ಸಿಂಗಪುರ ಮಾದರಿಯಲ್ಲಿ (singapore model) ಬೆಂಗಳೂರನ್ನು ಅಭಿವೃದ್ಧಿಪಡಿಸಬೇಕು (bangalore development) ಎಂಬುದು ಎಸ್ ಎಂ ಕೃಷ್ಣ (SM Krishna) ಅವರು ಬಿತ್ತಿದ ಸುಂದರ ಸ್ವಪ್ನ. 20 ವರ್ಷಗಳ ಹಿಂದೆ, ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರು ಇಂಥದ್ದೊಂದು ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಒಂದಿಷ್ಟು ಪ್ರಾಮಾಣಿಕ ಪ್ರಯತ್ನವನ್ನೂ ನಡೆಸಿದ್ದರು. ಅದರ ಫಲವೇ ಬೆಂಗಳೂರಿನಲ್ಲಿ ಇಂದು ಹರಿದಾಡುತ್ತಿರುವ ಮೆಟ್ರೋ ರೈಲುಗಳು. ನಾಳಿನ ಕರ್ನಾಟಕ, ಭವಿಷ್ಯದ ಕನ್ನಡಿಗರ ಕುರಿತು ಯೋಚಿಸುತ್ತಿದ್ದ, ನಮ್ಮ ರಾಜ್ಯದ ಬೆರಳೆಣಿಕೆಯ ರಾಜಕಾರಣಿಗಳಲ್ಲಿ ಎಸ್ ಎಂ ಕೃಷ್ಣ ಕೂಡ ಒಬ್ಬರು.
ಮೊನ್ನೆ ಸಿಂಗಪುರಕ್ಕೆ ಭೇಟಿ (Singapore travel) ನೀಡಿದಾಗ ನಮ್ಮ ಬೆಂಗಳೂರು, ಎಸ್ ಎಂ ಕೃಷ್ಣ, ಅವರ ಸಿಂಗಪುರ ಘೋಷಣೆ ಎಲ್ಲವೂ ಮನಸ್ಸಿನಲ್ಲಿ ಹಾದು ಹೋದವು. ಹಾಗೆ ನೋಡಿದರೆ, 2014ರ ಲೋಕಸಭೆ ಚುನಾವಣೆಗೂ ಮುನ್ನ ಮೈಸೂರಿಗೆ ಭೇಟಿ ನೀಡಿದ್ದ ನರೇಂದ್ರ ಮೋದಿ (PM Narendra Modi) ಅವರು ಕೂಡ, ಮೈಸೂರು ನಗರ ಸಿಂಗಪುರದಂತೆ ಅಭಿವೃದ್ಧಿಯಾಗಲು ಎಲ್ಲ ಅವಕಾಶಗಳನ್ನು ಹೊಂದಿದೆ ಎಂದು ಹೇಳಿದ್ದರು. ಹೀಗೆ ನಮ್ಮ ಇಬ್ಬರು ನಾಯಕರ ಮನಸ್ಸಿಗಿಳಿದಿದ್ದ ಸಿಂಗಪುರದ ಬಗ್ಗೆ ನನಗೆ ಮೊದಲಿನಿಂದಲೂ ಒಂದು ಕುತೂಹಲವಂತೂ ಮನಸ್ಸಿನೊಳಗೆ ಇತ್ತು.
ಕಳೆದ ವಾರ ಕೆಲಸದ ನಿಮಿತ್ತ ಸಿಂಗಪುರಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಾಗ ಕುತೂಹಲ ಕಣ್ಣಿಗಿಳಿಯಿತು. ಮರೀನಾ ಕೋಸ್ಟಲ್ ಎಕ್ಸ್‌ಪ್ರೆಸ್‌ವೇ ಸಿಂಗಪುರದ ಸೂಪರ್ ಫಾಸ್ಟ್ ಹೆದ್ದಾರಿ ಮತ್ತು ಏಷ್ಯಾದಲ್ಲೇ ಅತಿ ಉದ್ದದ ಸುರಂಗ ಪಥ! ಅಕ್ಷರಶಃ ಸಮುದ್ರದ ಕೆಳಭಾಗದಲ್ಲಿ ಅದ್ಭುತವಾಗಿ ಈ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ನಮ್ಮ ಮೆಟ್ರೋ ವಿಧಾನಸೌಧದ ಕೆಳಗೆ ಹಾದುಹೋಗುತ್ತಿದೆ ಎಂಬುದನ್ನು ಕೇಳಿ ಆರಂಭಿಕ ದಿನಗಳಲ್ಲಿ ಅಚ್ಚರಿಗೆ ಒಳಗಾದವರಿಗೆ, ಸಮುದ್ರದ ಕೆಳಗೆ ಪಯಣ ಎಂಬುದೇ ರೋಮಾಂಚಕಾರಿ.
