Site icon Vistara News

ವಿಸ್ತಾರ ಅಂಕಣ: ಮಸೂರಿಯಲ್ಲಿ ಕಲಿತ ಪಾಠವನ್ನು ಈ ಅಧಿಕಾರಿಗಳಿಗೆ ಮತ್ತೆ ನೆನಪಿಸುವವರು ಯಾರು?

IAS IPS

ಭಾರತವು ಸ್ವತಂತ್ರವಾದಾಗ, ಮುಂದಿನ ಆಡಳಿತ ಹೇಗಿರಬೇಕು ಎಂಬ ಅನೇಕ ಚರ್ಚೆಗಳು ನಡೆದವು. ಒಂದರ ಬಗ್ಗೆ ಎಲ್ಲರಿಗೂ ಒಪ್ಪಿಗೆ ಇತ್ತು, ಹಾಗಾಗಿ ಅದರ ಬಗ್ಗೆ ಚರ್ಚೆ ಆಗಲಿಲ್ಲ. ಅದೆಂದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೇ ಭಾರತ ಮುನ್ನಡೆಯಬೇಕು ಎನ್ನುವುದರಲ್ಲಿ ಯಾರಲ್ಲೂ ಎಳ್ಳಷ್ಟೂ ಸಂಶಯ, ಅನುಮಾನ ಇರಲಿಲ್ಲ. ಭಾರತಕ್ಕೆ ಪ್ರಜಾಪ್ರಭುತ್ವವನ್ನು ಬಿಟ್ಟರೆ ಬೇರೆ ವ್ಯವಸ್ಥೆಯ ಅವಶ್ಯಕತೆಯಿಲ್ಲ ಎಂದು ಎಲ್ಲರೂ ತೀರ್ಮಾನಿಸಿದ್ದರು. ಏಕೆಂದರೆ ಇಡೀ ಜಗತ್ತಿಗೆ ಲೋಕತಾಂತ್ರಿಕ ವ್ಯವಸ್ಥೆಯನ್ನು ಪರಿಚಯಿಸಿದ್ದೇ ಭಾರತ.

ಅತ್ಯಂತ ಸಾಮಾನ್ಯ ಜನರ ಆಶೋತ್ತರಗಳನ್ನು ಆಲಿಸಬೇಕು ಎಂಬ ಭಗವಾನ್ ಶ್ರೀರಾಮ ಚಂದ್ರನಿಂದ, ಎಲ್ಲ ವೃತ್ತಿಗಳಿಗೂ, ಲಿಂಗಭೇದವಿಲ್ಲದೆ ಪ್ರಾನಿನಿಧ್ಯ ನೀಡಬೇಕು ಎಂದು ಸಾರಿದ ಭಗವಾನ್ ಬಸವಣ್ಣನವರೆಗೂ ಭಾರತ ಅನುಸರಿಸಿದ್ದು ಪ್ರಜಾಪ್ರಭುತ್ವವನ್ನೇ. ಹಾಗಾಗಿ ಯಾರೂ ಸಹ ಪ್ರಜಾಪ್ರಭುತ್ವ ಬೇಕೆ ಎಂಬ ಚರ್ಚೆಗೆ ಹೋಗಲಿಲ್ಲ. ಚರ್ಚೆಯಾಗಿದ್ದು, ಆ ಪ್ರಜಾಪ್ರಭುತ್ವ ವ್ಯವಸ್ಥೆ ಹೇಗಿರಬೇಕು ಎಂಬ ಕುರಿತು ಅಷ್ಟೆ. ಎರಡು ಪಕ್ಷದ ರಾಜಕೀಯ ಸಾಕೆ? ಪ್ರೆಸಿಡೆನ್ಷಿಯಲ್ ರೀತಿಯ ವ್ಯವಸ್ಥೆ ಬೇಕೆ, ಬಹು ಪಕ್ಷೀಯ ವ್ಯವಸ್ಥೆ ಬೇಕೆ ಎಂಬ ಚರ್ಚೆ ನಡೆದು ಈಗಿನ ಬಹುಪಕ್ಷೀಯ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳಲಾಯಿತು.

