Site icon Vistara News

ವಿಸ್ತಾರ ಅಂಕಣ: ಇಸ್ರೇಲ್‌ನಿಂದ ಭಾರತ ಕಲಿಯಬೇಕಾದ ಮೂರು ಪಾಠಗಳು

israel India

ಹಾಗೆ ಸುಮ್ಮನೇ ಓದಿಕೊಳ್ಳಿ. 1947ರಲ್ಲಿ ಭಾರತ (India independence) ಸ್ವತಂತ್ರವಾಯಿತು, 1948ರಲ್ಲಿ ಇಸ್ರೇಲ್ (Israel) ಎಂಬ ದೇಶ ಉದಯವಾಯಿತು. ಈ ವಾಕ್ಯದಲ್ಲಿರುವ ಸೂಕ್ಷ್ಮತೆಯನ್ನು ಗಮನಿಸದಿದ್ದರೆ, ವರುಷದ ವ್ಯತ್ಯಾಸದಲ್ಲಿ ಎರಡೂ ದೇಶಗಳಲ್ಲಿ ಹೊಸ ದೇಸೀಯ ಆಡಳಿತ ಶುರುವಾಯಿತು ಎಂಬ ಸಾಮ್ಯತೆ ಕಾಣುತ್ತದೆ.

ಆದರೆ ಎರಡೂ ದೇಶಗಳ ಪರಿಸ್ಥಿತಿ ಸಂಪೂರ್ಣ ಭಿನ್ನ. ಭಾರತವು ಪ್ರಾಚೀನ ಕಾಲದಿಂದಲೂ ಇಲ್ಲೇ ಇತ್ತು, ಇಲ್ಲಿಗೇ ಎಲ್ಲ ದಾಳಿಕೋರರೂ ಮುತ್ತಿಗೆ ಹಾಕಿದ್ದರು, ಇಲ್ಲಿನ ಜನರನ್ನೇ ಗುಲಾಮಗಿರಿಗೆ ತಳ್ಳಿದರು. ಭಾರತದ ಆತ್ಮಬಲ, ನಿರಂತರ ಹೋರಾಟದ ಫಲವಾಗಿ ಸುಮಾರು ಒಂದು ಸಾವಿರ ವರ್ಷದ ನಂತರ ಸ್ವತಂತ್ರವಾಯಿತು. ಇದು ಭಾರತದ ಕಥೆಯಾದರೆ, ಇಸ್ರೇಲಿನದ್ದು ಬೇರೆಯ ರೀತಿಯದ್ದು.

ಅಸಲಿಗೆ ಇಸ್ರೇಲಿಗರಿಗೆ ಅಂದರೆ ಯಹೂದಿಗಳಿಗೆ ಭೂಮಿಯೇ ಇರಲಿಲ್ಲ. ತಮ್ಮ ಭೂಮಿಯಿಂದಲೇ ಅವರನ್ನು ಓಡಿಸಿ ಸತತ 2 ಸಾವಿರ ವರ್ಷ ಪರಕೀಯ ಭೂಮಿಯಲ್ಲಿ ವಾಸಿಸುತ್ತಿದ್ದರು. ವಿಶ್ವದ ನಾನಾ ಭಾಗಗಳಲ್ಲಿ ಹಂಚಿಹೋಗಿದ್ದ ಯಹೂದಿಗಳು, ಮುಂದಿನ ವರ್ಷ ಹಬ್ಬವನ್ನು ನಮ್ಮ ನೆಲದಲ್ಲೇ ಆಚರಿಸುತ್ತೇವೆ ಎಂದು ಸಂಕಲ್ಪಿಸುತ್ತಿದ್ದರು. ಒಂದೆರಡು ವರ್ಷವಲ್ಲ, ಸತತ ಎರಡು ಸಾವಿರ ವರ್ಷ. ಜನರೇಷನ್ನಿನಿಂದ ಜನರೇಷನ್ನಿಗೆ ಈ ಬೆಂಕಿ ಆರದಂತೆ ನೋಡಿಕೊಂಡ ಯಹೂದಿಗಳು ಕೊನೆಗೂ ತಮ್ಮ ನೆಲವನ್ನು 1948ರಲ್ಲಿ ಪಡೆದರು. ಆದರೆ ಅಲ್ಲಿ ವಾಸಿಸಲು ಜನಗಳೇ ಇರಲಿಲ್ಲ !

