Site icon Vistara News

ನನ್ನ ದೇಶ ನನ್ನ ದನಿ ಅಂಕಣ | ಸ್ವಾತಂತ್ರ್ಯ ಸೇನಾನಿಗಳ ರುಧಿರಾಭಿಷೇಕ

azad

ದಾಸ್ಯಶೃಂಖಲೆಗಳಿಂದ ತಾಯಿ ಭಾರತಿಯನ್ನು ವಿಮುಕ್ತಗೊಳಿಸಲು ರುಧಿರಾಭಿಷೇಕ ಮಾಡಿದ ವೀರಯೋಧರು, ಮಾತೆಯರು ಅಕ್ಷರಶಃ ಸಹಸ್ರ ಸಹಸ್ರ. ಪೂರ್ವಭಾರತದ ಕಾಡುಮೇಡುಗಳಲ್ಲಿ ಸುಭಾಷರ ಸೈನಿಕರು ಘರ್ಜಿಸಿದರೆ, ದೆಹಲಿಯಲ್ಲಿನ ಬ್ರಿಟಿಷ್ ಸಿಂಹಾಸನ ನಡುಗುತ್ತಿತ್ತು. “ಅಹಿಂಸೆಯಿಂದಲೇ ಸ್ವಾತಂತ್ರ್ಯ ಬಂದಿತು, ಒಂದೇ ಒಂದು ಹನಿ ರಕ್ತ ಚೆಲ್ಲಲಿಲ್ಲ” ಎಂಬ ಮಿಥ್ಯಾಪ್ರಚಾರವನ್ನೇ ಆರೇಳು ದಶಕಗಳಿಂದ ಕೇಳಿ ಕೇಳಿ ಭಾರತೀಯರಿಗೆ ಈವರೆಗೆ ಮಂಕು ಕವಿದಿತ್ತು. ಇದೀಗ ನಿಜಕ್ಕೂ “ತಮಸೋಮಾ ಜ್ಯೋತಿರ್ಗಮಯ”. ಕೋಟಿ ಕೋಟಿ ಭಾರತೀಯರಿಗೆ ಸತ್ಯದ ಅರಿವಾಗುತ್ತಿದೆ. ಇದು ಅಮೃತ ಕಾಲವೇ ಸರಿ. ಕಳೆದ ಹತ್ತಾರು ವರ್ಷಗಳಿಂದ ಬಯಲಾಗುತ್ತಿರುವ ದಾಖಲೆಗಳು, ಹೊರಬರುತ್ತಿರುವ ಪುರಾವೆಗಳು ಸುಭಾಷ್ ಚಂದ್ರ ಬೋಸ್ ಅವರ, ಸಾವರ್ಕರ್ ಅವರ ಮಹತ್ತ್ವದ ಮತ್ತು ನಿರ್ಣಾಯಕವಾದ ಪಾತ್ರವನ್ನು ಸಾರಿ ಸಾರಿ ಹೇಳುತ್ತಿವೆ.

