Site icon Vistara News

ಸವಿಸ್ತಾರ ಅಂಕಣ | ನಮ್ಮ ನ್ಯಾಷನಲ್‌ ಹೀರೊಗಳನ್ನು ನಾವು ಗೌರವಿಸುವುದು ತಪ್ಪಾ?

soldier

ಸವಿಸ್ತಾರ ಅಂಕಣದ ಆಡಿಯೊವನ್ನು ಇಲ್ಲಿ ಕೇಳಿ…

http://vistaranews.com/wp-content/uploads/2022/08/savistara.mp3

ಅಯ್ಯೋ ಶಿವನೇ, ಏನಾಗಿದೆ ಈ ದೇಶಕ್ಕೆ. ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುವಿರೇಕೆ? ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಬಗ್ಗೆ ಅಗೌರವದಿಂದ ಮಾತನಾಡುತ್ತಿರುವಿರಲ್ಲಾ? ಸ್ವಾತಂತ್ರ್ಯದ ಬೆಲೆಯೇ ನಿಮಗೆ ಗೊತ್ತಾಗುತ್ತಿಲ್ಲವಲ್ಲ. ನಿಮ್ಮ ಮಕ್ಕಳಿಗೆ ಏನನ್ನು ಹೇಳುವಿರಿ?

ಶಿವಮೊಗ್ಗದ ರಸ್ತೆಗಳಲ್ಲಿ ನಿವೃತ್ತ ಯೋಧ ಮಂಜುನಾಥ್ ಎಂಬವರು ಹೀಗೆ ಅಸಹಾಯಕವಾಗಿ, ನೋವಿನಿಂದ ಗಟ್ಟಿಯಾಗಿ ಕಿರುಚುತ್ತಿದ್ದರೆ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಗುಂಗಿನಲ್ಲಿದ್ದ ಒಂದಿಷ್ಟು ಜನರ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿದ್ದವೇನೋ? ಬಲ್ಲವರು ಯಾರು? ಆಗಸ್ಟ್ 18ರಂದು ಸೇನಾ ಸಮವಸ್ತ್ರ ತೊಟ್ಟು, ಕೈಯಲ್ಲೊಂದು ರಾಷ್ಟ್ರಧ್ವಜ ಹಿಡಿದು, ಸ್ವಾತಂತ್ರ್ಯ ಹೋರಾಟಗಾರನ್ನು ಸ್ಮರಿಸುತ್ತಾ, ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗುತ್ತ ರಸ್ತೆಗಳಲ್ಲಿ ಅವರು ಸಂಚರಿಸುತ್ತಿದ್ದ ಪರಿ ಮಾತ್ರ ನಿಜಕ್ಕೂ ನಾವೆಲ್ಲರೂ ಯೋಚಿಸಬೇಕಾದ ಸಂಗತಿ. ಅಯ್ಯೋ ಭಾರತಾಂಬೆ!

ಸ್ವಾತಂತ್ರ್ಯದ ೭೫ನೇ ವರುಷ ಎಂಬುದು ಗಡಿ ಭದ್ರತಾ ಪಡೆಯಲ್ಲಿ (ಬಿಎಸ್ಎಫ್) ಹತ್ತಾರು ವರ್ಷ ಸೇವೆ ಸಲ್ಲಿಸಿದ ಈ ಯೋಧನ ಪಾಲಿಗೆ ಮನೆಯ ಹಬ್ಬದಂತೆಯೇ ಇರಬೇಕು. ಆದರೆ, ಎಲ್ಲವನ್ನೂ ರಾಜಕೀಕರಣಗೊಳಿಸಿರುವ ನಮ್ಮ ರಾಜಕಾರಣಿಗಳು ಸ್ವಾತಂತ್ರ್ಯ ಹೋರಾಟಗಾರರನ್ನೂ ರಾಜಕೀಯ ಕಾರಣಕ್ಕಾಗಿ ಬಳಸಿಕೊಳ್ಳುತ್ತಿರುವುದು, ಯೋಧ ಮಂಜುನಾಥ್ ಅವರಲ್ಲಿ ನಿಜಕ್ಕೂ ನೋವು ತಂದಿತ್ತೇನೋ.

