೈಜ್ಞಾನಿಕ ಸಂಶೋಧನೆಗಳು – ಇವೆಲ್ಲವುಗಳನ್ನು ಸಮಗ್ರವಾಗಿ ವಿವರಿಸಲಾಗಿದೆ. ಈ ವಿಶಿಷ್ಟ ಪುಸ್ತಕವನ್ನು ಸ್ವಾಮಿ ಪ್ರಣವಾನಂದರ ಅಭಿಮಾನಿ ಬಳಗ ಕನ್ನಡದಲ್ಲಿ ಪ್ರಕಟಿಸಿದೆ. ಇವರ ವಿಶಿಷ್ಟ ಸಾಧನೆಯನ್ನು ಗುರುತಿಸಿ, ಭಾರತ ಸರ್ಕಾರ “ಪದ್ಮಶ್ರೀ” ಪುರಸ್ಕಾರವನ್ನು, ಇಂಗ್ಲೆಂಡಿನ ರಾಯಲ್ ಭೌಗೋಳಿಕ ಸಂಸ್ಥೆಯು ಇಸಿಆರ್‌ಎಸ್ ಪದವಿಯನ್ನು ನೀಡಿ ಗೌರವಿಸಿದೆ. ‌

ಯಾರಿವರು ಸ್ವಾಮಿ ಪ್ರಣವಾನಂದ?

ಸ್ವಾಮಿ ಪ್ರಣವಾನಂದರ ಪೂರ್ವಾಶ್ರಮದ ಹೆಸರು ಕನಕದಂಡಿ ವೆಂಕಟ ಸೋಮಯಾಜಲು. ಆಂಧ್ರಪ್ರದೇಶದ ‘ಯನಗುಲಮಹಲ್’ ಎಂಬ ಊರಿನಲ್ಲಿ 1856, ಜನವರಿ 14ರಂದು ಜನನ. ತಾಯಿ ಸೀತಮ್ಮ ಮತ್ತು ತಂದೆ ವಿಶ್ವಪತಿ ಶಾಸ್ತ್ರಿ. ಇವರ ಪೂರ್ವಜರಲ್ಲಿ ಕೆಲವರು ವಿಜಯನಗರ ಸಂಸ್ಥಾನದಲ್ಲಿ ಮಹಾಕವಿಗಳಾಗಿದ್ದರಂತೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ನಂತರ ಇವರು ಲಾಹೋರಿನಲ್ಲಿ ಲಾಲಾ ಲಜಪತರಾಯ್ ಅವರು ಸ್ಥಾಪಿಸಿದ್ದ ಪದವಿಪೂರ್ವ ಶಿಕ್ಷಣದ ಕಾಲೇಜಿನ ಮಾಹಿತಿ ಪಡೆದು ‘ಡಿಎವಿ’ ಕಾಲೇಜನ್ನು ಸೇರುತ್ತಾರೆ. ಸ್ವಾತಂತ್ರ್ಯ ಸಮರದಲ್ಲಿ ಧುಮುಕಿದರೂ, ಬ್ರಿಟೀಷರಿಂದ ಗುಂಡೇಟು ತಿಂದು ತೀವ್ರವಾಗಿ ಗಾಯಗೊಂಡರೂ ವಿದ್ಯಾರ್ಜನೆಯನ್ನು ಕೈಬಿಡಲಿಲ್ಲ.

