Site icon Vistara News

ವಿಸ್ತಾರ ಅಂಕಣ: ಬ್ರಿಟಿಷ್ ಮಾನಸಿಕತೆಯ ಪಳೆಯುಳಿಕೆ, ಕಾಂಗ್ರೆಸ್

congress party

ವಿಸ್ತಾರ ಅಂಕಣ: ʼದೇಶವು ಬ್ರಿಟಿಷ್ ಅಧಿಪತ್ಯದಿಂದ ಸ್ವತಂತ್ರಗೊಂಡು 75 ವರ್ಷ ಕಳೆದಿದೆʼ. ಈ ಹೇಳಿಕೆಯನ್ನು ಕಳೆದ ವರ್ಷಪೂರ್ತಿ ಕೇಳಿದ್ದೇವೆ. ಆದರೆ ಇದು ಸಂಪೂರ್ಣ ಸತ್ಯವಲ್ಲ. ನಾವಿನ್ನೂ ಬ್ರಿಟಿಷ್ ಆಡಳಿತದಿಂದ ಮುಕ್ತರಾಗಿಲ್ಲ. ಹಾಗಾಗಿ ʼದೇಶವು ಬ್ರಿಟಿಷ್ ಅಧಿಪತ್ಯದಿಂದ ಸ್ವತಂತ್ರಗೊಳ್ಳಲು ಆರಂಭಿಸಿ 75 ವರ್ಷವಾಯಿತುʼ ಎಂದು ಈ ಹೇಳಿಕೆಯನ್ನು ಬದಲಾಯಿಸಬೇಕು. ಏಕೆಂದರೆ ಭೌತಿಕವಾಗಿ ಬ್ರಿಟಿಷ್ ಆಡಳಿತದಿಂದ ಮುಕ್ತರಾದರೂ ಮಾನಸಿಕವಾಗಿ ಮುಕ್ತವಾಗಲು ಇನ್ನೂ ಸಾಧ್ಯವಾಗಿಲ್ಲ. ಬ್ರಿಟಿಷ್ ಮಾನಸಿಕತೆಯು ಭಾರತದಲ್ಲಿ ಇನ್ನೂ ಉಳಿದುಕೊಂಡಿದ್ದು, ಅದರ ಅಂತಿಮ ಕೊಂಡಿಯೇ ಕಾಂಗ್ರೆಸ್ ಹಾಗೂ ಆ ಪಕ್ಷ ನಡೆಸುವ ಸರ್ಕಾರಗಳು.