ಕೇವಲ ಒಂದು ಕಡೆಯಿಂದ ಇನ್ನೊಂದು ಕಡೆಗೆ ರಸ್ತೆಯಲ್ಲ, ಒಟ್ಟು ಐದು ಎಕ್ಸ್‌ಪ್ರೆಸ್‌ವೇಗಳ ಮೂಲಕ ಸಿಂಗಪುರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ನಿರ್ಮಿಸಿರುವ ಎಕ್ಸ್‌ಪ್ರೆಸ್‌ವೇ ಜಾಲವಿದು. ಕೇವಲ ಐದೇ ವರ್ಷದಲ್ಲಿ ಇದು ನಿರ್ಮಾಣಗೊಂಡಿದೆ. 2013ರಿಂದ ಕಾರ್ಯಾರಂಭಗೊಂಡಿರುವ ಈ ದಶಕದ ಎಕ್ಸ್‌ಪ್ರೆಸ್‌ವೇಯಲ್ಲಿ ಸಾಗುವುದೇ ಒಂದು ಅಭೂತಪೂರ್ವ ಅನುಭವ. ಸಮುದ್ರದ ಕೆಳಗೆ ರಸ್ತೆ ನಿರ್ಮಿಸುವುದು ಅಭಿವೃದ್ಧಿಯೇ ಎಂದು ಪ್ರಶ್ನಿಸಬಹುದು. ಅಲ್ಲಿನ ಜನ ಇದೂ ಅಭಿವೃದ್ಧಿ ಎಂದು ಖಚಿತವಾಗಿಯೇ ಹೇಳುತ್ತಾರೆ! ಬಿಎಂಟಿಸಿ ಬಸ್ಸಿನಲ್ಲಿ ಕುಳಿತು ಪಯಣಿಸುವುದೇ ಅಭಿವೃದ್ಧಿಯ ಮಾದರಿ ಎಂದು ಭಾವಿಸಿದ್ದ ನಮಗೆ, ನಿಂತು ಪಯಣಿಸುವ ಮೆಟ್ರೋ ಬಸ್ಸಿಗಿಂತ ಉತ್ತಮ ಮಾದರಿ ಅನಿಸಿದ್ದು ತಡವಾಗಿ. ಕೂರುವುದಲ್ಲ, ನಿಂತು ಪಯಣಿಸುವುದು ಔಟ್ ಆಫ್ ಬಾಕ್ಸ್ ಆಲೋಚನೆ!
ಸಿಂಗಪುರದ ಅಭಿವೃದ್ಧಿ ಎಂದರೆ ಅದು ಭಾರತದ ಇನ್ನೊಂದು ದಿಕ್ಕಿನಲ್ಲಿರುವ ದುಬೈ, ಅಬುಧಾಬಿ, ಕತಾರ್‌ನಂತಹ ದೇಶಗಳ ಅಭಿವೃದ್ಧಿ ಮಾದರಿಗಿಂತ ಬಹಳ ಭಿನ್ನ. ಗಗನಚುಂಬಿ ಕಟ್ಟಡಗಳ ಬ್ರ್ಯಾಂಡ್, ಕೃತಕ ದ್ವೀಪಗಳ ಬ್ರ್ಯಾಂಡ್, ಐಷಾರಾಮಿ ಹೋಟೆಲ್‌ಗಳ ಬ್ರ್ಯಾಂಡ್‌ಗಳ ಮೂಲಕ ಈ ದೇಶಗಳು ವಿದೇಶಿಗರನ್ನು ಕೈಬೀಸಿ ಕರೆಯುತ್ತವೆ. ಪ್ರವಾಸಕ್ಕೆ ಮಾತ್ರ ಅಲ್ಲ, ಹೂಡಿಕೆ ಮಾಡಿ ಅಲ್ಲಿಂದ ಹಣ ಗಳಿಸಿಕೊಂಡು ಹೋಗಲು ಆಹ್ವಾನ ಕೊಡುತ್ತವೆ. ಈ ದೇಶಗಳು ಸದ್ಯ ಪೆಟ್ರೋಲಿಯಂ ಆಧಾರದಲ್ಲಿ ಜೀವನ ನಡೆಸುತ್ತಿವೆ. ಆದರೆ ಭವಿಷ್ಯದಲ್ಲಿ ಪೆಟ್ರೋಲಿಯಂ ಸಂಗ್ರಹ ಕಡಿಮೆಯಾಗುತ್ತದೆ ಮತ್ತು ಅದು ಅದರ ಮೇಲಿನ ಅವಲಂಬನೆ ಕಡಿಮೆಮಾಡಿಕೊಳ್ಳಬೇಕು ಎಂಬುದನ್ನು ಆ ದೇಶಗಳು ಅರಿತುಕೊಂಡಿವೆ. ಹಾಗಾಗಿ, ಬ್ಯಾಟರಿಚಾಲಿತ ವಾಹನ ತಂತ್ರಜ್ಞಾನದ ಕಡೆ ಹೊರಳುತ್ತಿವೆ. ಇದರಲ್ಲಿ ತಪ್ಪಿಲ್ಲ, ಅಲ್ಲಿನ ಅವಶ್ಯಕತೆ ಅದು. ಆದರೆ ಸಿಂಗಪುರ ಮಾದರಿ ಹಾಗಲ್ಲ. ಇಂಥ ಭೌತಿಕ ಅಭಿವೃದ್ಧಿಯ ಮಾದರಿಗಳನ್ನು ಅಳವಡಿಸಿಕೊಳ್ಳುತ್ತಲೇ, ಈ ಮಾದರಿಯನ್ನು ಔಟ್ ಆಫ್ ಬಾಕ್ಸ್ ಆಲೋಚನೆಯ ಮೂಲಕ ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿರುವ ಮಾದರಿಯನ್ನು ಇಲ್ಲಿ ನೋಡಬಹುದು.
