Site icon Vistara News

ಧೀಮಹಿ ಅಂಕಣ: ಈ ನೆಲದ ಮೊದಲ ವೈದಿಕ ರಾಷ್ಟ್ರಗೀತೆ ಇದು! ಅಂದಿನ ಆಡಳಿತ ಹೀಗಿತ್ತು

dhimahi

ನಮ್ಮ ರಾಜಕೀಯ ವ್ಯವಸ್ಥೆ ಬಂದದ್ದು ಅಥವಾ ಜನಪದ, ಮಹಾಜನಪದಗಳು ಬಂದದ್ದು ಬ್ರಾಹ್ಮಣಗಳ ಕಾಲದಲ್ಲಿ ಎನ್ನುವ ಅನಿಸಿಕೆ ನಮ್ಮ ಮಹಾನ್ ಮೇಧಾವಿ ವಲಯದಲ್ಲಿ ಕೇಳಿ ಬರುತ್ತದೆ. ಅವರಲ್ಲಿ ರಾಜಕೀಯ ವ್ಯವಸ್ಥೆಗಳೇ ಇತ್ತೀಚಿನದ್ದು ಎನ್ನುವ ಅಭಿಪ್ರಾಯ ಇದೆ. ಆದರೆ ಜನಪದ ಮತ್ತು ಮಹಾಜನಪದದ ವಿಷಯ ಸ್ಪಷ್ಟವಾಗಿ ಅಥರ್ವವೇದದಲ್ಲಿ ಸಿಗುತ್ತದೆ. ಆದರೆ ರಾಜ್ಯಾಭಿಷೇಕ ಪಟ್ಟಾಭಿಷೇಕದಂತಹ ಸಮಾರಂಭಗಳು ಋಗ್ವೇದದಲ್ಲಿಯೇ ಸಿಗುತ್ತದೆ. ಆಂಗಿರಸನ ಮಗ ಧ್ರುವ ಎನ್ನುವವನೊಬ್ಬನಿದ್ದ. ಈತ ಸೂಕ್ತ ದ್ರಷ್ಟಾರನಾಗಿದ್ದ. ಋಗ್ವೇದದ ಹತ್ತನೇ ಮಂಡಲದ ೧೭೩ನೇ ಸೂಕ್ತದಲ್ಲಿ ರಾಜನ ಪಟ್ಟಾಭಿಷೇಕದ ಕುರಿತಾಗಿಯೇ ಹೇಳುತ್ತಾನೆ.

ಆ ತ್ವಾಹಾರ್ಷಮಂತರೇಧಿ ಧ್ರುವಸ್ತಿಷ್ಠಾ ವಿಚಾಚಲಿಃ |
ವಿಶಸ್ತಾರ್ವ ಸರ್ವಾ ವಾಂಛಂತು ಮಾ ತ್ವಾದ್ರಾಷ್ಟ್ರಮಧಿಭ್ರಶತ್ ||