1918ರಲ್ಲಿ ಹಿಮಾಲಯದ ಗರ್ವಾಲ್ ಪ್ರಾಂತ್ಯದಲ್ಲಿ ಭೀಕರ ಕ್ಷಾಮ ತಲೆದೋರಿದಾಗ ತಮ್ಮ ಸ್ನೇಹಿತರೊಡನೆ ಅಲ್ಲಿಗೆ ಹೋಗಿ ಜನರಿಗೆ ಆಹಾರವನ್ನು ಹಂಚುವಾಗ ಅವರಿಗೆ ಹಿಮಾಲಯದ ಪರಿಚಯವಾಗಿ ಅಪಾರ ಆಕರ್ಷಣೆ ಉಂಟಾಯಿತು. ಮುಂದೆ ರೈಲ್ವೇ ಇಲಾಖೆಯಲ್ಲಿ ಗುಮಾಸ್ತನಾಗಿ ಅಲ್ಪಕಾಲ ಸಂಸಾರಿಯಾಗಿ ಜೀವನ ನಡೆಸಿದರೂ ಹಿಮಾಲಯದ ಸೆಳೆತ ಅವರನ್ನು ಬಿಡದೇ ಕರೆಸಿಕೊಂಡಿತು. ಅಧ್ಯಾತ್ಮ ಸಾಧನೆ ನಡೆಸಲು ಅಲ್ಲಿಗೆ ಹೋಗಿ, ಜರ್ಮನಿಯಲ್ಲಿ ಉನ್ನತ ವ್ಯಾಸಂಗ ಮಾಡಿ, ತತ್ವಶಾಸ್ತ್ರವನ್ನು ಅಧ್ಯಯನ ಮಾಡಿಕೊಂಡು ಮತ್ತು ಅಣುವಿಜ್ಞಾನದಲ್ಲಿ ಹಲವು ಪದವಿಗಳನ್ನು ಗಳಿಸಿದ್ದ ಸ್ವಾಮಿ ಜ್ಞಾನಾನಂದರಿಂದ ವೇದಾಂತ ಗ್ರಂಥಗಳನ್ನು ಅಭ್ಯಾಸ ಮಾಡುತ್ತಾ ಮುಂದೆ ಅವರಿಂದಲೇ ದೀಕ್ಷೆ ಪಡೆದು ಸ್ವಾಮಿ ಪ್ರಣವಾನಂದರಾದರು.

ಮುಂದೆ ಪ್ರಣವಾನಂದರು ಕೈಲಾಸ- ಮಾನಸ ಸರೋವರದ ಪ್ರದೇಶಗಳಲ್ಲಿ ಸುದೀರ್ಘ 25 ವರ್ಷಗಳ ಕಾಲ ಚಾತುರ್ಮಾಸ್ಯವನ್ನು ಕೈಗೊಳ್ಳುತ್ತಾರೆ! ಅವರ ತಪಸ್ಸಿನ ಸಾಧನೆಯ ಗರಡಿಯಲ್ಲಿ ಮೂಡಿ ಬಂದ ಮೂರು ಮಹತ್ವದ ಪ್ರಸ್ಥಾನತ್ರಯಿಗಳು ಯಾವುವೆಂದರೆ:

  1. ಕೈಲಾಸ ಮಾನಸ ಸರೋವರ ಗ್ರಂಥ
  2. ಭಗವದ್ಗೀತೆಗೆ ಭಾಷ್ಯ ಬರೆದ ಸಾರಸೌರಭವೆಂಬ ತೆಲುಗಿನಲ್ಲಿರುವ ಬೃಹದ್ಗೃಂಥ
  3. ಶ್ರೀಚಕ್ರ ಮಹಾಪ್ರಬಂಧ.

ಇವರು ತಮ್ಮ ಹುಟ್ಟೂರಾದ ಯನಗುಲಮಹಲಿನಲ್ಲಿ ಶ್ರೀಚಕ್ರ ಮಂದಿರವೊಂದನ್ನೂ ಸ್ಥಾಪಿಸಿದ್ದಾರೆ. 95 ವರ್ಷಗಳವರೆಗೆ ಜೀವಿಸಿದ್ದ ಸ್ವಾಮೀಜಿ ತಮ್ಮ ಸುದೀರ್ಘ ಅಧ್ಯಾತ್ಮ ಸಾಧನೆಯಲ್ಲಿ ಅನೇಕ ವೈಜ್ಞಾನಿಕ ಸಂಶೋಧನೆಗಳನ್ನು ಮಾಡಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಇದು ಯಾತ್ರಿಕರಿಗೆ ಮತ್ತು ಸಂಶೋಧಕ ವಿದ್ಯಾರ್ಥಿಗಳಿಗೆ ಬಹು ಮಹತ್ವದ ಬರಹವಾಗಿದೆ.

