Site icon Vistara News

ವಿಸ್ತಾರ ಅಂಕಣ: ʻಸಬ್ ಕಾ ಸಾಥ್-ಸಬ್ ಕಾ ವಿಕಾಸ್ʼ ಎಂದು ಹೇಳುವ ಅನಿವಾರ್ಯತೆ ತಂದಿಟ್ಟಿದ್ದು ಯಾರು?

inclusiveness

ಕಳೆದ ವಾರದವರೆಗೂ ನಾವು ಅಭಿವೃದ್ಧಿ ಎಂಬ ಕುರಿತು ಸಾಕಷ್ಟು ಚರ್ಚೆ ನಡೆಸಿದೆವು. ಅಭಿವೃದ್ಧಿ ಎಂಬ ಪದವು ಭಾರತದ ಆಲೋಚನೆಯನ್ನು ಹೇಗೆ ಬದಲಾಯಿಸಿದೆ, ಅಭಿವೃದ್ಧಿಯ ಹೆಸರಿನಲ್ಲಿ ಏನೆಲ್ಲ ನಡೆಯುತ್ತಿದೆ ಎಂದು ನೋಡಿದೆವು. ಭಾರತದ್ದೇ ಒಂದು ಅಭಿವೃದ್ಧಿ ಮಾದರಿಯನ್ನೇಕೆ ಅನುಸರಿಸಬಾರದು ಎಂದೂ ಮೂರು ಲೇಖನಗಳಲ್ಲಿ ಚರ್ಚೆ ನಡೆಸಿದೆವು. ಈ ಬಾರಿ ಅಂಥದ್ದೇ, ಹೆಚ್ಚು ಬಳಕೆಯಾಗುತ್ತಿರುವ ವಾಕ್ಯವೆಂದರೆ ಒಳಗೊಳ್ಳುವಿಕೆ. ಅಂದರೆ Inclusiveness.

2014ರಲ್ಲಿ ಭರ್ಜರಿ ಬಹುಮತದಿಂದ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರ ಅನೇಕ ಘೋಷಣೆಗಳನ್ನು ನೀಡಿದೆ. ಸರ್ಕಾರದ ಯೋಜನೆಗಳನ್ನು, ಸರ್ಕಾರದ ಆಶೋತ್ತರಗಳನ್ನು ಪ್ರಧಾನಿ ನರೇಂದ್ರ ಮೋದಿಯವರಷ್ಟು ಗಾಢವಾಗಿ ಜನರ ಮನಸ್ಸಿನಲ್ಲಿ ಬಿತ್ತಿದವರು ಇನ್ನೊಬ್ಬರಿಲ್ಲ. ಹಿಂದೆಯೂ ಪ್ರಧಾನಿಗಳು ಇಂತಹ ಸಫಲ ಪ್ರಯತ್ನ ಮಾಡಿದ್ದರು.

ಉದಾಹರಣೆಗೆ ಇಂದಿರಾ ಗಾಂಧಿಯವರು 1967ರ ಸಾರ್ವತ್ರಿಕ ಚುನಾವಣೆಗೂ ಮುನ್ನ ರೋಟಿ, ಕಪಡಾ ಔರ್ ಮಕಾನ್ ಘೊಷಣೆಯನ್ನು ಪ್ರಸಿದ್ಧಗೊಳಿಸಿದರು. ಈ ಘೋಷಣೆ ಎಷ್ಟು ಪ್ರಸಿದ್ಧವಾಯಿತು ಎಂದರೆ 1974ರಲ್ಲಿ ಮನೋಜ್ ಕುಮಾರ್ ನಿರ್ಮಾಣ, ನಿರ್ದೇಶನ, ನಟನೆಯಲ್ಲಿ ʻರೋಟಿ-ಕಪಡಾ-ಔರ್ ಮಕಾನ್ʼ ಹೆಸರಿನ ಬಾಲಿವುಡ್ ಸಿನಿಮಾ ನಿರ್ಮಾಣವಾಯಿತು. ಈ ಸಿನಿಮಾ ಈಗಲೂ ಬಾಲಿವುಡ್‌ನ ಅತ್ಯಂತ ಪ್ರಭಾವಿ ಹಾಗೂ ಮಹತ್ತರ ಸಿನಿಮಾಗಳಲ್ಲೊಂದು ಎಂದು ಪರಿಗಣಿತವಾಗಿದೆ. ನಂತರ ಈ ಸಿನಿಮಾ ತೆಲುಗು ಭಾಷೆಯಲ್ಲಿ ʼಜೀವನ ಪೋರಾಟಂʼ ಎಂದು ಮರು ನಿರ್ಮಾಣವಾಯಿತು. ಇಂದಿರಾ ಗಾಂಧಿಯವರಿಗೂ ಮೊದಲು ಲಾಲ್ ಬಹದ್ದೂರ್ ಶಾಸ್ತ್ರಿಯವರು ಜೈಜವಾನ್-ಜೈ ಕಿಸಾನ್ ಎಂದರು. ಅಟಲ್ ಬಿಹಾರಿ ವಾಜಪೇಯಿಯವರು ಜೈ ವಿಜ್ಞಾನ್ ಸೇರಿಸಿದರು.