ಅಹಿಂಸೆ, ಸತ್ಯಾಗ್ರಹಗಳಿಂದ ಸ್ವಾತಂತ್ರ್ಯಪ್ರಾಪ್ತಿ ಸಾಧ್ಯವಿಲ್ಲ ಎಂಬುದು ಸುಭಾಷರಿಗೆ ಸ್ಪಷ್ಟವಾಗಿಯೇ ಗೊತ್ತಿತ್ತು. ಬರ್ಮಾದಲ್ಲಿ ಅವರು ಆಜಾದ್ ಹಿಂದ್ ಸೇನೆಯನ್ನು ಸಂಘಟಿಸುವ, ಬಲಪಡಿಸುವ ಸಾಹಸಕಾರ್ಯವನ್ನು ಕೈಗೆತ್ತಿಕೊಂಡರು. 1944ರಲ್ಲಿ ಬರ್ಮಾದಿಂದ ಮಾಡಿದ ತಮ್ಮ ಐತಿಹಾಸಿಕ ರೇಡಿಯೋ ಭಾಷಣದಲ್ಲಿ ಎಲ್ಲ ಭಾರತೀಯರಿಗೆ ವಸ್ತುಸ್ಥಿತಿಯ ಅರಿವನ್ನು ಮೂಡಿಸುವ ಪ್ರಯತ್ನ ಮಾಡಿದರು. ಕೇವಲ ಪೂರ್ವ ಏಷ್ಯಾದಲ್ಲಿರುವ ಭಾರತೀಯರಿಂದ ಸ್ವಾತಂತ್ರ್ಯ ಪಡೆಯಲು ಸಾಧ್ಯವಿಲ್ಲ. 1857ರ ಅನಂತರ ಭಾರತೀಯರ ಬಳಿ ಶಸ್ತ್ರಾಸ್ತ್ರಗಳಿಲ್ಲ. ಅವುಗಳಿಲ್ಲದೆ ಯುದ್ಧವೂ ಸಾಧ್ಯವಿಲ್ಲ, ವಿಮೋಚನೆಯೂ ಸಾಧ್ಯವಿಲ್ಲ. ಎಲ್ಲ ಭಾರತೀಯ ಯುವಕರಿಗೆ ಸೇನೆಯ ತರಬೇತಿ ಮತ್ತು ಶಸ್ತ್ರಾಸ್ತ್ರ ಪೂರೈಕೆ ಆಗಬೇಕಾಗಿದೆ. ಶತ್ರುವಿನ (ಬ್ರಿಟಿಷರ) ಬಳಿ ಆಧುನಿಕ ಶಸ್ತ್ರಾಸ್ತ್ರಗಳಿವೆ. ಈ ಯುಗದಲ್ಲಿ ನಮ್ಮ ಬಳಿಯೂ ಅಂತಹ ಆಯುಧಗಳಿರಬೇಕಾಗಿದೆ. ನಮಗೆ ಗಂಡಸರ, ಹೆಂಗಸರ ದೊಡ್ಡ ಪಡೆಯೇ ಬೇಕಾಗಿದೆ. ಸಂಪನ್ಮೂಲಗಳು, ವಾಹನಗಳು, ಶಸ್ತ್ರಾಸ್ತ್ರಗಳು, ಆಡಳಿತ ವ್ಯವಸ್ಥೆ ಎಲ್ಲವುಗಳ ಅಗತ್ಯವಿದೆ. ಬ್ರಿಟಿಷರಿಂದ ವಿಮೋಚನೆಗೊಂಡ ಪ್ರದೇಶಗಳಲ್ಲಿ ಇಂತಹ ದೊಡ್ಡ ವ್ಯವಸ್ಥೆಯೇ ಆಗಬೇಕಾಗಿದೆ, ಎಂದರು ಸುಭಾಷ್.

ಅದು ಎರಡನೆಯ ಮಹಾಯುದ್ಧದ ಕಾಲ. ಬ್ರಿಟಿಷರು ಸಂಕಟದಲ್ಲಿದ್ದರು, ತೊಂದರೆಯಲ್ಲಿದ್ದರು. ಸಮರಾಂಗಣದಲ್ಲಿ, ಆರ್ಥಿಕ ಕ್ಷೇತ್ರದಲ್ಲಿ ಹೊಡೆತ ತಿಂದಿದ್ದರು. ಬ್ರಿಟಿಷರನ್ನು ಒದ್ದೋಡಿಸಲು ಅದು ಸೂಕ್ತವಾದ ಸಂದರ್ಭವಾಗಿತ್ತು. ಹತ್ತಾರು ಸಾವಿರ ವರ್ಷಗಳಿಂದ ಕೃಷಿ, ಶಿಕ್ಷಣ, ಉದ್ಯಮ, ವ್ಯಾಪಾರಗಳಲ್ಲಿ ಔನ್ನತ್ಯ ಸಾಧಿಸಿ ಶ್ರೀಮಂತ ರಾಷ್ಟ್ರವಾಗಿದ್ದ ಭಾರತವನ್ನು ಬ್ರಿಟಿಷರು ಸರ್ವನಾಶ ಮಾಡಿದ್ದರು. 19ನೆಯ ಶತಮಾನದ ಹೊತ್ತಿಗೇ ಭಾರತವು ನಿರಕ್ಷರಿಗಳ, ನಿರ್ಗತಿಕರ ದರಿದ್ರ ದೇಶವಾಗಿಹೋಗಿತ್ತು.