ಆ ಕಾಲದಲ್ಲಿ ಕೈಲಾಸ ಯಾತ್ರೆಗೆ ಯಾತ್ರಿಗಳೇ ಸಕಲ ಸಿದ್ಧತೆ ಮಾಡಿಕೊಳ್ಳಬೇಕಿತ್ತು. 1960ರಿಂದ ಟಿಬೆಟ್ಟು ಚೀನಾದ ವಶಕ್ಕೆ ಸೇರಿದ ಮೇಲೆ ಯಾತ್ರಿಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿತ್ತು. ಹೀಗಾಗಿ ಅಂತಹ ದುರ್ಗಮ ಪರಿಸ್ಥಿತಿಯಲ್ಲಿ 1928-1947ರವರೆಗೆ ಅಂದರೆ ಸರಿಸುಮಾರು ಕಾಲು ಶತಮಾನ ಮಳೆ, ಚಳಿ, ಬೇಸಿಗೆ – ಈ ಎಲ್ಲ ಕಾಲಗಳಲ್ಲೂ ಆ ಪ್ರದೇಶಗಳಿಗೆ ಭೇಟಿ ನೀಡಿ, ದರೋಡೆಕೋರರ ದಾಳಿ, ಬ್ರಿಟೀಷರ ದಬ್ಬಾಳಿಕೆ ಇತ್ಯಾದಿ ಅಪಾಯಗಳನ್ನು ಎದುರಿಸುತ್ತಾ, ಸಂಶೋಧನೆ ನಡೆಸಿದ್ದಾರೆ. ಇವರು ಭಾರತೀಯ ಸೈನಿಕರಿಗೆ ಹಲವು ರೀತಿಯಲ್ಲಿ ನೆರವಾಗುತ್ತಿದ್ದರು. ಹೀಗಾಗಿ ಚೀನೀಯರು ಇವರನ್ನು ಭಾರತದ ಸಿಐಡಿ ಎಂದು ಆರೋಪಿಸಿ ಹುಡುಕಾಟಕ್ಕೆ ಆರಂಭಿಸಿದಾಗ ಟಿಬೆಟ್ ಭಾಷೆಯನ್ನು ಸಂಪೂರ್ಣ ಕಲಿತು ಅಲ್ಲಿಯ ಗೊಂಪಾಗಳಲ್ಲೇ ನೆಲೆಸಿ, ತಲೆಮರೆಸಿಕೊಂಡಿದ್ದೂ ಇದೆಯಂತೆ! ಇಂತಹ ಹೋರಾಟಗಳ ಅನ್ವೇಷಣೆಯ ಫಲ ಈ ಪುಸ್ತಕವಾಗಿದೆ!

ಇದು ಕೇವಲ ಅವರ ಜೀವನ ಚರಿತ್ರೆ ಮಾತ್ರವಾಗಿರದೇ, ಟಿಬೆಟ್ಟಿನ ಸಾಂಸ್ಕೃತಿಕ, ಭೌಗೋಳಿಕ ವಿವರಗಳನ್ನು ಕಟ್ಟಿಕೊಡುವ, ಅವರ ವ್ಯವಸಾಯ, ವ್ಯಾಪಾರ ಇತ್ಯಾದಿಗಳ ಕುರಿತು ಸಮಗ್ರ ವಿವರಣೆ ನೀಡುವ, ಕೆಲವು ತಪ್ಪು ಕಲ್ಪನೆಗಳನ್ನು ನಿವಾರಿಸುವ ಅಮೂಲ್ಯ ಗ್ರಂಥವಾಗಿದೆ. ಲೇಖಕ ಚಂದ್ರಶೇಖರ್ ಅವರು “ಸ್ವಾಮೀಜಿಯವರಿಗೆ ಪ್ರತ್ಯಕ್ಷ ಪ್ರಮಾಣ ಮುಖ್ಯ. ಯಾರ ಹೇಳಿಕೆಯನ್ನೂ ಪರೀಕ್ಷೆ ಮಾಡದೇ ಒಪ್ಪುತ್ತಿರಲಿಲ್ಲ. ಇದು ವೈಜ್ಞಾನಿಕ ಸಂಶೋಧಕನ ನಿಲುವು” ಎಂದು ಸ್ಪಷ್ಟವಾಗಿ ಹೇಳುತ್ತಾರೆ.