ಮೋದಿಯವರ ಕಾಲದ ಯೋಜನೆಗಳನ್ನು, ಘೋಷಣೆಗಳನ್ನು ಹೇಳಿ ಎಂದು ಸಾಮಾನ್ಯ ರಾಜಕೀಯ ಜ್ಞಾನವಿರುವ ಅಥವಾ ಸುದ್ದಿಯನ್ನು ಓದುವ ಯಾರಿಗಾದರೂ ಹತ್ತಾರು ಹೆಸರುಗಳು ಕಣ್ಮುಂದೆ ಬರುತ್ತವೆ. ಬೇಟಿ ಬಚಾವೊ ಬೇಟಿ ಪಢಾವೊ, ನಾ ಖಾವೂಂಗಾ-ನಾ ಖಾನೆ ದೂಂಗದಂತಹ ಘೋಷಣೆಗಳು, ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ ಭಾರತ್, ಸ್ಟಾರ್ಟಪ್ ಇಂಡಿಯಾ, ಸ್ಟಾಂಡಪ್ ಇಂಡಿಯಾ, ಮುದ್ರಾ, ಸ್ಕಿಲ್ ಇಂಡಿಯಾ, ಸ್ವಚ್ಛ ಭಾರತ್, ಜನ ಧನ ಯೋಜನೆ, ಸ್ಮಾರ್ಟ್ ಸಿಟಿ, ಜಲ ಜೀವನ್ ಮಿಷನ್… ಹೀಗೆ ಅನೇಕ ಹೆಸರುಗಳ ಪಟ್ಟಿ ಸಾಗುತ್ತದೆ. ಸರ್ಕಾರಿ ಯೋಜನೆಗಳ ಅತಿ ದೊಡ್ಡ ರಾಯಭಾರಿ ಎಂದರೆ ಮೋದಿ. ಇದರಿಂದಾಗಿಯೇ ಪ್ರತಿಪಕ್ಷಗಳು ಅವರನ್ನು ಒಳ್ಳೆಯ ಸೇಲ್ಸ್‌ಮನ್ ಎಂದೂ ವ್ಯಂಗ್ಯವಾಡುತ್ತವೆ. ಅದರ ಸಾಧಕ ಬಾಧಕ ಈಗ ಚರ್ಚೆಯ ವಿಷಯ ಅಲ್ಲದ್ದರಿಂದ ಮುಂದಕ್ಕೆ ಹೋಗೋಣ.

ಇಂಥದ್ದೇ ಘೋಷಣೆಗಳ ಸಾಲಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ ʼಸಬ್ ಕಾ ಸಾಥ್-ಸಬ್ ಕಾ ವಿಕಾಸ್ʼ ಎಂಬ ಘೋಷಣೆಯೂ ಬರುತ್ತೆ. ಏನಿದರ ಅರ್ಥ? ಎಲ್ಲರ ಜತೆಗೆ-ಎಲ್ಲರ ವಿಕಾಸ ಎಂದು. ಇಲ್ಲಿ ಎಲ್ಲರೂ ಎಂದರೆ ಯಾರು? ಪ್ರಧಾನಿ ಏಕೆ ಈ ಮಾತು ಹೇಳಿದರು? ಏಕೆಂದರೆ ಭಾರತದ ಸ್ವಾತಂತ್ರ್ಯಾನಂತರದಲ್ಲಿ ಅನೇಕ ಸಮುದಾಯಗಳಿಗೆ ವಿಶೇಷ ಸವಲತ್ತುಗಳನ್ನು ನೀಡುತ್ತಿದ್ದರೆ, ಇನ್ನೂ ಕೆಲವು ಸಮುದಾಯಗಳನ್ನು ಕಡಗಣಿಸಲಾಗಿದೆ. ಅದರಲ್ಲಿ, ಐತಿಹಾಸಿಕವಾಗಿ ಅವಮಾನ, ತುಳಿತಕ್ಕೆ ಒಳಗಾದ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ನೀಡುವುದು ಒಂದು ನೀತಿ. ಇದು ಅತ್ಯವಶ್ಯಕವಾದದ್ದು. ತುಳಿತಕ್ಕೊಳಗಾದ ಯಾವುದೇ ಸಮುದಾಯವನ್ನು ಮುಖ್ಯ ವಾಹಿನಿಗೆ ತರದೆ, ಭಾರತ ಜಗದ್ಗುರು ಆಗಲು ಸಾಧ್ಯವಿಲ್ಲ. ಇನ್ನೊಂದು ರೀತಿಯ ಸವಲತ್ತು ಇದೆ. ಅದು, ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನೀಡುವ ಸವಲತ್ತು.