ಎಲೈ ರಾಜನೇ ನಿನ್ನನ್ನು ಅಧಿಪತಿಯಾಗಿ ಅಭಿಷಿಕ್ತನನ್ನಾಗಿ ಮಾಡಿ ಈ ರಾಷ್ಟ್ರಕ್ಕೆ ಕರೆತಂದಿದ್ದೇನೆ, ನಮ್ಮ ನಮ್ಮ ನಡುವೆ ನೀನಿದ್ದು, ನಮಗೆಲ್ಲರಿಗೂ ಸ್ವಾಮಿಯಾಗಿರು. ಸ್ಥಿರ ಚಿತ್ತನಾಗಿಯೂ, ಶತ್ರುಗಳಿಂದ ಹಿಂಸೆಗೊಳಗಾಗದೇ ಸ್ಥಾನ ಭ್ರಷ್ಟನಾಗದೇ ಇದೇ ನೆಲದಲ್ಲಿ ಸ್ಥಿರವಾಗಿದ್ದು ನಮ್ಮನ್ನು ಸಲಹು ಎಂದು ಸ್ತುತಿಸುತ್ತಾನೆ. ಎಲ್ಲಾ ಪ್ರಜೆಗಳ ವಿಶ್ವಾಸವನ್ನು ಸಂಪಾದಿಸಿ ಅವರಿಂದ ಗೌರವಾದರಗಳನ್ನು ಪಡೆದು, ಸದಾಕಾಲ ನಮ್ಮನ್ನು ಆಳುವಂತಹವನಾಗಬೇಕು. ನಿನ್ನಿಂದ ಈ ರಾಜ್ಯ ಕೈಬಿಟ್ಟು ಹೋಗದಿರಲಿ ಎನ್ನುವುದಾಗಿ ಪುರೋಹಿತ ರಾಜನನ್ನು ಆಶೀರ್ವದಿಸುವ ರೂಪದ ಸೂಕ್ತ ಇದು. ಇಲ್ಲಿ ಪುರೋಹಿತ ಪ್ರಜೆಗಳ ಪ್ರತಿನಿಧಿಯಾಗಿ ರಾಜನೊಬ್ಬನನ್ನು ಪ್ರಜೆಗಳು ಹೇಗೆ ಅಪೇಕ್ಷಿಸುತ್ತಾರೆ ಎಂದು ಹೇಳುತ್ತಾನೆ.

ಇಂದ್ರ ಇವೇಹ ದ್ರುವಸ್ತಿಷ್ಟೇಹ ರಾಷ್ಟ್ರಮು ಧಾರಯ ಎನ್ನುವ ಮುಂದಿನ ಋಕ್ಕಿನಲ್ಲಿ ಇಂದ್ರನು ಸ್ವರ್ಗದಲ್ಲಿ ಹೇಗೆ ರಾಜ್ಯಭಾರ ಮಾಡುತ್ತಾನೋ ಅದೇ ರೀತಿ ಸ್ಥಿರವಾಗಿ ಈ ಲೋಕವನ್ನು ಆಳು ಎನ್ನುವುದಾಗಿ ಹೇಳುತ್ತಾನೆ.

ಧ್ರುವಾ ದ್ಯೌಧ್ರುವಾ ಪೃಥಿವೀ ಧ್ರುವಾಸಃ ಪರ್ವತಾ ಇಮೇ |
ಧ್ರುವಂ ವಿಶ್ವಮಿದಂ ಜಗದ್ಧ್ರುವೋ ರಾಜಾ ವಿಶಾಮಯಂ ||

ಈ ದೇವಲೋಕ ಮತ್ತು ಭೂಮಿ, ಈ ಪರ್ವತಗಳು, ಈ ಸಕಲ ಜಗತ್ತೂ ಸ್ಥಿರವಾಗಿ ಇರುವುವು. ಅದರಂತೆ ಪ್ರಜಾಪಾಲಕನಾದ ನೀನೂ ಸಹ ಸ್ಥಿರನಾಗಿ ಧ್ರುವನಾಗಿರು. ಚಾಂಚಲ್ಯ ರಹಿತನಾಗಿ ಶಾಶ್ವತವಾಗಿ ನೆಲೆಸು ಎನ್ನುವ ಅಭಿಪ್ರಾಯ ಸೂಸುತ್ತಾನೆ.

ಧ್ರುವಂ ತೇ ರಾಜಾ ವರುಣೋ ಧ್ರುವಂ ದೇವೋ ಬೃಹಸ್ಪತಿಃ |
ಧ್ರುವಂತ ಇಂದ್ರಶ್ಚಾಗ್ನಿಶ್ಚ ರಾಷ್ಟ್ರಂಧಾರಯತಾಂ ಧ್ರುವಂ ||

