ಬೂತ್ ಕ್ಯಾಪ್ಚರಿಂಗ್ ಎಂಬ ಪದವನ್ನು ಬಹುಶಃ ಈಗಿನ ಅನೇಕ ಮತದಾರರು ಕೇಳಿರುವುದೇ ಇಲ್ಲ. ಸುಮಾರು ಮೂರು ದಶಕದ ಹಿಂದೆ ಭಾರತದ ಪ್ರತಿ ಚುನಾವಣೆಗಳ ಸಂದರ್ಭದಲ್ಲೂ ಈ ಪದ ಮಾಧ್ಯಮಗಳಲ್ಲಿ ಹೆಡ್‌ಲೈನ್ ಆಗಿ ಕಾಣಿಸಿಕೊಳ್ಳುತ್ತಲೇ ಇತ್ತು. ರಾಜಕೀಯ ಪಕ್ಷಗಳೂ, ಅದರ ಚೇಲಾಗಳು, ಗೂಂಡಾಗಳು ಬೂತ್‌ಗಳ ಬಳಿ ನಿಂತು ಮತದಾರರನ್ನು ಬೆದರಿಸುತ್ತಿದ್ದರು. ತಮ್ಮ ವಿರುದ್ಧ ಮತ ಹಾಕಬಹುದು ಎನ್ನುವ ಅನುಮಾನ ಇರುವವರನ್ನು ಒಳಗೆ ಬಿಡದೆ, ತಮ್ಮವರನ್ನೇ ಒಳಗೆ ಕಳುಹಿಸಿ ಕಳ್ಳ ಮತದಾನ ಮಾಡಿಸುತ್ತಿದ್ದರು. ತಮ್ಮ ಹೆಸರಿನಲ್ಲಿ ಮತದಾನ ಆಗಿಹೋಗಿದೆ ಎನ್ನುವ ವಿಚಾರವೇ ಅನೇಕರಿಗೆ ತಿಳಿಯುತ್ತಿರಲಿಲ್ಲ. ಇನ್ನೊಂದು ವಿಧಾನವೆಂದರೆ, ತಮ್ಮ ಪಕ್ಷದ ವಿರುದ್ಧ ಮತ ಚಲಾಯಿಸಬಲ್ಲ ಮತದಾರರಿಗೆ ಹಣ ನೀಡಿ ಅಥವಾ ಬೆದರಿಸಿ, ಅವರನ್ನು ತಟಸ್ಥರನ್ನಾಗಿಸುವ ಪ್ರಯತ್ನವೂ ಎಗ್ಗಿಲ್ಲದೇ ನಡೆಯುತ್ತಿತ್ತು.
ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ, ಮತಗಟ್ಟೆಯಿಂದ ಮತಪೆಟ್ಟಿಗೆ ಹೊತ್ತು ತೆರಳುವ ವಾಹನಗಳನ್ನು ತಡೆದು ಇಡೀ ಮತಪೆಟ್ಟಿಗೆಯನ್ನೇ ಅಪಹರಿಸುವುದು. ತಮ್ಮ ಬಳಿ ಅಂತಹದ್ದೇ ಮತಪೆಟ್ಟಿಗೆಯನ್ನು ಸಿದ್ಧಪಡಿಸಿಟ್ಟುಕೊಂಡು, ತಮ್ಮ ಪಕ್ಷದ ಅಭ್ಯರ್ಥಿಗೆ ಹೆಚ್ಚು ಮತ ಚಲಾಯಿಸಿರುವಂತೆ ನಕಲಿ ಮತದಾನ ಮಾಡಿಟ್ಟುಕೊಳ್ಳುವುದು. ಅಸಲಿ ಮತಪೆಟ್ಟಿಗೆ ಜಾಗದಲ್ಲಿ ನಕಲಿ ಮತಪೆಟ್ಟಿಗೆಯನ್ನೇ ಇರಿಸುವುದು-ನೆನಪಿಸಿಕೊಂಡರೆ, ನಾವೆಂಥಾ ಕಾಲವನ್ನು ಹಾದು ಬಂದಿವಲ್ಲಾ ಎನಿಸಿಬಿಡುತ್ತದೆ !