ಎಷ್ಟೇ ಲೆಕ್ಕ ಮಾಡಿದರೂ ಇಡೀ ನಾಗರಿಕರ ಸಂಖ್ಯೆ ಒಂದು ಲಕ್ಷದಷ್ಟೆ. ನಿಧಾನವಾಗಿ ತಮ್ಮದೇ ಉದ್ಯಮ, ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಕೊಳ್ಳುತ್ತಲೇ, ವಿಶ್ವದೆಲ್ಲೆಡೆ ಇದ್ದ ಯಹೂದಿಗಳಿಗೆ ಕರೆ ನೀಡಲಾಗುತ್ತದೆ. ಬನ್ನಿ, ನಿಮ್ಮ ನೆಲದಲ್ಲೇ ಬದುಕು ಕಟ್ಟಿ ಎಂಬ ಕೂಗಿಗೆ ಓಗೊಟ್ಟು ಅನೇಕರು ಬರುತ್ತಾರೆ, ಆದರೂ 70ರ ದಶಕದಲ್ಲಿ ಇಸ್ರೇಲ್ ಜನಸಂಖ್ಯೆ 40 ಲಕ್ಷದ ಆಸುಪಾಸಿನಲ್ಲೇ ಇರುತ್ತದೆ. ಈಗ ಅಂದರೆ 2023ರ ಸಂದರ್ಭದಲ್ಲಿ ಇಡೀ ಇಸ್ರೇಲಿನ ಜನಸಂಖ್ಯೆ 93 ಲಕ್ಷದ ಆಸುಪಾಸಿನಲ್ಲಿದೆ. ಅಂದರೆ 1948ರಲ್ಲೂ ಇಸ್ರೇಲ್ ಉದಯವಾಗಲಿಲ್ಲ. ಉದಯವಾಗುವ ಪ್ರಕ್ರಿಯೆ ಆ ವರುಷ ಆರಂಭವಾಯಿತು. ಏನೇ ಎಂದರೂ ಮಾನವ ಬದುಕುವುದು ತನ್ನ ಆನಂದ ಪ್ರಾಪ್ತಿಗಾಗಿ. ಎರಡು ಸಾವಿರ ವರ್ಷ ದೇಶದಿಂದ ಹೊರಗಿದ್ದವರು ತಮ್ಮ ಬದುಕನ್ನು ಕಟ್ಟಿಕೊಂಡು ಆಸ್ತಿಪಾಸ್ತಿಗಳನ್ನೂ ಮಾಡಿಕೊಂಡಿದ್ದರು. ಅಷ್ಟು ಜನರೇಷನ್ನಿನ ನಂತರದ ಜನರೂ ತಮ್ಮ ಸುಖ ಜೀವನವನ್ನು ಬಿಟ್ಟು ಮತ್ತೆ ತವರಿಗೆ ಆಗಮಿಸಬೇಕು ಎಂದರೆ, ಅಲ್ಲಿನ ಯುದ್ಧದ ಸನ್ನಿವೇಶವನ್ನು ಎದುರಿಸಲು ಸಿದ್ಧರಾಗಬೇಕು ಎಂದರೆ ಅದಕ್ಕೆ ಬೇಕಾಗಿರುವುದು ಆತ್ಮಬಲ.