ನನಗೆ ಇಷ್ಟವಾಗಿದ್ದು ಇದೂ ಅಲ್ಲ. ಮನುಷ್ಯನ ಸಂತೋಷ ಹಾಗೂ ಅದರ ಆಧಾರದ ಮೇಲೆ ಅವರು ಸಿಂಗಪುರವನ್ನು ಕಟ್ಟುತ್ತಿರುವ ಮಾದರಿ ಬಹಳ ಹಿಡಿಸಿತು. ಅಲ್ಲಿನ ಕೆಲವರ ಭೇಟಿ, ಅವರೊಂದಿಗಿನ ಮಾತುಕತೆ, ಅಲ್ಲಿನ ನಾಯಕರ ಚಿಂತನೆಯ ಓದು, ಅಲ್ಲಿ ಇದ್ದಷ್ಟು ಕಾಲ ಆ ಊರನ್ನು ನಾನು ಗ್ರಹಿಸಿದ ರೀತಿ ನೀತಿಯ ಮೂಲಕ, ಸಿಂಗಪುರದ ಮಾದರಿ ಸ್ವರೂಪವನ್ನು ಬಿಡಿ ಬಿಡಿಯಾಗಿ ಕಟ್ಟಿಕೊಡುವೆ.
ಸಿಂಗಪುರದ ಶೇ.74 ನಾಗರಿಕರು ಚೀನಾ ಮೂಲದವರಾದರೆ, ಶೇ.13.5 ಮಲಯರು, ಶೇ.9 ಭಾರತೀಯ ಮೂಲದವರು, ಶೇ.3.2 ಇತರರು. ಅವರ ಪೂಜಾ ಪದ್ಧತಿ, ಆಚಾರ ವಿಚಾರ ನೋಡಿದರೆ ಶೇ.31.1 ಬೌದ್ಧರು, ಶೇ.18.9 ಕ್ರೈಸ್ತರು, ಶೇ.15.6 ಮುಸ್ಲಿಮರು, ಶೇ.8.8 ತಾವೊ, ಶೇ.5 ಹಿಂದುಗಳು ಕಾಣಸಿಗುತ್ತಾರೆ. ಅಂದರೆ, ಜನಸಂಖ್ಯೆಯ ಧರ್ಮವಾರು ತಾಂತ್ರಿಕತೆಯೇ ಬೇರೆ, ವೈಯಕ್ತಿಕ ಬದುಕಿನ ಆಚಾರ ವಿಚಾರದ ಅನುಸರಣೆಯೇ ಬೇರೆ. ಇದಲ್ಲವೇ ವೈವಿಧ್ಯತೆಯ ಸೊಗಸು?
ಸಿಂಗಪುರದಲ್ಲಿ ಭಾರತೀಯ ಮೂಲದ ವಕೀಲ ಆರ್. ರವೀಂದ್ರನ್ ಅವರನ್ನು ಕಂಡು ಮಾತನಾಡಿಸುವ ಅವಕಾಶ ಉದ್ಯಮಿ, ಫಿಲಾಂತ್ರೋಫಿಸ್ಟ್, ನನ್ನ ಹಿತೈಷಿ ಎಚ್.ಎಸ್ .ಶೆಟ್ಟಿ ಅವರಿಂದಾಗಿ ಲಭಿಸಿತು. ಸಿಂಗಪುರ ಕ್ರಿಕೆಟ್ ಕ್ಲಬ್‌ನಲ್ಲಿ ನಮ್ಮ ಹಲವು ವರ್ಷಗಳ ಒಡನಾಡಿಯಂತೆ ಭೂರಿ ಭೋಜನ ಸವಿದದ್ದನ್ನು ಎಂದೆಂದೂ ಮರೆಯಲಾಗದು. ಅಂದಹಾಗೆ ರವೀಂದ್ರನ್ ಅವರು ಸಿಂಗಪುರ ಸಂಸತ್ತಿನಲ್ಲಿ ಎರಡು ಬಾರಿ ಸಂಸದರಾಗಿದ್ದರು. ಈಗಿನ ಸಿಂಗಪುರ ಪ್ರಧಾನಿಗಾಗಿ ತಮ್ಮ ಸ್ಥಾನವನ್ನು ತೆರವುಗೊಳಿಸಿದವರು. ಈಗಲೂ ಸರ್ಕಾರದ ಅನೇಕ ಸ್ಥಾಯಿ ಸಮಿತಿಗಳಲ್ಲಿ ಸದಸ್ಯರಾಗಿದ್ದು, ಪ್ರಧಾನಿಯ ಅತ್ಯಂತ ಆಪ್ತ ವಲಯದ ಪ್ರಭಾವಿಯೇ ಆಗಿದ್ದಾರೆ. ಇಂಥ ಮನುಷ್ಯ ನನಗೆ ನೀಡಿದ ವಿಸಿಟಿಂಗ್ ಕಾರ್ಡ್ ನೋಡಿದರೆ, ಅದರಲ್ಲಿ ಅಡ್ವೊಕೇಟ್ ಎಂಬ ವೃತ್ತಿಯನ್ನು ಬಿಟ್ಟರೆ, ಯಾವ ಬಿರುದು ಬಾವಲಿಗಳೂ ಇರಲಿಲ್ಲ! ಎಂಪಿ, ಸ್ಥಾಯಿ ಸಮಿತಿ- ಎಲ್ಲವೂ ನಗಣ್ಯ. ಕಾರ್ಡಿನಲ್ಲಿ ಅವುಗಳಿಗೆ ಪದದಷ್ಟು ಸ್ಥಾನವಿಲ್ಲ. ಸದ್ಯ ಅವರು ಚುನಾವಣಾ ರಾಜಕೀಯದಿಂದ ಅಕ್ಷರಶಃ ದೂರವಿದ್ದು, ನೇರವಾಗಿ ದೇಶದ ಅಭಿವೃದ್ಧಿಯಲ್ಲಿ ತಮ್ಮ ವೃತ್ತಿಪರ ಕೌಶಲವನ್ನು ಧಾರೆ ಎರೆಯುತ್ತಿದ್ದಾರೆ.
