ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಜುಲೈ 31ರಂದು ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಜಾರ್ಖಂಡ್ ರಾಜ್ಯಗಳ ಎನ್ ಡಿ ಎ ಶಾಸಕರ ಜತೆಗೆ ಸಭೆ ಮಾಡುವ ಸಮಯದಲ್ಲಿ ಹೇಳಿದ ಮಾತು ಈಗ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಇದೇ ಆಗಸ್ಟ್ 30ರಂದು ರಕ್ಷಾ ಬಂಧನ (Raksha Bandhan) ಉತ್ಸವವಿದೆ. ರಕ್ಷಾ ಬಂಧನವೆಂದರೆ ಸಹೋದರ-ಸಹೋದರಿಯರ ಉತ್ಸವ. ಸಹೋದರನು ಎಲ್ಲ ಸಂದರ್ಭದಲ್ಲೂ ಸಹೋದರಿಯನ್ನು ರಕ್ಷಿಸುತ್ತೇನೆ ಎಂದು ಅಭಯ ನೀಡುವ ದಿನ.
ಸಹೋದರಿಯನ್ನು ರಕ್ಷಿಸಲು ಅವನು ಯಾರು? ಹಾಗಾದರೆ ಹೆಣ್ಣು ಅಬಲೆಯೇ? ಅವಳನ್ನು ರಕ್ಷಿಸುವ ನೆಪದಲ್ಲಿ ಕೂಡಿ ಹಾಕುವ ಕೆಲಸ ಆಗುತ್ತಿದೆಯಲ್ಲ? ಇದು ಪುರುಷ ಪ್ರಧಾನ ಸಮಾಜದ ದಬ್ಬಾಳಿಕೆಯಲ್ಲವೇ?… ಹೀಗೆ ರಕ್ಷಾ ಬಂಧನದ ಕುರಿತು ಬುದ್ಧಿಜೀವಿಗಳೆನಿಸಿಕೊಂಡವರು ಅನೇಕ ಪ್ರಶ್ನೆಗಳನ್ನೆತ್ತಬಹುದು. ಭಾರತದಲ್ಲಿ ವಾಕ್ ಸ್ವಾತಂತ್ರ್ಯವಿದೆ. ಇದು ಸಂವಿಧಾನಬದ್ಧ (constitution) ಹಕ್ಕು ಆಗಿರುವುದರಿಂದ ಅವರು ಈ ಪ್ರಶ್ನೆಗಳನ್ನು ಕೇಳಲು ಸಂಪೂರ್ಣ ಅರ್ಹರು. ಭಾರತೀಯ ಸಮಾಜದಲ್ಲಿ ಹೆಣ್ಣನ್ನು ಎಷ್ಟು ಸ್ವತಂತ್ರವಾಗಿ ಆಲೋಚನೆಗಳೊಂದಿಗೆ ಬೆಳೆಯಲು ಸಹಜ ವಾತಾವರಣವಿತ್ತೋ, ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ದಮನಿಸಲಾಗಿದೆ. ಇದನ್ನು ಯಾರೂ ಅಲ್ಲಗಳೆಯುವುದಿಲ್ಲ. ಆದರೆ ಈಗ ಭಾರತೀಯ ಸಮಾಜ, ಅದರಲ್ಲೂ ಹಿಂದೂ ಸಮಾಜ ಮಹಿಳಾ ಸಬಲೀಕರಣವನ್ನು ʼತಾತ್ವಿಕವಾಗಿʼ ಸಮ್ಮತಿಸಿಕೊಂಡಿದೆ. ಅಂದರೆ ಕಡೇ ಪಕ್ಷ ಬಹಿರಂಗವಾಗಿಯಾದರೂ ಸ್ತ್ರೀಯರಿಗೆ ಇದನ್ನು ಮಾಡುವ ಹಕ್ಕಿಲ್ಲ, ಅದನ್ನು ಮಾಡುವಂತಿಲ್ಲ ಎಂದು ಹೇಳಲು ಹಿಂಜರಿಯುತ್ತದೆ. ಸಾಗಬೇಕಾದ ಮಾರ್ಗ ಸಾಕಷ್ಟಿದೆಯಾದರೂ, ಆ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ.