ಒಂದು ಸಮುದಾಯ ಸಾಮಾಜಿಕವಾಗಿ ಹಿಂದುಳಿದಿದೆ, ತುಳಿತಕ್ಕೆ ಒಳಗಾಗಿದೆ ಎಂದರೆ ವಿಶೇಷ ಸವಲತ್ತು ನೀಡಬೇಕು, ಸರಿ. ಆದರೆ ಒಂದು ಸಮುದಾಯ ಸಂಖ್ಯೆಯಲ್ಲಿ ಕಡಿಮೆ ಇದೆ ಎನ್ನುವುದೇ ಕಾರಣವಾಗಿ ವಿಶೇಷ ಸವಲತ್ತು ನೀಡಬೇಕೆ? ಎಂಬ ಪ್ರಶ್ನೆ ಬರುತ್ತದೆ. ಹಾಗಾದರೆ ಅಲ್ಪಸಂಖ್ಯಾತರು ಎಂಬ ಒಟ್ಟಾರೆ ಚೌಕಟ್ಟಿನಲ್ಲಿ ಸತತವಾಗಿ ಕಾಂಗ್ರೆಸ್ ಸರ್ಕಾರಗಳು, ಆನಂತರ ಬಂದ ಜನತಾ ಸಿದ್ಧಾಂತದ ಸರ್ಕಾರಗಳು ಮುಸ್ಲಿಂ ಪರ ನೀತಿಯನ್ನು ಅನುಸರಿಸಿಕೊಂಡು ಬಂದಿದ್ದೇಕೆ? ಸಂಕ್ಷಿಪ್ತವಾಗಿ ಇತಿಹಾಸದ ಮೇಲೆ ಕಣ್ಣು ಹಾಯಿಸೋಣ.

ಇಸ್ಲಾಂ ಎಂಬ ಮತ ಈ ದೇಶಕ್ಕೆ ಕಾಲಿಟ್ಟಿದ್ದು ಇಸ್ಲಾಮಿಕ್ ರಾಜರುಗಳ ಮೂಲಕ. ಭಾರತದ ನೆಲವನ್ನು ಆಕ್ರಮಿಸಿಕೊಳ್ಳಲು ಆಗಮಿಸಿ ಅನೇಕರನ್ನು ಬಲವಂತವಾಗಿ, ಕೆಲವರನ್ನು ಆಮಿಷಕ್ಕೊಳಪಡಿಸಿ ಮತಾಂತರ ಮಾಡಿ ಸುಮಾರು 800 ವರ್ಷ ವಿವಿಧ ಇಸ್ಲಾಮಿಕ್ ರಾಜರು ಭಾರತದ ಅನೇಕ ಭಾಗಗಳನ್ನು ಆಳಿದರು. ಇದರ ಪರಿಣಾಮವಾಗಿ ಇಲ್ಲಿಗೆ ಇಸ್ಲಾಂ ಪ್ರವೇಶವಾಯಿತು. ಆಗಿನಿಂದಲೂ ಅಲ್ಲಲ್ಲಿ ತಿಕ್ಕಾಟಗಳ ನಡುವೆ ಬದುಕುತ್ತಿದ್ದ ಎರಡೂ ಸಮುದಾಯಗಳು ಹೇಗೊ ಒಟ್ಟಾಗಿ ಬದುಕಲೇ ಬೇಕಾದ ಅನಿವಾರ್ಯತೆಯನ್ನು ಕಂಡುಕೊಂಡಿದ್ದವು. ಸ್ವಾಮಿ ವಿವೇಕಾನಂದರು ಷಿಕಾಗೊದಲ್ಲಿ ಹೇಳಿದಂತೆ, ಭಾರತವು ಇನ್ನಿತರೆ ನಂಬಿಕೆಗಳನ್ನು ಸಹಿಸಿಕೊಂಡಿದ್ದಷ್ಟೆ (Tolerance) ಅಲ್ಲ, ಸ್ವೀಕರಿಸಿತು(Acceptance). ಇಸ್ಲಾಮನ್ನೂ ತನ್ನದೇ ರೀತಿ ಇನ್ನೊಂದು ನಂಬಿಕೆ ಎಂದು ಸುಮ್ಮನಾಯಿತು. ಈ ಭಾವನೆಗೆ ಇಲ್ಲಿನ ಬಹುಸಂಖ್ಯಾತ ಹಿಂದುಗಳ ಸೈದ್ಧಾಂತಿಕ ನಿಲುವು ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.