ಇದು ಭಾರತದಲ್ಲಿ ಸಾಧ್ಯವಾ ಎಂಬ ಒಂದು ಪ್ರಶ್ನೆ ಹಾಗೆ ಸುಳಿದಾಡಿತು. ನಕ್ಕು ಸುಮ್ಮನಾದೆ. ಸಿಂಗಪುರದಲ್ಲಿ ಪ್ರತಿ ಬಾರಿ ಚುನಾವಣೆ ನಡೆದಾಗಲೂ ಅಲ್ಲಿನ ಶೇ.20 ರಾಜಕಾರಣಿಗಳು ನಿವೃತ್ತರಾಗುತ್ತಾರೆ. ಅಂದರೆ ಅಷ್ಟು ಪ್ರಮಾಣದಲ್ಲಿ ಹೊಸಬರು ರಾಜಕೀಯಕ್ಕೆ ಬರುತ್ತಾರೆ. ಹಾಗಂತ ಹೊಸದಾಗಿ ಆಯ್ಕೆಯಾಗುವವರಲ್ಲಿ ಎಲ್ಲರೂ ರಾಜಕೀಯೇತರ ಕುಟುಂಬದವರೇ ಅಲ್ಲ. ಅನೇಕರು ರಾಜಕೀಯ ಕುಟುಂಬದವರಿದ್ದಾರೆ. ಈಗಿನ ಪ್ರಧಾನಿ (Singapore PM) ಲೀ ಸಿಯೆನ್ ಲೂಂಗ್ (lee hsien loong) ಅವರೂ ಇದರಿಂದ ಹೊರತಲ್ಲ. ಆದರೆ ಅವರ ಕುಟುಂಬದ ಹಿನ್ನೆಲೆಗಿಂತಲೂ ಹೆಚ್ಚಾಗಿ ದೇಶದ ಅಭಿವೃದ್ಧಿಗೆ ತಾವು ಹೊಂದಿರುವ ದೂರದೃಷ್ಟಿ, ಬದ್ಧತೆ ಹಾಗೂ ಕೌಶಲದ ಆಧಾರದಲ್ಲಿ ರಾಜಕಾರಣದಲ್ಲಿರುತ್ತಾರೆ. ಅಲ್ಲಿನ ಜನರೂ ಅದೇ ಕಾರಣಕ್ಕೆ ಆಯ್ಕೆ ಮಾಡುತ್ತಾರೆ. ಇದು ಕೂಡ ಅಭಿವೃದ್ದಿಯ ಸಿಂಗಪುರ ಮಾದರಿ.
ಆದರೆ ಭಾರತದಲ್ಲಿ ಒಮ್ಮೆ ಶಾಸಕ, ಸಂಸದ ಆದರೆ ತಮ್ಮ ಮುಂದಿನ ಪೀಳಿಗೆಯೂ ಅದನ್ನು ಮುಂದುವರಿಸಲು ಎಲ್ಲ ಪ್ರಯತ್ನ ಮಾಡಲಾಗುತ್ತದೆ. ಅವರಿಗೆ ಅರ್ಹತೆ, ನಾಯಕತ್ವ ಗುಣ, ದೂರದೃಷ್ಟಿ ಇದ್ದರೆ ಓಕೆ. ಆದರೆ ಕೇವಲ ತಮ್ಮ ಕುಟುಂಬದವನು ಎಂಬ ಕಾರಣಕ್ಕೆ ಇಂದೂ ಎಷ್ಟು ಶಾಸಕರು, ಸಂಸದರಾಗಿಲ್ಲ? ಒಮ್ಮೆ ಹುದ್ದೆ ಅಲಂಕರಿಸಿದರೆ ಮುಗಿಯಿತು ತಮ್ಮದೇ ಜಹಗೀರುದಾರು ಎಂಬ ಭಾವನೆ. ತಾವು ಆ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಏನು? ಅಲ್ಲಿನ ಜನರ ಆಶೋತ್ತರಕ್ಕೆ ಬೆಂಬಲವಾಗಿ ನಿಂತೆವೇ? ತಾನು ಆಯ್ಕೆಯಾದಾಗ ಕ್ಷೇತ್ರ ಇದ್ದ ಸ್ಥಿತಿಗೂ ಈಗಿಗೂ ವ್ಯತ್ಯಾಸವಿದೆಯೇ? ಹಾಗಿಲ್ಲದಿದ್ದರೆ ಇಷು ವರ್ಷ ತಾನು ಕಡೆದು ಕಟ್ಟೆ ಹಾಕಿದ್ದು ಏನು ಎಂದು ಪ್ರಶ್ನಿಸಿಕೊಳ್ಳುವ ಸಾಮಾನ್ಯ ಆತ್ಮಾವಲೋಕನಕ್ಕೂ ಇಲ್ಲಿ ಅವಕಾಶ ಇಲ್ಲದಂತಾಗಿದೆ. ಅದರಲ್ಲೂ ಕರ್ನಾಟಕದ ಉತ್ತರ ಭಾಗದ ಬಹಳಷ್ಟು ಜಿಲ್ಲೆಗಳನ್ನು ನೋಡಿದರೆ ಇದು ಢಾಳಾಗಿ ಕಾಣುತ್ತದೆ.
