Site icon Vistara News

ವಿಸ್ತಾರ ಅಂಕಣ: ಪ್ರಜಾಪ್ರಭುತ್ವದ ಗುಣ ಭಾರತೀಯರ ಜೀನ್‌ನಲ್ಲಿಯೇ ಇದೆ !

india independence

75 ವರ್ಷದ ವಂಚನೆ, ಆರೋಪಗಳಿಂದ 25 ವರ್ಷದಲ್ಲಿ ಮುಕ್ತರಾಗಿ ಹೊರಬರೋಣ

ಪರ್ಷಿಯನ್ನರು, ಗ್ರೀಕರು, ಡಚ್ಚರು, ಫ್ರೆಂಚರ ನಂತರ ಇಸ್ಲಾಮಿಕ್ ಆಕ್ರಮಣಕಾರರು, ಅವರಿರುವಾಗಲೇ ಭಾರತದ ಮೇಲೆ ಕ್ರೈಸ್ತರ (ಬ್ರಿಟಿಷ್) ದಾಳಿಯನ್ನು (british invasion) ಕೊನೆಗೊಳಿಸಲು ಸಾಧ್ಯವಾಗಿದ್ದು 1947ರ ಆಗಸ್ಟ್ 15ರಂದು. ಇನ್ನೇನು ಮತ್ತೊಂದು ಆಗಸ್ಟ್ 15ರ ಸಮೀಪಕ್ಕೆ ಬಂದಿದ್ದೇವೆ. ಇದನ್ನು ಸ್ವಾತಂತ್ರ್ಯ ಉತ್ಸವ (independence day) ಎನ್ನಬೇಕೆ? ವಿಭಜನೆಯ (partition) ಕಹಿ ನೆನಪು ಎನ್ನಬೇಕೆ ಎನ್ನುವುದೇ ಗೊಂದಲ. ಒಂದು ಕಡೆ ನಮ್ಮ ನಾಯಕರು ಯೂನಿಯನ್ ಜಾಕ್ ಕೆಳಗಿಳಿಸಿ ತ್ರಿವರ್ಣ ಹಾರಿಸುತ್ತಿದ್ದರೆ, ಅತ್ತ ನೌಕಾಲಿ ಮತ್ತಿತರ ಭಾಗದಲ್ಲಿ(ಈಗಿನ ಪಾಕಿಸ್ತಾನ) ಹಿಂದುಗಳ ಕಗ್ಗೊಲೆ ನಡೆಯುತ್ತಿತ್ತು. ಅಲ್ಲಿಂದ ಬರುವ ರೈಲುಗಳಲ್ಲಿ ಹೆಣಗಳ ರಾಶಿಗಳು ಇರುತ್ತಿದ್ದವು. ಸ್ವತಃ ಗಾಂಧೀಜಿಯೇ (mahatma gandhi) ಈ ಸಮಯವನ್ನು ಸ್ವಾತಂತ್ರ್ಯ ಉತ್ಸವ ಎಂದು ಒಪ್ಪಿಕೊಳ್ಳಲು ಮನಸ್ಸು ಒಪ್ಪದೆ, ದಿಲ್ಲಿಯಿಂದ ದೂರದಲ್ಲಿದ್ದರು.

ಪ್ರಪಂಚದಲ್ಲಿ ಪ್ರತಿದಿನವೂ, ಪ್ರತಿ ಕ್ಷಣವೂ ಒಂದಲ್ಲ ಒಂದು ಜೀವ ಕೊನೆಯುಸಿರು ಎಳೆಯುತ್ತಲೇ ಇರುತ್ತದೆ. ಹಾಗೆಯೇ ಇನ್ನೊಂದು ಕಡೆ ನೋಡಿದರೆ ಪ್ರತಿ ಕ್ಷಣವೂ ಒಂದಲ್ಲ ಒಂದು ಜೀವ ಜನಿಸುತ್ತಲೇ ಇರುತ್ತದೆ. ನಮ್ಮನ್ನಗಲಿದ ಜೀವವನ್ನು ಮರೆಯುವುದಕ್ಕಿಂತಲೂ ಹೆಚ್ಚಾಗಿ, ಈಗ ಜನಿಸಿರುವ ಜೀವವನ್ನು ಸಂಭ್ರಮಿಸುವುದು ಮುಖ್ಯವಾದದ್ದು. ಏಕೆಂದರೆ ಜೀವನ ಎನ್ನುವುದರಲ್ಲೇ ಜೀವ ಎನ್ನುವುದಿದೆ. ಹಳೆಯ ಕಹಿಘಟನೆಗಳು ಮರುಕಳಿಸಬಾರದು ಎಂಬುದರ ಕುರಿತು ಸ್ಮೃತಿಗಾಗಿ ಹಳೆಯ ಕರಾಳ ಘಟನೆಗಳನ್ನು ನೆನಪು ಮಾಡಿಕೊಳ್ಳಬೇಕು. ಇತಿಹಾಸದಿಂದ ಪಾಠ ಕಲಿಯೋಣ ಎಂಬುದರ ಅರ್ಥ ಇದೇ ಇರಬೇಕು.