ಸಂವಿಧಾನ ರಚನೆ ಸಮಯದಲ್ಲಿ ಹೆಚ್ಚು ಚರ್ಚೆಯಾಗದೆ ಹಾಗೆಯೇ ಮುಂದುವರಿದದ್ದು ಎಂದರೆ ಸೇನೆ ಹಾಗೂ ಅಧಿಕಾರಿ ವ್ಯವಸ್ಥೆ(ಅಂದರೆ ಈಗಿನ ನಮ್ಮ ಸಂವಿಧಾನದ ಪ್ರಕಾರ ಕಾರ್ಯಾಂಗ). ಸೇನೆಯೂ ಬ್ರಿಟಿಷ್ ಕಾಲದ ಇತಿಹಾಸವನ್ನು ತನ್ನೊಂದಿಗೇ ಒಯ್ಯಿತಾದರೂ ಅದು ಬ್ರಿಟಿಷ್ ಸಮಯದಲ್ಲಿನ ಮಾನಸಿಕತೆಯನ್ನು ಉಳಿಸಿಕೊಳ್ಳಲು ಹೋಗಲಿಲ್ಲ. ಒಂದು, ಸೇನೆಗೆ ಆ ರೀತಿಯ ಮನಃಸ್ಥಿತಿಯನ್ನು ಉಳಿಸಿಕೊಳ್ಳಲು ಮನಸ್ಸಿರಲಿಲ್ಲ, ಎರಡನೆಯದು ಅಂತಹದ್ದಕ್ಕೆ ಸಮಯವೂ ಸಿಗಲಿಲ್ಲ. ಸ್ವಾತಂತ್ರ್ಯದ ಮರು ಕ್ಷಣದಿಂದಲೇ ಪಾಕಿಸ್ತಾನವು ನಮ್ಮ ಮೇಲೆ ನೇರವಾಗಿ ಹಾಗೂ ಪರೋಕ್ಷವಾಗಿ ಯುದ್ಧವನ್ನು ಸಾರಿತು. ಹಾಗಾಗಿ ನಮ್ಮ ಸೇನೆಯು ಕಾಲದ ಅಗತ್ಯಕ್ಕೆ ಅನುಗುಣವಾಗಿ ತನ್ನನ್ನು ಸಜ್ಜುಗೊಳಿಸಿಕೊಳ್ಳುತ್ತ ಗಡಿಯ ರಕ್ಷಣೆ ಮಾಡುತ್ತ ಬಂದಿದೆ. ಆದರೆ ಕಾರ್ಯಾಂಗಕ್ಕೆ ಅಂತಹ ಪರಿಸ್ಥಿತಿ ಬರಲೇ ಇಲ್ಲ.

ಬ್ರಿಟಿಷ್ ವಸಾಹತುಶಾಹಿ ಮಾನಸಿಕತೆಯಿಂದ ನಮ್ಮ ಕಾರ್ಯಾಂಗವನ್ನು, ಅದರಲ್ಲೂ ಅಖಿಲ ಭಾರತೀಯ ಸೇವೆಯನ್ನು ಹೊರತರಲು ಇಲ್ಲಿವರೆಗೆ ಸಾಧ್ಯವಾಗಲೇ ಇಲ್ಲ. “ತಾನೂ ಸಂವಿಧಾನದ ಅಂಗ ಎಂಬುದ ಮರೆಯಿತೇ ಕಾರ್ಯಾಂಗ?” ಎಂದು ಈ ಹಿಂದೆ ನಾನೇ ಒಂದು ಲೇಖನ ಬರೆದಿದ್ದೆ. ಕಾರ್ಯಾಂಗವೂ ತಾನೊಂದು ಸಾಂವಿಧಾನಿಕ ಅಂಗ ಎಂಬುದನ್ನು ಮರೆದು, ತಾನು ಶಾಸಕಾಂಗಕ್ಕೆ ಅಡಿಯಾಳಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅದರಲ್ಲಿ ಚರ್ಚೆ ನಡೆಸಿದ್ದೆವು. ಕಾರ್ಯಾಂಗವು ತನ್ನ ಕೆಲಸ ಮಾಡಲು ಶಾಸಕಾಂಗದ ಅಥವಾ ನ್ಯಾಯಾಂಗದ ಒಪ್ಪಿಗೆಗೆ ಕಾದು ಕೂರುವುದು ಸರಿಯಲ್ಲ ಎಂದ ಚರ್ಚೆಯೂ ನಡೆದಿತ್ತು. ಇಂದು ಈ ಸಮಸ್ಯೆಯ ಮತ್ತೊಂದು ಮಗ್ಗುಲಿಗೆ ಹೊರಳಿದ್ದೇವೆ.