ಮುಖ್ಯವಾಗಿ ಸಿಂಗಪುರದ ರಾಜಕಾರಣಿಗಳ ಮನೋಭಾವ ಹೇಗಿರುತ್ತದೆ ಎನ್ನುವುದಕ್ಕೆ ಒಂದು ಉದಾಹರಣೆ ನೋಡೋಣ. ಹಿಂದೊಮ್ಮೆ ಅಭಿವೃದ್ಧಿ ಕುರಿತು ಬರೆದ ʼವಿಸ್ತಾರ ಅಂಕಣʼದಲ್ಲಿಯೂ ಇದನ್ನು ಪ್ರಸ್ತಾಪಿಸಿದ್ದೆ. ಸಿಂಗಪುರದಲ್ಲೊಂದು ಪ್ರಸಿದ್ಧ ಭಾಷಣವಿದೆ. ಆ ಮಹತ್ವದ ಮಾತಿಗೆ ಈಗ ಏಳೂವರೆ ವರ್ಷ ತುಂಬಿದೆ. ಈ ಭಾಷಣ ಮಾಡಿದವರು ಅಂದಿನ ಸಿಂಗಪುರದ ಪ್ರಧಾನ ಮಂತ್ರಿ ಲೀ ಸಿಯೆನ್ ಲೂಂಗ್. ಅಂದಿನ ಅಷ್ಟೆ ಅಲ್ಲ, ಇಂದಿನ ಪ್ರಧಾನಿ ಸಹ ಅವರೆ. ಕಳೆದ 19 ವರ್ಷದಿಂದಲೂ ಸಿಂಗಪುರಕ್ಕೆ ಅವರೇ ಪ್ರಧಾನಿಯಾಗಿದ್ದಾರೆ. 2004ರಲ್ಲಿ ಪ್ರಧಾನಿಯಾದವರು ಲೂಂಗ್. 2016ರಲ್ಲಿ ಅಲ್ಲಿನ ಸಂಸತ್ತಿನಲ್ಲಿ ಭಾಷಣ ಮಾಡಿದಾಗ ಲೀ ಅವರಿಗೆ 64 ವರ್ಷ. ಈಗ 71 ವರ್ಷ. ಅಂದು ರಾಷ್ಟ್ರಪತಿಯವರ ಭಾಷಣದ ಪ್ರಸ್ತಾವನೆಯನ್ನು ಬೆಂಬಲಿಸಿ ಲೂಂಗ್ ಮಾಡಿದ ಭಾಷಣದ ಸಾರಾಂಶ ಇದು. ದೇಶವನ್ನು ಹೇಗೆ ನಡೆಸಬೇಕು, ವಿವಿಧ ಧಾರ್ಮಿಕ ವಿಚಾರಗಳನ್ನು ಹೇಗೆ ನಿರ್ವಹಣೆ ಮಾಡಬೇಕು ಎನ್ನುವುದರ ಕುರಿತು ಒಂದು ಗಂಟೆ 28 ನಿಮಿಷ ಹಾಗೂ 29 ಸೆಕೆಂಡು ಮಾತನಾಡುತ್ತಾರೆ. ಇದರ ಸಂಪೂರ್ಣ ವಿಡಿಯೊ ಯುಟ್ಯೂಬ್‌ನಲ್ಲಿದೆ. ಅದರಲ್ಲಿ ನನಗೆ ಪ್ರಮುಖವಾಗಿ ಅನಿಸಿದ್ದು ಹಾಗೂ ಇವತ್ತಿಗೆ ಸರಿ ಎನಿಸಿದ ಒಂದು ಮಾತಿದು- “ಸರ್ಕಾರ ನಡೆಸುವವರು ಎರಡು ವಿಷಯಗಳ ಕುರಿತು ಹೆಚ್ಚು ಗಮನ ಹರಿಸಬೇಕು. ಮೊದಲನೆಯದು ಸಂಪನ್ಮೂಲಗಳನ್ನು ಸಂರಕ್ಷಿಸುವುದು ಹಾಗೂ ಸಾರ್ವಜನಿಕ ಸೇವೆಯ ಘನತೆಯನ್ನು ಘನತೆಯನ್ನು ಕಾಪಾಡುವುದು.”