ಆದರೆ ಬ್ರಿಟಿಷರು ಭಾರತದಲ್ಲಿ ಆಳ್ವಿಕೆ ಮಾಡುತ್ತ, ಇಬ್ಬರೂ ಒಟ್ಟಿಗಿದ್ದರೆ ತಾವು ಉಳಿಯುವುದಿಲ್ಲ ಎನ್ನುವುದನ್ನು ಅರಿತರು. ನಮಗೆಲ್ಲ ತಿಳಿದಿರುವಂತೆ 1857ರಲ್ಲಿ ಇದೇ ವಿಭಜನಕಾರಿ ಚಟುವಟಿಕೆ ನಡೆಸಲು ಹೋಗಿ ಹಿಂದು ಹಾಗೂ ಮುಸ್ಲಿಂ ಸೈನಿಕರನ್ನು ಪ್ರತ್ಯೇಕಿಸಲು ಪ್ರಯತ್ನಿಸಿದ್ದರು. 19ನೇ ಶತಮಾನದ ಆರಂಭದಲ್ಲಿ ಬಂಗಾಳವನ್ನು ವಿಭಜಿಸಿದರು. ವಿಶೇಷವಾಗಿ ಮುಸ್ಲಿಮರನ್ನು ಹಿಂದುಗಳ ವಿರುದ್ಧ ಎತ್ತಿಕಟ್ಟುವುದು, ನಿಮಗೆ ಪ್ರತ್ಯೇಕ ಸವಲತ್ತುಗಳನ್ನು ಕೊಡುತ್ತೇವೆ ಎನ್ನುವುದು. ಆ ಮೂಲಕ, ಮಹಾತ್ಮ ಗಾಂಧೀಜಿಯವರನ್ನೂ ಮುಸ್ಲಿಂ ಮುಖಂಡರು ಬ್ಲ್ಯಾಕ್ ಮೇಲ್ ಮಾಡಿದರು. ಅಯ್ಯೋ, ಮುಸ್ಲಿಮರು ದೂರಾದರೆ ಭಾರತಕ್ಕೆ ಸ್ವಾತಂತ್ರ್ಯ ದೊರಕುವುದಿಲ್ಲವಲ್ಲ ಎಂದು ನಂಬಿದ ಗಾಂಧೀಜಿ, ಮುಸ್ಲಿಂ ಮುಖಂಡರು ಹೇಳಿದಂತೆ ಕೇಳತೊಡಗಿದರು. ಮೋಪ್ಲಾ ಕಾಂಡದಿಂದ, 1947ರ ದೇಶ ವಿಭಜನೆವರೆಗೆ ಮುಸ್ಲಿಂ ಮುಖಂಡರ ಎಲ್ಲ ಆಟಾಟೋಪಗಳನ್ನೂ ಸಹಿಸಿಕೊಂಡರು. ದೇಶ ವಿಭಜನೆ ನಂತರ ಈ ದೇಶವನ್ನೇ ಪ್ರೀತಿಸಿದ ಮುಸ್ಲಿಮರು ಉಳಿದುಕೊಂಡರು. ಪ್ರತ್ಯೇಕವಾಗಿ ಪಾಕಿಸ್ತಾನಕ್ಕೆ ಹೋಗುವುದಕ್ಕಿಂತಲೂ ಇಲ್ಲೇ ಇರುವುದು ಸರಿಯೆನಿಸಿ ಇದ್ದರು. ಆದರೆ ನಂತರ ಬಂದ ಕಾಂಗ್ರೆಸ್ ಸರ್ಕಾರ, ಮುಸ್ಲಿಮರಲ್ಲಿ ಇನ್ನೂ ಪ್ರತ್ಯೇಕತೆಯ ಭಾವನೆ ಇದೆ ಎಂದೇ ಭಾವಿಸಿತು. ಅಲ್ಪಸಂಖ್ಯಾತರ ಹೆಸರಿನಲ್ಲಿ ನಿರ್ದಿಷ್ಟವಾಗಿ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವಂತೆ ನಡೆದುಕೊಂಡಿತು.