ಆತ್ಮಬಲವೊಂದಿದ್ದರೆ ಸಾಕೇ? ಭೌಗೋಳಿಕವಾಗಿ ಇಸ್ರೇಲನ್ನು ನೋಡೋಣ. ಇಸ್ರೇಲ್ ಸುತ್ತ ಲೆಬನಾನ್, ಸಿರಿಯಾ, ಸೌದಿ ಅರೇಬಿಯಾ, ಪ್ಯಾಲೆಸ್ತೀನ್, ಜೋರ್ಡನ್, ಈಜಿಪ್ಟ್ ದೇಶಗಳಿವೆ. ಇವೆಲ್ಲವೂ ಮುಸ್ಲಿಂ ದೇಶಗಳು. ಸಾಂಪ್ರದಾಯಿಕವಾಗಿ ಯಹೂದಿ-ಮುಸ್ಲಿಂ-ಕ್ರೈಸ್ತರು ಪರಸ್ಪರ ವಿರೋಧಿಗಳು. ಅದರಲ್ಲೂ, ತಾವು ನೆಲೆಗೊಂಡಿದ್ದ ಪ್ರದೇಶದಿಂದ ಓಡಿಸಿದರು ಎಂಬ ಕಾರಣಕ್ಕೆ ಯಹೂದಿಗಳ ಮೇಲೆ ಪ್ಯಾಲೆಸ್ತೀನಿಯರ ಕೋಪ ನೆತ್ತಿಗೇರಿತ್ತು. ಮುಸ್ಲಿಂ ದೇಶಗಳು ಪರಸ್ಪರ ವಿವಿಧ ವಿಚಾರಗಳಲ್ಲಿ ಕಚ್ಚಾಡಿಕೊಂಡರೂ ಸಮಾನ ಶತ್ರುವೊಬ್ಬ ಸಿಕ್ಕಿದಾಗ ʼಯೂನಿವರ್ಸಲ್ ಬ್ರದರ್‌ಹುಡ್ʼ ಶೀರ್ಷಿಕೆಯಲ್ಲಿ ಒಂದಾಗಿಬಿಡುತ್ತವೆ.

ಬಹುತೇಕ ಮರುಭೂಮಿ ಹೊಂದಿರುವ ಇಸ್ರೇಲ್ ಜನರು ಕುಡಿಯುವ ನೀರಿಗೆ ಹೊರಗಿನ ನದಿಗಳನ್ನು ನೆಚ್ಚಿಕೊಳ್ಳುವಂತಿಲ್ಲ. ಯಾವುದೇ ಸಮಯದಲ್ಲಿ ಇತರೆ ದೇಶಗಳು ನೀರನ್ನು ಬಂದ್ ಮಾಡಬಹುದು. ಆಹಾರವನ್ನು ಆಮದು ಮಾಡಿಕೊಳ್ಳುವುದರ ಮೇಲೆಯೇ ಅವಲಂಬಿತವಾದರೆ, ಅದಕ್ಕೂ ಒಂದು ದಿನ ಬ್ರೇಕ್ ಬಿದ್ದರೆ, ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ. ಅನಿವಾರ್ಯತೆಯ ಈ ಪರಿಸ್ಥಿತಿಯೇ ಇಸ್ರೇಲನ್ನು ಸ್ವಾವಲಂಬಿಯಾಗಲು ಪ್ರೇರೇಪಿಸಿತು. ಮನದಲ್ಲಿ ಸ್ವಾವಲಂಬನೆಯ ಕನಸಿದ್ದರೆ ಸಾಲದು, ಅದಕ್ಕೆ ಅಗತ್ಯ ಮುಂದಾಲೋಚನೆ, ಸಂಶೋಧನಾ ಪ್ರವೃತ್ತಿ ಬೇಕಾಗುತ್ತದೆ. ಇದಕ್ಕಾಗಿ ನೀರಿನ ಮಿತವ್ಯಯ, ಮರುಬಳಕೆ, ಅಗಾಧವಾದ ಸಮುದ್ರದ ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದರು. ಕೃಷಿಯಲ್ಲೂ ಅಷ್ಟೆ. ಸೊಂಟದ ಮಟ್ಟಕ್ಕೆ ನೀರು ನಿಲ್ಲಿಸಿ ಕೃಷಿ ಮಾಡುವುದಲ್ಲ, ಅತ್ಯಂತ ಕಡಿಮೆ ನೀರನ್ನು ಬಳಸಿ ಅಥವಾ ನೀರೇ ಇಲ್ಲದೆ ಕೃಷಿ ಮಾಡುವ ಸಂಶೋಧನೆಗಳನ್ನೂ ಕೈಗೊಂಡರು. ಇದರಿಂದಾಗಿ ದೇಶವು ಆಹಾರದಲ್ಲಿ ತನ್ನ ಸ್ವಾವಲಂಬನೆಯನ್ನು ಗಳಿಸಿಕೊಂಡಿತು. ಇದರ ಜತೆಜತೆಗೇ ವ್ಯಾಪಾರ, ಉದ್ಯಮ, ತಂತ್ರಜ್ಞಾನಗಳೂ ಬೆಳೆದಿದ್ದರಿಂದ ಅನೇಕ ಉತ್ಪನ್ನಗಳನ್ನು ರಫ್ತು ಮಾಡಲೂ ಆರಂಭಿಸಿತು.