ಈ ಮಾತಿಗೆ ಒಂದು ಉದಾಹರಣೆಯನ್ನೂ ಲೀ ನೀಡುತ್ತಾರೆ. 10 ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಒಂದು ಸಾಂಪ್ರದಾಯಿಕ ಮನಸ್ಥಿತಿಯ ಸರ್ಕಾರವಿತ್ತು. ಅದು ಭವಿಷ್ಯದ ಎಷ್ಟೋ ವರ್ಷಗಳಿಗೆ, ಪಿಂಚಣಿಗೆ ಆಗುವಷ್ಟು ಯಥೇಚ್ಚ ಸಂಪನ್ಮೂಲವನ್ನು ಸಂಗ್ರಹಿಸಿತ್ತು. ಆದರೆ ಮುಂದಿನ ಚುನಾವಣೆ ವೇಳೆಗೆ ಜನರ ನಿರೀಕ್ಷೆಗಳು ಬದಲಾಗಿದ್ದವು. ಅದಕ್ಕಾಗಿ ಆಡಳಿತ ಹಾಗೂ ವಿರೋಧ ಪಕ್ಷಗಳು ಯದ್ವಾತದ್ವಾ ಉಚಿತ ಘೋಷಣೆಗಳ ಹರಾಜು ಹಾಕಿದವು. ಇದರಿಂದಾಗಿ ಎಲ್ಲ ಸಂಪನ್ಮೂಲಗಳೂ ಕರಗಿಹೋಗಿ ಆ ದೇಶವು ಸಾಲದ ಸುಳಿಗೆ ಸಿಲುಕಿತು. ಹಾಗಾಗಿ ಸರ್ಕಾರ ನಡೆಸುವ ಒಂದು ಪಕ್ಷ ಅಧಿಕಾರಕ್ಕೆ ಬಂದು ಪೂರ್ಣ ಸಂಪನ್ಮೂಲವನ್ನು ಖಾಲಿ ಮಾಡುವ ಸ್ಥಿತಿ ಒಳ್ಳೆಯದಲ್ಲ. ಅದಕ್ಕಾಗಿ ಎರಡನೇ ಕೀಲಿಕೈ ರೀತಿ ಕೆಲಸ ಮಾಡಬೇಕು ಎಂದು ಲೂಂಗ್ ಹೇಳುತ್ತಾರೆ. ತಾನು ಸಂಪನ್ಮೂಲಗಳನ್ನು ವೆಚ್ಚ ಮಾಡಲು ಸಂಪೂರ್ಣ ಸ್ವಾತಂತ್ರ್ಯ ಇರುವುದು ಸರಿಯಲ್ಲ ಎಂದು ಇಲ್ಲಿ ವಾದಿಸುತ್ತಿರುವವರು ಪ್ರತಿಪಕ್ಷ ನಾಯಕರಲ್ಲ, ನ್ಯಾಯಾಂಗ ಅಲ್ಲ, ಚಿಂತಕರೂ ಅಲ್ಲ. ಸ್ವತಃ ಆ ಸಂಪನ್ಮೂಲವನ್ನು ಬಳಸಲು ಮುಖ್ಯ ಅಧಿಕಾರ ಹೊಂದಿರುವ ಪ್ರಧಾನಮಂತ್ರಿ. ಹಾಗಾಗಿಯೇ ಸಿಂಗಪುರ ಇಂದು ಸುಸ್ಥಿರ ಅಭಿವೃದ್ಧಿಯ ಒಂದು ಮಾದರಿಯಾಗಿದೆಯೇ ವಿನಃ ಅಮೆರಿಕ ಅಲ್ಲ.