ಇಷ್ಟಕ್ಕೂ ಅವರ ಕಳಕಳಿಯಾದರೂ ಏನು? “ಭಾರತ ದೇಶಕ್ಕಾಗಿ ವೀರಯೋಧರು, ವೀರ ಮಾತೆಯರು ತ್ಯಾಗ ಮಾಡಿದ್ದಾರೆ. ಯಾವುದೇ ರಾಜಕೀಯ ನಾಯಕರ ಹೇಳಿಕೆಗಾಗಲಿ, ಕಿಡಿಗೇಡಿಗಳ ಹೇಳಿಕೆಗಾಗಲಿ, ಕಿವಿಗೊಡಬೇಡಿ. ನಮ್ಮ ಏಕತೆಗೆ ಭಂಗ ತರುವಂತಹ ಕೆಲಸ ಮಾಡಬೇಡಿ. ಇದು ನಾಳೆ ನಮ್ಮ ದೇಶದ ಮಕ್ಕಳ ಭವಿಷ್ಯ, ಈ ಭಾರತದ ಭವಿಷ್ಯದ ವಿಚಾರ. ನಮ್ಮೆಲ್ಲರ ಸಹಕಾರದಿಂದಲೇ ಮುಂದೊಂದು ದಿನ ಈ ದೇಶ ವಿಶ್ವ ಗುರುವಾಗಲು ಸಾಧ್ಯ. ಯಾವುದೇ ಜಾತಿ, ಮತದ ಭೇದವಿಲ್ಲದೆ ನಮ್ಮ ರಾಷ್ಟ್ರಧ್ವಜ, ಹೋರಾಟಗಾರರನ್ನು ಸ್ಮರಿಸೋಣ. ಅವರಿಗೆ ಅವಮಾನ ಮಾಡಬೇಡಿ. ಬೋಲೋ ಭಾರತ್ ಮಾತಾ ಕೀ, ಜೈ”

ಗಡಿಯಲ್ಲಿ ಬಂದೂಕು ಹಿಡಿದು ದೇಶ ಕಾಯುತ್ತಿರುವಾಗ ಮಂಜುನಾಥ್ ಅವರಿಗೆ, ಆ ಹೊತ್ತಿಗೆ ಅವರ ಹೆಂಡತಿ ಮಕ್ಕಳಾಗಲಿ, ತನಗೆ ಸಿಗುವ ಸಂಬಳವಾಗಲಿ ಲೆಕ್ಕಕ್ಕೆ ಬಂದಿರುವುದಿಲ್ಲ. ತನ್ನ ಒಂದು ಕ್ಷಣದ ಲೋಪವನ್ನೂ ಶತ್ರುಗಳು ದುರುಪಯೋಗಪಡಿಸಿಕೊಂಡು ಒಳನುಗ್ಗಬಹುದು. ಈ ಲೋಪ ಎಸಗಿದ್ದಕ್ಕೆ ತನ್ನ ಪ್ರಾಣವಂತೂ ಹೋಗುತ್ತದೆ, ಆದರೆ ಅದಕ್ಕಿಂತಲೂ ಹೆಚ್ಚಾಗಿ ನನ್ನ ದೇಶದ ಮಣ್ಣಿನೊಳಗೆ ಶತ್ರು ಕಾಲಿಡುತ್ತಾನೆ. ಪ್ರಾಣಕ್ಕಿಂತಲೂ ಹೆಚ್ಚಾದ ದೇಶದ ಮಣ್ಣಿಗೆ ಶತ್ರು ಕಾಲಿಟ್ಟರೆ, ದೇಶದೊಳಗೆ ಜೀವನ ನಡೆಸುತ್ತಿರುವ ಕೋಟ್ಯಂತರ ಭಾರತೀಯರ ಮಾನ, ಪ್ರಾಣ ಅಪಾಯಕ್ಕೆ ಸಿಲುಕುತ್ತದೆ. ಹಾಗಾಗಿ ನನ್ನ ಎಲ್ಲ ಚಿಂತೆಗಳನ್ನೂ ಬಿಟ್ಟು ಗಡಿ ಕಾಯಬೇಕು ಎಂದು ಬಂದೂಕು ಹಿಡಿದು ನಿಂತಿರುತ್ತಾರೆ. ಹಾಗಾಗಿಯೇ ಏನೋ ಅವರಿಗೆ ಸ್ವಾತಂತ್ರ್ಯದ ಬೆಲೆ ಗೊತ್ತು.