ಯಾವುದೇ ದೇಶದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ದಮನ ಮಾಡಬಾರದು. ಬಹುಸಂಖ್ಯಾತರಿಗೊಂದು ನ್ಯಾಯ, ಅಲ್ಪಸಂಖ್ಯಾತರಿಗೊಂದು ನ್ಯಾಯ ಇರಬಾರದು. ಅವರಲ್ಲಿ ಹಿಂದುಳಿದಿರುವಿಕೆ ಇದ್ದರೆ ಬಗೆಹರಿಸಲು ನೀತಿ ರೂಪಿಸಬೇಕಿತ್ತೇ ವಿನಃ ಕೇವಲ ಸಂಖ್ಯೆಯನ್ನು ಗಮನದಲ್ಲಿರಿಸಿಕೊಂಡು ಸವಲತ್ತು ನೀಡಿದ್ದಕ್ಕೆ ಯಾವ ತರ್ಕವೂ ಇರಲಿಲ್ಲ. ಮುಸ್ಲಿಂ ಸಮುದಾಯಕ್ಕೆ ಸಮಾನ ಅವಕಾಶವಷ್ಟೆ ಅಲ್ಲ, ಬಹುಸಂಖ್ಯಾತ ಸಮುದಾಯಕ್ಕಿಂತ ಹೆಚ್ಚಿನ ಸವಲತ್ತುಗಳನ್ನು ನೀಡಲಾಯಿತು. ಬಹುಪತ್ನಿತ್ವ, ಕುಟುಂಬ ಯೋಜನೆ, ಮುಸ್ಲಿಂ ಬಾಹುಳ್ಯದ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ… ಹೀಗೆ ಪ್ರತಿ ಬಾರಿಯೂ ಮುಸ್ಲಿಂ ಸಮುದಾಯವನ್ನು ವೋಟ್ ಬ್ಯಾಂಕ್ ಮಾಡಿಕೊಳ್ಳಲಾಯಿತು. ಈ ನಡುವೆ ಆಗಮಿಸಿದ ಜನತಾ ಸರ್ಕಾರಗಳೂ ಮುಸ್ಲಿಂ ಸಮುದಾಯವನ್ನು ತುಷ್ಟೀಕರಣ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಈಗಿನ ತೆಲಂಗಾಣದ ಟಿಆರ್ಎಸ್ ಸರ್ಕಾರವು, ಸ್ವತಃ ಅಸಾದುದ್ದೀನ್ ಓವೈಸಿ ಮುಖ್ಯಮಂತ್ರಿ ಆಗಿದ್ದರೆ ಮಾಡುತ್ತಿದ್ದಕ್ಕಿಂತಲೂ ಬಹುಶಃ ಹೆಚ್ಚಿನ ತುಷ್ಟೀಕರಣವನ್ನು ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ.

ಮುಸ್ಲಿಮರಿಗೆ ಇಷ್ಟೆಲ್ಲ ನೀತಿ ಕೊಟ್ಟೆವು ಎಂಬ ಕಾಂಗ್ರೆಸ್ ಹಾಗೂ ಇನ್ನಿತರೆ ಪಕ್ಷಗಳ ಸರ್ಕಾರಗಳ ಘೋಷಣೆ ಪೊಳ್ಳು ಎನ್ನುವುದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲೇ ಬಯಲಾಯಿತು. ತಾನೇ ರಚಿಸಿದ ನ್ಯಾ. ಸಾಚಾರ್ ಸಮಿತಿಯು, ದೇಶದಲ್ಲಿ ಮುಸ್ಲಿಂ ಸಮುದಾಯವು ಅತ್ಯಂತ ಕಡುಬಡತನದ ಜೀವನ ನಡೆಸುತ್ತಿದೆ, ಮುಖ್ಯವಾಹಿನಿಗೆ ಬಂದಿಲ್ಲ, ಶಿಕ್ಷಣದಲ್ಲಂತೂ ಭಾರೀ ಹಿಂದುಳಿದಿದೆ ಎಂದಿತು. ಅಂದರೆ ಇಷ್ಟು ವರ್ಷ ಮುಸ್ಲಿಮರ ಹೆಸರಿನಲ್ಲಿ ನಡೆಸಿದ್ದು ವೋಟ್ ಬ್ಯಾಂಕ್ ಎನ್ನುವುದು ಸಾಬೀತಾಯಿತಲ್ಲ? ಈ ನೀತಿಯನ್ನು ನಿರಂತರ ಅನುಸರಿಸಿಕೊಂಡು ಬಂದಿದ್ದರಿಂದಾಗಿ ದೇಶದ ಬಹುಸಂಖ್ಯಾತರಲ್ಲಿ ಜಾಗೃತಿ, ಧೃವೀಕರಣ ಉಂಟಾಗಿದೆ. ಕಳೆದ 15-20 ವರ್ಷದ ಅವಧಿಯಿಂದ ನಡೆಯುತ್ತಿರುವ ಈ ಧ್ರುವೀಕರಣವು ದೇಶದ ರಾಜಕಾರಣದಲ್ಲಿ ಒಳಗೊಳ್ಳುವಿಕೆಯ ಘೋಷಣೆಯನ್ನು ಪ್ರಬಲವಾಗಿಸಿದೆ.