ಕರ್ನಾಟಕದ ಒಬ್ಬ ಐಪಿಎಸ್ ಅಧಿಕಾರಿ, ಒಬ್ಬ ಐಎಎಸ್ ಅಧಿಕಾರಿ ಪರಸ್ಪರರ ವಿರುದ್ಧ ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತ ಇಡೀ ವ್ಯವಸ್ಥೆಯೇ ನಗೆಪಾಟಲಿಗೀಡಾಗಿದೆ. ಒಬ್ಬರು ತಮ್ಮ ವಿರುದ್ಧ ವೈಯಕ್ತಿಕ ಆರೋಪ ಮಾಡಲಾಗುತ್ತಿದೆ ಎಂದರೆ, ಇದು ವೈಯಕ್ತಿಕವಾದದ್ದಲ್ಲ ಭ್ರಷ್ಟಾಚಾರಕ್ಕೆ ಸಂಬಂಧಿಸಿದ್ದು ಎನ್ನುತ್ತಿದ್ದಾರೆ. ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಾದ ತಕ್ಷಣ ಉತ್ತರಾಖಂಡದ ಮಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿ (LBSNAA) ತರಬೇತಿ ನೀಡಲಾಗುತ್ತದೆ. ಒಟ್ಟಾರೆ ಸರ್ಕಾರ ಹೇಗೆ ನಡೆಯುತ್ತದೆ ಎನ್ನುವುದರಿಂದ ಅಧಿಕಾರಿಗಳು ವೈಯಕ್ತಿಕ ನಡವಳಿಕೆ ಹೇಗಿರಬೇಕು ಎನ್ನುವುದರವರೆಗೆ ತರಬೇತಿ ವಿಸ್ತಾರವಾಗಿರುತ್ತದೆ. ಆ ಸಂಸ್ಥೆಯ ಲಾಂಛನದ ಕೆಳಗಿನ ಘೋಷವಾಕ್ಯ ಕೇಳಿದರೆ, ಅದನ್ನು ಈಗಿನ ಸನ್ನಿವೇಶನಕ್ಕೆ ಕಲ್ಪಿಸಿಕೊಂಡರೆ ನಿಜಕ್ಕೂ ಬೇಸರವಾಗುತ್ತದೆ. ʼಶೀಲಂ ಪರಮ ಭೂಷಣಂʼ ಎನ್ನುವುದು LBSNAA ಘೋಷವಾಕ್ಯ.

ಈ ಸಾಲುಗಳನ್ನು ಎಲ್ಲಿಂದ ಪಡೆದುಕೊಳ್ಳಲಾಗಿದೆ ಎನ್ನುವುದನ್ನು ನೋಡೋಣ. ಉಜ್ಜಯಿನಿಯ ರಾಜ, ಮಹಾನ್ ಸಂಸ್ಕೃತ ಕವಿಯೂ ಆಗಿದ್ದವ, ನಂತರ ವೈರಾಗ್ಯ ಧರಿಸಿ ಸನ್ಯಾಸಿಯಾದ ಭರ್ತೃಹರಿಯು ʼಶತಕತ್ರಯʼ ಹೆಸರಿನ ಗ್ರಂಥ ರಚಿಸಿದ್ದಾನೆ. ಈ ಗ್ರಂಥವನ್ನು ನೀತಿ ಶತಕಂ, ಶೃಂಗಾರಶತಕಂ ಹಾಗೂ ವೈರಾಗ್ಯಶತಕಂ ಎಂದು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಈ ಮೂರೂ ಖಂಡಗಳಲ್ಲಿ ಜೀವನದ ಕುರಿತು ಅನುಭವಗಳನ್ನು ಹೇಳುತ್ತಾ ಹೋಗಿದ್ದಾರೆ.

ನೀತಿಶತಕದ ಒಂದು ಶ್ಲೋಕ ಈ ಕೆಳಕಂಡಂತಿದೆ.

ಐಶ್ವರ್ಯಸ್ಯ ವಿಭೂಷಣಂ ಸುಜನತಾ ಶೌರ್ಯಸ್ಯ ವಾಕ್ಸಂಯಮೋ
ಜ್ಞಾನಸ್ಯೋಪಶಮನಃ ಶುತಸ್ಯ ವಿನಯೋ ವಿತ್ತಸ್ಯ ಪಾತ್ರೇ ವ್ಯಯಃ |
ಅಕ್ರೋಧಸ್ತಪಸಃ ಕ್ಷಮಾ ಪ್ರಭವಿತುರ್ಧಮಸ್ಯ ನಿರ್ವಾಜತಾ
ಸರ್ವೇಷಾಂ ಅಪಿ ಸರ್ವ ಕಾರಣಂ ಇದಂ ಶೀಲಂ ಪರಮ ಭೂಷಣಂ ||

ಇದರ ಅರ್ಥ ಏನೆಂದರೆ, ಸಜ್ಜನತೆಯೇ ಐಶ್ವರ್ಯಕ್ಕೆ ಭೂಷಣ, ಅಹಂಕಾರವಿಲ್ಲದೇ ಮಾತನಾಡುವುದು ಶೂರತ್ವಕ್ಕೆ ಭೂಷಣ, ಶಾಂತಿಯೇ ಜ್ಞಾನಕ್ಕೆ ಭೂಷಣ, ವಿನಯವೇ ವಿದ್ಯೆಗೆ ಭೂಷಣ, ಸುಪಾತ್ರರಿಗೆ ದಾನ ನೀಡುವುದೇ ಹಣಕ್ಕೆ ಭೂಷಣ, ಕ್ರೋಧ ಇಲ್ಲದಿರುವುದೇ ತಪಸ್ಸಿಗೆ ಭೂಷಣ, ಕ್ಷಮೆಯೇ ಸಾಮರ್ಥ್ಯದ ಭೂಷಣ, ತೋರಿಕೆ ಇಲ್ಲದಿರುವುದೇ ಧರ್ಮಕ್ಕೆ ಭೂಷಣ. ಇಷ್ಟೆಲ್ಲದರ ನಂತವೂ, ಇದೆಲ್ಲಕ್ಕಿಂತಲೂ ಶೀಲವೇ ಎಲ್ಲ ಗುಣಗಳಿಗಿಂತಲೂ ಶ್ರೇಷ್ಠವಾದದ್ದು ಎನ್ನುವುದು ಇದರ ಅರ್ಥ.