ಆದರೆ ಇದೇ ಬುದ್ಧಿಜೀವಿಗಳೆನಿಸಿಕೊಂಡವರು (intellectuals) ಇನ್ನೊಂದು ಕಡೆಯ ಮಹಿಳೆಯರ ಬಗ್ಗೆ ಜಾಣ ಕುರುಡು ಪ್ರದರ್ಶಿಸುವುದು ಮಾತ್ರ ವಾಕ್ ಸ್ವಾತಂತ್ರ್ಯಕ್ಕೆ (freedom of speech) ಮಾಡುವ ಅಪಮಾನ. ಮುಸ್ಲಿಂ ಸಮುದಾಯದಲ್ಲಿ ಸ್ತ್ರೀಯರಿಗೆ ಸಂಪೂರ್ಣ ಸ್ವಾತಂತ್ರ್ಯವಿದೆಯೇ? ಹೀಗೆ ಯಾರಾದರೂ ಬುದ್ಧಿಜೀವಿ ಧೈರ್ಯವಾಗಿ ಹೇಳಲು ಸಾಧ್ಯವೇ? ಹಾಗೊಮ್ಮೆ ಹೇಳಿದರೂ ಅದಕ್ಕೆ ಸಾಕ್ಷಿ ನೀಡಲು ಸಾಧ್ಯವೇ? ದೇಶ ಹೆಮ್ಮೆ ಪಡುವಂತೆ ಟೆನಿಸ್ ಆಟದಲ್ಲಿ ಗೆದ್ದಿದ್ದು ಹಾಗೂ ಸಾವಿರಾರು ಹೆಣ್ಣುಮಕ್ಕಳು ತಾವೂ ಟೆನಿಸ್ ಆಡಬೇಕು ಎಂದು ಕನಸು ಕಾಣುವಂತೆ ಮಾಡಿದ್ದು ಸಾನಿಯಾ ಮಿರ್ಜಾ. 18 ವರ್ಷದ ಯುವತಿ ಸಾನಿಯಾ ಮಿರ್ಜಾ (Sania Mirza) ತನ್ನ ದೇಹವನ್ನು ಪೂರ್ಣ ಮುಚ್ಚಿಕೊಂಡು ಆಡಬೇಕು ಎಂದು 2005ರಲ್ಲಿ ಮುಸ್ಲಿಂ ಬೋಧಕರ ಗುಂಪೊಂದು ಫತ್ವಾ ಹೊರಡಿಸಿದ್ದು ನೆನಪಿದೆಯೇ?
ಆಕೆ ಯುವ ಜನತೆಯನ್ನು ದಾರಿತಪ್ಪಿಸುತ್ತಿದ್ದಾಳೆ. ಇರಾನ್ ಆಟಗಾರರಂತೆ ಪೂರ್ಣ ಬಟ್ಟೆ ತೊಡಬೇಕು. ಈಗಿನಂತೆ ಬಟ್ಟೆ ತೊಟ್ಟು ಆಡುವುದು ಇಸ್ಲಾಂಗೆ ವಿರುದ್ಧ ಎಂದಿತ್ತು ಆ ಫತ್ವಾ. ಆಗಿನ ಸಮಯದಲ್ಲಿ ಯಾರಾದರೂ ಬುದ್ಧಿಜೀವಿಗಳು ಇದನ್ನು ಖಂಡಿಸಿದ್ದರೇ? ಮುಸ್ಲಿಂ ಸಮಾಜದಲ್ಲಿ ಮಹಿಳೆಯರ (muslim women) ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ಯಾರೂ ಹೇಳಿರಲಿಲ್ಲ. ಹಾಗಾಗಿಯೇ ಬುದ್ಧಿ ಜೀವಿಗಳೆನಿಸಿಕೊಂಡವರ ಕುರಿತು ಬೇಸರವಾಗುವುದು. (ಇದೇ ಕಾರಣದಿಂದಲೇ ಅವರು ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ ಎಂಬುದು ಬೇರೆ ಮಾತು).