ಇದೇ ಕಾರಣಕ್ಕೆ ಚುನಾವಣೆಯಲ್ಲಿ ʼಹಣಬಲ ಹಾಗೂ ತೋಳ್ಬಲʼ ಎಂಬ ಮಾತು ಚಾಲ್ತಿಗೆ ಬಂದಿದೆ. ಹಣಬಲ ಎಂದರೆ ಮತದಾರರಿಗೆ ಹಣದ ಆಮಿಷ ಒಡ್ಡುವುದು. ತೋಳ್ಬಲ ಎಂದರೆ ರೌಡಿಗಳು, ಗೂಂಡಾಗಳು, ಅಂಡರ್ವರ್ಲ್ಡ್ ಕ್ರಿಮಿನಲ್‌ಗಳನ್ನು ಬಳಸಿಕೊಂಡು ಹೆದರಿಸುವುದು. ಆದರೆ, ಈ ಮೂರು ದಶಕದಲ್ಲಿ ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಬಹಳಷ್ಟು ಸುಧಾರಣೆಗಳಾಗಿವೆ. ಮೊದಲ ಅಂಥ ಮೂರು ಬದಲಾವಣೆಗಳನ್ನು ಗಮನಿಸೋಣ. ಮೊದಲನೆಯದ್ದು- ಮತಗಟ್ಟೆಯಲ್ಲಿ ನಿಜವಾದ ಮತದಾರರನ್ನು ತಡೆಯುವ, ಬೆದರಿಸುವ ಕಾರ್ಯಕ್ಕೆ ಬ್ರೇಕ್ ಹಾಕುವ ಸಲುವಾಗಿ ಸಾಮಾನ್ಯ, ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳು ಎಂದು ವಿಂಗಡಿಸುವ ಪದ್ಧತಿ ಶುರುವಾಯಿತು. ಸಾಮಾನ್ಯ ಮತಗಟ್ಟೆ ಎಂದರೆ ಅಕ್ರಮಗಳು ಅತ್ಯಂತ ಕಡಿಮೆ ನಡೆಯುವ ಹಾಗೂ ಅತಿ ಸೂಕ್ಷ್ಮ ಎಂದರೆ ಅಕ್ರಮಗಳು ಹೆಚ್ಚು ನಡೆಯುವ ಬೂತ್‌ಗಳು ಎಂದರ್ಥ. ಸಾಮಾನ್ಯ ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂದಿಯಷ್ಟೆ ಅಲ್ಲದೆ, ಸಿಆರ್‌ಪಿಎಫ್, ಕೆಲವೆಡೆ ಸೇನಾ ಯೋಧರನ್ನೂ ನಿಯೋಜನೆ ಮಾಡಲಾಯಿತು. ಮತಗಟ್ಟೆಯಿಂದ ನೂರು ಮೀಟರ್ ದೂರದಲ್ಲಿ ಯಾವುದೇ ಪ್ರಚಾರ, ಒತ್ತಡ ಹೇರದಂತೆ ಲಕ್ಷ್ಮಣ ರೇಖೆ ಎಳೆಯಲಾಗುವುದು. ಎರಡನೆಯ ಬದಲಾವಣೆ- ಮತದಾರರು ಗುರುತಿನ ಚೀಟಿಯನ್ನು ವಶಕ್ಕೆ ಪಡೆದು ಮತದಾನವನ್ನು ತಡೆಯುವುದನ್ನು ತಡೆಯಲು ಗುರುತಿನ ಚೀಟಿಗಳ ಮಾನದಂಡವನ್ನು ಮಾರ್ಪಾಟು ಮಾಡಲಾಯಿತು. ಚುನಾವಣಾ ಆಯೋಗ ನೀಡಿದ ಗುರುತಿನ ಚೀಟಿಯಷ್ಟೆ ಅಲ್ಲದೆ, ಚಾಲನಾ ಪರವಾನಗಿ, ಪಾಸ್‌ಪೋರ್ಟ್, ಆಧಾರ್ ಕಾರ್ಡ್ ಸೇರಿ ಹತ್ತಾರು ದಾಖಲೆಗಳಿದ್ದರೂ ಮತದಾನ ಮಾಡಬಹುದು ಎಂದು ನಿಯಮ ರೂಪಿಸಲಾಯಿತು.