ಮಹಾರಾಜ, ನಿನ್ನ ರಾಜ್ಯವನ್ನು ಅತ್ಯಂತ ಪ್ರಕಾಶಮಾನನಾದ ವರುಣದೇವನು, ದಾನವೇ ಮೊದಲಾದ ಸದ್ಗುಣಯುಕ್ತನಾದ ಬೃಹಸ್ಪತಿಯೂ, ಇಂದ್ರ ಮತ್ತು ಅಗ್ನಿಗಳು ಸ್ಥಿರವಾಗಿ ಕಾಪಾಡಿ ಸ್ಥಿರವಾಗಿರುವಂತೆ ನೋಡಿಕೊಳ್ಳಲಿ ಮತ್ತು ಪ್ರಜಾಜನರನ್ನು ಕಾಪಾಡಲಿ ಎಂದು ಆಶಿಸುತ್ತಾನೆ. ಮುಂದಿನ ಮಂತ್ರದಲ್ಲಿ, ಪ್ರಜೆಗಳು ನಿನ್ನಲ್ಲಿ ರಾಜಭಕ್ತಿಯನ್ನಿಡುವಂತೆ ಮತ್ತು ಅವರೇ ನಿನಗೆ ಕರಾದಾಯಗಳನ್ನು ಸ್ವಮನಸ್ಸಿನಿಂದ ಕೊಡುವಂತೆ ಇಂದ್ರನು ಅನುಗ್ರಹಿಸಲಿ ಎನ್ನುತ್ತಾನೆ. ಅಂದರೆ ಅಲ್ಲಿಗೆ ಆ ಕಾಲಕ್ಕಾಗಲೇ ತೆರಿಗೆಯ ರೂಪ ಕಾಣಿಸಿಕೊಂಡಾಗಿದೆ. ಅದು ವ್ಯಾವಹಾರಿಕವಾಗಿರಲಿ ಅಥವಾ ಸೇವಾರೂಪವಾಗಿರಲಿ ಯಾವುದೋ ಒಂದು ಪದ್ಧತಿ ಇತ್ತು.

ಅಥೋ ತ ಇಂದ್ರಃ ಕೇವಲೀರ್ವಿಶೋ ಬಲಿಹೃತಸ್ಕರತ್ ಎನ್ನುವಲ್ಲಿ, ರಾಜ ನಿನ್ನ ಆಡಳಿತ ಜನರ ಪೀಡೆಯನ್ನು ನಿವಾರಿಸಿ ಅವರಲ್ಲಿ ಹೇರಳವಾದ ಸಂಪತ್ತು ಕೂಡಿ, ಅವರಿಗೆ ಯಾವುದೇ ತೊಂದರೆಯಾಗದಂತೆ ಅವರೇ ರಾಜಾದಾಯ, ತೆರಿಗೆಗಳನ್ನು ಕೊಡುವಂತೆ ರಾಜನನ್ನು ಮತ್ತು ಪ್ರಜೆಗಳನ್ನು ಇಂದ್ರನು ಪ್ರೇರೇಪಿಸಲಿ ಎನ್ನುವುದಾಗಿ ಹೇಳುವಲ್ಲಿ ತೆರಿಗೆಯ ಪದ್ಧತಿ ಆ ಸಮಯಕ್ಕೆ ಹೇಗೆ ಇತ್ತು ಎನ್ನುವುದು ತಿಳಿಯುತ್ತದೆ. ಅಂದರೆ ತೆರಿಗೆ ಎನ್ನುವುದು ಹೇರಿಕೆಯಾಗಿರದೇ ಸ್ವಯಂಪ್ರೇರಣೆಯಿಂದ ಪ್ರಜೆಗಳು ರಾಜನಿಗೆ ಸಲ್ಲಿಸಬೇಕಿತ್ತು.

ಇದನ್ನೂ ಓದಿ: ಶಬ್ದಸ್ವಪ್ನ ಅಂಕಣ: ಸ್ಪರ್ಶದಲ್ಲಿ ಸರ್ವಸ್ವ

ಹೀಗೇ ಋಗ್ವೇದದಲ್ಲಿ ರಾಜ್ಯಾಡಳಿತ ಮತ್ತು ರಾಜನ ನೀತಿ ನಿಯಮಗಳನ್ನು ಹೇಳಿದ್ದನ್ನು ಗಮನಿಸಿದರೆ ಆ ಋಷಿಯ ಕಾಲಕ್ಕೆ ಎಷ್ಟೊಂದು ವ್ಯವಸ್ಥೆ ಇತ್ತು ಅನ್ನಿಸುತ್ತದೆ. ರಾಜನ ಸುಖವೇ ಪ್ರಜೆಗಳ ಸುಖವೆನ್ನುವುದು ಒಂದಾದರೆ, ಎಲ್ಲರನ್ನೂ ಜೀವಿಸಲು ಬಿಡು ಎನ್ನುವುದು ಇನ್ನೊಂದು ಅರ್ಥ. ರಾಜನಾದವ ಕರಗಳನ್ನು ಬೇಡಲೂ ಬಾರದು ಅಥವಾ ಬಲಾತ್ಕಾರದಿಂದ ತೆಗೆದುಕೊಳ್ಳಲೂ ಬಾರದು. ಪ್ರಜೆಗಳಲ್ಲಿ ತಾವೇ ಸಮರ್ಪಿಸಬೇಕು ಎನ್ನುವ ಭಾವನೆ ಹುಟ್ಟಬೇಕಂತೆ. ಹಾಗಾದರೆ ಆ ರಾಜ ಎಂಥವನಿರಬೇಕು! ಅವನ ಆಡಳಿತ ಹೇಗಿರಬಹುದು. ಇನ್ನು ಋಗ್ವೇದದ ನಾಲ್ಕನೇ ಮಂಡಲದ ೨೦ನೇ ಸೂಕ್ತದಲ್ಲಿ ವಾಮದೇವ ಋಷಿಯು ರಾಜನು ಯುದ್ಧ ಮಾಡುವ ಕುರಿತೂ ಹೇಳಿರುವುದು ಗಮನಿಸಿದರೆ ಪ್ರಾಯಶಃ ರಾಜ್ಯ ವಿಸ್ತಾರದ ನಿಯಮ ಇರಬಹುದು. ರಾಜಕೀಯ ಸ್ಥಿತಿ ಅದು. ಋಗ್ವೇದದ ೭ನೇ ಮಂಡಲದ ೮೪ನೇ ಸೂಕ್ತದಲ್ಲಿ ವಶಿಷ್ಠರು ರಾಷ್ಟ್ರದ ಕುರಿತು ಹೇಳಿದ್ದಾರೆ. ಹೀಗೇ ಅನೇಕ ದ್ರಷ್ಟಾರ ಮಹರ್ಷಿಗಳು ರಾಷ್ಟ್ರಾಡಳಿತವನ್ನು ಸೂಚಿಸಿದ್ದಾರೆ. ಋಗ್ವಿಧಾನದಲ್ಲಿ ರಾಜನ ಪಟ್ಟಾಭಿಷೇಕ ಹೇಗೆ ಮತ್ತು ಯಾವಾಗ ನಡೆಯಬೇಕು ಅನ್ನುವುದನ್ನು ಹೇಳುವುದು ಹೀಗೆ:

ರಾಜಾನಮಭಿಷಿಚ್ಯೇತ ತಿಷ್ಯೇಣ ಶ್ರವಣೇನವಾ |
ಪೌಷ್ಣಾ ಸಾವಿತ್ರ ಸೌಮ್ಯಾಶ್ವಿರೋಹಿಣೀಷೂತ್ತರಾಸು ಚ ||