ಅಂಥಾ ಮಂಜುನಾಥ್ ಸೇವೆ ಮುಗಿಸಿ, ತಾನು ಇಷ್ಟು ವರ್ಷ ಕಾದ ಸಮಾಜದಲ್ಲಿ ಜೀವನ ನಡೆಸಲು ಬಂದಿದ್ದಾರೆ. ಅಂಥವರು ಇಲ್ಲಿ ಕಾಣುತ್ತಿರುವುದೇನೋ? ಬರೀ ದ್ವೇಷ, ಅಸೂಯೆ, ರಾಷ್ಟ್ರಧ್ವಜಕ್ಕೆ ಅವಮಾನ, ರಾಷ್ಟ್ರನಾಯಕರಿಗೆ ಅಪಮಾನ !

ಕೇವಲ ನಾಲ್ಕೈದು ದಿನದ ಹಿಂದೆ ನಾವು 75ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿದೆವು. ಡಚ್ಚರು, ಫ್ರೆಂಚರು, ಪೋರ್ಚುಗೀಸರಿಂದ ಆರಂಭವಾಗಿ ಮೊಘಲರು, ಬ್ರಿಟಿಷರವರೆಗೆ ಸುಮಾರು ಒಂದು ಸಾವಿರ ವರ್ಷ ಈ ಸ್ವಾತಂತ್ರ್ಯಕ್ಕಾಗಿ ಭಾರತ ದೇಶ ಹೋರಾಡಿದೆ. ನಾವು ಈಗ ಆಚರಿಸುತ್ತಿರುವ ಸ್ವಾತಂತ್ರ್ಯೋತ್ಸವ, ಬ್ರಿಟಿಷರಿಂದ ಸಿಕ್ಕ ಮುಕ್ತಿಯ ದಿನಾಂಕದ ನೆನಪಿಗಾಗಿ.

ಬ್ರಿಟಿಷರು ಭಾರತಕ್ಕೆ ಬಂದ ಐದಾರು ದಶಕದಲ್ಲೆ ಅವರ ವಿರುದ್ಧ ಬಂಡಾಯದ ದನಿಗಳು ಏಳತೊಡಗಿದ್ದವು. ಸಂಘಟಿತವಾಗಿಯೂ 1780ರಷ್ಟು ಹಿಂದೆಯೇ ಮದರಾಸು ಸೇನೆಯ ಕರ್ನಾಟಕ ಘಟಕದವರು ತಲ್ಲಿಚೇರಿಯಲ್ಲಿ ಬಂಡೆದ್ದಿದ್ದರು. ಅದಕ್ಕೂ ಮುನ್ನವೇ 1757ರ ಪ್ಲಾಸಿ ಕದನ, 1764ರ ಬಕ್ಸಾರ್ ಆಂದೋಲನಗಳಲ್ಲಿಯೂ ಭಾರತದ ಸ್ವಾಭಿಮಾನದ ಬಯಕೆ ಪ್ರಕಟವಾಗಿತ್ತು. 1806ರಲ್ಲಿ ವೆಲ್ಲೂರು ಬಂಡಾಯ ಎಂದೇ ಪ್ರಸಿದ್ಧವಾದ ಸಂಗ್ರಾಮ ನಡೆಯಿತು. ಈ ಹೋರಾಟದ ನೇತೃತ್ವವನ್ನೂ ಕರ್ನಾಟಕದ ಸೈನಿಕರೇ ವಹಿಸಿದ್ದರು. 19ನೇ ಶತಮಾನದ ಪ್ರಾರಂಭದಲ್ಲೆ ಕರ್ನಾಟಕದ, ಇದೀಗ ವೀರ ಸಾವರ್ಕರ್ ವಿಚಾರವಾಗಿ ಸಂಘರ್ಷ ನಡೆಯುತ್ತಿರುವ ಶಿವಮೊಗ್ಗದ ಶಿಕಾರಿಪುರ-ಬಿದನೂರಿನಿಂದ ಆರಂಭಗೊಂಡು ಬೆಳಗಾವಿ-ಕೊಲ್ಹಾಪುರದವರೆಗೆ ಹರಡಿದ ಧೋಂಡಿಯಾ ಬಂಡಾಯವೂ 1800ರಲ್ಲಿ ನಡೆಯಿತು. ನಂತರ, ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದೇ ಹೆಸರು ಪಡೆದ 1857ರ ಸಂಘಟಿತ ಪ್ರಯತ್ನ ನಿರ್ಣಾಯಕ ಪಾತ್ರ ವಹಿಸಿತು.