ಇನ್ನು ಮೂರನೆಯ ಸಮಸ್ಯೆ ಮತಪೆಟ್ಟಿಗೆ ಅಪಹರಣ. ಈ ಅಕ್ರಮಕ್ಕೆ ತಂತ್ರಜ್ಞಾನ ತಡೆ ವಿಧಿಸಿತು. ಬೆಂಗಳೂರು ಕೇಂದ್ರಿತ ಪ್ರತಿಷ್ಠಿತ ಸಂಸ್ಥೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್( ಬಿಇಎಲ್) ರೂಪಿಸಿದ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸಲು ಆರಂಭಿಸಲಾಯಿತು. ಮತಪತ್ರಗಳನ್ನು ಮುದ್ರಿಸಿ ಡಬ್ಬಗಳಲ್ಲಿ ತುಂಬಿ ಅಸಲಿ ಮತಪೆಟ್ಟಿಗೆಯನ್ನು ಬದಲಾಯಿಸುತ್ತಿದ್ದ ಗೂಂಡಾಗಳಿಗೆ ಈ ತಂತ್ರಜ್ಞಾನ ತಲೆಗೆ ಹೋಗಲಿಲ್ಲ. ಹಾಗಾಗಿ ಈ ವಿಧಾನ ಶೇಕಡಾ ನೂರರಷ್ಟು ನಿಂತುಹೋಗಿದೆ. ಹೀಗೆ ಅನೇಕ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಆದರೂ ಇನ್ನೂ ರಂಗೋಲಿ ಕೆಳಗೆ ತೂರುವ ನಿರಂತರ ಪ್ರಯತ್ನ ನಡೆದೇ ಇದೆ.
ಭಾರತವನ್ನು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಎನ್ನಲಾಗುತ್ತದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕರು ಭಾರತವು ಕೇವಲ ಅತಿ ದೊಡ್ಡ ಪ್ರಜಾಪ್ರಭುತ್ವವಲ್ಲ, ಪ್ರಜಾಪ್ರಭುತ್ವದ ಜನ್ಮಭೂಮಿ ಎಂದು ಹೇಳುತ್ತಿದ್ದಾರೆ. ಈ ವಿಚಾರಕ್ಕೆ, ನಮ್ಮದೇ ಕರ್ನಾಟಕದ ಅಣ್ಣ ಬಸವಣ್ಣ ಜಾರಿ ಮಾಡಿದ್ದ ಅನುಭವ ಮಂಟಪವೇ ಆಧಾರ ಎನ್ನುವುದು ಕನ್ನಡಿಗರಾದ ನಮಗೆಲ್ಲ ಹೆಮ್ಮೆಯ ವಿಚಾರ.
ಪ್ರಜಾಪ್ರಭುತ್ವ ವ್ಯವಸ್ಥೆ ಒಂದು ದೇಶದಲ್ಲಿ ಜೀವಂತವಾಗಿದೆ ಎಂದರೆ ಅದರ ಪ್ರಮುಖ ಲಕ್ಷಣ ಚುನಾವಣೆ ನಡೆಯುವುದು. ಚುನಾವಣೆ ಎಷ್ಟು ಪಾರದರ್ಶಕವಾಗಿ, ನ್ಯಾಯಸಮ್ಮತವಾಗಿ ನಡೆಯುತ್ತದೆ, ಚುನಾವಣೆ ನಡೆದ ನಂತರ ಎಷ್ಟು ಸರಾಗವಾಗಿ ಅಧಿಕಾರ ಹಸ್ತಾಂತರ ಆಗುತ್ತದೆ ಎನ್ನುವುದರ ಆಧಾರದಲ್ಲಿ ಪ್ರಜಾಪ್ರಭುತ್ವವನ್ನು ಅಳೆಯಲಾಗುತ್ತದೆ. ಅಧಿಕಾರ ಬಂದ ನಂತರ ಸರ್ಕಾರ ಹೇಗೆ ನಡೆಯುತ್ತದೆ ಎನ್ನುವುದು ಮುಂದಿನ ಭಾಗ. ಆದರೆ ಚುನಾವಣೆ ಪ್ರಕ್ರಿಯೆಯೇ ಮೊದಲ ಮಾನದಂಡ.