ಭಾರತದಲ್ಲಿ ರಾಜಕಾರಣ ಎಂದರೆ ಕಟ್ಟಡ ನಿರ್ಮಾಣ, ಲೋಕೋಪಯೋಗಿ ಕಾಮಗಾರಿ ಎಂಬ ಭಾವನೆಯಿದೆ. ಹೌದು, ದೇಶದ ಆರ್ಥಿಕತೆಯನ್ನು ಚಾಲನೆಯಲ್ಲಿಡಲು ಒಂದಿಲ್ಲೊಂದು ಕಾಮಗಾರಿ ನಡೆಯುತ್ತಿರಬೇಕು. ಇದರಿಂದ ಲಕ್ಷಾಂತರ ಕಾರ್ಮಿಕರಿಗೆ ಕೆಲಸ ಸಿಗುತ್ತದೆ, ಆರ್ಥಿಕ ಸಬಲತೆಗೂ ಕಾರಣವಾಗುತ್ತದೆ. ಇದು ಮೂರ್ನಾಲ್ಕು ದಶಕಗಳ ಹಿಂದೆ ಇದ್ದ ಸ್ಥಿತಿ. ಈಗಲೂ ಅದರಿಂದ ಭಾರತ ಹೊರಬರಲಾಗಿಲ್ಲ. ಕೌಶಲರಹಿತ ಕೆಲಸಕ್ಕಾಗಿ ಯುಪಿಎ ರೂಪಿಸಿದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಲಕ್ಷಾಂತರ ಜನರು ಕೆಲಸ ಮಾಡುತ್ತಿದ್ದಾರೆ. ಕಟ್ಟಡ ಕಾರ್ಮಿಕರಾಗಿ ಲಕ್ಷಾಂತರ ಜನರಿದ್ದಾರೆ. ಪೀಳಿಗೆಯಿಂದ ಪೀಳಿಗೆಗೆ ಕಟ್ಟಡ ಕಾರ್ಮಿಕರನ್ನೇ ನಿರ್ಮಿಸುತ್ತಿದೆ ಈ ವ್ಯವಸ್ಥೆ. ಕೌಶಲ ಹೊಂದಿದ ಕೆಲಸಗಳಿಗೆ ಈ ಸಮಾಜದ ಬಹುದೊಡ್ಡ ವರ್ಗವನ್ನು ವರ್ಗಾಯಿಸುವ ಪ್ರಯತ್ನಗಳೇ ಕಾಣುತ್ತಿಲ್ಲ. ಹಾಗಾಗಿ ನಿರಂತರವಾಗಿ ದೇಶದಲ್ಲಿ ಒಂದಿಲ್ಲೊಂದು ನಿರ್ಮಾಣ ಕಾಮಗಾರಿ ನಡೆಯುತ್ತಲೇ ಇರಬೇಕು. ಹೀಗೆಯೇ ಆದರೆ ನಮ್ಮ ದೇಶದಿಂದ ಅತ್ಯುತ್ಕೃಷ್ಟ ಉತ್ಪನ್ನಗಳನ್ನುತಯಾರಿಸಿ ರಫ್ತು ಮಾಡಲು ಹೇಗೆ ಸಾಧ್ಯ?
ಇದನ್ನೂ ಓದಿ: ವಿಸ್ತಾರ ಅಂಕಣ: ಭಾರತದ ಆರ್ಥಿಕತೆ 3ನೇ ಸ್ಥಾನಕ್ಕೇರಲು ಕರ್ನಾಟಕದ ಕೊಡುಗೆ ಎಷ್ಟು ʼಗ್ಯಾರಂಟಿʼ?
ಉದಾಹರಣೆಗೆ ನಮ್ಮ ಬೆಂಗಳೂರಿನ ಮೆಟ್ರೊ (namma bengaluru metro) ಯೋಜನೆಯನ್ನೇ ತೆಗೆದುಕೊಳ್ಳಿ. 2007ರಲ್ಲಿ ಕಾಮಗಾರಿ ಆರಂಭವಾದ ಮೆಟ್ರೊ ಇನ್ನೂ ಅಂದರೆ 15 ವರ್ಷವಾದರೂ ಸಂಪೂರ್ಣ ಜಾಲ ಕಾರ್ಯಾಚರಣೆ ಆರಂಭಿಸಿಲ್ಲ. ತನ್ನ ಪೂರ್ಣ ಸಾಮರ್ಥ್ಯಕ್ಕೆ ತೆರೆದುಕೊಂಡರೆ ಮಾತ್ರವೇ ಮೆಟ್ರೊದಿಂದ ಅಪೇಕ್ಷಿಸಿದ ಲಾಭ ಸಿಗುವುದು. ಈ ನಡುವೆ ಮತ್ತಷ್ಟು ವಿಸ್ತರಣೆಗಳು, ಹೆಚ್ಚುವರಿ ಲೇನ್‌ಗಳು ಎನ್ನುತ್ತ ಇಡೀ ಮೆಟ್ರೊ ಯೋಜನೆ ಎನ್ನುವುದನ್ನು ಶಾಶ್ವತ ಯೋಜನೆ ಮಾಡಲು ಹೊರಟಿದ್ದಾರೆ ನಮ್ಮ ರಾಜಕಾರಣಿಗಳು. ಮೆಟ್ರೊ ಮಾರ್ಗವೇನು ಸಂಪೂರ್ಣ ವೈಜ್ಞಾನಿಕವಾಗಿ ವಿನ್ಯಾಸವಾಗಿದೆಯೇ? ಎಲ್ಲೆಲ್ಲಿ ರಾಜಕಾರಣಿಗಳ ಆಸ್ತಿಪಾಸ್ತಿಗೆ ಧಕ್ಕೆ ಆಗುವುದಿಲ್ಲವೋ ಅಂತಹ ಕಡೆಗಳಲ್ಲಿ ಗೆರೆ ಎಳೆದುಕೊಂಡು ಹೋಗಿದ್ದಾರೆ ಎಂಬ ಆರೋಪ ಬಲವಾಗಿದೆ, ಹಾವಿನ ಮಾದರಿಯಲ್ಲಿ ಸಾಗುವ ಅನೇಕ ಸ್ಥಳಗಳನ್ನು ನೋಡಿದಾಗ ಇದು ಸಾಮಾನ್ಯರಿಗೂ ಅನುಭವಕ್ಕೆ ಬರುತ್ತದೆ. ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಮೆಟ್ರೊದಿಂದ ಈವರೆಗೆ ಸಾಧ್ಯವಾಗಿದೆಯೇ ಎಂದರೆ ಬಹುತೇಕ ಇಲ್ಲ ಎಂದೇ ಹೇಳಬೇಕು.