ಸೈನ್ಯದ ಬಂಡಾಯ, ಸಶಸ್ತ್ರ ಹೋರಾಟವಷ್ಟೆ ಅಲ್ಲದೆ ಸಾಮಾಜಿಕ, ಆರ್ಥಿಕ, ಧಾರ್ಮಿಕ ಹೋರಾಟಗಳು ಮುಂದುವರಿದವು. ಪ್ರಮುಖವಾಗಿ ಹೇಳಲಾಗುವ ಭಗತ್ ಸಿಂಗ್, ರಾಜಗುರು, ಸುಖದೇವ್, ಚಂದ್ರಶೇಖರ್ ಆಜಾದ್, ಲಾಲ್-ಬಾಲ್-ಪಾಲ್ ಎಂದೇ ಖ್ಯಾತರಾದ ಲಾಲಾ ಲಜಪತರಾಯ್, ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್, ಸುಭಾಷ್ಚಂದ್ರ ಬೋಸ್, ಮಹಾತ್ಮಾ ಗಾಂಧೀಜಿಯಂತಹ ನೂರಾರು ಮಹನೀಯರನ್ನು ಹೊರತುಪಡಿಸಿ ಇನ್ನೂ ಲಕ್ಷಾಂತರ ಚೇತನಗಳ ಹೋರಾಟದ ಫಲವೇ ಈ ಸ್ವಾತಂತ್ರ್ಯ.. ಅವರರೆಲ್ಲರೂ ಅಜ್ಞಾತ ವೀರರು ಎಂದು ಒಟ್ಟಿಗೆ ನಮನ ಸಲ್ಲಿಸಬಹುದೇ ಹೊರತು, ಅವರ ಕುರಿತು ಸಣ್ಣದೊಂದು ಪರಿಚಯವನ್ನು ಓದಲೂ ನಮ್ಮ ಜೀವಮಾನ ಸಾಲುವುದಿಲ್ಲ.

ದುರಂತವೆಂದರೆ, ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದು 75 ವರ್ಷವಾದರೂ ನಮ್ಮ ದೇಶದಲ್ಲಿ, ಸ್ವಾತಂತ್ರ್ಯ ಹೋರಾಟಗಾರರು ಯಾರು ಎಂಬ ಪಟ್ಟಿ ಸಿದ್ಧಪಡಿಸುವುದರಲ್ಲೇ ನಿರತರಾಗಿದ್ದೇವೆ. ಸ್ವಾತಂತ್ರ್ಯ ಹೋರಾಟಗಾರ ಎಂದು ಬಿರುದು ಪಡೆದು ಪಿಂಚಣಿ ಪಡೆಯುವ ಯಾವುದೇ ಉದ್ದೇಶ, ಆ ಅಗಲಿದ ಚೇತನಗಳಿಗೆ ಇರಲಿಲ್ಲ. ಕನಿಷ್ಠ ತಾವು ಯಾರಿಗಾಗಿ ಹೋರಾಟ ನಡೆಸುತ್ತಿದ್ದರೋ ಆ ಜನರಿಂದಲೂ ಪ್ರಶಂಸೆಯನ್ನೂ ಬಯಸದೆ, ಅನೇಕ ಬಾರಿ ಅದೇ ಜನರಿಂದ ದೂಷಣೆ, ಅಸಡ್ಡೆಯನ್ನು ಎದುರಿಸಿದವರು. ಸ್ವಾತಂತ್ರ್ಯ ಹೋರಾಟಗಾರ ಎನ್ನಲು ಮಾನದಂಡವೇನು ಎಂದು, ಆ ಸಮಯದಲ್ಲಿ ಹುಟ್ಟೇ ಇಲ್ಲದ, ಹುಟ್ಟಿದ್ದರೂ ಹಾಲಗಲ್ಲದ ಹಸುಳೆಯಾಗಿದ್ದವರೆಲ್ಲರೂ ನಿರ್ಧಾರ ಮಾಡುವ ದುರಂತ ಎದುರಾಗಿದೆ.