ಒಂದೆಡೆ ಪ್ರಣವಾನಂದರು ಕೈಲಾಸ-ಮಾನಸ ಸರೋವರಗಳು ಅತ್ಯಂತ ಪವಿತ್ರ ತೀರ್ಥಕ್ಷೇತ್ರಗಳು ಎನ್ನುತ್ತಾ, “ಶೀತದಿಂದ ಮೂಗು ಕಟ್ಟಿದ ವ್ಯಕ್ತಿಗೆ ಮಲ್ಲಿಗೆ ಅಥವಾ ಸಂಪಿಗೆ ಹೂವಿನ ಪರಿಮಳವನ್ನು ಹೇಗೆ ಆಸ್ವಾದಿಸಲು ಸಾಧ್ಯವಿಲ್ಲವೋ ಹಾಗೆ ಶುದ್ಧ ಸಂಸ್ಕಾರವಿಲ್ಲದ ವ್ಯಕ್ತಿಯು ಈ ಕ್ಷೇತ್ರದಲ್ಲಿ ವ್ಯಾಪಿಸಿರುವ ಆಧ್ಯಾತ್ಮಿಕ ಸ್ಪಂದನೆಯನ್ನು ಗ್ರಹಿಸಲಾರ” ಎಂದು ಹೇಳಿದ್ದಾರೆ.

ಇದನ್ನೂ ಓದಿ | ಸವಿಸ್ತಾರ ಅಂಕಣ | ಜಾತ್ಯತೀತತೆಗೆ ತುಷ್ಟೀಕರಣದ ಕವಚ ತೊಡಿಸಿದ ಪಾಪದ ರೂವಾರಿಗಳೇ ʼಬುದ್ಧಿಜೀವಿʼಗಳು

ಸ್ವಾಮೀಜಿಯವರ ಸಂಶೋಧನೆಗಳ ಮೇಲೊಂದು ಕ್ಷ-ಕಿರಣ:

ಸಮಗ್ರ ಮಾಹಿತಿಗೆ, ಸಂಪೂರ್ಣ ವಿವರಣೆಗಳಿಗೆ ಈ ಪುಸ್ತಕವನ್ನೋದಿಯೇ ತಿಳಿಯಬೇಕು. ಆದರೂ ನನ್ನ ಗಮನ ಸೆಳೆದ ಕೆಲವೊಂದು ಅಪೂರ್ವ ಅಂಶಗಳ ಎಳೆಯನ್ನಷ್ಟೇ ಇಲ್ಲಿ ಕಲೆಹಾಕಲು ಯತ್ನಿಸಿದ್ದೇನೆ.

1.. ತಮ್ಮ ಸುದೀರ್ಘ ಪ್ರವಾಸಗಳ ಮೂಲಕ ಸ್ವಾಮೀಜಿಯವರು ಕೈಲಾಸ ಮಾನಸ ಸರೋವರಕ್ಕೆ ಒಟ್ಟೂ 12 ಮಾರ್ಗಗಳನ್ನು ಗುರುತಿಸಿದ್ದಾರೆ ಮತ್ತು ಅವುಗಳ ಸಮಗ್ರ ವಿವರಣೆಯ ಜೊತೆಗೆ ಸಾಧಕ, ಬಾಧಕಗಳನ್ನೂ ವಿವರಿಸಿದ್ದಾರೆ.

2. ಅಮರನಾಥ ಗುಹೆಗೆ 1929ರಲ್ಲಿ ಪ್ರವಾಸ ಮಾಡಿ, ಸುಮಾರು 20 ದಿನಗಳ ಕಾಲ ಆ ಗುಹೆಯಲ್ಲೇ ತಾವು ತಂಗಿದ್ದಲ್ಲದೇ, ಅತಿ ಸಮೀಪದಿಂದ ಹಿಮಲಿಂಗದ ಅಳತೆಯನ್ನು ಮಾಡಿದ್ದಲ್ಲದೇ ಯಾವ ಕಾಲದ, ಯಾಕಾಗಿ ಈ ಹಿಮಲಿಂಗ ತನ್ನ ಸ್ವರೂಪ ಬದಲಿಸುತ್ತಾ ಹೋಗುತ್ತದೆ ಎಂಬುದನ್ನು ವಿವರಿಸಿದ್ದಾರೆ.

3. ಅಮರನಾಥ ಗುಹೆಗೂ ಪಂಜಾಬಿನ ಗುಜ್ಜಾರ್ ಹಾಗೂ ಬಾಟ್ಲಾದ ಮುಸ್ಲಿಮರಿಗೂ ಇರುವ ಸಂಬಂಧ ಮತ್ತು ರಾಜತರಂಗಿಣಿಯಲ್ಲಿ ಉಲ್ಲೇಖವಾಗಿರುವ ‘ಅಮರೇಶ್ವರ’ ಎನ್ನುವ ಪದಕ್ಕೂ ಈಗಿನ ಅಮರನಾಥ ಗುಹೆಗೂ ಯಾವ ರೀತಿ ಸಂಬಂಧವನ್ನು ಹೊಂದಿಲ್ಲ ಎಂಬುದರ ವಿವರಣೆಯಿದೆ.