ಅಖಿಲ ಭಾರತೀಯ ಸೇವೆಗಳಿಗೆ ತೆರಳುವವರಲ್ಲಿ ಜ್ಞಾನ ಇರುತ್ತದೆ ಎನ್ನುವುದು ಅವರು ಎದುರಿಸುವ ಕಷ್ಟಾತಿಕಷ್ಟ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದದರಿಂದ ತಿಳಿದಿರುತ್ತದೆ. ಆದರೆ ಉಳಿದ ಗುಣಗಳನ್ನೂ ಬೇಕಿದ್ದರೆ ತರಬೇತಿ ನೀಡಬಹುದು. ಆದರೆ ಶೀಲವನ್ನು ಅಧಿಕಾರಿಗಳು ಗಳಿಸಿಕೊಳ್ಳಬೇಕಾಗುತ್ತದೆ. ಅಥವಾ ತಮ್ಮ ಶೀಲವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಒಬ್ಬ ಅಧಿಕಾರಿ ಕೆಲಸಕ್ಕೆ ತೊಡಗಿದನೆಂದರೆ ಆತನ ಎದುರು ಹಣ ಮಾಡುವ ಸಾವಿರಾರು ಮಾರ್ಗಗಳು ತೆರೆದುಕೊಂಡಿರುತ್ತವೆ. ಅವುಗಳತ್ತ ನೋಡದೆ, ಜನರ ಹಿತವನ್ನೇ ನೋಡುವುದು ಒಂದು ರೀತಿಯ ವ್ರತ. ತಾನು ಉತ್ತಮ ಕೆಲಸ ಮಾಡುತ್ತಿರುವೆ ಎಂದು ಜನರಲ್ಲಿ ವಿಶ್ವಾಸ ಮೂಡಿಸುವುದೂ ಅಧಿಕಾರಿಗಳ ಕರ್ತವ್ಯ. ಇದರಿಂದ ಜನರಿಗೆ ವ್ಯವಸ್ಥೆ ಮೇಲೆ ನಂಬಿಕೆ ಹುಟ್ಟುತ್ತದೆ. ವ್ಯವಸ್ಥೆ ಮೇಲೆ ನಂಬಿಕೆ ಹುಟ್ಟಿದರೆ ಅದು ಕಾನೂನು, ಸಂವಿಧಾನ ಹಾಗೂ ದೇಶದ ಮೇಲಿನ ನಂಬಿಕೆ, ಗೌರವವಾಗಿ ಪರಿವರ್ತನೆ ಆಗುತ್ತದೆ. ಆದರೆ ಈಗ ಕರ್ನಾಟಕದಲ್ಲಿ ನಡೆಯುತ್ತಿರುವ ರೀತಿ ಹಾದಿ ಜಗಳ ಬೀದಿ ಜಗಳವಾದರೆ ಯಾರಿಗೆ ತಾನೆ ಕಾರ್ಯಾಂಗದ ಮೇಲೆ ನಂಬಿಕೆ ಬರುತ್ತದೆ?

ಅಷ್ಟಕ್ಕೂ ಅಖಿಲ ಭಾರತೀಯ ಸೇವೆಯ ಅಧಿಕಾರಿಗಳಿಗೆ ಒಂದೆಡೆ ಉತ್ತರದಾಯಿತ್ವ ಇಲ್ಲದಿರುವುದಕ್ಕೆ ವ್ಯವಸ್ಥೆಯಲ್ಲಿನ ಲೋಪವೇ ಕಾರಣ. ಇಷ್ಟೆಲ್ಲದರ ನಡುವೆ ಕರ್ನಾಟಕ ಇಬ್ಬರು ಮಹಿಳಾ ಅಧಿಕಾರಿಗಳನ್ನು ಜಾಗ ತೋರಿಸದೇ ವರ್ಗಾವಣೆ ಮಾಡುವುದನ್ನು ಬಿಟ್ಟರೆ ಸರ್ಕಾರ ಏನೂ ಮಾಡಲು ಆಗುವುದಿಲ್ಲ. ಎಷ್ಟು ದಿನ ಹೀಗೆಯೇ ಪೋಸ್ಟಿಂಗ್ ಇಲ್ಲದೇ ಕೂರಿಸುವುದು? ಅದೂ ತಪ್ಪೆ. ಅವರು ಹುದ್ದೆಯಲ್ಲಿ ಇರಲಿ, ಮನೆಯಲ್ಲೇ ಇರಲಿ, ಸಂಬಳವಂತೂ ಸಿಕ್ಕೇ ಸಿಗುತ್ತದೆ. ಲಕ್ಷಾಂತರ ರೂ. ವೇತನವನ್ನು ಸುಖಾ ಸುಮ್ಮನೆ ನೀಡುವುದು ತೆರಿಗೆದಾರರಿಗೆ ಮಾಡುವ ಅವಮಾನ. ಇದನ್ನು ಬಿಟ್ಟರೆ ರಾಜ್ಯ ಸರ್ಕಾರ ಏನೂ ಮಾಡಲಾಗದು ಸ್ಥಿತಿಯಿದೆ.