ಮತ್ತೆ ರಕ್ಷಾ ಬಂಧನದ ವಿಚಾರಕ್ಕೆ ಬರೋಣ. ಮುಸ್ಲಿಂ ಹೆಣ್ಣು ಮಕ್ಕಳ ವಿಚಾರದ ಬಗ್ಗೆ ಮಾತಾಡಲು ಮೋದಿ ಯಾರು? ಎಂದು ಯಾರಾದರೂ ಕೇಳಬಹುದು. ಇತಿಹಾಸವನ್ನು ಒಮ್ಮೆ ನೋಡಿದರೂ ಸಾಕು, ಮುಸ್ಲಿಂ ಮಹಿಳೆಯರ ಸಬಲೀಕರಣ ವಿಚಾರದಲ್ಲಿ ಮಾತನಾಡಲು ದೇಶದಲ್ಲಿ ಅತ್ಯಂತ ಅರ್ಹ ವ್ಯಕ್ತಿ ಎಂದರೆ ಪ್ರಧಾನಿ ನರೇಂದ್ರ ಮೋದಿ ಎನ್ನುವುದು ಸ್ಪಷ್ಟವಾಗಿ ಕಾಣುತ್ತದೆ.
ಮಹಿಳೆಯರ ಸಬಲೀಕರಣ ವಿಚಾರದಲ್ಲಿ ನರೇಂದ್ರ ಮೋದಿಯವರ ಬದ್ಧತೆ ಗುಜರಾತ್ ಸಿಎಂ ಸಮಯದಿಂದಲೂ ಕಾಣುತ್ತದೆ. ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯುವ ಸಲುವಾಗಿ ಆಗಿನಿಂದಲೇ ಅಭಿಯಾನಗಳನ್ನು ನಡೆಸಿದ್ದರು. 2014ರಲ್ಲಿ ಪ್ರಧಾನಿಯಾದ ನಂತರವೂ ಇದನ್ನು ಮುಂದುವರಿಸಿದರು. ಅಕ್ಟೋಬರ್ 11ರ, ಅಂತಾರಾಷ್ಟ್ರೀಯ ಹೆಣ್ಣು ಮಗು ದಿನದಂದು ಮಾತನಾಡಿದ್ದ ಮೋದಿ, ಹೆಣ್ಣು ಭ್ರೂಣ ಹತ್ಯೆ ಎನ್ನುವುದು ಅತ್ಯಂತ ಅವಮಾನಕರ ಸಂಗತಿ ಎಂದಿದ್ದರು. ಲಿಂಗಾಧಾರಿತ ತಾರತಮ್ಯವನ್ನು ಕೊನೆಗೊಳಿಸಿ, ಸಮಾನ ಅವಕಾಶದ ವಾತಾವರಣ ನಿರ್ಮಿಸಿ ಎಂದಿದ್ದರು.