ಈ ವಿಚಾರದಲ್ಲಿ ವಿಶ್ವಾದ್ಯಂತ ಭಾರತ ಸಾಕಷ್ಟು ವಿಶ್ವಾಸಾರ್ಹತೆ ಹೊಂದಿದೆ. ಇಂದಿರಾಗಾಂಧಿ ಚುನಾವಣೆಯಲ್ಲಿ ಆಯ್ಕೆಯಾಗಿದ್ದು ಅಸಿಂಧು ಎಂದು ತೀರ್ಪು ಬಂದ ಕೂಡಲೆ ತುರ್ತು ಪರಿಸ್ಥಿತಿಯನ್ನು ಹೇರಿದ ಒಂದು ಕಪ್ಪು ಚುಕ್ಕಿ ನಮ್ಮ ಪ್ರಜಾಪ್ರಭುತ್ವಕ್ಕೆ ಇದೆ. ಆದರೆ ಅದನ್ನು ಹೊರತುಪಡಿಸಿ ನಮ್ಮ ದೇಶದ ಕೇಂದ್ರ ಹಾಗೂ ರಾಜ್ಯಗಳಲ್ಲಿ ಚುನಾವಣೆ ನಂತರ ಬಹುತೇಕ ಸರಾಗವಾಗಿ, ಕನಿಷ್ಠ ಪಕ್ಷ ಕಾನೂನಿಗೆ ಅನುಗುಣವಾಗಿ ಅಧಿಕಾರ ಹಸ್ತಾಂತರ ನಡೆದಿದೆ. ಅಷ್ಟರ ಮಟ್ಟಿಗೆ ಪ್ರಜಾಪ್ರಭುತ್ವದ ಮೊದಲ ಹೆಜ್ಜೆಯಲ್ಲಿ ಭಾರತ ಸಫಲವಾಗಿದೆ.
ಮೇಲ್ನೋಟಕ್ಕೆ ಹೀಗೆನ್ನಿಸಿದರೂ ಒಳಗೆ ನೂರಾರು ಹುಳುಕು ಇರುವುದು ಕಣ್ಣಿಗೆ ರಾಚುತ್ತಿದೆ. ಮುಖ್ಯವಾಗಿ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದರೆ ಕೋಟ್ಯಂತರ ರೂ. ಖರ್ಚು ಮಾಡಬೇಕು ಎನ್ನುವುದು ಹಗಲಿನಷ್ಟೆ ಸತ್ಯ. 2014ರವರೆಗೆ ಒಂದು ಲೋಕಸಭೆ ಕ್ಷೇತ್ರದಲ್ಲಿ ಒಬ್ಬ ಅಭ್ಯರ್ಥಿ 70 ಲಕ್ಷ ರೂ. ವೆಚ್ಚ ಮಾಡಬಹುದಿತ್ತು. ಅದನ್ನು 2022ರಲ್ಲಿ 95 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಅದೇ ರೀತಿ ವಿಧಾನಸಭೆ ಚುನಾವಣೆಗೆ ಈ ಹಿಂದೆ ಇದ್ದ 28 ಲಕ್ಷ ರೂ.ನಿಂದ 40 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ.
ಇದೀಗ ಕರ್ನಾಟಕದಲ್ಲಿ ಚುನಾವಣೆ ಎದುರಾಗುತ್ತಿದೆ. 40 ಲಕ್ಷ ರೂ.ನಲ್ಲಿ ಒಂದು ವಿಧಾನಸಭೆ ಚುನಾವಣೆಯ ಶೇ. 20 ವೆಚ್ಚವೂ ತಗಲುವುದಿಲ್ಲ ಎನ್ನುವುದು ರಾಜಕಾರಣದ ಕನಿಷ್ಠ ಜ್ಞಾನ ಇರುವವರಿಗಾದರೂ ಗೊತ್ತು. ಇದು ಸುಮ್ಮನೆ ಬಾಯಿ ಮಾತಿಗೆ ಹೇಳುವ ಮಾತಲ್ಲ. 2010ರಲ್ಲಿ ಕೇಂದ್ರ ಸರ್ಕಾರದ ಕಾನೂನು ಮತ್ತು ನ್ಯಾಯ ಇಲಾಖೆಯು ಚುನಾವಣೆ ಸುಧಾರಣೆ ಕುರಿತು ಸಿದ್ಧಪಡಿಸಿದ್ದ ವರದಿಯಲ್ಲೇ ಇದನ್ನು ತಿಳಿಸಿತ್ತು. “ಕಾನೂನಾತ್ಮಕವಾಗಿ ಮಾಡಬಹುದಾದ ವೆಚ್ಚಕ್ಕಿಂತಲೂ ವಾಸ್ತವ ವೆಚ್ಚವು ಬಹಳಷ್ಟು ಪಟ್ಟು ಹೆಚ್ಚಾಗಿದೆ ಎಂದು ನಂಬಲಾಗಿದೆ” ಎಂದು ವರದಿಯ ಆರಂಭದಲ್ಲೇ ತಿಳಿಸಲಾಗಿತ್ತು. ಅಂದರೆ ಇದೇನು ಯಾರಿಗೂ ಗೊತ್ತಿಲ್ಲದ ಸಂಗತಿ ಏನಲ್ಲ.