ಅಧಿಕಾರಿಗಳು ವ್ಯವಸ್ಥೆಯ ಮೇಲೆ ನಂಬಿಕೆ ಮೂಡಿಸುವಂತಹ ಕೆಲಸ ಮಾಡಬೇಕು ಎಂದು ಹೇಳಲಾಗಿದೆ. ಅದು ಅವರು ಮಾಡುವ ಕೆಲಸಗಳು, ಅದರಿಂದ ಜನರ ಜೀವನದ ಮೇಲೆ ಆಗುವ ಪರಿಣಾಮದ ಮೂಲಕ ಗೊತ್ತಾಗಬೇಕು. ಈಗ ಅನೇಕ ಅಧಿಕಾರಿಗಳು ಹಾಗಲ್ಲ. ತಮ್ಮದೇ ಫ್ಯಾನ್ ಪೇಜ್‌ಗಳನ್ನು ಸೃಷ್ಟಿಸಿಕೊಂಡು ದಿನಕ್ಕೊಂದು ಫೋಟೊ ಅಪ್‌ಲೋಡ್ ಮಾಡಿಸುತ್ತ, ತಾವು ಅಲ್ಲೆಲ್ಲೊ ಮಾಡಿದ ಭಾಷಣದ ತುಣುಕನ್ನು ಅಪ್‌ಲೋಡ್ ಮಾಡಿಸುತ್ತ ಪ್ರಚಾರ ಗಿಟ್ಟಿಸುತ್ತಿದ್ದಾರೆ. ಇದೀಗ ಐಪಿಎಸ್ ಅಧಿಕಾರಿ ಆರೋಪಿಸಿರುವಂತೆ, ಐಎಎಸ್ ಅಧಿಕಾರಿಯು ತನ್ನ ಸಾಮಾಜಿಕ ಜಾಲತಾಣ ನಿರ್ವಹಣೆಯನ್ನು ಒಂದು ಖಾಸಗಿ ಏಜೆನ್ಸಿಗೆ ನೀಡಿದ್ದರಂತೆ. ಇದು ನಿಜವೇ ಆಗಿದ್ದರೆ ಅಷ್ಟು ಹಣ ಅವರಿಗೆ ಎಲ್ಲಿಂದ ಬಂತು? ಅಷ್ಟಕ್ಕೂ ಅದರ ಅವಶ್ಯಕತೆಯಾದರೂ ಏನಿತ್ತು?

ಸಂವಿಧಾನದ ಮೂರೂ ಅಂಗಗಳು ತಮ್ಮಷ್ಟಕ್ಕೆ ತಾವು ಸ್ವತಂತ್ರವೆ. ಆದರೂ ಪರಸ್ಪರ ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಆಶಯ ವ್ಯಕ್ತಪಡಿಸಿದ್ದರು. ಆದರೆ ಮೂರೂ ಅಂಗಗಳಲ್ಲಿ ಶಾಸಕಾಂಗವು ಮಾತ್ರವೇ ಜನರ ಪ್ರತಿನಿಧಿ ಎಂದು ಪರಿಗಣಿಸಲ್ಪಡುತ್ತದೆ. ಶಾಸಕಾಂಗವು ನ್ಯಾಯಾಂಗದ ಹಾಗೂ ಕಾರ್ಯಾಂಗದ ಕಾನೂನುಗಳನ್ನು ಬದಲಾವಣೆ ಮಾಡಬಹುದು ಎಂಬಷ್ಟರ ಮಟ್ಟಿಗೆ ಅದು ಸ್ವಲ್ಪ ಹೆಚ್ಚಿನ ಅಧಿಕಾರ ಹೊಂದಿದೆ. ಅದಕ್ಕಾಗಿ ಅವರು ಜನರ ನಡುವೆಯೇ ಇದ್ದು ಕೆಲಸ ಮಾಡಬೇಕಾಗುತ್ತದೆ. ಆದರೆ ನ್ಯಾಯಾಂಗ ಹಾಗೂ ಕಾರ್ಯಾಂಗವು ಜನರ ಕೆಲಸವನ್ನೇ ಮಾಡಿದರೂ ಪ್ರಚಾರದ ಅವಶ್ಯಕತೆ ಇಲ್ಲವೇ ಇಲ್ಲ. ನ್ಯಾಯಾಂಗವು ತನ್ನ ಕರ್ತವ್ಯವವನ್ನು ನಿರ್ವಹಿಸುತ್ತ, ಬಹುತೇಕ ಅನಾಮಿಕತ್ವವನ್ನು ಪಾಲನೆ ಮಾಡುತ್ತಿದೆ. ಆದರೆ ಕಾರ್ಯಾಂಗವು ಈ ಅನಾಮಿಕತ್ವದ ಪಾಲನೆಯಲ್ಲಿ ಹಿಂದೆ ಬಿದ್ದಿರುವುದು ಕಂಡುಬರುತ್ತಿದೆ.