ದೇಶಕ್ಕೆ ಪ್ರಾಣ ಕೊಟ್ಟವರು ಸ್ವಾತಂತ್ರ್ಯ ಹೋರಾಟಗಾರರೆ? ದೇಶಕ್ಕೆ ಸೇವೆ ಸಲ್ಲಿಸಿದವರು ಸ್ವಾತಂತ್ರ್ಯ ಹೋರಾಟಗಾರರೆ? ರಕ್ತ ಹರಿಸಿದವರು, ನೇಣಿಗೇರಿದವರು ಸ್ವಾತಂತ್ರ್ಯ ಹೋರಾಟಗಾರರೆ? ಗಾಂಧೀಜಿಯ ಕರೆಗೆ ಓಗೊಟ್ಟು ಸ್ವಾಭಿಮಾನಕ್ಕಾಗಿ ಬಟ್ಟೆ ನೇಯ್ದವರು ಸ್ವಾತಂತ್ರ್ಯ ಹೋರಾಟಗಾರರೆ? ಸ್ವಾತಂತ್ರ್ಯ ಹೋರಾಟಗಾರರಿಗೆ ಗುಪ್ತವಾಗಿ ಊಟ ಕೊಟ್ಟು ಬಂದವರು ಸ್ವಾತಂತ್ರ್ಯ ಹೋರಾಟಗಾರರೆ? ಗಂಡ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದಾಗ ತನ್ನ ಕುಟುಂಬವನ್ನು ಸಾಕಿ ಸಲಹಿದ ಮಾತೆ ಸ್ವಾತಂತ್ರ್ಯ ಹೋರಾಟಗಾರರೇ? ಹೀಗೆ…ಸಮಾಜದ ಯಾವ ಕ್ಷೇತ್ರವನ್ನು ಉದಾಹರಣೆಯಾಗಿ ತೆಗೆದುಕೊಂಡರೂ ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದವರಿದ್ದಾರೆ. ಇವರಲ್ಲಿ ಯಾರನ್ನು ಪಟ್ಟಿಯಿಂದ ಹೊರತೆಗೆಯಬೇಕು ಎಂದು ಚರ್ಚೆ ನಡೆಯುತ್ತಿದೆ. ಅದು ಇಂದಿನ ಅಪಾಯಕಾರಿ ಸನ್ನಿವೇಶ.

ಹೋಗಲಿ, ಕಾಲಚಕ್ರದಲ್ಲಿ ಯಾವುದಾದರೂ ಅಪಾತ್ರರ ಹೆಸರುಗಳು ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಸೇರಿಕೊಂಡುಬಿಟ್ಟಿದ್ದರೆ ಅದಕ್ಕೆ ಚರ್ಚೆ ಹೇಗೆ ನಡೆಯಬೇಕು? ಇಂದು ನಡೆಯುತ್ತಿರುವುದು ಚರ್ಚೆಯಲ್ಲ. ಮೊದಲಿಗೆ ಇಂತಹ ವ್ಯಕ್ತಿಯನ್ನು ವಿರೋಧಿಸಬೇಕು ಎಂದು ನಿರ್ಧಾರ ಮಾಡಲಾಗುತ್ತದೆ. ನಂತರ ಆ ವ್ಯಕ್ತಿಯ ಲೋಪಗಳನ್ನೇ ಎತ್ತಿ ಹಿಡಿದು ದೂಷಣೆ ಮಾಡಲಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಮತ್ತೊಂದು ಗುಂಪು, ಆ ವ್ಯಕ್ತಿಯ ಉತ್ತಮ ಗುಣವನ್ನು ಹೊಗಳುವುದಷ್ಟೆ ಅಲ್ಲದೆ, ಮತ್ತೊಬ್ಬ ಸ್ವಾತಂತ್ರ್ಯ ಹೋರಾಟಗಾರನೂ ಹೀಗೇ ಮಾಡಿದ್ದರು ನೋಡಿ ಎಂದು ಅವಮಾನ ಮಾಡುತ್ತಾರೆ.

ಉದಾಹರಣೆಗೆ, ಸ್ವಾತಂತ್ರ್ಯವೀರ ಸಾವರ್ಕರರು ಬ್ರಿಟಿಷರಿಗೆ ಕ್ಷಮಾಪಣೆ ಕೋರಿ ಪತ್ರ ಬರೆದಿದ್ದರು ಎಂದು ಕೆಲವರು ಹೇಳಿದರೆ, ಆ ವಾದ ಸರಿಯೇ ತಪ್ಪೇ ಎಂದು ನಿರೂಪಿಸಲು ಹೋಗುವುದೇ ಇಲ್ಲ. ಅದಕ್ಕೆ ಪ್ರತ್ಯುತ್ತರವಾಗಿ, ಬ್ರಿಟಿಷರಿಗೆ ಮಹಾತ್ಮಾ ಗಾಂಧಿ ಬರೆದ ಪತ್ರವನ್ನು ಮುಂದಿಟ್ಟು, “ನಿಮ್ಮ ಸ್ವಾತಂತ್ರ್ಯ ಹೋರಾಟಗಾರ”ನೂ ಹೀಗೆ ಬರೆದಿದ್ದಾರೆ, ಈಗ ಏನೆನ್ನುತ್ತೀರ? ಎಂದು ವಾದ ಮಾಡಲಾಗುತ್ತದೆ. ಇದನ್ನು ಯಾರಾದರೂ ಆರೋಗ್ಯಕರ ಚರ್ಚೆ ಎನ್ನಲಾಗುತ್ತದೆಯೇ?