ಮೆಟ್ರೊದಲ್ಲಿ ಸಂಚರಿಸುವವರ ಸಂಖ್ಯೆ ದೊಡ್ಡದಾಗಿದೆಯಾದರೂ ಅದರಲ್ಲಿ ಸಂಚರಿಸುವವರು ಯಾರು? ದ್ವಿಚಕ್ರ ವಾಹನ ಹೊಂದಿದ್ದವರೇ? ಕಾರಿನಲ್ಲಿ ಸಂಚರಿಸುತ್ತಿದ್ದವರೇ? ಇಂತಹವರ ಸಂಖ್ಯೆ ಇದೆಯಾದರೂ ಹೆಚ್ಚಿನವರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರು. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರು ಮೆಟ್ರೊದಲ್ಲಿ ಸಂಚರಿಸಿದರೆ ಸಂಚಾರ ದಟ್ಟಣೆಗೆ ಪ್ರಯೋಜನ ಆಗುವುದಿಲ್ಲ.
ಇರಲಿ, ಕಡೆಯಲ್ಲಿ- ಸಿಂಗಪುರದ ಅಭಿವೃದ್ಧಿ ಎಂದರೆ ಕಟ್ಟಡ ನಿರ್ಮಾಣ, ರಸ್ತೆ ಅಭಿವೃದ್ಧಿ ಅಲ್ಲವೇ ಅಲ್ಲ. ಅದು ಒಂದು ಭಾಗ ಮಾತ್ರ. ಮುಖ್ಯವಾಗಿ ಜನರ ನಡವಳಿಕೆ, ಶಿಸ್ತು ರೂಪಿಸುವುದು ಸಿಂಗಪುರ ಮಾದರಿ. ಭ್ರಷ್ಟಾಚಾರ ಅಲ್ಲಿ ಇಲ್ಲವೇ ಇಲ್ಲ ಎಂದಲ್ಲ. ಆದರೆ ಅದಕ್ಕೆ ರೂಪಿಸಿರುವ ಕಠಿಣ ಕಾನೂನುಗಳ ಜತೆಗೆ ರಾಜಕಾರಣಿಗಳು ತಮ್ಮ ಜೀವನದಲ್ಲಿ ತೋರುವ ಪಾರದರ್ಶಕತೆಯ ಕಾರಣಕ್ಕೆ ಜನಸಾಮಾನ್ಯರಲ್ಲೂ ಭ್ರಷ್ಟಾಚಾರದ ಕುರಿತು ಒಂದು ರೀತಿಯ ತಿರಸ್ಕಾರ ಭಾವನೆಯೇ ಇದೆ. ಸಂಚಾರ ನಿಯಮ ಪಾಲಿಸಬೇಕು ಎನ್ನುವುದನ್ನು ದಂಡ ವಿಧಿಸಿ ಹೇಳುವ ಪ್ರಮೇಯ ಅತಿ ಕಡಿಮೆ. ಹೋಟೆಲ್ ಉದ್ಯಮ, ಸಾರ್ವಜನಿಕ ಸೇವೆಯಲ್ಲಿರುವವರು ಇತರರನ್ನು ಉಪಚರಿಸುವುದು, ಗೌರವಿಸುವುದು ಸಿಂಗಪುರದ ಅಭಿವೃದ್ಧಿ ಮಾದರಿ.
ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಸಿಂಗಪುರ ಮಾದರಿಯನ್ನು ಅಳವಡಿಸಿಕೊಳ್ಳುವುದು ಉತ್ತಮವೆ. ಆದರೆ ಅದನ್ನು ಪೂರ್ಣ ಪ್ರಮಾಣದಲ್ಲಿ, ಮನಃಪೂರ್ವಕವಾಗಿ ಮಾಡಬೇಕು. ಅಲ್ಲಿ ಸಮುದ್ರದ ಆಳದಲ್ಲಿ ರಸ್ತೆ ನಿರ್ಮಿಸಿದ್ದಾರೆ ಎಂದ ತಕ್ಷಣ ಬೆಂಗಳೂರಲ್ಲೊಂದು ಕೃತಕ ಸಮುದ್ರ ನಿರ್ಮಾಣ ಮಾಡಿ ಅದರ ಕೆಳಗೆ ರಸ್ತೆ ನಿರ್ಮಾಣ ಮಾಡುವುದಲ್ಲ. ಅಲ್ಲಿನ ಅಭಿವೃದ್ಧಿ ಮಾದರಿಯ ಆತ್ಮವನ್ನು ಅರಿತು ನಡೆದರೆ ಭಾರತವೂ ಸಿಂಗಪುರವನ್ನು ಮೀರಿಸುವ ಯಾವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ಇದನ್ನೂ ಓದಿ: ವಿಸ್ತಾರ ಅಂಕಣ: ಪ್ರಜಾಪ್ರಭುತ್ವದ ಗುಣ ಭಾರತೀಯರ ಜೀನ್‌ನಲ್ಲಿಯೇ ಇದೆ !