ಅಧಿಕಾರಿಗಳ ಇಂತಹ ವರ್ತನೆಗೆ ಮುಖ್ಯ ಕಾರಣವೆಂದರೆ ಸೇವಾ ಭದ್ರತೆ. ಶಾಸಕಾಂಗದಲ್ಲಿರುವ ರಾಜಕಾರಣಿಯು ಕನಿಷ್ಠ ಐದು ವರ್ಷಕ್ಕೊಮ್ಮೆ ಜನರ ಮುಂದೆ ಹೋಗಿ ಮತ ಕೇಳಲೇಬೇಕು. ಹಾಗಾಗಿ ಅವರಿಗೆ ಉತ್ತರದಾಯಿತ್ವ ಹೆಚ್ಚು. ಇನ್ನು ನ್ಯಾಯಾಂಗದಲ್ಲೂ ಮೌಲ್ಯಮಾಪನ ನಡೆಯುತ್ತದೆ. ನ್ಯಾಯಾಧೀಶರು ನೀಡುವ ಪ್ರತಿ ಆದೇಶವೂ ಅವರ ವ್ಯಕ್ತಿತ್ವವನ್ನು ಅಳೆಯುತ್ತಾ ಹೋಗುತ್ತದೆ. ಇದೆಲ್ಲದರ ಆಧಾರದಲ್ಲಿ ಅವರ ಕುರಿತು ಕಡತವೊಂದು ಸಿದ್ಧವಾಗುತ್ತದೆ. ಅದರ ಆಧಾರದಲ್ಲೆ ನ್ಯಾಯಾಧೀಶರು ಪದೋನ್ನತಿ, ಹೈಕೋರ್ಟ್, ಸುಪ್ರೀಂಕೋರ್ಟ್‌ಗೆ ನೇಮಕದಂತಹ ಪ್ರಕ್ರಿಯೆ ನಡೆಯುತ್ತದೆ. ಆದರೆ ಕಾರ್ಯಾಂಗದಲ್ಲಿ ಹಾಗಿಲ್ಲ. ಒಮ್ಮೆ ನೇಮಕ ಆದರೆ ಆಯಿತು. ಇನ್ನು 60 ವರ್ಷ ಆಗುವವರೆಗೂ ಸೇವಾ ಭದ್ರತೆ.

ಇದನ್ನೂ ಓದಿ: ವಿಸ್ತಾರ ಅಂಕಣ: ಪ್ರಜಾಪ್ರಭುತ್ವವನ್ನು ಮರಳಿ ಹಳಿಗೆ ತರುವ ಹೊಣೆಯನ್ನು ಪ್ರಜೆಗಳೇ ಹೊರಬೇಕು

ಈ ಭದ್ರತೆಯೇ ಇಡೀ ಕಾರ್ಯಾಂಗವನ್ನು ಅಭದ್ರವಾಗಿಸಿದೆ. ಅತ್ತ ಜನರಿಗೂ ಉತ್ತರದಾಯಿಯಲ್ಲದೆ, ಇತ್ತ ರಾಜಕಾರಣಿಗಳಿಗೂ ಉತ್ತರದಾಯಿಯಲ್ಲದೆ ತಾವೇ ಒಂದು ಸರ್ಕಾರದಂತೆ ನಡೆಯುತ್ತಿರುತ್ತಾರೆ. ಮೂವತ್ತು ನಲವತ್ತು ವರ್ಷ ರಾಜಕಾರಣದಲ್ಲಿ ಹಿರಿಯರಾದ ಮಂತ್ರಿ, ಮುಖ್ಯಮಂತ್ರಿ ಸಭೆ ನಡೆಸುತ್ತಿರುವಾಗ ಸೂಟು ಬೂಟು ಧರಿಸಿಕೊಂಡು ಕಾಲಿನ ಮೇಲೆ ಕಾಲು ಹಾಕಿಕೊಂಡು ಕೂರುವ ಅಧಿಕಾರಿಗಳು ಇನ್ನೂ ಇದ್ದಾರೆ. ಸಭೆ ನಡೆಯುತ್ತಿದ್ದರೆ ತಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ಆಕಾಶ ನೋಡುತ್ತ ಕೂರುವವರೂ ಇದ್ದಾರೆ. ಅವರು ತೋರುತ್ತಿರುವ ಅಗೌರವ ಎದುರಿಗಿರುವ ರಾಜಕಾರಣಿಗಳಿಗಲ್ಲ, ಅವರನ್ನು ಆಯ್ಕೆ ಮಾಡಿದ ಲಕ್ಷಾಂತರ ಜನರಿಗೆ ಎಂಬ ಉತ್ತರದಾಯಿತ್ವವೂ ಅನೇಕರಿಗಿಲ್ಲ.