2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಬ್ ಕಾ ಸಾಥ್-ಸಬ್ ಕಾ ವಿಕಾಸ್ ಎಂದು ಹೇಳಿದಾಗ, ಇತಿಹಾಸ ತಿಳಿದ ಅನೇಕರಿಗೆ ಕೇಳಿಸಿದ್ದು, “ಹಿಂದು-ಮುಸ್ಲಿಮರ ಜತೆಗೆ, ಹಿಂದು-ಮುಸ್ಲಿಮರ ವಿಕಾಸ” ಎಂದೇ. ಏಕೆಂದರೆ ಬಿಜೆಪಿಯು ಯಾವಾಗೆಲ್ಲ ರಾಷ್ಟ್ರೀಯ ಭದ್ರತೆ, ಭಯೋತ್ಪಾದನೆಯ ವಿಚಾರವನ್ನು ಮಾತನಾಡುತ್ತದೆಯೋ ಆಗೆಲ್ಲ ಮುಸ್ಲಿಂ ವಿರೋಧಿ ಎಂದು ಹೇಳಲಾಗುತ್ತದೆ. ಒಟ್ಟಾರೆಯಾಗಿ ಪಕ್ಷದ ಅಧಿಕೃತ ನಿಲುವಿನಲ್ಲಿ ಅಂತಹ ಮುಸ್ಲಿಂ ವಿರೋಧದ ನಿಲುವು ಇಲ್ಲವಾದರೂ ವೈಯಕ್ತಿಕ ನೆಲೆಗಟ್ಟಿನಲ್ಲಿ ರಾಜಕಾರಣಿಗಳ ಹಾವ ಭಾವ ಹಾಗೆಯೇ ಕಾಣುತ್ತದೆ. ಹಾಗಾಗಿ ಬಿಜೆಪಿ ಮೇಲಿನ ಈ ಹಣೆಪಟ್ಟಿಯನ್ನು ಸಂಪೂರ್ಣ ಸುಳ್ಳು ಎಂದು ತಳ್ಳಿ ಹಾಕಲೂ ಸಾಧ್ಯವಿಲ್ಲ. ಅದೇ ರೀತಿ ಆರ್‌ಎಸ್ಎಸ್.

ಇದನ್ನೂ ಓದಿ: ವಿಸ್ತಾರ ಅಂಕಣ : ಅಭಿವೃದ್ಧಿಗೆ ನಮ್ಮದೇ ಮಾದರಿಯತ್ತ ನೋಡಲು ಮಡಿವಂತಿಕೆ ಏಕೆ?

ಇದೀಗ ಎರಡು ದಿನದ ಹಿಂದಷ್ಟೆ ಆರ್‌ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು, “ಆರ್‌ಎಸ್ಎಸ್ ಎನ್ನುವುದು ಎಡ ಪಂಥವೂ ಅಲ್ಲ, ಬಲಪಂಥವೂ ಅಲ್ಲ. ರಾಷ್ಟ್ರೀಯವಾದದ ಪಂಥ. ಸಂಘವು ಕೇವಲ ದೇಶದ ಒಳಿತಿಗಾಗಿ ಕೆಲಸ ಮಾಡುವ ಸಂಘಟನೆ” ಎಂದಿದ್ದಾರೆ. ಈ ವಿಚಾರವು ಅನೇಕ ಪ್ರಶ್ನೆಗಳನ್ನು, ಚರ್ಚೆಗಳನ್ನು ಹುಟ್ಟುಹಾಕಿದೆ. ಇದೇನು ಆರ್‌ಎಸ್ಎಸ್‌ನ ಹೊಸ ಘೋಷಣೆ ಅಲ್ಲವಾದರೂ, ಇದು ಹಿಂದುಗಳ ಸಂಘಟನೆ ಎನ್ನುವ ಅನೇಕ ವರ್ಷಗಳ ಮಾತಿಗಿಂತ ತುಸು ಭಿನ್ನವಾಗಿದೆ. ದೇಶದಲ್ಲಿ ಎಲ್ಲವನ್ನೂ ಒಳಗೊಳ್ಳುವಿಕೆಯ ಅನಿವಾರ್ಯತೆಯನ್ನು ಆರ್‌ಎಸ್‌ಎಸ್ ವಾಚ್ಯವಾಗಿ ಬಳಸಲು ಆರಂಭಿಸಿದೆ ಎನ್ನಬಹುದು.