“ನೀವು ನಿಮ್ಮ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ತಂದುಕೊಡುತ್ತೇನೆ” ಎಂಬ ಮಹತ್ತ್ವದ ಮಾತುಗಳನ್ನು ಸುಭಾಷರು ಆಡಿದ್ದು, ತಮ್ಮ ಈ ಭಾಷಣದಲ್ಲಿಯೇ. ಭಾರತದ ಒಳಗೆ ಮತ್ತು ಹೊರಗೆ ಸೈನ್ಯವನ್ನು ಸಂಘಟಿಸುವುದು ಬಹಳ ಬಹಳ ಕಷ್ಟಸಾಧ್ಯವಾದ ಸಾಹಸಕಾರ್ಯವಾಗಿತ್ತು. ಪತ್ರಿಕೆಗಳು, ರೇಡಿಯೋ ಎಲ್ಲವೂ ಬ್ರಿಟಿಷರ ನಿಯಂತ್ರಣದಲ್ಲಿದ್ದಾಗ ಸಂವಹನವು ಸುಲಭವಾಗಿರಲಿಲ್ಲ.

ಆಜಾದ್ ಹಿಂದ್ ಸೇನೆಗೆ ಯುವಕರನ್ನು ನೇಮಿಸಿಕೊಳ್ಳಲು ಅವರು ಭಾರತದಲ್ಲಿ ತಮ್ಮ ಕಮಾಂಡರ್‌ಗಳಲ್ಲಿ ಒಬ್ಬರಾದ ಕ್ಯಾಪ್ಟನ್ ಧಿಲ್ಲೋನ್ ಅವರನ್ನು ನೇಮಿಸಿದರು. ತಂದೆ-ತಾಯಿಗೆ ಒಬ್ಬನೇ ಮಗನಾಗಿರುವ ಯುವಕರನ್ನು ನೇಮಕ ಮಾಡಿಕೊಳ್ಳದಂತೆ ಕ್ಯಾಪ್ಟನ್‌ಗೆ ವಿಶೇಷ ಸೂಚನೆಗಳನ್ನು ನೀಡಲಾಯಿತು. ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿತ್ತು. ಒಂದು ದಿನ ಕ್ಯಾಪ್ಟನ್ ಧಿಲ್ಲೋನ್ ನೇಮಕಾತಿಗಾಗಿ ಸಾಲಿನಲ್ಲಿ ನಿಂತ ನೂರಾರು ಯುವಕರನ್ನು ನೇಮಿಸಿಕೊಂಡರು ಮತ್ತು ಪ್ರತಿಯೊಬ್ಬರಿಗೂ ಕೊನೆಯಲ್ಲಿ ಈ ಒಂದು ಪ್ರಶ್ನೆಯನ್ನು ತಪ್ಪದೇ ಕೇಳುತ್ತಿದ್ದರು “ನೀನು ನಿಮ್ಮ ತಂದೆತಾಯಿಗೆ ಒಬ್ಬನೇ ಮಗನೇ?”

ಸೂಕ್ತ ಉತ್ತರ ಪಡೆದು ಹೆಚ್ಚು ಮಕ್ಕಳಿರುವ ಮನೆಯ ಯುವಕರನ್ನು ಮಾತ್ರ ಪರಿಗಣಿಸುತ್ತಿದ್ದರು. ಒಂದು ದಿನ, ಇತರ ಯುವಕರಂತೆ ಕಾಯುತ್ತಿದ್ದ ಓರ್ವನನ್ನು ತೂಕದ ಯಂತ್ರದಲ್ಲಿ ತೂಗಿದರು, ಎಲ್ಲವೂ ಸರಿಯಾಗಿದೆ, ಯುವಕನು ಸೈನ್ಯಕ್ಕೆ ಸೇರಬೇಕೆಂದು ಆಶಿಸುತ್ತಿದ್ದಾನೆ, ಎಂದು ಮುಗುಳ್ನಕ್ಕು ಕ್ಯಾಪ್ಟನ್ ಧಿಲ್ಲೋನ್ ಅವನನ್ನೂ ಕೇಳಿದರು.