ಬೇಟಿ ಬಚಾವೊ, ಬೇಟಿ ಪಢಾವೊನಂತಹ ಜನಪ್ರಿಯ ಕಾರ್ಯಕ್ರಮ ಅನುಷ್ಠಾನ ಮಾಡಿದರು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಾಯಿತು. ತುಳಿತಕ್ಕೊಳಗಾಗಿರುವವರನ್ನು ದೈಹಿಕವಾಗಿ ಹೇಗೂ ಹೊರಗೆ ತರಬಹುದು. ಉದಾಹರಣೆಗೆ, ಜೀತದಾಳಾಗಿರುವವರನ್ನು ಪೊಲೀಸರು, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಜೀತಮುಕ್ತಗೊಳಿಸಿ ಹೊರಕ್ಕೆ ಕರೆತರಬಹುದು. ಆದರೆ ಅವರಲ್ಲಿರುವ ಜೀತದ ಮಾನಸಿಕತೆಯಿಂದ ಹೊರತರುವುದು ಮುಖ್ಯ. ಜೀತದಲ್ಲಿಲ್ಲದೆ ಸ್ವಾವಲಂಬಿಯಾಗಿ ಬದುಕುವುದನ್ನು ಕಲಿಸಬೇಕು. ಅದಕ್ಕೆ ಕೆಲಸದ ಕೌಶಲ್ಯ ಕಲಿಸಬೇಕು. ಆಗ ಮಾತ್ರ ಅವರು ಮತ್ತೆ ಜೀತಕ್ಕೆ ಹೋಗುವುದನ್ನು ತಡೆಯಬಹುದು. ಹಾಗೆಯೇ ದಮನಿಸಲ್ಪಟ್ಟಿರುವ ಮಹಿಳೆಯರು ಸಬಲೀಕರಣ ಆಗಬೇಕೆಂದರೆ ಮೊದಲಿಗೆ ಶಿಕ್ಷಣ ಸಿಗಬೇಕು.
ಈಗಾಗಲೆ ಹೇಳಿದಂತೆ, ಮುಸ್ಲಿಂ ಸಮುದಾಯದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದ ನಿರ್ಬಂಧಗಳಿವೆ. ಅದರಲ್ಲೂ ಮುಖ್ಯವಾಗಿ ಬಹಿರಂಗವಾಗಿ, ಢಾಳಾಗಿ ಕಾಣುವ ವಸ್ತ್ರ ಧಾರಣೆಯೇ ಇದೆ. ಈ ಪದ್ಧತಿಯನ್ನು ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರರೂ (B.R Ambedkar) ಬಲವಾಗಿ ಖಂಡಿಸಿದ್ದಾರೆ. ಈಗ ಎರಡು ದಿನದ ಹಿಂದೆ ದೇಶದ ಮುಸ್ಲಿಂ ಯುವತಿಯರ ಶಿಕ್ಷಣದ ಕುರಿತು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಉನ್ನತ ಶಿಕ್ಷಣ ಪಡೆಯುತ್ತಿರುವ ಮುಸ್ಲಿಂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ. 2016-17ರ ಶೈಕ್ಷಣಿಕ ಸಾಲಿನಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 17.39 ಲಕ್ಷ ಮುಸ್ಲಿಂ ವಿದ್ಯಾರ್ಥಿಗಳು ದಾಖಲಾಗಿದ್ದರು. ಆ ಪ್ರಮಾಣ 2020- 21ರ ಸಾಲಿಗೆ 19.22 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಶಿಕ್ಷಣ ಇಲಾಖೆಯ ರಾಜ್ಯ ಸಚಿವ ಸುಭಾಶ್ ಸರ್ಕಾರ್ ತಿಳಿಸಿದ್ದಾರೆ. ಮುಸ್ಲಿಂ ಸಮುದಾಯದ ಶಿಕ್ಷಕರ ಸಂಖ್ಯೆ ಕೂಡ 2016-17ರಲ್ಲಿನ 67,215 ರಿಂದ 2020-21ರಲ್ಲಿ 86,314ಕ್ಕೆ ಗಣನೀಯವಾಗಿ ಏರಿಕೆಯಾಗಿದೆ ಎಂದೂ ತಿಳಿಸಿದ್ದಾರೆ. ಇದು 2020-21ರ ಸಾಲಿನ ಉನ್ನತ ಶಿಕ್ಷಣದ ಅಖಿಲ ಭಾರತ ಸಮೀಕ್ಷೆ(AISHE)ಯ ವರದಿಯ ಅಂಕಿ ಅಂಶ. ಇದೊಂದು ಮೆಚ್ಚಲೇಬೇಕಾದ ವಿಚಾರವಾಗಿದೆ.