ದೇಶದ ಮಾನಸಿಕತೆಯಿಂದ ಬ್ರಿಟಿಷ್ ವಿಚಾರಗಳನ್ನು ಕಿತ್ತೆಸೆಯಬೇಕೆಂದು ಕೇಂದ್ರದ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಸತತ ಪ್ರಯತ್ನಿಸುತ್ತಿದೆ. ನೇತಾಜಿ ಸುಭಾಷ್ ಚಂದ್ರ ಬೋಸರ ಸಾಹಸ, ಧೈರ್ಯವನ್ನು ಕೊಂಡಾಡಿಬಿಟ್ಟರೆ ಬ್ರಿಟಿಷರ ಕ್ರೌರ್ಯದ ಅರಿವಾಗುತ್ತದೆ. ಹಾಗಾಗಿ ನೇತಾಜಿ ಅವರನ್ನು ಬ್ರಿಟಿಷರು ಕತ್ತಲಲ್ಲೇ ಇಟ್ಟಿದ್ದರು. ಇದೀಗ ನರೇಂದ್ರ ಮೋದಿಯವರು ನೇತಾಜಿ ಅವರ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ನಾಯಕನಿಗೆ ಗೌರವ ಸಲ್ಲಿಸುವ ಕಾರ್ಯ ಮಾಡಿದ್ದಾರೆ. ಭಾರತೀಯ ನೌಕಾದಳದದ ಧ್ವಜದಲ್ಲಿ ಇಲ್ಲಿವರೆಗೆ ಇದ್ದ ಬ್ರಿಟಿಷ್ ಆಡಳಿತದ ಪಳೆಯುಳಿಕೆಯನ್ನು ಕಿತ್ತೊಗೆದು ಛತ್ರಪತಿ ಶಿವಾಜಿ ಮಹಾರಾಜರ ಮುದ್ರೆಯನ್ನೊತ್ತಿದ್ದಾರೆ. ನವದೆಹಲಿಯಲ್ಲಿ ನಿರ್ಮಾಣವಾದ ಬೃಹತ್ ಸಭಾಂಗಣಕ್ಕೆ ಭಾರತ ಮಂಟಪಂ ಎಂದು ನಾಮಕರಣ ಮಾಡುವ ಜತೆಗೆ ಪ್ರವೇಶದಲ್ಲಿ ಬೃಹತ್ ಗಾತ್ರದ ನಟರಾಜ ವಿಗ್ರಹ ಸ್ಥಾಪಿಸಿದ್ದಾರೆ. ನೂತನವಾಗಿ ನಿರ್ಮಾಣವಾದ ಸಂಸತ್ ಭವನದ ಒಳಹೊರಗೆ ಭಾರತೀಯ ಸಂಸ್ಕೃತಿ, ಕಲೆಯನ್ನು ಪ್ರತಿಧ್ವನಿಸುವ ಕಲಾಕೃತಿಗಳನ್ನು ನಿರ್ಮಿಸಲಾಗಿದೆ. ಸಂಸತ್ ಭವನದ ಉದ್ಘಾಟನೆಗೆ ಪವಿತ್ರ ಸೆಂಗೋಲ್ ಅನ್ನು ಹಿಡಿದು ಮುನ್ನಡೆದಿದ್ದಾರೆ. . . ʼವಸಾಹತು ಮಾನಸಿಕತೆಯಿಂದ ಹೊರಬರುವುದುʼ ನಮ್ಮ ಕರ್ತವ್ಯವಾಗಿದೆ ಎಂದು ಸ್ವತಃ ಪ್ರಧಾನಿಯವರು ಕರೆ ನೀಡಿದ್ದಾರೆ. ಆದರೆ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ ಮಾತ್ರ ಬ್ರಿಟಿಷ್ ಮಾನಸಿಕತೆಯೆಡೆಗೇ ಹೊರಳುತ್ತಿದೆ.

ಇತ್ತೀಚೆಗೆ ಕರ್ನಾಟಕ ಸರ್ಕಾರದ ನಡೆಗಳನ್ನೇ ನೋಡೋಣ. ಎಲ್ಲವೂ ಪ್ರತ್ಯೇಕ ಪ್ರಕರಣಗಳೆಂದು ಕಣ್ಣಿಗೆ ಕಾಣಿಸಿದರೂ ಒಂದೇ ಸೂತ್ರದಲ್ಲಿ ಬಂಧಿತವಾಗಿವೆ. ಮಂಡ್ಯದ ಕೆರೆಗೋಡಿಯಲ್ಲಿ ಹನುಮಧ್ವಜವನ್ನು ಹಾರಿಸಲು ಸರ್ಕಾರ ಅಡ್ಡಿಪಡಿಸಿದೆ. ಇಡೀ ದೇಶವೇ ಶ್ರೀರಾಮಮಂದಿರ ನಿರ್ಮಾಣ ಹಾಗೂ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ ಸಂಭ್ರಮದಲ್ಲಿದ್ದರೆ ಕೆರೆಗೋಡಿನ ಯುವಕರು ಮಾತ್ರ ಹೇಗೆ ಇದರಿಂದ ಹೊರತಾಗಿರುತ್ತಾರೆ? ಅವರೂ ಹನುಮಧ್ವಜವನ್ನು, ಸ್ಥಳೀಯ ಆಡಳಿತದ ಅನುಮತಿ ಪಡೆದೇ ಹಾರಿಸಲು ತೀರ್ಮಾನಿಸಿದರು. ಆದರೆ ಕರ್ನಾಟಕ ಸರ್ಕಾರಕ್ಕೆ ಇದನ್ನು ಸಹಿಸಲು ಆಗಲೇ ಇಲ್ಲ. ಸರ್ಕಾರಿ ಮೈದಾನಗಳಲ್ಲಿ ಶಾಶ್ವತವಾದ ಗೋಡೆಗಳು ನಿರ್ಮಾಣ ಆಗಬಹುದು, ಸಾರ್ವಜನಿಕ ವೃತ್ತಗಳಲ್ಲಿ, ಕೋಲಾರದ ಕ್ಲಾಕ್ ಟವರ್‌ನಲ್ಲಿ ಹಸಿರು ಧ್ವಜ ಹಾರಬಹುದು, ಆದರೆ ಅನುಮತಿ ಪಡೆದ ಸ್ಥಂಭದಲ್ಲಿ ಹನುಮಧ್ವಜ ಹಾರುವುದು ಮಾತ್ರ ಜಾತ್ಯತೀತತೆಗೆ ವಿರೋಧ ಎನ್ನುವುದು ಕಾಂಗ್ರೆಸ್ ಸಿದ್ಧಾಂತ.