ಮತ್ತೊಂದು ಪ್ರಮುಖ ಅಗತ್ಯತೆ ಇದ್ದದ್ದು ಗಡಿ ರಕ್ಷಣೆ ಹಾಗೂ ಆಂತರಿಕ ರಕ್ಷಣೆಯದ್ದು. ಸುತ್ತಲೂ ಇರುವ ಮುಸ್ಲಿಂ ದೇಶಗಳು ಇಸ್ರೇಲ್ ಮೇಲೆ ಯುದ್ಧ ಸಾರಲು ಸದಾ ಸನ್ನದ್ಧವಾಗಿರುವಾಗ ಇಸ್ರೇಲ್ ಸಹ ಸುಮ್ಮನಿರಲು ಆಗುವುದಿಲ್ಲ. ಹಾಗಾಗಿ ಅಲ್ಲಿ ಪ್ರತಿ ನಾಗರಿಕನೂ ಯೋಧನೆ. ಕೃಷಿಕನೂ ಯೋಧನೆ, ವಿಜ್ಞಾನಿಯೂ ಯೋಧನೆ, ವಿದ್ಯಾರ್ಥಿಯೂ ಯೋಧನೆ. ನಿರಂತರವಾಗಿರುವ ಸೈನ್ಯವು ಗಡಿಯನ್ನು ಕಾಯುತ್ತಿರುತ್ತದೆ. ಯುದ್ಧದ ಸಂದರ್ಭದಲ್ಲಿ, ದೈಹಿಕವಾಗಿ ಸಮರ್ಥನಾಗಿರುವ ಪ್ರತಿ ನಾಗರಿಕನೂ ಸಮವಸ್ತ್ರ ತೊಟ್ಟು ರಣರಂಗಕ್ಕೆ ಇಳಿಯುತ್ತಾನೆ. ಇದರಲ್ಲಿ ಮಹಿಳೆಯರೂ ಸರಿಸಮಾನವಾಗಿ ಹೋರಾಡುತ್ತಾರೆ. ರಕ್ಷಣೆ ಎಂದರೆ ಕೇವಲ ಮಾನವ ಸಂಪನ್ಮೂಲವಲ್ಲ, ತಂತ್ರಜ್ಞಾನದ ಪಾತ್ರವೇ ಮುಖ್ಯ. ಅದಕ್ಕಾಗಿ ವಿಶ್ವದಲ್ಲೇ ಅತ್ಯಂತ ಸುರಕ್ಷಿತ ಎನ್ನಲಾದ ಐರನ್ ಡೋಮ್‌ನಂತಹ ವ್ಯವಸ್ಥೆಯನ್ನೂ ರೂಪಿಸಿಕೊಂಡಿತು. ಎದುರಾಳಿ ದೇಶದ ರಾಕೆಟ್ ಅಲ್ಲ, ಒಂದು ಹಕ್ಕಿ ಬಂದರೂ ಹೊಡೆದುರುಳಿಸುವಂತಹ ವ್ಯವಸ್ಥೆ ಇದೆ. ಶೇ.100 ಸುರಕ್ಷಿತ ಎಂದಲ್ಲ, ಆದರೆ ವಿಶ್ವದ ಇತರೆ ದೇಶಗಳಲ್ಲಿರುವ ವ್ಯವಸ್ಥೆಗಳಿಗಿಂತ ಹೆಚ್ಚು ಸುರಕ್ಷಿತವಾದದ್ದು ಐರನ್ ಡೋಮ್. ಇದಿಷ್ಟೂ ಸಾಧ್ಯವಾಗಿದ್ದು ಇಸ್ರೇಲಿನ ಮೆದುಳಿನ, ಅಂದರೆ ಬುದ್ಧಿಬಲದ ಕಾರಣಕ್ಕೆ. ಆತ್ಮಬಲ, ಬುದ್ಧಿ ಬಲದ ನಂತರ ಮೂರನೆಯದು ರಾಜತಾಂತ್ರಿಕ ಬಲ.