ಹೆಣ್ಣು ಭ್ರೂಣ ಹತ್ಯೆ ತಡೆಯಲು ಮತ್ತೊಂದು ಉಪಕ್ರಮವಾಗಿ, ಸುಕನ್ಯಾ ಸಮೃದ್ಧಿ ಖಾತೆಯಂತಹ ಯೋಜನೆ ಜಾರಿ ಮಾಡಲಾಯಿತು. ಇದೆಲ್ಲಕ್ಕಿಂತ ಮುಖ್ಯವಾಗಿ ತ್ರಿವಳಿ ತಲಾಖ್ನಂತಹ ಅನಿಷ್ಠ ಪದ್ಧತಿಯಿಂದ ಮುಸ್ಲಿಂ ಮಹಿಳೆಯರಿಗೆ ಮುಕ್ತಿ ಕೊಡಿಸುವ ಕೆಲಸವನ್ನು ಕಾನೂನಾತ್ಮಕವಾಗಿ ಮಾಡಿದ್ದಾರೆ. ಹೌದು. ಇದು ಕಾನೂನಾತ್ಮಕ ಬೆಂಬಲ ಅಷ್ಟೆ. ಕಾನೂನು ಮಾಡಿದಾಕ್ಷಣ ತ್ರಿವಳಿ ತಲಾಖ್ ನಿಂತುಹೋಗಿದೆಯೇ? ಖಂಡಿತ ಇಲ್ಲ. ಅದು ಅಲ್ಲಲ್ಲಿ ನಡೆಯುತ್ತಲೇ ಇದೆ. ಆದರೆ ಹಿಂದಿನದ್ದಕ್ಕಿಂದ ಗಣನೀಯವಾಗಿ ಕಡಿಮೆಯಾಗಿದೆ. ಈಗ ಕಾನೂನಾತ್ಮಕವಾಗಿಯಷ್ಟೆ ತ್ರಿವಳಿ ತಲಾಖ್ ಆಚರಣೆ ತಪ್ಪು. ಅದನ್ನು ಸಮುದಾಯದ ಹಂತದಲ್ಲಿ ಮಾನಸಿಕ ಬದಲಾವಣೆ ಮೂಲಕ ಜಾರಿ ತರಬೇಕು. ಅದಕ್ಕೆ ಎರಡು ದಾರಿ.
ಮೊದಲನೆಯದು, ಮುಸ್ಲಿಂ ಸಮುದಾಯದ ಬೋಧಕರ, ಮುಖ್ಯಸ್ಥರ ಮೂಲಕ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು. ಎರಡನೆಯದು, ನೇರವಾಗಿ ಮಹಿಳೆಯರಲ್ಲೇ ಜಾಗೃತಿ ಮೂಡಿಸುವುದು. ದೇಶದ ಅರ್ಧದಷ್ಟು ಜನಸಂಖ್ಯೆಯಿರುವ ಮಹಿಳೆಯರನ್ನು ಸಬಲೀಕರಣ ಮಾಡದೆ ದೇಶದ ಅಭಿವೃದ್ಧಿ, 5 ಟ್ರಿಲಿಯನ್ ಎಕಾನಮಿ ಕನಸುಗಳು ಸಾಕಾರಗೊಳ್ಳಲು ಸಾಧ್ಯವೇ ಇಲ್ಲ ಎನ್ನುವುದು ಶತಸತ್ಯ. ಹಾಗಾಗಿ ಮಹಿಳೆಯರು ನಿರ್ಭಿಡೆಯಿಂದ ಕೆಲಸ ಮಾಡುವ ವಾತಾವರಣ ನಿರ್ಮಾಣ ಆಗಬೇಕು. ಸಾಮಾನ್ಯ ಮಹಿಳೆಯರ ಜತೆಗೆ ವಿಶೇಷವಾಗಿ ಮುಸ್ಲಿಂ ಮಹಿಳೆಯರೂ ಜಾಗೃತರಾಗಬೇಕು. ವಿಶೇಷವೆಂದರೆ ಮೋದಿಯವರು ಅತ್ಯಂತ ಸರಿಯಾದ ಸಮಯದಲ್ಲಿ ಪ್ರಧಾನಿ ಆಗಿದ್ದಾರೆ. ಏಕೆಂದರೆ ಈಗಿನ ಸ್ಮಾರ್ಟ್ ಫೋನ್, ಸಾಮಾಜಿಕ ಜಾಲತಾಣ ಯುಗದಲ್ಲಿ ಮುಸ್ಲಿಂ ಮಹಿಳೆಯರೂ ವಿಶ್ವದ ವಿಚಾರಗಳನ್ನು ನೇರವಾಗಿ ತಮ್ಮ ಮೊಬೈಲಲ್ಲಿ ನೋಡುತ್ತಿದ್ದಾರೆ. ಹಿಂದೆಲ್ಲ ಮುದ್ರಣ ಮಾಧ್ಯಮ ಮಾತ್ರವೇ ಇದ್ದಾಗ ಹೆಚ್ಚಿನ ಸುದ್ದಿಗಳು ಮಹಿಳೆಯರಿಗೆ ಸಿಗುತ್ತಲೇ ಇರಲಿಲ್ಲ. ನ್ಯೂಸ್ ಚಾನೆಲ್‌ಗಳು, ಮನರಂಜನಾ ಚಾನೆಲ್‌ಗಳು ಬಂದ ನಂತರ ಬೇರೆ ಸಮಾಜಗಳಲ್ಲಿನ ನಡವಳಿಕೆ, ಸ್ತ್ರೀಯರ ಸ್ಥಿತಿಗತಿಗಳ ಕುರಿತು ಸಾಕಷ್ಟು ಅರಿವು ಲಭಿಸತೊಡಗಿತು. ಇದೀಗ ಡಿಜಿಟಲ್ ಯುಗದಲ್ಲಿ ನೇರವಾಗಿ ಎಲ್ಲ ಸುದ್ದಿ, ಮನರಂಜನೆಗಳೂ ಅಂಗೈಗೆ ಬಂದು ಬೀಳುತ್ತವೆ. ಹೀಗಾಗಿ ನರೇಂದ್ರ ಮೋದಿ ಸೇರಿ ಯಾವುದೇ ನಾಯಕರು ಮಹಿಳೆಯರಿಗಾಗಿ ಕೈಗೊಂಡ ಕ್ರಮಗಳು ನೇರವಾಗಿ ಮುಸ್ಲಿಂ ಮಹಿಳೆಯರಿಗೂ ತಲುಪುತ್ತಿವೆ.
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ (Yogi Adityanath) ಸತತ ಗೆಲುವಿನ ಹಿಂದೆಯೂ ಮುಸ್ಲಿಂ ಮಹಿಳೆಯರ ಪಾತ್ರವಿದೆ ಎಂದು ಅನೇಕ ವಿಶ್ಲೇಷಕರು ಹೇಳುತ್ತಾರೆ. ಒಂದೆರಡು ಪಕ್ಷಕ್ಕೆ ಮತ ಹಾಕಲು ಮಾತ್ರ ತಾವು ಇರುವುದು ಎನ್ನುವಂತಾಗಿದ್ದ ಸಮುದಾಯದ ಮಹಿಳೆಯರಲ್ಲಿ ಈಗ ಸಾಕಷ್ಟು ಜಾಗೃತಿ ಮೂಡುತ್ತಿದೆ. ಬಿಜೆಪಿಗೆ ಮತ ಹಾಕಿದ ಮಾತ್ರಕ್ಕೆ ಜಾಗೃತಿ ಮೂಡಿದೆ ಎಂದು ಹೇಳುತ್ತಿಲ್ಲ. ಬದಲಿಗೆ, ತಮಗೆ ಯಾವ ಪಕ್ಷ ಇಷ್ಟವೋ ಅವರಿಗೆ ಮತ ನೀಡಬೇಕು ಎಂಬ ಜಾಗೃತಿ ಮೂಡುತ್ತಿರುವುದು ಒಳ್ಳೆಯ ಸಂಗತಿ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವೂ ಕೇವಲ ಮತ ಬ್ಯಾಂಕಿಗಾಗಿ ಮುಸ್ಲಿಂ ಓಲೈಕೆಯನ್ನು ಬಿಟ್ಟು ನಿಜವಾಗಿ ಏಳಿಗೆಗೆ ಪ್ರಯತ್ನಿಸಿದರೆ ಈ ಮತಗಳು ಅವರಿಗೂ ಲಭಿಸುತ್ತವೆ.