ಇತ್ತೀಚೆಗೆ ಸದನದಲ್ಲಿ ಕರ್ನಾಟಕದ ಹಾಸನ ಜಿಲ್ಲೆಯ ಅರಸೀಕೆರೆಯ ಜೆಡಿಎಸ್ ಶಾಸಕ ಕೆ.ಎಂ. ಶಿವಲಿಂಗೇಗೌಡರು ಮಾತನಾಡುತ್ತಿದ್ದನ್ನು ಗಮನಿಸಿದ್ದೆ. ಚುನಾವಣೆ ನಡೆಸುವುದು ಬಹಳ ಕಷ್ಟವಾಗಿದೆ ಎಂದು ಅವರು ಹೇಳುತ್ತಿದ್ದರು. ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ಮಾಡದೆ ಹೋದರೆ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುವುದಿಲ್ಲ. ಎಲ್ಲ ಅಭ್ಯರ್ಥಿಗಳೂ ಪ್ರಚಾರಕ್ಕೆ ಮನೆಗಳಿಗೆ ತೆರಳುವುದು, ತಂತಮ್ಮ ಬೃಹತ್ ಸಮಾವೇಶಗಳನ್ನು ನಡೆಸುವುದೇ ಭ್ರಷ್ಟಾಚಾರಕ್ಕೆ ಮೂಲವಾಗುತ್ತಿದೆ. ಯಾರೂ ಮತದಾರರ ಬಳಿ ತೆರಳುವಂತೆಯೇ ಇರಬಾರದು. ಪ್ರತಿ ತಾಲೂಕು ಮಟ್ಟದಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೂ, ಎಲ್ಲ ಅಭ್ಯರ್ಥಿಗಳಿಗೂ ಒಂದೆಡೆ ಮಾತನಾಡಲು ಅವಕಾಶ ನೀಡಬೇಕು. ತಾನು ಅಧಿಕಾರಕ್ಕೆ ಬಂದರೆ ಏನೇನು ಕೆಲಸ ಮಾಡುತ್ತೇನೆ ಎಂದು ಎಲ್ಲರೂ ತಿಳಿಸಬೇಕು. ಅದರ ಆಧಾರದಲ್ಲಿ ಮತಗಳನ್ನು ಕೇಳಬೇಕು. ಒಂದು ರೂ. ಸಹ ಯಾರೂ ಖರ್ಚು ಮಾಡುವಂತಿರಬಾರದು. ಹೀಗೆ ಆಯ್ಕೆಯಾಗಿ ಬಂದವರು ಮತದಾರರಿಗೆ ಉತ್ತರದಾಯಿಯಾಗಿರುತ್ತಾರೆ. ನಿನ್ನಿಂದ ಒಂದು ರೂ. ಸಹ ಪಡೆಯದೆ ಮತ ನೀಡಿ ಗೆಲ್ಲಿಸಿದ್ದೇವೆ, ಈ ಕೆಲಸ ಏಕೆ ಮಾಡಲಿಲ್ಲ? ಎಂದು ಕೊರಳು ಪಟ್ಟಿ ಹಿಡಿದು ಕೇಳುತ್ತಾರೆ. ಇಂತಹ ಸುಧಾರಣೆ ಆಗಬೇಕು ಎಂದು ಶಿವಲಿಂಗೇಗೌಡರು ಹೇಳಿದ್ದರು.