ನಿನಗೆ ಎಷ್ಟು ಜನ ಸಹೋದರರು ಇದ್ದಾರೆ?
ಯುವಕ ಹೇಳಿದ “ನಾನು ಒಂಟಿಯಾಗಿದ್ದೇನೆ, ನನ್ನ ತಂದೆ ಇಲ್ಲ, ತಾಯಿ ಮಾತ್ರ ಇದ್ದಾರೆ”
“ನೀವು ಏನು ಮಾಡುತ್ತೀರಿ” ಎಂದು ಕ್ಯಾಪ್ಟನ್ ಧಿಲ್ಲೋನ್ ಕೇಳಿದರು.
“ನಾವು ಹಸು ಮತ್ತು ಎಮ್ಮೆಗಳನ್ನು ಸಾಕುತ್ತೇನೆ ಮತ್ತು ಕೃಷಿಯನ್ನೂ ಮಾಡುತ್ತೇವೆ” ಎಂದ ಆ ಯುವಕ.
ನೀವು ಎಲ್ಲಿ ವಾಸಿಸುತ್ತೀರಿ?
ನಾನು ಪಂಜಾಬ್‌ನಿಂದ (ಇಂದಿನ ಹರಿಯಾಣ) ಬಂದಿದ್ದೇನೆ.
ನಿನ್ನ ಹೆಸರು?
ಅರ್ಜುನ್ ಸಿಂಗ್.

ಕ್ಯಾಪ್ಟನ್ ಧಿಲ್ಲೋನ್ ಅರ್ಜುನನಿಗೆ ದುಃಖದ ಮಾತು ಹೇಳಿದರು. ʼʼಅರ್ಜುನ್ ಸಿಂಗ್, ಕ್ಷಮಿಸು, ನಿನ್ನನ್ನು ಸೈನ್ಯಕ್ಕೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ, ನಿನ್ನ ದೇಶಭಕ್ತಿಯ ಮೇಲೆ ನನಗೆ ಅನುಮಾನವಿಲ್ಲ. ಆದರೆ ನೀನು ನಿನ್ನ ತಾಯಿಗೆ ಒಬ್ಬನೇ ಮಗ, ಹೋಗಿ ನಿನ್ನ ಹೊಲವನ್ನು ನೋಡಿಕೊ ಮತ್ತು ನಿನ್ನ ತಾಯಿಯ ಸೇವೆ ಮಾಡು.ʼʼ

ಇದನ್ನೂ ಓದಿ: ಧೀಮಹಿ ಅಂಕಣ: ಈ ನೆಲದ ಮೊದಲ ವೈದಿಕ ರಾಷ್ಟ್ರಗೀತೆ ಇದು! ಅಂದಿನ ಆಡಳಿತ ಹೀಗಿತ್ತು

ಸೇನೆಗೆ ಆಯ್ಕೆಯಾಗುತ್ತೇನೆ, ಎಂದುಕೊಂಡಿದ್ದ ಅರ್ಜುನನ ಸಂತೋಷವು ದುಃಖಕ್ಕೆ ತಿರುಗಿತು. ಅವನು ಮನೆಗೆ ಹಿಂದಿರುಗಿದಾಗ, ತಾಯಿ ಕೇಳಿದಳು, ಅರ್ಜುನ್, ನೀನು ಆಜಾದ್ ಹಿಂದ್ ಸೇನೆ ಸೇರಲು ಹೋಗಿದ್ದೆ, ಇಷ್ಟು ಬೇಗ ಹೇಗೆ ಬಂದೆ? ವಯಸ್ಸಾದ ತನ್ನ ತಾಯಿಗೆ, ಅರ್ಜುನ್ ಸಿಂಗ್ ಎಲ್ಲವನ್ನೂ ಹೇಳಿದ. ಮಗ ಹೇಳಿದ ಮಾತನ್ನು ಶಾಂತವಾಗಿ ಕೇಳಿ, ಗಾಬರಿಯಾಗಬೇಡ ಮಗು. ಒಂದು ಅಥವಾ ಎರಡು ದಿನಗಳ ನಂತರ, ನೀನು ಖಂಡಿತವಾಗಿಯೂ ಸೈನ್ಯಕ್ಕೆ ಹೋಗುವೆ, ಸೇರುವೆ. ನೀನು ಈ ದೇಶದ ನಿಜವಾದ ಮಗ, ನಿನ್ನ ಮನಸ್ಸನ್ನು ಚಿಕ್ಕದಾಗಿಸಿಕೊಳ್ಳಬೇಡ, ಎಂದಳು ಆ ತಾಯಿ.

ಸೇನೆಗೆ ಸೇರುವ ಯುವಕರ ಸರತಿ ಸಾಲಿನಲ್ಲಿ ಮೂರನೇ ದಿನ ಮತ್ತೆ ಅರ್ಜುನ್ ಸಿಂಗ್ ನಿಂತಿದ್ದ. ಎದುರಿಗೆ ಬಂದ ತಕ್ಷಣ ಕ್ಯಾಪ್ಟನ್ ಧಿಲ್ಲೋನ್ ಅವನನ್ನು ಗುರುತಿಸಿ ಮತ್ತೆ ಬಂದಿದ್ದೀ ನೆನಪಿಲ್ಲ. ಏನು ಮಾಡಿದೆ. ಹೇಳು, ಎಂದರು.