ವೀರಪ್ಪ ಮೊಯ್ಲಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ರಚಿಸಿದ್ದ ಎರಡನೇ ಆಡಳಿತ ಸುಧಾರಣಾ ಆಯೋಗವು ಈ ನಿಟ್ಟಿನಲ್ಲಿ ಅನೇಕ ಶಿಫಾರಸುಗಳನ್ನು ನೀಡಿದೆ. ಸಂವಿಧಾನದ 311ನೇ ಅನುಚ್ಛೇದವು ಕಾರ್ಯಾಂಗಕ್ಕೆ ಅಸೀಮ ಭದ್ರತೆಯನ್ನು ಒದಗಿಸಿದೆ. “ಈ ಅನುಚ್ಛೇದವು ಸಂವಿಧಾನದಲ್ಲಿ ಉಳಿದುಕೊಂಡಿರುವುದೇ ಅಚ್ಚರಿದಾಯಕವಾಗಿದ್ದು, ಬೇರೆ ಯಾವುದೇ ಸಂವಿಧಾನವೂ ಇಂತಹ ಗ್ಯಾರಂಟಿಯನ್ನು ನೀಡುವುದಿಲ್ಲ” ಎಂದು ಆಯೋಗದವು ಅಭಿಪ್ರಾಯಪಟ್ಟಿತ್ತು. ಸರ್ದಾರ್ ಪಟೇಲರು, ಕಾರ್ಯಾಂಗಕ್ಕೆ ಹೆಚ್ಚಿನ ರಕ್ಷಣೆಯನ್ನು ಬಯಸಿದ್ದರು. ರಾಜಕಾರಣಿಗಳಿಗೆ ಹೆದರದಂತೆ ಅವರು ಧೈರ್ಯವಾಗಿ ಸರ್ಕಾರಕ್ಕೆ ಸಲಹೆಯನ್ನು ನೀಡಲಿ, ಜನಹಿತವನ್ನು ತೋರಲಿ ಎಂಬ ಉದ್ದೇಶವಾಗಿತ್ತು. ಆದರೆ ಈಗ ಅದೇ ವ್ಯತಿರಿಕ್ತವಾಗಿ, ಉತ್ತರದಾಯಿತ್ವವನ್ನು ಹಾಳುಮಾಡುತ್ತಿದೆ. “311ನೇ ಅನುಚ್ಛೇದವನ್ನು ತೆಗೆದುಹಾಕಬೇಕು” ಎಂದು ಆಯೋಗ ತಿಳಿಸಿತ್ತು.