ಅವರು ಹೇಳಿದ್ದಕ್ಕೆ ಒಂದಷ್ಟು ಸೇರಿಸಬಹುದು. ಈಗ ಸಾಮಾಜಿಕ ಜಾಲತಾಣಗಳು ಎಲ್ಲ ಮನೆಯನ್ನೂ ತಲುಪಿವೆ. ಮನೆಗಿಂತಲೂ ಒಂದು ಹೆಜ್ಜೆಮುಂದೆ ಹೋಗಿ ಪ್ರತಿ ಕೈಯನ್ನೂ ತಲುಪಿದೆ. ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಸುದ್ದಿಗಳನ್ನು, ಜಗತ್ತಿನ ಆಗುಹೋಗುಗಳನ್ನು ಜನರು ತಿಳಿದುಕೊಳ್ಳುತ್ತಿದ್ದಾರೆ. ಈ ಮಾಧ್ಯಮವನ್ನೂ ಚುನಾವಣಾ ಆಯೋಗ ಬಳಸಿಕೊಂಡರೆ, ಯಾವ ಅಭ್ಯರ್ಥಿಯೂ ಯಾರ ಮನೆಗೂ ತೆರಳದೆ, ಒಂದು ರೂ. ಖರ್ಚು ಮಾಡದೆ ಚುನಾವಣೆಯಲ್ಲಿ ಜಯಗಳಿಸಬಹುದು. ಇದು ಒಂದು ಸಾಧ್ಯತೆ.
ಹಣದ ಆಮಿಷ ಒಡ್ಡುವಿಕೆಯಿಂದಾಗಿ ಭಾರತದ ಪ್ರಜಾಪ್ರಭುತ್ವದಲ್ಲಿ ಮತ್ತೊಂದು ಬದಲಾವಣೆ ಆಗುತ್ತಿದೆ. ಅದೆಂದರೆ ಪಕ್ಷೇತರ ಅಭ್ಯರ್ಥಿಗಳು ಬಹುತೇಕ ಇಲ್ಲದಂತೆಯೇ ಆಗಿರುವುದು. ಕೆಲವು ಚುನಾವಣೆಗಳ ಅಂಕಿ ಅಂಶಗಳನ್ನು ನೋಡೋಣ. 1957ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 179 ಕ್ಷೇತ್ರದಲ್ಲಿ 35 ಪಕ್ಷೇತರರು ಜಯಿಸಿದ್ದರು. ಒಟ್ಟು ಚಲಾವಣೆಯಾದ ಮತಗಳಲ್ಲಿ ಶೇ.28 ಮತ ಪಡೆದಿದ್ದರು. 1967ರಲ್ಲಿ ಒಟ್ಟು 216 ಕ್ಷೇತ್ರದಲ್ಲಿ 41 ಪಕ್ಷೇತರರು ಜಯಿಸಿದರು. 1983ರಲ್ಲಿ 224 ಕ್ಷೇತ್ರದಲ್ಲಿ ಪಕ್ಷೇತರ ಶಾಸಕರ ಸಂಖ್ಯೆ 22ಕ್ಕೆ ಇಳಿಯಿತು. ಒಟ್ಟು ಪಡೆದ ಮತ ಶೇ.15.47 ಆಯಿತು. 2008ರಲ್ಲಿ ಕೇವಲ 6 ಪಕ್ಷೇತರರು ಜಯಿಸಿದರು. ಒಟ್ಟು ಮತದಲ್ಲಿ ಪಕ್ಷೇತರರು ಪಡೆದ ಮತಗಳ ಪ್ರಮಾಣ ಕೇವಲ ಶೇ. 6.92. ಇನ್ನು 2018ರಲ್ಲಿ ಕೇವಲ ಒಬ್ಬರು ಪಕ್ಷೇತರರು ಜಯಿಸಿದರು. ಪಕ್ಷೇತರರು ಪಡೆದ ಮತಗಳ ಪ್ರಮಾಣ ಶೇ. 3.93. ಹಾಗೆಂದು ಸ್ಪರ್ಧಿಸುವ ಪಕ್ಷೇತರರ ಪ್ರಮಾಣ ಕಡಿಮೆಯಾಗಿಲ್ಲ. ಆದರೆ ಅವರು ಗೆಲ್ಲುವ ಸಾಧ್ಯತೆ ಕುಂದುತ್ತಿದೆ.