4. ಪಾಶ್ಚಾತ್ಯ ಗ್ರಂಥಕರ್ತ ಪಾಲ್ ಬ್ರಂಟನ್ ಮತ್ತು ಸ್ವಾಮಿ ಪ್ರಣವಾನಂದರ ನಡುವೆ ನಡೆದ ಬಹಳ ಗಂಭೀರ ಚರ್ಚೆಯ ಸಾರವಿದೆ. ಸ್ವಾಮೀಜಿಯವರು ಅವರೊಂದಿಗೆ ತಾವು ಮೊದಲ ಬಾರಿ ಕೈಲಾಸ ಯಾತ್ರೆಯನ್ನು ಕೈಗೊಂಡಾಗಿನ ಅನುಭವಗಳನ್ನು ಹಂಚಿಕೊಂಡಿರುವುದಲ್ಲದೇ, ತಮ್ಮ ಗುರು ಸ್ವಾಮಿ ಜ್ಞಾನಾನಂದರ ಸಮಗ್ರ ಚಿತ್ರಣವನ್ನೂ ಕೊಡುತ್ತಾರೆ.

5. ತಮ್ಮ ಮೂರನೆಯ ಪ್ರವಾಸದಲ್ಲಿ ಟಿಬೆಟ್ಟಿನ ಸಸ್ಯವೈಶಿಷ್ಟ್ಯದ ಕುರಿತು ಸಮಗ್ರ ಸಂಶೋಧನೆ ನಡೆಸಿ, “ಟಿಬೆಟ್ಟಿನಲ್ಲಿ ಅನ್ವೇಷಣೆ” ಎಂಬ ಗ್ರಂಥವನ್ನೂ ರಚಿಸುತ್ತಾರೆ. ಅಲ್ಲಿಯ ವಾಯುಗುಣ, ಸರೋವರಗಳ ಮೂಲ, ವಿಸ್ತಾರ ಇವೆಲ್ಲವುಗಳ ಸಮಗ್ರ ಮಾಹಿತಿಯನ್ನು ಈ ಪುಸ್ತಕದಲ್ಲಿ ನೀಡಲಾಗಿದೆ.

6. ಮಾನಸ ಸರೋವರ ಮತ್ತು ರಾಕ್ಷಸ ಸರೋವರ – ಈ ಎರಡೂ ಸರೋವರಗಳು ಆಯಾ ಕಾಲದಲ್ಲಿ ಯಾಕಾಗಿ ಬದಲಾವಣೆ ಹೊಂದುತ್ತವೆ ಮತ್ತು ಅದಕ್ಕಿರುವ ಮುಖ್ಯ ಕಾರಣಗಳೇನು, ರಾಜಹಂಸಗಳು ಅಲ್ಲಿರುತ್ತವಯೇ ಎಂಬಿತ್ಯಾದಿ ವಿವರಣೆಯಿದೆ.

ಇದನ್ನೂ ಓದಿ | ಬೆಳಕಿನ ಗರಿ ಅಂಕಣ | ಪರೋಮಿತಾಳ ಒಂದು ದಿನ

7. ಮೊತ್ತಮೊದಲ ಬಾರಿಗೆ ಸಮುದ್ರದ ಅವಶೇಷಗಳನ್ನು ಸರ್ಕಾರಕ್ಕೆ ಒದಗಿಸಿದವರು. (ಹಿಂದೆ ಹಿಮಾಲಯವಿದ್ದ ಜಾಗದಲ್ಲಿ ಮಹಾ ಸಮುದ್ರವಿತ್ತಂತೆ. ಕ್ರಮೇಣ ಹಿಮಾಲಯ ಪರ್ವತಗಳು ಮೇಲೇರಲು, ಅಲ್ಲಿದ್ದ ಜಲಚರ ಜೀವಿಗಳು ಪಳೆಯುಳಿಕೆಗಳಾಗಿ ಮಾರ್ಪಟ್ಟವು. ಈಗಲೂ ಇದರ ಮೇಲೆ ಹಲವು ಸಂಶೋಧನೆಗಳಾಗುತ್ತಿವೆ.) ಅಲ್ಲದೇ, ಅಲ್ಲಿಯ ನದಿಗಳ ಮೂಲದ ಸಂಶೋಧನೆಯ ವಿವರಣೆಯೂ ಇದೆ.