ಇದನ್ನೂ ಓದಿ: ವಿಸ್ತಾರ ಅಂಕಣ: ಭಾರತದಲ್ಲೇಕೆ ಮಿಲಿಟರಿ ಆಡಳಿತ ಸಾಧ್ಯವಿಲ್ಲ ಎಂದರೆ…

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಪ್ರತಿ ಅಧಿಕಾರಿ ನೇಮಕವಾದ 10 ವರ್ಷದಿಂದ ಆರಂಭಿಸಿ ರಿಸ್ಕ್ ಪ್ರೊಫೈಲಿಂಗ್ (ಅಧಿಕಾರಿಯಿಂದ ಅಪಾಯದ ಮಟ್ಟ) ಅಳೆಯಬೇಕು ಎಂದು ತಿಳಿಸಿತ್ತು. ಇದರ ಪ್ರಕಾರ, ಸ್ವತಃ ಅಧಿಕಾರಿಯಿಂದ ತನ್ನ ಕುರಿತು ವರದಿಯನ್ನು ಪಡೆಯುವುದು, ಅವರು ತಮ್ಮ ಅವಧಿಯಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟಲು ಕೈಗೊಂಡ ಕ್ರಮಗಳೇನು ಎಂದು ವಿವರಿಸುವುದು, ಜಾಗೃತ ಸಂಸ್ಥೆಗಳ ಮೂಲಕ ಅಧಿಕಾರಿಯ ಬಗ್ಗೆ ವರದಿ ಹಾಗೂ ಗಣ್ಯರನ್ನೊಳಗೊಂಡ ಸಮಿತಿಯು ನಡೆಸಿದ ಮೌಲ್ಯಮಾಪನ ವರದಿಯನ್ನು ಸಿದ್ಧಪಡಿಸಬೇಕು. 50/55 ವರ್ಷವಾದ ನಂತರದ ಅಧಿಕಾರಿಗಳನ್ನು ಪ್ರತಿ ವರ್ಷವೂ ಮೌಲ್ಯಮಾಪನ ಮಾಡಬೇಕು. ಈಗಿನ ರೀತಿಯಲ್ಲಿ ನಾಮ್ ಕೆ ವಾಸ್ತೆ ನಮೂದಿಸುತ್ತಿರುವ ಸೇವಾ ವರದಿಯಂತೆ ಅಲ್ಲದೆ ಕರಾರುವಕ್ಕಾಗಿ ದಾಖಲಿಸುವ ಕೆಲಸ ಆಗಬೇಕು. ಭ್ರಷ್ಟ ಅಧಿಕಾರಿಗಳನ್ನು ಕಂಡು ಹಿಡಿಯುವಲ್ಲಿ ಹಾಗೂ ಭ್ರಷ್ಟಾಚಾರವನ್ನು ತಡೆಯುವಲ್ಲಿ ಗಣನೀಯ ಕೆಲಸ ಮಾಡಿದ ಅಧಿಕಾರಿಗಳನ್ನು ಉತ್ತೇಜಿಸಬೇಕು ಹಾಗೂ ಅಂಥವರ ವಿರುದ್ಧ ಕಿರುಕುಳ ಆಗದಂತೆ ರಕ್ಷಣೆ ನೀಡಬೇಕು. ಭ್ರಷ್ಟ ಅಧಿಕಾರಿಗಳನ್ನು ಸಾರ್ವಜನಿಕವಾಗಿ ಅವಮಾನಿಸುವ ಕೆಲಸ ಆಗಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ. ಅತ್ಯಂತ ಗಂಭೀರವಾದ ಅಪರಾಧದ ಸಂದರ್ಭದಲ್ಲಿ ಸೇವೆಯಿಂದ ವಜಾ ಮಾಡಬಹುದಾದರೂ ಈಗ ಅನುಚ್ಛೇದ 311 ಅದನ್ನು ತಡೆಯುತ್ತಿದೆ. ಹಾಗಾಗಿ 311ನ್ನು ತೆರವುಗೊಳಿಸಬೇಕು ಎಂದು ಆಯೋಗ ತಿಳಿಸಿತ್ತು.

ಇಂತಹ ವ್ಯವಸ್ಥೆಯು ಸಂಪೂರ್ಣ ಪಾರದರ್ಶಕ ಎನ್ನಲು ಸಾಧ್ಯವಿಲ್ಲ. ಮಾನವನ ಹಸ್ತಕ್ಷೇಪ ಇರುವ ಯಾವುದೇ ವ್ಯವಸ್ಥೆಯು ಪೂರ್ವಾಗ್ರಹ ಹಾಗೂ ಸ್ವಾರ್ಥವನ್ನು ತನ್ನೊಳಗೆ ಒಳಗೊಂಡಿರುತ್ತದೆ. ಆದರೆ ಈಗ ಇರುವ ವ್ಯವಸ್ಥೆಗಿಂತಲೂ ಉತ್ತಮವಾಗುತ್ತದೆ. ಹೊಣೆಗಾರಿಕೆಯನ್ನು ಕಾರ್ಯಾಂಗಕ್ಕೆ ವಹಿಸುವುದರಿಂದ ಅಲ್ಲಿ ಕ್ರಿಯಾಶೀಲತೆ ಮೂಡುತ್ತದೆ. ಮೂರನೇ ಅಂಗವು ತನ್ನ ಹೊಣೆಗಾರಿಕೆಯನ್ನು ಮರೆತು ಕೇವಲ ಫಲವನ್ನು ಉಣ್ಣುತ್ತ ನಿವೃತ್ತಿಯಾಗುವುದಂತೂ ಯಾವುದೇ ವ್ಯವಸ್ಥೆಗೆ ಶೋಭೆ ತರುವುದಿಲ್ಲ.

ಇದನ್ನೂ ಓದಿ: ವಿಸ್ತಾರ ಅಂಕಣ: ʻಸಬ್ ಕಾ ಸಾಥ್-ಸಬ್ ಕಾ ವಿಕಾಸ್ʼ ಎಂದು ಹೇಳುವ ಅನಿವಾರ್ಯತೆ ತಂದಿಟ್ಟಿದ್ದು ಯಾರು?

Exit mobile version