ಇದನ್ನೂ ಓದಿ: ವಿಸ್ತಾರ ಅಂಕಣ: ಚೆನ್ನಮ್ಮ ಬೇಕೊ? ಔರಂಗಜೇಬ ಬೇಕೊ? ನೀವೇ ನಿರ್ಧರಿಸಿ

ಅನೇಕ ಬಾರಿ ಇಸ್ರೇಲ್ ಕುರಿತು ಮಾತನಾಡುವವರು ಕೆಲವು ವಿಷಯ ಮುಚ್ಚಿಡುತ್ತಾರೆ. ನಮ್ಮ ಬೆಂಗಳೂರಿಗಿಂತಲೂ ಕಡಿಮೆ ಜನಸಂಖ್ಯೆ ಹೊಂದಿರುವ ದೇಶವೊಂದು ಸುತ್ತಮುತ್ತ ಮುಸ್ಲಿಂ ದೇಶಗಳನ್ನು ಎದುರಿಸಿ ಹೋರಾಡುತ್ತಿದೆ ಎಂದು ವೀರಾವೇಷದಲ್ಲಿ ಹೇಳಿಬಿಡುತ್ತಾರೆ. ಆದರೆ ಅದು ಅರ್ಧ ಸತ್ಯ. ನಿಜವಾಗಿಯೂ ಇಸ್ರೇಲ್ ಶಕ್ತಿ ಅಡಗಿರುವುದು ಸುಮಾರು 9 ಸಾವಿರ ಕಿಲೋಮೀಟರ್ ದೂರದಲ್ಲಿರುವ ಅಮೆರಿಕದಲ್ಲಿ. ಇಸ್ರೇಲ್ ನಾಗರಿಕರು ತಮ್ಮ ಸಜ್ಜನಿಕೆ, ಬುದ್ಧಿಶಕ್ತಿ, ಪ್ರಾಮಾಣಿಕತೆ, ವ್ಯಾಪಾರ ಚತುರತೆಯ ಕಾರಣಕ್ಕೆ ಅನೇಕ ದೇಶಗಳಲ್ಲಿ ನೆಲೆ ಕಂಡಿದ್ದಾರೆ. ಅದರಲ್ಲೂ ಅಮೆರಿಕದ ಶ್ವೇತಭವನ ಅಧಿಕಾರಿಗಳು, ಸಂಸತ್ತು, ಮಾಧ್ಯಮಗಳಲ್ಲೂ ಇಸ್ರೇಲ್ ಹಿಡಿತ ಹೊಂದಿದೆ. ಅಮೆರಿಕದಲ್ಲಿ ದೇವರನ್ನು ಬೇಕಾದರೂ ಟೀಕಿಸಬಹುದು, ಇಸ್ರೇಲನ್ನಲ್ಲ ಎಂಬ ಒಂದು ಮಾತಿದೆ. ರೂಥ್ಚೈಲ್ಡ್ ಎಂಬ ಉದ್ಯಮ ಕುಟುಂಬವು ಯುರೋಪ್, ಅಮೆರಿಕದಲ್ಲಿ ಪ್ರಬಲ ಹಿಡಿತ ಹೊಂದಿದೆ. ಈ ಎಲ್ಲ ಸ್ಥಾನಗಳಲ್ಲಿ ಯಹೂದಿಗಳು ನ್ಯಾಯವಾಗಿ ದುಡಿಯುತ್ತಾರೆ, ಆಯಾ ದೇಶಗಳ ಒಳಿತಿಗೆ ಕೆಲಸ ಮಾಡುತ್ತಾರೆ. ಆದರೆ ಅದೆಲ್ಲ ಕೆಲಸದಿಂದ ದೊರಕುವ ಅಧಿಕಾರ, ಸದಭಿಪ್ರಾಯಗಳನ್ನು ತಮ್ಮ ಇಸ್ರೇಲನ್ನು ರಕ್ಷಿಸಿಕೊಳ್ಳಲು ವಿನಿಯೋಗಿಸುತ್ತಾರೆ. ಇಸ್ರೇಲ್ ಕಡೆಗೆ ಯಾರೇ ಕಣ್ಣೆತ್ತಿ ನೋಡುವ ಮೊದಲೇ ರಾಜತಾಂತ್ರಿಕವಾಗಿ ಹೇಗೆ ಮಟ್ಟ ಹಾಕಬೇಕು ಎಂದು ಯೋಚಿಸಿರುತ್ತಾರೆ. ಇಸ್ರೇಲ್ ವಿರುದ್ಧ ಯುದ್ಧಕ್ಕೆ ಹೋದರೆ ಅಮೆರಿಕ ಸುಮ್ಮನೆ ಬಿಡುತ್ತದೆಯೇ? ಎಂಬ ಭಯದಿಂದಾಗಿ ಅನೇಕರು ಹಿಂದೇಟು ಹಾಕುತ್ತಾರೆ. ಹೀಗಾಗಿ ಇಸ್ರೇಲ್ ತನ್ನನ್ನು ರಾಜತಾಂತ್ರಿಕವಾಗಿಯೂ ರಕ್ಷಣೆ ಮಾಡಿಕೊಂಡಿದೆ.

ಇಂಥಾ ಇಸ್ರೇಲ್ ದೇಶದ ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿದ್ದಾರೆ. ಇಲ್ಲಿವರೆಗೆ ಇಸ್ರೇಲ್ ಅನೇಕ ದಾಳಿಗಳನ್ನು ಎದುರಿಸಿದೆ. ಅದೆಲ್ಲಕ್ಕೂ ʼತಕ್ಕʼ ಉತ್ತರವನ್ನೇ ಕೊಟ್ಟಿದೆ. ಈ ಬಾರಿಯ ದಾಳಿ ತುಸು ದೊಡ್ಡ ಮಟ್ಟದ್ದು. ಸ್ವಲ್ಪ ತಡವಾಗಿಯಾದರೂ ಇದಕ್ಕೂ ʼತಕ್ಕʼ ಉತ್ತರವನ್ನು ನೀಡುತ್ತದೆ ಎಂದು ಇತಿಹಾಸವನ್ನು ನೋಡಿಯೇ ತಿಳಿಯಬಹುದು. ಈ ಇಡೀ ಲೇಖನದಲ್ಲಿ ಇಸ್ರೇಲ್ ಬದಲಿಗೆ ಭಾರತವನ್ನು ಕಲ್ಪಿಸಿಕೊಂಡರೆ ಹೇಗೆ?