ಇನ್ನು ಸ್ವಾತಂತ್ರ್ಯ ಹೋರಾಟಗಾರರ ಪೈಕಿ ಯಾರು ಹೆಚ್ಚು ? ಯಾರು ಕಡಿಮೆ ? ಯಾರಲ್ಲಿ ಎಷ್ಟು ದೋಷವಿತ್ತು -ಎಂಬಿತ್ಯಾದಿ ಚರ್ಚೆಯೇ ಸರಿಯಲ್ಲ. ಎಲ್ಲದಕ್ಕೂ ಕಾಲ ಧರ್ಮ ವಿವೇಕ ಎಂಬುದೊಂದು ಇರುತ್ತೆ. ನಾವೇ ಈ ಹಿಂದೆ ತೆಗೆದುಕೊಂಡ ಅನೇಕ ನಿರ್ಧಾರಗಳು, ಆ ಕಾಲದ ಅಗತ್ಯವೋ, ಅನಿವಾರ್ಯವೋ ಆಗಿರುತ್ತದೆ. ಆ ಕಾಲಕ್ಕೆ ತಕ್ಕಂತೆ ನಿರ್ಧಾರ ಕೈಗೊಂಡಿರುತ್ತೇವೆ. ಅದನ್ನು ವರ್ತಮಾನದಲ್ಲಿ ಇಟ್ಟು ನೋಡಿದಾಗ, ತಪ್ಪು ಎನಿಸಿದರೂ, ಅದೊಂದು ಕಾಲ ಧರ್ಮದ ವಿವೇಕ ಎಂದು ಸುಮ್ಮನಾಗುತ್ತೇವೆ. ಇಂಥದ್ದೊಂದು ವಿವೇಕವೇ ಕಣ್ಮರೆಯಾಗಿದೆ. ಗಾಂಧಿ ದೇಶ ವಿಭಜನೆಗೆ ಕಾರಣರಾದರು, ನೆಹರು ಪ್ರಾಥಮಿಕ ಶಿಕ್ಷಣಕ್ಕೆ ಮಹತ್ವ ನೀಡಲೇ ಇಲ್ಲ, ಸಾವರ್ಕರ್ ಕ್ಷಮಾಪಣೆ ಪತ್ರ ಬರೆದುಕೊಟ್ಟರು- ಎಂಬಿತ್ಯಾದಿ ವಾದ-ವಿವಾದಗಳನ್ನು ಮೀರಿ ಆಲೋಚಿಸುತ್ತಲೇ ಇಲ್ಲ. ಇತಿಹಾಸದ ಈ ಸಂಗತಿಗಳು ವರ್ತಮಾನದ ಕೊಳ್ಳಿಗಳಾಗಿವೆ !

ಯಾವುದೇ ವ್ಯಕ್ತಿಯಲ್ಲಿ ದೋಷ ಇದ್ದೇ ಇರುತ್ತದೆ. ತನ್ನ ಎಲ್ಲೆಯನ್ನು(ಮರ್ಯಾದಾ) ಎಲ್ಲಿಯೂ ಮೀರದ ಶ್ರೀರಾಮಚಂದ್ರನನ್ನು ಮರ್ಯಾದಾ ಪುರುಷೋತ್ತಮ ಎನ್ನಾಗುತ್ತದೆ. ಅಂತಹ ಶ್ರೀರಾಮನನ್ನೂ ನಮ್ಮ ಸಮಾಜ ಪ್ರಶ್ನಿಸದೇ ಬಿಡಲಿಲ್ಲ, ಇನ್ನೂ ಬಿಟ್ಟಿಲ್ಲ. ಅಂತಹದ್ದರಲ್ಲಿ, ಸ್ವಾತಂತ್ರ್ಯ ಹೋರಾಟದಂತಹ ಅತ್ಯಂತ ಸಂಕೀರ್ಣ, ಬಹು ಆಯಾಮದ ಹೋರಾಟದಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬರಲ್ಲಿ ಪೂರ್ಣತ್ವವನ್ನು ನಿರೀಕ್ಷಿಸುವುದು ಸರಿಯೇ?