ಇನ್ನು ಲೋಕಸಭೆ ಚುನಾವಣೆಯಲ್ಲಂತೂ ಪಕ್ಷೇತರರು ಜಯಿಸುವುದು ಬಹುತೇಕ ಅಸಾಧ್ಯ ಎನ್ನುವಂತಾಗಿದೆ. ಕರ್ನಾಟಕದಲ್ಲಿ ಕಳೆದ 50 ವರ್ಷದಲ್ಲಿ ಯಾರೂ ಲೋಕಸಭೆಗೆ ಪಕ್ಷೇತರರಾಗಿ ಆಯ್ಕೆ ಆಗಿರಲಿಲ್ಲ. ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಜಯಿಸಿದ್ದೇ ಅರ್ಧ ಶತಮಾನದ ದಾಖಲೆ. ಮತದಾರರನ್ನು ಎಲ್ಲ ಅಭ್ಯರ್ಥಿಗಳೂ ತಲುಪಲು ಈಗಿನ ಚುನಾವಣಾ ವ್ಯವಸ್ಥೆಯಲ್ಲಿ ಎಲ್ಲ ಅಭ್ಯರ್ಥಿಗಳಿಗೂ, ಎಲ್ಲ ಪಕ್ಷಗಳಿಗೂ ಸೆಣೆಸುವ ಸಮಾನ ಅವಕಾಶ ಇಲ್ಲ ಎನ್ನುವುದು ಸಾಬೀತಾಗಿರುವ ಅಂಶ. ಶಿವಲಿಂಗೇಗೌಡರು ಹೇಳಿದ ಮಾರ್ಗವಿರಬಹುದು, ಅಥವಾ ಚುನಾವಣಾ ತಜ್ಞರು ಕುಳಿತು ಚರ್ಚಿಸಿ ನಿರ್ಧರಿಸುವ ಬೇರಾವುದೇ ಮಾರ್ಗವಿರಬಹುದು, ಇದನ್ನು ಸರಿಪಡಿಸಲು ಪ್ರಯತ್ನ ಮಾಡಲೇಬೇಕು.
ಇದನ್ನೂ ಓದಿ: ವಿಸ್ತಾರ ಅಂಕಣ: ಭಾರತದ ಬಹುತ್ವ ಕಾಪಾಡಲು ಹಿಂದು ರಾಷ್ಟ್ರವಲ್ಲದೆ ಮತ್ಯಾವ ಹಾದಿ?!
ಈಗ ಉದ್ಯಮಗಳಲ್ಲಿ Entry Barrier ತೆಗೆಯುವ ಕೆಲಸ ಆಗುತ್ತಿದೆ. ಯಾವುದೇ ವ್ಯಕ್ತಿ ತನ್ನಲ್ಲಿ ಹಣವಿಲ್ಲ, ರಾಜಕಾರಣಿಗಳ ಪರಿಚಯವಿಲ್ಲ ಎಂಬ ಕಾರಣಕ್ಕೆ ತನ್ನ ಉದ್ಯಮವನ್ನು ಆರಂಭಿಸುವುದಕ್ಕೆ ತೊಡಕಾಗಬಾರದು. ಆತನಿಗೆ ಆಸ್ತಿ ಇಲ್ಲದಿದ್ದರೂ ಬ್ಯಾಂಕ್‌ಗಳು ಸಾಲ ನೀಡಬೇಕು, ಯಾವುದೇ ಅಧಿಕಾರಿಗಳು, ರಾಜಕಾರಣಿಗಳು ಹಸ್ತಕ್ಷೇಪವಿಲ್ಲದೆ ಉದ್ಯಮ ಪರವಾನಗಿಗಳು ದೊರಕಬೇಕು ಎಂಬ ನಿಟ್ಟಿನಲ್ಲಿ ಒಂದಷ್ಟು ಸುಧಾರಣೆಗಳು ಕಾಣುತ್ತಿವೆ. ಅದನ್ನು Ease of Doing Business (EoDB) ಎಂದು ಕರೆಯಲಾಗುತ್ತದೆ. ಈ ಸೂಚ್ಯಂಕದಲ್ಲಿ ಯಾವ ದೇಶವು ಉತ್ತಮ ಸ್ಥಾನ ಹೊಂದಿದೆಯೋ, ಆ ದೇಶದಲ್ಲಿ ಉದ್ಯಮಿಗಳು ಸರಾಗವಾಗಿ ವ್ಯಾಪಾರ ವಹಿವಾಟು ನಡೆಸಬಹುದು ಎಂದರ್ಥ.