ಇದನ್ನೂ ಓದಿ: ವಿಸ್ತಾರ ಅಂಕಣ: ʼಬಿಟ್ಟುಕೊಡುವೆʼ ಎನ್ನುವವರು ʼನನಗೂ ಬೇಕುʼ ಎನ್ನುವಂತೆ ಮಾಡಿದ್ದು ರಾಜಕಾರಣಿಗಳು
ಮಹಿಳಾ ಸಬಲೀಕರಣದ ಕಾಯಕವನ್ನು ನರೇಂದ್ರ ಮೋದಿ ಈಗ ಇನ್ನೊಂದು ಹಂತಕ್ಕೆ ಕೊಂಡೊಯ್ಯುವ ಕರೆ ನೀಡಿದ್ದಾರೆ. ಮುಸ್ಲಿಂ ಮಹಿಳೆಯರೊಂದಿಗೆ ರಕ್ಷಾಬಂಧನ ಆಚರಣೆ ಮಾಡುವುದು ಎಂದರೆ ಮೊದಲನೆಯದಾಗಿ ಸಮಾಜದಲ್ಲಿ ಎಲ್ಲರಂತೆ ಜೀವಿಸುವ ಅಭಯವನ್ನು ನೀಡುವುದು. ಅದಕ್ಕಿಂತಲೂ ಮುಖ್ಯವಾಗಿ ಎರಡು ಸಮುದಾಯಗಳ ನಡುವೆ ಬಾಂಧವ್ಯ, ವಿಶ್ವಾಸ ಏರ್ಪಡುತ್ತದೆ. ರಾಜಕೀಯವಾಗಿ ಇದು ಬಿಜೆಪಿಗೆ ಲಾಭ ಮಾಡಿಕೊಳ್ಳಲು ಮೋದಿ ಈ ಕೆಲಸ ಮಾಡಿದ್ದಾರೆಯೇ ಎಂದು ಯಾರಾದರೂ ಪ್ರಶ್ನಿಸಬಹುದು. ಅದೂ ಇರಬಹುದು. ಒಂದು ಒಳ್ಳೆಯ ಕೆಲಸವನ್ನು ಮಾಡಿ ಅದರಿಂದ ರಾಜಕೀಯ ಲಾಭವನ್ನು ಪಡೆಯಲು ಉದ್ದೇಶಿಸುವುದು ಒಳ್ಳೆಯ ರಾಜಕಾರಣವೇ ತಾನೆ?