ಹಾಗೆ ನೋಡಿದರೆ, ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ೧೯೪೭ರಲ್ಲಿ ರಚನೆಯಾದ ಜವಹಾರ್ ಲಾಲ್ ನೆಹರು ಅವರ ಸಂಪುಟದಲ್ಲಿ ಸಚಿವರಾಗಿ ಯಾರೆಲ್ಲಾ ಇದ್ದರು ಹಾಗೂ ಅವರು ಯಾಕೆ ಸಂಪುಟಕ್ಕೆ ಸೇರಿಕೊಂಡರು ಎಂಬುದನ್ನು ಸರಿಯಾಗಿ ಓದಿಕೊಂಡರೆ, ಯಾರು ಸ್ವಾತಂತ್ರ್ಯ ಹೋರಾಟಗಾರ ? ಯಾರಲ್ಲ ಎಂಬ ವಾದ-ವಿವಾದಗಳಿಗೆ ವಿವೇಕದ ಉತ್ತರ ದೊರೆಯುತ್ತದೆ.

ಇದನ್ನೂ ಓದಿ: ಶಬ್ದಸ್ವಪ್ನ ಅಂಕಣ | ಭಾಷಾ ಬೋಧನೆಯ ಸೃಜನಶೀಲ ನೆಲೆಗಳು

ಸ್ವಾತಂತ್ರ್ಯ ಬಂದ ಮರುಕ್ಷಣವೇ ಕಾಂಗ್ರೆಸ್ಸಿನ ಮುಖಂಡರು ಸರ್ಕಾರದ ಭಾಗವಾಗಲು ತುದಿಗಾಲಲ್ಲಿ ನಿಂತಿದ್ದರು. ಆಗ ಗಾಂಧೀಜಿ ಅವರು ನೆಹರು ಮತ್ತು ಪಟೇಲರನ್ನು ಕರೆಸಿ ಹೇಳುತ್ತಾರೆ- ಸ್ವಾತಂತ್ರ್ಯ ಬಂದಿರುವುದು ಈ ದೇಶಕ್ಕೆ ಹೊರತು ಕಾಂಗ್ರೆಸ್ಸಿಗಲ್ಲ. ಹಾಗಾಗಿ ಸಂಪುಟದಲ್ಲಿ ಎಲ್ಲರೂ ಇರಬೇಕು ಎಂದು ಕಿವಿಮಾತು ಹೇಳುತ್ತಾರೆ. ಅದರ ಪರಿಣಾಮವೇ, ಕಾಂಗ್ರೆಸ್ಸಿನ ಕಟ್ಟಾ ವಿರೋಧಿ ಬಾಬಾ ಸಾಹೇಬ್ ಅಂಬೇಡ್ಕರ್, ಆರೆಸ್ಸೆಸ್ಸಿನ ಶಾಮಾಪ್ರಸಾದ್ ಮುಖರ್ಜಿ ಸೇರಿದಂತೆ ಕಾಂಗ್ರೆಸ್ಸೇತರ ಅನೇಕ ಮುಖಂಡರು ಇದ್ದರು. ಇದರರ್ಥವೇನು ? ಕಾಂಗ್ರೆಸ್ಸೇತರ ಅನೇಕ ಸಂಘಟನೆಗಳು ಕೂಡ ಭಾರತದ ಬಿಡುಗಡೆ ಬಯಸಿದ್ದರು ಎಂದೇ ಅರ್ಥ. ವಿಧಾನ ಬೇರೆ ಇರಬಹುದು. ಆದರೆ, ಎಲ್ಲರ ಅಪೇಕ್ಷೆಯೂ ಸ್ವಾತಂತ್ರ್ಯವೇ ಆಗಿತ್ತು. ಅದಕ್ಕಾಗಿ ಹಂಬಲಿಸಿದವನು ಸಹಜವಾಗಿ ಸ್ವಾತಂತ್ರ್ಯ ಹೋರಾಟಗಾರನೇ ಆಗಿದ್ದ. ಇಷ್ಟು ಸರಳ ಸತ್ಯವನ್ನೂ ನಾವು ಅರ್ಥಮಾಡಿಕೊಳ್ಳುತ್ತಿಲ್ಲ !