ಎರಡನೇ ಘಟನೆಯಲ್ಲಿ, ಸಮಾಜ ಕಲ್ಯಾಣ ಇಲಾಖೆ ಅಧೀನದ ವಸತಿ ಶಾಲೆಗಳಲ್ಲಿ ಕೇವಲ ರಾಷ್ಟ್ರೀಯ ಹಬ್ಬಗಳನ್ನಷ್ಟೇ ಆಚರಿಸಬೇಕು ಎಂಬ ಸುತ್ತೋಲೆ ಹೊರಡಿಸಲಾಯಿತು. ಕೇವಲ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಬೇಕು, ಯಾವುದೇ ಧಾರ್ಮಿಕ ಹಬ್ಬಗಳನ್ನು ಆಚರಿಸುವಂತಿಲ್ಲ ಎಂದೂ ಆ ಸುತ್ತೋಲೆ ಹೇಳಿತು. ಮೇಲ್ನೋಟಕ್ಕೆ ಇದು ಸರಿ ಎನ್ನಿಸುತ್ತದೆ. ಮಕ್ಕಳಿಗೆ ರಾಷ್ಟ್ರೀಯ ಹಬ್ಬಗಳನ್ನು ಶಾಲೆಯಲ್ಲಿ ಕಲಿಸಿದರೆ ಸಾಕಲ್ಲವೇ? ಅವರವರ ಮನೆಯಲ್ಲಿ ಹಬ್ಬ ಹರಿದಿನಗಳನ್ನು ಮಾಡಿಕೊಳ್ಳಬಹುದಲ್ಲವೇ? ಎಂದು ನಮ್ಮ ವಸಾಹತುಶಾಹಿ ಬುದ್ಧಿಗೆ ಆಲೋಚನೆ ಬರುತ್ತದೆ. ಆದರೆ, ಇಲ್ಲಿ ಪ್ರಮುಖವಾಗಿ ಮೂರು ಪ್ರಶ್ನೆಗಳು ಎದುರಾಗುತ್ತವೆ.

1) ವಸತಿ ಶಾಲೆಯಲ್ಲಿರುವ ಮಕ್ಕಳು ಹಬ್ಬ ಹರಿದಿನಕ್ಕೆಲ್ಲ ಮನೆಗೆ ಹೋಗುವುದಿಲ್ಲ. ಅವರಿಗೆ ಹಾಸ್ಟೆಲ್, ಶಾಲೆಯಲ್ಲೇ ಎಲ್ಲ ಸಂಸ್ಕಾರ ದೊರಕಬೇಕು. ಹಾಗಾದರೆ ವಸತಿ ಶಾಲೆಗೆ ಕಳಿಸುವುದು ಎಂದರೆ ಮಕ್ಕಳನ್ನು ತಮ್ಮ ಧರ್ಮದಿಂದ ಬೇರೆ ಮಾಡುವುದು ಎಂದು ಅರ್ಥವೇ?