ಪುಷ್ಯಾ ಮತ್ತು ಶ್ರವಣ ಮೊದಲಾದ ಶುಭ ನಕ್ಷತ್ರದಲ್ಲಿ ರಾಜ್ಯಾಭಿಷೇಕ ಮಾಡಬೇಕು ಎನ್ನುವುದಲ್ಲದೇ ಅದರ ವಿಧಿವಿಧಾನಗಳನ್ನೂ ಸಹ ಹೇಳಲಾಗಿದೆ. ರಾಜನಿಗೆ ಪುರೋಹಿತನಾಗಿದ್ದವನು ರಾಜನನ್ನು ಆಶೀರ್ವದಿಸಬೇಕು. ಅಪ್ರತಿರಥ ಸೂಕ್ತದಲ್ಲಿನ ಆಶುಃ ಶಿಶಾನಃ ಎನ್ನುವ ಮಂತ್ರವನ್ನು ಪಠಿಸುತ್ತಾ ಎಲೈ ರಾಜನೇ ಸಮಸ್ತ ಪೃಥ್ವಿಯನ್ನು ಜಯಿಸುವವನಾಗು. ನಿನ್ನಲ್ಲಿ ಧರ್ಮವು ಜಾಗ್ರತವಾಗಿರಲಿ. ನೀನು ಧರ್ಮದಂತೆ ನಡೆದುಕೋ. ಪ್ರಜಾ ಪಾಲನೆಯಲ್ಲಿಯೂ ಸಹ ಧರ್ಮವನ್ನು ಆಚರಿಸು. ನಿನ್ನ ವಂಶವು ಅಭಿವೃದ್ಧಿಯಾಗಲಿ ಎಂದು ಜಪಿಸಬೇಕು. ಯುದ್ಧಾರ್ಥವಾಗಿ ಹೊರಟು ನಿಂತ ರಾಜನನ್ನು ಅದೇ ಸೂಕ್ತದ ಆತ್ವಾಹಾರ್ಷಮಂತರೇಧಿ ಧ್ರುವಸ್ತಿಷ್ಠಾ ವಿಚಾಚಲಿಃ ಎನ್ನುವ ಮಂತ್ರದಿಂದ ಅಭಿಮಂತ್ರಿಸಬೇಕು ಎನ್ನುತ್ತದೆ.

ಇನ್ನು ಯಜುರ್ವೇದದ ತೈತ್ತಿರೀಯ ಸಂಹಿತೆಯಲ್ಲಿ

ಆ ಬ್ರಹ್ಮನ್ ಬ್ರಾಹ್ಮಣೋ ಬ್ರಹ್ಮವರ್ಚಸೀ ಜಾಯತಾಮಾ ರಾಷ್ಟ್ರೇ ರಾಜನ್ಯಃ ಶೂರ
. . . ಓಷಧಯಃ ಪಚ್ಯಂತಾಂ ಯೋಗಕ್ಷೇಮೋ ನಃ ಕಲ್ಪತಾಮ್ || (ಯಜುರ್ವೇದ)

ಯಜುರ್ವೇದದ ಈ ಮಂತ್ರ ಅದೆಷ್ಟು ಅರ್ಥವತ್ತಾಗಿ ನಮ್ಮ ಜನ ಮತ್ತು ನಮ್ಮ ನೆಲವನ್ನು ಹೊಗಳಿ ಸಮೃದ್ಧವಾಗಿರಲಿ ಎಂದು ಹೇಳುತ್ತದೆ.