8. ಸ್ವಾಮೀಜಿಯವರು ಪಕ್ಷಿ ಶಾಸ್ತ್ರವನ್ನೂ ಅಧ್ಯಯನ ಮಾಡಿದವರು. ಹೀಗಾಗಿ ಅಲ್ಲಿಯ ಪಕ್ಷಿ ಸಂಕುಲನದ ಸಮಗ್ರ ವಿವರಣೆಯನ್ನು ಓದಬಹುದು.

9. ಶ್ರೀ ಚಕ್ರದ ಉಪಾಸನೆಯ ವಿವರಣೆ, ಭಗವದ್ಗೀತೆಗೆ ಅವರು ಭಾಷ್ಯ ಬರೆದುದರ ಸಾರ, ಅವರ ಸಾಹಿತ್ಯ ಸೇವೆ, ಟಿಬಿಟ್ಟಿನ ಅನೇಕ ಗೋಂಪಗಳನ್ನು(ಮಠ) ಅವರು ಪುನರುಜ್ಜೀವನಗೊಳಿಸಿದ್ದು – ಇತ್ಯಾದಿ ವಿವರಗಳು.

10. ಸುಮಾರು 12 ವರ್ಷಗಳ ಕಾಲ ಪ್ರಾಣಿಶಾಸ್ತ್ರದ ಅಧ್ಯಯನ ನಡೆಸಿ, ವಿಶೇಷವಾಗಿ ಹಿಮಾಲಯದಲ್ಲಿ 8000-12000 ಅಡಿಗಳ ಎತ್ತರ ಪ್ರದೇಶಗಳಲ್ಲಿರುವ ಕಸ್ತೂರಿ ಮೃಗಗಳ ಮೇಲೆ ಸಂಶೋಧನೆ ನಡೆಸಿ ಅನೇಕ ಉಪನ್ಯಾಸಗಳನ್ನು ನೀಡಿದ್ದರ ವಿವರಣೆಯೂ ಇದೆ.

ಇಲ್ಲಿ ನಾನು ಕಡಲಾಳದಿಂದ ಕೆಲವು ಮುತ್ತುಗಳನ್ನಷ್ಟೇ ಆಯ್ದು ಇಟ್ಟಿದ್ದೇನೆ. ಇಂತಹ ಅನೇಕ ಅಮೂಲ್ಯ ಮಾಹಿತಿಗಳಿಗೆ 202 ಪುಟಗಳ ಈ ಪುಸ್ತಕದೊಳಗೆ ಮುಳುಗುವುದು ಅತ್ಯಗತ್ಯ. ಒಂದೆಡೆ ಲೇಖಕ ಚಂದ್ರಶೇಖರ್ ಅವರು ಹೀಗೆ ಹೇಳುತ್ತಾರೆ: “ಒಂದು ನಿರ್ದಿಷ್ಟವಾದ ಸ್ಥಳದಲ್ಲಿ ಶ್ರೀಗಂಧದ ಧೂಪವನ್ನು ಹತ್ತಿಸಿದರೆ ಅದು ಉರಿದ ನಂತರವೂ ಅದರ ಸುಗಂಧವು ಸುತ್ತ ಮುತ್ತಲಿನ ಪ್ರದೇಶಕ್ಕೆ ಹರಡುವಂತೆ ಯಾತ್ರಾ ಸ್ಥಳಗಳು, ಮಹಾತ್ಮರು, ಋಷಿಮುನಿಗಳು, ಸಾಧುಸಂತರು ಮಾಡಿದ ತಪಸ್ಸಿನ ಪ್ರಭಾವ ಯಾತ್ರಿಕರ ಮೇಲೆ ಉಂಟಾಗಿ, ಅವರ ಜೀವನವನ್ನು ಉದ್ದೀಪನಗೊಳಿಸುತ್ತದೆ.”

ಇದನ್ನೂ ಓದಿ | ಧೀಮಹಿ ಅಂಕಣ | ಪ್ರಾಚೀನ ಭಾರತದ ಸಂಪತ್ತು ಲೂಟಿಯಾಗಿರಬಹುದು, ಜ್ಞಾನವನ್ನು ಕದಿಯಲಾಗಲಿಲ್ಲ!

Exit mobile version