2) ಈ ಸುತ್ತೋಲೆ ಹೊರಡಿಸಿದ ಸಂಘದ ಕಾರ್ಯವ್ಯಾಪ್ತಿ ಕೇವಲ ಎಸ್ಸಿಎಸ್ಟಿ, ಹಿಂದುಗಳಿದ ವರ್ಗಗಳ ಹಿಂದೂ ಮಕ್ಕಳ ಶಾಲೆಗಳಷ್ಟೆ. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧೀನದಲ್ಲಿ ಇರುವ ವಸತಿ ಶಾಲೆಗಳು ಈ ಸಂಘದ ಅಡಿಯಲ್ಲಿಲ್ಲ. ಹಾಗಾದರೆ ಧಾರ್ಮಿಕ ಉತ್ಸವಗಳನ್ನು ಕೇವಲ ಹಿಂದೂ ಮಕ್ಕಳಿಗೆ ಮಾತ್ರ ನಿಷೇಧಿಸಲಾಗುತ್ತದೆ ಎಂದರ್ಥ. ಸರ್ವೇ ಜನಾಃ ಸುಖಿನೋ ಭವಂತುಃ ಎನ್ನುವ ಹಿಂದೂ ಧರ್ಮದ ಆಚರಣೆಗಳನ್ನು ನಿಷೇಧಿಸಬೇಕು, ʼಒಬ್ಬನೇ ದೇವರು, ಅವನನ್ನೇ ನಂಬಬೇಕು, ಬೇರೆ ದಾರಿ ಇಲ್ಲʼ ಎನ್ನುವ ರಿಲೀಜನ್ಗಳ ಮಕ್ಕಳಿಗೆ ಸ್ವಾತಂತ್ರ್ಯ. ಇದೇ ಕಾಂಗ್ರೆಸ್‌ನ ಜಾತ್ಯತೀತತೆಯೇ?

3) ರಾಷ್ಟ್ರೀಯ ಹಬ್ಬಗಳು ಹಾಗೂ ಧಾರ್ಮಿಕ ಹಬ್ಬಗಳು ಎಂದಾಗ ಭಾರತದ ಮಟ್ಟಿಗೆ ಅವುಗಳಲ್ಲಿ ವ್ಯತ್ಯಾಸವೇ ಇಲ್ಲ. ಹಿಂದುತ್ವವೇ ಇಲ್ಲಿನ ರಾಷ್ಟ್ರೀಯತೆ. ಹಿಂದುತ್ವವು ರಾಷ್ಟ್ರೀಯತೆಗೆ ಪೂರಕವೇ ಹೊರತು ಮಾರಕವಲ್ಲ. ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದು ಗಣೇಶ ಚತುರ್ಥಿ. ಹಾಗಾದರೆ ಗಣೇಶ ಚತುರ್ಥಿ ಧಾರ್ಮಿಕ ಉತ್ಸವವೋ, ರಾಷ್ಟ್ರೀಯ ಉತ್ಸವವೋ? ರಾಷ್ಟ್ರೀಯತೆ ಹಾಗೂ ಧರ್ಮವನ್ನು ಬೇರೆ ಮಾಡುವ ಕಾಂಗ್ರೆಸ್ನ ಹುನ್ನಾರವೇ ಹಾಸ್ಟೆಲ್ಗಳ ಸುತ್ತೋಲೆಯ ಕಿತಾಪತಿ.

ಸಾರ್ವಜನಿಕರಿಂದಷ್ಟೆ ಅಲ್ಲದೆ, ಸ್ವತಃ ವಸತಿ ಶಾಲೆಗಳ ಶಿಕ್ಷಕರಿಂದಲೂ ಕಾಂಗ್ರೆಸ್ ನಿರ್ಧಾರಕ್ಕೆ ವಿರೋಧ ವ್ಯಕ್ತವಾಯಿತು. ಅಂತಿಮವಾಗಿ ಸುತ್ತೋಲೆಯನ್ನು ಹಿಂಪಡೆಯಲಾಯಿತು.