ದೇಶದ ಚುಕ್ಕಾಣಿ ಹಿಡಿದವರ ಮುಂದೆ ಅನೇಕ ಸವಾಲುಗಳಿದ್ದವು. ಮೊದಲನೆಯದಾಗಿ, ಈಗಾಗಲೆ ಹೇಳಿದಂತೆ ಪಾಕಿಸ್ತಾನದಿಂದ ಆಗಮಿಸಿದ ನಿರಾಶ್ರಿತರಿಗೆ ವಸತಿ ಕಲ್ಪಿಸುವುದು ಹಾಗೂ ಅವರಿಗೆ ಜೀವನ ಭದ್ರತೆ, ಉದ್ಯೋಗದ ಆಶ್ರಯ ನೀಡುವುದು. ಎರಡನೆಯ ಸವಾಲೆಂದರೆ 500ರಷ್ಟಿದ್ದ ರಾಜ ಸಂಸ್ಥಾನಗಳ ಮನವೊಲಿಸಿ ಅವರೆಲ್ಲರೂ ಪ್ರಜಾಪ್ರಭುತ್ವವನ್ನು (democracy) ಒಪ್ಪಿಕೊಳ್ಳಲು, ಅಂದರೆ ತಮ್ಮ ಅಸ್ತಿತ್ವವನ್ನು ಪ್ರಜಾತಂತ್ರ ಭಾರತದಲ್ಲಿ ವಿಲೀನಗೊಳಿಸಲು ಒಪ್ಪಿಸುವುದು. ಮೂರನೆಯ ಸವಾಲೆಂದರೆ, ಈ ದೇಶದ ಅತ್ಯಂತ ಸಂಕೀರ್ಣ ವ್ಯವಸ್ಥೆಗೆ ಹೊಂದಿಕೆ ಆಗುವಂತಹ ರಾಜಕೀಯ ವ್ಯವಸ್ಥೆಯನ್ನು ರೂಪಿಸಿಕೊಳ್ಳುವುದು.