ಹಾಗಾದರೆ ಇದೇ ವಿಚಾರವನ್ನು ರಾಜಕಾರಣಕ್ಕೆ ಏಕೆ ಅನ್ವಯಿಸಬಾರದು? ಯಾರಾದರೊಬ್ಬ ರಾಜಕಾರಣಕ್ಕೆ ಪ್ರವೇಶಿಸಲು ಇರುವ ಅನೇಕ Entry Barrier ಅಂದರೆ ಆರಂಭಿಕ ಅಡೆತಡೆಗಳನ್ನು ಏಕೆ ನಿವಾರಿಸಬಾರದು? ಅದರಲ್ಲೂ ಢಾಳಾಗಿ ಕಾಣುತ್ತಿರುವ ಹಣಬಲ, ಪಕ್ಷಬಲ, ಸಮಾನ ಅವಕಾಶಗಳ ವಿಚಾರದಲ್ಲಿ ಏಕೆ ಹೊಸ ಮಾರ್ಗವನ್ನು ಕಂಡುಕೊಳ್ಳಬಾರದು? Ease of Doing Business (EoDB) ರೀತಿಯಲ್ಲಿ Ease of Doing Politics (EoDP) ಸೂಚ್ಯಂಕ ಏಕೆ ಸ್ಥಾಪನೆಯಾಗಬಾರದು? ಉದ್ಯಮ ನಡೆಸಲು ಇರುವ ಅತಿ ದೊಡ್ಡ ತೊಂದರೆ ಭ್ರಷ್ಟಾಚಾರ. EoDP ಸಂಪೂರ್ಣ ಜಾರಿ ಸಾಧ್ಯವಾದರೆ EoDB ತನ್ನಿಂತಾನೇ ಉತ್ತಮವಾಗುತ್ತದೆಯಲ್ಲವೇ? ಈ ಬಗ್ಗೆ ಒಂದಿಷ್ಟು ಆಲೋಚನೆಗಳು ನಡೆಯಲಿ. ಪಕ್ಷಾಂತರವೆಂಬ ಮತ್ತೊಂದು ಪೆಡಂಭೂತದ ಕುರಿತು ಮುಂದಿನ ಲೇಖನದಲ್ಲಿ ಚರ್ಚೆ ಮಾಡೋಣ.
ಅವಕಾಶಗಳು ಮುಖ್ಯವಾಗುತ್ತವೆ. ಭಾರತದಂತಹ ಬಹು ವೈವಿಧ್ಯತೆ ಹೊಂದಿರುವ ದೇಶದಲ್ಲಿ ಎಲ್ಲ ಸಮುದಾಯಗಳು, ಪ್ರದೇಶಗಳಲ್ಲೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾಗವಹಿಸುವ ಸಮತಟ್ಟು ನೆಲ ಇರಬೇಕು. ಪಕ್ಷಗಳು ಮತದಾರರನ್ನು ಸೆಳೆಯಲು ನಾನಾ ಸಾಧನಗಳಿರುತ್ತವೆ. ಅದರಲ್ಲಿ ಪ್ರಮುಖವಾಗಿ ಕಾರ್ಯಕರ್ತರು. ಅದಕ್ಕಿಂತಲೂ ಪ್ರಮುಖವಾದ ಅಂಶ ಎಂದರೆ ಹಣ. ಹಣ ವ್ಯಯಿಸುವ ಸಾಮರ್ಥ್ಯ ಇಲ್ಲದವನು ಚುನಾವಣೆಯಲ್ಲಿ ಗೆಲ್ಲಲು ಆಗುವುದಿಲ್ಲ ಎನ್ನುವುದು ಕರ್ನಾಟಕ ಶೇ. 95 ಕ್ಷೇತ್ರಗಳಲ್ಲಿ ಶತಃಸಿದ್ಧ. ಅಂದಮೇಲೆ ಹಣ ಇಲ್ಲದವನು ಉತ್ತಮ ಆಡಳಿತಗಾರ, ನೀತಿ ನಿರೂಪಕ, ಶಾಸಕ ಆಗಬಾರದು ಎಂದು ನಿರ್ಧರಿಸಲಾಗಿದೆಯೇ?
ಇದನ್ನೂ ಓದಿ: ವಿಸ್ತಾರ ಅಂಕಣ: ನರೇಂದ್ರ ಮೋದಿಯವರತ್ತ ಬೆರಳು ತೋರಿಸಿ ಎಷ್ಟು ವಿಚಾರ ಮುಚ್ಚಿಡಲು ಸಾಧ್ಯ?