ಮೂರನೆಯದಾಗಿ, ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ಗಳ ಪ್ರವೇಶದಲ್ಲಿ ಅಳವಡಿಸಲಾಗಿದ್ದ ʼಜ್ಞಾನದೇಗುಲವಿದು ಕೈ ಮುಗಿದು ಒಳಗೆ ಬನ್ನಿʼ ಎಂಬುದನ್ನು ತಿದ್ದಿ, ʼಜ್ಞಾನದೇಗುಲವಿದು ಧೈರ್ಯವಾಗಿ ಪ್ರಶ್ನಿಸಿʼ ಎಂದು ಬದಲಾಯಿಸುವ ಆದೇಶವನ್ನು ಐಎಎಸ್ ಅಧಿಕಾರಿಯ ಮೂಲಕ ಮೌಖಿಕವಾಗಿ ಕೊಡಿಸಲಾಯಿತು. ರಾಷ್ಟ್ರಕವಿ ಕುವೆಂಪು ಅವರ ಗೀತೆ ʼಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ. . .ʼಯಿಂದ ಪ್ರೇರಣೆ ಪಡೆದ ಈ ಸಾಲುಗಳು ಅನೇಕ ವರ್ಷಗಳಿಂದ ನಾಡಿನ ಬಹುತೇಕ ಶಾಲಾ ಕಾಲೇಜುಗಳಲ್ಲಿ ರಾರಾಜಿಸುತ್ತಿದೆ. ಪ್ರಶ್ನೆ ಮಾಡುವುದನ್ನು ಹೇಳಿಕೊಡುವುದೇ ಹಿಂದೂ ಧರ್ಮ. ಸನಾತನ ಧರ್ಮದ ಉಪನಿಷತ್ತುಗಳು ತುಂಬಿರುವುದೇ ಪ್ರಶ್ನೋತ್ತರಗಳಿಂದ. ಆದರೆ ಧೈರ್ಯವಾಗಿ ಪ್ರಶ್ನಿಸುವುದಲ್ಲ, ಜ್ಞಾನವನ್ನು ಅರಸುವ ವಿನಮ್ರತೆಯಿಂದ ಪ್ರಶ್ನಿಸುವುದು. ಇಲ್ಲಿ ಅಹಂಕಾರಕ್ಕೆ ಜಾಗವಿಲ್ಲ. ವಿದ್ಯಾ ದದಾತಿ ವಿನಯಂ, ಅಂದರೆ ವಿದ್ಯೆಯನ್ನು ಗಳಿಸಿದಷ್ಟೂ ವಿನಯವೂ ಮೈಗೂಡಬೇಕು. ಇಲ್ಲದಿದ್ದರೆ ಆ ವಿದ್ಯೆಗೆ ಬೆಲೆಯೇ ಇಲ್ಲ. ಭಾರತೀಯರ ಈ ಮೂಲ ಮನೋಭಾವವನ್ನೇ ಬದಲಾಯಿಸುವ ಕಾಂಗ್ರೆಸ್ನ ಮತ್ತೊಂದು ಕಿತಾಪತಿಗೂ ಸಾರ್ವಜಿಕರಿಂದ ವಿರೋಧ ವ್ಯಕ್ತವಾಯಿತು. ಅದನ್ನೂ ಹಿಂಪಡೆಯಲಾಯಿತು.

ಇದನ್ನೂ ಓದಿ: ವಿಸ್ತಾರ ಅಂಕಣ: ಮಥುರಾದಲ್ಲೂ ಗತವೈಭವ ಮರುಕಳಿಸುವ ದಿನಗಳು ದೂರವಿಲ್ಲ

ನಾಲ್ಕನೇ ಪ್ರಕರಣ ಎಂದರೆ ನಾಡಗೀತೆಗೆ ಕೊಕ್ ಕೊಟ್ಟಿದ್ದು. ಸರ್ಕಾರದ ರೀತಿ, ನೀತಿ, ನಿಬಂಧನೆಗಳನ್ನು ಖಾಸಗಿ ಶಾಲೆಗಳೂ ಪಾಲಿಸಲೇಬೇಕು. ಆದರೆ ನಾಡಗೀತೆ ಕುರಿತ ಪ್ರಕರಣವೊಂದರ ವಿಚಾರಣೆ ವೇಳೆ, ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ ಎಂಬ ಎಡಬಿಡಂಗಿ ಹೇಳಿಕೆಯನ್ನು ಸರ್ಕಾರ ತಿಳಿಸಿತು. ಹಾಗಾದರೆ ಖಾಸಗಿ ಶಾಲೆ ಮಕ್ಕಳಿಗೆ ದೇಶಭಕ್ತಿ, ನಾಡಪ್ರೀತಿ ಬೇಕಿಲ್ಲವೇ? ಎಂಬ ಆಲೋಚನೆಯೂ ಇಲ್ಲದೆ ಸರ್ಕಾರ ವರ್ತಿಸಿತು. ಕೊನೆಗೆ ಎಂದಿನಂತೆ ಈ ಸುತ್ತೋಲೆಯನ್ನೂ ಹಿಂಪಡೆಯಿತು.