ನಮ್ಮ ದೇಶಕ್ಕೆ ಬ್ರಿಟಿಷರು ಅದು ಕೊಟ್ಟರು, ಇದು ಕೊಟ್ಟರು ಎಂದು ಹೇಳುವವರು ಒಮ್ಮೆ ಇತಿಹಾಸವನ್ನು ನೋಡಬೇಕು. ಬ್ರಿಟಿಷರಿಂದ ನಮಗೆ ರೈಲು ಬಂತು, ಆಕ್ಚುವಲಿ ಬ್ರಿಟಿಷರೇ ಭಾರತವನ್ನು ಒಂದು ದೇಶ ಮಾಡಿದ್ದರು, ಭಾರತ ಅದಕ್ಕೂ ಮುನ್ನ ದೇಶವೇ ಆಗಿರಲಿಲ್ಲ, ಇಲ್ಲಿ ದಲಿತರನ್ನು ಶೋಷಣೆ ಮಾಡುವುದನ್ನು ಬಿಟ್ಟು ನಾಗರಿಕತೆ (civilisation) ಎನ್ನುವ ಕುರುಹೇ ಇರಲಿಲ್ಲ ಎಂದು ಪುಂಖಾನುಪುಂಖವಾಗಿ ಮಾತನಾಡುವವರಿದ್ದಾರೆ. ಅವರಿಗೆಲ್ಲ ಗೊತ್ತಿರಲಿ, 1947ರಲ್ಲಿ ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗಿದಾಗ ಜನಸಂಖ್ಯೆ ಇದ್ದದ್ದು 34.5 ಕೋಟಿ. ಹೆಚ್ಚಿನ ಸಂಖ್ಯೆಯ ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದರು, ಇದು ಕೃಷಿ ಪ್ರಧಾನ ದೇಶ. ಆದರೆ ಬಹುತೇಕ ಕೃಷಿ ವ್ಯವಸ್ಥೆ ಮಳೆ ಆಧಾರಿತವಾಗಿತ್ತು. ಒಂದು ಬಾರಿ ಮಳೆ ಕೈಕೊಟ್ಟರೆ ರೈತರಿಗೆ ಮಾತ್ರ ತೊಂದರೆ ಅಲ್ಲ. ಆ ಊರಿನ ಕ್ಷೌರಿಕ, ನೇಕಾರ, ಕಮ್ಮಾರ, ಚಮ್ಮಾರ, ಕುಂಬಾರ, ಬಡಗಿ… ಇತ್ಯಾದಿ ಎಲ್ಲ ಉದ್ಯೋಗದವರಿಗೂ ತೊಂದರೆಯೆ. ಏಕೆಂದರೆ ಆಗೆಲ್ಲ ಕೆಲಸಗಳ ಬದಲಿಗೆ ನೀಡುತ್ತಿದ್ದದ್ದು ಧವಸ ಧಾನ್ಯಗಳೆ. ಇನ್ನು ನಗರ ಪ್ರದೇಶಗಳ ಸ್ಲಂಗಳಲ್ಲಿ ವಾಸಿಸುತ್ತಿದ್ದ ಬಹುತೇಕ ಜನರ ಜೀವನ ಅನಾಗರೀಕವಾಗಿರುತ್ತಿತ್ತು. ಶಿಕ್ಷಣ, ಆರೋಗ್ಯ, ನೈರ್ಮಲ್ಯವಿಲ್ಲದೆ ಜನರು ಪಡುತ್ತಿದ್ದ ಸಂಕಷ್ಟ ಅಷ್ಟಿಷ್ಟಲ್ಲ. ಹಾಗಾದರೆ 5 ಸಾವಿರ ವರ್ಷಗಳ ಇತಿಹಾಸವಿರುವ ಭಾರತ ಹೀಗೆಯೇ ಕಡುಬಡತನದಲ್ಲಿ, ಶಿಕ್ಷಣವಿಲ್ಲದೆ, ಕೊಳಚೆಯಲ್ಲಿ ಬದುಕಿತ್ತೇ? 5 ಸಾವಿರ ವರ್ಷ ಜೀವಂತವಾಗಿರುವ ನಾಗರಿಕತೆ ಏನನ್ನೂ ಕಲಿಯಲೇ ಇಲ್ಲವೇ? ಏನೂ ಸಾಧನೆ ಮಾಡಲಿಲ್ಲವೇ ಎಂಬ ಸಾಮಾನ್ಯ ಪ್ರಶ್ನೆಯನ್ನೂ ನಾವು ಕೇಳಿಕೊಳ್ಳಲಿಲ್ಲ. ಅಸಲಿಗೆ ಅತ್ಯಂತ ನಾಗರಿಕ ಸುಸಂಪನ್ನ, ವೈಭವಪೂರ್ಣ, ಸಮಾನತೆಗೆ ಹತ್ತಿರವಾಗಿದ್ದ ಸಮಾಜವೊಂದು ಇಲ್ಲಿತ್ತು. ಅದು ಸತತ ದಾಳಿಕೋರರ ಕಾರಣದಿಂದ ಹಾನಿಗೀಡಾಯಿತು. ಈ ಪ್ರಕ್ರಿಯೆಗೆ ಕೊನೆಯ ದಾಳಿಕೋರರು ಕೊನೆಯ ಮೊಳೆ ಹೊಡೆದರು. ಅವರು ಭಾರತಕ್ಕೆ ಕೊಟ್ಟಿದ್ದಕ್ಕಿಂತ ಕೊಳ್ಳೆ ಹೊಡೆದದ್ದೇ ಹೆಚ್ಚು. ಕೊಟ್ಟ ಜ್ಞಾನಕ್ಕಿಂತ ವಿಸ್ಮೃತಿಗೊಳಿಸಿದ್ದೇ ಹೆಚ್ಚು.