ಅರ್ಜುನ್ ಸಿಂಗ್ ತುಂಬು ಕಂಠದಿಂದ ಹೇಳಿದ. “ಕ್ಯಾಪ್ಟನ್ ಸಾಹಬ್, ವಯಸ್ಸಾದ ನನ್ನ ತಾಯಿ ಬಾವಿಗೆ ಹಾರಿ ತನ್ನ ಪ್ರಾಣವನ್ನು ಕೊಟ್ಟಳು, ಬಾವಿಗೆ ಹಾರಿದ ಹಿಂದಿನ ರಾತ್ರಿ, ಅವಳು ನನ್ನ ಕಾರಣಕ್ಕೆ ನೀನು ದೇಶಕ್ಕೆ ಸಹಾಯ ಮಾಡಲಾಗಲಿಲ್ಲ, ನೀನು ಆಜಾದ್ ಹಿಂದ್ ಸೇನೆಗೆ ಸೇರಲಾಗದೇ ಹೋದುದು, ನನಗೆ ನಾಚಿಕೆಗೇಡಿನ ಸಂಗತಿ, ಎಂದು ಹೇಳಿದಳು”.

ಇದನ್ನು ಕೇಳಿದ ಕ್ಯಾಪ್ಟನ್ ಧಿಲ್ಲೋನ್ ಅವರ ಕಣ್ಣುಗಳು ತುಂಬಿ ಬಂದವು. ಅವರು ಆಗಲೇ ಅರ್ಜುನನನ್ನು ನೇಮಿಸಿಕೊಂಡರು ಮತ್ತು ಎರಡು ದಿನಗಳ ನಂತರ ಸುಭಾಷ್ ಬಾಬು ಅವರು ತಪಾಸಣೆಗೆ ಬಂದಾಗ, ಅರ್ಜುನನನ್ನು ನೇತಾಜಿ ಅವರಿಗೆ ಪರಿಚಯಿಸಿದರು. ಅವನನ್ನು ನೋಡಿದ ಸುಭಾಷರು “ನಮ್ಮ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ, ಕೊನೆಯ ಉಸಿರು ಇರುವವರೆಗೂ ಶತ್ರುಗಳೊಂದಿಗೆ ಹೋರಾಡುತ್ತಾ ಈ ಜೀವನವನ್ನು ನಾವು ಕಳೆಯಬೇಕು. ಸತ್ತರೂ ನಾವು ಹಿಂದೆ ಸರಿಯಬಾರದು” ಎಂದು ಹೇಳಿದರು.

ಇದನ್ನೂ ಓದಿ: ನನ್ನ ದೇಶ, ನನ್ನ ದನಿ ಅಂಕಣ | ಸಮೃದ್ಧ ಕೃಷಿಯ ನಾಡು, ಅಮೆರಿಕಾ ಎಸೆದ ಗೋಧಿಗೆ ಕೈಚಾಚಿತೇ?

ಅರ್ಜುನ್ ಸಿಂಗ್ ನೇತಾಜಿಗೆ ಭರವಸೆ ನೀಡಿದ ಮತ್ತು ಅವನ ರೈಫಲ್‌ನಲ್ಲಿ ಕೊನೆಯ ಬುಲೆಟ್ ಉಳಿಯುವವರೆಗೂ ಹೋರಾಡಿದ. ತನ್ನ ಬಲಿದಾನವನ್ನೂ ನೀಡಿದ. ಅರ್ಜುನ್ ಸಿಂಗ್ ಹುತಾತ್ಮನಾದ ಸುದ್ದಿ ತಿಳಿದ ಸುಭಾಷರು ಸ್ವತಃ ಅಲ್ಲಿಗೆ ಹೋಗಿ ಅರ್ಜುನ ಸಿಂಗ್ ನೆನಪಿಗಾಗಿ ಒಂದು ಸಣ್ಣ ಸ್ಮಾರಕವನ್ನು ನಿರ್ಮಿಸಿದರು ಮತ್ತು ಅದರ ಮೇಲೆ “ಮಾತೃಭೂಮಿಯ ಸ್ವಾತಂತ್ರ್ಯಕ್ಕಾಗಿ, ಸಾವಿನ ಜೊತೆ ಆಟವಾಡಿದ ತಾಯಿ ಮತ್ತು ಮಗ ಇಬ್ಬರಿಗೂ ನನ್ನ ನಮಸ್ಕಾರ” ಎಂದು ಬರೆದರು.