ಒಂದೆಡೆ ಸರ್ಕಾರಗಳು ತಮ್ಮ ಮನಸೋಯಿಚ್ಛೆ ವರ್ತಿಸುವುದು ಆಗಾಗ್ಗೆ ನಡೆದೇ ಇರುತ್ತದೆ. ರಾಜಕಾರಣಿಗಳು ಜನರಿಂದ ಆಯ್ಕೆ ಆಗಿ ಬಂದಿರುತ್ತಾರೆ, ಅವರಿಗೆ ತಮ್ಮದೇ ಸಿದ್ಧಾಂತಗಳಿರುತ್ತವೆ. ಅವರು ಏನು ಬೇಕಾದರೂ ಹೇಳಬಹುದು. ಆದರೆ ಭಾರತದ ಅಖಂಡತೆ, ಅಸ್ಮಿತೆ, ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳುವುದು ಅಖಿಲ ಭಾರತ ಅಧಿಕಾರಿಗಳ (ಐಎಎಸ್) ಹೊಣೆ. ಕೇಂದ್ರೀಕೃತ ವ್ಯವಸ್ಥೆಯಲ್ಲಿ ನೇಮಕ ಮಾಡಿ, ಏಕರೂಪದ ತರಬೇತಿ ನೀಡಿ ದೇಶಾದ್ಯಂತ ಇವರನ್ನು ನಿಯೋಜನೆ ಮಾಡುವುದೇ ಈ ಕಾರಣಕ್ಕೆ. ಆದರೆ ಸರ್ಕಾರಗಳು ಬದಲಾದಂತೆ ಕೆಲವು ಅಧಿಕಾರಿಗಳು ಊಸರವಳ್ಳಿಯಂತೆ ಬಣ್ಣ ಬದಲಾಯಿಸುವುದನ್ನು ಕಾಣುತ್ತೇವೆ. ಸಮಾಜ ಕಲ್ಯಾಣ ಇಲಾಖೆಯ ಸುತ್ತೋಲೆ ಪ್ರಕರಣದಲ್ಲಿ ನೇರವಾಗಿ ಐಎಎಸ್ ಅಧಿಕಾರಿಯೊಬ್ಬರು ಭಾಗಿಯಾಗಿರುವುದನ್ನು ರಾಜ್ಯವೇ ನೋಡಿದೆ. ಇದು ತಮ್ಮ ಹುದ್ದೆಗೆ ಮಾಡುತ್ತಿರುವ ಅವಮಾನ ಎನ್ನುವುದು ಆ ಅಧಿಕಾರಿಗೆ ತಿಳಿದಿರಬೇಕಿತ್ತು. ಮತ್ತು, ಸರ್ಕಾರಗಳು ಬದಲಾಗುತ್ತವೆ ಎಂಬ ಅರಿವೂ ಅವರಿಗೆ ಇರಬೇಕಿತ್ತು. ಕಾಂಗ್ರೆಸ್‌ನಿಂದ ಹೆಚ್ಚಿನ ನಿರೀಕ್ಷೆಗಳಿಲ್ಲ. ಆ ಪಕ್ಷ ಎಂದಿಗೂ ದೇಶವನ್ನು ಒಡೆಯುವ ಒಂದಲ್ಲ ಒಂದು ಪ್ರಯತ್ನ ಮಾಡುತ್ತಲೇ ಇರುತ್ತದೆ. ಅದು ಬ್ರಿಟಿಷ್ ಮಾನಸಿಕತೆಯ ಪಳೆಯುಳಿಕೆ. ಆದರೆ ಐಎಎಸ್ ಅಧಿಕಾರಿಗಳಾದರೂ ತಮ್ಮ ಬುದ್ಧಿಯನ್ನು ಸ್ಥಿಮಿತದಲ್ಲಿರಿಸಿಕೊಂಡು, ನಾಡಿನ ಹಿತಾಸಕ್ತಿಗೆ ಅನುಗುಣವಾಗಿ ನಡೆದುಕೊಳ್ಳಬೇಕಿದೆ.

ಇದನ್ನೂ ಓದಿ: ವಿಸ್ತಾರ ಅಂಕಣ: ಐತಿಹಾಸಿಕ ನಿರ್ಧಾರ ಕೈಗೊಳ್ಳುವ ಅವಕಾಶ ಮುಸ್ಲಿಂ ಸಮುದಾಯದ ಎದುರಿದೆ

Exit mobile version