Republic Day

ಇಂತಹ ಸವಾಲಿನ ನಡುವೆ ದೇಶವನ್ನು ಕಟ್ಟುವ ಕಾರ್ಯ ಆಗಿನ ನಾಯಕರ ಮೇಲೆ ಏರಿತು. 1946ರಿಂದ 1949ರ ನಡುವೆ ದೇಶದ ಅತ್ಯಂತ ಜ್ಞಾನವಂತ 300 ಮೆದುಳುಗಳು ಸಂವಿಧಾನವನ್ನು ರಚಿಸುವ ಸಂಬಂಧ ಸತತ ಚರ್ಚೆ ನಡೆಸಿದವು. 1950ರಲ್ಲಿ ಸಂವಿಧಾನ (constitution) ಜಾರಿಗೆ ಬಂದ ಕೂಡಲೆ, 21 ವರ್ಷ ಮೀರಿದ ಎಲ್ಲರಿಗೂ ಮತದಾನದ ಹಕ್ಕು ದೊರಕಿತು. ತನ್ನನ್ನು ತಾನು ಪ್ರಜಾಪ್ರಭುತ್ವದ ಹರಿಕಾರ ಎಂದುಕೊಳ್ಳುವ ಅಮೆರಿಕದಲ್ಲಿಯೂ ಪ್ರಾರಂಭದಲ್ಲಿ ಎಲ್ಲ ನಾಗರಿಕರಿಗೆ ಹಕ್ಕು ಕೊಟ್ಟಿರಲಿಲ್ಲ. ಆನಂತರವೂ ಮಹಿಳೆಯರಿಗೆ ಹಕ್ಕು ನೀಡಲು ಹೋರಾಟವನ್ನೇ ನಡೆಸಬೇಕಾಯಿತು. ಆದರೆ ಭಾರತದಲ್ಲಿ ಈ ಬಗ್ಗೆ ಕೆಲವು ಚರ್ಚೆಗಳು ನಡೆದವಾದರೂ ಕೊನೆಗೆ ಅನುಮಾನವೇ ಇಲ್ಲದಂತೆ ಎಲ್ಲರಿಗೂ ಸಮಾನವಾಗಿ ಮತದಾನದ ಹಕ್ಕು ಜಾರಿ ಮಾಡಲಾಯಿತು. ರಾಜ್ಯಗಳ ರಚನೆ ಮಾಡಲಾಯಿತು, ಕೃಷಿ ಹಾಗೂ ವಿದ್ಯುತ್ ಉತ್ಪಾದನೆಗಾಗಿ ಜಲಾಶಯ ನಿರ್ಮಾಣ ಮಾಡಲಾಯಿತು. ಜಲಾಶಯಗಳೇ ಆಧುನಿಕ ದೇವಾಲಯಗಳು ಎಂದರು ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ. ವಿವಿಧ ಪಂಚವಾರ್ಷಿಕ ಯೋಜನೆಗಳಲ್ಲಿ ಒಂದೊಂದು ವಲಯಕ್ಕೆ ಒತ್ತು ನೀಡಲಾಯಿತು. ಜಲಾಶಯಗಳು, ಕೈಗಾರಿಕೆ ಸೇರಿ ಒಂದೊಂದೇ ಕ್ಷೇತ್ರಗಳು ವಿಕಸನವಾಗುತ್ತ ಬಂದವು. ಇದೆಲ್ಲದರ ನಡುವೆ ಜರುಗಿದ ಪಾಕ್ ವಿರುದ್ಧ ಹಾಗೂ ಚೀನಾ ವಿರುದ್ಧದ ಯುದ್ಧಗಳು, ಬಾಂಗ್ಲಾ ವಿಮೋಚನಾ ಯುದ್ಧ, ಸತತ ಬರಗಾಲ, ಸಾಂಕ್ರಾಮಿಕ ರೋಗಗಳು… ಇಷ್ಟೆಲ್ಲ ಸಮಸ್ಯೆಗಳ ನಡುವೆಯೇ ವಿಜ್ಞಾನ ಹಾಗೂ ಸಂಶೋಧನೆಗಳಿಗೂ ಒಂದಷ್ಟು ಪ್ರಮಾಣದಲ್ಲಿ ನೀಡಿದ ಪ್ರೋತ್ಸಾಹಗಳಿಂದ ಇಸ್ರೊ, ಡಿಆರ್‌ಡಿಒದಂತಹ ಹೆಮ್ಮೆಯ ಸಂಸ್ಥೆಗಳು ಇಂದು ನಿಲ್ಲಲು ಕಾರಣವಾದವು.

ಇಷ್ಟೆಲ್ಲ ಸಾಧ್ಯವಾಗಿದ್ದು ಪ್ರಮುಖವಾಗಿ ಇಲ್ಲಿನ ರಾಜಕೀಯ ವ್ಯವಸ್ಥೆಯ ಕಾರಣಕ್ಕಾಗಿಯೆ. ಕ್ಷೀರ ಕ್ರಾಂತಿ, ಹಸಿರು ಕ್ರಾಂತಿ, ಟೆಲಿಕಾಂ ಕ್ರಾಂತಿಗಳು ಆರಂಭದಲ್ಲಿ ವಿಜ್ಞಾನಿಗಳ ಅಥವಾ ಸಾಮಾಜಿಕ ಸೇವಕರ ವಿಚಾರವೇ ಆದರೂ ಅದು ದೇಶಾದ್ಯಂತ ಅನ್ವಯವಾಗಿದ್ದು ರಾಜಕೀಯ ಶಕ್ತಿಯ ಕಾರಣಕ್ಕಾಗಿಯೆ. ಇಷ್ಟೆಲ್ಲ ಸವಾಲುಗಳ ನಡುವೆ ದೇಶವನ್ನು ಮುನ್ನಡೆಸಿದರಾದರೂ ನಮ್ಮಲ್ಲಿ ಅನೇಕ ನ್ಯೂನತೆಗಳು ನುಸುಳಿದವು. ನುಸುಳಿದವು ಎನ್ನುವುದಕ್ಕಿಂತಲೂ, ತಮ್ಮ ನಿಲುವನ್ನೇ ಜನರಿಗೆ ಒಪ್ಪಿಸುವ ಸಲುವಾಗಿ ದೇಶದ ದಿಕ್ಕನ್ನೇ ಒಂದೆಡೆಗೆ ಕೊಂಡೊಯ್ಯುವ ಕೆಲಸ ಆಯಿತು.

ನಮ್ಮ ದೇಶದ ಮೇಲೆ ಕೊನೆಯದಾಗಿ ಆಕ್ರಮಣ ಮಾಡಿದವರ ಮಾರ್ಗವನ್ನೇ ನಮ್ಮವರೂ ಮುಂದುವರಿಸಿದರು. ನಮ್ಮದೇ ಇತಿಹಾಸವನ್ನು ಮರೆಮಾಚಿ ಸುಳ್ಳನ್ನು ವಿಜೃಂಭಿಸುವುದು. ಭಾರತ ಎಂದರೆ ಅನಾಗರಿಕತೆ, ಇದಕ್ಕೆ ನಾಗರಿಕತೆಯನ್ನು ಬೇರೆ ದೇಶದಿಂದ, ವಿಶೇಷವಾಗಿ ಯುರೋಪಿನಿಂದ ಎರವಲು ತರಬೇಕು ಎಂದು ಬಿಂಬಿಸಲಾಯಿತು. ನಮ್ಮ ದೇಶದ ಬುದ್ಧಿಜೀವಿ ವಲಯ ಎನ್ನಿಸಿಕೊಂಡವರ ಬಾಯಲಿ ವಿದೇಶಿ ತತ್ವಶಾಸ್ತ್ರಜ್ಞರು, ವಿಜ್ಞಾನಿಗಳ ಕುರಿತು ಹೊರಬರುವ ಮಾತುಗಳ ಶೇ.10ರಷ್ಟೂ ಭಾರತೀಯ ತತ್ವಶಾಸ್ತ್ರಜ್ಞರ, ವಿಜ್ಞಾನಿಗಳ ಕುರಿತು ಬರಲಿಲ್ಲ. ಯುರೋಪಿನ ಥರ್ಡ್ ರೇಟ್ ಕಾದಂಬರಿಕಾರನನ್ನು ಹೊಗಳಿದವರು ಇಲ್ಲಿನ ಕಾಳಿದಾಸನ ಕಡೆಗೂ ನೋಡಲಿಲ್ಲ. ದೇಶದ ಖ್ಯಾತ ಪತ್ರಕರ್ತ ಅರುಣ್ ಶೌರಿಯವರು ಇಂಥವರ ಕುರಿತೇ ʼಎಮಿನೆಂಟ್ ಹಿಸ್ಟಾರಿಯನ್ಸ್ʼ ಎಂಬ ಪುಸ್ತಕವನ್ನು ಬರೆದಿದ್ದಾರೆ. ಭಾರತದ ಇತಿಹಾಸ ಎಂದರೆ ಸೋಲಿನ ಇತಿಹಾಸ. ಇಲ್ಲಿ ದಾಳಿ ಮಾಡದೇ ಇರುವವರೇ ಮೂರ್ಖರು. ಇಲ್ಲಿನ ಜನರಿಗೆ ಗೆಲ್ಲುವುದೇ ಗೊತ್ತಿಲ್ಲ ಎಂದು ಹೇಳಿ ಹೇಳಿ ಭಾರತೀಯರನ್ನು ಹೇಡಿಗಳನ್ನಾಗಿ ಮಾಡಿದರು. ಇವರುಗಳನ್ನು ಸಂಭಾಳಿಸಿಕೊಂಡರೆ ಸಾಕು ಸರ್ಕಾರಗಳು ಸಲೀಸಾಗಿ ನಡೆಯುತ್ತಿದ್ದವು.

Republic Day

ಇವರ ನಿರ್ಧಾರಗಳಿಗೆ ವಿರುದ್ಧವಾಗಿ ನಡೆಯಲು ಹೋದರೆ ಆ ಸರ್ಕಾರಗಳಿಗೇ ಸಂಚಕಾರ ತರುವ ಸ್ಥಿತಿಯಿತ್ತು. ಇದನ್ನು ನಮ್ಮ ರಾಜಕಾರಣಿಗಳು ಚೆನ್ನಾಗಿ ಅರಿತರು. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಇಂಥವರನ್ನೆಲ್ಲ ಕೂರಿಸಿ ಸಂಶೋಧನೆಗೆ ಹಣ ಸಹಾಯ ಮಾಡಿದರು, ವಿದೇಶಗಳಿಗೆ ಅಧ್ಯಯನ ಪ್ರವಾಸಗಳಿಗೆ ಕಳಿಸಿದರು, ಬಿರುದು ಬಾವಲಿಗಳನ್ನು ಸ್ಥಾಪಿಸಿ ದಯಪಾಲಿಸತೊಡಗಿದರು. ಇದಕ್ಕೆ ಸಂತುಷ್ಠರಾದ ಎಮಿನೆಂಟ್ ಹಿಸ್ಟಾರಿಯನ್ಗಳು ಸರ್ಕಾರವನ್ನು ಹಾಡಿ ಹೊಗಳುತ್ತಿದ್ದರೆ ಅತ್ತ ತೆರೆ ಮರೆಯಲ್ಲಿ ಇಡೀ ರಾಜಕೀಯ ವ್ಯವಸ್ಥೆಯನ್ನ ಕುಟುಂಬದ ಉದ್ಯೋಗ ಮಾಡಿಕೊಳ್ಳಲಾಯಿತು.