ಇಲ್ಲಿ ಎಡ ಪಂಥ ಹಾಗೂ ಬಲಪಂಥವನ್ನು ಆರ್‌ಎಸ್ಎಸ್ ತಿರಸ್ಕರಿಸಲೂ ಕಾರಣವಿದೆ. 1789ರ ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ರಾಷ್ಟ್ರೀಯ ಸಭೆಯಲ್ಲಿದ್ದವರು ಬೇರ್ಪಟ್ಟರು. ಯಾರು ಮತಕ್ಕೆ ಹಾಗೂ ರಾಜನಿಗೆ ನಿಷ್ಠರೊ ಅವರೆಲ್ಲರೂ ರಾಜನ ಬಲಕ್ಕೆ, ಯಾರು ಕ್ರಾಂತಿಯನ್ನು ಬಯಸುತ್ತಾರೊ ಅವರು ಎಡಕ್ಕೆ ಎಂದು ವಿಭಜಿಸಲಾಯಿತು. 1791ರಲ್ಲಿ ಆಯ್ಕೆಯಾದ ಹೊಸ ಸದಸ್ಯರೂ ಹೀಗೆಯೇ ಪ್ರತ್ಯೇಕವಾಗಿ ಆಸೀನರಾಗುತ್ತಿದ್ದರು. ಆದರೆ ಬರಬರುತ್ತ, ಬಲಪಂಥೀಯರು ಎಂದರೆ ನಂಬಿಕೆಗಳ ಮೇಲೆ ಆಧಾರಿತವಾದವರು ಹಾಗೂ ಪಾರಂಪರಿಕವಾಗಿ ನಡೆದು ಬಂದದ್ದೆಲ್ಲವೂ ಹಾಗೆಯೇ ಮುಂದುವರಿಯಬೇಕು ಎಂದು ಬಯಸುವವರು. ಎಡ ಪಂಥದವರು ಎಂದರೆ ಸಾಮಾಜಿಕ ಸಮಾನತೆ ನೀಡುವವರು, ಶ್ರೇಣೀಕೃತ ಸಮಾಜಕ್ಕೆ ವಿರುದ್ಧವಾದವರು ಎಂದು ಬಿಂಬಿತವಾಯಿತು. ವಿದೇಶದಲ್ಲಿ ಓದಿದ ಭಾರತೀಯ ಬುದ್ಧಿವಂತರು ಹಾಗೂ ಭಾರತಕ್ಕೆ ಕಾಲಿಟ್ಟ ಕಮ್ಯುನಿಸ್ಟ್ ಸಿದ್ಧಾಂತದ ಪ್ರಭಾವದಿಂದಾಗಿ ಇಲ್ಲಿಯೂ ಅದೇ ಎರಕವನ್ನು ಹೊಯ್ಯಲಾಯಿತು.

ಅಭಿವೃದ್ಧಿಯ ಮಾದರಿಗಳನ್ನು ವಿದೇಶದಿಂದ ಆಮದು ಮಾಡಿದಂತೆಯೇ, ಎಡ-ಬಲ ಚಿಂತನೆಗಳನ್ನೂ ಎರವಲು ತಂದಿದ್ದು. ನಂಬಿಕೆ, ಧರ್ಮಗಳನ್ನು ವಿರೋಧಿಸುವವರು, ಅಭಿವೃದ್ಧಿ ಪರವಾಗಿರುವವರು ಎಡ, ಅಭಿವೃದ್ಧಿಗೆ ಹಿಂದೇಟು ಹಾಕುತ್ತ ಯಥಾಸ್ಥಿತಿ ಬೇಕೆನ್ನುವವರು ಬಲ ಎಂದು ವಿಂಗಡಿಸಲಾಯಿತು. ಹಾಗೆ ನೋಡಿದರೆ ಸೈದ್ಧಾಂತಿಕವಾಗಿ ಭಾರತದಲ್ಲಿ ಶುದ್ಧ ಎಡ ಹಾಗೂ ಬಲ ಎಂಬುದೇ ಇಲ್ಲ. ತಮಗೆ ಆಗದವರನ್ನು ಹೀಗಳೆಯಲು, ಪ್ರತ್ಯೇಕವಾಗಿಸಲು ಪರಸ್ಪರರು ಬಳಕೆ ಮಾಡುತ್ತಿರುವ ವ್ಯಾಖ್ಯಾನಗಳು ಅಷ್ಟೆ.

ಇದನ್ನೂ ಓದಿ: ವಿಸ್ತಾರ ಅಂಕಣ | ರಾಜಕಾರಣಿಗಳು ನಮಗೆ ಹೇಳುತ್ತಿರುವ ʼಅಭಿವೃದ್ಧಿʼ, ನಿಜವಾಗಿಯೂ ಸಮಾಜದ ʼಅಧೋಗತಿʼ