ಓ ಪರಮಾತ್ಮನೇ(ದೇವನೇ) ನಮ್ಮ ಈ ರಾಷ್ಟ್ರದಲ್ಲಿ ಬ್ರಹ್ಮತೇಜಸ್ಸಿನಿಂದ ಕೂಡಿದ ಬ್ರಾಹ್ಮಣನು (ಬ್ರಾಹ್ಮಣ ಎನ್ನುವುದು ಇಲ್ಲಿ ಜಾತಿವಾಚಕವಲ್ಲ, ಕರ್ಮ ಮತ್ತು ಆಚಾರದ ದೃಷ್ಟಿಯಿಂದ ಮಾತ್ರ) ಕಾಲ ಕಾಲಕ್ಕೂ ಹುಟ್ಟಿ ಬರುತ್ತಿರಲಿ. ಕ್ಷತ್ರಿಯನಾದವನು ತನ್ನ ಕ್ಷಾತ್ರ ತೇಜಸ್ಸಿನಿಂದ ಕೂಡಿದವನಾಗಿ ಮತ್ತು ಶೂರನೂ ಶಸ್ತ್ರಾಸ್ತ್ರ ಪ್ರಯೋಗಗಳಲ್ಲಿ ನಿಪುಣನೂ, ರೋಗರುಜಿನಗಳಿಲ್ಲದವನಾಗಿಯೂ, ಮಹಾರಥಿಯಾಗಿ ಜನ್ಮವೆತ್ತಿ ಬರುತ್ತಿರಲಿ. ಗೋವುಗಳು ಯಥೇಷ್ಟವಾಗಿ ಹಾಲು ಕೊಡುತ್ತಿರಲಿ. ಎತ್ತುಗಳು ಹೊರೆ ಹೊರಲು ಸಮರ್ಥವಾಗಿರಲಿ. ಕುದುರೆಗಳು ವೇಗವಾಗಿ ಓಡುವಂತಾಗಲಿ. ನಾರಿಯು ತನ್ನ ಉತ್ತರದಾಯಿತ್ವವನ್ನು ಸಮರ್ಥವಾಗಿ ನಿರ್ವಹಿಸುವವಳಾಗಿರಲಿ. ಈ ಶುಭಕರ್ಮಕರ್ತನ ಪುತ್ರನು ಜಯಶಾಲಿಯೂ, ಉತ್ತಮ ರಥಿಕನೂ, ಸಭೆಯಲ್ಲಿ ಕುಳಿತುಕೊಳ್ಳಲು(ಸಭೆಯಲ್ಲಿ ಆಸೀನರಾಗಲು) ಅರ್ಹನೂ, ಉತ್ಸಾಹಶಾಲಿಯೂ ಆಗಿರಲಿ. ನಮಗಾಗಿ ಓಷಧಿಯು ಫಲಭರಿತವಾಗಿ ಪಕ್ವವಾಗಲಿ. ನಮಗೆ ಯೋಗಕ್ಷೇಮವು ಸದಾ ಸಿದ್ಧಿಸಲಿ.

ಇದನ್ನೂ ಓದಿ: ವಾಕಿಂಗ್‌ ಚಿತ್ರಗಳು ಅಂಕಣ: ಸ್ಮಾರ್ಟ್‌ ವಾಚಿಗೆ ಯಾಮಾರಿಸೋ ಪ್ರೋಗ್ರಾಂಗಳು

ಇದು ಈ ನೆಲದ ಮೊದಲ ವೈದಿಕ ರಾಷ್ಟ್ರಗೀತೆ. ಸ್ವಂತದ್ದನ್ನು ಯಾವುದನ್ನೂ ಆಶಿಸದೇ ಬೇರೆಯವರಿಗಾಗಿ ಮತ್ತು ಈ ನೆಲಕ್ಕಾಗಿ ಎಲ್ಲವನ್ನೂ ಈ ಯಜುರ್ವೇದದ ಸೂಕ್ತಕಾರ ಕೇಳಿಕೊಳ್ಳುತ್ತಾನೆ. ಆದರೂ ನಮ್ಮವರಿಗೆ ಕಾಣಿಸುವುದು ನಮ್ಮದಲ್ಲದ್ದು. ಅಂದರೆ ಈ ಸೂಕ್ತದ್ರಷ್ಟಾರ ಋಷಿಗಳ ಕಾಲದಲ್ಲಿ ಈ ರಾಷ್ಟ್ರದ ರಾಜನಿಗೆ ಮಂತ್ರಿಗಳಾಗಿಯೂ ಪುರೋಹಿತನಾಗಿಯೂ ಒದಗಿ ಬರುವುದು ವೈದಿಕ ಋಷಿಗಳೇ. ಹಾಗಾಗಿ ಈ ಋಷಿ ಆ ರಾಜನ ಪ್ರದೇಶದ ಸಮಗ್ರ ಅಭಿವೃದ್ಧಿಯನ್ನೇ ಚಿಂತಿಸುತ್ತಿದ್ದ ಎನ್ನುವುದು ತಿಳಿದುಬರುತ್ತದೆ. ಹಾಗೆ ಇದ್ದವರಲ್ಲಿ ಸಪ್ತರ್ಷಿಗಳೂ ಇದ್ದರು!!

Exit mobile version