ಇಡೀ ದೇಶವೇ ತಮ್ಮ ಉದ್ಯಮ ಎನ್ನುವಂತೆ ನಡೆದುಕೊಂಡರು. ಇಲ್ಲಿನ ದೇಶ, ಸಂಸ್ಕೃತಿಯನ್ನು ರಕ್ಷಣೆ ಮಾಡುವ ಹೊಣೆಯನ್ನು ಕೆಲವರಷ್ಟೆ ಸ್ವೀಕರಿಸಿದರು. ಕರ್ನಾಟಕದಂತಹ ಕೆಲವು ರಾಜ್ಯಗಳು ಅಭಿವೃದ್ಧಿ ಪಥದಲ್ಲಿ ಮುಂದೆ ಸಾಗಿದವು. ಕರ್ನಾಟಕದಲ್ಲೂ ವಿಶೇಷವಾಗಿ ಮೈಸೂರು ಮಹಾರಾಜರ ಆಳ್ವಿಕೆಯಲ್ಲಿದ ಹಳೆ ಮೈಸೂರು ಪ್ರಾಂತ್ಯದಲ್ಲಿ ಶಿಕ್ಷಣ, ಆರೋಗ್ಯ, ಸಾಮಾಜಿಕ ಸುಧಾರಣೆಗಳು ಸಾಕಷ್ಟು ನಡೆದವು. ಮಹಾರಾಷ್ಟ್ರಕ್ಕೆ ಅಂಟಿಕೊಂಡಂತೆ ಬಾಂಬೆ ಪ್ರಾಂತ್ಯದಲ್ಲಿದ್ದ ಪ್ರದೇಶಗಳೂ ಒಂದಷ್ಟು ಉತ್ತಮ ಜೀವನದ ಫಲ ಉಂಡವು. ಆದರೆ ಹೈದರಾಬಾದ್ ನಿಜಾಮನ ಆಳ್ವಿಕೆಯಲ್ಲಿದ್ದ ಈಗಿನ ಕಲ್ಯಾಣ ಕರ್ನಾಟಕ ಭಾಗವಂತೂ ಉತ್ತಮ ಜೀವನ ಎಂದರೆ ಏನೆಂಬುದನ್ನೇ ಅರಿಯದಂತೆ ಮಾಡಲಾಯಿತು. ಸ್ವಾತಂತ್ರ್ಯಾನಂತರದಲ್ಲೂ ಕಲ್ಯಾಣ ಕರ್ನಾಟಕದಂತಹ ಅನೇಕ ಪ್ರದೇಶಗಳು ದೇಶದಲ್ಲಿ ಇದ್ದೇ ಇದ್ದವು. ಭಾಷಾವಾರು ಪ್ರಾಂತ್ಯಗಳು ರಚನೆಯಾದ ನಂತರವೂ ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡಿನಂತಹ ಸಾಂಸ್ಕೃತಿಕ ಉನ್ನತ ಸ್ಥಾನದಲ್ಲಿದ್ದ ರಾಜ್ಯಗಳನ್ನು ಬೇರೆ ಯಾವುದೋ ಸಿದ್ಧಾಂತದ ಪಡಿಯಚ್ಚು ಮಾಡುವ ಪ್ರಯತ್ನ ನಡೆಯಿತು. ಬಡವರು ಶ್ರೀಮಂತರೆಂಬ ಬೈನರಿಯಲ್ಲೇ ಜಗತ್ತನ್ನು ಕಾಣುವ ಕಮ್ಯುನಿಸ್ಟರು ಪಶ್ಚಿಮ ಬಂಗಾಳವನ್ನು ಬರಗಾಲಕ್ಕೆ ತಳ್ಳಿದರು. ಇಡೀ ದೇಶಕ್ಕೆ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಕೇಂದ್ರಗಳಲ್ಲೊಂದಾದ ಕ್ರಿಯಾಶೀಲ ಪ್ರದೇಶ ಅದು. ರಾಮಕೃಷ್ಣ ಪರಮಹಂಸರು, ಶಾರದಾ ಮಾತೆ, ಸ್ವಾಮಿ ವಿವೇಕಾನಂದರು, ಯೋಗಿ ಅರವಿಂದರು, ಬಂಕಿಮ ಚಂದ್ರರು, ರವೀಂದ್ರನಾಥ ಠಾಗೋರಂಥವರನ್ನು ನೀಡಿದ ನೆಲ ಅದು. ಬ್ರಿಟಿಷರ ಕಾಲದಲ್ಲೇ ಭಾರತದ ಮ್ಯಾಂಚೆಸ್ಟರ್ ಎನ್ನಿಸಿಕೊಂಡಿದ್ದ ಈ ಪ್ರದೇಶ, ದಶಕಗಳ ಕಮ್ಯುನಿಸ್ಟ್ ಆಳ್ವಿಕೆಯಲ್ಲಿ ಉದ್ಯಮಗಳನ್ನು ಕಳೆದುಕೊಂಡಿದ್ದಷ್ಟೆ ಅಲ್ಲದೆ ತನ್ನ ಅಸ್ತಿತ್ವವನ್ನೇ ಮರೆತುಹೋಯಿತು. ಸ್ವಾತಂತ್ರ್ಯದ ಪೂರ್ವದಲ್ಲಿ ದೇಶದ ಗಮನ ಸೆಳೆಯುತ್ತಿದ್ದ ಈಗಿನ ಪಶ್ಚಿಮ ಬಂಗಾಳ, ಕಳೆದ 75 ವರ್ಷದಲ್ಲಿ ದೇಶದ ಅಭಿವೃದ್ಧಿಗೆ ನೀಡಿದ ಮಹತ್ವದ ಕೊಡುಗೆಗಳಲ್ಲಿ ಭಾಗಿಯಾಗಿದೆ ಎಂದು ಹೇಳುವುದು ಕಷ್ಟ.