ಅದೇ ರೀತಿ ಆರ್‌ಎಸ್ಎಸ್ ಅನ್ನು ಬಲಪಂಥೀಯ ಎಂದು ಬ್ರ್ಯಾಂಡ್ ಮಾಡಲಾಯಿತು. ಮುಖ್ಯವಾಗಿ ಮುಸ್ಲಿಂ ವಿರೋಧಿ ಎಂದು ಬಿಂಬಿಸಲಾಯಿತು. ಆದರೆ ನಿಜವಾಗಿಯೂ ಆರ್‌ಎಸ್ಎಸ್ ಹಾಗೆ ಇರಲಿಲ್ಲ. ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ, ಆರ್‌ಎಸ್ಎಸ್‌ನ ಪರಿವಾರ ಸಂಘಟನೆಗಳಲ್ಲಿ ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ, ರೈತರಿಗೆ ಸಂಘಟನೆಗಳು ಇರುವಂತೆಯೇ ಮುಸ್ಲಿಮರಿಗೂ ಒಂದು ಘಟಕ ಇದೆ. ಮುಸ್ಲಿಂ ರಾಷ್ಟ್ರೀಯ ಮಂಚ್ ಎನ್ನಲಾಗುವ ಈ ಘಟಕವು ದೇಶದ ನಾನಾ ಭಾಗಗಳಲ್ಲಿ ಸಕ್ರಿಯವಾಗಿದೆ. ಮುಸ್ಲಿಮರನ್ನು ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿ ತರಬೇಕು ಎಂಬ ಕಾರಣಕ್ಕೆ ಅನೇಕ ಯೋಜನೆಗಳನ್ನು, ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ತಾನು ಕಾರ್ಯ ನಿರ್ವಹಿಸುವಷ್ಟು ಪ್ರದೇಶದಲ್ಲಿ ಪರಿಣಾಮಕಾರಿಯಾಗಿದೆಯಾದರೂ, ಒಟ್ಟಾರೆ ದೇಶದಲ್ಲಿ ಆರ್‌ಎಸ್ಎಸ್ ಕುರಿತು ಇರುವ ಮುಸ್ಲಿಂ ವಿರೋಧಿ ಹಣೆಪಟ್ಟಿಯಿಂದಾಗಿ ಆ ಮಟ್ಟಿಗಿನ ವ್ಯಾಪಕತೆ ಸಿಕ್ಕಿಲ್ಲ. ಬಹುಶಃ ದತ್ತಾತ್ರೇಯ ಹೊಸಬಾಳೆ ಅವರು ಹೇಳಿರುವ ಮಾತು ಈ ನಿಟ್ಟಿನಲ್ಲಿ ಪ್ರಮುಖವಾಗುತ್ತದೆ.

ಆಗಲೇ ಹೇಳಿದಂತೆ, ಯಾವುದೇ ದೇಶ ಹೇಗೆ ಒಂದು ಬಹುದೊಡ್ಡ ಸಮುದಾಯವನ್ನು ಬಿಟ್ಟು ವಿಶ್ವಗುರು ಆಗಲು ಸಾಧ್ಯವಿಲ್ಲವೊ, ಹಾಗೆಯೇ ಬಹುದೊಡ್ಡ ಸಮುದಾಯವನ್ನು ಬಿಟ್ಟು ಒಂದು ಸಂಘಟನೆ ದೇಶಾದ್ಯಂತ ವಿಸ್ತರಿಸಲು (ಸರ್ವವ್ಯಾಪಿ) ಆಗಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ ಸಬ್ ಕಾ ಸಾಥ್-ಸಬ್ ಕಾ ವಿಕಾಸ್ ಘೋಷಣೆಯಿಂದ, ದತ್ತಾತ್ರೇಯ ಹೊಸಬಾಳೆ ಅವರು ಹೇಳಿದ ಒಳಗೊಳ್ಳುವಿಕೆಯ ಮಾತಿನವರೆಗೂ ಅದೇ ಒಗ್ಗಟ್ಟಿನ ಮಂತ್ರವಿದೆ. ಪಕ್ಷಗಳು, ಸಂಘಟನೆಗಳು ಘೋಷಣೆಗಳನ್ನು ಅನೇಕ ಮಾಡುತ್ತವೆ. ಆದರೆ ಅದರಂತೆ ನಡೆದುಕೊಳ್ಳುತ್ತವೆಯೇ? ಭಾರತ್ ಜೋಡೊ ಎಂದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡಿಗೆಯಲ್ಲಿ ʼಒಳಗೊಳ್ಳುವಿಕೆʼ ಹೇಗೆ ಪ್ರತಿಬಿಂಬವಾಯಿತು? ಮುಂದಿನ ಲೇಖನದಲ್ಲಿ ಈ ಅಂಶಗಳ ಕುರಿತು ಚರ್ಚಿಸೋಣ.

ಇದನ್ನೂ ಓದಿ: ವಿಸ್ತಾರ ಅಂಕಣ | ಬ್ರಿಟಿಷರು ನಮ್ಮನ್ನು ಬರ್ಬಾದ್ ಮಾಡುವವರೆಗೆ ಭಾರತದ ಆರ್ಥಿಕತೆ ವಿಶ್ವದಲ್ಲೇ ನಂ.1 ಆಗಿತ್ತು ಎನ್ನುವುದು ಎಷ್ಟು ಜನರಿಗೆ ಗೊತ್ತು?

Exit mobile version