ದೇವರ ದಯೆಯಿಂದ ಭಾರತದಲ್ಲಿ ಸಾಕಷ್ಟು ನದಿಗಳು, ಫಲವತ್ತಾದ ಭೂಮಿ, ಅಂತರ್ಜಲ ಇರುವುದರಿಂದ ಆಹಾರ ಉತ್ಪಾದನೆಗೆ ತೊಂದರೆ ಇಲ್ಲ. ಆದರೆ ಇಸ್ರೇಲಿಗಿರುವ ಇನ್ನೆರಡು ಸಮಸ್ಯೆಗಳು (ಗಡಿ ಮೂಲಕ ಭಯೋತ್ಪಾದನೆ. ರಾಜತಾಂತ್ರಿಕ ಒತ್ತಡ) ಭಾರತಕ್ಕೂ ಇವೆ. ಇದೆಲ್ಲದರ ಜತೆಗೆ, ದೇಶದ ಒಳಗಿದ್ದುಕೊಂಡೇ ದೇಶದ ವಿರುದ್ಧ ಕೆಲಸ ಮಾಡುವವರ ಸಂಖ್ಯೆಯೂ ದೊಡ್ಡದಾಗಿದೆ. ಇದಕ್ಕೆ ಪರಿಹಾರವೂ ಒಂದು ಮಟ್ಟಿಗೆ ಇಸ್ರೇಲಿನಲ್ಲೇ ಇದೆ. ಮೊದಲಿಗೆ ಆತ್ಮಬಲವನ್ನು ಹೆಚ್ಚಿಸಿಕೊಂಡು, ದೇಶದ ಮೇಲಿನ ಗೌರವವು ಪ್ರತಿ ನಾಗರಿಕನಲ್ಲಿ ಪ್ರಕಟವಾಗುವಂತೆ ಮಾಡುವುದು. ಈಗಾಗಲೆ ದೇಶದಲ್ಲಿರುವ ʼಉತ್ತಮ ಮೆದುಳುಗಳುʼ ಸ್ವಾರ್ಥವನ್ನು ಕಡಿಮೆ ಮಾಡಿ ದೇಶದ ಒಳಿತಿಗೆ ದುಡಿಯುವುದು. ದೇಶದಿಂದ ಹೊರಹೋಗಿರುವ ʼಉತ್ತಮ ಮೆದುಳುಗಳುʼ ಒಂದಷ್ಟು ಕಷ್ಟವನ್ನು ಸಹಿಸಿಕೊಳ್ಳಬೇಕು ಎಂಬ ಮಾನಸಿಕತೆಯೊಂದಿಗೇ ದೇಶಕ್ಕೆ ವಾಪಸಾಗುವುದು. ಆಗಷ್ಟೇ ಭಾರತವು ತನ್ನ ಗತವೈಭವವನ್ನು ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಇಸ್ರೇಲ್ ನಮಗೆಲ್ಲ ಪಾಠವಾಗಲಿ. ಗಡಿಯಲ್ಲಿ ನಡೆಯುವ ಯುದ್ಧ ಕ್ಷಣಿಕವಾದದ್ದು. ದೇಶ ಕಟ್ಟುವ ಯುದ್ಧ ಶಾಶ್ವತವಾದದ್ದಲ್ಲವೇ?

ಇದನ್ನೂ ಓದಿ: ವಿಸ್ತಾರ ಅಂಕಣ: ಎಡಬಿಡಂಗಿ ಪಾಕಿಗಳನ್ನು ಕುಣಿಸುತ್ತಿರುವ ಅಮೆರಿಕದ ಬಗ್ಗೆ ಎಚ್ಚರ ವಹಿಸಬೇಕಿದೆ

Exit mobile version