ಸ್ವಾತಂತ್ರ್ಯದ ಬಳಿಕ ನಾನು ಕಾಂಗ್ರೆಸ್ಸಿನ ೧೨ ಆಣೆ ಸದಸ್ಯನಾಗಿ ಇರಲು ಬಯಸುವುದಿಲ್ಲ. ಅದನ್ನು ವಿಸರ್ಜಿಸಿ ಎಂದು ಗಾಂಧಿ ಕರೆ ಕೊಟ್ಟಿದ್ದು ಇತಿಹಾಸ ಬಲ್ಲ ಎಲ್ಲರಿಗೂ ತಿಳಿದಿರುವ ವಿಚಾರವೇ. ಇದರರ್ಥ ಏನು ? ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿತ್ತು. ಅದೊಂದು ಬೃಹತ್ ಜನಾಂದೋಲನವೇ ಹೊರತು, ರಾಜಕೀಯ ವ್ಯವಸ್ಥೆಯಲ್ಲ. ಗಾಂಧಿ ಮಾತನ್ನು ಧಿಕ್ಕರಿಸಿ, ಅದನ್ನು ರಾಜಕೀಯ ಪಕ್ಷವಾಗಿ ಮುಂದುವರಿಸಿದ ಕಾಂಗ್ರೆಸ್, ವಾರಸುದಾರಿಕೆ ಹೇಳಿಕೊಳ್ಳುವುದು ತೀರಾ ತಪ್ಪಲ್ಲ. ಆದರೆ, ಈ ವಾರಸುದಾರಿಕೆಗೆ ಗಾಂಧೀಜಿ ಸಹಮತ ಇರಲಿಲ್ಲ ಎಂಬುದನ್ನು ಆ ಪಕ್ಷದ ಮುಖಂಡರು ಮರೆಯಬಾರದು.

ಗಾಂಧಿ, ನೆಹರು ವಿಷಯದಲ್ಲಿ ಸರ್ಕಾರ ಮತ್ತು ಬಿಜೆಪಿ ಹಾಗೂ ಇತರರು ಕೂಡ ಇದೇ ತಪ್ಪನ್ನು ಮಾಡುತ್ತಿರುತ್ತದೆ.

ಕಡೆಯದಾಗಿ- ಆಧ್ಯಾತ್ಮಿಕವಾಗಿ ಹೇಳುವುದಾದರೆ, ವ್ಯಕ್ತಿಯೊಬ್ಬ ಪೂರ್ಣತ್ವವನ್ನು ಪಡೆಯುವುದು ಆತ ಇಹಲೋಕವನ್ನು ತ್ಯಜಿಸಿ ಪೂರ್ಣತ್ವದೊಂದಿಗೆ ಸೇರಿಕೊಂಡಾಗಲೆ. ಹಾಗಾಗಿ ಸ್ವಾತಂತ್ರ್ಯ ಹೋರಾಟಗಾರರನ್ನು ಅವರ ಕಡೆಯವರು, ಇವರ ಕಡೆಯವರು ಎಂದು ವಿಭಜಿಸುವುದು, ಅದರಿಂದ ಯಾವುದೋ ಕ್ಷಣಿಕ ರಾಜಕೀಯ ಲಾಭಕ್ಕೆ ಎಣಿಸುವುದಕ್ಕಿಂತ ಮಹಾಪರಾಧ ಇನ್ನೊಂದಿಲ್ಲ. ಅವರ ಉದ್ದೇಶವೊಂದೇ, ಅದು ಭಾರತ ಮಾತೆಗೆ ಸಂಕೋಲೆಯಿಂದ ಮುಕ್ತಿ. ಬನ್ನಿ, ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸೋಣ. ಎಲ್ಲರಲ್ಲೂ ಇರುವ ಒಳಿತನ್ನು ಮೆರೆಸೋಣ. ಲೋಪಗಳನ್ನು ಚರ್ಚಿಸೋಣ. ದೋಷಗಳನ್ನು ಮರೆಯೋಣ. ಪ್ರಮಾದಗಳನ್ನು ಕ್ಷಮಿಸಿಬಿಡೋಣ. ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ನಾವು ಮಾಡಬಹುದಾದ ಅತ್ಯಂತ ಸಣ್ಣ ದೇಶಸೇವೆ. ಮಂಜುನಾಥ ಅವರಂತಹ ಲಕ್ಷಾಂತರ ಸೈನಿಕರಿಗೆ ನೀಡಬಹುದಾದ ಕನಿಷ್ಠ ಗೌರವ.

ಇದನ್ನೂ ಓದಿ: ಧೀಮಹಿ ಅಂಕಣ | ಕಾಲದೇಶದ ಸ್ಮರಣೆಯ ಮಹಾಸಂಕಲ್ಪ

Exit mobile version