Republic Day

ಸಾಂಸ್ಕೃತಿಕವಾಗಿ ವೈಭವಯುತವಾಗಿದ್ದ ಕೇರಳದಲ್ಲಿದ್ದ ಅಸ್ಪೃಶ್ಯತೆಯಂತಹ ಪಿಡುಗನ್ನು ತೊಲಗಿಸಲು ನಾರಾಯಣಗುರುಗಳೂ ಸೇರಿ ಅನೇಕರು ಶ್ರಮಿಸಿದರು. ಆದರೆ 75 ವರ್ಷದಲ್ಲಿ ಇಲ್ಲಿನ ರಾಜಕಾರಣಿಗಳು ಮಾಡಿದ ಕೆಲಸವೆಂದರೆ ವಿದೇಶಗಳಿಗೆ ರಫ್ತು ಮಾಡಲು ಉತ್ಪನ್ನಗಳ ಫ್ಯಾಕ್ಟರಿ ತೆರೆಯುವ ಬದಲಿಗೆ ಮನುಷ್ಯರನ್ನೇ ಬೇರೆಡೆಗೆ ರಫ್ತು ಮಾಡುವ ಅನಿವಾರ್ಯತೆಗೆ ತಂದಿಟ್ಟಿದ್ದು. ಶಿಕ್ಷಣ, ಆರೋಗ್ಯದಲ್ಲಿ ತಾವೇ ಮೊದಲು ಎಂದು ಹೇಳಿಕೊಳ್ಳುವ ಕೇರಳವು ಇತ್ತೀಚಿನ ವರ್ಷಗಳಲ್ಲಿ ಭಯೋತ್ಪಾದಕ ಮನಸ್ಥಿತಿಯನ್ನು ಆಮದು ಮಾಡಿಕೊಳ್ಳುವ ಕೇಂದ್ರವಾಗುತ್ತಿರುವುದು ಆತಂಕಕಾರಿ. ವಿಶ್ವದ ಎಲ್ಲೇ ಆತಂಕವಾದಿ ದಾಳಿ ನಡೆದರೆ ಅನೇಕ ಬಾರಿ ಅದಕ್ಕೊಂದು ಕೇರಳದ ಸಂಬಂಧ ಇರುತ್ತದೆ ಎನ್ನುವಂತೆ ಆಗಿದೆ.

ಇದನ್ನೂ ಓದಿ: ವಿಸ್ತಾರ ಅಂಕಣ: ʼಬಿಟ್ಟುಕೊಡುವೆʼ ಎನ್ನುವವರು ʼನನಗೂ ಬೇಕುʼ ಎನ್ನುವಂತೆ ಮಾಡಿದ್ದು ರಾಜಕಾರಣಿಗಳು

ಇನ್ನು, ಸಾಂಸ್ಕತಿಕ, ಅಧ್ಯಾತ್ಮಿಕವಾಗಿ ಹಾಗೂ ರಾಜಕೀಯ ಆಂದೋಳನಗಳಲ್ಲೂ ಸಕ್ರಿಯವಾಗಿದ್ದ ತಮಿಳುನಾಡನ್ನು ಅದ್ಯಾವುದೋ ಸುಳ್ಳು ಸಿದ್ಧಾಂತಕ್ಕೆ ಸಿಲುಕಿ ನಲುಗಿಸಲಾಯಿತು. ಆರ್ಯರು ಎಂಬುವವರು ದ್ರಾವಿಡರ ಮೇಲೆ ದಾಳಿ ನಡೆಸಿದರು ಎಂಬ ಸುಳ್ಳು ಅಡಿಪಾಯದ ಮೇಲೆ ಕಟ್ಟಿದ ಕೋಟೆ ಇನ್ನೂ ಗಟ್ಟಿಯಾಗಿಯೇ ಇದೆ. ಪ್ರತಿ ಭಾರತೀಯರ ಆರಾಧ್ಯ ದೈವವೇ ಆದ ಶ್ರೀರಾಮ, ಸೀತಾಮಾತೆಯನ್ನೂ ಅವಮಾನಿಸುವ ಹೀನ ಕೃತ್ಯಕ್ಕೆ ಇಳಿದರು ಅಲ್ಲಿನ ರಾಜಕಾರಣಿಗಳು. ಇಷ್ಟೆಲ್ಲ ಅಪಸವ್ಯದ ನಡುವೆಯೇ ತಮಿಳುನಾಡಿನ ಕೈಗಾರಿಕೆ ಸ್ಥಾಪನೆ, ಬೆಳವಣಿಗೆ, ದೇಶದ ಜಿಡಿಪಿಗೆ ಕೊಡುಗೆ ಇದೆ ಎನ್ನುವುದಾದರೆ ಅದು ಇಂದಿಗೂ ತಮಿಳುನಾಡಿನ ಜನರಲ್ಲಿರುವ ಸಾಧಿಸುವ ಛಲ, ಕಾಯಕದ ಬಲದಿಂದ ಮಾತ್ರ.