ಸ್ವಾತಂತ್ರ್ಯದ ಹೆಸರಿನಲ್ಲಿ “ಅಧಿಕಾರ ಹಸ್ತಾಂತರ” ಮಾಡಿಕೊಂಡವರು ತಮಗೆ ಬೇಕಾದಂತೆ ಇತಿಹಾಸದ ಪುಸ್ತಕಗಳನ್ನು ಬರೆಸಿಕೊಂಡರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಜಾದ್ ಹಿಂದ್ ಸೈನಿಕರು, ಕ್ರಾಂತಿಕಾರಿಗಳು, ವೀರಾಂಗನೆಯರು, 1947ರ ಅನಂತರ ಮೂಲೆಗುಂಪಾದರು, ನಿರ್ಲಕ್ಷ್ಯಕ್ಕೆ ಒಳಗಾದರು. ಬ್ರಿಟಿಷ್ ಸೇವೆಯಲ್ಲಿದ್ದು ಸ್ವಾತಂತ್ರ್ಯಯೋಧರ ಮೇಲೆ ಲಾಠಿ ಬೀಸಿದವರು, ಗೋಲೀಬಾರ್ ಮಾಡಿದವರು, ಕಾರಾಗೃಹಗಳಲ್ಲಿ ಚಿತ್ರಹಿಂಸೆ ಕೊಟ್ಟ ಪೊಲೀಸರು ಮತ್ತು ಅಧಿಕಾರಿಗಳು “ಸ್ವತಂತ್ರ ಭಾರತ”ದಲ್ಲಿ ತಮ್ಮ ಅಟಾಟೋಪಗಳನ್ನು ಮುಂದುವರಿಸಿದರು. ಬಡ್ತಿಗಳನ್ನೂ ಪಡೆದರು. ಲೂಟಿ ಹೊಡೆದು ಆಸ್ತಿಪಾಸ್ತಿ ಮಾಡಿಕೊಂಡರು. ಅಧಿಕಾರ ಪಡೆದು ಉನ್ಮತ್ತರಾಗಿದ್ದ ಅವರಿಗೆ ಅರ್ಜುನ್ ಸಿಂಗ್‌ನಂತಹ ಸಹಸ್ರಾರು ಯೋಧರಿರಲಿ, ಸುಭಾಷರೇ ಬೇಕಾಗಿರಲಿಲ್ಲ.

ಅಂಕಣಕಾರರ ಪರಿಚಯ: ಅಜ್ಜಂಪುರ ಮಂಜುನಾಥ್‌ ಹಿರಿಯ ಲೇಖಕರು, ಅಂಕಣಕಾರರು ಹಾಗೂ ನವದೆಹಲಿ ಮೂಲದ ಪ್ರಕಾಶನ ಸಂಸ್ಥೆ ʼವಾಯ್ಸ್‌ ಆಫ್‌ ಇಂಡಿಯಾʼ ಸರಣಿಯ ಗೌರವ ಸಂಪಾದಕರು. ಇವರು ರಾಷ್ಟ್ರೀಯತೆ, ಇತಿಹಾಸಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಅಪಾರ ಅಧ್ಯಯನ ನಡೆಸಿದ್ದು, ಈ ಬಗ್ಗೆ ಪ್ರಖರ ವಿಚಾರ ಮಂಡನೆ ಮಾಡುವಲ್ಲಿ ಸಿದ್ಧಹಸ್ತರು. ಈ ಲೇಖನದಲ್ಲಿ ವ್ಯಕ್ತವಾದ ಅಭಿಪ್ರಾಯಗಳು ವೈಯಕ್ತಿಕ.

ಇದನ್ನೂ ಓದಿ: ಸಮರಾಂಕಣ | ಏನನ್ನೂ ಧ್ವಂಸಗೊಳಿಸದೆ ಶತ್ರುವಿಗೆ ಸಾವು ತಂದೊಡ್ಡುವ ಅಸ್ತ್ರ Hellfire R9X

Exit mobile version