ಆದರೆ ಇಷ್ಟೆಲ್ಲದರ ನಡುವೆ ದೇಶದ ವಿವಿಧೆಡೆ ಕೋಮು ಗಲಭೆಗಳು ನಡೆಯುತ್ತಿವೆ, ಭಯೋತ್ಪಾದಕರು ದೇಶವನ್ನೇ ಅಲುಗಾಡಿಸಲು ಮುಂದಾಗುತ್ತಿದ್ದಾರಲ್ಲ? ಇಂತಹ ಅನೇಕ ಘಟನೆಗಳಲ್ಲಿ ಒಂದೇ ಸಮುದಾಯದವರು ಸಿಕ್ಕಿಬೀಳುತ್ತಿದ್ದಾರಲ್ಲ? ಅವರ ಬಗ್ಗೆ ಮೃದು ಧೋರಣೆ ತಳೆಯಬೇಕೆ? ಖಂಡಿತ ಇಲ್ಲ. ದೇಶದ ಸುರಕ್ಷತೆ, ಭದ್ರತೆ ವಿಚಾರ ಬಂದಾಗ ಅದು ಮುಸ್ಲಿಂ ಸಮಾಜವೇ ಇರಲಿ, ಹಿಂದುಗಳೇ ಇರಲಿ ಭೇದ ತೋರುವ ಅಗತ್ಯವೇ ಇಲ್ಲ. ಯಾವುದೇ ಸಮುದಾಯಕ್ಕೆ ಒಳಿತನ್ನು ಮಾಡಲು ಸರ್ಕಾರಗಳು ಮುಂದಾಗಬೇಕು. ಬದಲಿಗೆ ಅವರಿಗೆ ಪ್ರಿಯವಾದುದ್ದನ್ನು ಮಾತ್ರ ಮಾಡುತ್ತ ತುಷ್ಠೀಕರಣ ಮಾಡುವುದಲ್ಲ.
ಎಷ್ಟೇ ಆಗಲಿ ನಮ್ಮ ಸಾಮಾಜಿಕ ಜೀವನದ ಅಂತಿಮ ಗುರಿ ಸ್ವಸ್ಥ ಸಮಾಜ ನಿರ್ಮಾಣ ಮಾಡುವುದೇ ಅಲ್ಲವೇ? ಸ್ವಸ್ಥ ಸಮಾಜದಲ್ಲಿ ವಿವಿಧ ಸಮುದಾಯಗಳು ಸಹೋದರ ಭಾವದಿಂದ ಇರಬೇಕು ಎನ್ನುವುದು ಪೂರ್ವ ನಿಬಂಧನೆ. “ವ್ಯಕ್ತಿ ಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕಾಗಿ ದೃಢ ಸಂಕಲ್ಪ ಮಾಡುತ್ತೇವೆ” ಎಂದು ಸಂವಿಧಾನದ ಪೀಠಿಕೆಯಲ್ಲೇ ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ಹಾಗಾಗಿ ನರೇಂದ್ರ ಮೋದಿಯವರು ನೀಡಿರುವ ರಕ್ಷಾ ಬಂಧನದ ಕರೆಯು ಸಂವಿಧಾನದ ಆಶಯಕ್ಕೂ ಬದ್ಧವಾಗಿದೆ. ಅಭಿವೃದ್ಧಿ ಪಥದಲ್ಲಿ ಮಹಿಳೆಯನ್ನು ಮುಂಚೂಣಿಯಲ್ಲಿರಿಸಿಕೊಂಡರೆ ಇಡೀ ಸಮಾಜವೇ ಬದಲಾಗುತ್ತದೆ. ಈಗ ಮುಸ್ಲಿಂ ಮಹಿಳೆಯರಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಇಲ್ಲಿವರೆಗಿನ ತಮ್ಮ ಧೋರಣೆಗಳ ಕುರಿತು ಆಲೋಚಿಸುವ ಸರದಿ ಆ ಸಮುದಾಯದ ಮುಖಂಡರು, ಅಂದರೆ ಪುರುಷರದ್ದು.
ಇದನ್ನೂ ಓದಿ: ವಿಸ್ತಾರ ಅಂಕಣ: ಮುಸ್ಲಿಂ ಮಹಿಳೆಯರನ್ನು ಒಳಗೊಳ್ಳದೆ ಸಮಾನ ನಾಗರಿಕ ಸಂಹಿತೆಯ ಚರ್ಚೆ ಅಪೂರ್ಣ