ಹೀಗೆ ದೇಶ ವಿಭಜನೆಯಿಂದ ಮೊದಲುಗೊಂಡು ರಾಜ್ಯಗಳ ನಿರ್ವಹಣೆವರೆಗೆ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಕುಟುಂಬ ರಾಜಕಾರಣಗಳನ್ನು ಭಾರತೀಯರಿಗೆ ಒಗ್ಗಿಸಿಬಿಟ್ಟಿದ್ದಾರೆ. ದೇಶ ನಡೆಯುವ ರೀತಿಯೇ ಇದು ಎನ್ನುವ ಭ್ರಮೆ ಮೂಡಿಸಿದ್ದಾರೆ. ಇಂದು ಯಾರಾದರೊಬ್ಬ ನಾಯಕ ನಿಸ್ವಾರ್ಥವಾಗಿ ರಾಜಕಾರಣ ಮಾಡುತ್ತಾನೆ ಎಂದರೆ ನಂಬದ ಸ್ಥಿತಿ ಎದುರಾಗಿದೆ.

ಇಷ್ಟೆಲ್ಲದರ ನಡುವೆಯೂ ಜನರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟಿದ್ದಾರೆ. ಇಲ್ಲಿನ ರಾಜಕಾರಣಿಗಳ ಮುಖ ನೋಡಿಕೊಂಡು ಜನರು ಮತ ನೀಡುತ್ತಿದ್ದಾರೆ ಎಂದು ತಿಳಿದರೆ ಅದು ತಪ್ಪು. ಪ್ರಜಾಪ್ರಭುತ್ವ ಎನ್ನುವುದು ಇಲ್ಲಿನ ಜನರ ಜೀನ್‌ನಲ್ಲಿಯೇ ಇದೆ. ರಾಜಪ್ರಭುತ್ವದಲ್ಲೂ ನಿರಂಕುಶಪ್ರಭುತ್ವವನ್ನು ಬೆಂಬಲಿಸಿದವರಲ್ಲ ಭಾರತೀಯರು. ಅಲ್ಲಿಯೂ ಪ್ರಜಾಪ್ರಭುತ್ವದ ಅನೇಕ ಅಂಶಗಳು ಇರುವಂತೆ ನೋಡಿಕೊಳ್ಳಲಾಗುತ್ತಿತ್ತು. ಈ ನಂಬಿಕೆಯನ್ನಿಟ್ಟವರಿಗೆ ರಾಜಕಾರಣಿಗಳು ಕೊಟ್ಟಿದ್ದು ಕೇವಲ ಮೋಸ, ವಚನ ಭ್ರಷ್ಟತೆ, ಚುನಾವಣೆ ಸಮಯದಲ್ಲಿ ಮದ್ಯ, ಹಣದ ಸರಬರಾಜು. ಕೊನೆಗೆ, ಜನರೇ ಲಂಚ ಪಡೆದರೆ ನಾವೇನು ಮಾಡುವುದು ಎಂಬ ರಾಜಕಾರಣಿಗಳಿಂದ ಬಿರುದು.

ಮುಂದಿನ 25 ವರ್ಷಗಳ ಅಮೃತಕಾಲದಲ್ಲಿ ಇಂತಹ ಅಪಸವ್ಯಗಳಿಂದ ನಾವೆಲ್ಲರೂ ದೂರಾಗುವಂತಾಗಲಿ. ಯಾವುದೇ ಆಮದು ಮಾಡಿಕೊಂಡ ಇಸಂಗಳ ಬದಲಿಗೆ ಇಲ್ಲಿನ ನಿಜವಾದ ಮಣ್ಣಿನ, ಇತಿಹಾಸದ ಅರಿವು ಜನರಲ್ಲಿ ಮೂಡುವಂತಾಗಲಿ. ಇದಕ್ಕಾಗಿ ನಾವೆಲ್ಲರೂ ಶ್ರಮಿಸುವಂತಾಗಲಿ.

ಇದನ್ನೂ ಓದಿ: ವಿಸ್ತಾರ ಅಂಕಣ: ಮುಸ್ಲಿಂ ಮಹಿಳೆಯರ ಜತೆ ರಕ್ಷಾ ಬಂಧನ ಹಾಗೂ ಸಂವಿಧಾನದ ಆಶಯ

Exit mobile version